ಮಹದೇವ ಅನ್ನುವರು ಬಸವಣ್ಣರ ತಮ್ಗಳಂತೆ...
‘ದಿನ ಸವೆಯುತ್ತಿವೆ. ದಿನ ಮುಗಿಯುವ ಕೊನೆಯಲ್ಲಿ ಎಲ್ಲವೂ ಮುಗಿದ ಮೇಲೆ ಭಾವನೆ ಮೀರಿದ ಇಥಿಯೋಪಿಯಾದ ಮಕ್ಕಳು ಬರುತ್ತವೆ. ಕ್ಷಾಮದ ಬಿಳಿ ಹಲ್ಲುಗಳು ಅವುಗಳನ್ನು ತಿನ್ನುತ್ತಿವೆ. ಅವುಗಳು ನನ್ನನ್ನು ತಿನ್ನುತ್ತವೆ...’
-ದೇವನೂರು ಮಹಾದೇವ
‘‘ನಾನು ಕಳೆದ 25 ವರ್ಷಗಳಿಂದ ಬಲ್ಲಂತೆ ದೇವನೂರ ಮಹಾದೇವ ಸೋಮಾರಿತನದ, ಡೋಲಾಯಮಾನದ ಹಿಂಜರಿಕೆಯ ವ್ಯಕ್ತಿ; ಇದೆಲ್ಲದರ ಆಳದಲ್ಲಿ ಹರಿತವಾದ, ಸೂಕ್ಷ್ಮ ಮನಸ್ಸಿನ ನ್ಯಾಯವಂತ ಮನುಷ್ಯ ಕೂಡ. ಇವೆರಡೂ ಗುಂಪಿನ ಗುಣಗಳನ್ನು ಮೀರಿದ್ದು ಅವರ ಸಹಜ ಪ್ರೀತಿ ಮತ್ತು ಜೀವನ ಪ್ರೇಮ. ಸಾಹಿತಿಯಾದವನು ಎಲ್ಲರಂತೆ ನೋಡ ಬಯಸುತ್ತಾನೆ. ಮನುಷ್ಯ, ಮರ, ಪ್ರಾಣಿ, ಆಕಾಶ, ಮಣ್ಣು ಇವೆಲ್ಲದರ ಖಚಿತ ಗುಣ ಮತ್ತು ಗಾತ್ರ ಅವನಿಗೆ ತಿಳಿಯುವುದೇ ಹೀಗೆ. ಆದರೆ, ಎಲ್ಲರಂತೆ ನೋಡುತ್ತಿರುವಾಗಲೇ ಅವನಿಗೆ ವಿಶೇಷವಾದದ್ದು ಕಾಣುತ್ತದೆ. ಅದು ವಿಶೇಷವಾದದ್ದು ಎಂಬ ವಿಶ್ವಾಸ ಅವನಲ್ಲಿದ್ದರೆ ಮಾತ್ರ ಅವನು ಅದನ್ನು ಆದಷ್ಟು ಸಮರ್ಪಕವಾಗಿ ಹೇಳುವ ವಿಧಾನಗಳನ್ನು ಕಂಡುಕೊಳ್ಳುತ್ತಾನೆ. ಪ್ರೀತಿ ಔದಾರ್ಯವಿಲ್ಲದಿದ್ದರೆ ತನ್ನ ಬಗ್ಗೆ ನಿಷ್ಠುರತೆ ಮತ್ತು ಇತರರ ಬಗ್ಗೆ ಸಹಾನುಭೂತಿ ಇಲ್ಲದಿದ್ದರೆ ಜೀವನದ ಬಾಗಿಲು ಲೇಖಕನಿಗೆ ತೆರೆಯುವುದೇ ಇಲ್ಲ’’
ಇದು ಪಿ. ಲಂಕೇಶ್ ಅವರು ಮಹಾದೇವರ ಕುರಿತು ಬರೆದ ಮಾತು. ನಾನು ಅನೇಕ ಸಲ ಗೆಳೆಯರೊಂದಿಗೆ, ಕವಿ ಸಾಹಿತಿಗಳೊಂದಿಗೆ ಸಭೆ ಸಮಾರಂಭಗಳಲ್ಲಿ ಮಹಾದೇವರ ಕುರಿತು ತುಂಬಾ ಮಾತನಾಡಿದ್ದೇನೆ. ಆದರೆ ಅವರ ಕುರಿತು ಬರೆಯುವ ಧೈರ್ಯ ನನಗೆ ಬಂದಿರಲಿಲ್ಲ. ‘ಎದೆಗೆ ಬಿದ್ದ ಅಕ್ಷರ’ ಕೃತಿ ಬಿಡುಗಡೆಯಲ್ಲಿ ಅಭಿನವ ರವಿಕುಮಾರ್ ಜೊತೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ. ಆಗ ರವಿಕುಮಾರ್ ಜೊತೆ ಮಹಾದೇವ ಅವರ ಬಗ್ಗೆ ತುಂಬಾ ಮಾತನಾಡಿದೆ. ಇದನ್ನು ಗಮನಿಸಿದ ರವಿಕುಮಾರ್, ‘‘ಸರ್ ದಯಮಾಡಿ ‘ಯಾರ ಜಪ್ತಿಗೂ ಸಿಗದ ನವಿಲುಗಳ’ ಪುಸ್ತಕಕ್ಕೆ ನೀವು ಲೇಖನ ಬರೆದುಕೊಟ್ಟರೆ ಮುಂದಿನ ಮುದ್ರಣದಲ್ಲಿ ಸೇರಿಸಿಕೊಳ್ಳುತ್ತೇನೆ’’ ಎಂದರು. ಅದಕ್ಕೆ ನಾನು, ‘‘ನಾವು ತುಂಬಾ ಪ್ರೀತಿಸುವವರು ಮತ್ತು ಗೌರವಿಸುವವರ ಬಗ್ಗೆ ಬರೆಯುವುದು ತುಂಬಾ ಕಷ್ಟ ಸರ್’’ ಅಂದೆ. ರವಿಕುಮಾರ್ ಒತ್ತಡ ಹಾಕುತ್ತಲೇ ಇದ್ದರು. ‘‘ಪುಸ್ತಕ ಮುದ್ರಣಕ್ಕೆ ಹೋಗುತ್ತಿದೆ ನೀವು ನಾಳೆ ಕೊಟ್ಟರೆ ಅದನ್ನು ಪುಸ್ತಕಕ್ಕೆ ಬಳಸಿಕೊಳ್ಳುತ್ತೇವೆ’’ ಎಂದರು. ನಾನು ‘‘ಎರಡು ದಿನ ಸಮಯ ಕೊಡಿ’’ ಅಂದೆ. ‘‘ಇಲ್ಲ ಸರ್. ನಾಳೆ ಸಾಧ್ಯವಾದರೆ ಕೊಡಿ’’ ಎನ್ನುವಾಗ ಧ್ವನಿ ಸ್ವಲ್ಪ ಗಡುಸಾಗಿತ್ತು. ಆ ದಿನ ಸಂಜೆಯೇ ಒಂದು ಸರಳವಾದ ಪುಟ್ಟ ಪದ್ಯ ಸರಳರೇಖೆ ಬರೆದು ಮೊಗಳ್ಳಿ ಗಣೇಶ್‌ಗೆ
ಓದಿದೆ. ಮೊಗಳ್ಳಿ ಯಾವುದೋ ಒಂದು ಪದವನ್ನು ಸರಿ ಮಾಡಿ ‘‘ನೀನು ಕವಿ ಕಣೋ.. ಚೆನ್ನಾಗಿ ಬರೆದಿದ್ದೀಯಾ’’ ಅಂದರು. ಸ್ವಲ್ಪ ಧೈರ್ಯ ಬಂದು ರವಿಕುಮಾರ್‌ಗೆ ಕಳುಹಿಸಿದೆ. ಆ ಕವಿತೆಯನ್ನು ಓದಿದ ರವಿ ದಂಪತಿ ಖುಷಿಯಾದರು. ಪುಸ್ತಕದಲ್ಲಿ ಪ್ರಕಟವಾದ ಮೇಲೆ ಅನೇಕರು ಮೆಚ್ಚಿಕೊಂಡರು. ಆದರೆ ಮಹಾದೇವರು ಏನೂ ಹೇಳಲಿಲ್ಲ. ಮಹಾದೇವರನ್ನು ಭೇಟಿ ಆಗೋದು, ಮಾತನಾಡುವುದು ಅಂದರೆ ಅವರ ಚಿಂತನೆ, ಬರವಣಿಗೆ, ಭಾಷಣ, ಅವರನ್ನು ಆಲಿಸುವುದು ಅಂದರೆ ಒಂದು ಅನುಭೂತಿ ಪಡೆದಂತೆ. ನಾನು ಲಂಕೇಶ್ ಮೇಷ್ಟ್ರನ್ನು ಯಾವ ಭಯ ಆತಂಕ ಅಂಜಿಕೆ ಇಲ್ಲದೆ ಹತ್ತು ವರ್ಷಗಳ ಕಾಲ ಅವರ ಒಡನಾಟದಲ್ಲಿದ್ದೆ. ಆದರೆ ಮಹಾದೇವರ ಭೇಟಿಯಾಗುವ ಕ್ಷಣಗಳು ಆತ್ಮೀಯವಾಗಿಯೂ ಇರುತ್ತದೆ, ಎಚ್ಚರದ ಕ್ಷಣಗಳು ಆಗಿರುತ್ತವೆ. ಮಹಾದೇವರ ಬಗ್ಗೆ ‘ಯಾರ ಜಪ್ತಿಗೂ ಸಿಗದ ನವಿಲುಗಳು’ ಪುಸ್ತಕ ಗಮನಿಸಿದರೆ ಎಷ್ಟೆಲ್ಲಾ ಟೀಕೆ ಟಿಪ್ಪಣಿಗಳಿವೆ ಎನಿಸುತ್ತದೆ. ಈ ಪುಸ್ತಕದಲ್ಲಿ ಕನ್ನಡ ಸಾಹಿತ್ಯದ ಸಾಂಸ್ಕೃತಿಕ ವಲಯದ ದಿಗ್ಗಜರೆಲ್ಲ ಮಹಾದೇವ ಅವರ ಕೃತಿಗಳು ಮತ್ತು ನಡೆ-ನುಡಿಗಳ ಬಗ್ಗೆ ಮಾತನಾಡಿದ್ದಾರೆ. ಮಹಾದೇವ ಅವರು ಇದನ್ನೆಲ್ಲ ಸಮಚಿತ್ತದಿಂದ ಸ್ವೀಕರಿಸಿದ್ದಾರೆ. ಅವರ ಮೇಲೆ ಬಂದ ಟೀಕೆಗಳೂ ಆರೋಪಗಳು ಒಂದೆರಡು ಅಲ್ಲ. ಇದರಿಂದ ಲೆಕ್ಕ ಇಲ್ಲದಷ್ಟು ಗಾಯಗಳ ನೋವುಗಳ ನ್ನು ಅನುಭವಿಸಿದ್ದಾರೆ. ಹಾಗೆಯೇ ಮಾಡಿದ ಆರೋಪಗಳಿಗೆ ಅಷ್ಟೇ ಸೂಕ್ತವಾದ ಮತ್ತು ತೀಕ್ಷ್ಣವಾದ ಉತ್ತರ ಕೊಟ್ಟಿದ್ದಾರೆ. ಕೆಲವೊಂದಕ್ಕೆ ಕಾಲ ಮತ್ತು ಸಂದರ್ಭವೇ ಉತ್ತರಿಸುತ್ತದೆ ಎಂದು ಸುಮ್ಮನಿದ್ದಾರೆ. ಮಹಾದೇವರಿಗೆ ಮಹಾದೇವರೇ ಸರಿಸಾಟಿ. ಇದಕ್ಕೆಲ್ಲ ಸಮಯವಿಲ್ಲವೆಂದು ಈ ಹೊತ್ತಿನ ಮತ್ತು ನಾಳೆಯ ತುರ್ತಿನ ಗಂಭೀರ ವಿಷಯಗಳಲ್ಲಿ ಮುಳುಗಿ ಹೋಗುತ್ತಾರೆ.
ಮಹಾದೇವರ ಹೆಸರು ಕೇಳಿದ್ದು ಒಂದು ಸಭೆಯಲ್ಲಿ. ಹಾಡ್ಯಾದ ಸೋಮಶೇಖರಣ್ಣ (ಪಿರಿಯಪಟ್ಟಣದ ದಸಂಸ ಶಿಬಿರದಲ್ಲಿದ್ದಾಗ ಕಾವೇರಿ ಹೊಳೆಗೆ ಸ್ನಾನ ಮಾಡಲು ಹೋಗಿ ನಮ್ಮನ್ನಗಲಿದವರು) ಮತ್ತು ಲಕ್ಕಪ್ಪ ಮೇಷ್ಟ್ರು ಮಾತನಾಡುತ್ತಾ, ಸಿದ್ಧ್ದಲಿಂಗಯ್ಯ, ಕೃಷ್ಣಪ್ಪನವರ ಹಾಗೆ ದೇವನೂರು ಮಹಾದೇವ ಅಂತ ಒಬ್ಬ ದೊಡ್ಡ ಸಾಹಿತಿ ಇದ್ದಾರೆ. ಅವರು ಎಷ್ಟು ಸರಳ ಅಂದರೆ ನಮ್ಮ ಅಕ್ಕ-ಪಕ್ಕ ಬಂದು ನಿಂತುಕೊಂಡರೂ ಗೊತ್ತಾಗುವುದಿಲ್ಲ ಅಷ್ಟು ಸರಳ. ನನಗೆ ತಕ್ಷಣ ನನ್ನ ಅಕ್ಕ-ಪಕ್ಕ ಯಾರು ನಿಂತುಕೊಂಡಿದ್ದಾರೆ ಎಂದು ತಿರುಗಂಗಿನೋಡಿದೆ. ಕುಮಾರಣ್ಣ, ಅಣ್ಣಯ್ಯ, ಮಲ್ಲಪ್ಪ ನಿಂತಿದ್ದರು. ನನಗೆ ನಾನೇ ಹೌದಾ ಅನ್ನಿಸಿ ‘‘ಇವರನ್ನೆಲ್ಲ ಯಾವಾಗ ನೋಡುತ್ತೇನೋ?’’ ಅನ್ನಿಸಿತು. ಮಹಾದೇವರ ಮೊದಲ ಭೇಟಿ ಅಷ್ಟು ಆತ್ಮೀಯವಾಗಿರಲಿಲ್ಲ. ಅದನ್ನು ಆಮೇಲೆ ಹೇಳುತ್ತೇನೆ.
ಮೊನ್ನೆ ಇವರಿಗೆ ವೈಕಂ ಪ್ರಶಸ್ತಿ ಬಂದಿದ್ದನ್ನ್ನು ಪತ್ರಿಕೆಗಳಲ್ಲಿ ನೋಡಿದೆ. ತಕ್ಷಣ ಬಸವರಾಜ್‌ಗೆ ಫೋನ್ ಮಾಡಿದೆ. ಸರ್ ಇದು ಕೇರಳದ ಪ್ರಸಿದ್ಧ ಕತೆಗಾರರಾದ ವೈಕಂ ಬಶೀರ್ ಹೆಸರಿನಲ್ಲಿ ಕೊಡುವ ಪ್ರಶಸ್ತಿನಾ ಎಂದು ಹೇಳಿದೆ. ‘‘ಇರಬಹುದು ಸುಬ್ಬಣ್ಣ. ನಾನು ಇನ್ನೂ ಆ ಸುದ್ದಿನೇ ನೋಡಿಲ್ಲ, ನೋಡಿ ಹೇಳುತ್ತೇನೆ’’ ಎಂದರು. ನಾನು ಮತ್ತೆ ಮೊಬೈಲ್‌ನಲ್ಲಿ ನೋಡಿದಾಗ ಹುಲುಕುಂಟೆ ಮೂರ್ತಿ ದೇವನೂರರಿಗೆ ಅಭಿನಂದಿಸಿ ಪೋಸ್ಟ್ ಹಾಕಿದ್ದರು. ಅಷ್ಟೊತ್ತಿಗೆ ಆಗಲೇ ನನ್ನ ಮನಸ್ಸಿನ ನವಿಲು ಕುಣಿಯುತ್ತಿತ್ತು. ಎಷ್ಟೊತ್ತಿಗೆ ಫೋನ್ ಮಾಡಿ ವಿಶ್ ಮಾಡಲಿ ಅಂತ. ಮತ್ತೆ ನಾನು ಸತ್ಯಮಂಗಲ ಮಹಾದೇವ್‌ಗೆ ಫೋನ್ ಮಾಡಿ ಇದು ತಮಿಳುನಾಡು ಕೊಡಮಾಡುವ ಪ್ರಶಸ್ತಿ. ಇದು ವೈಕಂ ಬಶೀರ್ ಹೆಸರಲ್ಲಿ ಕೊಡುವ ಪ್ರಶಸ್ತಿ ಅಲ್ಲ ‘‘ಅಂದೆ’’, ನಿಜ ಸರ್ ನಾನು ಚೆಕ್ ಮಾಡಿ ಹೇಳುತ್ತೇನೆ ಎಂದರು. ಸಲ್ಪ ಸಮಯದ ನಂತರ ಅದಕ್ಕೆ ಸಂಬಂಧಿಸಿದಂತೆ ಪೂರ್ಣ ವಿವರವನ್ನು ಕಳುಹಿಸಿದರು. ನನ್ನ ಮನಸ್ಸು ಸುಮ್ಮನಿರಬೇಕಲ್ಲ ದೇವನೂರಿಗೆ ಮಿಸ್ ಕಾಲ್ ಮಾಡಿದೆ. ಅವರು ವಾಪಸ್ ಮಾಡಲಿಲ್ಲ. ಹುಲಿಕುಂಟೆ ಮೂರ್ತಿ ಅಣ್ಣ ಈಗ ಫೋನ್ ಮಾಡಬೇಡಿ ಸರ್ ಮಲಗಿರುತ್ತಾರೆ ಎಂದರು. ಕುಣಿಯುವ ಮನಸ್ಸಿಗೆ ಬ್ರೇಕ್ ಹಾಕಿದ ಹಾಗೆ ಆಯಿತು. ಪ್ರತೀ ಮಾತಿನಲ್ಲೂ ಎಲ್ಲೋ ದೂರದಲ್ಲಿ ಏಕನಾದದಂತೆ ಅವರ ಮಾತು ಕೇಳಿಸುತ್ತದೆ. ಮೊದಲು ಅವರ ಮಾತುಗಳನ್ನು ಕೇಳಿದಾಗ ಈ ಲೋಕದಲ್ಲಿ ನೊಂದ ಬಡವರ, ಶೋಷಿತರ, ದಲಿತರ ಸಂಕಟದ ಬಗ್ಗೆ ಮಾತನಾಡುತ್ತಿದ್ದಾರೆ ಅನ್ನಿಸುತ್ತದೆ. ಇಲ್ಲ-ಇಲ್ಲ ಇದಕ್ಕಿಂತ ಅಪಾರವಾಗಿ ನೊಂದ ಮಹಿಳೆಯರ ಬಗ್ಗೆ ಮಾತನಾಡುತ್ತಿದ್ದಾರೆ ಅನ್ನಿಸುತ್ತದೆ. ಸ್ವಲ್ಪ ಹತ್ತಿರಕ್ಕೆ ಹೋಗಿ ಕೇಳಿದಾಗ ಅವರು ಆಡುವ ಮಾತು ದಲಿತರ ಬಗ್ಗೆ ಅಲ್ಲ, ಮಹಿಳೆಯರ ಬಗ್ಗೆ ಅಲ್ಲ, ಇಡೀ ಜೀವಸಂಕುಲದ ಸಂಕಟದ ಬಗ್ಗೆ ಎನ್ನ್ನಿಸುತ್ತದೆ. ಇದು ನಾನು ಅವರನ್ನು ದೂರದಿಂದ ಅಂಜಿಕೆ ಮತ್ತು ಸ್ವಲ್ಪ ಹತ್ತಿರದಿಂದ ನೋಡಿದಂತೆ. ಅಕಸ್ಮಾತ್ ಮಹಾದೇವ ಅವರಿಗೆ ಫೋನ್ ಮಾಡಿ ಲೇಖನ ಓದಿದ್ದೇನೆ ಅಂದರೆ, ಆ ಲೇಖನದ ಪ್ಯಾರಾ ವಿಷಯ ಕೇಳಿ ಬಿಟ್ಟರು ಅನ್ನಿ, ಅವರು ಕೇಳಿದ ಪ್ರಶ್ನೆಗೆ ಗಾಬರಿಯಾಗಿ ಎಲ್ಲ ಮರೆತು ಹೋಗಿಬಿಡುತ್ತದೆ. ‘‘ದೇವನೂರರು ತುಂಬಾ ಮೃದು, ಹಾಗೆ ಅಷ್ಟೇ ಕಠಿಣ’’ ನಾಟಕಕಾರ ಬರ್ಟೋಲ್ಡ್ ಬ್ರೆಕ್ಟ್‌ನ ‘ನೀರು ಅತ್ಯಂತ ಮೃದು ಮತ್ತು ಕಠಿಣ’ ಎಂಬ ಸಾಲು ಮಹಾದೇವ ಅವರಿಗೆ ಸರಿಹೊಂದುತ್ತದೆ ಎಂದು ನನ್ನ ಭಾವನೆ. ಮಹಾದೇವ ಅವರ ಕುರಿತು ಅತಿ ಹೆಚ್ಚು ಫೊನ್‌ನಲ್ಲಿ ಮಾತನಾಡಿರುವುದು ನಾನು ಮತ್ತು ಎಂ. ಎಸ್. ಶೇಖರ್ ಅವರು. ಶೇಖರ್ ಅವರಿಗೆ ಮಹಾದೇವ ಸರ್ ಆಗಾಗ ಮೈಸೂರಿನಲ್ಲಿ ಸಿಗುತ್ತಿರುತ್ತಾರೆ. ಆಗ ಅವರೊಡನೆ ಮಾತನಾಡಿದ ಮಾತುಗಳನ್ನು ಮಹಾದೇವರೇ ಮಾತನಾಡಿದಂತೆ ಹೇಳಿ ನನ್ನ ನಗಿಸುತ್ತಿದ್ದರು,
ಒಂದು ದಿನ ಹೀಗೆ ಮಾತನಾಡುತ್ತಾ ‘‘ಬರೆಯುವ ಅಕ್ಷರಗಳಿಗೂ ನೋವಾಗದ ಹಾಗೆ ಬರೆಯುತ್ತಾರೆ ಮಹಾದೇವರು’’ ಎಂದು ರವಿಕುಮಾರ್ ಹೇಳಿದ್ದನ್ನು ನೆನಪಿಸುತ್ತಾ ಮಹಾದೇವರು ‘‘ಉಸಿರಾಡುವ ಗಾಳಿಗೂ ನೋವಾಗಬಾರದು ಅಂತ ಉಸಿರಾಡುತ್ತಾರೆ’’ ಅಲ್ವಾ ಶೇಖರ್ ಅಂದೆ. ಶಾಕ್ ಆದ ಶೇಖರ್ ‘‘ಏನ್ ಸುಬ್ಬು ಮಹಾದೇವರ ಹೊಟ್ಟೆ ಒಳಗೆ ಹೋಗಿ ನೋಡಿದಿಯಲ್ಲ’’ ಅಂತ ಇಬ್ಬರಿಗೂ ನಗುವೇ ನಗು. ‘‘ಹೌದು ಶೇಖರ್ ಮಹಾದೇವ ಅಂದರೆ ನನಗೆ ಕಲ್ಯಾಣ ಕ್ರಾಂತಿಯ ಸಕಲೆಂಟು ಜೀವಿಗಳ ಲೇಸಾ ಬಯಸಿದ ಬಸವಣ್ಣ ನೆನಪಾಗುತ್ತಾರೆ. ಯಾವ ಸ್ಥಾನಮಾನಗಳ ಬಯಸದೆ, ಬಿಜ್ಜಳನ ಆಸ್ಥಾನ ತೊರೆದು ಬಂದ ಆ ಮಹಾನದಿ ಯಾರಿಗೆ ಪ್ರಿಯವಲ್ಲ ಹೇಳಿ. ಹಾಗೆ ಮಹಾದೇವ ಅವರು ಅಪ್ರಿಯವಾದವರಿಗೂ ಪ್ರಿಯವಾಗಿದ್ದಾರೆ. ಬಸವಣ್ಣನವರ ನಡೆ-ನುಡಿಗಳು, ಆದರ್ಶಗಳು, ಕನಸುಗಳು ಮಹಾದೇವರಲ್ಲಿ ಹಾಸು ಹೊಕ್ಕಾಗಿದೆ. ಇವರ ಸಮಾನತೆಯ ಕನಸು ಕಾಣುತ್ತಾ....ಈ ಶಬ್ದದಿಂದ ಹಿಡಿದು ‘ಸಂಬಂಜ ಅನ್ನೋದು ದೊಡ್ಡದು ಕಣ’ ಹೀಗೆ ಕರುಳ ಹಿಡಿದು ನಡೆಯುತ್ತಿರುವ ಸಾಕವ್ವನಾಗಿ ಬದುಕಿರುವ ಈ ಮಹಾದೇವ ಈ ನಾಡಿನ ಸಾಕ್ಷಿ ಪ್ರಜ್ಞೆ.
ಗೆಳೆಯರೊಂದಿಗೆ ಮಾತನಾಡುವಾಗ ದೇವನೂರ ಮಹಾದೇವ ಅವರ ವಯಸ್ಸು ಎಷ್ಟು ಇರಬಹುದು ಎಂದು ಕೇಳಿದರೆ, ಅವರು 12ನೇ ಶತಮಾನದಿಂದ ಅನುಭವ ಮಂಟಪದಿಂದ ಹೊರಟು ನಡೆದುಕೊಂಡು ಬರುತ್ತಿದ್ದಾರೆ. ಇನ್ನೂ ತಲುಪುವ ಜಾಗ ತಲುಪಿಲ್ಲ, ಬರುವ ದಾರಿಯಲ್ಲಿ ಅನೇಕ ಮಹನೀಯರನ್ನು ಭೇಟಿಯಾಗಿದ್ದಾರೆ. ಅದರಲ್ಲಿ ಫುಲೆ ದಂಪತಿ, ಗಾಂಧಿ ಮಹಾತ್ಮರು, ಭೀಮಾ ಸಾಹೇಬರು, ಅನೇಕ ಹೋರಾಟಗಾರರು, ಸಾಧು-ಸಂತರು ಹೀಗೆ ಎಲ್ಲರೊಟ್ಟಿಗೆ ಚರ್ಚಿಸುತ್ತಾ, ಮಾತನಾಡುತ್ತಾ ನಡೆದು ಬರುತ್ತಲೇ ಇದ್ದಾರೆ. ಈಗ ಅವರ ಹೆಗಲ ಮೇಲಿರುವ ಬ್ಯಾಗ್‌ನಲ್ಲಿ ಸಂವಿಧಾನದ ಪ್ರತಿ ಇದೆ. ಬಹುಶಃ ಅಸ್ಪಶ್ಯತೆ ಇಲ್ಲದ ಊರು, ಮಹಿಳೆಯರ ಮೇಲೆ ದೌರ್ಜನ್ಯ ನಡೆಯದ ದಿನ, ರೈತರು ಬೆಳೆದ ಬೆಳೆಗೆ ನ್ಯಾಯ ಸಿಕ್ಕಿದ ದಿನ ಮತ್ತು ಕೋಮುವಾದ ಅಳಿದ ದಿನ, ಕಳೆದು ಹೋದ ಸಾಕವ್ವನ ಕೋಳಿ ಕಲ್ಲಾಗಿ ಹೋಗಿದೆ. ಒಂದು ದಿನ ಕಲ್ಲು ಕೋಳಿ ಕೂಗಿ ಲೋಕ ಬೆಳಕಾದ ದಿನ ಸಂವಿಧಾನ ಆಶಯದ ಸಮತೆಯ ದಿನ ಕಂಡಾಗ ಮಹಾದೇವ ಅವರು ತಲುಪೋ ಜಾಗ ತಲಪಬಹುದು. ಇದಕ್ಕೆ ಮಹಾದೇವರ ಸಮ್ಮತಿ ಇರಬಹುದು ಎನ್ನುವುದು ನನ್ನ ನಂಬಿಕೆ. ಯಾವ ಲೇಖಕನಿಗಾದರೂ, ಕವಿಗಳಿಗಾದರೂ, ಹೋರಾಟಗಾರರಿಗಾದರು, ಮನುಷ್ಯನಿಗಾದರೂ ಕನಸುಗಳಿಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ. ಮಹಾದೇವರ ಕನಸು ಹೀಗೂ ಇರಬಹುದೇ ಎನ್ನುವುದು ನನ್ನ ಭಾವನೆ. ಈಗ ಮಹಾದೇವರನ್ನ್ನು ಮೊದಲು ನೋಡಿದ, ಭೇಟಿಯಾದದ್ದನ್ನು ನಿಮ್ಮೊಂದಿಗೆ ಹಂಚಿಕೊಂಡು ಈ ಲೇಖನ ಮುಗಿಸುತ್ತೇನೆ.
ಬುಹುಶಃ 1987ರಲ್ಲಿ ನಮ್ಮ ಹಾಸನದ ಅರಸೀಕೆರೆಯಲ್ಲಿರುವ ತಿರುಪತಿ ಬೆಟ್ಟದಲ್ಲಿ ದಸಂಸ ರಾಜ್ಯಮಟ್ಟದ ಕಾರ್ಯಕರ್ತರ ಸಭೆ ಮತ್ತು ರಾಜ್ಯ ಸಂಚಾಲಕರ ಆಯ್ಕೆ ಮಾಡಲಿಕ್ಕೆ ಸೇರಿದ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ಅಲ್ಲಿ ಬಹುತೇಕ ರಾಜ್ಯದ ಎಲ್ಲ ದಸಂಸ ನಾಯಕರು ಬಿ.ಕೃಷ್ಣಪ್ಪ, ಮಹಾದೇವರು, ತ್ಯಾಗಿಯವರು, ನಾರಾಯಣದಾಸ್, ಇಂದೂಧರ ಹೊನ್ನಾಪುರ, ಕೋಲಾರದ ಸಿ.ಮುನಿಯಪ್ಪ, ಹಿರಿಯರಾದ ಗಡ್ಡಂ ವೆಂಕಟೇಶಣ್ಣ ಸೇರಿದಂತೆ ಇನ್ನು ಅನೇಕರು ಈ ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯ ಸಮಿತಿಯ ನಾಯಕರ ಸಭೆ ಮುಗಿಸಿ ಮಧ್ಯಾಹ್ನ ಊಟವಾದ ಮೇಲೆ ರಾಜ್ಯದ ಎಲ್ಲ ಕಡೆಯಿಂದ ಬಂದಿದ್ದ ದಸಂಸ ಕಾರ್ಯಕರ್ತರ ಸಭೆ ನಡೆಯಿತು. ನಾವು ಆ ಬೆಟ್ಟದ ದೇವಸ್ಥಾನ ಮುಂಭಾಗ ಬಂಡೆಗಳ ಮೇಲೆ ಕುಳಿತಿದ್ದೆವು. ನಾಯಕರುಗಳು ಜೋರಾಗಿ ಮಾತನಾಡಿದ್ದರೆ ಮಾತ್ರ ಕೇಳಿಸುತ್ತಿತ್ತು. ಈಗ ದೇವನೂರು ಮಾತನಾಡುತ್ತಾರೆ ಎಂದಾಗ, ಎಲ್ಲರ ಕಿವಿಗಳು ಜಾಗೃತವಾದವು. ನಾನು ಮಹಾದೇವರನ್ನು ಮೊದಲ ಬಾರಿಗೆ ನೋಡಿದ್ದು ಆಗಲೇ. ದೇವನೂರು ಎದ್ದುನಿಂತು ಮಾತನಾಡುತ್ತಿದ್ದರು. ಆದರೆ ಅವರ ಮಾತುಗಳು ಸ್ಪಷ್ಟವಾಗಿ ಕೇಳುತ್ತಿರಲಿಲ್ಲ. ಅವರನ್ನು ನೋಡಿ ಮಾತನಾಡಿಸುವುದಕ್ಕೆ ಕೂಡ ಅವಕಾಶವಾಗಲಿಲ್ಲ, ನೋಡಿದ ಖುಷಿ ಅಷ್ಟೇ ಉಳಿಯಿತು. ನಾವು ಸಕಲೇಶಪುರಕ್ಕೆ ಬಂದು ಹೆತ್ತೂರಿಗೆ ಬರಬೇಕಾಗಿತ್ತು. ಸಭೆ ಮುಗಿದ ತಕ್ಷಣ ಹೊರಟೆವು. ನಂತರ ನಾನು ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿದೆ. ಕರ್ನಾಟಕ ಸರಕಾರ ಒಬ್ಬ ಲೇಖಕರ ಪುಸ್ತಕವನ್ನು ನಿಷೇಧ ಮಾಡಿತ್ತು ಅಥವಾ ಮಾಡುತ್ತಾರೆ ಎನ್ನುವ ಸುದ್ದಿಯಿತ್ತು. ಇದನ್ನು ವಿರೋಧಿಸಿ ಪ್ರಗತಿಪರ ಸಂಘಟನೆಗಳು ಮತ್ತು ಕನ್ನಡದ ಲೇಖಕರೆಲ್ಲ ಒಂದು ಪ್ರತಿಭಟನೆ ಏರ್ಪಡಿಸಿದ್ದರು. ಅದರ ಹಿಂದಿನ ದಿನ ಲಂಕೇಶ್ ಪತ್ರಿಕೆ ಕಚೇರಿಗೆ ಸಿಜಿಕೆ ಬಂದಿದ್ದರು. ಆಗ ಸಿಜಿಕೆ ‘‘ರೀ ಸುಬ್ಬು ನಾಳೆ ಒಂದು ಪ್ರತಿಭಟನೆ ಸಭೆ ಇದೆ ಬರಬೇಕು ಕಣ್ರೀ’’ ಎಂದರು....ಮರು ಮಾತನಾಡದೆ ಬರ್ತೀನಿ ಸಾರ್ ಅಂದೆ. ಏನು, ಎತ್ತ ಕೇಳಲಿಲ್ಲ. ಒಳಗೆ ಹೋದಾಗ ಲಂಕೇಶ್ ಮೇಷ್ಟ್ರ್ರು, ‘ನಾಳೆ ಮಹಾದೇವ ಬರುತ್ತಾರೆ ಕಣಯ್ಯ, ನೀನು ಬರಬೇಕು’ ಎಂದರು. ಆಯ್ತು ಸಾರ್ ಅಂದೆ. ಒಳಗೊಳಗೆ ಖುಷಿ. ಪ್ರತಿಭಟನೆಯ ಮೆರವಣಿಗೆ ಕೆಆರ್ ಸರ್ಕಲ್ ನಿಂದ ಟೌನ್ ಹಾಲ್‌ಗೆ ಬರುವುದಿತ್ತು. ಕೆ.ಆರ್. ಸರ್ಕಲ್‌ಗೆ ಮಹಾದೇವ ಬಂದಿದ್ದಾರೆ ಎನ್ನುವ ವಿಷಯ ತಿಳಿದು ಅಲ್ಲಿಗೆ ಹೋದೆ. ಅಲ್ಲಿ ಜನರು ತುಂಬಿದ್ದರು. ನನಗೆ ಮಹಾದೇವ ಕಾಣಿಸಿದರು, ಹತ್ತಿರ ಹೋದೆ. ಎಲ್ಲರೂ ಫೋಟೊ ತೆಗೆದುಕೊಳ್ಳುತ್ತಿದ್ದರು. ನಾನು ನನ್ನ ಹೆಸರು ಹೇಳಿ ಒಂದು ಫೋಟೊ ಪ್ಲೀಸ್ ಸರ್ ಅಂದೆ, ಮರುಕ್ಷಣವೇ ನನ್ನನ್ನು ಯಾರೋ ತಳ್ಳಿದರು. ನಾನು ಅವರನ್ನು ತಳ್ಳಿದಂತಾಯಿತು. ಮರುಕ್ಷಣ ರೇಗಿ ‘‘ಏನ್ರಿ ಇದು’’ ಎಂದು ಸಿಟ್ಟಾದರು. ಅವರ ಕಣ್ಣು , ಮುಖ ಉರಿಯುತ್ತಿತ್ತು. ನಾನು ನಡುಗಿ ಹೋದೆ, ಮತ್ತೆ ಸಮಾಧಾನದಿಂದ ಫೋಟೊಗೆ ನಿಂತರು. ಈಗಲೂ ಆ ಫೋಟೊ ಇದೆ. ಅವರು ಸಿಟ್ಟಾದ ಕ್ಷಣ ಈಗಲೂ ನೆನಸಿಕೊಂಡರೆ ಭಯವಾಗುತ್ತದೆ. ಇರಲಿ ಸಾಕವ್ವನಿಗೆ ಸಿಟ್ಟು ಬರಬೇಡವೇ? ಇದೆಲ್ಲ ಕಳೆದ ಮೂರು ತಿಂಗಳಿನಿಂದ ದೇವನೂರ ಅವರ ಬಗ್ಗೆ ಲೇಖನ ಬರೆಯುವುದಕ್ಕೆ ಪ್ರಯತ್ನಿಸುತ್ತಿದ್ದೆ, ಆದರೆ ಆಗಿರಲಿಲ್ಲ. ಅವರಿಗೆ ವೈಕಂ ಪ್ರಶಸ್ತಿ ಬಂದಾಗ ಇವೆಲ್ಲವೂ ನೆನಪಾಯಿತು. ಮತ್ತೆ ಅದೇ ದಿನ ರಾತ್ರಿ 8 ಗಂಟೆಗೆ ಫೋನ್ ಮಾಡಿದೆ. ಕರೆಯನ್ನು ಸ್ವೀಕರಿಸಿದ ಮಹಾದೇವ ಅವರು ಹೇಳಿ ಸುಬ್ಬು ಅಂದರು. ತುಂಬಾ ಸಂತೋಷವಾಯಿತು ಸರ್ ಅನ್ನುವಷ್ಟೊರಳಗೆ ನಾನು ಮಾತನ್ನು ಮುಂದುವರಿಸದಂತೆ ‘‘ನಾನು ಸ್ವಲ್ಪ ಒತ್ತಡದಲ್ಲಿದ್ದೇನೆ’’ ಎಂದಾಗ, ಇರಲಿ ಸರ್ ನಾಳೆ ಫೋನ್ ಮಾಡುತ್ತೇನೆ ಅಂದೆ. ‘‘ಬೇಡ ಬೇಡ ನಾನು ಅಲ್ಲಿಗೆ ಹೋಗುತ್ತಿದ್ದೇನೆ ಅಂದರು. ಸರಿ ಸರ್ ಅಂದೆ, ಆಶ್ಚರ್ಯ ಎಂದರೆ ಮಾರನೇ ದಿನ ಮಹಾದೇವ ಸರ್ ಫೋನ್ ಮಾಡಿದ್ದರು. ಸಿಗ್ನಲ್ ಸಿಗದೇ ಫೋನ್ ಕಟ್ ಆಗುತ್ತಿತ್ತು. ‘ನಾನು ಪ್ರಯಾಣದಲ್ಲಿದ್ದೇನೆ’ ಎಂದರು. ನಾನು ವಿಶ್ ಯು ಹ್ಯಾಪಿ ಜರ್ನಿ ಸರ್ ಅಂದೆ. ಅದು ಅವರಿಗೆ ಕೇಳಿಸಿತೋ ಇಲ್ಲವೋ ತಿಳಿಯಲಿಲ್ಲ. ದಿನಾಂಕ 13-12-2024 ಶುಕ್ರವಾರ ಕನ್ನಡದ ಎಲ್ಲ ದಿನಪತ್ರಿಕೆಗಳಲ್ಲಿ ದೇವನೂರರಿಗೆ ವೈಕಂ ಪ್ರಶಸ್ತಿ ಪ್ರದಾನದ ಸುದ್ದಿ. ನೋಡಿದಾಗ ಕಣ್ಣು ಮತ್ತು ಮನಸ್ಸಿಗೆ ದಾಖಲಾಯಿತು. ಅನೇಕರಿಗೆ ಒಂದು ಪ್ರಶ್ನೆ ಇದೆ. ಮಹಾದೇವರು ಈ ಪ್ರಶಸ್ತಿಯನ್ನು ಹೇಗೆ ಒಪ್ಪಿಕೊಂಡರು ಎಂದು. ಕಾರಣ ಸ್ಪಷ್ಟ. ವೈಕಂ ಸತ್ಯಾಗ್ರಹ ತಿಳಿದವರಿಗೆ ಈ ಪ್ರಶ್ನೆ ಹುಟ್ಟುವುದಿಲ್ಲ ಅಷ್ಟೇ.
ಸರಳ ರೇಖೆ ಎಂದರೆ ಸರಳ ರೇಖೆಯೇ
ಮಾತಿಲ್ಲ ಆಳ, ಅರ್ಥಗಳ, ಮೌನವೇ ಎಲ್ಲ
ಸರಳ ರೇಖೆ ಎಂದರೆ ಅಗಣಿತ ಅಣುಗಳ ಅನಂತ ಚಲನೆ..
ರೇಖೆಯೆಂದರೆ ಮುಗುಳ್ನಗೆ, ಅಂತಃಕರಣದ ಧ್ಯಾನ
ಇದಕ್ಕಿಂತ ಹೆಚ್ಚು ಅಲ್ಲ
ಕಡಿಮೆಯೂ ಅಲ್ಲ, ಅಲ್ಲಮ ಪ್ರಭುವೇ...