ಪಂಜಾಬ್‌ನಲ್ಲಿ ಪಂಚ ಪಕ್ಷಗಳ ಸವಾಲ್!
ಪಂಜಾಬ್ ಲೋಕಸಭೆ ಚುನಾವಣೆ ವಿಶ್ಲೇಷಣೆ
ಕಳೆದ ವಾರ ಚುನಾವಣಾ ಪ್ರಚಾರಕ್ಕೆ ಪಂಜಾಬಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರತ್ನಗಂಬಳಿ ಸ್ವಾಗತವೇನೂ ಸಿಗಲಿಲ್ಲ. ಬದಲಿಗೆ ರೈತರ ಪ್ರತಿಭಟನೆ ಚುರುಕು ಮುಟ್ಟಿಸಿತು. ಕೃಷಿ ಸಂಬಂಧಿತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿವಿಧ ರೈತ ಸಂಘಟನೆಗಳು ಪಂಜಾಬ್ ಮತ್ತು ಹರ್ಯಾಣದ ಗಡಿಯಲ್ಲಿ ಚಳವಳಿ ನಡೆಸುತ್ತಿವೆ. ಫೆಬ್ರವರಿಯಲ್ಲಿ ರೈತರು ‘ದಿಲ್ಲಿ ಚಲೋ’ ಆರಂಭಿಸಿದ್ದರು. ಭದ್ರತಾ ಪಡೆಗಳು ಹರ್ಯಾಣ ಗಡಿಯಲ್ಲಿ ತಡೆದಿದ್ದರಿಂದ ಅಲ್ಲೇ ಠಿಕಾಣಿ ಹೂಡಿದ್ದಾರೆ. ಹೋರಾಟ ಮೇ 22ಕ್ಕೆ 100 ದಿನ ಪೂರೈಸಿದೆ.
ರೈತರು ಅಸಾಧ್ಯವಾದ ಬೇಡಿಕೆಗಳ ಈಡೇರಿಕೆಗೇನೂ ಒತ್ತಾಯಿಸುತ್ತಿಲ್ಲ. ಎಲ್ಲ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಗ್ಯಾರಂಟಿ ಕೊಡಬೇಕು ಎಂದು ಕೇಳುತ್ತಿದ್ದಾರೆ. ಚಳಿ, ಮಳೆ, ಬಿಸಿಲೆನ್ನದೆ ಜಮೀನಿನಲ್ಲಿ ದುಡಿಯುವ ರೈತರು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಪಡೆಯಲು ಇನ್ನೆಷ್ಟು ವರ್ಷ ಕಾಯಬೇಕು. ಕೃಷಿ ಸಂಬಂಧಿತ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲು ಕೃಷಿ ತಜ್ಞ ಡಾ. ಎಂ.ಎಸ್. ಸ್ವಾಮಿನಾಥನ್ ಅಧ್ಯಕ್ಷತೆಯಲ್ಲಿ 2004ರಲ್ಲಿ ‘ರಾಷ್ಟ್ರೀಯ ಕೃಷಿ ಆಯೋಗ’ (ಎನ್‌ಎಸಿ) ನೇಮಿಸಿತ್ತು. ಆಯೋಗ ವರದಿ ಸಲ್ಲಿಸಿ ಎರಡು ದಶಕಗಳೇ ಸಮೀಪಿಸಿದರೂ ಶಿಫಾರಸುಗಳು ಇನ್ನೂ ಜಾರಿ ಆಗಿಲ್ಲ. ಇನ್ನೆಷ್ಟು ದಶಕಗಳು ಬೇಕು ವರದಿ ಜಾರಿಗೆ?
ಜೀವನವಿಡೀ ಮಣ್ಣಲ್ಲೇ ದುಡಿದು ಮಣ್ಣಾಗುವ ಕೃಷಿಕರು, ಕೃಷಿ ಕಾರ್ಮಿಕರು ಪಿಂಚಣಿ ಕೊಡುವಂತೆ ಒತ್ತಾಯ ಮಾಡುವುದರಲ್ಲಿ ತಪ್ಪೇನಿದೆ? ಅವರ ಬದುಕಿಗೆ ಭದ್ರತೆ ಬೇಡವೆ? ಮೇಲಿಂದ ಮೇಲೆ ಉದ್ಯಮಿಗಳ ಸಾಲವನ್ನು ಮನ್ನಾ ಮಾಡುವ, ಅನುತ್ಪಾದಕ ಸಾಲವೆಂದು ಪರಿಗಣಿಸಿ ಕೈಬಿಡುವ ಸರಕಾರಕ್ಕೆ ಕೃಷಿ ಸಾಲ ಮನ್ನಾ ಮಾಡುವ ಮನಸ್ಸು ಏಕಿಲ್ಲ? ಇದನ್ನೇ ಪಂಜಾಬ್ ಹಾಗೂ ಹರ್ಯಾಣ ರೈತರು ಪ್ರಶ್ನೆ ಮಾಡುತ್ತಿರುವುದು. ಬೇರೆ ಸಮಯದಲ್ಲಿ ರೈತರು ಪ್ರತಿಭಟನೆಗೆ ಇಳಿದಿದ್ದರೆ ಸರಕಾರ ‘ಕೇರ್’ ಮಾಡುತ್ತಿರಲಿಲ್ಲ. ಲೋಕಸಭೆ ಚುನಾವಣೆ ವೇಳೆ ನಡೆಯುತ್ತಿರುವುದರಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಜೀರ್ಣಿಸಿಕೊಳ್ಳಲು ಕಷ್ಟವಾಗಿದೆ.
ರೈತರ ಪ್ರತಿಭಟನೆ ತೀವ್ರತೆ ಎಷ್ಟಿದೆ ಎಂದರೆ, ಬಿಜೆಪಿ ಅಭ್ಯರ್ಥಿಗಳು ಪ್ರಚಾರಕ್ಕಾಗಿ ಹಳ್ಳಿಗಳಿಗೆ ಹೋಗಲು ಆಗುತ್ತಿಲ್ಲ. ರಸ್ತೆಗಳನ್ನು ಬಂದ್ ಮಾಡಲಾಗುತ್ತಿದೆ. ‘ಬಿಜೆಪಿ ಬಹಿಷ್ಕರಿಸಿ’ ಎಂಬ ಭಿತ್ತಿಪತ್ರಗಳು ಗ್ರಾಮೀಣ ಭಾಗದಲ್ಲಿ ಕಾಣಿಸಿಕೊಳ್ಳುತ್ತಿವೆ.
ಪಂಜಾಬ್, ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ದೇಶದ ರೈತರು ಮೊದಲಿಗೆ ಚಳವಳಿ ನಡೆಸಿದ್ದು 2020-21ರಲ್ಲಿ ಸರಕಾರ ಜಾರಿಗೊಳಿಸಲು ಉದ್ದೇಶಿಸಿದ್ದ ಮೂರು ಕೃಷಿ ಸಂಬಂಧಿತ ಮಸೂದೆಗಳ ವಿರುದ್ಧ ದಿಲ್ಲಿಯಲ್ಲಿ ದೊಡ್ಡ ಚಳವಳಿ ನಡೆಯಿತು. ಪಂಜಾಬ್ ರೈತರು, ಅದರಲ್ಲೂ ಸಿಖ್ಖರ ಸಿಟ್ಟನ್ನು ಅರ್ಥ ಮಾಡಿಕೊಂಡ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) 2020ರಲ್ಲಿ ಬಿಜೆಪಿ ಜತೆಗಿನ ಕಾಲು ಶತಮಾನದ ಸುದೀರ್ಘ ಮೈತ್ರಿಯನ್ನು ಕಡಿದುಕೊಂಡಿತು.
ಮೈತ್ರಿ ಮುಂದುವರಿದರೆ ಮತದಾರರು, ಅದರಲ್ಲೂ ಧಾರ್ಮಿಕ ಸಿಖ್ ಸಮುದಾಯ ತನ್ನಿಂದ ದೂರವಾಗಬಹುದೆಂಬ ಭಯದಿಂದ ಎಸ್‌ಎಡಿ ಮುಖಂಡ ಸುಖ್‌ಬೀರ್ ಸಿಂಗ್ ಬಾದಲ್ ತೀರ್ಮಾನ ಕೈಗೊಂಡಿದ್ದಾರೆ. ಪಂಜಾಬಿನಲ್ಲಿ ಕಳೆದು ಹೋಗಿರುವ ನೆಲೆಯನ್ನು ಪುನರ್‌ಸ್ಥಾಪಿಸಲು ಎಸ್‌ಎಡಿ ಕಸರತ್ತು ನಡೆಸಿದೆ. ಗ್ರಾಮೀಣ ಭಾಗದಲ್ಲಿ ಸಿಖ್ಖರು ಹಾಗೂ ಇತರರ ಮತಗಳನ್ನು ಗಮನದಲ್ಲಿಟ್ಟುಕೊಂಡೇ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. ಬಿಜೆಪಿ ‘ಹಿಂದುತ್ವ’ ಅಜೆಂಡಾ ತನ್ನ ಗೆಲುವಿಗೆ ಅಡ್ಡಿಯಾಗಬಹುದು ಎಂಬ ಆತಂಕ ಎಸ್‌ಎಡಿಗಿದೆ. ಹಿಂದಿನ ಕೆಲವು ಚುನಾವಣೆಗಳಲ್ಲಿ ಅನುಭವಿಸಿದ ಸೋಲಿನಿಂದ ಪಾಠ ಕಲಿತಂತಿದೆ. ಎಸ್‌ಎಡಿ ಗೆದ್ದರೆ ಬಿಜೆಪಿ ಜತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಬಹುದು ಎಂಬ ಸಣ್ಣ ಅನುಮಾನವೂ ಅಲ್ಲಿನ ಜನರಿಗಿದೆ.
1996ರ ಲೋಕಸಭೆ ಚುನಾವಣೆಯಲ್ಲಿ ಪ್ರಕಾಶ್‌ಸಿಂಗ್ ಬಾದಲ್ ಬೇಷರತ್ತಾಗಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಬೆಂಬಲ ನೀಡಿದ್ದರು. ಅದು 2020ರವರೆಗೂ ಮುಂದುವರಿಯಿತು. ಈ ಸಲ ಎಸ್‌ಎಡಿ ಏಕಾಂಗಿ. ಇನ್ನೊಂದೆಡೆ, ದಿಲ್ಲಿಯಲ್ಲಿ ಸೀಟು ಹೊಂದಾಣಿಕೆ ಮಾಡಿಕೊಂಡಿರುವ ‘ಇಂಡಿಯಾ’ ಮೈತ್ರಿಕೂಟದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಹಾಗೂ ಎಎಪಿ ಪಂಜಾಬ್‌ನಲ್ಲಿ ಪರಸ್ಪರ ಎದುರಾಳಿ. ಬಹುಜನ ಸಮಾಜ ಪಕ್ಷವೂ (ಬಿಎಸ್‌ಪಿ) ಕಣದಲ್ಲಿರುವುದರಿಂದ ಬಹುಮುಖ ಸ್ಪರ್ಧೆ ನಡೆಯುತ್ತಿದೆ.
ಪಂಜಾಬ್‌ನಲ್ಲಿ ಒಟ್ಟು 13 ಲೋಕಸಭಾ ಕ್ಷೇತ್ರಗಳಿದ್ದು, 1996ರ ಚುನಾವಣೆಯಲ್ಲಿ ಎಸ್‌ಎಡಿ ಮತ್ತು ಬಿಎಸ್‌ಪಿ ಹೊಂದಾಣಿಕೆಯಲ್ಲಿ 11 ಸ್ಥಾನ ಪಡೆದಿದ್ದವು. ಇದರಲ್ಲಿ ಎಸ್‌ಎಡಿ ಪಾಲು 8, ಬಿಎಸ್‌ಪಿ ಪಾಲು ಮೂರು, ಕಾಂಗ್ರೆಸ್‌ಗೆ 2 ಸ್ಥಾನ ಸಿಕ್ಕಿತ್ತು. 2014ರಲ್ಲಿ ಎನ್‌ಡಿಎ ಆರು ಸ್ಥಾನ (ಎಸ್‌ಎಡಿ 4, ಬಿಜೆಪಿ 2) ಗಳಿಸಿತ್ತು. ಮೊದಲ ಸಲ ಚುನಾವಣೆ ಎದುರಿಸಿದ್ದ ಎಎಪಿ 4 ಕ್ಷೇತ್ರಗಳನ್ನು ಗೆದ್ದಿತ್ತು. ಕಾಂಗ್ರೆಸ್‌ಗೆ ದಕ್ಕಿದ್ದು 3 ಸ್ಥಾನ. ಶೇಕಡಾವಾರು ಮತಗಳಲ್ಲಿ ಮೊದಲ ಸ್ಥಾನದಲ್ಲಿದ್ದ ಕಾಂಗ್ರೆಸ್, ಸೀಟು ಸಂಪಾದನೆಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿತ್ತು. 2019ರಲ್ಲಿ ಕಾಂಗ್ರೆಸ್ 8 ಕ್ಷೇತ್ರ ಬಾಚಿಕೊಂಡರೆ, ಎಸ್‌ಎಡಿ ಮತ್ತು ಬಿಜೆಪಿ ತಲಾ ಎರಡು ಸ್ಥಾನ ಗೆದ್ದವು. ಎಎಪಿಗೆ ಸಿಕ್ಕಿದ್ದು ಬರೀ 1 ಸ್ಥಾನ.
ಎರಡು ವರ್ಷದ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಬೆಂಬಲಿಸಿದರು. ಒಟ್ಟು 117 ಸದಸ್ಯ ಬಲದ ವಿಧಾನಸಭೆಯಲ್ಲಿ ಎಎಪಿಯು 98 ಸ್ಥಾನ ಗೆದ್ದುಕೊಂಡಿತು. ಎಸ್‌ಎಡಿಗೆ ಮೂರು ಸ್ಥಾನ ಸಿಕ್ಕಿತು. 18 ಕ್ಷೇತ್ರಗಳನ್ನು ಮಾತ್ರ ಗೆಲ್ಲಲು ಸಾಧ್ಯವಾದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಇದಕ್ಕೂ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 77, ಎಎಪಿ 20 ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದವು. ಎಸ್‌ಎಡಿ 18 ಸ್ಥಾನ ಗೆದ್ದಿತ್ತು.
ಈಗ ‘ಮೋದಿ ನಾಮಬಲ’ವನ್ನೇ ಬಿಜೆಪಿ ನಾಯಕರು ನಂಬಿಕೊಂಡಿದ್ದಾರೆ. ನಗರ ಪ್ರದೇಶಗಳಲ್ಲಿ ಹಿಂದುತ್ವ ಅಜೆಂಡಾ ತಮ್ಮ ಕೈಹಿಡಿಯಬಹುದೆಂದು ಭಾವಿಸಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್‌ನಿಂದ ವಲಸೆ ಬಂದಿರುವ ಪ್ರಭಾವಿ ನಾಯಕರು ತಮ್ಮ ಪಕ್ಷಕ್ಕೆ ಮತಗಳನ್ನು ತಂದುಕೊಡಬಹುದೆಂಬ ಲೆಕ್ಕಾಚಾರ ಆ ಪಕ್ಷದ ನಾಯಕರಿಗೆ ಇದೆ. ರಾಜ್ಯದ ಮುಖ್ಯಮಂತ್ರಿ ಆಗಿದ್ದ ಕ್ಯಾ. ಅಮರೀಂದರ್ ಸಿಂಗ್ 2021ರಲ್ಲಿ ಕಾಂಗ್ರೆಸ್ ತ್ಯಜಿಸಿ, ಹೊಸ ಪಕ್ಷ ಕಟ್ಟಿದರು. 2022ರಲ್ಲಿ ತಮ್ಮ ಪಕ್ಷವನ್ನು ಬಿಜೆಪಿ ಜತೆ ವಿಲೀನಗೊಳಿಸಿದರು. ಅವರ ಹಿಂದೆಯೇ ಅನೇಕರು ಕಾಲ್ಕಿತ್ತರು. ಮೂರು ಸಲ ಸಂಸದರಾಗಿ ಚುನಾಯಿತರಾದ ರಣವಿತ್‌ಸಿಂಗ್ ಬಿಟ್ಟೂ, ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುನೀಲ್ ಜಾಖಡ್, ಅಮರೀಂದರ್ ಪತ್ನಿ ಪ್ರಣೀತ್ ಕೌರ್ ಮತ್ತು ಪುತ್ರಿ ಜೈ ಇಂದರ್ ಕೌರ್ ಸೇರಿ ದೊಡ್ಡ ದಂಡೇ ವಲಸೆ ಹೋಗಿದೆ. ಪ್ರಣೀತ್ ಕೌರ್ ಪಟಿಯಾಲ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.
ಪಂಜಾಬ್‌ನಲ್ಲಿ ಆಡಳಿತದಲ್ಲಿ ಇರುವುದೇ ಎಎಪಿಗೆ ಆನೆ ಬಲ. ಅದರಲ್ಲೂ 2/3ಕ್ಕಿಂತ ಅಧಿಕ ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿದೆ. ಐವರು ಸಚಿವರು ಮತ್ತು ಮೂವರು ಶಾಸಕರಿಗೆ ಎಎಪಿ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಿದೆ. ವಿಧಾನಸಭೆ ಚುನಾವಣೆ ವೇಳೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಕೆಲವನ್ನು ಸರಕಾರ ಈಡೇರಿಸಿದೆ. ಆರೋಗ್ಯ, ಶಿಕ್ಷಣ ಕ್ಷೇತ್ರಗಳನ್ನು ಸುಧಾರಿಸುತ್ತಿದೆ. ಉಚಿತ ವಿದ್ಯುತ್, ಮನೆ ಬಾಗಿಲಿಗೆ ಪಡಿತರ ಪೂರೈಕೆಯಂಥ ಕಾರ್ಯಕ್ರಮಗಳ ಜಾರಿಗೆ ಆದ್ಯತೆ ನೀಡಿದೆ. ಆದರೆ, ಎರಡು ವರ್ಷಗಳಲ್ಲಿ ಮುಖ್ಯಮಂತ್ರಿ ಭಗವಂತ ಮಾನ್ ಸರಕಾರ ಎಷ್ಟು ಅಭಿವೃದ್ಧಿ ಮಾಡಬೇಕಿತ್ತೋ ಅಷ್ಟು ಮಾಡಿಲ್ಲ. ಒಳ್ಳೆ ಆಡಳಿತ ನೀಡುತ್ತಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ.
ಭ್ರಷ್ಟಾಚಾರ ಆರೋಪದಲ್ಲಿ ಬಂಧಿತರಾಗಿ ಷರತ್ತಿನ ಜಾಮೀನು ಪಡೆದು ಹೊರ ಬಂದಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಎಲ್ಲ 13 ಕ್ಷೇತ್ರಗಳಲ್ಲಿ ಎಎಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ, ಬಿಜೆಪಿಗೆ ತಕ್ಕ ಉತ್ತರ ಕೊಡುವಂತೆ ಮನವಿ ಮಾಡುತ್ತಿದ್ದಾರೆ
ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿರುವುದು ಕಾಂಗ್ರೆಸ್ ನೈತಿಕ ಬಲ ಕುಗ್ಗಿಸಿದೆ. ಅಷ್ಟೇ ಆಗಿದ್ದರೆ ಹೋಗಲಿ ಅನ್ನಬಹುದಿತ್ತು. ಒಡೆದ ಮನೆಯಾಗಿರುವ ಪಕ್ಷದಲ್ಲಿ ಒಗ್ಗಟ್ಟು ಮರೀಚಿಕೆ. ನಾಯಕರ ದಂಡೇ ಪಕ್ಷ ತೊರೆದಿರುವುದರಿಂದ ಬಹುತೇಕ ಹೊರಗಿನವರಿಗೆ ಮಣೆ ಹಾಕಿದೆ. ಪಕ್ಷದ ಮೂಲ ನಿವಾಸಿಗಳಿಗಿಂತ ಪಕ್ಷಾಂತರಿಗಳು ವಿಜೃಂಭಿಸಿದ್ದಾರೆ. ಕಾಂಗ್ರೆಸ್ 2019ರಲ್ಲಿ ಗೆದ್ದಿರುವ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ.
ಬಿಎಸ್‌ಪಿಯು ಪಂಜಾಬ್‌ನಲ್ಲಿ ಖಾತೆ ತೆರೆಯಲು ಹವಣಿಸುತ್ತಿದೆ. 1996ರಲ್ಲಿ 3 ಕ್ಷೇತ್ರಗಳಲ್ಲಿ ಬಿಎಸ್‌ಪಿ ಜಯಿಸಿತ್ತು. ಆಗ ಹೋಷಿಯಾರ್‌ಪುರದಿಂದ ಪಕ್ಷದ ಸುಪ್ರೀಂ ನಾಯಕ ಕಾನ್ಶಿರಾಂ ಆಯ್ಕೆಯಾಗಿದ್ದರು. ಬಳಿಕ ಎನ್‌ಡಿಎಗೆ ಎಸ್‌ಎಡಿ ಬೇಷರತ್ ಬೆಂಬಲ ನೀಡುವ ತೀರ್ಮಾನ ಮಾಡಿದ್ದನ್ನು ಅವರು ಆಕ್ಷೇಪಿಸಿದ್ದರು. ಬಿಎಸ್‌ಪಿ ಈಗ ದಲಿತರು, ಮುಸ್ಲಿಮರು ಹಾಗೂ ಅತೀ ಹಿಂದುಳಿದವರ ಮತಗಳ ಮೇಲೆ ಕಣ್ಣಿಟ್ಟಿದೆ.
ಮತದಾರನ ಮನಸ್ಸಿನಲ್ಲಿ ಏನಿದೆ ಎಂದು ಜೂನ್ 4ರ ಬಳಿಕ ಗೊತ್ತಾಗಲಿದೆ.