ಯಾದಗಿರಿ | ರಾಜ್ಯ ಸರಕಾರದ ಅಭಿವೃದ್ಧಿಗೆ ಸಿಕ್ಕ ಗೆಲುವು : ಭೀಮಣ್ಣ ಮೇಟಿ

Update: 2024-11-23 12:43 GMT

ಯಾದಗಿರಿ : ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಮತದಾರರು ಬಿಜೆಪಿ ಮತ್ತು ಜೆಡಿಎಸ್ಗೆ ತೀವ್ರ ಮುಖಭಂಗ ಮಾಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಭೀಮಣ್ಣ ಮೇಟಿ ಅವರು ಲೇವಡಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್, ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಂ ಮತ್ತು ಶಿಗ್ಗಾಂವಿ ಕ್ಷೇತ್ರದಲ್ಲಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರು ಗೆಲುವಿನ ನಗೆ ಬೀರಿದ್ದಾರೆ ಎಂದು ಹೇಳಿದರು.

ಶಿಗ್ಗಾಂವಿ ಕ್ಷೇತ್ರದಲ್ಲಿ ಸುಮಾರು ಮೂರು ವಾರಗಳ ಕಾಲ ವಾಸ್ತವ್ಯ ಹೂಡಿ ಸಚಿವ ಸತೀಶ್ ಜಾರಕಿಹೊಳಿ ರಣತಂತ್ರ ಹೆಣೆದ ಪರಿಣಾಮವಾಗಿ ಸುಮಾರು 30 ವರ್ಷಗಳ ಬಳಿಕ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಇದರಲ್ಲಿ ಜಾರಕಿಹೊಳಿ ಅವರ ಪಾತ್ರ ಅಮೋಘವಾಗಿದೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಬಹಳ ಕೀಳಾಗಿ ಆರೋಪ ಮಾಡುತ್ತಿದ್ದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ಜನರು ತಕ್ಕಪಾಠ ಕಲಿಸಿದ್ದಾರೆ. ಉಪ ಚುನಾವಣೆಯಲ್ಲಿ ಮತದಾರರನ್ನು ದಾರಿ ತಪ್ಪಿಸುವ ಕೆಲಸ ಮಾಡಲು ಮುಂದಾಗಿದ್ದರು. ಆದರೆ ಜನರು ಐತಿಹಾಸಿಕವಾದ ತೀರ್ಪು ನೀಡಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಾಡಿನ ಜನರಿಗೆ ಭರವಸೆ ನೀಡಿದಂತೆ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದಾರೆ. ಬಡವರನ್ನು ಮುಖ್ಯವಾಹಿನಿಗೆ ತರಲು ಕಾಂಗ್ರೆಸ್ ಉತ್ತಮವಾದ ಸರಕಾರ ನಡೆಸುತ್ತಿದೆ ಎಂದು ತಿಳಿಸಿದರು.

ಬಿಜೆಪಿ ನಾಯಕರು ಉಪ ಚುನಾವಣೆ ಹೊತ್ತಿನಲ್ಲಿಯೇ ಕೋಮುವಾದ ಸೃಷ್ಟಿಸಲು ಮುಂದಾಗಿದ್ದರು. ಬರೀ ಆಧಾರದ ರಹಿತವಾದ ಇಲ್ಲಸಲ್ಲದ ಆರೋಪಗಳನ್ನು ಸರಕಾರದ ಮೇಲೆ ಮಾಡುತ್ತಿದ್ದರು. ಮೂರು ಕ್ಷೇತ್ರಗಳಲ್ಲಿನ ಮತದಾರರು ಬಿಜೆಪಿ ಮತ್ತು ಜೆಡಿಎಸ್ಗೆ ಆಘಾತ ನೀಡಿದ್ದಾರೆ ಎಂದು ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್ ನಾಯಕರು ಇನ್ನಾದರೂ ಸುಳ್ಳು ಹೇಳುವುದು ಬಿಡಬೇಕಿದೆ. ಪ್ರತಿಪಕ್ಷವಾಗಿ ಉತ್ತಮವಾಗಿ ಕೆಲಸ ಮಾಡಬೇಕು. ಅದುಬಿಟ್ಟು ಜನರನ್ನು ಎತ್ತಿಕಟ್ಟುವುದು ಮತ್ತು ಸಮಾಜದಲ್ಲಿ ಅಶಾಂತಿ ಮೂಡಿಸುವಂತಹ ಕೆಲಸ ಮಾಡಬಾರದು ಎಂದು ತಿಳಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News