ಯಾದಗಿರಿ | ಮಳೆಗೆ ಹಾನಿಯಾದ ರೈತರ ಬೆಳೆಗೆ ಪರಿಹಾರ ನೀಡಲು ನಿಂಗಪ್ಪ ನಾಯಕ ಒತ್ತಾಯ

ಸುರಪುರ : ಕಳೆದ ಕೆಲ ದಿನಗಳ ಹಿಂದೆ ಅಕಾಲಿಕವಾಗಿ ಸುರಿದ ಮಳೆ ಹಾಗೂ ಬಿರುಗಾಳಿಗೆ ರೈತರು ಬೆಳೆದ ಬೆಳೆಗಳು ಹಾನಿಯಾಗಿದ್ದು, ರೈತರಿಗೆ ಪರಿಹಾರ ನೀಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ನಿಂಗಪ್ಪ ನಾಯಕ ಬಿಜಾಸಪುರ ಒತ್ತಾಯಿಸಿದರು.
ನಗರದ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಬಿಜಾಸಪುರ, ಕೃಷ್ಣಾಪುರ, ದೇವಿಕೇರಾ, ರತ್ತಾಳ,ಲಕ್ಷ್ಮೀಪುರ, ಸತ್ಯಂಪೇಟೆ ಸೇರಿದಂತೆ ಅನೇಕ ಗ್ರಾಮಗಳ ರೈತರು ಬೆಳೆದ ಭತ್ತ, ಮೆಣಸಿನಕಾಯಿ,ಪಪ್ಪಾಯ ಸೇರಿದಂತೆ ಹಲವು ಬೆಳೆಗಳು ಹಾನಿಯಾಗಿ ರೈತರು ಲಕ್ಷಾಂತರ ರೂಪಾಯಿ ನಷ್ಟಕ್ಕೊಳಗಾಗಿದ್ದಾರೆ. ಸಾಲ ಮಾಡಿ ಬೆಳೆ ಬೆಳೆದಿದ್ದ ರೈತನಿಗೆ ದಿಕ್ಕು ತೋಚದಂತಾಗಿದೆ. ಕೂಡಲೇ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ವರದಿ ತಯಾರಿಸಿ ರೈತರಿಗೆ ಪರಿಹಾರಕ್ಕೆ ಸರಕಾರಕ್ಕೆ ವರದಿ ಸಲ್ಲಿಸುವಂತೆ ತಿಳಿಸಿದರು.
ಅಲ್ಲದೆ ರೈತರಿಗೆ ಪರಿಹಾರ ನೀಡುವುದು ವಿಳಂಬವಾದಲ್ಲಿ ನಮ್ಮ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ತಹಶೀಲ್ದಾರ್ ಹುಸೇನಸಾಬ್ ಎ.ಸರಕಾವಸ್‌ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರುಗಳಾದ ಮಹ್ಮದ್ ಹುಸೇನ್, ನಿಂಗಣ್ಣ ಪಾಟೀಲ್ ಸತ್ಯಂಪೇಟೆ,ಮಹ್ಮದ್ ಆಸಿಫ್, ಮಹ್ಮದ್ ಸವೃರ್, ಮಲ್ಲಪ್ಪ ಶ್ರೀನಿವಾಸಪುರ,ಕೃಷ್ಣ ನಾಯಕ, ನಿಂಗಣ್ಣ ದೊಡ್ಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.