ಯಾದಗಿರಿ | ಟೆಂಡರ್ ಉಳಿತಾಯ ಹಣ ದುರ್ಬಳಕೆ ಖಂಡಿಸಿ ಪ್ರತಿಭಟನೆ

ಸುರಪುರ : ಕೃಷ್ಣಭಾಗ್ಯ ಜಲ ನಿಗಮದ ಭೀಮರಾಯನ ಗುಡಿ ಮುಖ್ಯ ಅಭಿಯಂತರದ ವ್ಯಾಪ್ತಿಯಲ್ಲಿನ ಟೆಂಡರ್ ಕಾಮಗಾರಿಯಲ್ಲಿನ ಉಳಿತಾಯದ ಹಣ ದುರ್ಬಳಕೆಯಾಗಿದೆ ಎಂದು ಆರೋಪಿಸಿ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಗಿದೆ.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋದೊರೆ, ಆಯಾ ಕ್ಷೇತ್ರದ ಟೆಂಡರ್ ಕಾಮಗಾರಿಯಲ್ಲಿ ಉಳಿತಾಯದ ಹಣವನ್ನು ಅದೇ ಕ್ಷೇತ್ರದಲ್ಲಿ ಬಳಕೆ ಮಾಡಬೇಕು ಎನ್ನುವ ನಿಯಮವಿದೆ, ಆದರೆ ಭೀಮರಾಯನಗುಡಿಯ ಕೆಬಿಜೆಎನ್ಎಲ್ ಕಚೇರಿಯ ಸಿ.ಇ ಅವರು ಈ ಕ್ಷೇತ್ರದ ಉಳಿತಾಯ ಹಣವನ್ನು ಬೇರೆ ಕ್ಷೇತ್ರಕ್ಕೆ ವರ್ಗಾಯಿಸಿದ್ದು, ಇದರ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದಲ್ಲಿ ಸಿ.ಇ ಕಚೇರಿಯ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಲೋಕಾಯುಕ್ತರಿಗೆ ಬರೆದ ಮನವಿ ತಹಶೀಲ್ದಾರ್ ಕಚೇರಿ ಶಿರಸ್ತೆದಾರರ ಮೂಲಕ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಒಕ್ಕೂಟದ ತಾಲೂಕು ಅಧ್ಯಕ್ಷ ನಾಗರಾಜ ನಾಯಕ ಸೇರಿದಂತೆ ಅನೇಕರು ಭಾಗವಹಿಸಿದ್ದರು.