ಯಾದಗಿರಿ | ಗಾಳಿ-ಮಳೆಯಿಂದ ಪಪ್ಪಾಯಿ ಬೆಳೆ ಹಾನಿ

ಸುರಪುರ : ತಾಲೂಕಿನ ಕೃಷ್ಣಾಪುರದಲ್ಲಿ ಏಕಾಏಕಿಯಾಗಿ ಸುರಿದ ಮಳೆ-ಬಿರುಗಾಳಿಗೆ ಹಲವಾರು ಪಪ್ಪಾಯಿ ಗಿಡ ನೆಲಕ್ಕುರುಳಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ.
ಕೃಷ್ಣಾಪುರ ಗ್ರಾಮದ ರೈತರಾದ ಶಾಂತರೆಡ್ಡಿ, ಸಿದ್ರಾಮಪ್ಪ ರೆಡ್ಡಿಯವರಿಗೆ ಸೇರಿದ 5 ಎಕರೆಯಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಪಪ್ಪಾಯಿ ಗಿಡ ನೆಡಲಾಗಿದ್ದು, ಇನ್ನೊಂದು ಎರಡು ವಾರದಲ್ಲಿ ಪಪ್ಪಾಯಿ ಬೆಳೆ ಕೈಗೆ ಬರುವ ಮುಂಚೆಯೇ ಎರಡು ದಿನಗಳ ಹಿಂದೆ ಸುರಿದು ಅಕಾಲಿಕ ಮಳೆ ಗಾಳಿಗೆ 3 ಎಕರೆ 20 ಗುಂಟೆ ಹಾಗೂ 1ಎಕರೆ 20 ಗಂಟೆಯಲ್ಲಿ 500 ಕ್ಕೂ ಅಧಿಕ ಪಪ್ಪಾಯಿ ಗಿಡಗಳು ನೆಲಕ್ಕುರುಳಿ ಸುಮಾರು 7 ಲಕ್ಷ ರೂ. ಹಾನಿಯಾಗಿದೆ.
ತೋಟಕ್ಕೆ ಗ್ರಾಮ ಲೆಕ್ಕಿಗರು, ತೋಟಗಾರಿಕೆ ಅಧಿಕಾರಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ನೊಂದ ರೈತ ಶಾಂತರೆಡ್ಡಿ ಅವರು ಕೈಗೆ ಬಂದು ತುತ್ತು ಬಾಯಿಗೆ ಬಾರದಂತಾಗಿದೆ, ಈಗಾಗಲೇ ಸಾಲ ಸೂಲ ಮಾಡಿಕೊಂಡಿದ್ದೇನೆ ಸರ್ಕಾರ ದಿಂದ ಪರಿಹಾರ ಕೊಡಿಸಬೇಕೆಂದು ತಮ್ಮ ಅಳಲನ್ನು ತೋಡಿಕೊಂಡರು. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ಮಾಡಿದ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸುತ್ತೇವೆ ಎಂದಿದ್ದಾರೆ ಎಂದು ರೈತ ಶಾಂತರೆಡ್ಡಿ ತಿಳಿಸಿದ್ದಾರೆ.