ಯಾದಗಿರಿ | ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣೆ

ಸುರಪುರ : ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನನಗೆ ಸದಾಕಾಲ ಪ್ರೇರಣೆಯಾಗಿದ್ದಾರೆ. ಅವರ ಆದರ್ಶವನ್ನು ಮೈಗೂಡಿಸಿಕೊಂಡು ಕೆಲಸ ಮಾಡುತ್ತಿರುವೆ, ನನ್ನ ಕ್ಷೇತ್ರದಲ್ಲಿ ಯಾವುದೇ ವ್ಯಕ್ತಿಗೂ ಅನ್ಯಾಯವಾಗಲು ನಾನು ಬಿಡುವುದಿಲ್ಲ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದ್ದಾರೆ.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿ ಝಂಡದಕೇರಾ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಅಂಬೇಡ್ಕರರು ಅನೇಕ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ವಿದ್ಯಾಭ್ಯಾಸ ಮಾಡಿ ನಮ್ಮ ದೇಶಕ್ಕೆ ಸಂವಿಧಾನ ಬರೆದುಕೊಟ್ಟಿದ್ದಾರೆ. ಅದನ್ನು ಪಾಲಿಸುವ ಜೊತೆಗೆ ಉಳಿಸಿಕೊಂಡುವ ಹೋಗುವ ಜವಬ್ದಾರಿ ಎಲ್ಲರ ಮೇಲಿದೆ ಎಂದರು.
ಪ್ರತಿಯೊಬ್ಬರು ಅಂಬೇಡ್ಕರರನ್ನು ಆದರ್ಶವಾಗಿಟ್ಟುಕೊಂಡು ನಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಡಿಸಬೇಕು ಎಂದರು.
ಜೇವರ್ಗಿಯ ಉಪನ್ಯಾಸಕ ಡಾ.ನಿಜಲಿಂಗ ದೊಡ್ಮನಿ ಹಾಗೂ ಬೆಂಗಳೂರಿನ ವಕೀಲೆ ಭೀಮಪುತ್ರಿ ಸಾವಿತ್ರಿ ಇತರರು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಸುರಪುರ ಅರಸು ಮನೆತನದ ರಾಜಾ ಲಕ್ಷ್ಮೀನಾರಾಯಣ ನಾಯಕ ಉಪಸ್ಥಿತರಿದ್ದರು.
ವರಜ್ಯೋತಿ ಬಂತೇಜಿ ತ್ರಿಸರಣ ಪಂಚಶೀಲ ಪಠಣ ಮಾಡುವ ಮೂಲಕ ಕಾರ್ಯಕ್ರಮ ಸಮಾರೋಪಗೊಳಿಸಲಾಯಿತು. ಸಮಿತಿ ಅಧ್ಯಕ್ಷ ವೈಜನಾಥ ಹೊಸ್ಮನಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಟಿಹೆಚ್‌ಓ ಡಾ.ಆರ್.ವಿ.ನಾಯಕ, ವೆಂಕೋಬ ಯಾದವ್, ಸೂಗುರೇಶ ವಾರದ್, ಶ್ರೀನಿವಾಸ ನಾಯಕ ಬೊಮ್ಮನಹಳ್ಳಿ, ನಗರಸಭೆ ಸದಸ್ಯ ಶಿವಕುಮಾರ ಕಟ್ಟಿಮನಿ, ಮಾಜಿ ಸದಸ್ಯ ವೆಂಕಟೇಶ ಹೊಸ್ಮನಿ,ಕ್ಷೇತ್ರಸಮನ್ವಯಾಧಿಕಾರಿ ಪಂಡೀತ ನಿಂಬೂರ, ಮಾನಪ್ಪ ಕಟ್ಟಿಮನಿ, ವೆಂಕಟೇಶ್ವರ ಸುರಪುರ, ಆದಪ್ಪ ಹೊಸ್ಮನಿ, ಭೀಮರಾಯ ಸಿಂದಗೇರಿ, ಶಂಕ್ರಪ್ಪ ಶಾಖಾನವರ್ ಸೇರಿದಂತೆ ಅನೇಕ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಡಾ.ಬಿ.ಆರ್ ಅಂಬೇಡ್ಕರ್ ಅವರ 134ನೇ ಜಯಂತಿ ಅಂಗವಾಗಿ ಸುರಪುರ ನಗರದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಸಲಾಯಿತು. ನಗರಾದ್ಯಂತ ನಡೆದ ಮೆರವಣಿಗೆಯಲ್ಲಿ ಸಾವಿರಾರು ಜನ ಅಂಬೇಡ್ಕರ್ ಅಭಿಮಾನಿಗಳು ಭಾಗವಹಿಸಿದ್ದರು. ಎಲ್ಲೆಡೆ ನೀಲಿ ಧ್ವಜಗಳ ಹಾರಾಟ ಕಂಡುಬಂತು.