ಗ್ಯಾರಂಟಿ ಯೋಜನೆಗಳು | ಸರಕಾರಕ್ಕೆ ಅನಿವಾರ್ಯ ಒಲವು ಮತ್ತು ವಿಪಕ್ಷಗಳ ವಿಪರ್ಯಾಸಕರ ನಿಲುವು
ಸಾಂದರ್ಭಿಕ ಚಿತ್ರ
ಜನರಿಗೆ ನೀಡುವಂತಹ ಉಚಿತ ಸೌಲಭ್ಯಗಳನ್ನು ನಖ ಶಿಖಾಂತ ವಿರೋಧಿಸುವಂತಹ ದೃಷ್ಟಿಕೋನ ಒಪ್ಪಲಾಗದು. ಸಾಮಾಜಿಕ ಹಿನ್ನೆಲೆ, ವಾಸ್ತವ, ಪರಿಸ್ಥಿತಿ ಇತ್ಯಾದಿಗಳಿಗೆ ಅನುಸಾರವಾಗಿ ಕೆಲವೊಂದು ಉಚಿತ ಸೌಲಭ್ಯಗಳನ್ನು ಅರ್ಹ ನಾಗರಿಕರಿಗೆ ಒದಗಿಸುವುದು ಸರಕಾರದ ಕರ್ತವ್ಯ. ಇದು ಕಾನೂನಾತ್ಮಕ ವಾಗಿಯೂ, ಮಾನವೀಯವಾಗಿಯೂ ಸಮಂಜಸವಾದ ಕ್ರಮಗಳೇ ಆಗಿವೆೆ. ಭಾರತದಂತಹ ಅಸಮಾನ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯುಳ್ಳ ದೇಶದಲ್ಲಿ ಇದು ಅಗತ್ಯ ಕೂಡ.
ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಮತ್ತೊಮ್ಮೆ ಭಾರೀ ಸುದ್ದಿ ಮಾಡಿದೆ! ಈ ಐದು ಉಚಿತ ಯೋಜನೆಗಳು ಪಕ್ಷದೊಳಗೆ ಗುಸುಗುಸು ಮತ್ತು ಪಕ್ಷದ ಹೊರಗೆ ಬುಸು ಬುಸು ಅಸಹನೆಯನ್ನು ಎದುರಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಯಾಕಾಗಿ ಈ ತೆರನಾದ ಅಸಮಾಧಾನ, ಅಸಹನೆ?
ಒಂದೆಡೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರಕ್ಕೆ ತನ್ನ ಗ್ಯಾರಂಟಿ ಯೋಜನೆಗಳನ್ನು ಯಾವ ಬೆಲೆ ತೆತ್ತಾದರೂ ಮುಂದುವರಿಸ ಬೇಕಾದ ಅನಿವಾರ್ಯತೆ. ಇನ್ನೊಂದೆಡೆ ವಿಪಕ್ಷಗಳಿಗೆ ಸರಕಾರವನ್ನು ವೈಫಲ್ಯಕ್ಕೆ ಗುರಿ ಪಡಿಸಿ ನಗೆ ಪಾಟಲಿಗೀಡು ಮಾಡುವಂತಹ ಆತುರ. ಈ ಯೋಜನೆಗಳಿಗೆ ಸಂಬಂಧಿಸಿದ ರಾಜಕಾರಣ ೨೦೨೩ರ ವಿಧಾನ ಸಭಾ ಚುನಾವಣಾ ಕಾಲದಿಂದಲೂ ಹೀಗೆನೇ ಸಾಗಿ ಕೊಂಡು ಬಂದಿದೆ. ಇದರಿಂದ ಗ್ಯಾರಂಟಿ ಯೋಜನೆಗಳು ಯಾವತ್ತೂ ಸುದ್ದಿಯಲ್ಲಿರುತ್ತವೆ.
ಕರ್ನಾಟಕದಲ್ಲಿ ಈ ಐದು ಗ್ಯಾರಂಟಿಗಳು ಯಶಸ್ವಿಯಾಗಿ ಮುಂದುವರಿದುಕೊಂಡು ಬರುತ್ತಿರುವುದೇ ಹೆಚ್ಚಿನವರಿಗೆ ಕೌತುಕದ ವಿಚಾರ. ಇದು ಪಕ್ಷದೊಳಗೆ ಕೆಲವು ನಾಯಕರಲ್ಲಿ ಅಸಮಾಧಾನದ ಅಲೆಯೆಬ್ಬಿಸಿದ್ದರೆ, ವಿಪಕ್ಷ ಮುಂದಾಳುಗಳಲ್ಲಿ ಅಸಹನೆಯನ್ನು ಹುಟ್ಟು ಹಾಕಿದೆ. ಹೀಗಾಗಿ ಪಕ್ಷದೊಳಗಿನ ಕೆಲವು ನಾಯಕರು ಕೆಲವೊಮ್ಮೆ ಭಿನ್ನ ಧಾಟಿಯಲ್ಲಿ ಅಭಿಪ್ರಾಯ ದಾಖಲಿಸಿ ಬಳಿಕ ಸುಮ್ಮನಾಗುವುದಿದೆ. ಆದರೆ ವಿಪಕ್ಷಗಳ ನಾಯಕರು ಹಾಗಲ್ಲ. ಅವರು ಅವಕಾಶ ದೊರೆತಾಗಲೆಲ್ಲ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ನಡೆದ ಇಂತಹ ಒಂದು ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ರವರು ಶೇ. ೭-೮ರಷ್ಟು ಮಹಿಳೆಯರು ಉಚಿತ ಬಸ್ಸು ಸೌಲಭ್ಯ ಬೇಕಾಗಿಲ್ಲವೆಂದು ಅಭಿಪ್ರಾಯ ಪಟ್ಟಿರುವುದರಿಂದ ‘ಶಕ್ತಿ ಯೋಜನೆ’ಯ ಕುರಿತು ಪುನರಾವಲೋಕನದ ಅಗತ್ಯವಿದೆ ಎಂದು ಹೇಳಿಕೆ ನೀಡಿದ್ದೇ ತಡ, ವಿಪಕ್ಷ ನಾಯಕರು ಮೈಕೊಡವಿ ಎದ್ದು ಬಿಟ್ಟರು. ಪ್ರತಿಪಕ್ಷದ ನಾಯಕ ಆರ್.ಅಶೋಕ್ರವರು ‘ಇದು ಕಳ್ಳನಿಗೊಂದು ಪಿಳ್ಳ ನೆಪ’ ಎಂಬ ಟೀಕಾಸ್ತ್ರವನ್ನು ಪ್ರಯೋಗಿಸಿದರು. ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿಯವರು, ‘‘ಸರಕಾರ ಈ ಮೂಲಕ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲು ಅಡಿಪಾಯ ಹಾಕುತ್ತಿದೆ’’ ಎಂದು ಆರೋಪಿಸಿದರು. ವಾಸ್ತವದಲ್ಲಿ ಡಿ.ಕೆ.ಶಿವಕುಮಾರ್ರವರ ಹೇಳಿಕೆಯಲ್ಲಿ ತಪ್ಪೇನಿರಲಿಲ್ಲ. ಸರಕಾರದಿಂದ ಯಾವುದೇ ಯೋಜನೆಗಳ ಬಗ್ಗೆ ಕಾಲ ಕಾಲಕ್ಕೆ ಪುನರಾವಲೋಕನ ಅತ್ಯಗತ್ಯ. ಆದರೆ ದೇಶದಲ್ಲಿ ಎರಡು ರಾಜ್ಯಗಳ ವಿಧಾನ ಸಭೆ ಚುನಾವಣೆ ಹಾಗೂ ರಾಜ್ಯದ ಮೂರು ವಿಧಾನ ಸಭೆ ಸ್ಥಾನಗಳ ಉಪ ಚುನಾವಣೆ ಸನಿಹದಲ್ಲಿರುವುದರಿಂದ ಈ ಹೇಳಿಕೆ ಯ ಟೈಮಿಂಗ್ ರಾಜಕೀಯ ದೃಷ್ಟಿಯಿಂದ ಸರಿಯಿರಲಿಲ್ಲ, ಅಷ್ಟೇ.
ಈ ಬೆಳವಣಿಗೆಯಿಂದ ಸಹಜವಾಗಿ ಆತಂಕಿತರಾದ ಪಕ್ಷದ ರಾಷ್ಟ್ರೀಯ ಅದ್ಯಕ್ಷರು ರಾಜ್ಯದ ವರಿಷ್ಥ ನಾಯಕರನ್ನು ತರಾಟೆಗೆ ತೆಗೆದುಕೊಂಡದ್ದೂ ಆಯಿತು. ‘‘ರಾಜ್ಯದ ಬಜೆಟ್ಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಬೇಕು’’ ಎಂಬ ಅವರ ಎಚ್ಚರಿಕೆಯ ಮಾತು ದೇಶದ ಪ್ರಧಾನಿಯವರನ್ನೇ ಜಾಗೃತಗೊಳಿಸಿಬಿಟ್ಟಿತು! ಪ್ರಧಾನಿ ಮೋದಿಯವರು, ‘ಎಕ್ಸ್’ ಸಾಮಾಜಿಕ ತಾಣದಲ್ಲಿ ‘‘ಕರ್ನಾಟಕದ ಕಾಂಗ್ರೆಸ್ ಸರಕಾರವು ಈ ಹಿಂದೆ ನೀಡಿದ್ದ ಅವಾಸ್ತವಿಕ ಭರವಸೆಗಳನ್ನು ಈಡೇರಿಸುವುದು ಕಷ್ಟಕರ ಎಂದು ಇದೀಗ ಮನಗಾಣುತ್ತಿದೆ’’ ಎಂದು ಪ್ರತಿಕ್ರಿಯೆ ನೀಡಿದರು. ಇದು ಬಿಜೆಪಿ ಪಕ್ಷವು ಗ್ಯಾರಂಟಿ ಯೋಜನೆಗಳ ಕುರಿತು ಹೊಂದಿರುವ ಧೋರಣೆಯನ್ನು ಸ್ಪಷ್ಟ ಪಡಿಸುತ್ತದೆ.
೨೦೨೩ರಲ್ಲಿ ರಾಜ್ಯ ವಿಧಾನ ಸಭೆಗೆ ನಡೆದ ಚುನಾವಣೆಯತ್ತ ಒಂದು ಬಾರಿ ದೃಷ್ಟಿ ಹರಿಸೋಣ. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಐದು ಉಚಿತ ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದಾಗ ಹುಬ್ಬೇರಿಸಿದವರೇ ಹೆಚ್ಚು. ಇದರ ಅಗಾಧ ವೆಚ್ಚವನ್ನು ಲೆಕ್ಕ ಹಾಕಿದಾಗ ಸುಲಭವಾಗಿ ಅನುಷ್ಠಾನವಾಗುವಂತಹ ಸಾಧ್ಯತೆಯನ್ನು ನಂಬಲು ಸಹ ಅಸಾಧ್ಯವಾಗಿತ್ತು. ವಿಪಕ್ಷಗಳು ಇವೆಲ್ಲ ಪೊಳ್ಳು ಭರವಸೆಗಳೆಂದೂ, ಕಾರ್ಯಸಾಧುವಲ್ಲವೆಂದೂ ಷರಾ ಬರೆದು ಬಿಟ್ಟವು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತ ದಾಖಲಿಸಿ ಅಧಿಕಾರಕ್ಕೆ ಏರಿದ್ದು ಈಗ ಇತಿಹಾಸ. ಪಕ್ಷದ ವಿಜಯದಲ್ಲಿ ಈ ಗ್ಯಾರಂಟಿ ಯೋಜನೆಗಳ ಪ್ರಭಾವವಿತ್ತು ಎಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ ವ್ಯಾಪಕ ಆಡಳಿತ ವಿರೋಧಿ ಅಲೆಯ ಪ್ರಭಾವವೇನೂ ಕಡಿಮೆಯೇನಿರಲಿಲ್ಲ.
ಸರಕಾರ ರಚನೆಯಾದದ್ದೇ ತಡ, ವಿಪಕ್ಷಗಳು ಅದರಲ್ಲೂ ಮುಖ್ಯವಾಗಿ ಬಿಜೆಪಿಯು ಗ್ಯಾರಂಟಿ ಯೋಜನೆಗಳನ್ನು ತಕ್ಷಣ ಜಾರಿಗೆ ತರುವಂತೆ ಬಲವಾಗಿ ಒತ್ತಾಯಿಸಲು ಹೊರಟಿದ್ದು ಕುತೂಹಲಕರ. ನಿಜ, ಜನತೆಗೆ ನೀಡಿದ ಭರವಸೆಯನ್ನು ಈಡೇರಿಸುವಂತಹ ಹೊಣೆಗಾರಿಕೆ ಕಾಂಗ್ರೆಸ್ ಪಕ್ಷದ ಮೇಲಿತ್ತು. ಆದರೆ ಪ್ರತಿಪಕ್ಷಗಳ ಆತುರದ ಒತ್ತಾಯದಲ್ಲಿ ರಾಜ್ಯದ ಜನತೆಯ ಏಳಿಗೆಯ ಪ್ರಾಮಾಣಿಕ ಕಾಳಜಿ ಇತ್ತೇ? ಬಹುಶಃ ಅವುಗಳಿಗೆ ಕಾಂಗ್ರೆಸ್ ಪಕ್ಷ ಉಚಿತ ಸೌಲಭ್ಯಗಳನ್ನು ಮುಂದಿಟ್ಟು ಕೊಂಡು ಜನರನ್ನು ಮರುಳು ಮಾಡಿ ಸೋಲಿಗೆ ಕಾರಣವಾದ ಸಿಟ್ಟು ಇದ್ದಿರಬಹುದು. ಇದರಿಂದ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ಇಂತಹ ಯೋಜನೆಗಳು ಕಾರ್ಯಸಾಧುವಲ್ಲ ಎಂದು ಸಾಧಿಸುವ ಉದ್ದೇಶವಿತ್ತು ಎನ್ನುವುದೇ ಹೆಚ್ಚು ಸತ್ಯ.
ಸರಕಾರ ಒಂದೊಂದಾಗಿ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿತು. ನುಡಿದಂತೆ ನಡೆದು ಕೊಳ್ಳುವುದು ಸರಕಾರಕ್ಕೆ ಅನಿವಾರ್ಯವಾಗಿತ್ತು. ಈ ನಿಟ್ಟಿನಲ್ಲಿ ಪ್ರತಿಯೊಂದು ಯೋಜನೆ ಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ವಿಶ್ಲೇಷಣೆ ನಡೆಸಿ ಆ ಬಳಿಕ ಜಾರಿ ಗೊಳಿಸಲಾಯಿತೇ? ವಿಪಕ್ಷಗಳಿಂದ ರಚನಾತ್ಮಕ ಸಲಹೆ, ಸೂಚನೆಗಳೇನಾದರೂ ಬಂತೇ? ವಾರ್ಷಿಕ ರೂ. ೫೨,೦೦೦ ವೆಚ್ಚದ ಯೋಜನೆಗಳ ಕುರಿತು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳೆರಡೂ ನಿರ್ಲಕ್ಷ್ಯ ವಹಿಸಿದರೆ ಅದನ್ನು ಯಾವ ರೀತಿ ಪರಿಗಣಿಸಬಹುದುದೆಂದು ಆಲೋಚನೆ ಮಾಡಬೇಕಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ನೀಡಿರುವ ಎಚ್ಚರಿಕೆಯನ್ನು ಈ ಹಿನ್ನೆಲೆಯಲ್ಲಿ ಅರ್ಥ ಮಾಡಿ ಕೊಳ್ಳಬೇಕು.
ಕಾಂಗ್ರೆಸ್ ಪಕ್ಷಕ್ಕೆ ಸಮಾಜ ಕಲ್ಯಾಣ ಕಾರ್ಯಕ್ರಮಗಳು ಹೊಸದೇನಲ್ಲ. ಆದರೆ ಈ ವಿನೂತನವಾದ ಐದು ಉಚಿತ ಯೋಜನೆಗಳು ರಾಜ್ಯದ ಎಲ್ಲಾ ಜಾತಿ, ಮತ, ವರ್ಗದ ಜನತೆಯನ್ನು ವ್ಯಾಪಕವಾಗಿ ಒಳಗೊಳ್ಳುವುದರಿಂದ ಅವುಗಳು ವೆಚ್ಚ ಮತ್ತು ಪ್ರಭಾವದ ದೃಷ್ಟಿಯಿಂದ ಗಮನಾರ್ಹವಾಗಿದೆ. ವೆಚ್ಚದ ತಲೆನೋವು ಸರಕಾರದ್ದಾದರೂ ಪ್ರತಿಪಕ್ಷ ಹಾಗೂ ಪ್ರಜ್ಞಾವಂತ ಜನತೆ ಈ ನಿಟ್ಟಿನಲ್ಲಿ ಚಿಂತಿಸಬೇಕಾಗಿರುವುದು ಸರಿಯಾದುದೇ. ಆದರೆ ಪ್ರತಿಪಕ್ಷಗಳ ಚಿಂತೆಗೆ ಹೆಚ್ಚು ಕಾರಣವಾಗಿರುವುದು ಈ ಯೋಜನೆಗಳ ಪ್ರಭಾವ ಹಾಗೂ ಆ ಮೂಲಕ ನಷ್ಟವಾಗುವ ಮತ ಪ್ರಮಾಣ. ಇರಲಿ, ಪ್ರಸಕ್ತ ರಾಜಕಾರಣದಲ್ಲಿ ಇವೆಲ್ಲ ಅವಾಸ್ತವಿಕ ನಡೆಗಳಲ್ಲ. ಆದರೆ ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿ ಈ ವಿಚಾರದಲ್ಲಿ ತಾಳುವಂತಹ ವಿಪರ್ಯಾಸಕರ ನಿಲುವು ಆಶ್ಚರ್ಯಕ್ಕೆ ಕಾರಣವಾಗುತ್ತಿದೆ. ಕರ್ನಾಟಕದಲ್ಲಿ ಇಂತಹ ಉಚಿತ ಯೋಜನೆಗಳನ್ನು ಟೀಕಿಸುತ್ತಿರುವ ಪಕ್ಷ ಅನ್ಯರಾಜ್ಯಗಳಲ್ಲಿ ಇಂತಹದ್ದೇ ಯೋಜನೆಗಳನ್ನು ಜನರ ಮುಂದಿರಿಸಿ ಮತ ಗಳಿಕೆಗಾಗಿ ಹಾತೊರೆಯುತ್ತಿದೆ. ಇದನ್ನೇ ಕಾಂಗ್ರೆಸ್ ಪಕ್ಷ ತನ್ನ ಯೋಜನೆಗಳನ್ನು ಬಿಜೆಪಿ ನಕಲು ಮಾಡುತ್ತಿದೆ ಎಂದು ಆರೋಪಿಸುತ್ತಿರುವುದು. ಈ ತಿಂಗಳಲ್ಲಿ ಜಾರ್ಖಂಡ್ ರಾಜ್ಯ ವಿಧಾನ ಸಭೆ ಚುನಾವಣೆ ನಡೆಯಲಿದ್ದು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ತಿಂಗಳಿಗೆ ರೂ. ೨,೧೦೦ ಮತ್ತು ಹಬ್ಬದ ಸಂದರ್ಭದಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ನೀಡುವಂತಹ ಭರವಸೆಗಳನ್ನು ನೀಡಿದೆ. ಇಂತಹ ದ್ವಂದ್ವ ಹಾಗೂ ವ್ಯೆರುಧ್ಯ ನೀತಿ ಸಮರ್ಥನೀಯವೇ? ಪ್ರಧಾನಿ ನರೇಂದ್ರ ಮೋದಿಯವರ ಸಹಿತ ಕೇಂದ್ರ ನಾಯಕರು ಈ ಉಚಿತ ಸೌಲಭ್ಯ ಅಥವಾ ‘ಫ್ರೀ ಬಿ’ಗಳನ್ನು ಯಾವತ್ತೂ ವಿರೋಧಿಸುವವರು. ಹಾಗಾದರೆ ಪಕ್ಷದ ಈ ರೀತಿಯ ನಡೆಗಳನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?
ಜನರಿಗೆ ನೀಡುವಂತಹ ಉಚಿತ ಸೌಲಭ್ಯಗಳನ್ನು ನಖ ಶಿಖಾಂತ ವಿರೋಧಿಸುವಂತಹ ದೃಷ್ಟಿಕೋನ ಒಪ್ಪಲಾಗದು. ಸಾಮಾಜಿಕ ಹಿನ್ನೆಲೆ, ವಾಸ್ತವ, ಪರಿಸ್ಥಿತಿ ಇತ್ಯಾದಿಗಳಿಗೆ ಅನುಸಾರವಾಗಿ ಕೆಲವೊಂದು ಉಚಿತ ಸೌಲಭ್ಯಗಳನ್ನು ಅರ್ಹ ನಾಗರಿಕರಿಗೆ ಒದಗಿಸುವುದು ಸರಕಾರದ ಕರ್ತವ್ಯ. ಇದು ಕಾನೂನಾತ್ಮಕ ವಾಗಿಯೂ, ಮಾನವೀಯವಾಗಿಯೂ ಸಮಂಜಸವಾದ ಕ್ರಮಗಳೇ ಆಗಿವೆೆ. ಭಾರತದಂತಹ ಅಸಮಾನ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯುಳ್ಳ ದೇಶದಲ್ಲಿ ಇದು ಅಗತ್ಯ ಕೂಡ.
ಕೇಂದ್ರ ಸರಕಾರದ ವಿಪರೀತ ಬೆಲೆಯೇರಿಕೆ ತಾಪವನ್ನು ತಗ್ಗಿಸಲು ಮತ್ತು ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಲು ಈ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವಂತಹ ಉದ್ದೇಶವೆಂದು ಹಿಂದೆ ಕಾಂಗ್ರೆಸ್ ಪಕ್ಷದ ಸಮರ್ಥನೆ ನೀಡಿತ್ತು. ಆದರೆ ಇಲ್ಲಿ ಅಡಕವಾಗಿದ್ದ ರಾಜಕೀಯ ತಂತ್ರಗಾರಿಕೆಯನ್ನು ನಿರಾಕರಿಸಲಾಗದಿದ್ದರೂ ಜನತೆಯ ಹಿತದೃಷ್ಟಿಯ ಉದ್ದೇಶವನ್ನು ಸಂಪೂರ್ಣವಾಗಿ ತಳ್ಳಿ ಹಾಕುವುದಂತೂ ಸಾಧ್ಯವಿಲ್ಲ. ಈ ಯೋಜನೆಗಳಿಂದ ರಾಜ್ಯದ ಜನತೆಗೆ ಪ್ರಯೋಜನ, ಅನುಕೂಲವಾಗಿರುವುದು ನಿಜ. ಆದರೆ ಈ ಯೋಜನೆಗಳ ಫಲಾನುಭವಿಯಾಗಲು ಯಾರು ಅರ್ಹರೋ ಅವರೊಂದಿಗೆ ಅರ್ಹರಲ್ಲದವರು ಅನಗತ್ಯವಾಗಿ ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದೇ ಇಲ್ಲಿಯ ಪ್ರಮುಖ ದೋಷವಾಗಿದೆ. ಹಸಿದವರಿಗೆ ಅನ್ನ ನೀಡುವುದು ಮಾನವ ಧರ್ಮ. ಆದರೆ ಹೊಟ್ಟೆ ತುಂಬಿದವರಿಗೂ ಅನ್ನದಾನದ ಅಗತ್ಯವಿದೆಯೇ? ಈ ಹಿನ್ನೆಲೆಯಲ್ಲಿ ಐದು ಗ್ಯಾರಂಟಿ ಯೋಜನೆಗಳ ಪುನರಾವಲೋಕನ ಅಗತ್ಯವಾಗಿ ಆಗಬೇಕಾಗಿದೆ. ಈ ಸಂದರ್ಭದಲ್ಲಿ ಪ್ರತಿಯೊಂದು ಯೋಜನೆಗಳ ಲೋಪ ದೋಷ, ಅಗತ್ಯತೆ, ಅರ್ಹತೆ, ವೆಚ್ಚ ಪ್ರಮಾಣ, ದಾಖಲಾಗಿರುವ ಫಲಪ್ರದಾಯಕತೆ, ವ್ಯರ್ಥತೆಯ ಪ್ರಮಾಣ ಇತ್ಯಾದಿ ಎಲ್ಲಾ ಅಂಶಗಳನ್ನು ಇಟ್ಟು ಕೊಂಡು ಸಮಗ್ರ ಅಧ್ಯಯನವಾಗಲಿ. ಕೆಲವೊಂದು ಯೋಜನೆಗಳಿಗೆ ಆಮೂಲಾಗ್ರ ಪರಿಷ್ಕರಣೆಯೂ ಬೇಕಾಗಿದೆ ಎಂಬ ಸಾರ್ವಜನಿಕ ಅಭಿಪ್ರಾಯವೂ ಇದೆ. ಸರಕಾರ ಈ ನಿಟ್ಟಿನಲ್ಲಿ ತಕ್ಷಣ ಕಾರ್ಯ ಪ್ರವೃತ್ತವಾಗಲಿ. ಪ್ರತಿಪಕ್ಷಗಳ ರಚನಾತ್ಮಕ ಸಲಹೆ, ಸಹಕಾರವಿರಲಿ.