ಜ್ಯೋತಿಬಾ ಫುಲೆ ಅವರನ್ನು ಪ್ರಭಾವಿಸಿದ ಥಾಮಸ್ ಪೈನೆ

ಜ್ಯೋತಿಬಾ ಆರಂಭಿಸಿದ ಸನಾತನ ಹಿಂದೂ ಧರ್ಮದ ಪೊಳ್ಳುಗಳನ್ನು ಬಯಲು ಮಾಡುವ ಅಭಿಯಾನವನ್ನು ಅಂಬೇಡ್ಕರ್ ಸಮರ್ಥವಾಗಿ ಮುಂದುವರಿಸಿದರು. ಥಾಮಸ್ ಫೈನೆ ಅವರು ಜ್ಯೋತಿಬಾ ಅವರ ಮೇಲೆ ಪ್ರಭಾವ ಬೀರಿದರೆ, ಜ್ಯೋತಿಬಾ ಫುಲೆ ಅಂಬೇಡ್ಕರ್ ಅವರನ್ನು ಪ್ರಭಾವಿಸಿದರು. ಹೀಗಾಗಿ ಜ್ಯೋತಿಬಾ ಫುಲೆ ಮತ್ತು ಅಂಬೇಡ್ಕರ್ ಇಬ್ಬರನ್ನೂ ಅಮೆರಿಕದ ಚಿಂತಕರು ಪ್ರಭಾವಿಸಿದ್ದು ಕಾಕತಾಳೀಯವಾದರೂ ಸತ್ಯ.
ಅಮೆರಿಕವನ್ನು ಆಳುತ್ತಿದ್ದ ಬ್ರಿಟಿಷ್ ವಸಾಹತುಶಾಹಿ 1776ರಲ್ಲಿ ಅತಿಯಾದ ತೆರಿಗೆ ಹೇರುತ್ತಿತ್ತು. ಈ ಹೆಚ್ಚುವರಿ ತೆರಿಗೆಯ ಶೋಷಣೆಗೆ ಅಮೆರಿಕನ್ನರು ಒಳಗೊಳಗೆ ಕುದಿಯುತ್ತಿದ್ದರಾದರೂ ನೇರವಾಗಿ ಪ್ರತಿರೋಧಿಸಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಬ್ರಾದರ್ಲಿ ಲವ್ ಸಿಟಿಯಲ್ಲಿ ಜನವರಿ 10, 1776 ರಲ್ಲಿ ಒಂದು ಅನಾಮಧೇಯ ಕರಪತ್ರ ಹಂಚಲ್ಪಡುತ್ತದೆ. ಈ ಕರಪತ್ರದ ಹೆಸರು ‘ಕಾಮನ್ ಸೆನ್ಸ್’, 47 ಪುಟದ ಈ ಕರಪತ್ರದಲ್ಲಿ ‘ಅಮೆರಿಕದ ನಿವಾಸಿಗಳಿಗಾಗಿ’ ಎಂದು ಬರೆಯಲಾಗಿತ್ತು. ಈ ಕರಪತ್ರ ಜನರಿಂದ ಜನರಿಗೆ ದಾಟುತ್ತಲೇ ಹೋಯಿತು. ಕಡಿಮೆ ಅವಧಿಯಲ್ಲಿ ಈ ಕರಪತ್ರ ಲಕ್ಷಗಟ್ಟಲೆ ಹಂಚಲ್ಪಟ್ಟಿತು. ಬಾರ್, ಪಬ್, ಬೀದಿಗಳಲ್ಲಿ ಈ ಕರಪತ್ರವನ್ನು ಗಟ್ಟಿಯಾಗಿ ಓದತೊಡಗಿದರು. ಈ ಕರಪತ್ರವನ್ನು ಅಮೆರಿಕದ ಮೊದಲ ವೈರಲ್ ಆದ ವಿದ್ಯಮಾನ ಎಂದು ಗುರುತಿಸಲಾಗುತ್ತದೆ.
ಹಾಗಾದರೆ ಈ ಕರಪತ್ರ ಯಾಕೆ ಇಷ್ಟು ವೈರಲ್ ಆಯಿತು? ಯಾರು ಇದನ್ನು ಬರೆದವರು? ಈ ಕರಪತ್ರದಲ್ಲಿ ಇದ್ದದ್ದಾದರೂ ಏನು ಮುಂತಾದ ಪ್ರಶ್ನೆಗಳು ತಕ್ಷಣಕ್ಕೆ ಹುಟ್ಟುತ್ತವೆ. ಈ ಕರಪತ್ರ ಮೊತ್ತಮೊದಲ ಬಾರಿಗೆ ಬ್ರಿಟನ್ ವಸಹಾತು ಪ್ರಭುತ್ವದ ಬಗ್ಗೆ ಪ್ರತಿರೋಧದ ಕಿಡಿಯನ್ನು ಹೊತ್ತಿಸಿತ್ತು. ಇನ್ನು ಬ್ರಿಟಿಷರ ಗುಲಾಮಗಿರಿ ಸಾಕು, ಅಮೆರಿಕನ್ನರಾದ ನಾವು ನಮ್ಮ ದೇಶವನ್ನು ಬ್ರಿಟಿಷ್ ವಸಹಾತುವಿನಿಂದ ಬಿಡಿಸಿಕೊಳ್ಳಬೇಕು ಎನ್ನುವ ಕ್ರಾಂತಿಕಾರಿ ಬೀಜಗಳನ್ನು ಈ ಕರಪತ್ರ ಒಳಗೊಂಡಿತ್ತು. ಈ ಕರಪತ್ರವನ್ನು ಅನಾಮಧೇಯವಾಗಿ ಬರೆದಾತ ‘ಥಾಮಸ್ ಪೈನೆ’ (1737-1809).
ಬ್ರಿಟನ್ ದಬ್ಬಾಳಿಕೆಯ ಆಡಳಿತವನ್ನು ಕೊನೆಗೊಳಿಸುವುದೇ ಅಮೆರಿಕನ್ನರ ಧ್ಯೇಯವಾಗಬೇಕು. ರಾಜಪ್ರಭುತ್ವ ಕೊನೆಗೊಂಡು ಅಮೆರಿಕದ ಪ್ರಜೆಗಳದೇ ಆಡಳಿತ ಆರಂಭವಾಗಬೇಕು. ಅಮೆರಿಕನ್ನರು ಸ್ವತಂತ್ರರಾಗಬೇಕು. ಹೀಗೆ ಈ ಕರಪತ್ರ ಬ್ರಿಟಿಷ್ ವಸಾಹತುಶಾಹಿ ಆಡಳಿತಗಾರ 3ನೇ ಜಾರ್ಜ್ ವಿರುದ್ಧ ಜನರ ಅಭಿಪ್ರಾಯವನ್ನು ರೂಪಿಸಿತು. ರಾಜನು ದೈವಿಕ ಆಯ್ಕೆ ಎನ್ನುವುದೇ ಸುಳ್ಳು. ನಿಜಕ್ಕೂ ದೈವದ ಒಳ್ಳೆಯತನದ ವಿರುದ್ಧವಾಗಿ ಈ ರಾಜಶಾಹಿ ನಡೆದುಕೊಳ್ಳುತ್ತಿದೆ. ‘ಯಾರೂ ಕೂಡ ಅಸಮಾನವಾಗಿ ಹುಟ್ಟುವುದಿಲ್ಲ. ನಿಸರ್ಗದಲ್ಲಿ ಎಲ್ಲರೂ ಸಮಾನವಾಗಿಯೇ ಹುಟ್ಟುವುದು. ಹುಟ್ಟುವಾಗ ಯಾರೂ ಯಾವ ರೀತಿಯಿಂದಲೂ ಅಸಮಾನರಲ್ಲ. ಹುಟ್ಟಿದ ನಂತರ ಅಸಮಾನತೆಯ ಕಣ್ಕಟ್ಟುಗಳು ಶುರುವಾಗುತ್ತದೆ. ಹಾಗಾಗಿ ಯಾರು ಯಾರಿಗೂ ಗುಲಾಮರಲ್ಲ ಎಲ್ಲರೂ ಸಮಾನರು’ ಎನ್ನುವುದನ್ನು ಥಾಮಸ್ ಪೈನೆ ಗಟ್ಟಿ ಧ್ವನಿಯಲ್ಲಿ ಕರಪತ್ರದ ಮೂಲಕ ಮಾತನಾಡುತ್ತಾರೆ. ಈ ಮಾತುಗಳು ಅಮೆರಿಕನ್ನರ ಎದೆಗಿಳಿಯುತ್ತವೆ. ಎಲ್ಲರ ಎದೆಯೊಳಗೂ ಬ್ರಿಟನ್ ವಸಾಹತುಶಾಹಿ ವಿರುದ್ಧದ ಕ್ರಾಂತಿಯ ಕಿಡಿ ಹೊತ್ತಿಕೊಂಡು ಅಮೆರಿಕನ್ ಸ್ವಾತಂತ್ರ್ಯ ಹೋರಾಟ ಶುರುವಾಗುತ್ತದೆ.
ಅಮೆರಿಕದಲ್ಲಿ ಥಾಮಸ್ ಪೈನೆ ಹೊತ್ತಿಸಿದ ಕ್ರಾಂತಿಯ ಬೆಳಕು ಭಾರತಕ್ಕೂ ಹರಡುತ್ತದೆ. ಭಾರತವನ್ನು ಅದೇ ಬ್ರಿಟಿಷ್ ಸಾಮ್ರಾಜ್ಯಶಾಹಿಯೇ ಆಳುತ್ತಿರುತ್ತದೆ. ಇತ್ತ ಮಹಾರಾಷ್ಟ್ರದಲ್ಲಿ ಜ್ಯೋತಿಬಾ ಫುಲೆ (1827-1890) ಇಂಗ್ಲಿಷ್ ಶಿಕ್ಷಣ ಪಡೆದು ಸಾವಿತ್ರಿಬಾಯಿ ಅವರನ್ನು ಮದುವೆಯಾದ ನಂತರ ದಮನಿತ ಸಮುದಾಯಗಳಿಗೆ ಶಾಲೆ ತೆರೆಯುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಆಳವಾಗಿ ಓದತೊಡಗುತ್ತಾರೆ. ಅವರ ಓದಿನ ಹರವು ಹೆಚ್ಚಾಗುತ್ತದೆ. ಆ ಹೊತ್ತಿಗೆ ಮುಂಬೈ ಪ್ರಾಂತದಲ್ಲಿ ಅಮೆರಿಕನ್, ಸ್ಕ್ಯಾಟಿಷ್, ಲಂಡನ್ ಮೊದಲಾದ ಮಿಷನರಿ ಸೊಸೈಟಿಗಳು ಇಂಗ್ಲಿಷ್ ಶಿಕ್ಷಣದ ಜೊತೆ ಜೊತೆಗೆ ಕ್ರಿಶ್ಚಿಯನ್ ಧರ್ಮವನ್ನು ಪ್ರಚಾರ ಮಾಡುವುದರಲ್ಲಿ ನಿರತವಾಗಿದ್ದವು. ಇದರ ಪ್ರಭಾವದಿಂದ ಜಾಗತಿಕ ಸಾಹಿತ್ಯದ ಕೃತಿಗಳು ಓದಿಗೆ ಸಿಗತೊಡಗಿದವು. ಈ ಪ್ರಭಾವದಲ್ಲಿ ಜ್ಯೋತಿಬಾ ಫುಲೆ ಅವರಿಗೆ ಓದಲು ಸಿಕ್ಕ ಪುಸ್ತಕವೇ ಥಾಮಸ್ ಪೈನೆ ಅವರು ಬರೆದ ‘ರೈಟ್ಸ್ ಆಫ್ ಮ್ಯಾನ್’ ಕೃತಿಯಾಗಿದೆ.
ಈ ಕೃತಿಯಲ್ಲಿ ಥಾಮಸ್ ಜಾಗತಿಕ ಶಾಂತಿಗಾಗಿ, ನ್ಯಾಯಯುತ ಆಡಳಿತಕ್ಕಾಗಿ, ಅಂಧಶ್ರದ್ಧೆಯ ರಾಜಕೀಯ ಪ್ರಭುತ್ವದ ಆಡಳಿತವನ್ನು ಕೊನೆಗೊಳಿಸುವುದಕ್ಕಾಗಿ, ದಮನಿತರು, ಗುಲಾಮರು ಜಾಗೃತರಾಗಿ ರಾಜನ ರಾಜಶಾಹಿ ದರ್ಪವನ್ನು ಪ್ರಶ್ನಿಸುವಂತಾದರೆ, ರಾಜನ ಅಪರಾಧಗಳನ್ನು ಬಯಲು ಮಾಡಿ ಪ್ರಶ್ನೆ ಮಾಡುವಂತಹ ಕೆಲಸ ‘ಅಪರಾಧ’ ಎನ್ನುವುದಾದರೆ ನನ್ನ ಸಮಾದಿಯ ಮೇಲೆ ‘ಅಪರಾಧಿ’ ಎಂಬ ಹೆಸರು ಕೆತ್ತಲ್ಪಡಲಿ ಎಂದು ಬರೆದಿದ್ದಾನೆ. ಇದು ಮಾನವ ಹಕ್ಕುಗಳ ಬಗ್ಗೆ ಮಾತನಾಡುತ್ತದೆ. ಮೊದಲಬಾರಿಗೆ ಮಾನವ ಹಕ್ಕುಗಳ ಬಗ್ಗೆ ಜ್ಯೋತಿಬಾಗೆ ಒಳಗಣ್ಣು ತೆರೆಯುತ್ತದೆ.
ಹೀಗೆ ಥಾಮಸ್ ಪೈನೆ 18ನೇ ಶತಮಾನದಲ್ಲಿ ಸಾಮಾಜಿಕ ಸಮತೆಗಾಗಿ ಧ್ವನಿ ಎತ್ತಿದವರು. ಅಮೆರಿಕದ ಮೊದಲ ಮಹಾಕ್ರಾಂತಿ ಎಂದು ಕರೆಯಲ್ಪಡುವ ‘ಅಮೆರಿಕನ್ ಕ್ರಾಂತಿ’(1776-1783) ಮತ್ತು ಇದೇ ಕಾಲಘಟ್ಟದಲ್ಲಿ ನಡೆದ ‘ಫ್ರೆಂಚ್ ಕ್ರಾಂತಿ’ (1789-1791) ಎಂಬ ಈ ಎರಡೂ ಮಹಾಕ್ರಾಂತಿಗಳನ್ನು ಪ್ರೇರೇಪಿಸಿದವರು. ಅಮೆರಿಕನ್ ಕ್ರಾಂತಿಯಲ್ಲಿ ಮತ್ತೆ ಮತ್ತೆ ಥಾಮಸ್ ಪೈನೆ ಅವರ ಬರಹಗಳನ್ನು ಉಲ್ಲೇಖಿಸುತ್ತಿದ್ದ ಸೇನಾಧಿಪತಿ ಜಾರ್ಜ್ ವಾಶಿಂಗ್ಟನ್ ಮುಂದೆ ಅಮೆರಿಕದ ಅಧ್ಯಕ್ಷನಾಗುತ್ತಾರೆ. ನೆಪೋಲಿಯನ್ ಥಾಮಸ್ ಅವರ ವಿಚಾರಧಾರೆಯಿಂದ ಪ್ರಭಾವಿತರಾಗಿ ‘‘ನಿಮ್ಮ ಬಂಗಾರದ ಪುತ್ಥಳಿಯನ್ನು ಜಗತ್ತಿನ ಎಲ್ಲಾ ನಗರಗಳಲ್ಲಿ ಸ್ಥಾಪಿಸಬೇಕು’’ ಎಂದು ಹೊಗಳಿದ್ದರು. ಆದರೂ ಥಾಮಸ್ ಮುಂದೆ ‘‘ನೆಪೋಲಿಯನ್ ನಂತಹ ಹುಸಿ ಅಜ್ಞಾನಿ ಎಂದೂ ಇರಲಿಲ್ಲ’’ ಎಂದು ತೀಕ್ಷವಾಗಿ ಪ್ರತಿಕ್ರಿಯಿಸುತ್ತಾರೆ. ಥಾಮಸ್ ಪೈನೆ ಅವರ ಕಾಮನ್ ಸೆನ್ಸ್ (1776), ಅಮೆರಿಕನ್ ಕ್ರೈಸಿಸ್(1776), ರೈಟ್ ಆಫ್ ಮ್ಯಾನ್ (1791), ಏಜ್ ಆಫ್ ರೀಸಸ್(1793), ಎಗ್ರೇರಿಯನ್ ಜಸ್ಟಿಸ್ (1795) ಮೊದಲಾದ ಕೃತಿಗಳು ಜಾಗತಿಕ ವಿದ್ವತ್ ಲೋಕವನ್ನು ಗಮನಸೆಳೆದಂತಹ ವಿಚಾರ ಕ್ರಾಂತಿಯನ್ನೇ ಮಾಡಿದ ಪುಸ್ತಕಗಳು.
ಹೀಗೆ ಜಾಗತಿಕ ಕ್ರಾಂತಿಯ ಪ್ರವಾದಿ ಎಂದು ಕರೆಯಲ್ಪಡುವ ಥಾಮಸ್ ಪೈನೆ ಜ್ಯೋತಿಬಾ ಫುಲೆಯನ್ನು ತೀವ್ರವಾಗಿ ಪ್ರಭಾವಿಸುತ್ತಾರೆ. ಪೈನೆ ಅವರ ‘ರೈಟ್ ಆಫ್ ಮ್ಯಾನ್’ ಕೃತಿಯನ್ನು ಓದಿದ ಜ್ಯೋತಿಬಾ ಅವರ ಆಲೋಚನಾ ಕ್ರಮವೇ ಪಲ್ಲಟವಾಗುತ್ತದೆ. ಪೈನೆ ಅವರ ‘ಅಮೆರಿಕದಲ್ಲಿ ಆಫ್ರಿಕನ್ನರ ಗುಲಾಮಗಿರಿ’ ಎನ್ನುವ ಲೇಖನ ಭಾರತದಲ್ಲಿನ ಗುಲಾಮಗಿರಿಯನ್ನು ಅರ್ಥಮಾಡಿಕೊಳ್ಳಲು ಜೋತಿಬಾ ಅವರಿಗೆ ಒಂದು ಕಣ್ಣೋಟವಾಗುತ್ತದೆ. ಇದರ ಪರಿಣಾಮದಲ್ಲಿಯೇ ಅವರು 1873ರಲ್ಲಿ ‘ಗುಲಾಮಗಿರಿ’ ಕೃತಿಯನ್ನು ಬರೆಯುತ್ತಾರೆ. ಈ ಕೃತಿ ಮರಾಠಿ ಮತ್ತು ಇಂಗ್ಲಿಷ್‌ನಲ್ಲಿ ಪ್ರಕಟವಾಗಿ ಏಕಕಾಲಕ್ಕೆ ಮರಾಠಿಗರಿಗೂ, ಪಾಶ್ಚಾತ್ಯರಿಗೂ ಅರಿವಾಗುವಂತೆ ಗುಲಾಮಗಿರಿಯ ಹುನ್ನಾರಗಳನ್ನು ವಿವರಿಸುತ್ತದೆ. ‘‘ಅಮೆರಿಕದ ನೀಗ್ರೊಗಳು ತಮ್ಮ ದಾಸ್ಯದಿಂದ ಬಿಡುಗಡೆ ಹೊಂದಬೇಕು ಎಂದು ಅಲ್ಲಿನ ಬಿಳಿಯರಲ್ಲಿ ಜಾಗೃತಿ ಮೂಡಿದ ಹಾಗೆ, ಇಲ್ಲಿನ ಗುಲಾಮಗಿರಿಯನ್ನು ಪೋಷಣೆ ಮಾಡುವ ಮೇಲ್ಜಾತಿಗಳಿಗೆ ಅದರಲ್ಲೂ ಬ್ರಾಹ್ಮಣರಿಗೆ ಅನ್ನಿಸಲೇ ಇಲ್ಲ’’ ಎನ್ನುತ್ತಾರೆ ಜ್ಯೋತಿಬಾ ಫುಲೆ. ಹಾಗಾಗಿಯೇ ಗುಲಾಮಗಿರಿ ಪುಸ್ತಕವನ್ನು ‘ಅಮೆರಿಕದ ಸದಾಚಾರಿ ಜನರಿಗೆ’ ಅರ್ಪಿಸುತ್ತಾರೆ. ಈ ಅರ್ಪಣೆ ಸಾಂಕೇತಿಕವಾಗಿದೆ.
ಬುದ್ಧ, ಕಬೀರ, ಜ್ಯೋತಿಬಾ ಫುಲೆ ಆ ಮೂವರು ಅಂಬೇಡ್ಕರ್ ಅವರನ್ನು ಗಾಢವಾಗಿ ಪ್ರಭಾವಿಸಿದ್ದಾರೆ. ಸ್ವತಃ ಬಾಬಾ ಸಾಹೇಬ್‌ಅಂಬೇಡ್ಕರ್, ತನ್ನನ್ನು ಪ್ರಭಾವಿಸಿದ್ದು ಮೂವರು ಗುರುಗಳು ಎನ್ನುತ್ತಾರೆ.
ಜ್ಯೋತಿಬಾ ಆರಂಭಿಸಿದ ಸನಾತನ ಹಿಂದೂ ಧರ್ಮದ ಪೊಳ್ಳುಗಳನ್ನು ಬಯಲು ಮಾಡುವ ಅಭಿಯಾನವನ್ನು ಅಂಬೇಡ್ಕರ್ ಸಮರ್ಥವಾಗಿ ಮುಂದುವರಿಸಿದರು. ಥಾಮಸ್ ಫೈನೆ ಅವರು ಜ್ಯೋತಿಬಾ ಅವರ ಮೇಲೆ ಪ್ರಭಾವ ಬೀರಿದರೆ, ಜ್ಯೋತಿಬಾ ಫುಲೆ ಅಂಬೇಡ್ಕರ್ ಅವರನ್ನು ಪ್ರಭಾವಿಸಿದರು. ಹೀಗಾಗಿ ಜ್ಯೋತಿಬಾ ಫುಲೆ ಮತ್ತು ಅಂಬೇಡ್ಕರ್ ಇಬ್ಬರನ್ನೂ ಅಮೆರಿಕದ ಚಿಂತಕರು ಪ್ರಭಾವಿಸಿದ್ದು ಕಾಕತಾಳೀಯವಾದರೂ ಸತ್ಯ.
ಹಾಗಾಗಿ ಈ ಇಬ್ಬರ ಎದೆಯಲ್ಲಿ ಅಮೆರಿಕದ ಕ್ರಾಂತಿ ಮತ್ತು ಫ್ರೆಂಚ್ ಕ್ರಾಂತಿಯ ಬೀಜಗಳು ಮೊಳೆತು ಇಲ್ಲಿ ಮರವಾಗಿ ಫಲಕೊಟ್ಟಂತಾಗಿದೆ.