ಯಾದಗಿರಿ | ಕಲ್ಯಾಣ ಕರ್ನಾಟಕ ವಿಭಾಗದ ಸ್ಕೌಟ್ಸ್, ಗೈಡ್ಸ್ ಜಾಂಬೋರೇಟ್ ಉದ್ಘಾಟನೆ

Update: 2025-01-17 20:13 IST
Photo of Program
  • whatsapp icon

ಯಾದಗಿರಿ : ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್ ಗಳಿಂದ ವಿದ್ಯಾರ್ಥಿಗಳಲ್ಲಿನ ಆತ್ಮ ವಿಶ್ವಾಸ ಹೆಚ್ಚಲು ಸಹಕಾರಿಯಾಗಲಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ʼಕಲ್ಯಾಣ ಕರ್ನಾಟಕ ವಿಭಾಗದ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್ ಕಾರ್ಯಕ್ರಮʼವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್ ಗಳಂತಹ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುವ ಜೊತೆಗೆ ಜ್ಞಾನ, ಸುಪ್ತ ಪ್ರತಿಭೆ ಅನಾವರಣಕ್ಕೆ ನೆರವಾಗಲಿದೆ ಎಂದು ಹೇಳಿದರು.

ಮಾಜಿ ಗೃಹ ಸಚಿವರು ಹಾಗೂ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸ್ಮರಣೀಯ ಸೇವೆಯನ್ನು ಬಾಪುಗೌಡ ದರ್ಶನಾಪುರ ಅವರು ಸಲ್ಲಿಸಿದ್ದು, ಅವರು ಸದಾಸ್ಮರಣೀಯರಾಗಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್ ಯುದ್ಧ ಕಾಲದಲ್ಲಿ, ಕೊರೋನ ಕಾಲದಲ್ಲಿ ರಾಜ್ಯ ಸರ್ಕಾರಕ್ಕೆ ಕೈ ಜೋಡಿಸಿ ಸೇವೆ ಸಲ್ಲಿಸಿದೆ. ಧೈರ್ಯ ಹಾಗೂ ಶಾಂತಿಗಾಗಿ ಹೋರಾಟ ಮಾಡಿದ್ದಾರೆ.

ಮಾನವೀಯ ಸೇವಾ ಭಾವನೆ ಬೆಳೆಸಲು, ದೇವರಲ್ಲಿ, ದೇಶದಲ್ಲಿ ನಂಬಿಕೆ ಇಟ್ಟು ಕೆಲಸ ನಿರ್ವಹಿಸಲು ಪ್ರೇರೇಪಿಸುವ ಉದ್ದೇಶದಿಂದ ಇಂತಹ ಜಾಂಬೋರೇಟ್ ಏರ್ಪಡಿಸಲಾಗುತ್ತಿದೆ. ಇದಕ್ಕಾಗಿ ನಿರಂತರ ಸಹಾಯಹಸ್ತ ಚಾಚಿದ ಕೊಡುಗೈ ದಾನಿಗಳಿಗೆ, ಇಲ್ಲಿಯ ಜಿಲ್ಲಾಡಳಿತಕ್ಕೆ ಅಭಿನಂದಿಸುವುದಾಗಿ ತಿಳಿಸಿದರು.

ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಬೆಳೆಯುತ್ತಿದ್ದು, ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ರಾಷ್ಟ್ರ ಧ್ವಜಾರೋಹಣ, ಸ್ಕೌಟ್ಸ್ ಮತ್ತು ಗೈಡ್ಸ್ ಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸಲಾಯಿತು. ಸಂವಿಧಾನದ ಪೀಠಿಕೆ ವಾಚನ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಕ್ಯಾಪ್ ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನಾಯಕ ಮಾಲಿಪಾಟೀಲ್, ಪ್ರಭಾರಿ ಜಿಲ್ಲಾಧಿಕಾರಿ ಲವೀಶ್ ಒರಡಿಯಾ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಡಿಡಿಪಿಐ ಸಿ.ಮುಧೋಳ, ಕ್ರೀಡಾಧಿಕಾರಿ ರಾಜು ಬಾವಿಹಳ್ಳಿ, ಡಾನ್ ಬಾಸ್ಕೋ ಶಾಲೆಯ ಫಾದರ್ ಸರ್ಜಿ ಜಾರ್ಜ್, ಹೆಚ್.ಎಮ್. ಸಿದ್ದರಾಮ ಸ್ವಾಮಿ, ರಾಮನಗೌಡ ಮುದ್ನಾಳ, ಮಹೇಶ್ ರೆಡ್ಡಿ ಮುದ್ನಾಳ, ಬಸವರಾಜ ಮಾಮನಿ, ನಾಗರತ್ನ, ಶರಣ ಭೋಪಾಲ್ ರೆಡ್ಡಿ, ಎಂ.ಪಟ್ಟೇದಾರ್, ರಾಘವೇಂದ್ರ ಅಳ್ಳಳ್ಳಿ, ಬಸವರಾಜ ಬೋರಡ್ಡಿ ಉಪಸ್ಥಿತರಿದ್ದರು.

ಸ್ಕೌಟ್ಸ್ ಮತ್ತು ಗೈಡ್ಸ್ ಕಲ್ಯಾಣ ಕರ್ನಾಟಕ ಉಸ್ತುವಾರಿ ಮಲ್ಲೇಶ್ವರಿ ಜುಜಾರೆ ಸ್ವಾಗತಿಸಿದರು. ಜಿಲ್ಲಾ ಸಂಸ್ಥೆ ಅಧ್ಯಕ್ಷ ಸುರೇಶ್ ಸಜ್ಜನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಯಾದಗಿರಿಯಲ್ಲಿ ಇಂತಹ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸದ ವಿಷಯ. ಇದಕ್ಕೆ ಶ್ರಮಿಸಿದ ಮಾಜಿ ಗೃಹ ಸಚಿವ ಪಿ.ಜಿ.ಆರ್.ಸಿಂಧ್ಯಾ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

 

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News