ಅಂಬೇಡ್ಕರ್ ಅವರ ಪುಸ್ತಕ ಪ್ರೀತಿ, ಫ್ಯಾಷನ್ ಮತ್ತು ಹವ್ಯಾಸಗಳು
ಪಂಜಾಬ್‌ನ ಒಂದು ದಲಿತ ಕುಟುಂಬದಲ್ಲಿ ಜನಿಸಿದ ನಾನಕ್ ಚಂದ್ ರತ್ತು (1922-2002) ಕೆಲಸ ಹುಡುಕಿಕೊಂಡು ದಿಲ್ಲಿಗೆ ಬಂದವರು. ಅಂಬೇಡ್ಕರ್ ಅವರು ಕಾನೂನು ಸಚಿವರಾಗಿದ್ದಾಗ ರತ್ತು ಅಂಬೇಡ್ಕರ್ ಅವರ ವೈಯಕ್ತಿಕ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಅಂಬೇಡ್ಕರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೂ ರತ್ತು 17 ವರ್ಷಗಳ ಕಾಲ ಅಂಬೇಡ್ಕರ್ ಅವರ ಒಡನಾಟದಲ್ಲಿದ್ದರು.
ರತ್ತು ಅಂಬೇಡ್ಕರ್ ಅವರ ಬಂಗಲೆಯಲ್ಲಿ ಬೆಳಗ್ಗೆ ಒಂದೆರಡು ಗಂಟೆ ಕೆಲಸ ಮಾಡಿ, ನಂತರ ಕಚೇರಿಗೆ ಹೋಗುತ್ತಿದ್ದರು. ಸಾಯಂಕಾಲ ಮತ್ತೆ ಆರು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆ, ಕೆಲವೊಮ್ಮೆ ತಡ ರಾತ್ರಿಯವರೆಗೂ ಅಂಬೇಡ್ಕರ್ ಕೊಟ್ಟ ಪುಸ್ತಕ, ಲೇಖನಗಳನ್ನು ಟೈಪ್ ಮಾಡಿ ಮುಗಿಸಿ ಸೈಕಲ್‌ನಲ್ಲಿ ಅವರ ಸರಕಾರಿ ಕ್ವಾರ್ಟರ್‌ಗೆ ಹೋಗುತ್ತಿದ್ದರು. ಕೆಲವೊಮ್ಮೆ ರಾತ್ರಿ ಅಲ್ಲೇ ಉಳಿದುಕೊಳ್ಳುತ್ತಿದ್ದರು. ಅಂಬೇಡ್ಕರ್ ಅವರ ‘ಬುದ್ಧ ಮತ್ತು ದಮ್ಮ’, ‘ಹಿಂದೂ ಧರ್ಮದ ಒಗಟುಗಳು’ ಸೇರಿದಂತೆ ಅವರ ಹೆಚ್ಚಿನ ಬರಹಗಳನ್ನು ಟೈಪ್ ಮಾಡಿದವರು ರತ್ತು ಅವರೇ. ಅಂಬೇಡ್ಕರ್ ಅವರು ತೀರಿಕೊಂಡ ಮೇಲೆ ರತ್ತು ಅವರು ಅಂಬೇಡ್ಕರ್ ಅವರ ಒಡನಾಟದ ಬಗ್ಗೆ ಎರಡು ಪುಸ್ತಕಗಳನ್ನು ರಚಿಸಿ 1990ರಲ್ಲಿ ಪ್ರಕಟಿಸಿದರು. ಅವು ಒಂದು ರೀತಿಯಲ್ಲಿ ಅಂಬೇಡ್ಕರ್ ಅವರ ಜೀವನ ಕಥೆಯ ತುಣುಕುಗಳಂತಿದ್ದು, ಕೆಲವು ಸ್ವಾರಸ್ಯಕರ ವಿಷಯಗಳನ್ನು ಅವರ ಕೃತಿಗಳಿಂದ ತೆಗೆದುಕೊಂಡು ಈ ಲೇಖನವನ್ನು ಹೆಣೆಯಲಾಗಿದೆ.
ಅಂಬೇಡ್ಕರ್, ದಾದರ್‌ನಲ್ಲಿದ್ದ ಅವರ ಮನೆಯಲ್ಲಿ ಬೆಳಗಿನ ಜಾವ ಐದು ಗಂಟೆಗೆಲ್ಲ ಏಳುತ್ತಿದ್ದರು. ಕೆಲವೊಮ್ಮೆ ಇಡೀ ರಾತ್ರಿಯೆಲ್ಲ ಓದಿ ನಸುಕಿನಿಂದ ಬೆಳಗಿನವರೆಗೂ ನಿದ್ರೆ ಮಾಡುತ್ತಿದ್ದರು. ಬೆಳಗಿನ ನಿತ್ಯಕರ್ಮಗಳನ್ನು ಮುಗಿಸಿದ ಮೇಲೆ ಭಗವಾನ್ ಬುದ್ಧನ ವಿಗ್ರಹದ ಮುಂದೆ ನಿಂತು ಪ್ರಾರ್ಥಿಸುತ್ತಿದ್ದರು.ಸ್ವಲ್ಪಹೊತ್ತು ಧ್ಯಾನ ಮತ್ತು ವ್ಯಾಯಾಮ, ನಂತರ ವರಾಂಡಾದ ಕೊನೆಯಲ್ಲಿ ಕುರ್ಚಿಯಲ್ಲಿ ಕುಳಿತುಕೊಂಡು ತಂಗಾಳಿ ಸವಿಯುತ್ತಿದ್ದರು. ಹಸಿರು ಹುಲ್ಲುಹಾಸು, ಗಿಡಮರ ಪೊದೆಗಳ ಮೇಲೆ ಚಿಲಿಪಿಲಿಗುಟ್ಟುತ್ತಾ ಹಾರಾಡುತ್ತಿದ್ದ ಹಕ್ಕಿಗಳನ್ನು ನೋಡುತ್ತಾ ಆನಂದಿಸುತ್ತಿದ್ದರು. ಅದೇ ಸಮಯದಲ್ಲಿ ಚಹ ಕುಡಿಯುತ್ತಾ ದೈನಂದಿನ ಪತ್ರಿಕೆಗಳನ್ನು ಓದುತ್ತಿದ್ದರು. ಅವರ ನಾಯಿಮರಿ ‘ಟೋಬಿ’ ಅವರ ಪಾದದ ಬಳಿ ಕುಳಿತುಕೊಂಡು ಅವರನ್ನೇ ನೋಡುತ್ತಿತ್ತು. ಆನಂತರ ಅವರು ಸ್ನಾನಕ್ಕೆ ಎದ್ದು ಹೋಗುತ್ತಿದ್ದರು.
ಸ್ನಾನ ಮುಗಿಸಿ ಬಂದ ಮೇಲೆ ಸೇವಕ ಹಾಲಿಗೆ ಕಾರ್ನ್ ಫ್ಲೆಕ್ಸ್ ಹಾಕಿ ತಂದುಕೊಡುತ್ತಿದ್ದನು. ಮತ್ತೊಮ್ಮೆ ಚಹ ಮುಗಿಸಿ ನ್ಯಾಯಾಲಯದ ಮುಂದೆ ಆದಿನ ಬರಲಿರುವ ಖಟ್ಲೆಗಳಿಗೆ ಸಂಬಂಧಿಸಿದ ಫೈಲುಗಳನ್ನು ಗಮನಿಸಿಸುತ್ತಿದ್ದರು. ಪೋಸ್ಟ್‌ನಲ್ಲಿ ಬಂದಿದ್ದ ಹೊಸ ಪುಸ್ತಕಗಳು, ಪತ್ರಗಳ ಮೇಲೆ ಕಣ್ಣಾಡಿಸಿ ಕಚೇರಿಗೆ ಹೋಗುತ್ತಿದ್ದರು. ಉಪಾಹಾರ ಮಾಡಿದರೆ ಮಾಡಿದರು, ಇಲ್ಲವೆಂದರೆ ಇಲ್ಲ. ಕೆಲವು ಸಲ ನ್ಯಾಯಾಲಯದಲ್ಲಿ ಖಟ್ಲೆಗಳಿದ್ದರೆ ಹೊಟೇಲಿನಲ್ಲಿಯೇ ಮಧ್ಯಾಹ್ನದ ಊಟ ಮುಗಿಸುತ್ತಿದ್ದರು. ಕೋರ್ಟ್ ಕೆಲಸ ಮುಗಿದಿದ್ದೆ, ಸೀದಾ ಮನೆಗೆ ಬರದೆ ಪುಸ್ತಕ ಅಂಗಡಿಗಳನ್ನು ಸುತ್ತಾಡಿ ಒಂದು ರಾಶಿ ಪುಸ್ತಕಗಳನ್ನು ಜೊತೆಗೆ ತರುತ್ತಿದ್ದರು. ಒಂದು ಕೈಯಲ್ಲಿ ಪುಸ್ತಕ ಹಿಡಿದುಕೊಂಡೇ ರಾತ್ರಿ ಊಟ ಮಾಡುತ್ತಿದ್ದರು. ಓದು ಬರಹ ರಾತ್ರಿಯೆಲ್ಲ ನಡೆಯುತ್ತಿತ್ತು.
ಅವರ ಆರೋಗ್ಯ ಸರಿ ಇಲ್ಲದಿದ್ದಾಗಲೂ ಕೆಲವೊಮ್ಮೆ ಇಡೀ ರಾತ್ರಿ ಒಂದೇ ಸಮನೇ ಓದುಬರಹಗಳಲ್ಲಿ ನಿರತರಾಗಿ ರತ್ತು ಅವರಿಗೆ ಡಿಕ್ಟೇಟ್ ಮಾಡುತ್ತಾ, ಟೈಪ್ ಮಾಡಿಸುತ್ತಾ ಕುರ್ಚಿಯಿಂದ ಮೇಲೇಳದೆ ಕೆಲಸ ಮಾಡಿಸುತ್ತಿದ್ದರು. ಟೈಪ್ ಮಾಡಿದ ಹಾಳೆಗಳನ್ನು ಕುಳಿತೋ ಇಲ್ಲ ನಿಂತೋ ಪರಿಶೀಲಿಸುತ್ತಿದ್ದರು. ಕೆಲವು ನಿರ್ದಿಷ್ಟ ಭಾಗಗಳನ್ನು ಕತ್ತರಿಸಿ ಬೇರೆ ಕಡೆ ಅಂಟಿಸಿ, ಪ್ಯಾರಾಗಳಾಗಿ ವಿಂಗಡಿಸಿ, ಪುಟಸಂಖ್ಯೆ ಹಾಕಿ, ಅದೇ ಪ್ರಕ್ರಿಯೆಯನ್ನು ಮತ್ತೆ ಮತ್ತೆ ಮಾಡಿ, ಪುನಃ ಟೈಪ್ ಮಾಡಿಸುತ್ತಿದ್ದರು. ಈ ಎಲ್ಲ ಕಸರತ್ತಿನ ಕೊನೆಗೆ ಅವರ ಸುತ್ತಲೂ ಕಾಗದಗಳ ರಾಶಿಯೇ ಬಿದ್ದಿರುತ್ತಿತ್ತು. ಕಂಪ್ಯೂಟರ್ ಇಲ್ಲದ ಆ ಕಾಲದಲ್ಲಿ ಬರೀ ಟೈಪ್‌ರೈಟರ್ ಮೂಲಕವೇ ಎಲ್ಲವನ್ನು ಮಾಡಬೇಕಾಗಿತ್ತು.
ಒಮ್ಮೆ ಬಾಬಾಸಾಹೇಬರು ದಿಲ್ಲಿಯ ಅಲಿಪುರ ರಸ್ತೆಯ 26ನೇ ಸಂಖ್ಯೆಯ ನಿವಾಸದಲ್ಲಿ ಪಿಟೀಲು ನುಡಿಸುತ್ತಾ ಅಸಾಧಾರಣ ಖುಷಿಯಲ್ಲಿ ಅತ್ತಿಂದಿತ್ತ ಇತ್ತಿಂದಿತ್ತ ಹೆಜ್ಜೆಹಾಕುತ್ತಿದ್ದರು. ರತ್ತು ಮೆಲ್ಲಗೆ ಹೋಗಿ ಬಾಗಿಲಲ್ಲಿ ನಿಂತುಕೊಂಡು ಅವರನ್ನು ನೋಡಿದರು. ಆದರೆ ಅಂಬೇಡ್ಕರ್, ರತ್ತು ಕಡೆಗೆ ಗಮನಕೊಡದೆ ಹೆಜ್ಜೆ ಹಾಕುತ್ತಾ ಪಿಟೀಲು ನುಡಿಸುತ್ತಲೇ ಇದ್ದರು. ರತ್ತು ಮೆತ್ತಗೆ, ‘‘ಸಾಹೇಬರು ಇಂದು ಒಳ್ಳೆ ಲಹರಿಯಲ್ಲಿದ್ದಂತಿದೆ’’ ಎಂದರು. ಅಂಬೇಡ್ಕರ್, ‘‘ಹ್ಹ ಹ್ಹ, ಇಂದು ನಾನು ತುಂಬಾ ಖುಷಿಯಲ್ಲಿದ್ದೇನೆ’’ ಎಂದರು. ಮತ್ತೆ ರತ್ತು, ‘‘ಸಾಹೇಬರು ಎಂದೂ ಇಷ್ಟೊಂದು ಖುಷಿಯಲ್ಲಿ ದ್ದುದನ್ನು ನಾನು ನೋಡಿಯೇ ಇಲ್ಲ. ಏನಾದರೂ ವಿಶೇಷ ಸಂಭವಿಸಿತೆ?’’ಎಂದರು. ಅಂಬೇಡ್ಕರ್, ‘‘ನಾಳೆ (ಜನವರಿ 26, 1950 ಸಂವಿಧಾನ ಜಾರಿಯಾಗುವ ದಿನ) ಸಮಸ್ತ ರಾಜರು ಬೀದಿಗೆ ಬೀಳಲಿದ್ದಾರೆ’’ ಎಂದರು. ರತ್ತು ‘‘ಅದು ಸರಿ, ನಿಮ್ಮ ಖುಷಿಗೆ ಕಾರಣ ತಿಳಿದುಕೊಳ್ಳಬಹುದೆ?’’ ಎಂದಾಗ, ಅಂಬೇಡ್ಕರ್, ‘ಬೀದಿಯಲ್ಲಿರುವ ಜನರೆಲ್ಲ ರಾಜರ ಸ್ಥಾನ ಆಕ್ರಮಿಸಿಕೊಳ್ಳುತ್ತಾರೆ. ಅದಕ್ಕಾಗಿಯೇ ನಾನಿಷ್ಟು ಖುಷಿಯಾಗಿದ್ದೇನೆ’’ ಎಂದರು.
ಅಂಬೇಡ್ಕರ್ ಅವರು ಬಹಳ ನಯನಾಜೂಕಿನ ಬಟ್ಟೆಗಳನ್ನು ಧರಿಸುತ್ತಿದ್ದರು. ಅತ್ಯುತ್ತಮವಾಗಿ ಕತ್ತರಿಸಿ ಹೊಲಿದ ಅಸಂಖ್ಯೆ ಉಣ್ಣೆ ಮತ್ತು ಹತ್ತಿಯ ಉಡುಪುಗಳನ್ನು ಸ್ಟೀಲ್ ಅಲಮಾರುಗಳಲ್ಲಿ ಐರನ್ ಮಾಡಿ ಮಡಿಚಿಟ್ಟು, ಹ್ಯಾಂಗರ್‌ಗಳಿಗೆ ನೇತುಹಾಕಲಾಗಿತ್ತು.ಹ್ಯಾಟುಗಳು ಮತ್ತು ಟೋಪಿಗಳನ್ನು ತಮ್ಮ ವಾರ್ಡ್ ತುಂಬಾ ಸಂಗ್ರಹಿಸಿ ಇಟ್ಟುಕೊಂಡಿದ್ದು ಅವುಗಳನ್ನು ಬಹಳ ಖುಷಿಯಿಂದ ಧರಿಸುತ್ತಿದ್ದರು. ಪೀಠೋಪಕರಣಗಳು, ಗೃಹೋಪಯೋಗಿ ವಸ್ತುಗಳು, ನ್ಯಾಯಾಧೀಶರ ಕುರ್ಚಿಗಳು, ಪುಸ್ತಕಗಳನ್ನಿಡಲು ಸಾಲುಸಾಲು ಮರದ ಕಾಪಾಟುಗಳು ಮತ್ತು ಪುತ್ತಿಕೆಗಳು ಇದ್ದವು.ಬರೀ ಫೈಲುಗಳೇ ತುಂಬಿಕೊಂಡಿದ್ದ ಮೂರು ಅಲಮಾರುಗಳಿದ್ದವು. ದುಬಾರಿ ಬೆಲೆಯ ಫೌಂಟನ್ ಪೆನ್ನು, ಪೆನ್ಸಿಲ್‌ಗಳ ಬಳಕೆಗೆ ಅನುಗುಣವಾಗಿ ಒಂದು ಸಣ್ಣ ಸ್ಟೀಲ್ ಪೆಟ್ಟಿಗೆಯಲ್ಲಿ ಅವುಗಳನ್ನು ಪೇರಿಸಿಡಲಾಗಿತ್ತು. ಕುಳಿತು ಬರೆಯುವ ವಿಶೇಷ ಮೇಜು, ಮೈಚಾಚಿ ಕುಳಿತುಕೊಳ್ಳಲು ಬಾಗಿದ ಆರಾಮ ಕುರ್ಚಿ, ಮೇಜುಗಳು ಮತ್ತು ಕುರ್ಚಿಗಳಿದ್ದವು.
ವಿವಿಧ ನಮೂನೆಯ ಬೂಟುಗಳು ರ್ಯಾಕ್‌ಗಳ ತುಂಬಾ ಇದ್ದವು. ಪುಸ್ತಕಗಳನ್ನು ತುಂಬಿಕೊಂಡು ತರಲು ವಿಶೇಷವಾದ ಗ್ರಂಥಾಲಯ ಕಾರನ್ನು ಇಟ್ಟುಕೊಂಡಿದ್ದರು. ವಿವಿಧ ರೀತಿಯ ವರ್ಣಚಿತ್ರಗಳು ಮತ್ತು ಕಲಾಕೃತಿಗಳು ಗೋಡೆಗಳಿಗೆ ಅಲಂಕಾರಗೊಂಡಿದ್ದವು. ರೇಡಿಯೋಗ್ರಾಂ, ಪ್ರಸಾಧನ ಮೇಜು, ಗೋಡೆ ಗಡಿಯಾರಗಳು, ಕೈ ಗಡಿಯಾರಗಳು, ಟೈಂಪೀಸುಗಳು, ಫ್ರಿಡ್ಜ್, ಸೋಫಾಸೆಟ್ಟುಗಳು, ಇನ್ನೂ ಎಷ್ಟೋ ಸಣ್ಣಪುಟ್ಟ ಪೀಠೋಪಕರಣಗಳು ಮತ್ತು ಗೃಹೋಪಯೋಗಿ ವಸ್ತುಗಳಿದ್ದವು. ಗಟ್ಟಿಮುಟ್ಟಾದ ಕೈಗಡಿಯಾರಗಳು, ಪಾಕೆಟ್ ವಾಚ್‌ಗಳು ಮತ್ತು ಒಂದೆರಡು ಚಿನ್ನದ ವಾಚ್‌ಗಳನ್ನು ಇಟ್ಟುಕೊಂಡಿದ್ದರು.
ಅಂಬೇಡ್ಕರ್ ಸ್ಥೂಲವಾದ ಮತ್ತು ಸದೃಢವಾದ ಮೈಕಟ್ಟನ್ನು ಹೊಂದಿದ್ದು 5.10 ಅಡಿಗಳ ಎತ್ತರವಿದ್ದು ಗುಂಡು ಮುಖ ಗಾಂಭೀರ್ಯದಿಂದ ಕೂಡಿರುತ್ತಿತ್ತು. ಐವತ್ತು ತುಂಬುವಷ್ಟರಲ್ಲಿ ತಲೆಕೂದಲು ಸಾಕಷ್ಟು ಉದುರಿಹೋಗಿ ಬೊಕ್ಕತಲೆಯ ಮೇಲೆ ಬಿಳಿ-ಕಪ್ಪು ಮಿಶ್ರಿತ ಕೂದಲಿದ್ದವು. ಉದ್ದನೆ ಕಿವಿಗಳಿದ್ದು ಗೌರವವರ್ಣ, ವಿಶಾಲ ಭುಜಗಳು ಮತ್ತು ದೇಹ ಹೆಚ್ಚಾಗಿ ಕೇಶರಹಿತವಾಗಿತ್ತು. ಅವರು ಓದುವಾಗ ಬಿಳಿ ಕನ್ನಡಕ ಧರಿಸಿರುತ್ತಿದ್ದು ಹೊರಗೆ ಬಂದಾಗ ತಂಪು ಕನ್ನಡಕ ಧರಿಸುತ್ತಿದ್ದರು. ಅವರಲ್ಲಿ ಅನೇಕ ಕನ್ನಡಕಗಳಿದ್ದು ಒಂದು ಪೆಟ್ಟಿಗೆಯಲ್ಲಿ ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದರು. ಹ್ಯಾಟು, ಟೋಪಿಗಳು, ಫೆಲ್ಟ್ ಹ್ಯಾಟುಗಳು, ನೆಕ್‌ಟೈಗಳು, ಕಾಲರುಗಳು ಮತ್ತು ಸೊಗಸಾದ ಗಟ್ಟಿಮುಟ್ಟಾದ ವಾಕಿಂಗ್ ಸ್ಟಿಕ್ಕುಗಳನ್ನು ಇಟ್ಟುಕೊಂಡಿದ್ದರು.
ಇಂಗ್ಲಿಷ್, ಹಿಂದಿ, ಉರ್ದು, ಪರ್ಷಿಯನ್, ಮರಾಠಿ ಮತ್ತು ಸಂಸ್ಕೃತ ಭಾಷೆಗಳ ಜೊತೆಗೆ ಇನ್ನಷ್ಟು ಭಾಷೆಗಳ ಜ್ಞಾನವೂ ಅವರಿಗಿತ್ತು.ಸುಂದರ ಕೈಬರಹವಿದ್ದ (ಕಾರ್ಟೋಗ್ರಫಿ ರೀತಿ) ಅವರ ಬರವಣಿಗೆ ದೃಢತೆ, ಸ್ಪಷ್ಟತೆ ಮತ್ತು ಅಂದದಿಂದ ಕೂಡಿರುತ್ತಿತ್ತು. ಕಾವ್ಯ, ಕಲೆ, ಸಂಗೀತ, ಪಿಟೀಲು, ವರ್ಣಚಿತ್ರಗಳನ್ನು ಇಷ್ಟಪಡುತ್ತಿದ್ದರು. ಸಾಕು ಪ್ರಾಣಿಗಳನ್ನು ಪ್ರೀತಿಸುತ್ತಿದ್ದು ಒಂದೆರಡು ನಾಯಿಗಳನ್ನು ಸಾಕಿಕೊಂಡಿದ್ದರು. ಜೊತೆಗೆ ಪ್ರಕೃತಿ ಪ್ರೇಮಿಯೂ ಆಗಿದ್ದರು. ದಿನನಿತ್ಯ ಹಲವು ಪತ್ರಿಕೆಗಳನ್ನು ಓದುತ್ತಿದ್ದುದಲ್ಲದೆ, ರೇಡಿಯೊದಲ್ಲಿ ಬರುವ ಸುದ್ದಿಗಳನ್ನು ಕೇಳಿ ದೇಶವಿದೇಶಗಳಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳನ್ನು ತಿಳಿದುಕೊಳ್ಳುತ್ತಿದ್ದರು. ಅವರನ್ನು ಭೇಟಿಯಾಗುವವರ ಜೊತೆಗೂ ಅನೇಕ ವಿಷಯಗಳನ್ನು ಚರ್ಚಿಸುತ್ತಿದ್ದರು. ಧೂಮಪಾನ ಮತ್ತು ಮದ್ಯವರ್ಜಕರಾಗಿದ್ದರು. ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿದ್ದಾಗಲೂ ಒಂದು ದಿನವೂ ಮದ್ಯಪಾನವಾಗಲಿ, ಒಂದು ಸಿಗರೇಟಾಗಲಿ ಸೇದಲಿಲ್ಲ ಎಂದು ಹೇಳಿಕೊಳ್ಳುತ್ತಿದ್ದರು.
ಅದ್ಭುತವಾದ ಐತಿಹಾಸಿಕ ಚಿತ್ರಗಳನ್ನು ಬಿಟ್ಟರೆ ಬೇರೆ ಯಾವುದೇ ಚಿತ್ರಗಳನ್ನು ಅವರು ನೋಡಲು ಇಷ್ಟಪಡುತ್ತಿರಲಿಲ್ಲ. ರತ್ತು, ಅಂಬೇಡ್ಕರ್ ಅವರನ್ನು ಒಮ್ಮೆ ಪುಸಲಾಯಿಸಿ ದಿಲ್ಲಿಯ ಕನ್ನಾಟ್ ಪ್ಲೇಸ್‌ನಲ್ಲಿದ್ದ ರೀಗಲ್ ಸಿನೆಮಾ ಥಿಯೇಟರ್‌ನಲ್ಲಿ ಹಿಂದಿ ಸಿನೆಮಾ ನೋಡಲು ಕರೆದುಕೊಂಡು ಹೋಗಲು ಯಶಸ್ವಿಯಾದರು.ಸಿನೆಮಾ ಹಾಲ್ ತುಂಬಿದ್ದು, ಇನ್ನೇನು ಚಿತ್ರ ಪ್ರಾರಂಭವಾಗಬೇಕು, ಅಂಬೇಡ್ಕರ್ ಚಡಪಡಿಸುತ್ತಾ, ‘‘ಕೆಲಸ ಇಲ್ಲದೆ ನನ್ನನ್ನು ಕರೆದುಕೊಂಡು ಬಂದು, ನನ್ನ ಸಮಯ ವ್ಯರ್ಥಮಾಡಿದೆ ನೋಡು’’ ಎಂದು ಗೊಣಗತೊಡಗಿದರು. ಪೂರ್ತಿ ಚಿತ್ರ ನೋಡಿದರೆ ಏನೆಲ್ಲ ಕಾದಿದೆಯೋ ಎಂದುಕೊಂಡ ರತ್ತು ಅಂಬೇಡ್ಕರ್ ಅವರನ್ನು ಚಿತ್ರಮಂದಿರದಿಂದ ಹೊರಗೆ ಕರೆದುಕೊಂಡು ಬಂದುಬಿಟ್ಟರು. ಅಲ್ಲಿಂದ ಅವರ ನೆಚ್ಚಿನ ಪುಸ್ತಕಾಲಯಕ್ಕೆ ಹೋದ ಮೇಲೆ ಅವರ ಚಡಪಡಿಕೆ ಉಪಶಮನಗೊಂಡಿತ್ತು.
ವಯಸ್ಸಾದ ದಿನಗಳಲ್ಲೂ ಊಟ ತಿಂಡಿ ನಿರ್ದಿಷ್ಟವಾಗಿ ಇಂಥದ್ದೇ ಇರಬೇಕು, ಭರ್ಜರಿಯಾಗಿ ಮರಾಠಿಗರಂತೆ ಎಣ್ಣೆಯುಕ್ತ ಕಾಯಿಫಲ್ಯಗಳು ಇರಬೇಕು ಎಂಬುದೇನೂ ಇರಲಿಲ್ಲ. ಯಾವಾಗಲೂ ಸರಳವಾದ ಸಾದಾ ಊಟ ತೆಗೆದುಕೊಳ್ಳುತ್ತಿದ್ದರು. ಬಿಳಿ ಅನ್ನ, ತೊಗರಿಬೇಳೆ ಮತ್ತು ಮಸೂರ್ ಬೇಳೆಸಾರನ್ನು ಆಸ್ವಾದಿಸುತ್ತಿದ್ದರು. ಪಕ್ಕಾ ಪಾಕಶಾಸ್ತ್ರಿಯಾಗಿದ್ದ ಅವರು ಕೆಲವೊಮ್ಮೆ ತಾವೇ ರುಚಿರುಚಿಯಾದ ಸಸ್ಯಾಹಾರ ತಯಾರಿಸುತ್ತಿದ್ದರು. ಒಂದೆರಡು ಚಪಾತಿ, ಸ್ವಲ್ಪ ಅನ್ನ, ಬೇಳೆಸಾರು, ಮೊಸರು ಮತ್ತು ಆಯಾ ಋತುಗಳಲ್ಲಿ ದೊರಕುತ್ತಿದ್ದ ತರಕಾರಿ ತಿನ್ನುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ಅಪರೂಪವಾಗಿ ತುಸು ಮಾಂಸ, ಚಿಕನ್, ಇಲ್ಲ ಒಂದೆರಡು ಮೀನುಗಳನ್ನು ತೆಗೆದುಕೊಳ್ಳುತ್ತಿದ್ದರು. ಊಟದ ಜೊತೆಗೆ ತೀರಾ ತಣ್ಣನೆಯ ನೀರನ್ನು, ಇಲ್ಲ ನೀರಿಗೆ ಐಸ್ ಕ್ಯೂಬ್‌ಗಳನ್ನು ಹಾಕಿ ಕುಡಿಯುತ್ತಿದ್ದರು.ಮಧ್ಯಾಹ್ನ ಸಾಮಾನ್ಯವಾಗಿ 1:30ಕ್ಕೆ ಊಟ ಮಾಡುತ್ತಿದ್ದರು. ರಾತ್ರಿ ಊಟ ಮುಗಿದಿದ್ದೆ ಮರುದಿನ ಬೆಳಗ್ಗೆ ಏನು ಮಾಡಬೇಕೆಂದು ಅಡುಗೆಯವನಿಗೆ ಅವರೇ ಹೇಳುತ್ತಿದ್ದರು.
ಥಂಡಿಗಾಳಿ ಅವರಿಗೆ ಹೊಂದುತ್ತಿರಲಿಲ್ಲ. ಆದರೆ ಬೆಳಗಿನ ತಾಪಮಾನ ತಣ್ಣಗಿರಬೇಕಿತ್ತು. ವ್ಯಾಸಂಗ ಮಾಡುವ ಮತ್ತು ಮಲಗುವ ಕೋಣೆಗಳಲ್ಲಿ ಎರಡೆರಡು ‘ಏಸಿ’ಗಳನ್ನು ಹಾಕಿಸಿಕೊಂಡಿದ್ದರು. ಒಂದು ಕೆಟ್ಟುಹೋದರೆ ಮತ್ತೊಂದನ್ನು ಉಪಯೋಗಿಸುತ್ತಿದ್ದರು. ಬ್ರಾಂಕೈಟಿಸ್ ಸಮಸ್ಯೆ ಇದ್ದು, ಶೀತಕಾಲದಲ್ಲಿ ಪದೇಪದೇ ತೊಂದರೆಗೆ ಒಳಗಾಗುತ್ತಿದ್ದರು.
ರೇಡಿಯೋಗ್ರಾಮ್‌ನಲ್ಲಿ ಬೌದ್ಧಮತದ ತತ್ವಗಳಿದ್ದ ರೆಕಾರ್ಡ್ ಗಳನ್ನು ಹಾಕುವಂತೆ ರತ್ತುಗೆ ಹೇಳಿ ಅವುಗಳನ್ನು ಶಾಂತವಾಗಿ ಕೇಳುತ್ತಿದ್ದರು. ‘ಹಿಸ್ ಮಾಸ್ಟರ್ಸ್ ವಾಯ್ಸ್’ ಕಂಪೆನಿಯಲ್ಲಿ ರೆಕಾರ್ಡ್ ಮಾಡಿಸಿ, ರೆಕಾರ್ಡ್‌ಗಳ ಮೇಲೆ ಅವರ ಹೆಸರನ್ನು ಬರೆಸಿದ್ದರು. ಅವರ ಹೆಸರಿದ್ದ ನಾಲ್ಕು ರೆಕಾರ್ಡ್‌ಗಳ ಜೊತೆಗೆ 200ಕ್ಕೂ ಹೆಚ್ಚು ಗ್ರಾಮಫೋನ್ ರೆಕಾರ್ಡ್‌ಗಳಿದ್ದು ಬಿಡುವಾದಾಗ ಹಾಕಿ ಕೇಳಿಸಿಕೊಳ್ಳುತ್ತಿದ್ದರು. ತಮ್ಮ ಫೋಟೋಗಳನ್ನು ತೆಗೆದುಕೊಳ್ಳಲು ಕೆಲವೊಮ್ಮೆ ಛಾಯಾಚಿತ್ರಗಾರರಿಗೆ ಅನುಮತಿ ನೀಡುತ್ತಿದ್ದರು. ಅಂಬೇಡ್ಕರ್ ಅವರು ಹೊರಗೆ ಕುಳಿತಿದ್ದಾಗ ಛಾಯಾಚಿತ್ರಗಾರರು ಅವರಿಗೆ ಗೊತ್ತಿಲ್ಲದೆ ವಿಶೇಷವಾಗಿ ಬೆಳಗ್ಗೆ, ಇಲ್ಲ ಇಳಿಹೊತ್ತಿನಲ್ಲಿ ಚಿತ್ರಗಳನ್ನು ಚಕ್ ಚಕ್ ಎಂದು ತೆಗೆದುಬಿಡುತ್ತಿದ್ದರು. ಸ್ತಾನದ ಕೊಠಡಿಯಲ್ಲಿ ಮುಖಕ್ಷೌರ, ಸ್ನಾನ ಮುಗಿಸಿ ಕನ್ನಡಿ ಮುಂದೆ ನಿಂತುಕೊಂಡು ತಲೆ ಮೇಲಿದ್ದ ಅಲ್ಪಸ್ವಲ್ಪ ಕೂದಲನ್ನು ಬಾಚಣಿಗೆಯಿಂದ ಬಾಚಿಕೊಳ್ಳುತ್ತಿದ್ದರು.
ಒಂದು ಬೇಸಿಗೆ ಸಂಜೆ ಗೌನು ತೊಟ್ಟು ಗುಂಡಿಹಾಕಿಕೊಳ್ಳದೆ ಅದನ್ನು ಸೊಂಟದ ಪಟ್ಟಿಯಿಂದ ಬಿಗಿದುಕೊಂಡು ಒಳಚಡ್ಡಿಯ ಬದಲಿಗೆ ತೀರಾ ದೊಡ್ಡ ಅಳತೆಯ ಲಂಗೋಟಿ ಕಟ್ಟಿಕೊಂಡು ಸಾಮಾನ್ಯವಲ್ಲದ ಉಡುಪಿನಲ್ಲಿದ್ದ ಅವರನ್ನು ರತ್ತು ನೋಡಿ, ‘‘ಸಾಹೇಬರೇ, ಏನಿದು ಗೌನಿಗೆ ಗುಂಡಿ ಹಾಕಿಲ್ಲ, ಲಂಗೋಟಿಯ ಬಾಲ ಸಡಿಲವಾಗಿ ನೆಲವೆಲ್ಲ ಗುಡಿಸುತ್ತಿದೆಯಲ್ಲ?’’ ಎಂದರು ನಗುತ್ತ. ಅಂಬೇಡ್ಕರ್, ‘‘ಹೌದಾ! ಗೇಲಿ ಮಾಡ್ತಿದ್ದಿಯಾ ಏನು?’’ಎಂದು ಉದ್ಗರಿಸಿ, ಕೆಳಗೆ ನೋಡಿಕೊಂಡು, ‘‘ಹೇಗಯ್ಯ ಇದನ್ನೆಲ್ಲ ಗಮನಿಸ್ತೀಯ ನೀನು?’’ಎಂದರು. ಮತ್ತೆ ರತ್ತು ಗುಲಾಬಿ ಬಣ್ಣದ ಲಂಗೋಟಿ ಬಗ್ಗೆ ಹೇಳಿದಾಗ ಅವರ ತುಟಿಯ ಮೇಲೆ ದೊಡ್ಡ ನಗು ಕಾಣಿಸಿಕೊಂಡು, ‘‘ನಿನಗೆ ಗಿಡುಗನ ಕಣ್ಣಿರುವಂತಿದೆ. ಕೆಲವೊಮ್ಮೆ ಪ್ಯಾಂಟ್ ಹಾಕಿಕೊಳ್ಳುವುದನ್ನೂ ಮರೆತುಬಿಡುತ್ತೇನೆ’’ ಎಂದು ನಕ್ಕರು.
ಹುಟ್ಟು ಹಬ್ಬ, ಇನ್ನಿತರ ಸಂದರ್ಭಗಳಲ್ಲಿ ಅವರ ಮನಸ್ಸು ಉಲ್ಲಾಸವಾಗಿರುವಾಗ ಅಪರೂಪಕ್ಕೆ ಹರ್ಷೋದ್ಗಾರ ಮಾಡುತ್ತಿರುವ ಜನರ ಗುಂಪಿನ ಮಧ್ಯ ಲವಲವಿಕೆಯಿಂದ ಓಡಾಡುತ್ತ ಮುಕ್ತವಾಗಿ ಜನರ ಜೊತೆಗೆ ಬೆರೆತು ದೊಡ್ಡ ಮೇಜಿನ ಮುಂದಿದ್ದ ಪುಟ್ಟ ಮೇಜಿನ ಬಳಿ ಕುಳಿತುಕೊಂಡು ಅಭಿಮಾನಿಗಳಿಂದ ಅಭಿನಂದನೆಗಳು, ಹಾರೈಕೆಗಳು ಮತ್ತು ಪುಷ್ಪಗುಚ್ಚಗಳನ್ನು ಸ್ವೀಕರಿಸುತ್ತಿದ್ದರು. ಅವರ ರೇಷ್ಮೆ ಮತ್ತು ಕಾಟನ್ ಸೂಟುಗಳಲ್ಲಿ ಪತ್ರಗಳ ಕಟ್ಟುಗಳನ್ನು ಇಡುವಷ್ಟು ದೊಡ್ಡದೊಡ್ಡ ಜೇಬುಗಳಿರುತ್ತಿದ್ದವು.
ಅಂಬೇಡ್ಕರ್ ಅವರಿಗೆ ಒಳ್ಳೆಯ ಚುರುಕು ಬುದ್ಧಿಯ ಹಾಸ್ಯಪ್ರಜ್ಞೆ ಇದ್ದು, ಆಗಾಗ ದೇಶಿ ಹಾಸ್ಯ ನುಡಿಗಟ್ಟುಗಳನ್ನು ತುಂಬಾ ಆಸಕ್ತಿಯಿಂದ ನಗುನಗುತ್ತಾ ಹೇಳುತ್ತಿದ್ದರು. ಸಮಯೋಚಿತವಾಗಿ ಹಾಸ್ಯ ಮಾಡುವುದರಲ್ಲಿ ಪ್ರವೀಣರಾಗಿದ್ದರು. ಒಮ್ಮೊಮ್ಮೆ ತಮ್ಮದೇ ವಿಚಿತ್ರ ರೀತಿಯಲ್ಲಿ ಅಣಕಿಸಿ ಗದ್ದಲ ಮಾಡುತ್ತಾ ಆರೋಗ್ಯಕರ ವಾತಾವರಣ ಸೃಷ್ಟಿ ಮಾಡುತ್ತಿದ್ದರು. ಆರಾಮಾಗಿದ್ದಾಗ, ತಮ್ಮ ಇಷ್ಟಾನುಸಾರ ಭೇಟಿಯಾಗಲು ಬಂದು ಬಂಗಲೆ ಹೊರಗೆ ಕಾಯುತ್ತಿದ್ದವರನ್ನು ಕಾಣಲು ಮನೆಯಿಂದ ಹೊರಕ್ಕೆ ಬರುತ್ತಿದ್ದರು. ಅದಕ್ಕೆ ಮುಂಚೆ ಅವರ ಸೇವಕರು ಆರಾಮ ಕುರ್ಚಿಯ ಮೇಲಿನ ಕುಶನ್ ಸರಿಪಡಿಸಿ ಪಾದಗಳನ್ನು ಹೂರಲು ಸಣ್ಣಪೀಠ ಇಟ್ಟು ಅಂಬೇಡ್ಕರ್ ಭೇಟಿಗೆ ಸಿದ್ಧವಾಗಿದ್ದಾರೆ ಎಂದು ಘೋಷಿಸುತ್ತಿದ್ದರು. ಕಾಯುತ್ತಿದ್ದ ಜನರು ಒಬ್ಬರನ್ನೊಬ್ಬರು ನೋಡಿಕೊಂಡು ಪಿಸು ಮಾತಿನಲ್ಲಿ ಮಾತನಾಡಿಕೊಳ್ಳುತ್ತಿದ್ದರು.
ಮನೆಯ ಒಳಗೆ ಅವರು ಅಂಗಿ ಮತ್ತು ಲುಂಗಿ ತೊಟ್ಟು ನಲಿವಿನ ನಗೆಯನ್ನು ಬೀರುತ್ತಿದ್ದರು. ಕೆಲವು ಬಾರಿ ಬಿಗಿ ಪೈಜಾಮ, ಕಸೂತಿ ಹಾಕಿದ ಕುರ್ತಾ ಹಾಕಿಕೊಳ್ಳುತ್ತಿದ್ದರು. ಚಳಿಗಾಲದಲ್ಲಿ ಕೊಲವೊಮ್ಮೆ ಟೋಪಿ ಹಾಕಿಕೊಂಡು ಅದರ ಸುತ್ತ ಮಫ್ಲರ್ ಸುತ್ತಿಕೊಳ್ಳುತ್ತಿದ್ದರು. ಅದರ ಎರಡೂ ತುದಿಗಳು ಕಿವಿಗಳ ಮೇಲೆ ಜೋತಾಡುತ್ತಾ ಪಠಾಣನಂತೆ ಕಾಣಿಸುತ್ತಿದ್ದರು. ರತ್ತು ಭುಜದ ಮೇಲೆ ಕೈ ಇಟ್ಟುಕೊಂಡು ಹೊರಕ್ಕೆ ಬಂದು ವರಾಂಡಾದಲ್ಲಿ ಕ್ಷಣಹೊತ್ತು ನಿಂತುಕೊಂಡು ತಮ್ಮನ್ನು ಕಾಣಲು ಬಂದವರ ನಮಸ್ಕಾರಗಳನ್ನು ಸ್ವೀಕರಿಸುತ್ತಾ, ನಗೆಗೀಡಾಗುತ್ತಿದ್ದರು. ಅಂದರೆ ಅವರ ವಿಚಿತ್ರ ಉಡುಪನ್ನು ನೋಡಿ ಯಾರಾದರೂ ನಕ್ಕರೆ ತಕ್ಷಣವೇ, ‘‘ನೀವು ನನ್ನ ಉಡುಪಿನಲ್ಲಿ ತಪ್ಪು ಕಂಡುಹಿಡಿಯಲು ಬಂದಿದ್ದೀರಿ ಅನ್ನಿ?’’ ಎನ್ನುತ್ತಿದ್ದರು.
ಅಂಬೇಡ್ಕರ್ ಎಷ್ಟು ಹಾಸ್ಯ ಮತ್ತು ಕುಚೋದ್ಯದಿಂದ ಕೂಡಿದ್ದರೋ ಅದಕ್ಕಿಂತ ನಾಲ್ಕಾರು ಪಟ್ಟು ಕೋಪಿಷ್ಟರಾಗಿದ್ದರು. ಅವರಿಗೆ ವಿಪರೀತ, ಭಯಂಕರ ಕೋಪ ಬರುತ್ತಿತ್ತು. ಮೇಜಿನ ಮೇಲಿರಿಸಿದ್ದ ಅವರ ಪುಸ್ತಕಗಳು, ಟೈಪ್ ಮಾಡಿದ ಲೇಖನಗಳು, ಪೆನ್ನು, ಪೆನ್ಸಿಲ್ ಮತ್ತಿತರ ಯಾವುದೇ ವಸ್ತುಗಳು ಅವರು ಇಟ್ಟ ಕ್ರಮದಲ್ಲಿಯೇ ಇರಬೇಕು, ಒಂದು ವೇಳೆ ಅವು ತುಸು ಸರಿದಿದ್ದರೂ ಸಾಕು, ಅವರಿಗೆ ಅಸಾಧ್ಯ ಕೋಪ ಬರುತ್ತಿತ್ತು. ಕೋಪ ಬಂದಾಗ ಮುಖ ಉರಿಗೆಂಪಾಗಿ ಕಿರಿಚಾಡಿ ಮನೆಯಲ್ಲಿರುವವರು ಮತ್ತು ಎದುರು ಬಂದವರ ಮೇಲೆಲ್ಲ ಹರಿಹಾಯುತ್ತಿದ್ದರು. ಸಾಕಷ್ಟು ರಂಪ ನಡೆಯುತ್ತಿದ್ದು, ಮನೆಯಲ್ಲಿದ್ದವರೆಲ್ಲ ಗಾಬರಿಯಿಂದ ಓಡಿಹೋಗಿ ಬಚ್ಚಿಟ್ಟುಕೊಳ್ಳುತ್ತಿದ್ದರು. ಅವರ ಕೋಪ ಉಪಶಮನಗೊಳ್ಳಲು ಬಹಳಷ್ಟು ಸಮಯ ಹಿಡಿಯುತ್ತಿತ್ತು.
ಕೆಲವೊಮ್ಮೆ ಅವರಿಗೆ ಯಾತಕ್ಕಾಗಿ ಕೋಪ ಬಂದಿದೆ ಎನ್ನುವುದು ತಿಳಿಯದೇ ಮನೆಯಲ್ಲಿರುವವರಲ್ಲಿ ಗಲಿಬಲಿ, ಗುಸುಗುಸು ಗೊಂದಲ ಉಂಟಾಗುತ್ತಿತ್ತು. ಇದನ್ನರಿತ ಎಲ್ಲರೂ ಅವರಿಗೆ ಕೋಪ ಬರದಂತೆ ಎಲ್ಲಾ ರೀತಿಯಲ್ಲೂ ಎಚ್ಚರಿಕೆ ವಹಿಸುತ್ತಿದ್ದರು. ಕೋಪ ಬಂದಾಗ ಸೇವಕ ಒಂದು ಕಪ್ ಚಹ, ಒಂದು ಲೋಟ ನೀರಿನೊಂದಿಗೆ ಅವರಿರುವ ಕೊಠಡಿ ಒಳಗೆ ಪ್ರವೇಶಿಸಿ ಮೇಜಿನ ಮೇಲಿಟ್ಟು ಹೊರಕ್ಕೆ ಬಂದು ಸಾಹೇಬರು ಕುಡಿದರೇ ಇಲ್ಲವೇ ಎಂದು ಇಣುಕಿ ನೋಡುತ್ತಿದ್ದನು. ಆದರೆ ಕೆಲವೊಮ್ಮೆ ಕೋಪ ಉಪಶಮನಗೊಳ್ಳದೆ ಸೇವಕರ ಪ್ರಯತ್ನಗಳು ವಿಫಲವಾಗಿ ಔಷಧಿಗಳನ್ನು ತೆಗೆದುಕೊಳ್ಳಲು ನಿರಾಕರಿಸಿದಾಗ ನಿಜವಾದ ಆತಂಕದ ಕ್ಷಣಗಳು ಎದುರಾಗುತ್ತಿದ್ದವು.ಆಗ ಸೇವಕ ಅಥವಾ ಅಡುಗೆಯವನು ರತ್ತು ಎಲ್ಲಿದ್ದರೂ ಹುಡುಕಿಕೊಂಡು ಬಂದು ವಿಷಯ ಮುಟ್ಟಿಸುತ್ತಿದ್ದರು. ರತ್ತು ಕೂಡಲೇ ಧಾವಿಸಿ ಬಂದು ಸಾಹೇಬರ ಕೊಠಡಿ ಹೊಕ್ಕು ಒಂದು ಸೆಲ್ಯೂಟ್ ಹೊಡೆದು ಅವರ ಎದುರಿಗೆ ನಿಂತುಕೊಳ್ಳುತ್ತಿದ್ದರು.
ರತ್ತು ಅವರನ್ನು ನೋಡಿದ್ದೇ ಸಾಹೇಬರು ನಿಂತಿದ್ದರೆ ಕುರ್ಚಿ ಮೇಲೆ ಕುಳಿತುಕೊಳ್ಳುತ್ತಿದ್ದರು. ಮೊದಲೇ ಕುರ್ಚಿಮೇಲೆ ಕುಳಿತಿದ್ದರೆ ರತ್ತು ಏನೂ ಮಾತನಾಡದೆ ಅವರ ಪಾದ ಸ್ಪರ್ಶ ಮಾಡಿ, ಅವರ ಪಾದಗಳಿಂದ ತಲೆಯವರೆಗೂ ನೀವಿ ಸಮಾಧಾನ ಪಡಿಸುತ್ತಿದ್ದರು. ಆಮೇಲೆ ರತ್ತು ಸೇವಕನಿಗೆ ಚಹ ತರುವಂತೆ ಹೇಳಿ ಚಹ ತಂದಾಗ ಕುಡಿಯುತ್ತಿದ್ದರು. ರತ್ತು ನಿಧಾನವಾಗಿ ವಿಷಯ ತೆಗೆದಾಗ ಸಾಹೇಬರು ಪ್ರತಿಕ್ರಿಯೆ ನೀಡುತ್ತಿದ್ದರು. ಆದರೆ ರತ್ತು ಮಾಡುತ್ತಿದ್ದ ಈ ತಂತ್ರಗಳೆಲ್ಲ ಎಲ್ಲಾ ಸಮಯದಲ್ಲೂ ಫಲಿಸುತ್ತಿರಲಿಲ್ಲ. ಆಗ ಅಂಬೇಡ್ಕರ್, ‘‘ನನ್ನ ಕೊಠಡಿಗೆ, ನನ್ನ ಮೇಜಿನ ಹತ್ತಿರ ಯಾರೂ ಬರಬಾರದೆಂದು ಸಾರಿ ಸಾರಿ ಹೇಳಿದರೂ, ಇಲ್ಲಿ ಬಂದು ನನ್ನ ಮೇಜನ್ನು ಅಸ್ತವ್ಯಸ್ತಗೊಳಿಸಿದವರು ಯಾರು ಅಂತ ಪತ್ತೆ ಮಾಡು’’ ಎನ್ನುತ್ತಿದ್ದರು. ಶಾಂತವಾದ ಮೇಲೆ ಒಂದು ಕಪ್ ಚಹ ಕುಡಿದು ಎಲ್ಲವನ್ನೂ ಮರೆತು ತಮ್ಮ ಓದು ಬರಹಗಳಲ್ಲಿ ಮಗ್ನರಾಗಿಬಿಡುತ್ತಿದ್ದರು.
ಕೆಲವೊಮ್ಮೆ ತಮ್ಮ ಮನೆಯವರೊಂದಿಗೆ ಸಿಟ್ಟು ಮಾಡಿಕೊಂಡಾಗ ಆಹಾರ, ಔಷಧಿಗಳನ್ನು ತ್ಯಜಿಸಿ, ಯಾರ ಜೊತೆಗೂ ಮಾತನಾಡದೆ ಸುಮ್ಮನೆ ಇದ್ದುಬಿಡುತ್ತಿದ್ದರು. ಕೆಲವೊಂದು ಸಲ ತಾನು ಮನುಷ್ಯರ ಸಹವಾಸಕ್ಕೆ ತಕ್ಕ ವ್ಯಕ್ತಿಯಲ್ಲ ಎಂದು ತಾವೇ ಗೊಣಗಿಕೊಳ್ಳುತ್ತಿದ್ದರು. ಆದರೆ ಓದು ಬರಹಗಳಲ್ಲಿ ತಲ್ಲೀನರಾದರೆಂದರೆ ಯಾರೊಂದಿಗೂ ಸಿಟ್ಟು ಮಾಡಿಕೊಳ್ಳಲು ಅವರಿಗೆ ಸಮಯ ಇರುತ್ತಿರಲಿಲ್ಲ. ಎಲ್ಲವನ್ನೂ ಸಂಪೂರ್ಣವಾಗಿ ಮರೆತುಹೋಗಿ ಏನೂ ನಡೆದೇ ಇಲ್ಲ ಎನ್ನುವಂತೆ ಸಾಮಾನ್ಯವಾಗಿಬಿಡುತ್ತಿದ್ದರು. ಸದಾ ಕಾಲ ಸಿಟ್ಟು ಮತ್ತು ನಿಷ್ಠುರವಾಗಿರುವ ವ್ಯಕ್ತಿ ಅಂಬೇಡ್ಕರ್ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಇದಕ್ಕೆ ಉತ್ತರವಾಗಿ ಅಂಬೇಡ್ಕರ್ ಒಮ್ಮೆ ಹೀಗೆ ಪ್ರತಿಕ್ರಿಯೆ ನೀಡಿದ್ದರು: ‘‘ಕೋಪದಲ್ಲಿ ಎರಡು ವಿಧಗಳಿವೆ, ಒಂದು ದುಷ್ಟತನದ್ದು, ಮತ್ತೊಂದು ಪ್ರೀತಿಯದ್ದು. ನನ್ನದು ಎರಡನೇಯದು’’.
***
ಕೆಲವೊಮ್ಮೆ ಹಾಸಿಗೆಯಲ್ಲಿ ಮಲಗಿರುವಾಗಲೇ ‘ಹಿಂದೂಸ್ತಾನ್ ಟೈಮ್ಸ್’, ‘ಟೈಮ್ಸ್ ಆಫ್ ಇಂಡಿಯಾ’ ಮತ್ತು ‘ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಗಳನ್ನು ಅವರಿಗೆ ಕೊಡಬೇಕಾಗಿತ್ತು. ಎದ್ದು ಬಂದು ವರಾಂಡಾದಲ್ಲಿ ಕುಳಿತುಕೊಂಡು ಪತ್ರಿಕೆಗಳನ್ನು ಓದುವಾಗ ಅವರಿಗೆ ಬಾಲ್ ಪಾಯಿಂಟ್ ಪೆನ್ಸಿಲ್ ಕೊಡಬೇಕಾಗಿತ್ತು. ಮುಖ್ಯವಾದ ವಿಷಯಗಳನ್ನು ಅವರು ಗುರುತು ಹಾಕಿಕೊಂಡು ನಂತರ ಅವುಗಳನ್ನು ಕತ್ತರಿಸಿ ದಪ್ಪ ಪೇಪರಿನ ಮೇಲೆ ಅಂಟಿಸಿ ರೆಫೆರೆನ್ಸ್‌ಗಾಗಿ ತಮ್ಮ ಸಂಗ್ರಹಕ್ಕೆ ಸೇರಿಸುತ್ತಿದ್ದರು. ಕನಿಷ್ಠ ಒಂದು ಗಂಟೆಯಾದರೂ ಪತ್ರಿಕೆಗಳನ್ನು ಓದುತ್ತಿದ್ದರು. ಹೊರಮನೆಯಲ್ಲಿ ವಾಸಿಸುತ್ತಿದ್ದ ಅಡಿಗೆಯವ ಸುಧಾಮ, ಚೌಕಿದಾರ ರಾಮಚರಣ್, ಆತನ ಪತ್ನಿ ಮತ್ತು ನಾಲ್ಕು ಯುವಕರಿಗೆ ಪುರಸೊತ್ತಿಲ್ಲದಷ್ಟು ಕೆಲಸವಿರುತ್ತಿತ್ತು. ರತ್ತು ಬೆಳಗ್ಗೆ ಸಾಹೇಬರ ಕೊಠಡಿ ಒಳಕ್ಕೆ ಇಣುಕಿನೋಡಿ ‘ಗುಡ್ ಮಾರ್ನಿಂಗ್’ ಎನ್ನುವುದಕ್ಕೆ ಮುಂಚೆಯೇ ಸಾಹೇಬರೇ ರತ್ತುಗೆ, ‘ಗುಡ್ ಮಾರ್ನಿಂಗ್ ರತ್ತೂ’ ಎಂದುಬಿಡುತ್ತಿದ್ದರು.
ಮಹಾನ್ ವ್ಯಕ್ತಿಗಳೆಂದರೆ ಅವರ ಕೆಲಸಕಾರ್ಯಗಳು, ಚಿಂತನೆ-ಆಲೋಚನೆಗಳು, ಹೋರಾಟಗಳು ಎಂದೂ ನಿಂತಲ್ಲಿ ನಿಲ್ಲುವುದಿಲ್ಲ. ಬದಲಾಗಿ ಅವು ಸದಾ ಹರಿಯುವ ಝರಿಗಳಂತೆ ಸಾಗುತ್ತಿರುತ್ತವೆ. ಕೆಲವು ಸಂದರ್ಭಗಳಲ್ಲಿ ಸಾಹೇಬರನ್ನು ಕಾಣಲೆಂದು ಮಿತ್ರರು ಬಂದಾಗ, ವೈದ್ಯರ ಸಲಹೆಗಳನ್ನು ಮರೆತುಹೋಗಿ ಗಂಟೆಗಟ್ಟಲೇ ಸಂಭಾಷಣೆಯಲ್ಲಿ ತೊಡಗಿಕೊಳ್ಳುತ್ತಿದ್ದರು. ಅವರ ಅಸ್ವಸ್ಥ ಶರೀರದ ಬಗ್ಗೆ ಎಳ್ಳಷ್ಟು ಆಲೋಚಿಸುತ್ತಿರಲಿಲ್ಲ. ಇದೇ ದಿನಗಳಲ್ಲಿ ತಮ್ಮ ಕಣ್ಣಿನ ದೃಷ್ಟಿ ಹೋಗಿಬಿಡುತ್ತದೆ ಎಂದು ಮಗುವಿನಂತೆ ಗೋಳೋ ಎಂದು ಅತ್ತುಬಿಡುತ್ತಿದ್ದರು. ಹಲವು ಬಾರಿ ಕಣ್ಣುಗಳನ್ನು ಚೆಕ್‌ಅಫ್ ಮಾಡಿಸಿ ಕನ್ನಡಕಗಳನ್ನು ಬದಲಾಯಿಸಿದರೂ ಏನೂ ಸುಧಾರಣೆ ಕಾಣದೇ, ನನ್ನ ದೃಷ್ಟಿ ಹೋಗಿಬಿಟ್ಟರೆ ಓದು ಬರಹ ನಿಂತುಹೋಗುತ್ತದೆ, ಆಗ ಬದುಕಿದ್ದು ಪ್ರಯೋಜನ ಏನು? ಎಂದು ಅತ್ತು ಗೋಳಾಡುತ್ತಿದ್ದರು.
ಅವರು ಓದು ಬರಹದಲ್ಲಿ ನಿರತರಾಗಿದ್ದಾಗ ಮೊದಲೇ ತಿಳಿಸದೇ ಯಾರೇ ಆಗಲಿ, ಎಷ್ಟೇ ದೂರದಿಂದ ಬಂದಿದ್ದರೂ ಅವರನ್ನು ಭೇಟಿಯಾಗುತ್ತಿರಲಿಲ್ಲ. ಕೆಲವೊಮ್ಮ್ಮೆ ಊಟವೂ ಮಾಡುತ್ತಿರಲಿಲ್ಲ. ಬಹಳ ಹೊತ್ತಿನಿಂದ ಕಾಯುತ್ತಿದ್ದಾರೆ ಎಂದು ಹೇಳಿದಾಗ ಬಂದವರ ಕಡೆಗೆ ಒಮ್ಮೆ ನೋಡಿ ಮತ್ತೆ ತಮ್ಮ ಕೆಲಸದಲ್ಲಿ ಮಗ್ನರಾಗಿಬಿಡುತ್ತಿದ್ದರು. ಬಂದಿದ್ದವರು ಮುಜುಗರಪಟ್ಟುಕೊಂಡು ಅವರ ಏಕಾಗ್ರತೆ ಮತ್ತು ಗಂಭೀರ ಚಿಂತನೆಗೆ ಅಡ್ಡಿಯುಂಟು ಮಾಡುವುದು ಸರಿಯಲ್ಲ ಎಂದುಕೊಂಡು, ‘ಬಾಬಾಸಾಹೇಬ್, ಅಂಬೇಡ್ಕರ್ ಜಿಂದಾಬಾದ್’ ಎಂದು ಎರಡು ಮೂರು ಸಲ ಘೋಷಣೆ ಕೂಗುತ್ತಾ ಹೊರಟುಹೋಗುತ್ತಿದ್ದರು.