ಭ್ರಷ್ಟಾಚಾರ ಎಂಬುದು ಇಷ್ಟು ಸಸಾರವೇ?
ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಆರು ತಿಂಗಳ ಹಿಂದೆ ಕರ್ನಾಟಕದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಅಲ್ಲಿಂದ ಇಲ್ಲಿಯ ತನಕ ಸರಕಾರದ ಆಡಳಿತ ವೈಖರಿಯ ಕುರಿತು ನಡೆದಿರುವ ಏಕೈಕ ಚರ್ಚೆ ಎಂದರೆ ‘ಗ್ಯಾರಂಟಿ ಭಾಗ್ಯ’ಗಳ ಚರ್ಚೆ. ಗ್ಯಾರಂಟಿಗಳ ಪರ-ವಿರುದ್ಧ ‘ಉತ್ಪಾದಿತ ನೆರೇಟಿವ್ಗಳ’ ಅಬ್ಬರದಲ್ಲಿ ಸರಕಾರ ಒಂದು ಮಹತ್ವದ ‘ಸಹಜ’ ಸಂಗತಿಯನ್ನು ಮರೆತೇ ಬಿಟ್ಟಂತಿದೆ. ಸಕಾಲದಲ್ಲಿ ಎಚ್ಚೆತ್ತು ಅದನ್ನು ನೆನಪಿಸಿಕೊಳ್ಳದಿದ್ದರೆ, ಮುಂಬರುವ ಲೋಕಸಭಾ ಚುನಾವಣೆಗಳ ವೇಳೆ ಅದು ಈ ಸರಕಾರಕ್ಕೆ ಖಂಡಿತಾ ಕಹಿ ಕಷಾಯವಾಗಿ ಪರಿಣಮಿಸಲಿದೆ.
ಹಾಲಿ ಸರಕಾರ ಅಧಿಕಾರಕ್ಕೆ ಬರುವ ಎರಡು ವರ್ಷಗಳಷ್ಟು ಹಿಂದೆ, ಆಗಿನ್ನೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳಾಗಿದ್ದಾಗ (ಜುಲೈ 16, 2021), ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಅವರು ಪ್ರಧಾನಮಂತ್ರಿಗಳ ಕಚೇರಿಗೆ ಸಲ್ಲಿಸಿದ ಒಂದು ದೂರು ಸಲ್ಲಿಸಿದ್ದರು. ಅದರಲ್ಲಿ ಗುತ್ತಿಗೆದಾರರಿಗೆ ‘ಪರ್ಸೆಂಟೇಜ್’ ಹೆಸರಿನಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆಪಾದಿಸಲಾಗಿತ್ತು. ದೂರಿನ ಬಳಿಕದ ರಾಜಕೀಯ ಅಬ್ಬರದಲ್ಲಿ ಈ ಮೂಲ ದೂರು ಬಹುತೇಕ ಕಳೆದೇ ಹೋಯಿತು. ಯಡಿಯರಪ್ಪನವರ ಜಾಗದಲ್ಲಿ ಬಸವರಾಜ ಬೊಮ್ಮಾಯಿ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಜುಲೈ ೨೮, ೨೦೨೧ರಂದು ಅಧಿಕಾರ ವಹಿಸಿಕೊಂಡರು. ಆ ಬಳಿಕವೂ ಭ್ರಷ್ಟಾಚಾರ ದೊಡ್ಡ ಚರ್ಚೆ ಆಗಲಿಲ್ಲ. ಆದರೆ, ವಿಧಾನಸಭಾ ಚುನಾವಣೆಗಳಿಗೆ ಎಂಟು ತಿಂಗಳುಗಳ ರನ್ ಅಪ್ ಬಾಕಿ ಇರುವಾಗ, ಒಂದು ಮುಂಜಾನೆ ಮುಖ್ಯಮಂತ್ರಿಗಳ ನಿವಾಸದ ಎದುರು ‘#payCM’ ಪೋಸ್ಟರ್ಗಳು ಕಾಣಿಸಿಕೊಂಡದ್ದೇ ತಡ. ಭ್ರಷ್ಟಾಚಾರದ ಚರ್ಚೆ ಹೊತ್ತಿಕೊಂಡು ಉರಿಯತೊಡಗಿತು. ಭ್ರಷ್ಟಾಚಾರದ ವಿರುದ್ಧ ತಳಮಟ್ಟದಲ್ಲಿ ಮಡುಗಟ್ಟುತ್ತಾ ಬಂದಿದ್ದ ಅಸಹನೆಗೆ ‘ಪೇ ಸಿಎಂ’ ಅಭಿಯಾನ ಧ್ವನಿಕೊಟ್ಟದ್ದೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆ ಗೆಲ್ಲುವುದಕ್ಕೆ ಪ್ರಮುಖ ಕಾರಣಗಳಲ್ಲೊಂದು. ಗ್ಯಾರಂಟಿ ಭಾಗ್ಯಗಳದ್ದು ಮೇ ೨೦೨೩ರ ಚುನಾವಣೆ ಫಲಿತಾಂಶದಲ್ಲಿ ಕೇವಲ ‘ಐಸಿಂಗ್ ಆನ್ ದಿ ಕೇಕ್’ ಪಾತ್ರ. ಈ ಗ್ಯಾರಂಟಿಗಳ ಪ್ರಕಟಣೆ ಆದದ್ದು ಯಾವಾಗ ಎಂದು ನೆನಪಿಸಿಕೊಂಡರೆ ಇದು ಅರ್ಥವಾಗುತ್ತದೆ.
ಈ ವಾಸ್ತವವನ್ನು ಗೆದ್ದ ಮತ್ತು ಸೋತ ಪಕ್ಷಗಳೆರಡೂ ತಮ್ಮ ತಮ್ಮ ಅನುಕೂಲಗಳ ಮೂಗಿನ ನೇರಕ್ಕೆ ಮರೆತೇಬಿಟ್ಟಿವೆ. ಆಡಳಿತದಲ್ಲಿ ಭ್ರಷ್ಟಾಚಾರ ಹೊಸ ಸಂಗತಿಯೇನಲ್ಲ. ಕರ್ನಾಟಕದಲ್ಲಿ ಉತ್ತರದಾಯಿತ್ವದ ವ್ಯವಸ್ಥೆ ಜಾರಿಗೆ ಬಂದದ್ದು 1956ರಷ್ಟು ಹಿಂದೆ. ರಾಜ್ಯದಲ್ಲಿ ಸರಕಾರಿ ಭ್ರಷ್ಟಾಚಾರ ಹತ್ತಿಕ್ಕಲು ವಿಜಿಲೆನ್ಸ್ ನಿರ್ದೇಶನಾಲಯ ಸ್ಥಾಪನೆಗೊಂಡದ್ದು 1965ರಲ್ಲಿ. ಮುಂದೆ, 1984ರಲ್ಲಿ ಲೋಕಾಯುಕ್ತ ಕಾಯ್ದೆ ಜಾರಿಗೆ ಬಂತು. ತಮಾಷೆ ಎಂದರೆ, ಯಾವುದನ್ನು ನಿಯಂತ್ರಿಸಲು ಕಾನೂನುಗಳು ಬಂದವೋ, ಆ ‘ರೋಗ’ ಪ್ರತಿಯೊಂದೂ ಮದ್ದಿನೊಂದಿಗೆ ಉಲ್ಬಣಗೊಳ್ಳುತ್ತಲೇ ಸಾಗಿತು. ಕಳೆದ ಎರಡು ದಶಕಗಳಿಂದೀಚೆಗೆ ಭ್ರಷ್ಟಾಚಾರದ ರೋಗ ‘ಗುಣಮುಖ’ ಆಗುವ ಹಂತವನ್ನು ಮೀರಿ ಬೆಳೆದುನಿಂತಿದೆ. ಒಂದು ಕಾಲದಲ್ಲಿ ಕಂದಾಯ, ಲೋಕೋಪಯೋಗಿ, ಗೃಹ, ಅಬ್ಕಾರಿಯಂತಹ ಇಲಾಖೆಗಳಿಗೆ ಸೀಮಿತ ವಾಗಿದ್ದ ಈ ರೋಗ, ಇಂದು ಜನ ಯಾವತ್ತೂ ಊಹಿಸಿರದಿದ್ದ ಶಿಕ್ಷಣ, ಮುಜರಾಯಿ, ಸಮಾಜಕಲ್ಯಾಣದಂತಹ ಇಲಾಖೆಗಳನ್ನೂ ಬಿಟ್ಟಿಲ್ಲ. ಈ ಬಗ್ಗೆ ಏನೇ ಬರೆದರೂ ಅದು ಇಂದು ಕ್ಲೀಷೆ.
ಈವತ್ತು ಇರುವ ಸನ್ನಿವೇಶಕ್ಕೆ ಸಣ್ಣದೊಂದು ಉದಾಹರಣೆ ಬೇಕಿದ್ದರೆ, ಕಳೆದ ಆರು ತಿಂಗಳಲ್ಲಿ ಒಂದೇ ಹುದ್ದೆಗೆ ಒಂದಕ್ಕಿಂತ ಹೆಚ್ಚು ಜನ ಅಧಿಕಾರಿಗಳ ವರ್ಗಾವಣೆ ಆಗಿರುವ ಇರಿಸು ಮುರಿಸಿನ ಪ್ರಕರಣಗಳು ಎಷ್ಟು ವರದಿ ಆಗಿವೆ ಎಂಬುದನ್ನೊಮ್ಮೆ ನೆನಪಿಸಿಕೊಳ್ಳಿ. ಲಂಚ ಕೊಡದೆ ಈಗ ಅಧಿಕಾರಶಾಹಿಯ ಯಾವುದೇ ಹಂತದಲ್ಲಿ ಗಾಳಿಯೂ ಬೀಸುವುದಿಲ್ಲ. ಕಡೆಗೆ ಸಮಾಜಸೇವೆ ಮಾಡುವುದಿದ್ದರೂ ಲಂಚಕೊಟ್ಟೇ ಮಾಡಬೇಕಾದ ವಿಷಮ ಸ್ಥಿತಿಗೆ ರಾಜ್ಯ ತಲುಪಿದೆ. ಹಾಗೆಂದು ಆಪಾದಿಸಿದ ತಕ್ಷಣ, ಭ್ರಷ್ಟಾಚಾರಕ್ಕೆ ‘ಸಾಕ್ಷ್ಯ’ ಎಲ್ಲಿದೆ ಕೊಡಿ, ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂಬ ಸಿದ್ಧ ಉತ್ತರ ಬರುತ್ತದೆ. ನಿಜಕ್ಕೆಂದರೆ ಈಗ ಸರಕಾರ ತಾನೇ ಸ್ವತಃ ‘ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಇಲ್ಲ’ ಎಂಬುದನ್ನು ಸಾಕ್ಷ್ಯ ಸಮೇತ ನಿರೂಪಿಸುವ ಹೊಣೆ ಹೊರಬೇಕಿದೆ (ಅತ್ಯಾಚಾರ ಪ್ರಕರಣಗಳಲ್ಲಿ, ತಾನು ಅಪರಾಧ ಎಸಗಿಲ್ಲ ಎಂಬುದನ್ನು ಸಾಬೀತು ಮಾಡುವ ಹೊಣೆ ಸ್ವತಃ ಅತ್ಯಾಚಾರಿಗೆ ಇರುವುದೇ, ಇಲ್ಲೂ ಮಾದರಿ ಆಗಬೇಕಿದೆ!).
ಅಕೌಂಟಬಿಲಿಟಿಯ ಪಾತ್ರ
2011ರ ಹೊತ್ತಿಗೆ ಇಂಡಿಯಾ ಅಗೇನ್ಸ್ಟ್ ಕರಪ್ಷನ್ ಚಳವಳಿ ದೇಶವನ್ನು ಭ್ರಷ್ಟಾಚಾರ ಮುಕ್ತ ಗೊಳಿಸುವ ‘ಸುಪಾರಿ’ ಪಡೆದು ಕಾರ್ಯಾಚರಿಸುತ್ತಿದ್ದಾಗ, ಡಾ. ಮನಮೋಹನ್ ಸಿಂಗ್ ಅವಧಿಯಲ್ಲೇ ಸಂಭವಿಸಿದ್ದ ಒಂದು ಮಹತ್ವದ ಬೆಳವಣಿಗೆ ಎಂದರೆ ಆಡಳಿತಕ್ಕೆ ಉತ್ತರದಾಯಿತ್ವ ತರಲು, ‘Right of Citizens for Time Bound Delivery of Goods and Services of their Grievances’ ಮಸೂದೆ ಲೋಕಸಭೆಯಲ್ಲಿ ಮಂಡಿತವಾಯಿತು. ಆದರೆ ಅದು ಇಚ್ಛಾಶಕ್ತಿಯ ಕೊರತೆಯಿಂದಾಗಿ ಕೈಜಾರಿಹೋಯಿತು. ಕೆಲವು ರಾಜ್ಯಗಳು ಮಾತ್ರ ಇಚ್ಛಾಶಕ್ತಿ ತೋರಿಸಿದ್ದರಿಂದ ಅಲ್ಲಿ ಅದು ಜಾರಿಗೆ ಬಂದಿತು. ಅಂತಹದೊಂದು ಕಾನೂನು ಕರ್ನಾಟಕದಲ್ಲೂ ಜಾರಿಗೆ ಬಂದಿತ್ತು. ಅದನ್ನಿಲ್ಲಿ ‘ಸಕಾಲ’ ಎಂದು ಕರೆದರು. ಆಗ ಮಖ್ಯಮಂತ್ರಿಗಳಾಗಿದ್ದವರು ಸದಾನಂದ ಗೌಡರು. ೧೧ ಇಲಾಖೆಗಳ ೧೫೧ ಸೇವೆಗಳು ಆರಂಭದಲ್ಲಿ ಈ ಸಕಾಲ ವ್ಯಾಪ್ತಿಗೆ ಬಂದವು. ೨೦೧೨ರಲ್ಲಿ ಆ ಸೇವೆಗಳ ಸಂಖ್ಯೆಯನ್ನು ೨೫೬ಕ್ಕೆ ಏರಿಸಲಾಯಿತು. ‘Karnataka Guarantee of Services to Citizens Act’ (ಸಕಾಲ ಕಾಯ್ದೆ) ಸಕಾಲದಲ್ಲಿ ಸೇವೆ ಒದಗಿಸುವುದನ್ನು ಖಚಿತಪಡಿಸುವ ಮೂಲಕ, ‘‘ಸತಾಯಿಸುವುದಕ್ಕಾಗಿಯೇ ಅರ್ಜಿಗಳನ್ನು ನನೆಗುದಿಗೆ ಹಾಕುವ’’ ಭ್ರಷ್ಟ ಅಧಿಕಾರಶಾಹಿಗೆ ತಲೆನೋವಾಗಬಲ್ಲ ಹಾದಿ ತೆರೆದಿತ್ತು. ಈಗ ೧೨ ವರ್ಷಗಳಲ್ಲಿ, ಡಿಜಿಟಲ್ ಆಡಳಿತ ವ್ಯವಸ್ಥೆ ಬಲಗೊಳ್ಳುತ್ತಾ ಹೋದಂತೆ, ಸರಕಾರದ ಎಲ್ಲ ಸೇವೆಗಳೂ ಸಕಾಲದ ಅಡಿ ಬಂದು, ಅದಕ್ಕೊಂದು ಸಂತುಲಿತವಾದ ಮೇಲ್ಮನವಿ-ದೂರು ಪರಿಹಾರ ವ್ಯವಸ್ಥೆ ರೂಪಗೊಳ್ಳಬೇಕಿತ್ತು; ಈ ಹೊತ್ತಿಗೆ ಅಧಿಕಾರಶಾಹಿ ಶೇ. ೧೦೦ ಉತ್ತರದಾಯಿಯಾಗಿರುವ ಸ್ಥಿತಿ ಬಂದೊದಗಬೇಕಿತ್ತು.
ಆದರೆ, ಇದನ್ನೆಲ್ಲ ಬಲಪಡಿಸುವ ಬದಲು ನಿಧಾನ ವಿಷವಿಕ್ಕಿ ಇಂಚಿಂಚಾಗಿ ಸತ್ವಹೀನಗೊಳಿಸಲಾಯಿತು. ಈಗ ಕೇವಲ ನಾಮ್-ಕೇ-ವಾಸ್ತೆ ಆಗಿಬಿಟ್ಟಿರುವ ಸಕಾಲ ವ್ಯವಸ್ಥೆ ಕೇವಲ ಲೆಟರ್ನಲ್ಲಿ ಉಳಿದು, ಅದರ ಸ್ಪಿರಿಟ್ ಆವಿಯಾಗಿದೆ! ಸರಕಾರಿ ಇಲಾಖೆಗಳೆಲ್ಲವೂ ಮಧ್ಯವರ್ತಿಗಳ ಆಡೊಂಬಲವಾಗಿಬಿಟ್ಟಿವೆ. ಈಗ ಭ್ರಷ್ಟಾಚಾರ ಯಾವಪರಿ ಸಾಂಸ್ಥಿಕವಾಗಿಬಿಟ್ಟಿದೆ ಎಂದರೆ ಅದೊಂದು ಪರ್ಯಾಯ ತೆರಿಗೆ ವ್ಯವಸ್ಥೆಯೇ ಆಗಿ ಪಟ್ಟು ಹಿಡಿದು ಕುಳಿತುಬಿಟ್ಟಿದೆ. ಈ ಮಹಾವೃಕ್ಷಕ್ಕೆ ಈಗ ಅಧಿಕಾರಶಾಹಿ ರೆಂಬೆಕೊಂಬೆಗಳಾದರೆ, ರಾಜಕೀಯ ಪಕ್ಷಗಳೇ ತಾಯಿಬೇರು ಎನ್ನಲಾಗುತ್ತಿದೆ.
ಕರ್ನಾಟಕ ಸರಕಾರ ನಿಜಕ್ಕೂ ಜನಪರ ಆಡಳಿತ ಕೊಡುವ ಉದ್ದೇಶ ಹೊಂದಿದ್ದರೆ, ಈ ನಿಟ್ಟಿನಲ್ಲಿ ತಕ್ಷಣ ಕೆಲಸ ಆರಂಭಿಸಬೇಕು ಮತ್ತು ಆ ಕೆಲಸ ನೇರ ವಿಧಾನಸೌಧದಲ್ಲೇ ಆರಂಭಗೊಳ್ಳಬೇಕು. ಕಳೆದ ಕೆಲವು ದಿನಗಳಲ್ಲಿ ಗುತ್ತಿಗೆದಾರರೊಬ್ಬರ ಸಾವು, ಆಡಳಿತ ಪಕ್ಷದ ಶಾಸಕರೊಬ್ಬರ ಅಸಹನೆ, ಸಚಿವಾಲಯಗಳಲ್ಲೇ ಲಂಚದ ಆರೋಪ ಇವೆಲ್ಲ ಬೆಳವಣಿಗೆಗಳ ಹಿಂದಿರುವುದು ಭ್ರಷ್ಟಾಚಾರವೇ. ಈ ಸುದ್ದಿ ಎದ್ದಾಗಲೆಲ್ಲ ಆಡಳಿತ ಮತ್ತು ಪ್ರತಿಪಕ್ಷಗಳು ತೂ ತೂ ಮೈ ಮೈ ಎಂದಾಕ್ಷಣ ಕರಗುವಷ್ಟು ಸಸಾರದ್ದಲ್ಲ ಈ ಭ್ರಷ್ಟಾಚಾರದ ಕಾರ್ಮೋಡ. ಭ್ರಷ್ಟಾಚಾರ ನಿಯಂತ್ರಣ ಕ್ಕೆ ಬರದಿದ್ದರೆ, ಬೇರೆ ಎಲ್ಲ ಭಾಗ್ಯಗಳೂ ವ್ಯರ್ಥ.