ಸುರಪುರ | ಅಕ್ರಮ ಅಂಗಡಿಗಳನ್ನು ತೆರವುಗೊಳಿಸುವಂತೆ ತಹಶೀಲ್ದಾರ್‌ಗೆ ಮಲ್ಲಿಕಾರ್ಜುನ ಕ್ರಾಂತಿ ಮನವಿ

ಸುರಪುರ : ತಾಲೂಕಿನ ಶಾಂತಪುರ ಕ್ರಾಸ್ ನಿಂದ ಸುರಪುರ ಬರುವ ಮಾರ್ಗದ ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯ ಬಲ ಭಾಗದಲ್ಲಿ ಖಾಸಗಿಯವರ ಜಮೀನು ಇದ್ದು, ಈ ಜಮೀನುಗಳಲ್ಲಿ ಜಾಗ ಕಬಳಿಸಿ ಅಂಕ್ರಮವಾಗಿ ಅಂಗಡಿಗಳನ್ನು ನಿರ್ಮಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ರಾಜ್ಯ ಸಂ.ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಆರೋಪಿಸಿದರು.
ನಗರದ ತಹಶೀಲ್ದಾರ್ ಕಚೇರಿ ಹಾಗೂ ತಾಲೂಕು ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ, ಖಾಸಗಿ ವ್ಯಕ್ತಿಗಳಾದ ಸೋಮಣ್ಣ ಶಾಂತಪೂರ ಹಾಗೂ ಮಾನಪ್ಪ ಶಾಂತಪೂರ ಎನ್ನುವವರಿಗೆ ಸೇರಿದ 36 ಗುಂಟೆ ಜಮೀನು ಇದ್ದು, ಈ ಇಬ್ಬರು ರೈತರು ಉಪ ಜೀವನಕ್ಕಾಗಿ ಬೆಂಗಳೂರಿಗೆ ದುಡಿಯಲು ಹೋದಾಗ ಕೆಲವರು ಅಕ್ರಮವಾಗಿ ಈ ಜಾಗದಲ್ಲಿ ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಅಲ್ಲದೆ ಕೆಲವರು ಬಸ್ ನಿಲ್ದಾಣದ ಮೇಲೆಯೇ ಅಂಗಡಿ ನಿರ್ಮಿಸಿಕೊಂಡಿದ್ದಾರೆ. ಕೂಡಲೇ ಈ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಎ.23 ರಂದು ಶಾಂತಪುರ ಕ್ರಾಸ್‌ನ ತಿಂಥಣಿ ಮೌನೇಶ್ವರ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ, ನಂತರ ತಹಶೀಲ್ದಾರ್ ಹುಸೇನ್ ಸಾಬ್ ಎ.ಸರಕಾವಸ್ ಹಾಗೂ ತಾ.ಪಂ ಇಒ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಮಾನು ಗುರಿಕಾರ,ಮೂರ್ತಿ ಬೊಮ್ಮನಹಳ್ಳಿ, ರಾಮಣ್ಣ ಶೆಳ್ಳಗಿ,ಮಾನಪ್ಪ ಬಿಜಾಸಪುರ, ಬಸವರಾಜ ದೊಡ್ಮನಿ, ನಿಂಗಪ್ಪ ಹಂಪಿನ್,ಭೀಮಣ್ಣ ಲಕ್ಷ್ಮೀಪುರ,ಖಾಜಾಹುಸೇನ ಗುಡಗುಂಟಿ, ಮರಿಲಿಂಗಪ್ಪ ನಾಟೆಕಾರ್, ಪರಶುರಾಮ ಬೈಲಕುಂಟಿ,ಮಹೇಶ ಸುಂಗಲಕರ್, ಮಲ್ಲಪ್ಪ ಬಾದ್ಯಾಪುರ, ಹಣಮಂತ ನರಸಿಂಗಪೇಟ, ಮಲ್ಲಿಕಾರ್ಜುನ ಶೆಳ್ಳಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.