ಯಾದಗಿರಿ | ಜನಿವಾರ ತೆಗೆದು ಹಾಕುವಂತೆ ತಿಳಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಸುರಪುರ : ಕೆ-ಸಿಇಟಿ ಪರೀಕ್ಷೆಗೆ ಹಾಜರಾದ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯುವಂತೆ ಒತ್ತಾಯಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದ ತಹಶೀಲ್ದಾರ್ ಕಚೇರಿ ಮುಂದೆ ವಿಪ್ರ ಸಮಾಜ ದಿಂದ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ, ಬೀದರ್ ನಗರದ ಪರೀಕ್ಷಾ ಕೇಂದ್ರದಲ್ಲಿ ಹಾಗೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಪರೀಕ್ಷಾ ಕೇಂದ್ರದಲ್ಲಿ ಎ.17 ರಂದು ನಡೆದ ಕೆ-ಸಿಇಟಿ ಪ್ರವೇಶ ಪರೀಕ್ಷೆಗೆ ಆಗಮಿಸಿದ್ದ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳ ಜನಿವಾರವನ್ನು ತೆಗೆದು ಪರೀಕ್ಷೆಗೆ ಕೂಡುವಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಒತ್ತಾಯಿಸಿದ್ದಾರೆ.
ಇದರಿಂದ ಬ್ರಾಹ್ಮಣ ಸಮಾಜಕ್ಕೆ ಅವಮಾನಿಸಲಾಗಿದೆ. ಅಲ್ಲದೆ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಅಧಿಕಾರಿಗಳು ಚೆಲ್ಲಾಟ ವಾಡಿದ್ದಾರೆ. ವಿದ್ಯಾರ್ಥಿ ಪರೀಕ್ಷೆಯಿಂದಲೇ ಹೊರಗುಳಿದಿದ್ದಾನೆ, ಸರಕಾರದ ಯಾವುದೇ ನಿಯಮ ಇಲ್ಲದಿದ್ದರೂ, ಜನಿವಾರ ತೆಗೆಯುವಂತೆ ಒತ್ತಾಯಿಸುವ ಮೂಲಕ ಪರೀಕ್ಷಾ ಕೇಂದ್ರದ ಅಧಿಕಾರಿಗಳು ನಮ್ಮ ಸಮಾಜವನ್ನು ಅವಮಾನಿಸಿದ್ದಾರೆ. ಕೂಡಲೇ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಇಂತಹ ಘಟನೆ ಮತ್ತೊಮ್ಮೆ ನಡೆಯದಂತೆ ಸರಕಾರ ಎಚ್ಚರ ವಹಿಸಬೇಕು. ಅಲ್ಲದೇ ಪರೀಕ್ಷೆಯಿಂದ ಹೊರಗುಳಿದ ವಿದ್ಯಾರ್ಥಿಗಳಿಗೆ ಪುನಃ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಕೀಲ ವಿ.ಎಸ್.ಜೋಷಿ,ಶಿಕ್ಷಕ ಅಪ್ಪಣ್ಣ ಕುಲಕರ್ಣಿ ಹೆಮನೂರ, ಹೋರಾಟಗಾರ ವೆಂಕಟೇಶ ಭಕ್ರಿ ಮಾತನಾಡಿದರು. ನಂತರ ಮುಖ್ಯಮಂತ್ರಿಗೆ ಬರೆದ ಮನವಿ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರ ಮೂಲಕ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ, ನಾರಾಯಣಚಾರ್ಯ ಐಜಿ, ಮಲ್ಲಾರಾವ ಕುಲಕರ್ಣಿ ಸಿಂದಗೇರಿ, ಕೇದಾರನಾಥ ಶಾಸ್ತ್ರಿ,ಗಣೇಶ ಜಹಾಗೀದಾರ, ಗುರುರಾಜ ಪಾಲ್ಮೂರ, ಧೀರೇಂದ್ರ ಕುಲಕರ್ಣಿ,ನರಸಿಂಹರಾವ ಬಾಡಿಯಾಳ,ನರಸಿಂಹರಾವ ಬಡಶೇಷಿ,ರಮೇಶ ಕುಲಕರ್ಣಿ, ಶ್ರೀಕರಭಟ್ ಜೋಷಿ, ನರಸಿಂಹ ಭಂಡಿ, ಶಶಿಕಾಂತ ಜೋಷಿ, ವಿಜಯಕುಮಾರ ಕುಲಕರ್ಣಿ, ವಾದಿರಾಜಾಚಾರ್ಯ ಬೂದುರು, ರಾಘವೇಂದ್ರ ಭಕ್ರಿ, ವೆಂಕಟೇಶ ಜೋಷಿ, ರಾಘವೇಂದ್ರ ಕುರಿಹಾಳ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.