ಮಣಿಪುರದ ನರಮೇಧ: ಪರಿಹಾರ ಹೇಗೆ? ಪಾಠಗಳೇನು?
ಮಣಿಪುರದಲ್ಲಿ ನಡೆಯುತ್ತಿರುವುದು ಹಿಂದುತ್ವದ ಅರ್ಥಾತ್ ಭಾರತೀಯ ಫ್ಯಾಶಿಸಂನ ಕ್ರೌರ್ಯದ ಮತ್ತೊಂದು ಹಂತದ ಪ್ರಯೋಗ. ಇಲ್ಲಿ ಅತ್ಯಾಚಾರವಾಗುತ್ತಿರುವುದು, ಕೊಲೆಯಾಗುತ್ತಿರುವುದು ಕುಕಿಗಳಲ್ಲ. ಭಾರತದ ಕನಸು.
ಹೀಗಾಗಿ ಇದು ಕೇವಲ ಮಹಿಳೆಯರಿಬ್ಬರ ಮೇಲೆ ನಡೆದ ಅಮಾನವೀಯ ದೌರ್ಜನ್ಯಗಳ ವಿಷಯವಲ್ಲ ಅಥವಾ ಅದಕ್ಕಾಗಿ ಕಂಬನಿ ಸುರಿಸುವುದರಿಂದ, ಅಥವಾ ಉಗ್ರವಾಗಿ ಖಂಡಿಸುವುದರಿಂದ ಮಾತ್ರ ಪರಿಹಾರವಾಗುವ ಸಮಸ್ಯೆಯೂ ಅಲ್ಲ.
ಅಲ್ಲಿ ಸರಕಾರದ ಬೆಂಬಲದೊಂದಿಗೆ ನಡೆಯುವ ದೌರ್ಜನ್ಯ, ಇಲ್ಲಿ ಅದನ್ನು ಸುಳ್ಳು ಪೊಳ್ಳುಗಳನ್ನು ಹೇಳುತ್ತಾ ಬಲಿಪಶುಗಳನ್ನೇ ದುರುಳರನ್ನಾಗಿ ಚಿತ್ರಿಸುವ ಅಪಪ್ರಚಾರಗಳೆರಡು ಒಂದೇ ವಿದ್ಯಮಾನದ ವಿವಿಧ ಪ್ರಕ್ರಿಯೆಗಳು. ಹೀಗಾಗಿ ಅದು ದೂರದ ಮಣಿಪುರದಲ್ಲಿ ಮಾತ್ರ ನಡೆಯುತ್ತಿರುವ ವಿದ್ಯಮಾನ ಮಾತ್ರವಲ್ಲ.
ಹೀಗಾಗಿ ಭಾರತವನ್ನು ಉಳಿಸಿಕೊಳ್ಳಬೇಕೆಂದರೆ ಸಂತ್ರಸ್ತ ಕುಕಿಗಳಿಗಾಗಿ ಕಂಬನಿ ಮಿಡಿಯುತ್ತಲೇ, ಪಾಶವೀಕರಣ ಗೊಳ್ಳುತ್ತಿರುವ ಮೈತೈ ಸಮುದಾಯದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಲೇ ಈ ಎಲ್ಲಾ ಸಮಸ್ಯೆಗಳ ಬೇರಿನಲ್ಲಿರುವ ಐತಿಹಾಸಿಕ ಅಸಮಾನತೆಯನ್ನು, ತಾರತಮ್ಯವನ್ನು ನಿವಾರಿಸಲು ಸಮಬಾಳು ಸಮಪಾಲಿನ ರಾಜಕಾರಣವನ್ನು, ಸಾಮಾಜಿಕ ನ್ಯಾಯದ ಮೌಲ್ಯವನ್ನು ಬೆರೂರಿಸುವ ನಿರಂತರ ಪ್ರಯತ್ನವನ್ನು ಮಾಡಬೇಕಿದೆ.
ಮೊದಲು
1) ಮಣಿಪುರದಲ್ಲಿ ಶಾಂತಿ ನೆಲಸಬೇಕಿದೆ.
2) ಇಡೀ ಮನುಷ್ಯಕುಲವೇ ನಾಚುವಂತಹ ಅಪರಾಧ ಎಸಗಿದ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕಿದೆ.
3) ಸರಕಾರವೇ ಶಸ್ತ್ರಾಸ್ತ್ರಕೊಟ್ಟು ಬೆಳೆಸಿರುವ ಮೈತೈ ಲೀಪುನ್ ಮತ್ತು ಆರಂಭೈ ತೆಂಗೊಲ್ಗಳನ್ನು ನಿಶಸ್ತ್ರೀಕರಿಸಬೇಕಿದೆ. ನಿಯಂತ್ರಿಸಬೇಕಿದೆ.
4) ಎಲ್ಲಕ್ಕಿಂತ ಮೊದಲು ಮಣಿಪುರದ ಮುಖ್ಯಮಂತ್ರಿಯಂತೆ ವರ್ತಿಸದೆ, ಹಿಂದೂ ಮೈತೈಗಳ ಹಾಗೂ ಆರೆಸ್ಸೆಸ್ನ ಸಶಸ್ತ್ರ ಪ್ರಚಾರಕನಂತೆ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಬಿರೇನ್ ಸಿಂಗ್ ಮೊದಲು ರಾಜೀನಾಮೆ ಕೊಡಬೇಕಿದೆ. ಅದಾಗದೆ ಮಣಿಪುರದಲ್ಲಿ ಶಾಂತಿ ಸ್ಥಾಪನೆ ಸಾಧ್ಯವೇ ಇಲ್ಲ.
5) ತಾತ್ಕಾಲಿಕವಾಗಿಯೇ ಆದರೂ ಕಣಿವೆ ಮತ್ತು ಗುಡ್ಡಗಾಡು ಪ್ರದೇಶಗಳ ಆಡಳಿತಕ್ಕೆ ಪ್ರತ್ಯೇಕ-ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲೇ ಬೇಕಿದೆ.
6) ಮೈತೈ ಮತ್ತು ಕುಕಿ-ನಾಗಾ ಸಮುದಾಯಗಳ ನಡುವೆ ಏರ್ಪಟ್ಟಿರುವ ಅಧಿಕಾರ, ಸಂಪತ್ತು ಮತ್ತು ಸಂಪನ್ಮೂಲ ಅಸಮತೋಲನಗಳನ್ನು ನಿವಾರಿಸಲು ಸಾಮಾಜಿಕ ನ್ಯಾಯದ ತತ್ವದಡಿಯಲ್ಲಿ ಸಮಗ್ರ ಅಧಿಕಾರ-ಸಂಪತ್ತು ಹಂಚಿಕೆಯ ವ್ಯವಸ್ಥೆ ಮತ್ತು ಯೋಜನೆಗಳನ್ನು ರೂಪಿಸಬೇಕಿದೆ.
7) ಭಾರತವು ಮಣಿಪುರವನ್ನು ಒಳಗೊಂಡಂತೆ ಇಡೀ ಈಶಾನ್ಯ ಭಾರತವನ್ನು ಒಂದು ಆಂತರಿಕ ವಸಾಹತುವನ್ನಾಗಿ ನೋಡುವ ಸೈನಿಕ ದೃಷ್ಟಿಕೋನವನ್ನು ತೊರೆಯಬೇಕಿದೆ.
8) ಹಾಗೆಯೇ ಈಶಾನ್ಯ ಭಾರತವನ್ನು ಭಾರತದ ಕಾರ್ಪೊರೇಟ್ ಬಂಡವಾಳಶಾಹಿಗಳು ತಮ್ಮ ಪೂರ್ವ ಏಶ್ಯ ವಿಸ್ತರಣಾ ಯೋಜನೆಯ ಭಾಗವಾಗಿ ಬಳಸಿಕೊಳ್ಳುವ ಸರಕಾಗಿಸದಂತೆ ಅಲ್ಲಿನ ಸಂಪನ್ಮೂಲಗಳ ಮೇಲೆ ಸ್ಥಳೀಯ ಜನರ ಸಂಪೂರ್ಣ ಏಕಸ್ವಾಮ್ಯವನ್ನು ಖಾತರಿಗೊಳಿಸಬೇಕಿದೆ.
9) ಆರನೇ ಶೆಡ್ಯೊಲನ್ನು ಮಣಿಪುರಕ್ಕೆ ವಿಸ್ತರಿಸಬೇಕು ಮಾತ್ರವಲ್ಲದೆ ನಾಮಕಾವಸ್ಥೆಯಾಗಿರುವ ಇಂತಹ ಸ್ವಾಯತ್ತ ಮಂಡಳಿಗಳನ್ನು ಶಾಸನಾತ್ಮಕ ಪರಮಾಧಿಕಾರವಿರುವ ನೈಜ ಪ್ರಾತಿನಿಧಿಕ ಹಾಗೂ ಅಧಿಕಾರಯುತ ಸಂಸ್ಥೆಗಳನ್ನಾಗಿ ಪರಿವರ್ತಿಸಬೇಕು.
10) ಈಶಾನ್ಯ ಭಾರತವನ್ನು ಹಿಂದೂ ಭಾರತದ ಸಾಮಂತ ರಾಜ್ಯಗಳನ್ನಾಗಿ ಮಾಡುವ ಸಂಘಪರಿವಾರ ಮತ್ತು ಬಿಜೆಪಿಯ ದ್ವೇಷಾಧಾರಿತ ರಾಜಕಾರಣವನ್ನು ಸೋಲಿಸಬೇಕಿದೆ. ಅಲ್ಲಿನ ಬುಡಕಟ್ಟುಗಳ ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ವಾಯತ್ತತೆಯನ್ನು ಗೌರವಿಸಬೇಕಿದೆ.
11) AFSPA ಅನ್ನೂ ಒಳಗೊಂಡಂತೆ ಎಲ್ಲಾ ಕರಾಳ ಕಾನೂನುಗಳನ್ನು ರದ್ದುಗೊಳಿಸಬೇಕು.
12) ಅಫೀಮು ಬೆಳೆಗೆ ಪರ್ಯಾಯವಾದ ಜೀವನೋಪಾಯವನ್ನು ಕಲ್ಪಿಸಬೇಕು. War On Drugs ಮಾಡುವ ಮೊದಲು War On Poverty ಯಶಸ್ವಿಯಾಗಿ ಜಾರಿಯಾಗಬೇಕು.
13) ಈಶಾನ್ಯ ರಾಷ್ಟ್ರೀಯತೆಗಳನ್ನು ದಮನದ ಮೂಲಕ ಭಾರತ ಒಕ್ಕೂಟದೊಳಗೆ ಹಿಡಿದಿಡುವ ಅಥವಾ ಸಾಂಸ್ಕೃತಿಕ ಯಾಜಮಾನ್ಯದ ಮೂಲಕ ಹಿಂದುವೀಕರಿಸುವ ಎಲ್ಲಾ ಪ್ರಯತ್ನಗಳು ನಿಲ್ಲಬೇಕು. ಸ್ಥಳೀಯ ಜನರ ಆಯ್ಕೆಗಳನ್ನು ಗೌರವಿಸುವ ಪ್ರಜಾತಾಂತ್ರಿಕ ಸಂಸ್ಕೃತಿಯನ್ನು ಭಾರತವು ಕಲಿಯಬೇಕು..
ಆದರೆ ಇವೆಲ್ಲಾ ಆಗುವ ಬಗೆ ಹೇಗೆ?
ನರಮೇಧ ರಾಜಕಾರಣ ನಿಲ್ಲದೆ ಪ್ರಜಾತಂತ್ರ ಸಾಧ್ಯವೇ?
ಇಂದು ಮಣಿಪುರದಲ್ಲಿ ನಡೆಯುತ್ತಿರುವುದೆಲ್ಲಾ ಸಂಘಿ ಫ್ಯಾಶಿಸ್ಟರು ೨೦೦೨ರಲ್ಲಿ ಗುಜರಾತ್ನಲ್ಲಿ ಪ್ರಯೋಗಿಸಿ ಖಚಿತ ಮಾಡಿಕೊಂಡ ನರಮೇಧದ ಪ್ರಯೋಗಗಳು. ಅದರ ಉನ್ನತ ಹಂತದ ನರಮೇಧದ ಪ್ರಯೋಗ ಶಾಲೆ ಮಣಿಪುರ. ಇಲ್ಲಿ ಯಶಸ್ವಿಯಾದದ್ದು ಮುಂದಕ್ಕೆ ಭಾರತದಲ್ಲಿ.
ಈ ನರಮೇಧ ರಾಜಕಾರಣಕ್ಕೆ ಬಲಿಯಾದ ಸಮಾಜ ಪಾಶವೀಕರಣಗೊಳ್ಳುತ್ತದೆ. ಮನುಷ್ಯರು ಮೃಗವಾಗುತ್ತಾರೆ. ಸಮಾಜ ಸದಾ ಬೇಟೆಗೆ ಹೊಂಚುಹಾಕುವ ನರಹಂತಕವಾಗುತ್ತದೆ. ಭಾರತದಲ್ಲಿ ಸಂಘಪರಿವಾರ ಮೋದಿ-ಭಾಗವತ್ ನೇತೃತ್ವದಲ್ಲಿ ಹಾಗೂ ಅಂಬಾನಿ-ಅದಾನಿ ಬೆಂಬಲದೊಂದಿಗೆ ಹರಿಬಿಟ್ಟಿರುವ ಈ ರಾಜಕಾರಣ ದೇಶದ ಪ್ರಜಾತಂತ್ರ, ಸಂವಿಧಾನ, ಮನುಷ್ಯರ ಸಹಜ ಮಾನವೀಯ ಅನುಕಂಪ ಎಲ್ಲವನ್ನೂ ಬಲಿತೆಗೆದುಕೊಂಡು ಭಾರತವನ್ನು ನರಮೇಧದ ಹೊಸ್ತಿಲಿಗೆ ತಂದು ನಿಲ್ಲಿಸಿದೆ. ಭೀಕರ ಅಂತರ್ಯುದ್ಧ ಮಣಿಪುರದಲ್ಲಿ ಸ್ಫೋಟಗೊಂಡು ಮನುಷ್ಯರು ಮೃಗವಾಗುತ್ತಾ ಸಹಮನುಷ್ಯರ ಮೇಲೆ ಊಹಿಸಲಸಾಧ್ಯವಾಗದಷ್ಟು ಪಾತಕಗಳನ್ನು ಎಸಗುತ್ತಿದ್ದಾರೆ.
ಸಾಮಾನ್ಯ ಮನುಷ್ಯರು ಕೂಡ ಹೀಗೆ ಬರ್ಬರ ನರಮೇಧ ನಡೆಸುವಷ್ಟು ದುಷ್ಟರಾಗಿ ಹೇಗೆ ಬದಲಾದರು? ಹೇಗೆ ಬದಲಾಗಬಲ್ಲರು?
ಭಾರತದ ಇಂದಿನ ಪರಿಸ್ಥಿತಿಯಲ್ಲಿ ಈ ಪ್ರಶ್ನೆಗಳನ್ನು ಅತ್ಯಂತ ತುರ್ತಾಗಿ ಅರ್ಥಮಾಡಿಕೊಳ್ಳಬೇಕಿದೆ. ಕಲಿಯಬೇಕೆಂದವರಿಗೆ ಇತಿಹಾಸದಲ್ಲಿ ಇಂತಹ ಸಂದರ್ಭಗಳನ್ನು ಅರ್ಥಮಾಡಿಕೊಂಡು ತಡೆಗಟ್ಟಲು ಬೇಕಾದ ಹಲವಾರು ಪಾಠಗಳಿವೆ.
ವಿಶ್ವಸಂಸ್ಥೆಯ ಪ್ರಕಾರ ಜಿನೋಸೈಡ್-ನರಮೇಧ ಎಂದರೆ:
‘‘ಒಂದು ರಾಷ್ಟ್ರೀಯ, ಜನಾಂಗೀಯ, ಧಾರ್ಮಿಕ ಅಥವಾ ವರ್ಣೀಯ ಗುಂಪನ್ನು, ಸಂಪೂರ್ಣವಾಗಿ ಅಥವಾ ಪಾಕ್ಷಿಕವಾಗಿ ನಾಶಮಾಡುವ ಉದ್ದೇಶದಿಂದ ಈ ಕೆಳಗಿನ ಯಾವುದೇ ಕ್ರಮಗಳನ್ನು ಎಸಗುವುದನ್ನು ನರಮೇಧದ ಕ್ರಮ- ಜಿನೋಸೈಡಲ್- ಎಂದು ಪರಿಗಣಿಸಲಾಗುವುದು: ಒಂದು ನಿರ್ದಿಷ್ಟ ಗುಂಪಿನ ಸದಸ್ಯರನ್ನು ಕೊಲ್ಲುವುದು; ಆ ಗುಂಪಿನ ಸದಸ್ಯರಿಗೆ ಗಂಭೀರವಾದ ಮಾನಸಿಕ ಅಥವಾ ದೈಹಿಕ ಹಾನಿಗಳನ್ನು ಉಂಟುಮಾಡುವುದು; ಆ ನಿರ್ದಿಷ್ಟ ಗುಂಪಿನ ಭೌತಿಕ ಅಸ್ತಿತ್ವವು ಸಂಪೂರ್ಣವಾಗಿ ಅಥವಾ ಪಾಕ್ಷಿಕವಾಗಿ ನಾಶಮಾಡಬೇಕೆಂಬ ಉದ್ದೇಶದಿಂದಲೇ ದುರ್ಭರ ಜೀವನಸ್ಥಿತಿಗತಿಗಳನ್ನು ಸೃಷ್ಟಿಸುವುದು; ಆ ನಿರ್ದಿಷ್ಟ ಗುಂಪಿನ ಸದಸ್ಯರ ಸಂತಾನ ವೃದ್ಧಿಯಾಗದಂತಹ ಕ್ರಮಗಳನ್ನು ಜಾರಿ ಮಾಡುವುದು ಅಥವಾ ಆ ಗುಂಪಿನ ಮಕ್ಕಳನ್ನು ಮತ್ತೊಂದು ಗುಂಪಿಗೆ ಹಸ್ತಾಂತರಿಸುವುದು’’
ಆದರೆ ಇಂತಹ ಪರಿಸ್ಥಿತಿಯು ರಾತ್ರೋರಾತ್ರಿ ಸೃಷ್ಟಿಯಾಗುವುದಿಲ್ಲ ಮತ್ತು ಇಂತಹ ನರಮೇಧಗಳು ಆಯಾ ದೇಶಗಳ ದುರ್ಬಲ ಮತ್ತು ಅಲ್ಪಸಂಖ್ಯಾತ ವರ್ಗಗಳ ಮೇಲೆ ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ ಹಂತಕ ಪಡೆಗಳು ಬಹುಪಾಲು ಜನರ ಸಮ್ಮತಿಯೊಂದಿಗೆ ಹಾಗೂ ಪ್ರಭುತ್ವದ ಸಕ್ರಿಯ ಅಥವಾ ಪರೋಕ್ಷ ಭಾಗೀದಾರಿಕೆಯೊಂದಿಗೆ ನಡೆಸುತ್ತವೆ.
ಜಗತ್ತಿನಾದ್ಯಂತ ನಡೆಯುತ್ತಿರುವ ಇಂತಹ ನರಮೇಧಗಳ ಬಗ್ಗೆಯೇ ವಿಶೇಷ ಅಧ್ಯಯನ ಮಾಡುತ್ತಿರುವ ಪ್ರೊಫೆಸರ್ ಹೆಲೆನ್ ಫೇನ್ ಈ ಪ್ರಕ್ರಿಯೆಗಳು ಸಾಮಾನ್ಯರನ್ನು ದುಷ್ಟರನ್ನಾಗಿಸುವುದು ಹೀಗೆ:
‘‘ನರಮೇಧಗಳು ಅಥವಾ ಇನ್ನಿತರ ಸಾಮೂಹಿಕ ಹಿಂಸಾಚಾರಗಳು ಇದ್ದಕ್ಕಿದ್ದ ಹಾಗೆಯೋ ಆಯೋಜಿತವಾಗಿಯೋ ಸಂಭವಿಸುವುದಿಲ್ಲ. ಅವು ದ್ವೇಷ ಹಾಗೂ ಭೀತಿಗಳ ಸಾಮಾಜಿಕ ಸಂದರ್ಭವನ್ನು ಹುಟ್ಟಿಸುವ ಪ್ರಕ್ರಿಯೆಯನ್ನು ಅನುಸರಿಸುತ್ತವೆ. ಈ ಭಾವನೆಗಳ ಮೂಲಕ ಜನಮಾನಸದಲ್ಲಿ ಸರ್ವಸಹಜವಾಗಿ ‘ಇತರ’ ಮನುಷ್ಯರನ್ನು ನಮ್ಮ ‘ನೈತಿಕ ಹೊಣೆಗಾರಿಕೆಯ ಲೋಕ’ದಿಂದ ಹೊರಗಿರಿಸುವ ತನಕ ನಡೆಯುತ್ತಲೇ ಇರುತ್ತದೆ’’
(Accounting For Genocide, Helen Fein).
ಈ ಅಧ್ಯಯನವನ್ನೇ ಮುಂದುವರಿಸುತ್ತಾ ಮತ್ತೊಬ್ಬ ವಿದ್ವಾಂಸ ಜೇಮ್ಸ್ ವಾಲರ್ ಅವರು:
‘‘ನರಮೇಧಕ್ಕೆ ಮುನ್ನ ಸಮಾಜ ಮತ್ತು ವ್ಯಕ್ತಿಗಳನ್ನು ಹಲವಾರು ರೀತಿಯಲ್ಲಿ ಬರ್ಬರಗೊಳಿಸಲಾಗಿರುತ್ತದೆ. ಉದಾಹರಣೆಗೆ ತಾವು ನರಮೇಧ ಮಾಡಲಿರುವ ಸಮುದಾಯವನ್ನು ಸತತವಾಗಿ ‘ನಮ್ಮವರಲ್ಲ’ವೆಂದು ಚಿತ್ರಿಸಲಾಗುತ್ತದೆ. ಬಹುಸಂಖ್ಯಾತ ಸಮಾಜಕ್ಕೆ ವಿಕ್ಟಿಂ ಸಮುದಾಯದ ಬಗ್ಗೆ ಇದ್ದ ಭಾವನಾತ್ಮಕ ಸಂಬಂಧಗಳು ಕಡಿತಗೊಳಿಸಿ ಭಾವರಹಿತಗೊಳಿಸಿರಲಾಗುತ್ತದೆ. ಆ ಸಮುದಾಯದ ಜೊತೆಗೆ ಉಳಿದವರ ಸಂವಹನ ಮತ್ತು ಜೊತೆಗೊಳ್ಳುವಿಕೆಗಳು ನಿಧಾನವಾಗಿ ಕಡಿಮೆಯಾಗುವಂತೆ ನೋಡಿಕೊಳ್ಳಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳ ಮೂಲಕ ವಿಕ್ಟಿಂ ಸಮುದಾಯವನ್ನು ‘ಸಾಮಾಜಿಕವಾಗಿ ಸಾಯಿಸಲಾಗುತ್ತದೆ’. ಇದರಿಂದ ಬಹುಸಂಖ್ಯಾತ ಸಮುದಾಯ ವಿಕ್ಟಿಂ ಸಮುದಾಯದ ಬಗ್ಗೆ ನಿರ್ಲಿಪ್ತವಾಗುತ್ತದೆ. ಮಾತ್ರವಲ್ಲದೆ ಕ್ರಮೇಣ ಬಲಿಪಶುವಾಗುವ ಸಮುದಾಯವನ್ನು ತನ್ನ ನೀತಿ ಸೂತ್ರಗಳು, ನಿಯಮಗಳು ಮತ್ತು ನ್ಯಾಯಸಂಹಿತೆಗಳ ವಲಯದಿಂದ ಹೊರದೂಡುತ್ತದೆ. ಈ ಪ್ರಕ್ರಿಯೆಗಳೇ ಆ ಸಮಾಜವು ಬರ್ಬರ ಅನಾಗರಿಕ ನರಮೇಧಗಳನ್ನು ಮತ್ತು ಕ್ರೌರ್ಯಗಳನ್ನು ಸಮರ್ಥಿಸುವಂತೆ ಮಾಡುತ್ತದೆ’’ ಎಂದು ವಿವರಿಸುತ್ತಾರೆ.
(James Waller- Becoming Evil- How Ordinary People Commit Genocide and Mass Killing)
ಹನ ಅರೆಂಡ್ತ್ ಎಂಬ ಯೆಹೂದಿ ಚಿಂತಕಿ ಇದೇ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಯೆಹೂದಿಗಳ ನರಮೇಧಕ್ಕೆ ನಿರ್ಲಿಪ್ತವಾಗಿ ನಾಯಕತ್ವ ಕೊಟ್ಟ ನಾಝಿ ನಾಯಕ ಐಶ್ಮನ್ನ ವಿಚಾರಣೆಯನ್ನು ಹತ್ತಿರದಿಂದ ಅಧ್ಯಯನ ಮಾಡುತ್ತಾರೆ...ಅದನ್ನು ಆಧರಿಸಿ ಅವರು ಬರೆದ ಮಹತ್ವದ ಕೃತಿ banality of evilನಲ್ಲಿ ಹೀಗೆ ಹೇಳುತ್ತಾರೆ:
‘‘ಐಶ್ಮನ್ನಂತಹವರು ಕಾಡುವುದೇಕೆಂದರೆ ಅವನಂತಹವರು ಅಲ್ಲಿ ಸಾವಿರಾರು ಮಂದಿಯಿದ್ದಾರೆ ಮತ್ತು ಅವರಲ್ಲಿ ಬಹಳಷ್ಟು ಜನ ವಿಕೃತ ಮನಸ್ಸುಳ್ಳವರೂ ಅಲ್ಲ ಅಥವಾ ಹಿಂಸಾನಂದಿಗಳೂ ಅಲ್ಲ. ಅಂಥ ಬಹಳಷ್ಟು ಜನ ಈಗಲೂ- ಆಗಲೂ ಭೀತಿಹುಟ್ಟಿಸುವಷ್ಟು ನಾರ್ಮಲ್ ಸ್ಥಿತಿಯಲ್ಲೇ ಇದ್ದಾರೆ. ನಮ್ಮ ಕಾನೂನು ಸಂಸ್ಥೆಗಳ ದೃಷ್ಟಿಕೋನದಲ್ಲಿ ಹಾಗೂ ನಮ್ಮ ನೈತಿಕ ಮಾನದಂಡಗಳ ತೀರ್ಮಾನಗಳಲ್ಲಿ ನೋಡುವುದಾದರೆ ಅವರು ನಡೆಸಿದ ಎಲ್ಲಾ ಅತ್ಯಾಚಾರಗಳ ಒಟ್ಟು ಭೀಕರತೆಗಿಂತಲೂ ಈ ನಾರ್ಮಾಲಿಟಿಯು (ಸಾಮಾನ್ಯ ಸ್ಥಿತಿ) ಅತ್ಯಂತ ಭಯಾನಕವಾದದ್ದು’’
(Hannah Arendt, Eichmann in Jerusalem: A Report on the Banality of Evil)
ಹಾಗೆಯೇ, ರವಾಂಡಾ ದೇಶದಲ್ಲಿ ೧೯೯೪ರಲ್ಲಿ ನಡೆದ ಟುಟ್ಸಿ ಜನಾಂಗದ ನರಮೇಧವನ್ನು ವರದಿ ಮಾಡಿದ ಬಿಬಿಸಿ ವರದಿಗಾರ ಫರ್ಗಲ್ ಕೇನ್ ಆ ನೂರು ದಿನಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನ ಹತ್ಯೆಯಾಗುವ ಮುಂಚೆ ನಡೆದ ಪ್ರಕ್ರಿಯೆಗಳನ್ನು ಹೀಗೆ ವಿವರಿಸುತ್ತಾರೆ:
‘‘... ಈ ರಕ್ತಸಿಕ್ತ ದೇಶದಲ್ಲಿ ಕೆಲ ವ್ಯಕ್ತಿಗಳಂತೂ ನಿಜಕ್ಕೂ ವಿಕೃತ ಮನಸ್ಸುಳ್ಳವರು. ಚಿಂದಿಯುಟ್ಟ ಬಡ ಜನರನ್ನೂ ಹಾಗೂ ಅನಕ್ಷರಸ್ಥ ರೈತಾಪಿ ಜನರನ್ನೂ ಟುಟ್ಸಿಗಳ ವಿರುದ್ಧ ದ್ವೇಶದಿಂದ ಕುದಿಯುವಂತೆ ಮಾಡುವುದು ಸುಲಭವೇ ಆಗಿತ್ತು. ಆದರೆ ನಾನು ಆ ದೇಶದಲ್ಲಿ ಭೇಟಿಯಾದ ಅತ್ಯಂತ ಕುತಂತ್ರಿ ಹಾಗೂ ಕ್ರೂರ ಜನರೆಂದರೆ ಆ ದೇಶದ ಸುಶಿಕ್ಷಿತ-ಪ್ರತಿಷ್ಠಿತ ವರ್ಗದ ಗಂಡಸರು ಮತ್ತು ಹೆಂಗಸರು. ಅವರು ಅತ್ಯಂತ ನಾಜೂಕಿನ ಸಂಸ್ಕಾರವಂತರು. ಸಾಸಿವೆಯಷ್ಟು ಲೋಪವಿಲ್ಲದ ಶುದ್ಧ ಫ್ರೆಂಚಿನಲ್ಲಿ ಸಂಭಾಷಣೆ ಮಾಡ ಬಲ್ಲವರು. ಯುದ್ಧದ ಸ್ವರೂಪ ಮತ್ತು ಪ್ರಜಾತಂತ್ರದ ಬಗ್ಗೆ ಕೊನೆಯಿಲ್ಲದ ತಾತ್ವಿಕ ಚರ್ಚೆಗಳನ್ನು ನಡೆಸಬಲ್ಲವರು. ಆದರೆ ಅವರೆಲ್ಲರೂ ತಮ್ಮ ದೇಶದ ಸೈನಿಕರು ಮತ್ತು ರೈತಾಪಿಗಳಂತೆ ತಮ್ಮ ಸಹೋದರ ದೇಶವಾಸಿಗಳ ರಕ್ತಕೂಪದಲ್ಲಿ ಮಿಂದೇಳುತ್ತಿದ್ದರು.
(Fergal Keane, Season of Blood: A Rwandan Journey)
ಹಿಟ್ಲರ್ನ ಜರ್ಮನಿಯಲ್ಲಿ ಬಹುಸಂಖ್ಯಾತ ಜರ್ಮನರು ಲಕ್ಷಾಂತರ ಅಲ್ಪಸಂಖ್ಯಾತ ಯೆಹೂದಿಗಳ ನರಮೇಧವನ್ನು ಸಕ್ರಿಯವಾಗಿ ಸಮ್ಮತಿಸಿದ್ದು; ಇದೀಗ ಇಸ್ರೇಲಿನಲ್ಲಿ ಅಲ್ಪಸಂಖ್ಯಾತ ಮತ್ತು ಅಸಹಾಯಕ ಫೆಲೆಸ್ತೀನಿಯರ ಮೇಲೆ ಯೆಹೂದಿ ಪ್ರಭುತ್ವ ನಡೆಸುತ್ತಿರುವ ವಿಕೇಂದ್ರಿಕೃತ ನರಮೇಧವನ್ನು ಯೆಹೂದಿ ಬಹುಸಂಖ್ಯಾತ ಸಮುದಾಯ ಸಮ್ಮತಿಸುತ್ತಿರುವುದು; ೯೦ರ ದಶಕದಲ್ಲಿ ರವಾಂಡಾ ದೇಶದಲ್ಲಿ ಅಲ್ಲಿನ ಹುಟು ಜನಾಂಗೀಯವಾದಿ ಸರಕಾರದ ಬೆಂಬಲದೊಂದಿಗೆ ನಡೆಸಿದ ಅಲ್ಪಸಂಖ್ಯಾತ ಟುಟ್ಸಿಗಳ ನರಮೇಧವನ್ನು ಬಹುಸಂಖ್ಯಾತ ಹುಟುಗಳು ಉತ್ಸಾಹದಿಂದ ಬೆಂಬಲಿಸಿದ್ದು; ಇಂದು ಅಮೆರಿಕದಲ್ಲಿ ಕರಿಯರ ಮೇಲೆ ಬಿಳಿಯರು ನಡೆಸುತ್ತಿರುವ ಸಶಸ್ತ್ರ ದಾಳಿಗಳನ್ನು ಬಿಳಿ ಅಮೆರಿಕ ಸಮುದಾಯದ ದುರಭಿಮಾನಿ ಜನಾಂಗೀಯವಾದಿಗಳು ಬೆಂಬಲಿಸುತ್ತಿರುವುದು;
ಹಾಗೂ ಭಾರತದಲ್ಲಿ ಪ್ರಧಾನವಾಗಿ ಮುಸ್ಲಿಮರ ಮೇಲೆ ಮತ್ತು ದಲಿತ ಮತ್ತು ಕ್ರಿಶ್ಚಿಯನ್ನರ ಮೇಲೆ ಸಂಘಿ ಫ್ಯಾಶಿಸ್ಟರು, ಕುಕಿಗಳ ಮೇಲೆ ಮೈತೈಗಳು ನಡೆಸುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಭೌತಿಕ ಹತ್ಯಾಕಾಂಡಗಳಿಗೆ ಬಹುಸಂಖ್ಯಾತ ಹಿಂದೂ ಸಮಾಜ ಮೌನ ಸಮ್ಮತಿ ನೀಡುತ್ತಿರುವುದು, ಕ್ರಮೇಣವಾಗಿ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಇದೇ ಬರ್ಬರ ಪ್ರಕ್ರಿಯೆಗಳ ಭಾಗವಾಗಿದೆ.
ಇದರ ಆಳದಲ್ಲಿ ಇರುವುದು ಒಬ್ಬ ಮನುಷ್ಯರಾಗಿ ತಮಗೆ ವರ್ತಿಸುವ ನ್ಯಾಯ-ನೀತಿಗಳನ್ನು ಇತರರಿಗೆ ನಿರಾಕರಿಸುವ ಅಮಾನವೀಯತೆ. ಸಹಜ ಸಂದರ್ಭದಲ್ಲಿ ಧರ್ಮವೆಂದರೆ ನ್ಯಾಯ-ನೀತಿ ಎಂದು ಅಥವಾ ತಮ್ಮಂತೆ ಪರರೆಂಬ ಅಧ್ಯಾತ್ಮದಲ್ಲಿ ಬದುಕುವ ಜನಸಾಮಾನ್ಯರಲ್ಲಿ ರಾಷ್ಟ್ರ, ಧರ್ಮ, ಜನಾಂಗದ ವರ್ಣದ ಹೆಸರಲ್ಲಿ ಮನುಷ್ಯತ್ವವನ್ನು ಕೊಂದು ಹಾಕಿ ‘‘ಅವರು ನಮ್ಮವರಲ್ಲ’’, ‘‘ಮನುಷ್ಯರೆಂದು ಪರಿಗಣಿಸಲು ಅಯೋಗ್ಯರು’’, ‘‘ಕೀಳಾದವರು ಅಥವಾ ದೇಶದ್ರೋಹಿಗಳು’’ ಎಂಬ ಬರ್ಬರತೆಯನ್ನು ಬೆಳೆಸುವ ರಾಜಕಾರಣ.
ಮನುಷ್ಯರು ಮೃಗವಾಗುವ ಮತ್ತು ಸಮಾಜವು ಫ್ಯಾಶಿಸ್ಟ್ ಆಗುವ ಹತ್ತು ಹಂತಗಳು:
ಸಹವಾಸಿಗಳ ಈ ಅನ್ಯೀಕರಣ ಮತ್ತು ಪರಾಯೀಕರಣವು ಕೂಡಾ ಏಕಾಏಕಿ ಸಂಭವಿಸುವುದಿಲ್ಲ.
ನರಮೇಧಗಳ ಬಗ್ಗೆ ನಿರಂತರವಾದ ಅಧ್ಯಯನ ನಡೆಸುತ್ತಿರುವ ಅಮೆರಿಕದ ಪ್ರೊಫೆಸರ್ ಗ್ರೆಗೋರೊ ಸ್ಟಾನ್ಟನ್ ಅವರು ನರಮೇಧದ ಕ್ಲೈಮಾಕ್ಸ್ ತಲುಪುವ ಮುನ್ನ ಸಮಾಜ ಹಾದು ಹೋಗುವ ಹತ್ತು ಹಂತಗಳನ್ನು ಹೀಗೆ ಗುರುತಿಸುತ್ತಾರೆ:
1. Classification: ಅನ್ಯ ಗುಂಪು ಯಾವುದು ಮತ್ತು ಏಕೆ ಎಂಬ ವರ್ಗೀಕರಣ.
2. Symbolisation: ಆ ಗುಂಪಿನ ಚಹರೆಗಳ ಪಟ್ಟೀಕರಣ.
3. Discrimination: ಆ ಗುಂಪಿನ ಸದಸ್ಯರ ಬಗ್ಗೆ ತಾರತಮ್ಯ ಅನುಸರಿಸುವುದು.
4. Dehumanisation: ಆ ಗುಂಪನ್ನು ಅಪಮಾನಿಸುತ್ತಾ ಮಾನವೀಯ ಘನತೆಗಳನ್ನು ನಿರಾಕರಿಸುತ್ತಾ ಅಮಾನವೀಯಗೊಳಿಸುವುದು.
5. Organisation: ಈ ತಾರತಮ್ಯ, ಧೋರಣೆಗಳನ್ನು ವ್ಯವಸ್ಥಿತವಾಗಿ ಸಂಘಟಿಸುವುದು.
6. Polarisation: ಇವುಗಳ ಆಧಾರದ ಮೇಲೆ ನಾವು-ಅವರು ಎಂದು ಸಮಾಜವನ್ನು ಧ್ರುವೀಕರಿಸುವುದು
7. Preparation: ನರಮೇಧಕ್ಕೆ ಬೇಕಿರುವ ವ್ಯವಸ್ಥಿತ ಸಿದ್ಧತೆಗಳನ್ನು ಮಾಡಿಕೊಳ್ಳುವುದು
8. Parsecution: ಆ ಗುಂಪುಗಳನ್ನು ಶಾಸನಾತ್ಮಕವಾಗಿ ಬೇರ್ಪಡಿಸಿ ನಾಗರಿಕ ಹಕ್ಕುಗಳನ್ನು ನಿರಾಕರಿಸುತ್ತಾ ದಮನವನ್ನು ಪ್ರಾರಂಭಿಸುವುದು.
9. Extermination: ಸಾಮೂಹಿಕ ಕಗ್ಗೊಲೆ
10. Denial: ಹತ್ಯಾಕಾಂಡದ ನಿರಾಕರಣೆ, ಸಾಕ್ಷಿ ನಾಶ, ಸಾಕ್ಷಿ ಬೆದರಿಕೆ, ಇವೆಲ್ಲವೂ ಮುಂದಿನ ನರಮೇಧಕ್ಕೆ ತಯಾರಿಯೇ ಆಗಿರುತ್ತದೆ.
ಇವೆಲ್ಲವೂ ಅನುಕ್ರಮ ಹಂತಗಳಾಗಿಯೂ ಕಾಣಿಸಿಕೊಳ್ಳಬಹುದು ಅಥವಾ ಒಂದೇ ಸಮಯದಲ್ಲಿ ಹಲವು ಹಂತಗಳ ಪ್ರಕ್ರಿಯೆಗಳೂ ಕಾಣಿಸಬಹುದು.
ಮೋದಿ ಭಾರತದಲ್ಲಿ ವಿವಿಧ ರಾಜ್ಯಗಳು ಈ ಹತ್ತು ಹಂತಗಳ ವಿವಿಧ ಹಂತಗಳಲ್ಲಿವೆ. ಮಣಿಪುರ ಈ ಹತ್ತು ಹಂತಗಳ ಅಂತಿಮ ಹಂತದಲ್ಲಿದೆ.
ಏಕೆಂದರೆ ಭಾರತದಲ್ಲಿ ಈ ನರಮೇಧಗಳಿಗೆ ಬೇಕಾದ ಸಾಮಾಜಿಕ ಕಂಡಿಷನಿಂಗ್ ನಮ್ಮ ಬ್ರಾಹ್ಮಣೀಯ ಸಾಮಾಜಿಕ ವ್ಯವಸ್ಥೆಯೊಳಗೇ ಇದೆ. ಭಾರತದ ನಾಗರಿಕತೆಯೊಳಗೇ ಇದ್ದ ಈ ಮನುವಾದಿ ಮೇಲರಿಮೆಯ ಹಂತಕ ಮನೋಭಾವಕ್ಕೆ ಹಿಂದೂರಾಷ್ಟ್ರವೆಂಬ ಹಿಂಸಾತ್ಮಕ ಆಧುನಿಕ ರಾಜಕಾರಣ ಇನ್ನಷ್ಟು ಕ್ರೂರ, ಕರಾಳ ಹಾಗೂ ವಿಧ್ವಂಸಕ ಚಹರೆಯನ್ನೂ, ಶಕ್ತಿಯನ್ನೂ ನೀಡಿದೆ..
ಈ ನರಮೇಧದ ಬೇರು ಇರುವುದು ರಾಜಕಾರಣದಲ್ಲಿ. ಸಮಾಜದಲ್ಲಿ. ಮನುಷ್ಯರಲ್ಲಿ. ಮನುಷ್ಯರಲ್ಲಿ ಒಳಿತು ಮತ್ತು ಕೇಡು-ಸ್ವಾರ್ಥಗಳೆರಡೋ ಅಂತರ್ಗತವಾಗಿರುತ್ತದೆ. ಫ್ಯಾಶಿಸ್ಟ್ ರಾಜಕಾರಣ ಮನುಷ್ಯರೊಳಗಿರುವ ಕೇಡು ಮತ್ತು ಸ್ವಾರ್ಥವನ್ನು ಉದ್ದೀಪಿಸಿ ಬೆಳೆಯುತ್ತದೆ. ಸಮಾಜದ-ಬದುಕಿನ ಬಿಕ್ಕಟ್ಟುಗಳು ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ.
ಇದನ್ನು ಸೋಲಿಸಲು ಸಾಧ್ಯವಾಗುವುದು ಮನುಷ್ಯರಲ್ಲಿ ಅಂತರ್ಗತವಾಗಿರುವ ಒಳಿತು-ಸಹಬಾಳ್ವೆಯ ಮೌಲ್ಯಗಳನ್ನು ಉದ್ದೀಪಿಸುವ ಮೂಲಕ ಮಾತ್ರ. ಹಾಗೂ ಅದನ್ನು ಸಾಧ್ಯಗೊಳಿಸುವ ಸಮಾಜ-ಬದುಕನ್ನು ರೂಪಿಸುವ ಮೂಲಕ. ತನ್ನಂತೆ ಪರರು ಎಂಬ ಸಾರವನ್ನು ಉದ್ದೀಪಿಸುವ ಮೂಲಕ. ಅದು ಕೇವಲ ಅನ್ಯಾಯಕ್ಕೆ ಮರುಗುವ ಕಣ್ಣೀರಿಂದ ಮಾತ್ರ ಸಾಧ್ಯವಾಗುವುದಿಲ್ಲ ಅಥವಾ ಚುನಾವಣೆಗಳಲ್ಲಿ ಅಪರೂಪಕ್ಕೊಮ್ಮೆ ಬಿಜೆಪಿ ಸೋತು ಅದರ ತದ್ರೂಪಿಗಳು ಅಧಿಕಾರಕ್ಕೆ ಬರುವುದರಿಂದಲೂ ಸಮಾಜದಲ್ಲಿ ಬೇರುಬಿಡುತ್ತಿರುವ ಫ್ಯಾಶಿಸಂ ಸೋಲುವುದಿಲ್ಲ. ಏಕೆಂದರೆ
ಫ್ಯಾಶಿಸಂ ಎಂದರೆ...
ಫ್ಯಾಶಿಸಂ ಎಂದರೆ...
ಅಮಾಯಕರ ಹತ್ಯೆ ಮಾತ್ರವಲ್ಲ
ನಾಗರಿಕರ
ನಿಗೂಢ-ಕೊಲೆಗಡುಕ ಮೌನ
ಫ್ಯಾಶಿಸಂ ಎಂದರೆ
ಬಲಾತ್ಕಾರಗಳು ಮಾತ್ರವಲ್ಲ
ನಿಟ್ಟುಸಿರುಗಳೇ
ಪರಾಕು ಗೀತೆಯಾಗುವ ಪಾಷಂಡಿಕೆ
ಫ್ಯಾಶಿಸಂ ಎಂದರೆ
ಬಡತನ ಮಾತ್ರವಲ್ಲ
ದಾರುಣ ನರಕಕ್ಕೂ
ಹೆಚ್ಚಾಗುವ ನೂಕುನುಗ್ಗಲು
ಫ್ಯಾಶಿಸಂ ಎಂದರೆ
ಧೂಳಾದ ಕನಸು ಮಾತ್ರವಲ್ಲ
ವೆಲ್ಲಿವಾಡಾಗಳ
ಅಧಿಕೃತ ಮರಣಶಾಸನ
ಫ್ಯಾಶಿಸಂ ಎಂದರೆ
ಉದ್ಯೋಗದ ಕಡಿತ ಮಾತ್ರವಲ್ಲ
ನಿರುದ್ಯೋಗದ ಖಾಯಮಾತಿ
ನೈತಿಕ ಪೊಲೀಸಿಗೆ ನಿರಂತರ ನೇಮಕಾತಿ
ಫ್ಯಾಶಿಸಂ ಎಂದರೆ
ಉತ್ತರವಿಲ್ಲದ ಪ್ರಶ್ನೆಗಳು ಮಾತ್ರವಲ್ಲ
ಉಸಿರು ತೆಗೆದ ಉತ್ತರಗಳು
ಉತ್ತರಕ್ಕೆ ತಕ್ಕಂತೆ ಮಾರ್ಪಾಡಾದ ಪ್ರಶ್ನೆಗಳು
ಫ್ಯಾಶಿಸಂ ಎಂದರೆ
ಗುಡಿಸಲುಗಳ ನಡುವೆ ಮೆರೆಯುವ
ಅಂಟಿಲಿಯಾ ಅರಮನೆ
ಫ್ಯಾಶಿಸಂ ಎಂದರೆ
ಸಂಖ್ಯೆಗಳ ಸಂತೆಯಲ್ಲಿ
ಸತ್ಯವನ್ನು ಕೊಲ್ಲುವ ಅದ್ಯಾತ್ಮ
ಫ್ಯಾಶಿಸಂ ಎಂದರೆ
ಸನಾತನದ ಸವಾಲು
ಜಾಗತಿಕ ದೈತ್ಯನ ಬಿಳಲು
ಫ್ಯಾಶಿಸಂ ಎಂದರೆ
ತ್ರಾಣವಿಲ್ಲದ ಪ್ರಜಾತಂತ್ರ ಮಾತ್ರವಲ್ಲ
ಸಂವಿಧಾನದ ಸಂದಿಯಿಂದಲೇ
ಹುಟ್ಟುವ ಸರ್ವಾಧಿಕಾರ
ಫ್ಯಾಶಿಸಂ ಎಂದರೆ
ವೋಟಿನಿಂದ ಸೋಲುವ ಪಕ್ಷವಲ್ಲ
ಮೆರವಣಿಗೆಗೆ ಬಗ್ಗುವ ಸರಕಾರವಲ್ಲ
ತದ್ರೂಪಿಗಳು ಗೆಲ್ಲಬಲ್ಲ ಸಮರವಲ್ಲ
ಫ್ಯಾಶಿಸಂ ಎಂದರೆ
ನಾಗರಿಕತೆ ಗೆಲ್ಲಲೇಬೇಕಿರುವ ಯುದ್ಧ
ನೊಂದವರ ಸೇನೆ
ಮಾಡಬೇಕಿರುವ ಮಹಾಸಮರ