ಯಾದಗಿರಿ | ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ

ಯಾದಗಿರಿ : ಕೇಂದ್ರ ಸರಕಾರ ವಕ್ಫ್ ಕಾಯ್ದೆ ತಿದ್ದುಪಡಿ ಮಾಡಿ ಮುಸ್ಲಿಂ ಸಮುದಾಯವನ್ನು ಅಭಿವೃದ್ಧಿಯಿಂದ ವಂಚಿತರನ್ನಾಗಿ ಮಾಡಲು ಮುಂದಾಗಿದೆ ಎಂದು ವಿರೋಧಿಸಿ ಮುಸ್ಲಿಂ ಸಮುದಾಯದ ಜಂಟಿ ಕ್ರಿಯಾ ಸಮಿತಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಂಟಿ ಕ್ರಿಯಾ ಸಮಿತಿ ಕಾರ್ಯಾಧ್ಯಕ್ಷ ವಹೀದ ಮೀಯಾ ಅವರು, ಈ ಮಸೂದೆ ಮುಸ್ಲಿಂ ಸಮುದಾಯದ ಆಸ್ತಿಗಳನ್ನು ಕಬಳಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಾಡಿರುವ ಕುತಂತ್ರದ ಕಾಯ್ದೆಯಾಗಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆ ತಿದ್ದುಪಡಿ ಮಾಡಿ ಹೊಸ ತಿದ್ದುಪಡಿ ಮಸೂದೆ-2025 ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಬಹುಮತ ಇರುವುದರಿಂದ ಕಾಯಿದೆ ಪಾಸಾಗಿದೆ. ಮುಂದುವರೆದು ಮಾನ್ಯ ರಾಷ್ಟ್ರಪತಿಗಳು ಬಿಲ್ ನ್ನು ಅಂಗೀಕರಿಸಿದ್ದಾರೆ. ಈ ಶಾಸನವು ಮುಸ್ಲಿಂ ಸಮುದಾಯದ ವಕ್ಫ್ ಆಸ್ತಿಗಳನ್ನು ಕಬಳಿಸಲು ಮಾಡಿರುವ ಕುತಂತ್ರದ ಕಾಯಿದೆಯಾಗಿದೆ ಎಂದು ಹೇಳಿದರು.
ಕೂಡಲೇ ವಕ್ಫ್ ತಿದ್ದುಪಡಿ ಮಸೂದೆಯನ್ನು ಹಿಂಪಡೆದು ಮುಸ್ಲಿಂ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಜಿಲಾನಿಸಾಬ್ ಅಪಘಾನ್, ಅಲಹಜ್ ಗುಲಾಮ ಮಹಿಬೂಬಸಾಬ, ಎಸ್.ಮುಪ್ತಿ ಮುನೀರ ಅಹಮದಸಾಬ್, ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷರಾದ ಶೇಖ್ ಜಹೀರುದ್ದೀನ್, ಸ್ವಾಲೆ ಅಲ್ ಹಾಜರಿ, ಮನಸೂರ ಅಪಘಾನ, ಇರ್ಫಾನ್ ಬಾದಲ್, ಡಾ.ರಫೀಕ್ ಸೌದಾಗರ, ಜಿ.ಹಫೀಜ್ ಪಟೇಲ್, ಖಾಜಿ ಇಂತಿಯಾಜುದ್ದೀನ್, ಅಬ್ದುಲ್ ರಜಾಕ್ ಸದ್ದಾಂ ಹುಸೇನ್, ಸೇರಿದಂತೆ ಅನೇಕ ಸಮಾಜದ ಮುಖಂಡರು ಮತ್ತು ಯುವಕರು ಭಾಗವಹಿಸಿದರು.