ಯಾದಗಿರಿ | ಏಳನೇ ಸುತ್ತಿನ ಜಾನುವಾರು ಕಾಲುಬಾಯಿ ರೋಗ ಲಸಿಕಾ ಅಭಿಯಾನ ಯಶಸ್ವಿಯಾಗಿ ಹಮ್ಮಿಕೊಳ್ಳಲು ಅಪರ ಜಿಲ್ಲಾಧಿಕಾರಿ ಸೂಚನೆ

ಯಾದಗಿರಿ : ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಯಾದಗಿರಿ ಇವರ ಸಹಯೋಗದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 7ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಎ.21ರಿಂದ ಜೂ.4 ರವರೆಗೆ ಯಶಸ್ವಿಯಾಗಿ ಹಮ್ಮಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು 7ನೇ ಸುತ್ತಿನ ಜಾನುವಾರು ಕಾಲುಬಾಯಿ ಲಸಿಕಾ ಅಭಿಯಾನ ಕುರಿತು ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರಿಗೆ ಆರ್ಥಿಕ ಸಂಕಷ್ಟ ಉಂಟುಮಾಡುವ ಜಾನುವಾರು ಕಾಲುಬಾಯಿ ರೋಗದಿಂದ ರಾಜ್ಯ ಹಾಗೂ ಜಿಲ್ಲೆಯನ್ನು ಮುಕ್ತ ಮಾಡುವಲ್ಲಿ ಸಹಕರಿಸಬೇಕು. ಕಾಲುಬಾಯಿ ರೋಗವು ವೈರಾಣುವಿನಿಂದ ಬರುವ ಅಂಟು ಜಾಡ್ಯವಾಗಿದ್ದು, ಲಸಿಕೆ ಹಾಕುವುದೊಂದೇ ರೋಗ ನಿಯಂತ್ರಿಸಲು ಏಕೈಕ ಮಾರ್ಗವಾಗಿರುವುದರಿಂದ ರೈತರು ಹಾಗೂ ಹೈನುಗಾರರು ಸಹಕರಿಸುವಂತೆ ಸಲಹೆ ನೀಡಿದರು.
ಕಾಲುಬಾಯಿ ರೋಗವು ಎತ್ತು ಹೋರಿ, ಹಸು, ಎಮ್ಮೆ ಮತ್ತು ಹಂದಿಗಳಿಗೆ ತಗಲುವ ಮಾರಕ ರೋಗವಾಗಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಹಾಕಲು ಪಶುವೈದ್ಯರು, ಪಶು ಸಖಿಯರು, ಡಿಪ್ಲೊಮಾ ವಿದ್ಯಾರ್ಥಿಗಳು ಆಗಮಿಸಿದ ಸಂದರ್ಭದಲ್ಲಿ ಸಹಕರಿಸುವಂತೆ ತಿಳಿಸಿರುವ ಅವರು, ಯಾವುದೇ ಜಾನುವಾರು ಈ ಲಸಿಕೆಯಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಲು ಅವರು ಸೂಚಿಸಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ರಾಜು ದೇಶಮುಖ್ ಅವರು ಮಾತನಾಡಿ, ವರ್ಷದಲ್ಲಿ ಕನಿಷ್ಠ ಎರಡು ಬಾರಿ ಲಸಿಕೆ ಹಾಕುವುದರಿಂದ ರೋಗ ತಡೆಗಟ್ಟಲು ಸಾಧ್ಯ. ಮೂರು ತಿಂಗಳ ಮೇಲ್ಪಟ್ಟ ಎಲ್ಲ ಕರುಗಳಿಗೆ ತಪ್ಪದೇ ಲಸಿಕೆ ಹಾಕಿಸಿದ ನಂತರ ಮತ್ತೊಮ್ಮೆ 3 ರಿಂದ 5 ವಾರದೊಳಗೆ ಬೂಸ್ಟರ್ ಲಸಿಕೆ ಹಾಕಿಸಲಾಗುತ್ತದೆ. ಅದರಂತೆ ದನ ಮತ್ತು ಎಮ್ಮೆಗಳಿಗೂ ಲಸಿಕೆ ಹಾಕಲಾಗುತ್ತಿದೆ. ಗರ್ಭಧರಿಸಿದ ಹಸು ಎಮ್ಮೆಗಳಿಗೂ ಲಸಿಕೆ ಹಾಕಲಾಗುತ್ತಿದ್ದು, ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಸಹ ಪ್ರತಿ ಆರು ತಿಂಗಳಿಗೊಮ್ಮೆ ಕೈಗೊಳ್ಳುವ ಈ ಸಾಮೂಹಿಕ ಲಸಿಕಾ ಕಾರ್ಯಕ್ರಮದಲ್ಲಿ ತಪ್ಪದೇ, ಲಸಿಕೆ ಹಾಕಿಸುವಂತೆ ಅವರು ತಿಳಿಸಿದರು.
ಜಿಲ್ಲೆಯಲ್ಲಿ 20ನೇ ಜಾನುವಾರು ಗಣತಿ ಅನ್ವಯ ಒಟ್ಟು 2,90,774 ದನ, ಎಮ್ಮೆ, ಹಂದಿ ಗುರುತಿಸಿದೆ. ಈ ಲಸಿಕೆ ಕಾರ್ಯಕ್ರಮದ ಅಂಗವಾಗಿ 2,84,400 ಲಸಿಕೆ (ಡೋಝ್‌ಗಳಲ್ಲಿ) ಸರಬರಾಜು ಆಗಿವೆ. ಜಿಲ್ಲೆಯ 19 ಪಶು ಚಿಕಿತ್ಸಾಲಯ ಹಾಗೂ ಪಶು ಆಸ್ಪತ್ರೆ ಗಳಲ್ಲಿ178 ವ್ಯಾಕ್ಸಿನ್ ಕ್ಯಾರಿಯರ್ಸ್ ಲಭ್ಯ ಇವೆ. 193 ಲಸಿಕೆದಾರರ ವ್ಯವಸ್ಥೆ ಮಾಡಲಾಗಿದೆ. ತುರ್ತು ಔಷಧಿಗಳು ಲಭ್ಯ ಇವೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳು ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಿದರು. ಪಶುವೈದ್ಯಾಧಿಕಾರಿಗಳು ಹಾಗೂ ಇತರ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.