ಸುರಪುರ | ವಿದ್ಯುತ್ ಶಾರ್ಟ್ ಸರ್ಕ್ಯೂರ್ಟ್‌ನಿಂದ ಹುಲ್ಲಿನ ಬಣವೆಗಳಿಗೆ ಬೆಂಕಿ

ಸುರಪುರ : ಕಳೆದ ಒಂದು ವಾರದ ಹಿಂದಷ್ಟೆ ವಿದ್ಯುತ್ ಪರಿವರ್ತಕದ ಸಮಸ್ಯೆಯಿಂದ ಜಾಲಿಬೆಂಚಿ ಗ್ರಾಮದಲ್ಲಿ ದೊಡ್ಡ ಅನಾಹುತ ಸಂಭವಿಸಿರುವ ಘಟನೆ ಮಾಸುವ ಮುನ್ನವೇ ಮತ್ತೆ ಅದೇ ಜಾಲಿಬೆಂಚಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಬಿದ್ದು ರೈತರು ಜಾನುವಾರುಗಳಿಗೆ ಮೇಯಿಸಲೆಂದು ಸಂಗ್ರಹಿಸಿದ್ದ ಹುಲ್ಲಿನ ಬಣವೆಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.
ರೈತರಾದ ಹೊನ್ನರಡ್ಡಿ ಕಾಮತ್, ಮಲ್ಲಣ್ಣ ಕಾಮತ್ ಹಾಗೂ ಹೊನ್ನಪ್ಪ ಪೂಜಾರಿ ಮತ್ತಿತರರು ಜಾನುವಾರುಗಳಿಗೆ ಮೇಯಿಸಲೆಂದು ಹುಲ್ಲು ಸಂಗ್ರಹಿಸಿಟ್ಟಿದ್ದರು. ಗುರುವಾರ ಸಂಜೆ ಕಳೆದ ಬಾರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮತ್ತೆ ಅವಘಡ ಸಂಭವಿಸಿ ಹುಲ್ಲಿನ ಬಣವೆಗಳು ಸುಟ್ಟು ಕರಕಲಾಗಿದ್ದು, ರೈತರು ಜಾನುವಾರುಗಳಿಗೆ ಮೇಯಿಸಲು ಹುಲ್ಲು ಇಲ್ಲದೆ ಕಂಗಾಲಾಗಿದ್ದಾರೆ.
ವಿದ್ಯುತ ತಂತಿಗಳಿಂದಲೇ ಬೆಂಕಿ ಬಿದ್ದಿದೆಯಾ ಅಥವಾ ಯಾರಾದರು ಕಿಡಿಗೇಡಿಗಳು ಬೆಂಕಿ ಹಾಕಿದ್ದಾರಾ ಎನ್ನುವ ಕುರಿತು ಜನರಿಗೆ ಅನುಮಾನ ವ್ಯಕ್ತವಾಗುತ್ತಿದ್ದು, ಘಟನಾ ಸ್ಥಳದಲ್ಲಿದ್ದ ಎಲ್ಲರೂ ಸೇರಿ ನೀರು ಹಾಕಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ ಅದಾಗಲೇ ಎಲ್ಲಾ ಹುಲ್ಲು ಸುಟ್ಟು ಕರಕಲಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.