ಏಕರೂಪ ಸಿವಿಲ್ ಸಂಹಿತೆಯ ಪ್ರಾರಂಭಿಕ ಅಡೆತಡೆಗಳು
(ಈ ಅಂಕಣದಲ್ಲಿ ಎರಡು ವಾರಗಳ ಹಿಂದೆ ಅಂದರೆ 13/07/2020ರ ಸಂಚಿಕೆಯಲ್ಲಿ ‘ಸಂವಿಧಾನದ ಏಕರೂಪ ಸಂದಿಗ್ಧ’ ಎಂಬ ಲೇಖನವನ್ನು ಬರೆದಿದ್ದೆ. ಇದನ್ನು ಅದರ ಮುಂದುವರಿಕೆಯಾಗಿ ಓದಿಕೊಳ್ಳಬಹುದು.)
‘ಸಮಾನ ನಾಗರಿಕ ಸಂಹಿತೆ’ಯೆಂದು ಬಹಳ ಜನರು, ‘ಏಕರೂಪ ನಾಗರಿಕ ಸಂಹಿತೆ’ಯೆಂದು ನಾನು, ‘ಯುಸಿಸಿ’ ಅಥವಾ ‘ಯುನಿಫಾರ್ಮ್ ಸಿವಿಲ್ ಕೋಡ್’ ಎಂದು ಇಂಗ್ಲಿಷಿನಲ್ಲಿ ಉಲ್ಲೇಖಿಸಿದ ಸಂವಿಧಾನದ 4ನೇ ಭಾಗವಾದ ‘ರಾಜ್ಯನೀತಿಯ ನಿರ್ದೇಶಕ ತತ್ವಗಳು’ ಎಂಬಲ್ಲಿ ಅಡಕವಾದ 44ನೇ ವಿಧಿಯ ಕುರಿತು ಪ್ರಧಾನಿ ಎತ್ತಿದ ಪ್ರಶ್ನೆ ಒಮ್ಮೆಗೇ ಒಂದಷ್ಟು ಆವೇಗ-ಉದ್ವೇಗಗಳನ್ನು ಸೃಷ್ಟಿಸಿತಾದರೂ ಅದೀಗ ಅದೇ ವೇಗದಲ್ಲಿ ಹರಿಯದಿರುವುದು ಪ್ರಜ್ಞಾವಂತರ ಗಮನಕ್ಕೆ ಬಂದಿರಬಹುದು. ಪ್ರಾಯಃ ಅದರ ಅಸಂಗತತೆ ಕಾನೂನು ನಿರ್ಮಾಪಕರಿಗೆ ಮನದಟ್ಟಾಗಿದೆಯೆಂದು ತಿಳಿದುಕೊಂಡಿದ್ದೇನೆ. ಮೊದಲಾಗಿ ಈ ‘ಯುನಿಫಾರ್ಮ್ ಸಿವಿಲ್ ಕೋಡ್’ ಎಂಬ ಇಂಗ್ಲಿಷ್ ಪದಸಮುಚ್ಚಯವು ಅಧಿಕೃತ ಕನ್ನಡ ಅನುವಾದದಲ್ಲಿ (ಭಾರತ ಸರಕಾರದಿಂದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಮೂಲಕ ಪ್ರಕಟಿತ ಆವೃತ್ತಿ-ಆಗಸ್ಟ್ 1985) ‘ನಾಗರಿಕರಿಗಾಗಿ ಏಕರೂಪದ ಸಿವಿಲ್ ಸಂಹಿತೆ’ಯೆಂದು ಹೇಳಲಾಗಿದೆ. ‘ನಾಗರಿಕರಿಗಾಗಿ’ ಎಂಬ ಪದವು ಮೂಲದಲ್ಲಿಲ್ಲ; ಅದು ಕನ್ನಡದಲ್ಲಿ ಸೇರಿಕೊಂಡಿದೆ. ಉತ್ಸಾಹಿ ಅನುವಾದಕರು ಮೂಲದ ಅನುವಾದವನ್ನಷ್ಟೇ ಹೇಳಿದರೆ ನಾಗರಿಕರಿಗೆ ಅರ್ಥವಾಗುವುದಿಲ್ಲವೆಂದೋ ಅಥವಾ ಮೂಲದ ಅರ್ಥವ್ಯತ್ಯಯವಾಗಿದೆಯೆಂದೋ ಹೀಗೆ ಮಾಡಿರಬಹುದು. (ರಾಜಕೀಯ ನಾಯಕರ ಇಂಗ್ಲಿಷ್ ಅಥವಾ ಹಿಂದಿ ಭಾಷಣಗಳನ್ನು ಅನುವಾದಿಸುವಾಗ ಕೈಚಪ್ಪಾಳೆಯನ್ನು ಗಿಟ್ಟಿಸುವ ಸಲುವಾಗಿ ಮೂಲದಲ್ಲಿಲ್ಲದ್ದನ್ನು ಹೇಳಿ ಪ್ರೇಕ್ಷಕರ ಜಯಘೋಷ ಅಥವಾ ಆಕ್ರೋಶಕ್ಕೆ ದಾರಿ ಮಾಡುವುದಿದೆ; ಮತ್ತು ಮೂಲ ಭಾಷಣಕಾರರಿಗೆ ಅನುವಾದದ ಭಾಷೆ ಸ್ವಲ್ಪ ತಿಳಿದಿದ್ದರೆ ಅವರಿಗೆ ಮುಜುಗರವಾದದ್ದೂ ಇದೆ!) 44ನೇ ವಿಧಿಯ ಕನ್ನಡಾನುವಾದವು ‘ಭಾರತದ ಎಲ್ಲ ರಾಜ್ಯಕ್ಷೇತ್ರದಾದ್ಯಂತ ನಾಗರಿಕರಿಗೆ ಏಕರೂಪದ ಸಿವಿಲ್ ಸಂಹಿತೆಯನ್ನು ಸನಿಶ್ಚಿತಗೊಳಿಸುವುದಕ್ಕಾಗಿ ರಾಜ್ಯವು ಪ್ರಯತ್ನಿಸತಕ್ಕುದು.’ ಎಂದಿದೆ. ಇಷ್ಟು ಕಷ್ಟದ ಕನ್ನಡಾನುವಾದಕ್ಕಿಂತ ಮೂಲದ ಇಂಗ್ಲಿಷನ್ನು ಓದಿದರೆ ಹೆಚ್ಚು ಅರ್ಥವಾಗಬಹುದು. ಇದಕ್ಕಿಂತಲೂ ಕಷ್ಟದ ಕನ್ನಡ ಭಾಷಣ ಮಾಡುವವರು, ಲೇಖನ ಬರೆಯುವವರು ಇದ್ದಾರೆ, ಬಿಡಿ; ಒಬ್ಬರಲ್ಲಿ ನಾನೇ ‘‘ನಿಮ್ಮ ಈ ಕನ್ನಡ ಲೇಖನವನ್ನು ಇಂಗ್ಲಿಷ್‌ಗೆ ಅನುವಾದಿಸಿ ದರೆ ಓದಿ ಅರ್ಥಮಾಡಿಕೊಳ್ಳಬಲ್ಲೆ’’ ಎಂದಿದ್ದೆ. ಅವರಿಗೆ ಅದರ ಅಂತರಾಳ ಅರ್ಥವಾಗಲಿಲ್ಲವೆಂದು ಕಾಣುತ್ತದೆ; ‘‘ಓಕೆ, ಓಕೆ, ಬೈ ಆಲ್ ಮೀನ್ಸ್’’ ಎಂದರು. ಇವೊಂದು ರೀತಿಯಲ್ಲಿ ಕೆಲವು ಸಾಹಿತ್ಯ ವಿಮರ್ಶೆಗಳಂತೆ ಮೂಲ ಕೃತಿಯನ್ನು ಓದುಗರಿಂದ ಮತ್ತಷ್ಟು ದೂರ ಸೆಳೆಯುವ ಸುಳಿಗಳು. ಇವುಗಳ ಬಗ್ಗೆ ನಾವೆಷ್ಟು ಜಾಗೃತರಾಗಿದ್ದರೂ ಸಾಲದು. ಅನೇಕ ಕಾನೂನುಗಳೇ ಕ್ಲಿಷ್ಟ. ಅವನ್ನು ರಚಿಸುವವರಿಗೆ ಅತ್ತ ಕಾನೂನೂ ಗೊತ್ತಿಲ್ಲ, ಇತ್ತ ಭಾಷೆಯೂ ಗೊತ್ತಿಲ್ಲ ಎಂಬ ಹಾಗಿರುತ್ತದೆ. ಕರ್ನಾಟಕದಲ್ಲಿ ಅಧಿಕೃತ ಲಿಖಿತ ವ್ಯವಹಾರಗಳೆಲ್ಲ ಕನ್ನಡದಲ್ಲೇ ನಡೆಯುವ ಉತ್ಸಾಹವನ್ನು ಗಮನಿಸಿ ನಾನೇ ಒಬ್ಬ ಹಿರಿಯ ಅಧಿಕಾರಿಗಳಲ್ಲಿ ಇದರ ಕಾರಣವನ್ನು ಕೇಳಿದ್ದೆ. ಅದಕ್ಕವರು ‘‘ಇಂಗ್ಲಿಷ್ ಸರಿಯಾಗಿ ಬಂದರೆ ತಾನೇ?’’ ಎಂದು ಹೇಳಿ ನಕ್ಕಿದ್ದರು. ದೇಶದ ಮಾಜಿ ಮುಖ್ಯ ನ್ಯಾಯಾಧೀಶ ಎನ್.ವಿ. ರಮಣ ಅವರು ಒಮ್ಮೆ ಶಾಸನವನ್ನು ರಚಿಸುವವರು-ಅಧಿಕಾರಿಗಳೂ ಜನಪ್ರತಿನಿಧಿಗಳೂ -ಕಾನೂನು ಓದಿದ್ದರೆ ಕಾನೂನು ಇನ್ನಷ್ಟು ಸ್ಪಷ್ಟವಾಗಿದ್ದು ಅರ್ಥವತ್ತಾಗಿದ್ದು, ಜನೋಪಯೋಗಿಯಾಗಿದ್ದು ನ್ಯಾಯನಿರ್ಣಯಕ್ಕೆ ಇಷ್ಟು ತ್ರಾಸವಾಗುತ್ತಿರಲಿಲ್ಲ ಎಂದಿದ್ದರು! 44ನೇ ವಿಧಿಯಲ್ಲಿ ಉಲ್ಲೇಖಿಸಿದ ‘ರಾಜ್ಯ’ ಎಂಬ ಪದವೇ ಸ್ವಲ್ಪ ಮಟ್ಟಿಗೆ ತಪ್ಪಭಿಪ್ರಾಯವನ್ನು ನೀಡುವಂಥದ್ದು. ಇಂಗ್ಲಿಷ್‌ನಲ್ಲಿ ‘StateHe states thus, state of affairs, princely state, state of the art, stately’ ಎಂಬ ಪದವು ಅನೇಕ ಅಂದರೆ ಹೇಳಿಕೆ, ಸ್ಥಿತಿ, ಅವಸ್ಥೆ, ದೊಡ್ಡಸ್ತಿಕೆ, ವೈಭವ, ಆಡಂಬರ, ರಾಷ್ಟ್ರ, ರಾಜ್ಯ, ಸಂಸ್ಥಾನ (ಬಳಕೆಯಲ್ಲಿ ,) ಮುಂತಾದ ಅರ್ಥಗಳನ್ನು ಹೊಂದಿದ್ದರೂ ಈ ಸಂದರ್ಭದಲ್ಲಿ ಕನ್ನಡದ ‘ರಾಷ್ಟ್ರ’ ಅಥವಾ ‘ದೇಶ’ ಎಂಬುದಕ್ಕೆ ಸಂವಾದಿಯಾದದ್ದು. ಸಂವಿಧಾನದಲ್ಲಿ ‘India, that is Bharat, shall be a Union of States
’ ಎಂಬ ವಾಕ್ಯವು ಈ ಗೊಂದಲಕ್ಕೆ ಕಾರಣವಿರಬಹುದು. ಆದ್ದರಿಂದ ಈ ಎರಡು ಪದಗಳನ್ನು ಭಿನ್ನ ಅರ್ಥಗಳಲ್ಲಿ ಸೂಚಿಸುವ ಅಗತ್ಯವಿದೆ. ಅಧಿಕೃತ ಪ್ರತಿಯಲ್ಲಿ ಇರುವುದನ್ನು ನಾವು ವೈಯಕ್ತಿಕವಾಗಿ ಬೇರ್ಪಡಿಸಿ ಬಳಸುವುದು ಸರಿಯಾಗದು. ಹಾಗೆಯೇ ‘ಸಿವಿಲ್’ ಎಂಬ ಪದಕ್ಕೆ ಇಂಗ್ಲಿಷ್-ಕನ್ನಡ ಅರ್ಥಕೋಶಗಳಲ್ಲಿ ‘ಪ್ರಜೆ/ಜನಗಳಿಗೆ ಸಂಬಂಧಿಸಿದ’, ‘ಮುಲಕಿ’, ‘ದಿವಾಣಿ’, ‘ವ್ಯವಹಾರದ’ ಮುಂತಾದ ಅರ್ಥಗಳಿವೆ. ನಮ್ಮ ರಾಜ್ಯದಲ್ಲಿ ಸಿವಿಲ್ ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಅಧಿಕೃತವಾಗಿಯೇ ‘ವ್ಯವಹಾರ ನ್ಯಾಯಾಲಯ’ ಎಂಬ ಪದವಿದೆ. (‘ದಿವಾಣಿ ನ್ಯಾಯಾಲಯ’ವೆಂದೂ ಉಲ್ಲೇಖಿಸಲಾಗಿದೆ.) ಆದರೆ ಇದು ‘ಕ್ರಿಮಿನಲ್’ ಎಂಬ ಪದದಿಂದ ‘ಸಿವಿಲ್’ ಹೇಗೆ ಭಿನ್ನವೆಂದು ಸೂಚಿಸುವುದಕ್ಕಷ್ಟೇ ಬಳಕೆಯಾಗಿದೆಯೆನ್ನಿಸುತ್ತದೆ. ಆದರೆ ಕೆಲವು ಕಡೆ-ಅಥವಾ ಬಹಳ ಮಟ್ಟಿಗೆ- ‘ಸಿವಿಲ್’ ಮತ್ತು ‘ಸಿವಿಕ್’ ಎಂಬ ಪದಗಳು ಪರಸ್ಪರ ಬಳಕೆಯನ್ನು ವಿನಿಮಯಮಾಡಿಕೊಂಡಂತಿವೆ. ‘ಸಿವಿಕ್’ ಎನ್ನುವುದು ನೈಜಾರ್ಥದಲ್ಲಿ ‘ಸಭ್ಯ’ ಅಥವಾ ‘ನಾಗರಿಕ’ ಎಂಬ ಅರ್ಥವನ್ನು ಹೊಂದಿದೆ. ‘ಸಿಟಿಜನ್’ ಎಂಬ ಪದಕ್ಕೆ ‘ಪ್ರಜೆ’ ಎಂಬ ಅರ್ಥವಿದೆ. ‘ನಾಗರಿಕ’ ಎಂಬ ಪದಕ್ಕೆ ‘ನಗರವಾಸಿ’ ಅಥವಾ ‘ಸಂಸ್ಕೃತಿಯನ್ನು ಹೊಂದಿದವನು’ ಎಂದೂ ಹೇಳಲಾಗುತ್ತದೆ. (ಈ ಪದಗಳ ಗೋಜಲನ್ನು ಭಾಷಾಶಾಸ್ತ್ರಜ್ಞರೇ ಸೂಕ್ಷ್ಮವಾಗಿ ಗಮನಿಸಿ ಅದಕ್ಕೊಂದು ಅಧಿಕೃತ ಮುದ್ರೆಯನ್ನೊತ್ತಿ ಪರಿಹರಿಸಬೇಕು. ಏಕೆಂದರೆ ಇವೆಲ್ಲ ವಿಶ್ವವಿದ್ಯಾನಿಲಯಗಳಲ್ಲಿ, ಅಧ್ಯಯನ ಕೇಂದ್ರಗಳಲ್ಲಿ ಮಾತ್ರವಲ್ಲ, ನಿತ್ಯ ವ್ಯವಹಾರಗಳಲ್ಲಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಕಾನೂನು ವಲಯಗಳಲ್ಲಿ ಬಳಕೆಯಾಗುವುದರಿಂದ ಶ್ರೀಸಾಮಾನ್ಯರಿಗೆ ಅರ್ಥವಾಗಿ ಒಪ್ಪಿತವಾಗಬೇಕಲ್ಲವೇ? ಕನ್ನಡ ಪದಕ್ಕೆ ಸಂಸ್ಕೃತ ಅಥವಾ ಇಂಗ್ಲಿಷ್‌ನಲ್ಲಿ ಅರ್ಥ ಬರೆದಂತಾಗಬಾರದು. ಆದರೆ ನೈಜ ಕಾಳಜಿಯಿರಬೇಕಾದದ್ದು ವಿಚಾರದ ಬಗ್ಗೆ. ನಮ್ಮ ಸಂವಿಧಾನ ನಿರ್ಮಾಪಕರು ತಜ್ಞರಾಗಿದ್ದರು. ನ್ಯಾಯವೇತ್ತರಾಗಿದ್ದರು. ಭಾಷೆ ಮತ್ತು ಕಾನೂನಿನ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡಿದ್ದರು. ದೇಶದ ಅಗತ್ಯಗಳನ್ನು ಪೂರೈಸುವ ಸಂಪರ್ಕಸೇತುವಾಗಿ ಇಂಗ್ಲಿಷನ್ನು ಅವರು ಬಳಸಿದ್ದರಿಂದ ಸಿದ್ಧ ಅರ್ಥಗಳನ್ನು ಊಹಿಸಿ ಸಂವಿಧಾನವನ್ನು ರಚಿಸಿದರು. ನಮ್ಮ ವಿವಿಧ ಭಾಷೆ, ಸಂಸ್ಕೃತಿ, ಜಾತಿ, ಜನಾಂಗ, ಧರ್ಮ/ಮತ ಇವುಗಳನ್ನು ಗಮನಿಸಿ ಸಂಕ್ಷಿಪ್ತತೆಯು ರಚನೆಯ ಕೌಶಲ್ಯವೆಂಬುದನ್ನು ಅರಿತೂ ಸಂವಿಧಾನವನ್ನು ಇತರ ದೇಶಗಳ ಸಂವಿಧಾನಕ್ಕಿಂತ ತುಸು ದೀರ್ಘವಾಗಿಯೇ ಉಳಿಸಿಕೊಂಡರು. (ಬಹಳಷ್ಟು ದೇಶಗಳು ಏಕರೂಪ ಸಂಸ್ಕೃತಿ, ಭಾಷೆ, ಜನಾಂಗಗಳನ್ನು ಹೊಂದಿವೆ. ಅವುಗಳಿಗೆ ನಮ್ಮ ದೇಶವು ಎದುರಿಸುವ ಸಮಸ್ಯೆಗಳಿಲ್ಲ.)
ಭಾರತದ ವೈವಿಧ್ಯ, ವೈಶಿಷ್ಟ್ಯಗಳನ್ನು ಗಮನಿಸಿ ರಚಿಸಿದ ಸಂವಿಧಾನವಾದ್ದರಿಂದ ಇಲ್ಲಿ ಭಿನ್ನತೆಯಲ್ಲಿ ಏಕತೆಗೆ ಅವಕಾಶವಾಗಿದೆ. ನಾನೇ ಸರಿ ಎಂಬ ಧೋರಣೆ ಭಾರತಕ್ಕಿಲ್ಲ; ಇರಬಾರದು. ಕೆಲವೆಡೆ ಗೋಮಾಂಸ ನಿಷಿದ್ಧವಾದರೆ ಇನ್ನು ಕೆಲವೆಡೆ ಅದೇ ಮುಖ್ಯ ಆಹಾರ. ಪಾನನಿಷೇಧ ಬೇಕೆಂಬ ಗಾಂಧಿವಾದವನ್ನು ಅನುಸರಿಸುವವರ ನಡುವೆ ಮದ್ಯಪಾನವು ಅಗತ್ಯ (ಮತ್ತು ಕೆಲವೊಮ್ಮೆ ಅನಿವಾರ್ಯ ಆಚರಣೆ) ವೆಂಬ ರಾಜಕೀಯ, ಸಾಮಾಜಿಕ, ಆರ್ಥಿಕ ವಾದವೂ ರೂಢಿಯಲ್ಲಿದೆ. ಹೀಗೆ ಈ ಭಿನ್ನತೆ ವೈರುಧ್ಯಗಳವರೆಗೂ ಚಾಚಿಕೊಂಡಿದೆ. ಹುಟ್ಟಿನಿಂದ ಸಾವಿನವರೆಗೆ ನಿಯಮಗಳು, ಶಾಸ್ತ್ರಗಳು ಭಿನ್ನ; ಆದರೆ ಪರಸ್ಪರರು ಸಹನೆಯಿಂದ ಬಾಳುವ ಸಮಾಜ ಸೃಷ್ಟಿಯೇ ನಮ್ಮ ಸಂವಿಧಾನದ ಉದ್ದೇಶ. ಕೊನೆಯ ತನಕ ನಾನೂ ಸರಿ; ನೀವೂ ಸರಿ; ಎಲ್ಲರೂ ಸರಿ; ಹೊಂದಿಕೊಂಡು ಹೋಗೋಣ ಎಂಬುದೇ ನಮ್ಮ ಸಂವಿಧಾನದ ಸಾರಸರ್ವಸ್ವ. ಇದನ್ನು ಉಲ್ಲಂಘಿಸುವ ಅಥವಾ ಅತಿಕ್ರಮಿಸುವ ಯಾವುದೇ ಸಿದ್ಧಾಂತಗಳನ್ನು ಹಕ್ಕು ಅಥವಾ ಕರ್ತವ್ಯವೆಂದು ನಿಯಮಿಸದೆ ‘ರಾಜ್ಯ ನೀತಿಯ ನಿರ್ದೇಶಕ ತತ್ವಗಳು’ ಎಂದು ಸಂವಿಧಾನದಲ್ಲಿ ಸೇರಿಸಲಾಗಿದೆ. ಇವು ಶಾಸನಕ್ಕಿಂತಲೂ ಮಿಗಿಲಾದ ನೈತಿಕ ಅಂಶಗಳು. ಆದರೆ ಹಕ್ಕುಗಳಲ್ಲ. ಯಾವನಾದರೂ ಮದ್ಯಪಾನ ಸೇವನೆಯನ್ನು ಮಾಡುತ್ತಾನಾದರೆ ಅದು ಕೂಡದು ಎಂದು ಬೀದಿಯಲ್ಲಿ, ಮಾಧ್ಯಮಗಳಲ್ಲಿ, ಭಾಷಣಗಳಲ್ಲಿ ಲೇಖನಗಳಲ್ಲಿ ವಾದಿಸಬಹುದೇ ಹೊರತು ಕಾನೂನಾತ್ಮಕವಾಗಿ ವಿರೋಧಿಸುವಂತಿಲ್ಲ; ತಡೆಯುವಂತಿಲ್ಲ. ಆದರೆ ಒಕ್ಕೂಟ ಸರಕಾರ ಇಲ್ಲವೇ ರಾಜ್ಯ ಸರಕಾರಗಳು ಈ ಸಂಬಂಧ ಕಾನೂನನ್ನು ಜಾರಿಗೊಳಿಸಿದರೆ ಅದನ್ನು ಅತಿಕ್ರಮಿಸುವುದು ದಂಡನೀಯ; ಶಿಕ್ಷಾರ್ಹ.
ಯಾವುದೇ ಕಾಯ್ದೆಯಲ್ಲಿ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನಕ್ಕೆ ನೇರ ತೊಡಕಾಗಬಲ್ಲ ಅಂಶಗಳು ಸಾಕಷ್ಟಿವೆ. ಅವನ್ನು ಪ್ರತ್ಯೇಕವಾಗಿ ಚರ್ಚಿಸಬಹುದು. ಈ ಸೂಚನೆಯೊಂದಿಗೆ ಕಾನೂನಿನ ‘ಪಾಂಡೋರಾ ಪೆಟ್ಟಿಗೆ’ಯನ್ನು ತೆರೆಯಬಹುದು. ತನ್ನ ಬೀರುವಿನಲ್ಲಿ ಇಷ್ಟೊಂದು ಅಸ್ಥಿಪಂಜರಗಳಿರುವುದನ್ನು ಬಲ್ಲ ಯಾವುದೇ ಒಕ್ಕೂಟ ಸರಕಾರವು ಏಕರೂಪ ನಾಗರಿಕ ಸಂಹಿತೆಯೆಂಬ ವಿದ್ಯುತ್ ಪ್ರವಹಿಸುವ ತಂತಿಯನ್ನು ಮುಟ್ಟಲು ಹೋಗದು. ರಾಜಕಾರಣದ ಅಗತ್ಯಗಳು ಬೇರೆ; ವಾಸ್ತವದ ಅರಿವು ಬೇರೆ. ಜೊತೆಗೆ ನಾವು ಬರೀ ಈ ದೇಶದಲ್ಲಿ ಬದುಕುತ್ತಿಲ್ಲ, ಈ ದೇಶವೂ ಸೇರಿದಂತೆ ವಿಶ್ವದ ಭಾಗ ನಾವು ಎಂಬುದನ್ನು ನೆನಪಿಟ್ಟುಕೊಂಡರೆ ಸಹಜ ಮನುಷ್ಯರಾಗಿ ಇವನ್ನು ಅರಿತುಕೊಳ್ಳಬಹುದು.
ಸದ್ಯ ಏಕರೂಪ ಸಿವಿಲ್ ಸಂಹಿತೆಯ ಬಗ್ಗೆ ವಿಚಾರ ನಡೆಯುತ್ತಿದೆ. ಇದರ ತೊಡಕುಗಳನ್ನು ಅರಸುತ್ತ ಹೋದರೆ ಇದು ಅನುಷ್ಠಾನಗೊಳ್ಳಲು ಅತ್ಯಂತ ಕಷ್ಟವಾಗಿರುವ ತತ್ವ. ಕ್ರಿಮಿನಲ್ ಕಾಯ್ದೆಗಳ ಹೊರತಾಗಿ ಎಲ್ಲಾ ಸಿವಿಲ್ ಕಾಯ್ದೆಗಳು ಭಾರತದ ಸಂಸ್ಕೃತಿ, ವೈವಿಧ್ಯ-ವೈಶಿಷ್ಟ್ಯಗಳನ್ನವಲಂಬಿಸಿ ರೂಪಿಸಿದ ಕಾಯ್ದೆಗಳು. ಇದಕ್ಕೆ ಕಾರಣಗಳಿವೆ. ಪಾರಂಪರಿಕವಾಗಿ ಬಂದ ಅಲಿಖಿತ ಮತ್ತು ಅವಿಚ್ಛಿನ್ನ ಪರಂಪರೆ, ಸಂಪ್ರದಾಯಗಳನ್ನು, ರೀತಿ-ರಿವಾಜುಗಳನ್ನು ಸಮಾಜವು ಗೌರವಿಸಿದೆ; ಸ್ವೀಕರಿಸಿದೆ ಮತ್ತು ಅನುಶಾಸನಗೊಳ್ಳಬಲ್ಲ ನಿಯಮಗಳೆಂದು ಅಂಗೀಕರಿಸಿದೆ. ಅನೇಕ ಬಾರಿ ಅಲಿಖಿತ ನಿಯಮಗಳು ಲಿಖಿತ ನಿಯಮಗಳಿಗಿಂತ ಹೆಚ್ಚು ಶಕ್ತವಾಗುತ್ತವೆ. ಯಾವುದಾದರೂ ಒಂದು ಅಪಘಾತವಾದರೆ ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ಒಯ್ಯುವುದು ಮನುಷ್ಯತ್ವ. ಅದಕ್ಕೆ ಯಾವ ಕಾನೂನೂ ಬೇಕಿಲ್ಲ. ಪ್ರಾಣಿದಯೆ, ರಕ್ತದಾನ, ದೇಹದಾನದಂತಹ ಸಾಮಾಜಿಕ ಕಾಯಕಗಳು ಇನ್ನೂ ಇವೆಯಾದರೆ ಅವಕ್ಕೆ ಕಾನೂನು ಕಾರಣವಲ್ಲ. ಏಕರೂಪ ಸಿವಿಲ್ ಸಂಹಿತೆಯ ಬಗ್ಗೆ ಈಗಾಗಲೇ ಸಾಕಷ್ಟು ಧೂಳೆೆದ್ದಿದೆ. ಅಷ್ಟರ ಮಟ್ಟಿಗೆ ವಿವಾದಗಳನ್ನೆಬ್ಬಿಸುವ ಪ್ರಧಾನಿಯವರ ಪ್ರಯತ್ನ ಯಶಸ್ವಿಯಾಗಿದೆ. ಆದರೆ ಈ ವಿವಾದ ಯಾರನ್ನು ಹೆಚ್ಚು ಬಾಧಿಸುತ್ತದೆ, ಯಾರನ್ನು ಕಡಿಮೆ ಬಾಧಿಸುತ್ತದೆಯೆಂದು ಈಗಲೇ ಹೇಳಲಾಗದು. ಈ ದೇಶದ ಜನರ ಮನೋಭಾವ ಹೇಗಿದೆಯೆಂದರೆ, ತನಗೆ ಅನುಕೂಲವಾಗುವುದಾದರೆ ಏಕರೂಪ ಸಿವಿಲ್ ಸಂಹಿತೆ ಬೇಕು, ಇಲ್ಲವಾದರೆ ಬೇಡ. ರಾಜಕಾರಣಿಗಳಿಗೂ ಇದು ತಮ್ಮ ಅಧಿಕಾರಕ್ಕೆ ತಮ್ಮ ಪಕ್ಷಕ್ಕೆ ರಾಜಕೀಯ ಲಾಭವಾಗುವುದಿದ್ದರೆ ಬೇಕು, ಇಲ್ಲವಾದರೆ ಬೇಡ. ಇದು ಈಗಲೇ ಮೊಳಕೆಯೆತ್ತಿದೆ. ಹಿಂದೂ ಅವಿಭಕ್ತ ಕುಟುಂಬಗಳಿಗೆ ಆದಾಯಕರದಲ್ಲಿ ಸಿಗುವ ವಿನಾಯಿತಿಗಳು ಇತರರಿಗೆ ಇಲ್ಲ. ಇದು ಎಲ್ಲಿ ರದ್ದಾಗುತ್ತದೆಯೋ ಎಂಬ ಆತಂಕ ಸಾಕಷ್ಟು ಜನರಿಗಿದೆ. ಜೊತೆಗೆ ಆನುವಂಶಿಕತೆ ಎಲ್ಲಿ ರದ್ದಾಗುತ್ತದೆಯೋ ಎಂಬ ಭಯ ಬೇರೆ. ಆಗ ಹಿಂದೂ ಮತ್ತು ಇತರರ ವಾರಸುದಾರಿಕೆ ಏಕರೂಪವಾಗುತ್ತದೆ. ಹಾಗೆಯೇ ಈಗಿರುವ ಹಿಂದೂ ವಾರಸುದಾರಿಕೆಯ ಕಾಯ್ದೆಯು ಸಂವಿಧಾನದ 366 (25)ನೇ ವಿಧಿಯಡಿ ಹೆಸರಿಸಲಾದ ಅನುಸೂಚಿತ ಬುಡಕಟ್ಟಿನ ಜನರಿಗೆ ಅನ್ವಯಿಸುವುದಿಲ್ಲ. 366 (25)ನೇ ವಿಧಿಯು 342ನೇ ವಿಧಿಯತ್ತ ಸೂಚನಾ ಫಲಕವನ್ನು ಹೂಡಿದೆ. 342ನೇ ವಿಧಿಯು ಅನುಸೂಚಿತ ಬುಡಕಟ್ಟಿನ ವಿವರಗಳನ್ನು ನೀಡಿದೆ. ಹೀಗೆ ನೆಲಮಟ್ಟದ ಒಂದು ಆಧಾರ ಬಿದ್ದರೆ ಅದನ್ನಾಧರಿಸಿದ ಇತರ ರಚನೆಗಳು ಬೀಳುವ ಆಟದ ಹಾಗೆ ಇದು ಮುರಿದು ಬೀಳಬಹುದು. ಅನ್ವಯವಾದರೆ ಪರಿಣಾಮ ಏನಾಗಬಹುದು? ವಿವಾಹ-ವಿಚ್ಛೇದನದಂತಹ ಕಾಯ್ದೆಯೂ ಆಚಾರಗಳನ್ನು ಆಧರಿಸಿರುವುದರಿಂದ ಅವೂ ಕುಸಿದು ಬೀಳಬಹುದು. ಒಟ್ಟಿನಲ್ಲಿ ದೇಶದ ಈ ತನಕದ ಸ್ಥಿತಿಯು ಅಲ್ಲೋಲಕಲ್ಲೋಲವಾಗಬಹುದು. ಏಕರೂಪ ಸಿವಿಲ್ ಸಂಹಿತೆಯ ಕಾಯ್ದೆಯನ್ನು ಚರ್ಚಿಸುವಾಗ ವಿವಿಧ ಮತ-ಧರ್ಮಗಳಿಗೆ ಅನ್ವಯವಾಗುವ ಹಲವಾರು ಕಾನೂನುಗಳನ್ನು ವಿವರವಾಗಿ ಚರ್ಚಿಸಬಹುದು. ಯಾವುದೇ ಕಾಯ್ದೆಯಲ್ಲಿ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನಕ್ಕೆ ನೇರ ತೊಡಕಾಗಬಲ್ಲ ಅಂಶಗಳು ಸಾಕಷ್ಟಿವೆ. ಅವನ್ನು ಪ್ರತ್ಯೇಕವಾಗಿ ಚರ್ಚಿಸಬಹುದು. ಈ ಸೂಚನೆಯೊಂದಿಗೆ ಕಾನೂನಿನ ‘ಪಾಂಡೋರಾ ಪೆಟ್ಟಿಗೆ’ಯನ್ನು ತೆರೆಯಬಹುದು. ತನ್ನ ಬೀರುವಿನಲ್ಲಿ ಇಷ್ಟೊಂದು ಅಸ್ಥಿಪಂಜರಗಳಿರುವುದನ್ನು ಬಲ್ಲ ಯಾವುದೇ ಒಕ್ಕೂಟ ಸರಕಾರವು ಏಕರೂಪ ನಾಗರಿಕ ಸಂಹಿತೆಯೆಂಬ ವಿದ್ಯುತ್ ಪ್ರವಹಿಸುವ ತಂತಿಯನ್ನು ಮುಟ್ಟಲು ಹೋಗದು. ರಾಜಕಾರಣದ ಅಗತ್ಯಗಳು ಬೇರೆ; ವಾಸ್ತವದ ಅರಿವು ಬೇರೆ. ಜೊತೆಗೆ ನಾವು ಬರೀ ಈ ದೇಶದಲ್ಲಿ ಬದುಕುತ್ತಿಲ್ಲ, ಈ ದೇಶವೂ ಸೇರಿದಂತೆ ವಿಶ್ವದ ಭಾಗ ನಾವು ಎಂಬುದನ್ನು ನೆನಪಿಟ್ಟುಕೊಂಡರೆ ಸಹಜ ಮನುಷ್ಯರಾಗಿ ಇವನ್ನು ಅರಿತುಕೊಳ್ಳಬಹುದು.