ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಯಮುನಾ ನದಿ ಸ್ವಚ್ಛತೆ ಕಾರ್ಯ ಆರಂಭ

Update: 2025-02-17 07:45 IST
ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಯಮುನಾ ನದಿ ಸ್ವಚ್ಛತೆ ಕಾರ್ಯ  ಆರಂಭ

PC: x.com/ndtv

  • whatsapp icon

ಹೊಸದಿಲ್ಲಿ: ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಯಮುನಾ ನದಿ ಸ್ವಚ್ಛತೆ ಕಾರ್ಯ ರಾಷ್ಟ್ರರಾಜಧಾನಿಯಲ್ಲಿ ಚಾಲನೆ ಪಡೆದಿದೆ. ಭಾನುವಾರ ಟ್ರ್ಯಾಷ್ ಸ್ಕಿಮ್ಮರ್ ಗಳು, ವೀಡ್ ಹಾರ್ವೆಸ್ಟರ್ ಗಳು ಮತ್ತು ಡ್ರೆಡ್ಜ್ ಯುಟಿಲಿಟಿ ಘಟಕಗಳನ್ನು ಸ್ವಚ್ಛತಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಯಮುನೆಯ ಸ್ವಚ್ಛತೆ ಪ್ರಮುಖ ಚುನಾವಣಾ ವಿಚಾರವಾಗಿತ್ತು.

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಮತ್ತು ರಾಷ್ಟ್ರ ರಾಜಧಾನಿಯ ಮುಖ್ಯ ಕಾರ್ಯದರ್ಶಿ ನಡುವಿನ ಸಭೆಯ ಬಳಿಕ ತಕ್ಷಣ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಳ್ಳಲು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಯಮುನಾ ನದಿಯ ಮಾಲಿನ್ಯ ಸಮಸ್ಯೆಯನ್ನು ನಿಭಾಯಿಸಲು ನಾಲ್ಕು ಹಂತದ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ಹೇಳಿಕೆ ನೀಡಿದೆ.

"ಆರಂಭದಲ್ಲಿ ಯಮುನಾ ನದಿ ಹರಿವಿನಿಂದ ಕಸ, ತ್ಯಾಜ್ಯಗಳು ಮತ್ತು ಹೂಳನ್ನು ತೆಗೆಯಲಾಗುತ್ತದೆ. ಜತೆಜತೆಗೆ ನಜಾಫ್ ಗಡ ಚರಂಡಿ ಹಾಗೂ ಪೂರಕ ಚರಂಡಿಗಳು ಮತ್ತು ಎಲ್ಲ ಪ್ರಮುಖ ಚರಂಡಿಗಳ ಸ್ವಚ್ಛತಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತದೆ" ಎಂದು ವಿವರಿಸಲಾಗಿದೆ.

ಇದೇ ವೇಳೆಗೆ ಒಳಚರಂಡಿ ಸಂಸ್ಕರಣಾ ಘಟಕಗಳ ಮೇಲೆ ಪ್ರತಿ ದಿನ ನಿಗಾ ಇರಿಸುವ ಮೂಲಕ ಅವುಗಳ ಸಾಮರ್ಥ್ಯ ಮತ್ತು ವಾಸ್ತವ ಸಂಸ್ಕರಣೆ ಬಗ್ಗೆ ಗಮನ ಹರಿಸಲಾಗುವುದು.ಹೊಸ ಎಸ್ ಟಿಪಿಗಳು/ ಡಿಎಸ್ ಟಿಪಿಗಳ ನಿರ್ಮಾಣಕ್ಕೆ ಕಾಲಮಿತಿಯ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ಈ ಮೂಲಕ ಬಾಕಿ ಇರುವ 400 ಎಂಜಿಡಿ ಒಳಚರಂಡಿ ನೀರನ್ನು ಸಂಸ್ಕರಿಸಲು ಕ್ರಮ ಕೈಗೊಳ್ಳಲಾಗವುದು ಎಂದು ವಿವರಿಸಲಾಗಿದೆ.

ನದಿ ಸ್ವಚ್ಛತೆಗೆ ಮೂರು ವರ್ಷದ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ಇದಕ್ಕೆ ಎಲ್ಲ ಇಲಾಖೆಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ನಡುವೆ ಸುಲಲಿತ ಸಮನ್ವಯದ ಅಗತ್ಯತೆಯನ್ನು ಒತ್ತಿ ಹೇಳಲಾಗಿದೆ. ದೆಹಲಿ ಜಲ ಮಂಡಳಿ, ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆ, ದೆಹಲಿ ಮಹಾನಗರ ಪಾಲಿಕೆ, ಪರಿಸರ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಸಮನ್ವಯದ ಅಗತ್ಯತೆಯನ್ನು ಪ್ರತಿಪಾದಿಸಲಾಗಿದೆ.

ದೆಹಲಿಯ ಹೆಗ್ಗುರುತು ಎನಿಸಿದ ಯಮುನೆಯ ಸ್ವಚ್ಛತೆಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಭರವಸೆ ನೀಡಿದ್ದರು.

ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್‌ ಮಾಡಿ ►https://whatsapp.com/channel/0029VaA8ju86LwHn9OQpEq28

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News