ಯಾದಗಿರಿ | ಪ್ರಧಾನಿ ಮೋದಿಯವರ ಮನೆ ಮುಂದೆ ಮೊದಲು ಜನಾಕ್ರೋಶ ಯಾತ್ರೆ ಮಾಡಿ : ಡಾ.ಭೀಮಣ್ಣ ಮೇಟಿ

ಯಾದಗಿರಿ : ಬಿಜೆಪಿಗರು ಯಾವ ಪುರುಷಾರ್ಥಕ್ಕಾಗಿ ರಾಜ್ಯದಲ್ಲಿ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನೆ ಮುಂದೆ ಜನಾಕ್ರೋಶ ಯಾತ್ರೆ ನಡೆಸಲಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ಭೀಮಣ್ಣ ಮೇಟಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸರಕಾರವೇ ಜನವಿರೋಧಿ ಸರಕಾರವಾಗಿದೆ. ರಾಜ್ಯ ಬಿಜೆಪಿ ಘಟಕಕ್ಕೆ ನಿಜವಾದ ಜನರ ಮೇಲೆ ಕಾಳಜಿ ಇದ್ದರೇ ಮೊದಲು ಕೇಂದ್ರದ ವಿರುದ್ಧ ಜನಾಕ್ರೋಶ ಯಾತ್ರೆ ಮಾಡಲಿ. ಜನರ ದಾರಿ ತಪ್ಪಿಸುವ ಕೆಲಸ ಮೊದಲು ಬಿಡಬೇಕು ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅಡುಗೆ ಅನಿಲ ದರ ಏರಿಕೆ ಮಾಡಿದ್ದಾರೆ. ಇದು ಬಡವರಿಗೆ ಹೊರೆ ಆಗುವುದಿಲ್ಲವೇ? ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ಉತ್ತಮವಾಗಿ ಆಡಳಿತ ನಡೆಸುತ್ತಿರುವುದನ್ನು ನೋಡಿರುವ ಬಿಜೆಪಿಗರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿಗರು ನಡೆಸುತ್ತಿರುವ ಜನಾಕ್ರೋಶ ಯಾತ್ರೆಗೆ ತಮ್ಮ ತಮ್ಮಲ್ಲಿಯೇ ಶಕ್ತಿ ಪ್ರದರ್ಶನ ಮಾಡಿಕೊಳ್ಳುತ್ತಿದ್ದಾರೆ. ಮನೆಯೊಂದು ಮೂರು ಬಾಗಿಲು ಆಗಿದೆ. ಯಾತ್ರೆ ಬಿಜೆಪಿ ಕಾರ್ಯಕರ್ತರೇ ನಿರಾಸಕ್ತಿ ತೋರಿಸುತ್ತಿದ್ದಾರೆ. ಇವರ ಒಳಜಗಳಕ್ಕೆ ಬೇಸತ್ತು ಹೋಗಿದ್ದಾರೆ ಎಂದು ಹೇಳಿದರು.