ಯಾದಗಿರಿ | ಯಾವುದೇ ಗ್ರಾಮದಲ್ಲಿಯೂ ಕುಡಿಯುವ ನೀರು ಕೊರತೆಯಾಗಬಾರದು : ಜಿಲ್ಲಾಧಿಕಾರಿ ಡಾ.ಸುಶೀಲ ಬಿ.

ಯಾದಗಿರಿ : ಕುಡಿಯುವ ನೀರು, ಬಿಸಿಗಾಳಿ, ಸಿಡಿಲು ಹಾಗೂ ಕೃಷಿ ಬೆಳೆಗಳಿಗೆ ನೀರಿನ ಅವಶ್ಯಕತೆ ಕುರಿತಂತೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತರಾಗುವಂತೆ ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಕುಡಿಯುವ ನೀರು, ಬಿಸಿಗಾಳಿ ಹಾಗೂ ಪೂರ್ವ ಮುಂಗಾರು ಕುರಿತು ಸಭೆ ನಡೆಸಿ ಅವರು ಮಾತನಾಡಿದರು.
ಬಿಸಿಲಿನ ತಾಪಮಾನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ನಿರ್ವಹಣೆ ಅತ್ಯಂತ ಮಹತ್ವದ್ದಾಗಿದೆ. ವಿವಿಧ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತಪ್ಪದೆ ನೀರಿನ ಗುಣಮಟ್ಟ ಪರೀಕ್ಷಿಸಬೇಕು. ಯೋಗ್ಯವಿಲ್ಲದ ನೀರಿರುವ ಕಡೆಗಳಲ್ಲಿ ನೋಟಿಸ್ ಹಾಗೂ ಡಂಗುರದ ಮೂಲಕ ಅರಿವು ಮೂಡಿಸಬೇಕು. ಈ ಕುರಿತು ಗ್ರಾಮ ಪಂಚಾಯತ್ ವಾರು ಹಾಗೂ ನಗರ, ಪಟ್ಟಣಗಳ ವಾರ್ಡವಾರು ಅರಿವು ಮೂಡಿಸಿದ ಬಗ್ಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯ ಸಂಬಂಧಪಟ್ಟ ತಹಶೀಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರು, ತಾಲೂಕು ಆರೋಗ್ಯ ಅಧಿಕಾರಿಗಳು, ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ನೀರಿನ ಮೂಲಗಳಿಗೆ ಹಾಗೂ ಪೈಪ್ ಲೈನ್ ಗಳಿಗೆ ಕಲುಷಿತ ನೀರು ಸೇರ್ಪಡೆಯಾಗದಂತೆ ನಿಗಾವಹಿಸಿ, ಈ ಕುರಿತು ಖುದ್ದಾಗಿ ಪರಿಶೀಲನೆ ಮತ್ತು ಸರ್ವೆ ನಡೆಸಿ ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬೇಸಿಗೆ ತಾಪಮಾನ ದೃಷ್ಟಿಯಲ್ಲಿಟ್ಟುಕೊಂಡು ವಿವಿಧ ಬೆಳೆಗಳಿಗೆ ಬೆಳೆ ಕಟಾವು ಆಗುವವರೆಗೆ ನೀರಿನ ಅವಶ್ಯಕತೆ, ಸಂಗ್ರಹ ಪ್ರಮಾಣ ಕುರಿತು ಪ್ರಸ್ತಾವನೆ ಸಲ್ಲಿಸಬೇಕು. ಕಾಲುವೆಗಳ ಮೂಲಕ ಜಿಲ್ಲೆಯ ಕೊನೆಯ ಭಾಗಕ್ಕೆ ನೀರು ಬೇಕಾದ ಪ್ರಮಾಣ ಹಾಗೂ ಭೀಮಾ ನದಿ ಸುತ್ತಮುತ್ತಲಿನ ಬೆಳೆಗಳಿಗೆ ಬೇಕಾದ ನೀರಿನ ಪ್ರಮಾಣದ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳು ಸಮನ್ವಯತೆ ಸಾಧಿಸಿ ಪರಿಶೀಲನಾ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಮುಂದಿನ 56 ವಾರಗಳವರೆಗೆ ಮೇವಿನ ಕೊರತೆ ಇಲ್ಲ. ತೀವ್ರ ಬೇಸಿಗೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪ್ರಾಣಿ ಪಕ್ಷಿಗಳಿಗೂ ನೀರಿನ ಸೌಲಭ್ಯ ಕಲ್ಪಿಸಲು ಗಮನ ನೀಡುವಂತೆ ಅವರು ಸೂಚನೆ ನೀಡಿದರು.
ಮುಂಬರುವ ಮೇವರೆಗೆ ಯಾವೊಂದು ಗ್ರಾಮದಲ್ಲಿಯೂ ಕುಡಿಯುವ ನೀರು ಕೊರತೆಯಾಗಬಾರದು. ಅಧಿಕಾರಿಗಳ ಕೆಳಸಿಬ್ಬಂದಿಗಳ ಮಧ್ಯ ಸಮನ್ವಯತೆ ಇರಬೇಕು. ವಿದ್ಯುತ್ ಅವಘಡಯಾಗದಿರಲು ಲೈನ್ಮನ್ಗಳಿಂದ ಅವಶ್ಯಕ ಸೇವೆ ಪಡೆಯುವಂತೆ ಜೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ ಅವರು ಕುಡಿಯುವ ನೀರು ಪೂರೈಕೆ ಸಂದರ್ಭದಲ್ಲಿ ಕಡ್ಡಾಯವಾಗಿ ನೀರಿನ ಗುಣಮಟ್ಟ ಪರಿಶೀಲಿಸಿ ಪೂರೈಸಲು ಸೂಚಿಸಲಾಗಿದೆ. ಸಮರ್ಪಕ ನೀರಿನ ಪೂರೈಕೆ, ಜಲಮೂಲಗಳ, ಓಹೆಚ್ ಡಿ ಟ್ಯಾಂಕ್ ಗಳ ಸ್ವಚ್ಛತೆ, ಕ್ಲೋರಿನೆಶನ್ ಗೆ ಸೂಚನೆ ನೀಡಲಾಗಿದೆ ಎಂದು ಸಭೆಗೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.