ಯಾದಗಿರಿ | ಡಾ.ರಾಜ್ ಕುಮಾರ್ ಅವರ 97ನೇ ಜನ್ಮದಿನಾಚರಣೆ

Update: 2025-04-24 17:11 IST
Photo of Program
  • whatsapp icon

ಯಾದಗಿರಿ : ವರನಟ ಡಾ.ರಾಜ್ ಕುಮಾರ್ ಅವರಂತೆ ಆದರ್ಶಗುಣ ಹಾಗೂ ಅಭಿನಯ ಚಾತುರ್ಯವನ್ನು ಇಂದಿನ ಯುವಜನಾಂಗ ಬೆಳೆಸಿಕೊಳ್ಳುವಂತೆ ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರು ಡಾ.ಸುಭಾಶ್ಚಂದ್ರ ಕೌಲಗಿ ಅವರು ಹೇಳಿದರು.

ನಗರದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಡಾ.ರಾಜ್ ಕುಮಾರ್ ಜಯಂತ್ಯೋತ್ಸವ ಸಮಿತಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ.ರಾಜ್ ಕುಮಾರ್ ಅವರ 97 ನೇ ಜನ್ಮದಿನಾಚರಣೆ ಮತ್ತು ಡಾ.ರಾಜ್ ಕುಮಾರ್ ಅವರ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಡಾ.ರಾಜ್ ಕುಮಾರ್ ಮೇರು ವ್ಯಕ್ತಿತ್ವದ ಖ್ಯಾತ ನಟ. ಸಮುದ್ರಕ್ಕೆ ಸಮುದ್ರ ಸಾಟಿ, ಗಗನಕ್ಕೆ ಗಗನವೇ ಸಾಟಿ. ಅದೇ ರೀತಿ ಡಾ.ರಾಜ್ ಕುಮಾರ್ ಅವರಿಗೆ ಡಾ.ರಾಜ್ ಅವರೇ ಸಾಟಿ ಎಂದ ಅವರು, ಸರಳ ವ್ಯಕ್ತಿತ್ವ, ಕನ್ನಡದ ಅಪಾರ ಪಾಂಡಿತ್ಯದ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರು.

ಯುವಜನ ಸೇವಾ ಕ್ರೀಡಾ ಇಲಾಖೆಯ ಅಧಿಕಾರಿಗಳಾದ ಡಾ.ರಾಜು ಬಾವಿಹಳ್ಳಿ ಅವರು ಮಾತನಾಡಿ, ಡಾ.ರಾಜ್ ಕುಮಾರ್ ಅವರ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯ, ಸಾಮಾಜಿಕ ಕಳಕಳಿಯ ಚಲನಚಿತ್ರಗಳು ಜನರನ್ನು ಪ್ರಭಾವಿತಗೊಳಿಸಿದ್ದವು. ಕನ್ನಡಾಭಿಮಾನಿಯಾಗಿ, ಕನ್ನಡ ಭಾಷೆ ಉತ್ತುಂಗಕ್ಕೇರಿಸಿದರು. ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಂತಿದ್ದ ಡಾ.ರಾಜ್ ಕುಮಾರ್ ಸಾತ್ವಿಕ ಜೀವನದ ಮೂಲಕ ಪ್ರಭಾವ ಬೀರಿದರು ಎಂದು ಹೇಳಿದರು.

ಜಿ-ಕನ್ನಡ ಸಾ.ರೆ.ಗ.ಮ.ಪ ದಲ್ಲಿ ಭಾಗವಹಿಸಿದ್ದ, ಶಹಾಪುರದ ಗಾಯಕ ಗಂಗಾಧರ ಹೊಟ್ಟಿ, ಬಾಲಕಾರ್ಮಿಕ ಇಲಾಖೆಯ ರಿಯಾಝ್‌ ಪಟೇಲ್, ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿ ರಾಜು ಬಾವಿ ಹಳ್ಳಿ ಮತ್ತು ಶಿಕ್ಷಕ ಗುರುಪ್ರಸಾದ್ ವೈದ್ಯ ಅವರು ಡಾ.ರಾಜ್ ಕುಮಾರ್ ಅವರ ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮವನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಮಾಲಿಪಾಟೀಲ್ ಉದ್ಘಾಟಿಸಿದರು.

ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಯ್ಯ ಗುಂಡಗುರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರಣ್ಣಗೌಡ, ತಹಶೀಲ್ದಾರ್ ಸುರೇಶ್ ಅಂಕಲಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಸುಲೈಮಾನ್ ನದಾಫ್‌ ಸ್ವಾಗತಿಸಿದರು. ಶಿಕ್ಷಕರಾದ ಗುರುಪ್ರಸಾದ್ ವೈದ್ಯ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News