ಎಲ್‌ಐಸಿಗೆ ಮುಳುಗು ನೀರು?
ಅಮೆರಿಕದ ಸಂಸ್ಥೆ ಹಿಂಡನ್‌ಬರ್ಗ್ ವರದಿಯ ನಂತರ, ಅಮೆರಿಕ ತನಿಖಾ ಸಂಸ್ಥೆಗಳು ಹೊರಿಸಿರುವ ಲಂಚದ ದೋಷಾರೋಪದಿಂದ ಅದಾನಿ ಸಮೂಹದ ಶೇರು ಮೌಲ್ಯ ಮತ್ತೊಮ್ಮೆ ಪಾತಾಳಕ್ಕೆ ತಲುಪಿವೆ. ಶೇರು ಮೌಲ್ಯಗಳನ್ನು ತಿರುಚಲಾಗಿದೆ ಎಂದು ಹಿಂಡನ್‌ಬರ್ಗ್ ತನ್ನ ವರದಿಯಲ್ಲಿ ಆರೋಪಿಸಿದ ನಂತರ, ಅದಾನಿ ಸಮೂಹದ ಶೇರುಗಳು ಬರೋಬ್ಬರಿ ರೂ. 7 ಲಕ್ಷ ಕೋಟಿ ನಷ್ಟ ಅನುಭವಿಸಿದ್ದವು. ಇದೀಗ ಅದಾನಿ ಸಮೂಹದ ವಿರುದ್ಧ ಅಮೆರಿಕ ತನಿಖಾ ಸಂಸ್ಥೆಗಳು ಲಂಚದ ದೋಷಾರೋಪ ಹೊರಿಸಿದ ಬೆನ್ನಿಗೇ, ಮತ್ತೊಮ್ಮೆ ರೂ. 1 ಲಕ್ಷ ಕೋಟಿಯಷ್ಟು ನಷ್ಟಕ್ಕೆ ತುತ್ತಾಗಿವೆ.
ಗುಜರಾತಿನ ಸಾಮಾನ್ಯ ಉದ್ಯಮಿಯಾಗಿದ್ದ ಗೌತಮ್ ಅದಾನಿ, ಕಳೆದ ಹತ್ತು ವರ್ಷಗಳಲ್ಲಿ ದಿಗ್ಭ್ರಮೆ ಹುಟ್ಟಿಸುವಂಥ ಕುಬೇರರಾಗಿದ್ದು, ಮತ್ತೊಬ್ಬ ಕುಬೇರ ಉದ್ಯಮಿ ಮುಕೇಶ್ ಅಂಬಾನಿಯನ್ನೂ ಹಿಂದಿಕ್ಕಿ, ಏಶ್ಯದ ಅತಿ ಶ್ರೀಮಂತ ಎಂಬ ಪಟ್ಟಕ್ಕೇರಿದ್ದಾರೆ. ಗೌತಮ್ ಅದಾನಿಯ ಈ ಪ್ರಚಂಡ ಬೆಳವಣಿಗೆಯ ಹಿಂದೆ ಪ್ರಧಾನಿ ನರೇಂದ್ರ ಮೋದಿಯ ಕೃಪಾಕಟಾಕ್ಷವಿದೆ ಎಂಬ ಆರೋಪಗಳು ವಿರೋಧ ಪಕ್ಷಗಳಿಂದ ಪದೇ ಪದೇ ಕೇಳಿ ಬರುತ್ತಿವೆ. ಯಾವುದೇ ಉದ್ಯಮಿ ಆರ್ಥಿಕ ಬೆಳವಣಿಗೆ ಸಾಧಿಸುವುದು ಅನೈತಿಕವೂ ಅಲ್ಲ, ಅಪರಾಧವೂ ಅಲ್ಲ. ಆದರೆ, ಗೌತಮ್ ಅದಾನಿಯಂತೆ ಅವಾಸ್ತವಿಕ ಬೆಳವಣಿಗೆ ಸಾಧಿಸುವುದು ಯಾವತ್ತಿಗೂ ಸಂಶಯಾಸ್ಪದವಾಗಿರುತ್ತದೆ. ಯಾವುದಾದರೂ ಒಂದು ಘಟ್ಟದಲ್ಲಿ ಸಂಕಷ್ಟವನ್ನೂ ತಂದೊಡ್ಡುತ್ತದೆ. ಸದ್ಯ ಗೌತಮ್ ಅದಾನಿ ವಿಚಾರದಲ್ಲೂ ಇದೇ ಆಗಿರುವುದು.
ಖಾಸಗಿ ಉದ್ಯಮಿಯೊಬ್ಬರ ಏಳುಬೀಳು ಸಾಮಾನ್ಯ ಜನರಿಗೆ ಅಷ್ಟೇನೂ ಮುಖ್ಯವಾಗಬೇಕಿಲ್ಲ. ಆದರೆ, ಸಾರ್ವಜನಿಕರ ತೆರಿಗೆ ದುಡ್ಡಿನಲ್ಲಿ ಸ್ಥಾಪನೆಯಾಗಿರುವ ಸರಕಾರಿ ಉದ್ಯಮವೊಂದು ಅಂತಹ ಖಾಸಗಿ ಉದ್ಯಮದ ಏಳುಬೀಳುಗಳ ಪರಿಣಾಮವನ್ನು ಎದುರಿಸುವಂತಾದಾಗ ಮಾತ್ರ ಸಹಜವಾಗಿಯೇ ಸಾರ್ವಜನಿಕರ ಕಳವಳ ಮತ್ತು ಪ್ರಶ್ನೆಗೆ ಗುರಿಯಾಗುತ್ತದೆ. ಸದ್ಯ ಇಂತಹ ಕಳವಳ ಮತ್ತು ಪ್ರಶ್ನೆಗೆ ಗುರಿಯಾಗಿರುವುದು ಬೃಹತ್ ಸಾರ್ವಜನಿಕ ಜೀವ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ. ಅದಾನಿ ಸಮೂಹ ತನ್ನ ಶೇರು ಮೌಲ್ಯಗಳನ್ನು ತಿರುಚಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್ ಸಂಸ್ಥೆ ಆರೋಪಿಸಿದಾಗ, ಭಾರತೀಯ ಜೀವ ವಿಮಾ ನಿಗಮದ ಶೇರುಗಳು ರೂ. 38,509 ಕೋಟಿಯಷ್ಟು ನಷ್ಟ ಅನುಭವಿಸಿದ್ದವು. ಇದೀಗ ಅಮೆರಿಕ ತನಿಖಾ ಸಂಸ್ಥೆಗಳು ಅದಾನಿ ಸಮೂಹದ ವಿರುದ್ಧ ಲಂಚದ ದೋಷಾರೋಪ ಹೊರಿಸಿದ ನಂತರ, ಒಂದೇ ದಿನದಲ್ಲಿ ರೂ. 8,683 ಕೋಟಿ ನಷ್ಟ ಅನುಭವಿಸಿದೆ. ಇದಕ್ಕೆ ಕಾರಣ: ಸಾರ್ವಜನಿಕ ಉದ್ಯಮವಾದ ಜೀವ ವಿಮಾ ನಿಗಮವು ಖಾಸಗಿ ಉದ್ಯಮವಾದ ಅದಾನಿ ಸಮೂಹದಲ್ಲಿ ರೂ. 31,200 ಕೋಟಿ ಹೂಡಿಕೆ ಮಾಡಿರುವುದು.
ಭಾರತ ಕಂಡ ದಾರ್ಶನಿಕ ಪ್ರಧಾನಿ ಜವಾಹರ್‌ಲಾಲ್ ನೆಹರೂ ಒತ್ತಾಸೆಯಿಂದ ಸೆಪ್ಟಂಬರ್ 1, 1956ರಲ್ಲಿ ಸ್ಥಾಪನೆಗೊಂಡ ಭಾರತೀಯ ಜೀವ ವಿಮಾ ನಿಗಮವೀಗ ಜೀವ ವಿಮಾ ವಲಯದಲ್ಲಿ ಮುಂಚೂಣಿ ಹಾಗೂ ವಿಶ್ವಾಸಾರ್ಹ ಸಂಸ್ಥೆಯಾಗಿದೆ. ರೂ. 5.74 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಭಾರತೀಯ ಜೀವ ವಿಮಾ ನಿಗಮವು, ಜೀವ ವಿಮಾ ಮಾರುಕಟ್ಟೆಯಲ್ಲಿ ಇಂದಿಗೂ ಶೇ. 64.02 ಪಾಲನ್ನು ಹೊಂದುವ ಮೂಲಕ ಈ ವಲಯದಲ್ಲಿ ಪ್ರಾಬಲ್ಯ ಸಾಧಿಸಿದೆ. ಭಾರತದ ಪ್ರಮುಖ ಲೇವಾದೇವಿ ಮತ್ತು ಹೂಡಿಕೆ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮವು, ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿದಾಗಿನಿಂದ ವಿವಾದದ ಕೇಂದ್ರ ಬಿಂದುವಾಗಿ ರೂಪಾಂತರಗೊಂಡಿದೆ.
ಭಾರತೀಯ ಜೀವ ವಿಮಾ ನಿಗಮವು ಅದಾನಿ ಸಮೂಹದ ಅದಾನಿ ಎಂಟರ್‌ಪ್ರೈಸಸ್, ಅದಾನಿ ಬಂದರು ಮತ್ತು ವಿಶೇಷ ಆರ್ಥಿಕ ವಲಯ, ಅದಾನಿ ಗ್ರೀನ್ ಎನರ್ಜಿ, ಅದಾನಿ ಎನರ್ಜಿ ಸಲ್ಯೂಶನ್ಸ್, ಅದಾನಿ ಟೋಟಲ್ ಗ್ಯಾಸ್, ಎಸಿಸಿ ಹಾಗೂ ಅಂಬುಜಾ ಸಿಮೆಂಟ್ಸ್ ಸೇರಿದಂತೆ ಏಳು ಅದಾನಿ ಉದ್ಯಮಗಳಲ್ಲಿ ಹೂಡಿಕೆ ಮಾಡಿದೆ. ಸಾರ್ವಜನಿಕ ಉದ್ಯಮವಾದ ಭಾರತೀಯ ಜೀವ ವಿಮಾ ನಿಗಮವು ಖಾಸಗಿ ಉದ್ಯಮವಾದ ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಲು ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ, ಪ್ರಧಾನಿ ನರೇಂದ್ರ ಮೋದಿಗೆ ಆಪ್ತರಾಗಿರುವುದು ಕಾರಣ ಎಂಬುದು ವಿರೋಧ ಪಕ್ಷಗಳ ಆರೋಪವಾಗಿದೆ.
ಹಿಂಡನ್‌ಬರ್ಗ್ ವರದಿ ಬಹಿರಂಗಗೊಂಡ ನಂತರ, ಅದಾನಿ ಸಮೂಹದ ಶೇರು ಮೌಲ್ಯ ಭಾರೀ ನಷ್ಟ ಅನುಭವಿಸಿತ್ತು. ಹೀಗಿದ್ದೂ, ಭಾರತೀಯ ಜೀವ ವಿಮಾ ನಿಗಮವು ಕೆಲ ಆಯ್ದ ಅದಾನಿ ಸಮೂಹದ ಉದ್ಯಮಗಳ ಶೇರುಗಳನ್ನು ಖರೀದಿಸಿತ್ತು. ಭಾರತೀಯ ಜೀವ ವಿಮಾ ನಿಗಮದ ಈ ನಡೆಯನ್ನು ಆಕ್ಷೇಪಿಸಿದ್ದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್, ನಷ್ಟ ಅನುಭವಿಸಿರುವ ಅದಾನಿ ಶೇರುಗಳಲ್ಲಿ ಭಾರತೀಯ ಜೀವ ವಿಮಾ ನಿಗಮ ಹೂಡಿಕೆ ಮಾಡಲು ಕೇಂದ್ರ ಸರಕಾರದ ಒತ್ತಡ ಕಾರಣ ಎಂದು ಆರೋಪಿಸಿತ್ತು. ಅದಕ್ಕೆ ಕಾರಣವೂ ಇತ್ತು. ಯಾವುದೇ ಅನುಭವಿ ಹೂಡಿಕೆ ಸಂಸ್ಥೆಯು ನಷ್ಟ ಅನುಭವಿಸಿದ ಶೇರುಗಳ ಖರೀದಿಗೆ ಆಸಕ್ತಿ ತೋರುವುದಿಲ್ಲ. ಆದರೆ, ಹಿಂಡನ್‌ಬರ್ಗ್ ವರದಿ ಬಹಿರಂಗಗೊಂಡ ಬೆನ್ನಿಗೇ ಅದಾನಿ ಸಮೂಹದ ಶೇರುಗಳು ಸುಮಾರು ರೂ. 7 ಲಕ್ಷ ಕೋಟಿ ನಷ್ಟ ಅನುಭವಿಸಿದರೂ, ಜೀವ ವಿಮಾ ನಿಗಮ ಮಾತ್ರ ತರಾತುರಿಯಲ್ಲಿ ಅದಾನಿ ಸಮೂಹದ ಆಯ್ದ ಶೇರುಗಳನ್ನು ದುಬಾರಿ ಬೆಲೆಗೆ ಖರೀದಿಸಿತ್ತು. ಜೀವ ವಿಮಾ ನಿಗಮದ ಈ ನಡೆಯು ಕೇಂದ್ರ ಸರಕಾರದತ್ತ ಸಂಶಯದ ಬೊಟ್ಟು ಮಾಡಿತ್ತು. ಅದಾನಿ ಸಮೂಹಕ್ಕೆ ಆರ್ಥಿಕ ನೆರವು ಒದಗಿಸಲೆಂದೇ ಭಾರತೀಯ ಜೀವ ವಿಮಾ ನಿಗಮವು ಅದರ ಶೇರುಗಳನ್ನು ಖರೀದಿಸುವಂತೆ ಮಾಡಲಾಗಿದೆ ಎಂಬ ವಿರೋಧ ಪಕ್ಷಗಳ ಆರೋಪದಲ್ಲಿ ಹುರುಳಿತ್ತು ಕೂಡಾ.
ಭಾರತೀಯ ಜೀವ ವಿಮಾ ನಿಗಮವು ಅದಾನಿ ಸಮೂಹದಲ್ಲಿ ಮಾಡಿರುವ ಹೂಡಿಕೆಯಿಂದ ಅನುಭವಿಸುತ್ತಿರುವ ನಷ್ಟಕ್ಕೆ ಬೆಲೆ ತೆರುತ್ತಿರುವುದು ಜೀವ ವಿಮಾ ಪಾಲಿಸಿದಾರರು. ಜೀವ ವಿಮಾ ಪಾಲಿಸಿದಾರರ ಜೀವ ವಿಮಾ ಕಂತಿನ ಮೇಲೆ ಕೇಂದ್ರ ಸರಕಾರ ಶೇ. 18ರಷ್ಟು ದುಬಾರಿ ಜಿಎಸ್‌ಟಿ ವಿಧಿಸಿದೆ. ಇಲ್ಲಿಯವರೆಗೆ ಉಳಿತಾಯವೆಂದು ಭಾವಿಸಲಾಗುತ್ತಿದ್ದ ಜೀವ ವಿಮೆಗಳ ಮೊತ್ತವನ್ನು ಹಿಂಪಡೆಯಲು ಯಾವುದೇ ತೆರಿಗೆ ವಿಧಿಸಲಾಗುತ್ತಿರಲಿಲ್ಲ. ಆದರೆ, ಅವಧಿ ಪೂರ್ಣಗೊಂಡ ಜೀವವಿಮೆಯನ್ನು ಹಿಂಪಡೆಯವುದರ ಮೇಲೂ ಇದೀಗ ತೆರಿಗೆಯನ್ನು ವಿಧಿಸಲಾಗುತ್ತಿದೆ.
1990ರಲ್ಲಿ ಜೀವ ವಿಮಾ ವಲಯಕ್ಕೆ ಖಾಸಗಿ ಸಂಸ್ಥೆಗಳು ದಾಂಗುಡಿ ಇಟ್ಟರೂ, ಜೀವ ವಿಮೆ ಮಾರುಕಟ್ಟೆಯಲ್ಲಿ ಭಾರತೀಯ ಜೀವ ವಿಮಾ ನಿಗಮವು ಇಂದಿಗೂ ಶೇ. 64.02ರಷ್ಟು ಪಾಲು ಹೊಂದಿರುವುದಕ್ಕೆ ಅದರ ವಿಶ್ವಾಸಾರ್ಹತೆ ಪ್ರಮುಖ ಕಾರಣ. ಜೀವ ವಿಮಾ ವಲಯದಲ್ಲಿ 27 ಖಾಸಗಿ ಸಂಸ್ಥೆಗಳು ಹಾಗೂ ನಾಲ್ಕು ಸಾರ್ವಜನಿಕ ಸಂಸ್ಥೆಗಳಿದ್ದರೂ, ಜನಸಾಮಾನ್ಯರ ಪ್ರಥಮ ಆಯ್ಕೆ ಇಂದಿಗೂ ಭಾರತೀಯ ಜೀವ ವಿಮಾ ಸಂಸ್ಥೆಯೇ ಆಗಿದೆ. ಇಂತಹ ವಿಶ್ವಾಸಾರ್ಹ ಜೀವ ವಿಮಾ ಸಂಸ್ಥೆಯು ಅದಾನಿ ಸಮೂಹದಲ್ಲಿ ಮಾಡಿರುವ ಹೂಡಿಕೆಯಿಂದ ಅನುಭವಿಸುತ್ತಿರುವ ನಷ್ಟದಿಂದ ಸಹಜವಾಗಿಯೇ ಜನಸಾಮಾನ್ಯರಲ್ಲಿ ಆತಂಕ ಮತ್ತು ಹಿಂಜರಿಕೆ ಪ್ರಾರಂಭವಾಗಿದೆ. ಇದು ಪಾಲಿಸಿ ಖರೀದಿಯ ಮೇಲೂ ನಿಶ್ಚಿತ ಪರಿಣಾಮ ಬೀರಲಿದ್ದು, ಭಾರತೀಯ ಜೀವ ವಿಮಾ ನಿಗಮವು ಜೀವ ವಿಮಾ ಮಾರುಕಟ್ಟೆಯಲ್ಲಿ ಹೊಂದಿರುವ ಪಾಲಿನ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗಲಿದೆ.
ಭಾರತೀಯ ಜೀವ ವಿಮಾ ನಿಗಮದ ಮಾರುಕಟ್ಟೆ ಮೌಲ್ಯ ರೂ. 5.74 ಲಕ್ಷ ಕೋಟಿಯಾಗಿದ್ದು, ಅದಕ್ಕೆ ಹೋಲಿಸಿದರೆ, ಅದು ಅದಾನಿ ಸಮೂಹದಲ್ಲಿ ಮಾಡಿರುವ ಹೂಡಿಕೆಯ ಪ್ರಮಾಣ ತೀರಾ ಕಡಿಮೆ ಎಂಬುದು ಸತ್ಯ. ಆದರೆ, ಇದು ಹೂಡಿಕೆ ಪ್ರಮಾಣಕ್ಕೆ ಸಂಬಂಧಿಸಿದ ವಿಷಯವಲ್ಲ; ಬದಲಿಗೆ, ಸಂಸ್ಥೆಯೊಂದರ ವಿಶ್ವಾಸಾರ್ಹತೆಗೆ ಸಂಬಂಧಿಸಿದ ವಿಷಯ. ಯಾವುದೇ ಸಂಸ್ಥೆ ತನ್ನ ವಿಶ್ವಾಸಾರ್ಹತೆಗೆ ಎರವಾದರೆ, ಅದರ ಪತನ ಸನ್ನಿಹಿತವಾಗುತ್ತದೆ. ಸದ್ಯ ಭಾರತೀಯ ಜೀವ ವಿಮಾ ನಿಗಮದ ಮೇಲೆ ಆಗುತ್ತಿರುವ ಪರಿಣಾಮವೂ ಅದೇ. ಅದಾನಿ ಸಮೂಹದಲ್ಲಿನ ಹೂಡಿಕೆಯಿಂದ ಭಾರತೀಯ ಜೀವ ವಿಮಾ ನಿಗಮವು ಭಾರೀ ನಷ್ಟ ಅನುಭವಿಸುತ್ತಿದೆ ಎಂಬ ಸಂಗತಿ ಸಾರ್ವತ್ರಿಕ ಚರ್ಚೆಯ ವಿಷಯವಾಗಿ ಬದಲಾಗಿದ್ದು, ಇದರಿಂದ ಜನಸಾಮಾನ್ಯರು ಭಾರತೀಯ ಜೀವ ವಿಮಾ ನಿಗಮದ ಪಾಲಿಸಿಗಳನ್ನು ಖರೀದಿಸಲು ಹಿಂದೆ ಮುಂದೆ ಯೋಚಿಸುವಂತಾಗಿದೆ.
ಒಂದು ಕಾಲದಲ್ಲಿ ಭಾರತದ ವಿಶ್ವಾಸಾರ್ಹ ಸಾರ್ವಜನಿಕ ಉದ್ಯಮಗಳಾಗಿದ್ದ ಏರ್ ಇಂಡಿಯಾ, ಬಿಎಸ್ಸೆನ್ನೆಲ್ ಕೂಡಾ ಇದೇ ರೀತಿಯ ವಿಶ್ವಾಸಾರ್ಹತೆ ನಷ್ಟದಿಂದಲೇ ರೋಗಗ್ರಸ್ತವಾಗಿದ್ದು. ಜಾಗತೀಕರಣದ ಈ ಸ್ಪರ್ಧಾತ್ಮಕ ಯುಗದಲ್ಲಿ ವಿಶ್ವಾಸಾರ್ಹತೆಯೇ ಯಾವುದೇ ಸಂಸ್ಥೆಯ ಬೆಳವಣಿಗೆಗೆ ಭದ್ರ ಬುನಾದಿ. ಅಂತಹ ಭದ್ರ ಬುನಾದಿಯನ್ನು ಹೊಂದಿದ್ದ ಭಾರತೀಯ ಜೀವ ವಿಮಾ ನಿಗಮವು ಇದೀಗ ಅದಾನಿ ಸಮೂಹದಲ್ಲಿನ ಹೂಡಿಕೆಯಿಂದ ನಷ್ಟ ಅನುಭವಿಸುವ ಮೂಲಕ, ಶೀಘ್ರದಲ್ಲೇ ರೋಗಗ್ರಸ್ತವಾಗುವ ಮುನ್ಸೂಚನೆ ನೀಡುತ್ತಿದೆ. ಆಳುವ ಸರಕಾರಗಳು ಹಾಗೂ ಉದ್ಯಮಿಗಳ ನಡುವಿನ ಅನೈತಿಕ ಮೈತ್ರಿಯಿಂದ ಆಗುತ್ತಿರುವ ಅನಾಹುತವಿದು. ಭಾರತೀಯ ಜೀವ ವಿಮಾ ನಿಗಮದ ಆಡಳಿತ ಮಂಡಳಿ ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ, ಏರ್ ಇಂಡಿಯಾದಂತೆ ಅದೂ ಕೂಡಾ ಇತಿಹಾಸದ ಪುಟ ಸೇರುವುದು ನಿಶ್ಚಿತ.