ಬಂಗಾಲದಲ್ಲಿ ನಡೆಯುತ್ತಿರುವುದೆಲ್ಲವೂ ಯಾರ ಲಾಭಕ್ಕಾಗಿ?

ವಕ್ಫ್ ಮಸೂದೆಯ ನಂತರ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಘಟನೆಯ ವೀಡಿಯೊ ಕೂಡ ಅದು ಗಲಭೆ ಎಂದು ಸ್ಪಷ್ಟವಾಗಿ ಹೇಳುತ್ತದೆ.
ಅಲ್ಲಿನ ಪೊಲೀಸರು ಅದನ್ನು ಮೊದಲೇ ಊಹಿಸಲು ವಿಫಲರಾದರು ಮತ್ತು ಘಟನೆಯ ಸಮಯದಲ್ಲಿಯೂ ವಿಫಲರಾಗಿದ್ದಾರೆ. ಬಿಹಾರದಿಂದ ಹಿಂದೂಗಳನ್ನು ಮುಸ್ಲಿಮ್ ಉಡುಪಿನಲ್ಲಿ ಕರೆತಂದು ಹಿಂಸಾಚಾರ ನಡೆಸಿದ್ದಾರೆ ಎಂದು ಟಿಎಂಸಿ ಗಂಭೀರ ಆರೋಪ ಮಾಡಿದೆ.
ಪಶ್ಚಿಮ ಬಂಗಾಳ ಪೊಲೀಸರು 200ಕ್ಕೂ ಹೆಚ್ಚು ಜನರನ್ನು ಬಂಧಿಸಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಅವರಲ್ಲಿ ಹೊರ ರಾಜ್ಯದವರು ಇದ್ದಾರೆಯೆ?
ಉತ್ತರ ಪ್ರದೇಶದ ಕಾಸ್ಗಂಜ್‌ನಲ್ಲಿ ಒಬ್ಬ ಹುಡುಗಿ ಭಾವಿ ಪತಿಯೊಂದಿಗೆ ಹೊರಗೆ ಹೋದಾಗ ಎಂಟು ಹುಡುಗರು ಅವಳ ಮೇಲೆ ಅತ್ಯಾಚಾರ ಮಾಡುತ್ತಾರೆ. ಆರೋಪಿಗಳಲ್ಲಿ ಒಬ್ಬ ಬಿಜೆಪಿ ನಾಯಕ ಅಖಿಲೇಶ್ ಪ್ರತಾಪ್ ಸಿಂಗ್ ಎಂದು ಹೇಳಲಾಗಿದೆ. ಈ ಘಟನೆ ಸಂಬಂಧ ಆದಿತ್ಯನಾಥ್ ಸರಕಾರದ ವಿರುದ್ಧ ಯಾರಾದರೂ ಕಾನೂನು ದಾವೆ ಹೂಡಿದ್ದಾರೆಯೇ?
ಪ್ರಧಾನಿಯವರ ಕ್ಷೇತ್ರದಲ್ಲಿ 19 ವರ್ಷದ ಹುಡುಗಿಯ ಮೇಲೆ 23 ಹುಡುಗರು 6 ದಿನಗಳ ಕಾಲ ಅತ್ಯಾಚಾರ ಮಾಡಿದ್ದಾರೆಂದು ಯಾರೂ ಹೇಳಲಿಲ್ಲ. ಈ ಘಟನೆಯಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಇಬ್ಬರೂ ಭಾಗಿಯಾಗಿದ್ದಾರೆ.
ಗ್ರೇಟರ್ ನೊಯ್ಡಾದಲ್ಲಿ ಪೊಲೀಸರು ಬಿ.ಟೆಕ್ ವಿದ್ಯಾರ್ಥಿಯೊಬ್ಬನನ್ನು ಅವನ ಮನೆಯಿಂದ ಕರೆದೊಯ್ದು ಕಾಲಿಗೆ ಗುಂಡು ಹಾರಿಸಿದರು. ಈ ಎನ್‌ಕೌಂಟರ್ ನಕಲಿ ಎಂದು ತಿಳಿದುಬಂದಿದೆ ಮತ್ತು ನ್ಯಾಯಾಲಯ 12 ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿದೆ.
ಬಿಜೆಪಿ ಶಾಸಕ ಗೋಲು ಶುಕ್ಲಾ ಅವರ ಪುತ್ರ ರುದ್ರಾಕ್ಷ ಮಧ್ಯರಾತ್ರಿ ದೇವಸ್ಥಾನಕ್ಕೆ ಹೋಗಿ ಬಾಗಿಲು ತೆರೆಯಲು ನಿರಾಕರಿಸಿದಾಗ ಅರ್ಚಕರನ್ನು ಥಳಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಜನವರಿಯಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕ ಅಜಿತ್‌ಪಾಲ್ ಸಿಂಗ್ ಚೌಹಾಣ್ ವಿರುದ್ಧ ಅದೇ ಪಕ್ಷದ ನಾಯಕಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊರಿಸಲಾಗಿತ್ತು. ಟಿಕೆಟ್ ನೀಡುವುದಾಗಿ ಭರವಸೆ ನೀಡಿ, ಆಕೆಯ ಮೇಲೆ ಅತ್ಯಾಚಾರ ಎಸಗಿ, ವೀಡಿಯೊ ಮಾಡಿದ್ದಲ್ಲದೆ, ಆಕೆಯ ಕುಟುಂಬದಿಂದ ಹಣ ಸುಲಿಗೆ ಮಾಡಿದ್ದಾರೆ ಮತ್ತು ಆಕೆಯ ಗಂಡನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.
ಬಿಜೆಪಿ ರಾಜ್ಯಗಳಲ್ಲಿನ ಅಥವಾ ಬಿಜೆಪಿಗೆ ಸಂಬಂಧಿಸಿದ ಇಂಥ ಯಾವುವೂ ಹೆಚ್ಚು ದೊಡ್ಡ ಸುದ್ದಿಯಾಗುವುದೇ ಇಲ್ಲ. ಬಿಜೆಪಿ ತನಗೆ ಬೇಕಾದ ಯಾವುದೇ ವಿಷಯವನ್ನು ರಾಷ್ಟ್ರೀಯ ಚರ್ಚೆಯ ವಿಷಯವಾಗಿಸುತ್ತದೆ. ಮಡಿಲ ಮೀಡಿಯಾ ವಾರಗಟ್ಟಲೆ ಚರ್ಚಿಸಿ, ಅದನ್ನು ಸತ್ಯವೆಂದು ಬಿಂಬಿಸಲು ನೋಡುತ್ತದೆ. ಆದರೆ ಬಿಜೆಪಿ ತನ್ನೆಲ್ಲ ತಪ್ಪುಗಳನ್ನು, ವೈಫಲ್ಯಗಳನ್ನು ಅನಾಯಾಸವಾಗಿ ಮರೆಮಾಚಬಲ್ಲದು. ಅದನ್ನು ತನ್ನ ವಿರುದ್ಧ ಪಿತೂರಿ ಎಂದು ಬಹಳ ದೊಡ್ಡದಾಗಿ ಗದ್ದಲ ಎಬ್ಬಿಸಬಹುದು.
ತನ್ನ ಸರಕಾರವಿರುವ ರಾಜ್ಯಗಳಲ್ಲಿ ಏನೇ ನಡೆದರೂ ಅದನ್ನು ಅನಾಯಾಸವಾಗಿ ಬದಿಗೆ ಸರಿಸಬಲ್ಲ ಬಿಜೆಪಿ, ಪಶ್ಚಿಮ ಬಂಗಾಳದಲ್ಲೂ ಅದನ್ನೇ ಮಾಡಬಲ್ಲದೆ?
ಮಡಿಲ ಮೀಡಿಯಾಗಳು ಬಿಜೆಪಿ ಸರಕಾರಗಳ ಬಗ್ಗೆ ಮೌನವಾಗಿರುತ್ತವೆ. ಬಿಜೆಪಿಗೆ ಲಾಭವಾಗುವಂತೆ ಮುಸ್ಲಿಮರ ವಿರುದ್ಧ ಧ್ರುವೀಕರಣಗೊಳ್ಳುವ ಇಂತಹ ವಿಷಯಗಳ ಕುರಿತು ವಾರ, ತಿಂಗಳುಗಳವರೆಗೆ ಚರ್ಚೆ ನಡೆಸುತ್ತವೆ.
ಗಲಭೆಗಳು ಬಂಗಾಳದಲ್ಲಾಗಲಿ, ಉತ್ತರ ಪ್ರದೇಶದಲ್ಲಾಗಲಿ ಅಥವಾ ಮಹಾರಾಷ್ಟ್ರದಲ್ಲಾಗಲಿ, ಆದರೆ ಗಲಭೆಕೋರರ ನಿರ್ದಿಷ್ಟ ಗುಂಪನ್ನು ಬೆಂಬಲಿಸುವವರು ಯಾರು ಎಂಬುದನ್ನು ಹೇಳಬೇಕಾಗಿಲ್ಲ.
ಬಂಗಾಳದ ಯಾವುದೇ ಘಟನೆಯನ್ನು ರಾಷ್ಟ್ರಮಟ್ಟದ ಸುದ್ದಿ ಮಾಡದೇ ಮಡಿಲ ಮೀಡಿಯಾಗಳಿಗೆ ಸಮಾಧಾನವಿರುವುದಿಲ್ಲ.
2019ರಲ್ಲಿ ಮುರ್ಷಿದಾಬಾದ್‌ನಲ್ಲಿ ಬಂಧು ಪ್ರಕಾಶ್ ಪಾಲ್, ಅವರ ಗರ್ಭಿಣಿ ಪತ್ನಿ ಮತ್ತು ಎಂಟು ವರ್ಷದ ಮಗನನ್ನು ಕೊಲೆ ಮಾಡಲಾಯಿತು. ಗೌತಮ್ ಬೆಹೆರಾ ಎಂಬ ಕಾರ್ಮಿಕನೊಂದಿಗೆ ಜಗಳವಾಡಿದ್ದರಿಂದ ಆತನೇ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಆದರೆ ಈ ಘಟನೆಗೂ ಮಮತಾ ಬ್ಯಾನರ್ಜಿಯವರಿಗೂ ಸಂಬಂಧ ಕಲ್ಪಿಸುವ ಹಾಗೆ ಹಲವು ರೀತಿಯ ವದಂತಿಗಳನ್ನು ಹರಡಲಾಯಿತು. ಅಷ್ಟೇ ಅಲ್ಲ, ಅದನ್ನು ಹಿಂದೂ ಮತ್ತು ಮುಸ್ಲಿಮ್ ಎಂದು ಪರಿವರ್ತಿಸಲಾಯಿತು. ಕೊಲೆಯನ್ನು ಟಿಎಂಸಿ ಗೂಂಡಾಗಳು ಮಾಡಿದ್ದಾರೆ ಎನ್ನಲಾಯಿತು.
ಈ ಬಾರಿಯೂ ಅದೇ ಆಗುತ್ತಿರುವಂತೆ ಕಾಣುತ್ತಿದೆ.
ಚಂದನ್ ದಾಸ್ ಮತ್ತು ಹರ್ ಗೋವಿಂದ್ ದಾಸ್ ಅವರ ಕೊಲೆ ಕ್ರೂರವಾಗಿದೆ. ಯಾರೇ ಮಾಡಿದ್ದರೂ ಅವರ ವಿರುದ್ಧ ಕಾನೂನು ಪ್ರಕಾರ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ ಬಿಜೆಪಿ ಐಟಿ ಸೆಲ್ ಬಂಗಾಳದಲ್ಲಿ ಹಿಂದೂಗಳನ್ನು ಹಿಂಸಿಸಲಾಗುತ್ತಿದೆ ಎಂದು ಬಿಂಬಿಸಲು ನೋಡುತ್ತಿದೆ. ಇದನ್ನು ಸಂಪೂರ್ಣವಾಗಿ ಹಿಂದೂ ವರ್ಸಸ್ ಮುಸ್ಲಿಮ್ ಸಮಸ್ಯೆಯಾಗಿ ಪರಿವರ್ತಿಸಲು ನೋಡುತ್ತಿದೆ.
ಮಮತಾ ಬ್ಯಾನರ್ಜಿ ಅವರನ್ನು ಮುಸ್ಲಿಮ್ ಪರ ಎಂದು ಐಟಿ ಸೆಲ್ ಮತ್ತು ಮಡಿಲ ಮೀಡಿಯಾಗಳು ಕಸರತ್ತು ಮಾಡುತ್ತವೆ. ಬಂಗಾಳದಲ್ಲಿ ಮಾತ್ರವಲ್ಲ, ದೇಶದ ಇತರ ಭಾಗಗಳಲ್ಲಿಯೂ ಹೀಗೇ ಆಗುತ್ತದೆ.
ಅದೇ ಬಿಜೆಪಿಯವರು ಚಂದ್ರಬಾಬು ನಾಯ್ಡು ನಮಾಝ್‌ನಲ್ಲಿ ಭಾಗವಹಿಸಿದರೆ ಅವರ ಬಗ್ಗೆ ಏನನ್ನೂ ಹೇಳುವುದಿಲ್ಲ, ಆದರೆ ಮಮತಾ ಬ್ಯಾನರ್ಜಿ ಇಫ್ತಾರ್‌ಗೆ ಹೋದರೆ ಅವರ ಚಿತ್ರಗಳನ್ನು ಬಳಸಿಕೊಂಡು ಸಾಕಷ್ಟು ಪ್ರಚಾರವನ್ನು ನಡೆಸಲಾಗುತ್ತದೆ. ಪಶ್ಚಿಮ ಬಂಗಾಳ ಬಿಜೆಪಿಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಅಂತಹ ಚಿತ್ರಗಳನ್ನು ಟ್ವೀಟ್ ಮಾಡಲಾಗುತ್ತಿದೆ.
ಮುರ್ಷಿದಾಬಾದ್‌ನಲ್ಲಿ ಹಿಂಸಾಚಾರ ನಡೆಯುತ್ತಿದ್ದರೂ ಮಮತಾ ಬ್ಯಾನರ್ಜಿ ಚಹಾ ಕುಡಿಯುವುದರಲ್ಲಿ ನಿರತರಾಗಿದ್ದಾರೆ ಎಂಬ ಚಿತ್ರವನ್ನು ನೋಡಬಹುದು.
ಮುರ್ಷಿದಾಬಾದ್ ಘಟನೆಗೆ ಸಂಬಂಧಿಸಿದಂತೆ, ಮಮತಾ ಬ್ಯಾನರ್ಜಿ ರಾಜೀನಾಮೆಗೆ ಒತ್ತಾಯಿಸುವುದರಿಂದ ಹಿಡಿದು ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಒತ್ತಾಯಿಸುವವರೆಗೆ ಬಿಜೆಪಿ ಎಲ್ಲವನ್ನೂ ಮಾಡಿದೆ. ರಾಜ್ಯದಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸುವಂತೆ ಇಬ್ಬರು ಬಿಜೆಪಿ ಸಂಸದರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.
ಕಳೆದ 10 ವರ್ಷಗಳಿಂದ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಂದ ಹಿಡಿದು ರಾಜಭವನದಲ್ಲಿ ಕುಳಿತಿರುವ ರಾಜ್ಯಪಾಲರು ಮತ್ತು ಎಲ್ಲಾ ಬಿಜೆಪಿ ನಾಯಕರು ಮಮತಾ ಅವರ ಮೇಲೆ ದಾಳಿಗೆ ಪ್ರಯತ್ನಿಸುತ್ತಲೇ ಇದ್ದಾರೆ.
ಮುರ್ಷಿದಾಬಾದ್‌ಲ್ಲಿ ಚಂದನ್ ದಾಸ್ ಮತ್ತು ಹರ್‌ಗೋವಿಂದ್ ದಾಸ್ ಅವರನ್ನು ಕೊಲೆ ಮಾಡಲಾಗಿದೆ. ಪ್ರಶ್ನೆಯೆಂದರೆ ಇಜಾಝ್ ಅಹ್ಮದ್ ಪೊಲೀಸ್ ಗುಂಡಿನಿಂದ ಹೇಗೆ ಸತ್ತರು ಎಂಬುದು.
ಅವರು ಪೊಲೀಸ್ ಗುಂಡಿನಿಂದ ಸತ್ತರೋ ಅಥವಾ ಬಿಎಸ್‌ಎಫ್ ಗುಂಡಿನ ದಾಳಿಯಿಂದ ಸತ್ತರೋ? ಅವರು ಗಲಭೆಕೋರರಲ್ಲ, ಪೊಲೀಸರರ ಗುಂಡಿಗೆ ಬಲಿಯಾದವರು.
ಈ ಮೂವರ ಸಾವು ದುರದೃಷ್ಟಕರ ಮತ್ತು ಖಂಡನೀಯ.
ಘಟನೆಯಲ್ಲಿ ಭಾಗಿಯಾಗಿರುವವರು ಗಲಭೆಯನ್ನು ಸೃಷ್ಟಿಸಿದ್ದಾರೆ ಮಾತ್ರವಲ್ಲ, ಈ ಘಟನೆ ದೇಶದ ಇತರ ಭಾಗಗಳಲ್ಲಿ ಮುಸ್ಲಿಮ್ ವಿರೋಧಿ ಚರ್ಚೆಗಳ ಬೆಂಕಿಗೆ ತುಪ್ಪ ಸುರಿಯಲಿದೆ.
ವಕ್ಫ್ ಕಾನೂನನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ; ವಿರೋಧ ಪಕ್ಷಗಳು ಕೂಡ ಇದರ ವಿರುದ್ಧ ಪ್ರತಿಭಟನೆ ನಡೆಸಿವೆ. ಆದರೆ ಪ್ರತಿಭಟನೆಯನ್ನು ಹಿಂಸೆಯಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಅದಕ್ಕೆ ಆಸ್ಪದವೇ ಇಲ್ಲ. ಹಾಗೆ ಮಾಡುವವರು ಬಿಜೆಪಿಯ ನಿರೂಪಣೆಯನ್ನು ಹರಡಲು ಸಹಾಯ ಮಾಡುತ್ತಾರೆ.
3 ಜನರು ಸಾವನ್ನಪ್ಪಿದ್ದಾರೆ, 150 ಜನರನ್ನು ಬಂಧಿಸಲಾಗಿದೆ.
ಹಿಂದೂಗಳನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಬಂಗಾಳದಲ್ಲಿ ಹಿಂಸಾಚಾರವನ್ನು ಯಾರು ಪ್ರಾರಂಭಿಸಿದರು ಮತ್ತು ಅದರಿಂದ ಯಾರು ಲಾಭ ಪಡೆಯಲಿದ್ದಾರೆ ಎಂಬುದು ಪ್ರಶ್ನೆ.
ಬಂಗಾಳದಲ್ಲಿ, ಅಪರಾಧ ಮತ್ತು ಹಿಂಸಾಚಾರದ ಘಟನೆಗಳನ್ನು ಹೆಚ್ಚಾಗಿ ಹಿಂದೂಗಳ ಸ್ಥಳಾಂತರ, ಹಿಂದೂಗಳ ಮೇಲಿನ ದಾಳಿ, ಹಿಂದೂಗಳ ಮೇಲಿನ ದೌರ್ಜನ್ಯ ಎಂದು ತೋರಿಸಲಾಗುತ್ತದೆ.
ಘಟನೆಯ ತನಿಖೆಯನ್ನು ತಕ್ಷಣವೇ ರಾಜ್ಯ ಸರಕಾರದ ಕೈಯಿಂದ ತಪ್ಪಿಸಿ ಸಿಬಿಐಗೆ ಹಸ್ತಾಂತರಿಸುವಂತೆ ಕೇಳಲಾಗುತ್ತದೆ.ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ. ಬಿಜೆಪಿ ನಾಯಕರು ರಾಜಭವನಕ್ಕೆ ಬಂದು ಹೋಗುತ್ತಿದ್ದಾರೆ. ರಾಷ್ಟ್ರಪತಿ ಆಳ್ವಿಕೆ ಹೇರುವ ಬೇಡಿಕೆಗಳೂ ಇವೆ. ಇದರೊಂದಿಗೆ ಸುಳ್ಳುಗಳು, ವದಂತಿಗಳು ಮತ್ತು ದ್ವೇಷ ಭಾಷಣಗಳು ಹರಡಲು ಪ್ರಾರಂಭಿಸುತ್ತವೆ.
ಹಿಂದೆ ಸಂದೇಶ್ ಖಾಲಿ ಮತ್ತು ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಘಟನೆಗಳ ವೇಳೆ ಮಡಿಲ ಮೀಡಿಯಾ ಮತ್ತು ಐಟಿ ಸೆಲ್ ಕೋಲಾಹಲವನ್ನೇ ಎಬ್ಬಿಸಿದ್ದವು.
ಸಂದೇಶ್ ಖಾಲಿ ಘಟನೆ 2023ರ ಕೊನೆಯ ಹಂತದಲ್ಲಿ ಬೆಳಕಿಗೆ ಬಂತು. ಸಂದೇಶ್ ಖಾಲಿಯಲ್ಲಿ ಟಿಎಂಸಿ ಪ್ರಬಲ ನಾಯಕ ಶಹಜಹಾನ್ ಶೇಕ್‌ಮತ್ತು ಅವರ ಬೆಂಬಲಿಗರು ಪಕ್ಷದ ಕಚೇರಿಯಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಮತ್ತು ಬಲವಂತವಾಗಿ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.
ರಾಷ್ಟ್ರೀಯ ಮಹಿಳಾ ಆಯೋಗ ತನ್ನ ವರದಿಯಲ್ಲಿ ಸುತ್ತಲೂ ಭಯೋತ್ಪಾದನೆ ಇದೆ, ಲೈಂಗಿಕ ಕಿರುಕುಳ ಸಾಮಾನ್ಯವಾಗಿದೆ ಎಂದು ಬರೆದಿತ್ತು. ಎಲ್ಲಿಯಾದರೂ ಲೈಂಗಿಕ ಶೋಷಣೆ ನಡೆದಿದೆಯೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.
ಆದರೆ ಸಂದೇಶ್‌ಖಾಲಿಯ ಮಹಿಳೆಯರನ್ನು ಧರ್ಮದ ಆಧಾರದ ಮೇಲೆ ಹಿಂಸಿಸಲಾಗುತ್ತಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು. ಸಂದೇಶ್‌ಖಾಲಿಯ ಗೂಂಡಾಗಳನ್ನು ತಲೆಕೆಳಗಾಗಿ ನೇತುಹಾಕಿ ಹೇಗೆ ಸರಿಪಡಿಸುವುದು ಎಂದು ತಮಗೆ ತಿಳಿದಿದೆ ಎಂದು ಶಾ ಹೇಳಿದರು. ಇದು ಅವರ ಭಾಷೆ.
ಮೋದಿ ಕೂಡ ದಲಿತ ಸಹೋದರಿಯರನ್ನು ಹಿಂಸಿಸಲಾಗುತ್ತಿದೆ ಎಂದು ಹೇಳಿದರು.
ಆದರೆ, ಸಿಬಿಐ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಕೂಡ ಲೈಂಗಿಕ ಕಿರುಕುಳದ ಏನನ್ನಾದರೂ ಹೇಳಿರುವ ಬಗ್ಗೆ ವರದಿಗಳಿಲ್ಲ.
ಆದರೆ ಸಂದೇಶ್ ಖಾಲಿ ಪ್ರಕರಣ ಲೈಂಗಿಕ ಕಿರುಕುಳದ ಪ್ರಕರಣವಲ್ಲ. ಬಿಜೆಪಿ ಒಂದು ಘಟನೆಯನ್ನು ಹೇಗೆ ದೊಡ್ಡದಾಗಿಸುತ್ತದೆ ಮತ್ತು ಅದಕ್ಕೆ ಹಿಂದೂ-ಮುಸ್ಲಿಮ್ ಬಣ್ಣವನ್ನು ನೀಡುತ್ತದೆ ಎಂಬುದನ್ನು ಇಲ್ಲೆಲ್ಲ ಅರ್ಥ ಮಾಡಿಕೊಳ್ಳಬಹುದು.
ಮೇ 2024ರಲ್ಲಿ, ಸಂದೇಶ್ ಖಾಲಿ ಪ್ರಕರಣದಲ್ಲಿ ದೂರು ನೀಡಿದ ಮೂವರು ಮಹಿಳೆಯರಲ್ಲಿ ಇಬ್ಬರು ಅತ್ಯಾಚಾರ ದೂರನ್ನು ಹಿಂದೆಗೆದುಕೊಂಡರು. ಬಿಜೆಪಿ ಮಹಿಳಾ ಮೋರ್ಚಾ ಸುಳ್ಳು ದೂರು ನೀಡಲು ಪ್ರಚೋದಿಸಿ ಖಾಲಿ ಕಾಗದದ ಮೇಲೆ ತಮ್ಮ ಸಹಿಯನ್ನು ಪಡೆದುಕೊಂಡಿದೆ ಎಂದು ಅವರು ಆರೋಪಿಸಿದ್ದರು. ಇಬ್ಬರೂ ಮಹಿಳೆಯರು ಅತ್ಯಾಚಾರ ದೂರು ಸುಳ್ಳು ಎಂದು ಹೇಳಿದರು. ಬಳಿಕ ಅವರು ಹೊಸ ದೂರು ದಾಖಲಿಸಿ, ಈ ನಿರ್ಧಾರದಿಂದಾಗಿ ತಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ ಮತ್ತು ಬಹಿಷ್ಕರಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು.
ಬಂಗಾಳ ಬಿಜೆಪಿ 9 ನಕಲಿ ಚಿತ್ರಗಳನ್ನು ಟ್ವೀಟ್ ಮಾಡಿದೆ. ಬಂಗಾಳದಲ್ಲಿ ಹಿಂದೂ ಹಬ್ಬಗಳ ಸಮಯದಲ್ಲಿ ಹಿಂಸಾಚಾರ ಹೆಚ್ಚಾಗಿ ಸಂಭವಿಸುತ್ತದೆ ಎಂದು ಬಿಜೆಪಿ ಬರೆದಿದೆ. ಮುಸ್ಲಿಮರು ಹಿಂಸಾಚಾರ ಮಾಡುತ್ತಾರೆ ಎಂದು ಬರೆಯಲಾಗಿದೆ.
ಯಾವುದೇ ರಾಜಕೀಯ ಪಕ್ಷ ಕೋಮು ಉದ್ವಿಗ್ನತೆಯ ಪರಿಸ್ಥಿತಿಯಲ್ಲಿ ಈ ರೀತಿ ಟ್ವೀಟ್ ಮಾಡಿದರೆ, ಅದು ಹಿಂಸೆಯನ್ನು ಪ್ರಚೋದಿಸು ವುದಿಲ್ಲವೇ? ರಾಜಕೀಯ ಪಕ್ಷವಾಗಿ ಬಿಜೆಪಿಗೆ ಯಾವುದೇ ಜವಾಬ್ದಾರಿ ಇಲ್ಲವೆ?
ಬಂಗಾಳ ಪೊಲೀಸರು ತಕ್ಷಣವೇ ಈ ಚಿತ್ರಗಳನ್ನು ನಿರಾಕರಿಸಿದರು ಮತ್ತು ಅವು ಬೇರೆ ರಾಜ್ಯಗಳದ್ದಾಗಿದ್ದು, ಬಂಗಾಳಕ್ಕೆ ಸಂಬಂಧಿಸಿಲ್ಲ, ಅವುಗಳು ನಕಲಿ ಎಂದು ಕರೆದಿದ್ದಾರೆ.
ಈ ಚಿತ್ರಗಳು ಯಾವುದೇ ಹಿಂದೂ ಹಬ್ಬಕ್ಕೆ ಸಂಬಂಧಿಸಿಲ್ಲ. ಬದಲಾಗಿ ಸಿಎಎ ಸಮಯದಲ್ಲಿ ನಡೆದ ಹಿಂಸಾಚಾರದ ಚಿತ್ರಗಳಾಗಿವೆ ಎಂದು ಬರೆಯಲಾಗಿದೆ.
ಮುರ್ಷಿದಾಬಾದ್‌ನಲ್ಲಿ ಗಲಭೆ ನಡೆದಿದೆ, ಚಂದನ್ ದಾಸ್ ಮತ್ತು ಹರ್‌ಗೋವಿಂದ್ ದಾಸ್ ಸಾವನ್ನಪ್ಪಿದ್ದಾರೆ. ಈ ವಿಷಯವನ್ನು ಆ ಘಟನೆಗೆ ಸೀಮಿತಗೊಳಿಸಿ ಮಾತನಾಡುವ ಬದಲು ಇದನ್ನೆಲ್ಲಾ ರಾಷ್ಟ್ರೀಯ ವಿಷಯವಾಗಿ ಏಕೆ ಮಾಡಲಾಗುತ್ತಿದೆ? ಇದೆಲ್ಲವೂ ಯಾರ ಲಾಭಕ್ಕಾಗಿ?
ಒಂಭತ್ತು ನಕಲಿ ಚಿತ್ರಗಳನ್ನು ಟ್ವೀಟ್ ಮಾಡುವುದರ ಹಿಂದಿನ ಬಿಜೆಪಿಯ ಉದ್ದೇಶ ಏನಿರಬಹುದು?