ಊರು ಬಿಡುವುದೆಂದರೆ....

ಸಹೋದರ ದಿವಾಕರಣ್ಣನೊಂದಿಗೆ ರಾಮಚಂದ್ರಣ್ಣ (ಕುಳಿತವರು)
ಎಲ್ಲಾ ಸುಖ ಊರಿಂದ ಆಚೆ ಇದೆ ಎಂದು ಎಳೆಯ ವಯಸ್ಸಿನಲ್ಲಿ ಮನಸ್ಸು ಗರಿಗೆದರುವುದು ಸಹಜ. ಕೇಳದೆ ಹೇಳದೆ ಊರು ಬಿಡುವುದು ಸುಲಭ. ಗುರಿ ಸಾಧ್ಯವಾಗದೆ ಹೋದಾಗ ವಾಪಾಸ್ ಬರಲೂ ಆಗದೆ ಇದ್ದಾಗ ಸಹಜವಾಗಿ ದಡ ಸೇರಲಾಗದೆ ತತ್ತರಿಸುವ, ದಿಕ್ಕು ತಪ್ಪುವ, ಶಿಸ್ತು, ನಿಷ್ಠೆ, ಸಂಯಮ, ಕಾಲ ಕೈ ಕೊಟ್ಟು ಬದುಕು ಪರಿತಪಿಸುವುದೇ ಹೆಚ್ಚು.
ಹೌದು, ಆ ಕಥೆಗೂ ನನ್ನ ದೇರ್ಲಕ್ಕೂ ಬಹಳ ಹತ್ತಿರದ ಸಂಬಂಧವಿದೆ. ‘‘ನನ್ನೂರು ಪುತ್ತೂರು ತಾಲೂಕಿನ ಮಾಡಾವಿನ ದೇರ್ಲ’’ ಎಂದು ರಾಮಚಂದ್ರಣ್ಣ ಲಗ್ಗೆರೆಯ ಆಸರೆ ಆಶ್ರಮದ ಜಗಲಿಯಲ್ಲಿ ನಿಂತು ಹೇಳುವಾಗಲೇ ನಮ್ಮೂರವರಿಗೆ ಕನ್ಫರ್ಮ್ ಆಗಿ ಹೋಗಿತ್ತು, ಪಕ್ಕಾ ಅದು ನನ್ನೂರಿನ ರಾಮಣ್ಣ ಅವರ (ಕುಟ್ಟಿಯಜ್ಜ) ಮಗ ರಾಜುವೇ ಎಂದು. ನನ್ನೂರಿನ ಹೊಸ ತಲೆಮಾರಿನವರಿಗೆ ಆ ಕಥೆ ಗೊತ್ತೇ ಇಲ್ಲದಷ್ಟು ಹಳೆಯದ್ದು. ರಾಜಣ್ಣ ಊರು ಬಿಟ್ಟ ನಂತರ ಇವರೆಲ್ಲ ಹುಟ್ಟಿದವರು.
ಊರು ಬಿಡುವುದೆಂದರೆ ಆ ಕಾಲಕ್ಕೆ ಬದುಕನ್ನು ಸುಲಭ ಮಾಡುವುದೆಂದೇ ಅರ್ಥ. ಕಷ್ಟದ ದಿನಗಳವು. ಮೂರು ಹೊತ್ತಿನ ತುತ್ತಿಗೆ ಏಗುವ ಕಾಲ. ಎಷ್ಟೋ ಯುವಕರಿಗೆ ಕದ್ದು ಮನೆ ಬಿಟ್ಟು ರಾತೋರಾತ್ರಿ ಬೋರ್ಡ್ ನೋಡದೆ ಬಸ್ಸು ಹತ್ತಿ ಮುಂಬೈಯಂಥ ಊರುಗಳಿಗೆ ಓಡುವುದೇ ಒಂದು ಛಾತಿ. ಇರಲಿ, ಪಕ್ಕದ ಘಟ್ಟ ಹತ್ತುವ ಸುಖದ್ದು ಬೇರೆಯೇ ಒಂದು ಕಥೆ.
ಹಾಗಂತ ರಾಮಚಂದ್ರಣ್ಣ ಬಸ್ಸು ಹತ್ತಿದ್ದು ಮಡಿಕೇರಿ ಕಡೆಗೆ. ಸುಳ್ಯ, ಬೆಳ್ತಂಗಡಿ, ಪುತ್ತೂರು ಆಗ ಮಾನಸಿಕವಾಗಿ ಮುಂಬೈಗೆ ಹತ್ತಿರವಾಗಿರಲಿಲ್ಲ. ನಮಗೆಲ್ಲ ಘಟ್ಟವೇ ಸ್ವರ್ಗ. ಕಾಫಿ, ಕಿತ್ತಳೆ, ಏಲಕ್ಕಿ ಬೆಳೆಯುವ ಕೊಡಗು ಅನ್ನ ಕೊಡುತ್ತೆ ಅನ್ನುವ ನಂಬಿಕೆ ಈ ಭಾಗದವರದ್ದು. ಭತ್ತ ಸಾಗುವಳಿ ಮುಗಿದು ಮಡಿಕೇರಿಗೆ ಹೊರಟರೆ ತಿರುಗಿ ಬರುವುದು ಕೊಯ್ಲು ಶುರುವಾಗುವಾಗ. ಅದೇ ದಾರಿಯಲ್ಲಿ ತಪ್ಪಿಸಿಕೊಂಡು ಹೋಗಿದ್ದ ರಾಮಚಂದ್ರಣ್ಣ 45 ವರ್ಷಗಳ ನಂತರ ಪತ್ತೆಯಾಗಿ ಮನೆಗೆ ಬಂದ ಕಥೆಯೇ ಇದು.
ಯಾವಾಗ ಲಗ್ಗೆರೆಯ ಆಸರೆ ಆಶ್ರಮದವರು ರಾಮಚಂದ್ರಣ್ಣ ಅವರು ಆಶ್ರಮಕ್ಕೆ ಬಂದದ್ದನ್ನು ಮತ್ತು ಅಲ್ಲಿಂದ ದೇರ್ಲಕ್ಕೆ ಹೊರಟದ್ದನ್ನು ವೀಡಿಯೊ ಮಾಡಿ ಹಂಚಿದರೋ ಕೇವಲ ಒಂದು ವಾರದಲ್ಲಿ ಅದನ್ನು ಆರು ಲಕ್ಷಕ್ಕಿಂತ ಹೆಚ್ಚು ಜನ ಸೋಶಿಯಲ್ ಮೀಡಿಯದಲ್ಲಿ ನೋಡಿದ್ದಾರೆಂದರೆ ಇಲ್ಲಿರುವ ಮಾನವಾಸಕ್ತಿ, ಅಂತಃಕರಣ, ಕಕ್ಕುಲಾತಿ ಯಾವ ಮಟ್ಟದ್ದೆಂದು ಗಮನಿಸಿ.
ತಿಪಟೂರಿನ ಬಸ್ಸ್ಟ್ಯಾಂಡ್ನಲ್ಲಿ ಅಡ್ಡಾಡುತ್ತಿದ್ದ ಅವರನ್ನು ಅಲ್ಲಿಯ ಒಂದಷ್ಟು ಯುವಕರು ಒಡಗೂಡಿ ಹಣ ಹೂಡಿ ಆ್ಯಂಬುಲೆನ್ಸ್ನಲ್ಲಿ ಕೂರಿಸಿ ಪೊಲೀಸರ ಅನುಮತಿ ಪಡೆದು ಬೆಂಗಳೂರಿನ ಲಗ್ಗೆರೆಯ ಆಸರೆ ಆಶ್ರಮಕ್ಕೆ ಸೇರಿಸಿದ್ದು; ಅದು ಮೊಬೈಲಲ್ಲಿ ದಾಖಲಾಗಿ ವೈರಲ್ ಆದದ್ದು; ಸುದ್ದಿ ಅವರ ಕುಟುಂಬಕ್ಕೆ ಮುಟ್ಟಿದ್ದು; ಅವರ ಅಣ್ಣ(ಮಿಲಿಟರಿ ದಿವಾಕರಣ್ಣ) ಅಲ್ಲಿಗೆ ಹೋಗಿ ಮನೆಗೆ ಕರೆತಂದದ್ದು ಮೇಲ್ನೋಟಕ್ಕೆ ಇದು ಬಂದುತ್ವದ ಭಾಗವೇ, ಸರಳವೇ. ಆದರೆ ಕುಟುಂಬ ಸಂಬಂಧಗಳು- ದಾಯಾದಿ ಬಂಧುತ್ವ ನಾಶದಂಚಿನಲ್ಲಿರುವ ಈ ದಿನಮಾನದಲ್ಲಿ ಇದೊಂದು ಅಪೂರ್ವ ಕೂಡು ಸಂಬಂಧದ ಮಾದರಿ ಎಂದು ನಾನು ಭಾವಿಸಿದ್ದೇನೆ. ಆ ಕಾರಣಕ್ಕಾಗಿಯೇ ಭಾಗಶಃ ವೈಯಕ್ತಿಕ ಎನ್ನಬಹುದಾದ ಭಾವನಾತ್ಮಕ ಕಥೆಯೊಂದನ್ನು ಲೋಕಕ್ಕೆ ಹಂಚುತ್ತಿರುವೆ.
ಅಷ್ಟು ಲಕ್ಷ ಲಕ್ಷ ಜನ ಆ ವೀಡಿಯೋ ನೋಡಿದ್ದಾರೆ ಎಂದರೆ ಮನುಷ್ಯ ಸಂವೇದನೆ ಇನ್ನೂ ಜೀವಂತ ಇದೆ ಎಂದೇ ಅರ್ಥ. ಕಥೆಯ ನಾಯಕ ರಾಮಚಂದ್ರಣ್ಣ ನನ್ನ ಊರಿನವರೇ ಆದರೂ ನಿನ್ನೆ ಅವರನ್ನು ಮುಖತಃ ನೋಡಿ ಮಾತಾಡುವಷ್ಟರವರೆಗೆ ಹಿಂದೆ ಅವರನ್ನು ನೋಡಿದ ನೆನಪಲ್ಲಿ ಸ್ಪಷ್ಟತೆ ಇರಲಿಲ್ಲ. ನಾನು ಅವರಿಗಿಂತ ಚಿಕ್ಕವ.
ಹಳ್ಳಿ, ಯಾವತ್ತೂ ಹೇಳದೆ ಕೇಳದೆ ಒಬ್ಬ ನಾಪತ್ತೆ ಆದರೆ ಸಾಕು, ಅವರನ್ನು ಬಹಳಷ್ಟು ಕಾಲ ನೆನಪಿಟ್ಟುಕೊಳ್ಳುತ್ತದೆ. ಅವರ ಬಗ್ಗೆ ಕಥೆಗಳನ್ನು ಕಟ್ಟುತ್ತದೆ, ಹುಟ್ಟಿಸಿದ ಕಥೆಗಳನ್ನು ಹಂಚುತ್ತದೆ. ಸಂಬಂಧಗಳನ್ನು ಸ್ಥಾಪಿಸುವುದರಲ್ಲಿ, ನವೀಕರಿಸುವುದರಲ್ಲಿ, ಹಂಚುವುದರಲ್ಲಿ ಗ್ರಾಮದ ರೈತ ಮನಸ್ಸು ಯಾವಾಗಲೂ ಹುಷಾರು.
ಹಾಗಂತ ನನ್ನೂರು ದೇರ್ಲ ಇವತ್ತಿಗೂ ಬಹಳ ದೊಡ್ಡ ಊರೇನಲ್ಲ. 45 ವರ್ಷಗಳ ಹಿಂದೆ ಅಬ್ಬಬ್ಬಾ ಅಂದರೆ 20- 30 ಮನೆಗಳಿದ್ದ ಹಳ್ಳಿ. ಬಡತನ, ಕೃಷಿ, ದೈವನಂಬಿಕೆ, ನೆಲಮೂಲ ಆಚರಣೆ, ಸಹಬಾಳ್ವೆ, ಸಹಕಾರ ಈ ಊರಿನ ಜೀವಾಳ. ಅಡಿಕೆಯ ಮಾನ ನಮ್ಮೂರಿಗೆ ಅಂಟಿಕೊಳ್ಳುವ ಮುಂಚೆ ಭತ್ತದ ಕೃಷಿಯೇ ನಮ್ಮ ಜೀವದಾರಿ. ಜಗಲಿಯಲ್ಲಿ ಕೂತು ಆಗ ಕಾಲುಚಾಚಿ ತಾಂಬೂಲ ಮೆಲ್ಲುವಾಗ ಮೈಲು ದೂರ ದೇರ್ಲ ಕಾಣಿಸುತ್ತಿತ್ತು. ಅಷ್ಟೇ ದೇರ್ಲದ ವ್ಯಾಪ್ತಿ. ಈಗ ಒಬ್ಬರ ಮನೆ ಇನ್ನೊಬ್ಬರಿಗೆ ಕಾಣಿಸದಷ್ಟು ಹಸಿರು, ಅಡಿಕೆ ಕೃಷಿ ಗೋಡೆ ಕಟ್ಟಿದೆ. ಭತ್ತದ ಬಯಲಿನಲ್ಲಿ ಒಬ್ಬರಿಗೊಬ್ಬರು ಮನೆ, ಮನಸ್ಸು ಕಾಣಿಸದಂತೆ ದುಡ್ಡಿನ ಬೆಳೆ ಅಡಿಕೆ, ರಬ್ಬರ್ ವಕ್ಕರಿಸಿದೆ. ಆಗ ಕಷ್ಟ ಪಟ್ಟರೆ ಊಟಕ್ಕುಂಟು ಎನ್ನುವ ಲೆಕ್ಕಾಚಾರದ ನಡುವೆಯೂ ಹೊಕ್ಕುಬಳಕೆ, ನೇಮ-ತಂಬಿಲ, ಸಂಕ್ರಾಂತಿ-ಹುಣ್ಣಿಮೆ ಎಂದು ಒಂದಷ್ಟು ಸಂಬಂಧ ಸಹವಾಸ ಜೀವಂತ ಇದ್ದವು. ಹಸಿವಿದ್ದಾಗ ಅನ್ನಕ್ಕೂ ರುಚಿಯಿತ್ತು. ಅಂತಹ ದಿನಮಾನದಲ್ಲಿ ನಮ್ಮೂರಿನಿಂದ ಒಬ್ಬನಲ್ಲ ಮೂರು ನಾಲ್ಕು ಮಂದಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಹೆಚ್ಚು ಕಡಿಮೆ ಒಂದೇ ವಯಸ್ಸಿನವರು. ಇವರೆಲ್ಲ ಊರು ಬಿಡುವುದಕ್ಕೆ ಹಿರಿಯರ ಅತಿ ಶಿಸ್ತು, ನಿರೀಕ್ಷೆ, ಬಡತನವೇ ಕಾರಣ ಎಂದು ಮತ್ತೆ ಹೇಳಬೇಕಾಗಿಲ್ಲ.
ಹಸಿವಿನ ಮನಸ್ಸಿಗೆ ಇನ್ನೊಂದು ಊರು ಅನ್ನ ನೀಡುತ್ತದೆ ಮತ್ತು ಅದು ಹೆಚ್ಚು ಸುರಕ್ಷಿತ, ಚಂದವಾಗಿರುತ್ತದೆ ಎಂದು ಅನಿಸುವುದು ಸಹಜ. ಹಾಗಂತ ಊರು ಬಿಟ್ಟ ರಾಮಚಂದ್ರಣ್ಣ ನಾಲ್ಕು ದಶಕಗಳಲ್ಲಿ ನೆಮ್ಮದಿಯಿಂದ ಉಂಡಿದ್ದಾರೆ ಅನಿಸುವುದಿಲ್ಲ. ಮಠ ಮಾನ್ಯ, ಹೋಟೆಲ್, ಬಸದಿ, ಆಶ್ರಮ... ಹೀಗೆ ಅವರ ಬದುಕಿನ ದಾರಿಯ ಹೆಜ್ಜೆಗಳ ಬಗ್ಗೆ ನಾನು ಹೆಚ್ಚು ಪ್ರಶ್ನೆಗಳನ್ನು ಕೇಳಲಿಲ್ಲ. ಕೇಳುವ ಸಂದರ್ಭವೂ ಅದಲ್ಲ. ಆ ಕಾಲದಲ್ಲಿ ಊರು ಬಿಟ್ಟ ಎಲ್ಲರ ಕಥೆಯು ಭಾವವೂ ಇದೆ. ಊರಲ್ಲಿದ್ದರೆ ದುಡಿಯಬೇಕು, ಶಾಲೆ ಕಲಿಕೆಯ ಜೊತೆಗೂ ಶ್ರಮ ಪಡಬೇಕು, ಹೊರಗಡೆ ಹೋದರೆ ಎಲ್ಲಿಯಾದರೂ ಹೋಟೆಲಲ್ಲಿಯೂ ಇನ್ನೆಲ್ಲಿಯಾದರೂ ದುಡಿದು ಉಣ್ಣಬಹುದೆಂಬ ಭರವಸೆಯ ಕನಸು ಹೊತ್ತು ಅವರೆಲ್ಲ ಊರು ಬಿಟ್ಟವರು. ಕಾಲಾಂತರದಲ್ಲಿ ಕೆಲವರು ಅವರಾಗಿಯೇ ವಾಪಸ್ ಬಂದರು. ಕೆಲವರು ಖಾಯಂ ಆಗಿ ನಾಪತ್ತೆಯಾದರು. ಬದುಕಿನಲ್ಲಿ ಬಯಲಾದ ಅಥವಾ ಬಯಲೇ ಬದುಕಾದ ರಾಮಚಂದ್ರಣ್ಣ ಅವರಿಗೆ ಇಷ್ಟಾದರೂ ಯಾವುದೇ ದೈಹಿಕ ಕಾಯಿಲೆಗಳಿಲ್ಲ. ಶುಗರ್, ಬಿಪಿ ಎಂತದ್ದೂ ಇಲ್ಲ. ಹಣ ಮಾಡುವ, ಸಂಪತ್ತು ಹೊಂಚುವ, ಯಾವುದೇ ಗುರಿಯಿಲ್ಲದ, ಬದುಕಿಗೊಂದು ನಿಖರ ಪಾಯವಿಲ್ಲದ, ಕೈಯಲ್ಲಿ ಮೊಬೈಲ್ ಇಲ್ಲದ ಇವರ ಬದುಕಿಗೊಂದು ಸಂತತನವಿತ್ತು.
ನಾನಿಲ್ಲಿ ಇವರಿಗಿಂತ ಹೆಚ್ಚು ಮಾತನಾಡಬೇಕಾದ್ದು ಇವರ ಸಹೋದರ ದಿವಾಕರಣ್ಣನ ಬಗ್ಗೆ. ಶಿಸ್ತಿನ ನಿವೃತ್ತ ಸೈನಿಕ. ಮಕ್ಕಳೇ ಬಾಳಸಂಜೆಯಲ್ಲಿರುವ ತಮ್ಮ ತಂದೆ-ತಾಯಿಯರನ್ನು ಮನೆಯಿಂದ ಹೊರದೂಡುವ, ಆಶ್ರಮಕ್ಕೆ ಸೇರಿಸುವ ಸಾವಿನ ಸಂಸ್ಕಾರಕ್ಕೂ ಒದಗದ ಮಕ್ಕಳೇ ಇರುವ ಈ ಕಾಲದಲ್ಲಿ 45 ವರ್ಷಗಳ ಹಿಂದೆ ನಾಪತ್ತೆಯಾದ ತಮ್ಮನನ್ನು ಮತ್ತೆ ಕರೆದು ಕೊಂಡು ಬಂದು ಮನೆ ತುಂಬಿಸಿಕೊಂಡ ಇವರ ಮನುಷ್ಯ ಪ್ರೀತಿಗೆ ಮತ್ತು ಇಡೀ ಕುಟುಂಬದ ಮನಸ್ಥಿತಿಗೆ ಒಂದು ಸಲಾಂ. ರಾಮಚಂದ್ರಣ್ಣ ಮದುವೆಯಾಗಿಲ್ಲ. ಸಂಸಾರವಿಲ್ಲ, ಸುದೀರ್ಘಕಾಲ ಬಂಧುಗಳಿಂದ ದೂರವಿದ್ದ ದೈಹಿಕ, ಮಾನಸಿಕವಾಗಿ ಸೋತು ಹೋದ ಏಕಾಂಗಿ ಬದುಕು. ವಯಸ್ಸು ಕಡಿಮೆಯಲ್ಲ, ಇಂಥ ತಮ್ಮನ ಪೋಷಣೆಗೆ ನಿಂತ 77ರ ಹರೆಯದ ಅಣ್ಣ ಮತ್ತು ಇಡೀ ಕುಟುಂಬದ ಉದ್ದೇಶ ಆಶಯ ಗಮನೀಯವೇ.
45 ವರ್ಷಗಳ ಅಜ್ಞಾತವಾಸವನ್ನು ಮುಗಿಸಿಕೊಂಡು ಬಂದ ರಾಮಚಂದ್ರಣ್ಣನ ಮುಖಭಾವದಲ್ಲಿರುವ ಕುತೂಹಲ, ಮನುಷ್ಯ ಪ್ರೀತಿ, ಬೆರಗು ಇವೆಲ್ಲವನ್ನು ಕಂಡಾಗ ಅವರ ತಂದೆ ಕುಟ್ಯಜ್ಜ ಮತ್ತೆ ನೆನಪಾದರು. ಬಾಲ್ಯದಲ್ಲಿ ಈ ಅಜ್ಜ ನಮ್ಮೂರ ರೈತ ಕೌಶಲ್ಯದ ಹಳ್ಳಿ ಮನಸ್ಸಿನ ಶುದ್ಧ ಪ್ರಾಮಾಣಿಕ ಪ್ರತಿನಿಧಿ. ರಾತ್ರಿ ಭತ್ತದ ಗದ್ದೆಗೆ ಇಳಿಯುವ ಕಾಡು ಪ್ರಾಣಿಗಳನ್ನು ಓಡಿಸಲು ಬದುವಿನ ಮೇಲೆ ಅವರು ನಿರ್ಮಿಸುತ್ತಿದ್ದ ಕಾಡುಬಳ್ಳಿಯ ಹೆಣಿಗೆಯ ಮಾಳ ನನ್ನ ಪಾಲಿಗೆ ಅದ್ಭುತ ಅರಮನೆಯಾಗಿ ಕಾಣಿಸುತ್ತಿತ್ತು. ನಾಲ್ಕು ಕಂಬ ಊರಿ ಅವುಗಳ ಮೇಲೆ ಅವರು ಕಟ್ಟುತ್ತಿದ್ದ ಅಟ್ಟಣಿಗೆ, ಅದರ ನಾಲ್ಕು ಬದಿಗೆ ಹೆಣೆಯುತ್ತಿದ್ದ ಮದೆಪ್ಪು ಮನುಷ್ಯ ಕೌಶಲ್ಯಕೊಂದು ಅಗಣಿತ ಮಾದರಿ. ಅಂತಹ ಕಾಡುಬೂರಿನ ಹೆಣಿಗೆಯ ಮೇಲೆ ಹದವಾಗಿ ಮಣ್ಣುಮೆತ್ತಿ ಸಗಣಿ ಸಾರಿಸಿ ಒಳಗಡೆ ಬೈಹುಲ್ಲಿನ ಹಾಸಿಗೆ ನಿರ್ಮಿಸುತ್ತಿದ್ದರು. ಶಾಲೆಯ ದಾರಿಯಲ್ಲಿ ಒಂದು ಐದು ನಿಮಿಷ ಆ ಮಾಳದೊಳಗಡೆ ಇಣುಕಿ ಸರಿದು ಕೂತು ವಿಶ್ರಮಿಸಿ ಬರುವುದೆಂದರೆ ನಮಗೆಲ್ಲ ಪರಮಾನಂದವೇ ಸರಿ.
ಎಲ್ಲಾ ಸುಖ ಊರಿಂದ ಆಚೆ ಇದೆ ಎಂದು ಎಳೆಯ ವಯಸ್ಸಿನಲ್ಲಿ ಮನಸ್ಸು ಗರಿಗೆದರುವುದು ಸಹಜ. ಕೇಳದೆ ಹೇಳದೆ ಊರು ಬಿಡುವುದು ಸುಲಭ. ಗುರಿ ಸಾಧ್ಯವಾಗದೆ ಹೋದಾಗ ವಾಪಾಸ್ ಬರಲೂ ಆಗದೆ ಇದ್ದಾಗ ಸಹಜವಾಗಿ ದಡ ಸೇರಲಾಗದೆ ತತ್ತರಿಸುವ, ದಿಕ್ಕು ತಪ್ಪುವ, ಶಿಸ್ತು, ನಿಷ್ಠೆ, ಸಂಯಮ, ಕಾಲ ಕೈ ಕೊಟ್ಟು ಬದುಕು ಪರಿತಪಿಸುವುದೇ ಹೆಚ್ಚು.
ಕರಾವಳಿಯ ಮೊದಲ ತಲೆಮಾರು ಹಳ್ಳಿಯ ಇಂಥ ಒತ್ತಡದ ಉಸಿರು ಕಟ್ಟುವ ಸ್ಥಿತಿಯಲ್ಲಿ ಕೋಪಿಸಿಕೊಂಡ ಹಿರಿಯರ ಮೇಲಿನ ವೈಮನಸ್ಸಿಂದ ‘‘ಮುಂದೆ ಈ ಮನೆಯ ಮೆಟ್ಟುಕಲ್ಲು ಹತ್ತಲಾರೆ’’ ಎಂದು ಶಪಥ ಮಾಡಿ ಮುಂಬೈ ಕಡೆ ಹೋದದ್ದಿದೆ. ಹೆಚ್ಚು ಅಕ್ಷರ ಜ್ಞಾನಿಗಳಲ್ಲದ ಇವರೆಲ್ಲ ಕಷ್ಟಪಟ್ಟು ಹೋಟೆಲ್ನಲ್ಲಿ ದುಡಿದು, ರಾತ್ರಿ ಶಾಲೆಯಲ್ಲಿ ಕಲಿತು ಇವತ್ತು ಸ್ವಂತ ಹೋಟೆಲ್ ಉದ್ಯಮ ಇಟ್ಟುಕೊಂಡು ಮೇಲೇರಿ ಬಂದವರು. ಒಬ್ಬೊಬ್ಬರ ಹಿಂದೆ ಬಿದ್ದರೆ ಶ್ರಮ, ಬೆವರು, ಮಾನದ ಹತ್ತಾರು ಕಥೆಗಳು ಸಿಗುತ್ತವೆ. ಇಂದಿಗೂ ಕರಾವಳಿಯ ಕಲೆ, ಸಂಸ್ಕೃತಿ, ಆಚರಣೆ, ದೈವ ಪುನರುತ್ಥಾನ ಕಾಯಕಕ್ಕೆ ಬೊಗಸೆ ತುಂಬಾ ದಾನ ನೀಡುವ ಇಂಥವರ ಬಾಲ್ಯ ಕೂಡ ಕಡುಕಷ್ಟದ ದಿನಗಳೇ.