ಸುರಪುರಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ: ಬುದ್ಧ ಮೂರ್ತಿ ನಿರ್ಮಾಣಕ್ಕೆ ನೆರವಿನ ಭರವಸೆ
ಯಾದಗಿರಿ: ಸುರಪುರ ನಗರದಲ್ಲಿ ಗೌತಮ ಬುದ್ಧರ ಮೂರ್ತಿ ನಿರ್ಮಾಣಕ್ಕೆ ನೆರವಾಗುವುದಾಗಿ ಕರ್ನಾಟಕ ಸರಕಾರದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.
ಖಾಸಗಿ ಕಾರ್ಯಕ್ರಮದ ಅಂಗವಾಗಿ ಶಹಾಪುರಕ್ಕೆ ಆಗಮಿಸಿದ ನಂತರ ಸುರಪುರ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಗೌತಮ ಬುದ್ಧರ ವೃತ್ತದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ಮುಖಂಡರು ಸನ್ಮಾನಿಸಿ ಮಹಾತ್ಮ ಗೌತಮ ಬುದ್ಧ ಮೂರ್ತಿ ನಿರ್ಮಾಣಕ್ಕೆ ಮೌಖಿಕ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಾರಕಿಹೊಳಿ ಗೌತಮ ಬುದ್ಧರು ಶಾಂತಿಯನ್ನು ಜಗತ್ತಿಗೆ ಬೋಧಿಸಿದ ಮಹಾ ಮಾನವತಾವಾದಿಗಳು, ಅವರ ಮೂರ್ತಿಯನ್ನು ನಿರ್ಮಿಸಲು ತಾವೆಲ್ಲರು ಉದ್ದೇಶಿಸಿರುವುದು ಸಂತೋಷದ ಸಂಗತಿಯಾಗಿದೆ. ಮೂರ್ತಿ ನಿರ್ಮಾಣಕ್ಕೆ ನೆರವು ನೀಡುವೆನು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ವೆಂಕಟೇಶ ಬೇಟೆಗಾರ,ಸಂಘಟನೆ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ,ಮೂರ್ತಿ ಬೊಮ್ಮನಹಳ್ಳಿ,ರಾಮಣ್ಣ ಶೆಳ್ಳಗಿ,ಮಲ್ಲಿಕಾರ್ಜುನ ತಳ್ಳಳ್ಳಿ,ಶರಣಪ್ಪ ತಳವಾರಗೇರಾ,ರಮೇಶ ಅರಕೇರಿ,ಮಲ್ಲು ಮುಷ್ಠಳ್ಳಿ ಕೆಸಿಪಿ,ಗೌಸ್ ಸಾಹುಕಾರ ಸೇರಿದಂತೆ ಅನೇಕರಿದ್ದರು.