ಅಂಬೇಡ್ಕರ್ ಜಯಂತಿ ಆಚರಣೆ ಯಾಕೆ ನೆಪಕ್ಕಷ್ಟೇ ಆಗುತ್ತಿದೆ?

ಭಾರತದಂತಹ ಬಹು ಧರ್ಮ ಮತ್ತು ಬಹು ಸಂಸ್ಕೃತಿಯ ದೇಶದಲ್ಲಿ ನಮ್ಮನ್ನಾಳಿದ ರಾಜಕೀಯ ಪಕ್ಷಗಳು ಅಂಬೇಡ್ಕರ್‌ರವರನ್ನು ಹಾಡಿ ಹೊಗಳುತ್ತಾ ಪ್ಲೆಕ್ಸ್, ಬ್ಯಾನರ್‌ಗಳಲ್ಲಿ ವಿಜೃಂಭಿಸುತ್ತಾ ಅಬ್ಬರಿಸಿ ಭಾಷಣ ಬಿಗಿಯುವುದಕ್ಕಷ್ಟೇ ಸೀಮಿತವಾಗುತ್ತಿವೆ. ಭಾರತದ ಉನ್ನತ ಶಿಕ್ಷಣ ಕಲಿಸುವ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಅಂಬೇಡ್ಕರ್ ಅಧ್ಯಯನ ಸಂಶೋಧನೆ ಕೇಂದ್ರಗಳು ಇದ್ದರೂ ಅವುಗಳು ನೆಪಕ್ಕಷ್ಟೇ ಜಯಂತಿಗಳನ್ನು ಸಂಘಟಿಸಿ ಕೈ ತೊಳೆದುಕೊಳ್ಳುತ್ತಿವೆ. ಬೌದ್ಧಿಕ ಜ್ಞಾನದ ಬೇರುಗಳು ಗಟ್ಟಿಯಾಗಬೇಕಿರುವ ಜಾಗದಲ್ಲಿಯೇ ಮತ್ತಷ್ಟು ಜಾತಿಯ ಬೇರುಗಳು ಗಟ್ಟಿಯಾಗುತ್ತಿರುವುದು ದುರಂತ. ಬೌದ್ಧಿಕ ಚಿಂತನೆ ವಿಸ್ತರಿಸುವ ಬದಲು ಮನಸ್ಸು ನಿಂತ ನೀರಂತೆ ಕೊಳೆಯುತ್ತದೆ. ಅಂಬೇಡ್ಕರ್ ಜಯಂತಿಯ ಮೂಲಕ ಒಂದು ಸಮುದಾಯವನ್ನು ಮೆಚ್ಚಿಸುವ ಕೆಲಸ ಜೋರಾಗಿಯೇ ನಡೆಯುತ್ತಿದೆಯಾದರೂ ಒಳಗೊಳ್ಳುವ ಕ್ರಿಯಾಶೀಲತೆಗಳು ಗೋಚರಿಸುವುದಿಲ್ಲ.
ದೇಶದಲ್ಲಿ ಮೀಸಲಾತಿಯ ಲಾಭ ನಮಗೂ ಕೊಡಿ ಎಂದು ಹಲವು ಜಾತಿಯ ಜನರು ಸಂಘಟಿತರಾಗುತ್ತಿದ್ದಾರೆ. ಈ ಕೂಗು ಸ್ವಾರ್ಥ ರಹಿತವಾಗಿರಬೇಕು. ಇದರಿಂದ ಸಣ್ಣ ಸಮುದಾಯವನ್ನು ವಂಚಿಸುವುದು ಆಗಬಾರದು. ಮೀಸಲಾತಿ ಪ್ರಮಾಣಗಳು ಅಷ್ಟೇ ಇರುವಾಗ ನಮಗೂ ಒಂದು ಇರಲಿ ಎಂದು ಒಂದು ಜಾತಿಯ ಜನರನ್ನು ಮುಂದುವರಿದ ಜಾತಿ ಸಂಘಟನೆಗಳು ಗುಂಪುಗೂಡಿಸುವುದು ಎಷ್ಟು ಸರಿ? ಇಂತಹ ಹೊತ್ತಿನಲ್ಲಿ ನಾವೆಲ್ಲ ಅಂಬೇಡ್ಕರ್ ಅವರನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಮತ್ತೆ ಮತ್ತೆ ಯೋಚಿಸಬೇಕಿದೆ. ದೇಶದ ಪ್ರತೀ ಜೀವಿಗೂ ಬದುಕುವ ಹಕ್ಕನ್ನು ಕೊಟ್ಟ ಅಂಬೇಡ್ಕರ್ ಸಂವಿಧಾನ ಎಲ್ಲರ ಹೃದಯದ ಆಳದೊಳಗೆ ಇಷ್ಟು ವರ್ಷಗಳಾದರೂ ಇಳಿಯಬೇಕಿತ್ತು. ಸ್ವಾತಂತ್ರ್ಯ ಬಂದು ಇಷ್ಟು ವಸಂತಗಳನ್ನು ಕಂಡಿರುವ ನಾವು ಸುಂದರ ಸಮಾಜ ನಿರ್ಮಿಸಲು ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಬದಲಾವಣೆ ಕಾಣುತ್ತದೆ. ಇಲ್ಲವಾದರೆ ಸಂಕುಚಿತ ಜಾತಿ ಪರಿಕಲ್ಪನೆ ಮತ್ತಷ್ಟು ಹಿಂದಕ್ಕೆ ನಮ್ಮನ್ನು ತಳ್ಳುತ್ತದೆ.
ಶಾಲೆ ಕಾಲೇಜುಗಳಲ್ಲಿ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಕಿಂಚಿತ್ತಾದರೂ ತಿಳಿದುಕೊಂಡಿರುವ ನಮ್ಮ ವಿದ್ಯಾವಂತ ಸಮುದಾಯ ಜಯಂತಿಗಳನ್ನು ಜಾತಿಗೆ ಮೀಸಲಿಟ್ಟು ಆಚರಿಸುವ ಸೀಮಿತತೆ ತೊಲಗುವುದು ಯಾವಾಗ? ಜಾತಿ ಆಧಾರಿತ ಸಮಾಜದೊಳಗೆ ಅಂಬೇಡ್ಕರ್ ಎಂಬ ಗುರು ಮಾನವರ ಹೃದಯಕ್ಕೆ ಇಳಿಯುವುದು ಯಾವಾಗ ಎಂಬ ಯಕ್ಷ ಪ್ರಶ್ನೆ ಸದಾ ಕಾಡುತ್ತದೆ. ರಾಜಕೀಯಕ್ಕೆ ಮಾತ್ರ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಉಲ್ಲೇಖಿಸುವ ರಾಜಕೀಯ ಪಕ್ಷಗಳು ಕಾರ್ಯಕರ್ತರಿಗೆ ಕಾರ್ಯಾಗಾರ ಕಮ್ಮಟಗಳನ್ನು ನಡೆಸುವಾಗ ಬಿತ್ತುವ ಬೀಜ ಸಂವಿಧಾನವೇ ಆಗಿರಬೇಕಲ್ಲವೇ? ಹೊಡಿ ಬಡಿ ದ್ವೇಷವನ್ನು ಬಿಟ್ಟು ಎಲ್ಲರ ಒಳಿತಿಗಾಗಿ ಯೋಚಿಸಬೇಕಾದ ನಮ್ಮ ನಾಯಕ ಮಣಿಗಳು ಸಂವಿಧಾನವನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಬೇಕಲ್ಲವೇ?
ಬೌದ್ಧಿಕ ವಿಶಾಲತೆ ಬಾರದ ಹೊರತು ಅಧಿಕಾರ, ಸಂಬಳಕ್ಕಾಗಿ ದುಡಿಮೆಯಾದರೆ ಸಾಲದು, ಸಮಾಜದ ಎಲ್ಲರಿಗೂ ಅವಕಾಶ ಅನುಕೂಲಗಳನ್ನು ಭ್ರಷ್ಟಾಚಾರ ರಹಿತವಾಗಿ ತಲುಪಿಸುವುದು ಅಂಬೇಡ್ಕರ್ ಅವರಿಗೆ ಕೊಡುವ ದೊಡ್ಡ ಕೊಡುಗೆಯಾಗುತ್ತದೆ.
ವಿದ್ಯಾರ್ಥಿಯೊಬ್ಬನಿಗೆ ಶಾಲೆಯಲ್ಲಿ ಬಾಲಕನಾಗಿ ಅಧ್ಯಯನ ಮಾಡುವ ಅಂಬೇಡ್ಕರ್ ಬಗೆಗಿನ ಆಸಕ್ತಿ ಒಂದು ರೀತಿಯಾದರೆ, ಆತ ಮುಂದೆ ಉನ್ನತ ವಿದ್ಯಾಭಾಸ ಮಾಡುವಾಗ ಅಂಬೇಡ್ಕರ್‌ರನ್ನು ಬೇರೊಂದು ರೀತಿಯಲ್ಲಿ ಕಾಣುತ್ತಾನೆ. ನಿಜ ತಿಳಿವಿನ ವಿಸ್ತಾರ ಬೆಳೆದಂತೆಲ್ಲ ಮನಸ್ಸು ಸಂಕುಚಿತತೆಗೆ ಎಳೆಯುತ್ತಿರುತ್ತದೆ. ದೇಶದ ಅನೇಕ ಬುದ್ಧಿಜೀವಿಗಳು, ಲೇಖಕರು, ಸಾಹಿತಿಗಳು ಬರೆದಷ್ಟು, ಭಾಷಣ ಬಿಗಿದಷ್ಟು ಪ್ರಾಮಾಣಿಕ ಬದುಕನ್ನು ತೋರಿಸಿಲ್ಲ. ಹಾಗಾಗಿ ನೈತಿಕತೆ ಎಂಬುದು ಅಧಿಕಾರಿ ಮತ್ತು ರಾಜಕೀಯ ವ್ಯಕ್ತಿಗಳಿಂದ ಮಾತ್ರ ನಿರೀಕ್ಷಿಸುವುದಲ್ಲ. ನಮ್ಮಲ್ಲೂ ಎಲ್ಲರಲ್ಲಿಯೂ ಸದಾ ಇರಬೇಕು.
ಎಲ್ಲರ ಅಂಬೇಡ್ಕರ್
ಭಾರತದ ಸಂವಿಧಾನ ಎಲ್ಲರಿಗೂ ತಲುಪಿದೆ. ಆದರೆ ಜೀರ್ಣಿಸಿಕೊಂಡವರು ಕೆಲವರು ಮಾತ್ರ. 1891ರಿಂದ 1956ರ ವರೆಗಿನ ಅಂಬೇಡ್ಕರ್ ಅವರ ಜೀವನದ ಕಥಾನಕಗಳು ಹಲವು ರೂಪದಲ್ಲಿ ಬೆಳಕು ಕಂಡಿವೆ. ಮುಂದೆಯೂ ಕಾಣತೊಡಗುತ್ತವೆ. ನವ ಮಾಧ್ಯಮಗಳು ನಿರಂತರವಾಗಿ ಹೊಸ ರೀತಿಯಲ್ಲಿ ಅವರ ವಿಚಾರ ಧಾರೆಗಳನ್ನು ತಲುಪಿಸುತ್ತಿವೆ ಆದರೆ ‘ನಮ್ಮವನು’ ಎಂಬ ಬೇಲಿಯನ್ನು ಕಳಚಿ ಎಲ್ಲರನ್ನು ಒಳಗೊಳ್ಳುವ ಕೆಲಸವಾಗಬೇಕಿದೆ. ರಾಜಕೀಯ ಪಕ್ಷಗಳು ಹಿಂದಿನ ಘಟನಾವಳಿಗಳನ್ನು ಪ್ರಸ್ತಾಪಿಸುತ್ತಾ ನೀವೆಷ್ಟು ಮಾಡಿದ್ದು ಸರಿ ಎಂಬ ಲೆಕ್ಕಾಚಾರದಲ್ಲಿ ಮುಳುಗಿ ವಿರೋಧಿ ಗುಂಪುಗಳನ್ನು ಎದುರಿಸುವುದರಲ್ಲಿಯೇ ತಮ್ಮ ಪಕ್ಷ, ಪಂಥವನ್ನು ಸಮರ್ಥನೆಮಾಡಿಕೊಳ್ಳುತ್ತಾರೆ. ಭೂತಕಾಲದಲ್ಲಿ ನಡೆದುದನ್ನು ವರ್ತಮಾನದಲ್ಲಿ ನೋಡುವ ಅವರ ಚಾಣಾಕ್ಷತೆ ಬೇರೆಯದೇ ಆಗಿರುತ್ತದೆ.
ಅಧಿವೇಶನದ ಚರ್ಚೆಯಲ್ಲಿ ಮುಕ್ತವಾಗಿ ಬೆರೆಯುವ ರಾಜಕಾರಣಿ ನಿಜ ಜೀವನದಲ್ಲಿ ಬ್ಯಾಲೆನ್ಸ್ ಮಾಡಿ ಬದುಕುವ ಆತನ ಕರಾಮತ್ತನ್ನು ಕಲೆ ಎನ್ನಬಹುದೇ? ತಂತ್ರ ಎನ್ನಬಹುದೇ? ಯಾವುದೇ ಪಕ್ಷದ ರಾಜಕಾರಣಿಗಳು ಪಕ್ಷದಲ್ಲಿದ್ದು ನಡೆದುಕೊಳ್ಳುವ ರೀತಿಗಳೂ, ತನ್ನ ಮನೆಯಲ್ಲಿ ನಡೆದುಕೊಳ್ಳುವ ರೀತಿ, ನೀತಿಗಳಿಗೂ ಬಹಳ ವ್ಯತ್ಯಾಸವಿದೆ. ಹತ್ತಿರದಿಂದ ನೋಡಿದರೆ ಗೊತ್ತಾಗುತ್ತದೆ.
ಅಂಬೇಡ್ಕರ್ ಅವರನ್ನು ಗೌರವಿಸುವುದು ಎಂದರೆ ಸಂವಿಧಾನವನ್ನು ಗೌರವಿಸುವುದು ಎಂದು ಅಗಬೇಕು. ದೇಶದಲ್ಲಿ ಸಂವಿಧಾನ ವಿರೋಧಿಗಳು, ಕೂಗುಮಾರಿಗಳಂತೆ ಕೂಗುವವರು ಎಲ್ಲಾ ಕಾಲದಲ್ಲಿಯೂ ಇರುತ್ತಾರೆ. ಈಗಲೂ ಇದ್ದಾರೆ. ಸಂವಿಧಾನದ ಆಶಯಗಳನ್ನು ವಿಸ್ತರಿಸುತ್ತಾ ಸಾಗಬೇಕಾದ ನಮ್ಮ ರಾಜಕೀಯ ಪಕ್ಷಗಳು ಜಾತಿಗಳನ್ನು ಮತ್ತಷ್ಟು ಗಟ್ಟಿಯಾಗಿಸಿಕೊಂಡು ಮತ ಗಟ್ಟಿಗೊಳಿಸಿಕೊಳ್ಳುವ ಹುನ್ನಾರ ನಾಚಿಕೆ ಪಡುವಂತಿದೆ.
ಅಂಬೇಡ್ಕರ್ ಅವರ ಹೆಸರಿನಲ್ಲಿ ಯಾವುದೇ ಹೊಸ ಯೋಜನೆಯನ್ನು ಜಾರಿಗೆ ತಂದರೂ ಲೆಕ್ಕಾಚಾರ ಇದ್ದೇ ಇರುತ್ತದೆ. ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಎಲ್ಲರ ಬಾಳು ಬೆಳಕಾಗಿಸಿದ ಅಂಬೇಡ್ಕರ್ ಅವರ ಸಂವಿಧಾನವನ್ನು ಮತ್ತಷ್ಟು ತಿಳಿಯಬೇಕಿದೆ. ಮಹಿಳೆಯರಿಗೆ ಸಂವಿಧಾನವು ವಿಮೋಚನೆಯ ಸ್ವಾತಂತ್ರ್ಯವನ್ನೇ ನೀಡಿ ಬೆಂಬಲಿಸಿದೆ. ಇಂತಹ ಅವಕಾಶವನ್ನು ಎಲ್ಲಾ ಹೆಣ್ಣು ಮಕ್ಕಳು ಬಳಸಿಕೊಂಡು ನಿರ್ಭೀತಿಯಿಂದ ಎಲ್ಲ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಧಾರ್ಮಿಕತೆಗೆ ಕೊಟ್ಟ ಮಹತ್ವವನ್ನು ಬಾಬಾ ಸಾಹೇಬರಡೆಗೆ ಕೊಡುತ್ತಿಲ್ಲ ಎಂಬುದು ಮಾತ್ರ ಸತ್ಯ. ಇದೊಂದು ಬಿಡುಗಡೆಯ ಸ್ವಾತಂತ್ರ್ಯ. ತಾಯಿ ಪೊರೆಯುವಂತೆ ಪೊರೆದ ಅಂಬೇಡ್ಕರ್ ಭಾರತದ ಮಾತೃ ಹೃದಯಿ.
ಪ್ರತಿಯೊಬ್ಬರಿಗೂ ಬದುಕುವ ಹಕ್ಕನ್ನು ಕೊಟ್ಟು ಜೀವ ಉಳಿಸಿದ ಬಾಬಾ ಸಾಹೇಬರು ಶ್ರೇಷ್ಠ ಮಾನವತಾವಾದಿ.ರಾಜಕೀಯ ನಾಯಕರು ರಕ್ಕಸರಂತೆ ನಡೆದುಕೊಂಡು ನೈತಿಕತೆ ಬಿಡುವ ಬದಲು ಅಂಬೇಡ್ಕರ್ ಎಂಬ ತಾಯಿಯ ಮಮತೆಯನ್ನು ಸದಾ ಜ್ಞಾಪಿಸಿಕೊಳ್ಳುವ ಮನಸ್ಥಿತಿ ಬರಬೇಕಿದೆ. ಅಧಿಕಾರದ ಅಮಲಿನಲ್ಲಿರುವ ರಾಜಕೀಯ ವ್ಯಕ್ತಿಗಳು ಪುಸ್ತಕ ಹಿಡಿದು ಅವರನ್ನು ತಲೆಯ ತುಂಬಾ ತುಂಬಿಕೊಳ್ಳಬೇಕು. ಸಮುದಾಯದ ಜ್ಞಾನದ ನೈತಿಕತೆಯನ್ನು ಸ್ಥಿತ ಪ್ರಜ್ಞೆಯಿಂದ ನೋಡಬೇಕು. ಅವಕಾಶ ವಂಚಿತ ಸಮುದಾಯವನ್ನು ಮೇಲೆತ್ತಬೇಕು. ಬೂಟಾಟಿಕೆ ಮಾತುಗಳನ್ನು ಆಡುತ್ತಾ ಬ್ಯಾಲೆನ್ಸ್ ಮಾಡಿ ಬದುಕುವ ಚತುರ ನಾಯಕರನ್ನು ಮತ ಪ್ರಭುಗಳು ಕಿತ್ತೊಗೆಯಬೇಕಾಗಿದೆ.
ಅಂಬೇಡ್ಕರ್ ಎಂಬ ಹೆಸರು ಕೆಲವರಿಗೆ ಆದಾಯ, ಬಂಡವಾಳ ತರುವ ಉದ್ಯಮವಾಗಿದ್ದು ಅಂಬೇಡ್ಕರ್ ಆಡಂಬರದ ಅಸಡ್ಡೆಯಲ್ಲಿ ಕರಗಿಹೋಗುವುದನ್ನು ಜನ ನೋಡಿದ್ದಾರೆ. ಸೋಗು ಹಾಕಿ ಬದುಕುವ ಪುಢಾರಿಗಳು ಅಂಬೇಡ್ಕರ್ ಅವರನ್ನು ಅಸ್ತ್ರದಂತೆ ಬಳಸಿ ಬಿಸಾಡುವ ಬೌದ್ದಿಕ ದಾರಿದ್ರ್ಯವು ತೊಲಗಬೇಕಿದೆ.
ತನಗಿಂತ ದೇಶದ ಹಿತವನ್ನು ಬಯಸಿದ ಮಹಾ ನಾಯಕನ ಬುದ್ಧಿ, ಜ್ಞಾನಸಂಪತ್ತಿಗೆ ಬೆಲೆ ಕೊಡದ ಈ ಸಮಾಜ ಅವರನ್ನು ತಾಯಿಯಂತೆ ಅಪ್ಪಿಕೊಳ್ಳುವುದು ಯಾವಾಗ? ಮುಂದುವರಿದ ರಾಷ್ಟ್ರಗಳು ಬಾಬಾ ಸಾಹೇಬರನ್ನು ಆರಾಧಿಸುತ್ತವೆ. ಆದರೆ ನಾವು ಮಾತ್ರ ಎಲ್ಲರನ್ನು ಜಾತಿ ಪ್ರಜ್ಞೆಯಿಂದ ನೋಡುತ್ತಿದ್ದೇವೆ.