ಯಾದಗಿರಿ | ಎ.26ರಂದು ಐಸಿಎಸ್‌ಇ ಪ್ರವೇಶ ಪರೀಕ್ಷೆ : ಮಲ್ಲಿಕಾರ್ಜುನ ಮೇಟಿ

ಯಾದಗಿರಿ : ಡಿ.ದೇವರಾಜ ಅರಸು ಶಿಕ್ಷಣ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಐಸಿಎಸ್‌ಇ ಶಹಾಪುರ ಮತ್ತು ಯಾದಗಿರಿ ನಗರದಲ್ಲಿನ ಶಾಲೆಗಳಲ್ಲಿ ಎ.26ರಂದು ಒಂದನೇ ತರಗತಿಯಿಂದ ಒಂಬತ್ತನೆ ತರಗತಿಯವರೆಗೆ ಮಕ್ಕಳಿಗೆ ಪ್ರವೇಶ ಪರೀಕ್ಷೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಮೇಟಿ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 10.30ರಿಂದ 12ರ ವರೆಗೆ ಪರೀಕ್ಷೆ ಇರುತ್ತದೆ. ಇದರಲ್ಲಿ ಗಣಿತ, ವಿಜ್ಞಾನ, ಇಂಗ್ಲಿಷ್ ಹಾಗೂ ಸಮಾಜವಿಜ್ಞಾನ ವಿಷಯಗಳಿದ್ದು, 50 ಅಂಕಗಳನ್ನು ನಿಗದಿ ಮಾಡಲಾಗಿದೆ ಎಂದರು.
ಪರೀಕ್ಷೆಗೆ ಹಾಜರಾಗುವ ಎಲ್ಲರಿಗೂ 2,000 ರೂಪಾಯಿಯ ಓಚರ್ ನೀಡಲಾಗುತ್ತದೆ. ಇದನ್ನು ಮುಂದೆ ಪ್ರವೇಶ ಪಡೆಯಲು ಬಂದಾಗ ಒಟ್ಟು ಶುಲ್ಕದಲ್ಲಿ ವಿನಾಯತಿ ನೀಡಲಾಗುವುದು ಎಂದು ಹೇಳಿದರು.
ಐಸಿಎಸ್‌ಇ ಪ್ರವೇಶ ಪಡೆಯುವುದರಿಂದ ಮಕ್ಕಳಿಗೆ ಮುಂದಿನ ಭವಿಷ್ಯತ್ತಿನ ವ್ಯಾಸಂಗದಲ್ಲಿ ಜೆಇಇ, ನೀಟ್, ಸಿಇಟಿಗೆ ಲಾಭವಾಗಲಿದೆ. ಈಗಾಗಲೇ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳಿದರು.
ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಇದರ ಲಾಭ ಪಡೆಯುವಂತೆ ಮನವಿ ಮಾಡಿದ್ದಾರೆ.
ಈ ವೇಳೆ ಸಂತೊಷ ಕುಮಾರ ಈಕೆ, ರವಿ ಪವಾರ್ ಇದ್ದರು.