ಡೋಹರ ಕಕ್ಕಯ್ಯನ ಊರಿನ ಡಾ.ನಂದಕುಮಾರ್‌ರ ನಂದದ ಪ್ರತಿರೋಧ

ವಚನ ಪರಂಪರೆಯಿಂದಲೂ ಹೋರಾಟದ ಕುರುಹು ಇರುವ ಕಕ್ಕೆರಾದ ಒಬ್ಬ ದಲಿತ ಹುಡುಗ ಸಂವಿಧಾನ ವಿರೋಧಿ ಧಾರ್ಮಿಕ ಮೂಲಭೂತವಾದದ ನಡೆಗಳ ವಿರುದ್ಧ ರಾಜಿಯಿಲ್ಲದೆ ಎದೆಸೆಟೆಸಿ ನಿಂತದ್ದು ಡೋಹರ ಕಕ್ಕಯ್ಯನ ಹೋರಾಟದ ದಾರಿಯಲ್ಲಿ ನಡೆದಂತಾಗಿದೆ. ಯಾವುದೇ ಪ್ರತಿಭಟನೆಯ ದನಿ ಇಲ್ಲದೆ ಕಳೆದು ಹೋಗುತ್ತಿರುವ ಯುನಿವರ್ಸಿಟಿಗಳ ಕ್ಯಾಂಪಸ್‌ನ ವಿದ್ಯಾರ್ಥಿ ಯುವ ಸಮುದಾಯಕ್ಕೆ ಡಾ.ನಂದಕುಮಾರ್ ಒಳಗಿನ ಪ್ರತಿರೋಧದ ಬೆಂಕಿ ಬೆಳಕಾಗಬೇಕಿದೆ.
ಅಂದು ಬೆಳಗಿನ ಜಾವ ಪೇಸ್‌ಬುಕ್ ಲೈವಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ (ಸಿಯುಕೆ) ಆಡಳಿತ ಭವನದ ಎದುರು ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸುತ್ತಿರುವ ದೃಶ್ಯ ಕಾಣುತ್ತಿತ್ತು. ಹೀಗೆ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುತ್ತಿರುವ ವಿದ್ಯಾರ್ಥಿಗಳ ನಾಯಕತ್ವ ವಹಿಸಿದ್ದು ನಂದಕುಮಾರ್. ಪ್ರತಿಮೆ ಸ್ಥಾಪಿಸುವಾಗ ಕಾವಲುಗಾರರು ತಡೆಯಲು ಪ್ರಯತ್ನಿಸುತ್ತಿರುವುದು, ಅದಕ್ಕೆ ನಂದಕುಮಾರ್ ಉತ್ತರಿಸುತ್ತಿರುವುದು ಈ ಬೆಳಗಿನ ಜಾವವನ್ನು ಬಿಸಿಗೊಳಿಸಿತ್ತು. ಹೀಗೆ ಕಳೆದ ನಾಲ್ಕು ವರ್ಷಗಳಿಂದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಸಂವಿಧಾನ ವಿರೋಧಿ ಧಾರ್ಮಿಕ ಮೂಲಭೂತವಾದಿ ಚಟುವಟಿಕೆಗಳನ್ನು ಬಯಲುಗೊಳಿಸುತ್ತಾ, ಪ್ರತಿರೋಧವನ್ನು ಜೀವಂತವಾಗಿಟ್ಟ ಸಂಶೋಧನಾ ವಿದ್ಯಾರ್ಥಿ ನಂದಕುಮಾರ್.
ಇದೇ 2025ರ ಜನವರಿ ಒಂದರಂದು ತಾನು ಸಿಯುಕೆ ಕನ್ನಡ ವಿಭಾಗಕ್ಕೆ ಸಲ್ಲಿಸಿದ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. ಹೀಗೆ ಹೋರಾಟ ಪ್ರತಿರೋಧವನ್ನು ಉಸಿರಾಗಿಸಿಕೊಂಡು, ಇದಕ್ಕೆ ತೆರಬೇಕಾದ ಬೆಲೆ ತೆತ್ತೂ ಬೆದರದೆ ಗಟ್ಟಿಯಾಗಿ ನಿಂತ ಸಂಶೋಧನಾ ವಿದ್ಯಾರ್ಥಿಯಾಗಿ ನಂದಕುಮಾರ್ ಮಾದರಿಯಾಗಿದ್ದಾರೆ. ಪಿಎಚ್.ಡಿ. ಪಡೆದಾಗ ತನ್ನ ಪೇಸ್‌ಬುಕ್ ಖಾತೆಯಲ್ಲಿ ‘‘ಬಾಲ್ಯದಲ್ಲಿ ನಾನು ನಮ್ಮಪ್ಪ ನಮ್ಮೂರ ಗೌಡ್ರ (ವಾಲ್ಮೀಕಿ ನಾಯಕರು) ಮನಿ ಹೆಂಡಿಕಸ ಬಳ್ಯಾಕ ನಸುಕಿನಲ್ಲಿ ಹೋಗ್ತಿದ್ದ ಸಂದರ್ಭದಲ್ಲಿ ಅದೆಷ್ಟೋ ಬಾರಿ ಹೇಳ್ತಿದ್ದ ‘ಎಪ್ಪ ನಂದು ಈ ಹೆಂಡಿಕಸ ಬಳೇದು, ಐದು ರೂಪಾಯಿಗೆ ಒಂದ್ ಕಟ್ ಬೀಡಿ ಸಲುವಾಗಿಯೇ ಚಾಕ್ರಿ ಮಾಡೋದು ನಮ್ ತಲೇಗೆ ಮುಗೀಲಿ. ನೀನಾರೆ ಚಂದ್ ಸಾಲಿ ಕಲ್ತು ದೊಡ್ಡ ಶ್ಯಾಣೆ ಆಗು’ ಎನ್ನುತ್ತಿದ್ದ. ನಮ್ಮಪ್ಪನ ಆಸೆಯಂತೆ ಇವತ್ತು ಬಾಬಾ ಸಾಹೇಬರು ಕೊಟ್ಟ ಸಂವಿಧಾನದ ಹಕ್ಕಿನ ಮೂಲಕ ಡಾಕ್ಟರೇಟ್ ಪದವಿಯನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಪಡೆದುಕೊಂಡ ಸಂತೋಷದ ದಿನ. ಅದಲ್ಲದೆ ಭೀಮಾ ಕೋರೆಗಾಂವ್‌ವಿಜಯದ ದಿವಸದಂದು ಈ ಪದವಿಯನ್ನು ಪಡೆದದ್ದು ಅತ್ಯಂತ ಖುಷಿಯಾಗಿದೆ’’ ಎಂದು ಬರೆದುಕೊಳ್ಳುತ್ತಾರೆ.
ನಂದಕುಮಾರ್ ತಾತ ಮಲ್ಲಪ್ಪ ಸ್ವಾತಂತ್ರ್ಯ ಹೋರಾಟಗಾರ. ರಜಾಕಾರರ ವಿರುದ್ಧ ಹೋರಾಡಿದವರು. ಕಕ್ಕೆರಾದ ಸದರಗಟ್ಟಿಯಲ್ಲಿರುವ ಜೈಲಲ್ಲಿ ಜೈಲುವಾಸ ಅನುಭವಿಸಿದವರು. ಒಮ್ಮೆ ಇಂದಿರಾಗಾಂಧಿ ಭಾಷಣದಲ್ಲಿ ಮಲ್ಲಪ್ಪರನ್ನು ನೆನಪಿಸಿಕೊಂಡಿದ್ದರಂತೆ. ಹಾಗಾಗಿ ಕಾಂಗ್ರೆಸ್ ಮಲ್ಲಪ್ಪ ಎಂತಲೇ ಮನೆಯ ಹೆಸರಾಗಿ ಉಳಿದಿದೆ. ಬಹುಕಾಲ ಕಕ್ಕೆರಾದ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುವಾಗ ಗಾಂಧಿಯ ಜತೆ ಮಲ್ಲಪ್ಪರ ಫೋಟೊ ಇಟ್ಟು ಪೂಜೆ ಮಾಡುತ್ತಿದ್ದರಂತೆ. ಜಾತಿಪ್ರಜ್ಞೆ ಬೆಳೆದಂತೆಲ್ಲಾ ಕಾಲಾನಂತರ ಈ ಪರಂಪರೆ ನಿಂತು ಹೋಗಿದೆ. ನಂದಕುಮಾರ್ ತಂದೆ ಬರಮಪ್ಪರನ್ನು ‘ಕಾಂಗ್ರೆಸ್ ಬರಮಪ್ಪ’ ಎಂತಲೇ ಕರೆಯುತ್ತಾರೆ. ಹೀಗೆ ತಾತನ ಹೋರಾಟದ ಎಳೆ ಕೂಡ ನಂದಪ್ಪರಲ್ಲಿ ಬೆರೆತಂತಿದೆ. ದೋಸ್ತರೆಲ್ಲಾ ಶಾಲೆಗೆ ಹೋಗುವ ಸಂದರ್ಭದಲ್ಲಿ ಹೆಂಡಿಕಸ ಹೊತ್ತುಕೊಂಡು ಸೆಗಣಿ ಜೋರು ಇಳಿಸಿಕೊಂಡು ನಡೆಯುತ್ತಿದ್ದ ಬಾಲ್ಯದ ಚಿತ್ರ ನೆನಪಿಸಿಕೊಳ್ಳುವಾಗ ನಂದಕುಮಾರ್‌ರ ಗಂಟಲು ಕಟ್ಟುತ್ತದೆ.
ನಂದಕುಮಾರ್ ಬಾಲ್ಯದ ತಿರುವುಗಳು ನೋವಿನಲ್ಲಿ ಅದ್ದಿ ತೆಗೆದಂತಿವೆ. ಸುರಪುರದಲ್ಲಿ ಅಂಬೇಡ್ಕರ್ ಹಾಸ್ಟೆಲ್‌ನಲ್ಲಿದ್ದು ಹೈಸ್ಕೂಲ್ ಓದುವಾಗಲೇ ಓದಿನ ಜತೆ ದುಡಿಮೆ ಮತ್ತು ಸುತ್ತಾಟ ಎರಡೂ ಜತೆಯಾಗಿದ್ದವು. ಸುರಪುರದಲ್ಲಿ ಹೇಗೋ ಎಸೆಸೆಲ್ಸಿ ಮುಗಿಸಿ ಕಕ್ಕೆರಾಕ್ಕೆ ಬಂದು ಹುಡುಗರ ಹಿಂಡಿನೊಂದಿಗೆ ಹಂದಿ ಹೊಡೆಯಲು ಹೋಗುತ್ತಿದ್ದರು.
ಶಹಾಪುರದಲ್ಲಿ ಪಿಯು ಓದಲು ಆರಂಭಕ್ಕೆ ಹಾಸ್ಟೆಲ್ ಸಿಗದ ಕಾರಣ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ಹದಿನೈದು ದಿನ ಕೆಲಸ ಮಾಡಿ ಹಣ ಪಡೆದು ಮತ್ತೆ ತನ್ನೂರಿಗೆ ಮರಳುತ್ತಾರೆ. ರೂಮ್ ಬಾಡಿಗೆ ಕಟ್ಟಲಾಗದೆ ಅಪ್ಪ ಕೊಡಿಸಿದ್ದ ಕೀಪ್ಯಾಡಿನ ಮೊಬೈಲ್ ಮಾರಲು ಗೆಳೆಯರನ್ನು ಕೇಳುತ್ತಾರೆ. ಮುಂದೆ ಹಾಸ್ಟೆಲ್ ಸಿಕ್ಕಾಗ ಊಟಕ್ಕೆ ಕೂತಾಗ ಏರ್ಪಟ್ಟ ಜಗಳದಲ್ಲಿ ಒಬ್ಬ ವಿದ್ಯಾರ್ಥಿ ‘‘ನಮ್ಮನ್ನೇನು ಎಸ್‌ಸಿ ಎಸ್‌ಟಿ ಅಂದ್ಕೊಂಡಿದ್ಯಾ’’ ಎಂದು ಯಾರನ್ನೋ ಬೈಯುತ್ತಾನೆ. ಈ ಭಾಷೆ ಕೇಳಿ ಕೆರಳಿದ ನಂದಕುಮಾರ್ ಬೈದವನನ್ನು ಸಿಕ್ಕಾಪಟ್ಟೆ ಹೊಡೆದು ಎಲ್ಲರ ಗಮನ ಸೆಳೆಯುತ್ತಾರೆ. ಹೀಗೆ ನಂದಕುಮಾರ್ ಸಿನಿಮೀಯವಾಗಿ ಹೀರೋ ಆಗುತ್ತಾರೆ. ಸುರಪುರದಂತೆ ಶಹಾಪುರದಲ್ಲಿಯೂ ರೌಡಿಗುಂಪಿನಲ್ಲಿ ಗುರುತಿಸಿಕೊಂಡು ಆಗ ಶಹಾಪುರದಲ್ಲಿ ನಡೆದ ಕೋಮುಗಭೆಯಲ್ಲಿ ಸಿಕ್ಕಿಹಾಕಿಕೊಂಡು ಜೈಲುವಾಸ ಅನುಭವಿಸುತ್ತಾರೆ.
ಬಿ.ಎ. ಓದುವ ಹೊತ್ತಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಾಗಿಯೇ ನಿರಂತರ ಓದುತ್ತಿದ್ದ ನಾಟೇಕರ್ ಎನ್ನುವವರ ಸಂಪರ್ಕ ಬೆಳೆಯುತ್ತದೆ. ಈತ ನಂದಕುಮಾರ್ ಅವರ ಹವ್ಯಾಸಗಳನ್ನು ತಿದ್ದುತ್ತಾರೆ. ಹೀಗೆ ಡಿಗ್ರಿ ಮುಗಿಯುತ್ತದೆ. ಇದೇ ಹೊತ್ತಿಗೆ ಸತೀಶ್ ಜಾರಕಿಹೊಳಿ ಅವರ ಪರಿಚಯವಾಗುತ್ತದೆ. ಬಾರ್ ಲೈಸೆನ್ಸ್ ಕೊಡಿಸಲು ಅವರನ್ನು ಕೇಳಿಕೊಂಡಾಗ ‘ಸಿಇಟಿ ಓದಿ ಮೊದಲು ಕೆಲಸ ಹಿಡಿ’ ಎಂದು ಅವರು ಇಪ್ಪತ್ತು ಸಾವಿರ ರೂ. ಕೊಡುತ್ತಾರೆ. ಈ ಹಣದಲ್ಲಿ ನಂದಕುಮಾರ್ ಪಿಡಿಒ ಪರೀಕ್ಷೆಯ ತಯಾರಿಗಾಗಿ ವಿಜಯಪುರದ ಕೋಚಿಂಗ್ ಸೆಂಟರ್ ಸೇರುತ್ತಾರೆ.
ಮುಂದೆ ಸಮಾಜ ಕಲ್ಯಾಣ ಇಲಾಖೆ ಪ್ರಾಯೋಜಿಸುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ಬೆಂಗಳೂರಿನ ವಿಜಯನಗರದಲ್ಲಿ 9 ತಿಂಗಳು ಕೋಚಿಂಗ್ ಹೋಗುತ್ತಾರೆ. ಇದರ ಫಲವಾಗಿ ಕೆ.ಎ.ಎಸ್. ಪ್ರಿಲಿಮ್ಸ್ ಪಾಸ್ ಮಾಡಿದ ನಂದಕುಮಾರ್ ಸಿಯುಕೆಯಲ್ಲಿ ಎಂ.ಎ. ಓದಲಿಕ್ಕೆ ಅವಕಾಶ ಸಿಕ್ಕ ಖುಷಿಯಲ್ಲಿ ಕೆ.ಎ.ಎಸ್. ಮುಖ್ಯ ಪರೀಕ್ಷೆಗೆ ಹಾಜರಾಗುವುದಿಲ್ಲ. ಹಿಂದೊಮ್ಮೆ ಸಿಯುಕೆ ಕನ್ನಡ ವಿಭಾಗದ ಅಪ್ಪಗೆರೆ ಸೋಮಶೇಖರ ಅವರ ಭಾಷಣ ಕೇಳಿ ಪ್ರಭಾವಿತನಾದ ಪರಿಣಾಮ 2016ರಲ್ಲಿ ಕರ್ನಾಟಕ ಸೆಂಟ್ರಲ್ ಯುನಿವರ್ಸಿಟಿ ಸೇರುತ್ತಾರೆ. ಆಗ ಸಿಯುಕೆಯಲ್ಲಿ ಧಾರ್ಮಿಕ ಮೂಲಭೂತವಾದ ಇನ್ನೂ ಅಷ್ಟಾಗಿ ಬೇರೂರಿರಲಿಲ್ಲ. ಕೆಲವು ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು ಮತ್ತು ಪ್ರೊಫೆಸರುಗಳು ಸೇರಿ ಖಾಸಗಿಯಾಗಿ ಗುಟ್ಟಾಗಿ ಚರ್ಚಿಸುತ್ತಿದ್ದರಷ್ಟೆ. ಸಿಯುಕೆಯಲ್ಲಿ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಈ ಎಲ್ಲಾ ವಿದಾರ್ಥಿಗಳ ಸಮಸ್ಯೆಗಳನ್ನು ಕೇಳುತ್ತಾ ಒಗ್ಗೂಡಿಸಿ ಸಂಘಟಿಸಿ ಸಿಯುಕೆಯ ಒಳಗಣ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಎದೆಸೆಟೆಸಿ ಪ್ರಶ್ನಿಸುವ ತಂಡವೊಂದನ್ನು ಕಟ್ಟುತ್ತಾ ನಂದಪ್ಪ ವಿದ್ಯಾರ್ಥಿ ನಾಯಕನಾಗಿ ರೂಪುಗೊಳ್ಳುತ್ತಾರೆ.
2024ರ ಎಪ್ರಿಲ್‌ನಲ್ಲಿ ನಂದಕುಮಾರ್ ತಮ್ಮನ ಮೇಲೆ ಮಾರಣಾಂತಿಕ ಹಲ್ಲೆಯಾಗುತ್ತದೆ. ಆ ಸಂದರ್ಭದಲ್ಲಿ ನಂದಕುಮಾರ್ ಕಡುದುಃಖ ಬೆರೆತ ಆಕ್ರೋಶದಲ್ಲಿ ಹೀಗೆ ಬರೆಯುತ್ತಾರೆ, ‘‘ಕಳೆದ ಎರಡು-ಮೂರು ವರ್ಷಗಳಿಂದ ನಾನು ಅನುಭವಿಸುತ್ತಿರುವ ಭಯಾನಕ ಸಂಕಟಗಳಲ್ಲಿ ನನ್ನ ತಮ್ಮನ ಮೇಲೆ ಆಗಿರುವ ಮಾರಣಾಂತಿಕ ಹಲ್ಲೆ ಕೂಡ ಒಂದು. ಇದಕ್ಕೆ ಜಮೀನ್ದಾರ ಪಾಳೆಗಾರಿಕೆ ವ್ಯವಸ್ಥೆಯ ಕೋಮುವಾದಿ, ಜಾತಿವಾದಿಗಳು ಕಾರಣ. ಅಸಮಾನತೆ ವಿರುದ್ಧದ ಹೋರಾಟ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಅವರ ಸೈದ್ಧಾಂತಿಕ ವಿಚಾರಗಳನ್ನು ಓದು ಬರಹದ ಮೂಲಕ ಅಭಿವ್ಯಕ್ತಿಸುವುದು, ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಾ ಸಾಮಾಜಿಕ ನ್ಯಾಯವನ್ನು ಆಗ್ರಹಿಸಿ ಪ್ರತಿಭಟನೆಗಳನ್ನು ಮಾಡಿದ ಕಾರಣಕ್ಕೆ ಆರೆಸ್ಸೆಸ್ ಮತ್ತು ಮನುವಾದಿಗಳು ಕುತಂತ್ರದಿಂದ ನನ್ನನ್ನು ಎಷ್ಟು ತುಳಿಯಲು ಸಾಧ್ಯವೋ ಅಷ್ಟು ತುಳಿಯುತ್ತಿದ್ದಾರೆ.’’
‘‘ನನ್ನ ಮೇಲೆ ದಾಖಲಾದ ಸುಳ್ಳು ಪೊಲೀಸ್ ಪ್ರಕರಣವಿರಬಹುದು, ನನಗೆ ಜೀವ ಬೆದರಿಕೆ ಒಡ್ಡಿದ್ದಿರಬಹುದು, ಆಹಾರ, ಸೈದ್ಧಾಂತಿಕ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದ್ದಿರಬಹುದು, ಇದೆಲ್ಲಕ್ಕೂ ಪ್ರತಿಫಲವಾಗಿ ಕಿರುಕುಳ ನೀಡಿರುವುದು, ಕೊನೆಗೆ ಏಕಾಏಕಿ ವಿಶ್ವವಿದ್ಯಾನಿಲಯ ನನ್ನ ಸಂಶೋಧನಾ ಪ್ರವೇಶವನ್ನು ರದ್ದುಗೊಳಿಸಿದ್ದು ನಡೆಯಿತು. ಇದರ ಮುಂದುವರಿದ ಭಾಗವೇ ಇವತ್ತು ಊರಲ್ಲಿರುವ ನನ್ನ ತಮ್ಮನ ಮೇಲೆ ಸ್ಥಳೀಯ ಜಗಳದ ನೆಪದಲ್ಲಿ ಆಗಿರುವ ಹಲ್ಲೆಯೂ ಕೂಡ’’ ಎನ್ನುತ್ತಾರೆ. ಇದು ನಂದಕುಮಾರ್ ತನ್ನ ಪ್ರತಿರೋಧಕ್ಕೆ ಎದುರಾಗಿ ಅನುಭವಿಸಿದ ಯಾತನೆಯಾಗಿದೆ. ನಂದಕುಮಾರ್ ತಮ್ಮನಿಗೆ ಈಚೆಗೆ ಕಕ್ಕೆರಾದ ಪುರಸಭೆಯಲ್ಲಿ ತಾತ್ಕಾಲಿಕವಾಗಿ ಪೌರಕಾರ್ಮಿಕನ ಕೆಲಸ ಕೊಟ್ಟಿದ್ದಾರೆ. ಒಮ್ಮೆ ನನ್ನೊಂದಿಗೆ ಮಾತನಾಡುತ್ತಾ, ‘‘ನಾನು ಎತ್ತಿದ ಪ್ರಶ್ನೆಗಳನ್ನು ಪ್ರಗತಿಪರರು ಬೆಂಬಲಿಸಿ ಮಾತನಾಡುತ್ತಿಲ್ಲ. ಬಹುಶಃ ರೋಹಿತ್ ವೇಮುಲಾನ ತರಹ ಆತ್ಮಹತ್ಯೆ ಮಾಡಿಕೊಂಡಾಗ ದೀಪ ಹಚ್ಚಲು ಬರಬಹುದೇನೋ’’ ಎಂದು ನೋವಿನಿಂದ ಹೇಳಿದ್ದರು. ಈ ಮಾತು ನನಗೆ ಬಹುದಿನಗಳ ಕಾಲ ಕಾಡಿತ್ತು. ಮುಂದೆ ನಂದಪ್ಪರ ಹೋರಾಟಕ್ಕೆ ಜತೆಯಾಗಿ ಗುಲ್ಬರ್ಗಾದ ಎಲ್ಲಾ ಸಂವಿಧಾನ ಪರ ಸಂಘಟನೆಗಳು ಒಗ್ಗೂಡಿ ಸಿಯುಕೆಯ ಸಂವಿಧಾನ ವಿರೋಧಿ ನಡೆಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆದಿತ್ತು. ಆ ದಿನ ನಂದಪ್ಪನ ಮುಖದಲ್ಲಿ ಸಂತಸದ ಬುಗ್ಗೆಗಳೆದ್ದಿದ್ದವು.
ಪ್ರತಿಭಟನೆಯ ಮಧ್ಯೆಯೂ ನಂದಕುಮಾರ್ ಭರವಸೆ ಹುಟ್ಟಿಸುವ ಕವಿ ಕೂಡ. ಆತನ ‘ಹಂಗಿನ ಕಿರೀಟಕ್ಕೆ ಜೋತು ಬಿದ್ದ ನಾಲಿಗೆ’ ಕವನ ಸಂಕಲನದ ಹಸ್ತಪ್ರತಿಗೆ ವಿಜಯಪುರ ಜಿಲ್ಲೆಯ ಕಡಣಿಯ ಬೆರಗು ಪ್ರಕಾಶನ ಸಂಸ್ಥೆಯು ನೀಡುವ ಪ್ರೊ.ಎಚ್.ಟಿ.ಪೋತೆ ಹಸ್ತಪ್ರತಿ ಪ್ರಶಸ್ತಿಗಳಲ್ಲಿ ಯುವಕವಿಗಳಿಗೆ ನೀಡುವ ಯುವಕಾವ್ಯ ಪುರಸ್ಕಾರ ಲಬಿಸಿದೆ. ಈಚೆಗೆ ಕಡಣಿಯಲ್ಲಿಯೇ ಕಾವ್ಯ ಸಂಕಲನ ಪ್ರಕಟವಾಗಿ ಬಿಡುಗಡೆಯೂ ಆಯಿತು.
ನಂದಕುಮಾರ್ ಪಿಎಚ್.ಡಿ. ಸಂಶೋಧನೆ ಕೂಡ ಹೋರಾಟಕ್ಕೆ ಸಂಬಂಧಿಸಿದ್ದು. ಗುಲ್ಬರ್ಗಾ ಜಿಲ್ಲೆಯ ದಲಿತ ಹೋರಾಟದ ಕಥನವನ್ನು ಶೋಧಿಸಿದ್ದಾರೆ. ಮೌಖಿಕ ಪರಂಪರೆಯಲ್ಲಿಯೇ ಉಳಿದಿರುವಂತಹ ಗುಲ್ಬರ್ಗ ಜಿಲ್ಲೆಯ ದಲಿತ ಚಳವಳಿಯನ್ನು ಕಟ್ಟುವಲ್ಲಿ ಶ್ರಮಿಸಿದ ವಿಠಲ ದೊಡ್ಡನಿ, ಮಂಗೂರು ವಿಜಯ, ಡಿ. ಜಿ. ಸಾಗರ, ಬಸವಣ್ಣ ಸಿಂಗೆ, ಎಸ್. ಪಿ. ಸುಳ್ಳದ, ಎಸ್. ಆರ್ ಕೊಲ್ಲೂರ್, ಹನುಮಂತರಾವ್ ದೊಡ್ಡನಿ, ಅರ್ಜುನ್ ಭದ್ರೆ, ದೇವೇಂದ್ರ ಹೆಗಡೆ, ಮರಿಯಪ್ಪ ಹಳ್ಳಿ, ಮುಂತಾದ ಹೋರಾಟಗಾರರ ಅನುಭವ ಕಥನವನ್ನು ಕ್ಷೇತ್ರಕಾರ್ಯ ಮತ್ತು ಸಂದರ್ಶನದ ಮೂಲಕ ಆತ್ಮಕಥೆಯ ನಿರೂಪಣೆಗಳನ್ನೇ ಸಂಶೋಧನೆಯ ಆಕರವನ್ನಾಗಿಸಿಕೊಂಡಿದ್ದಾರೆ.
ಈ ಸಂಶೋಧನಾ ಪ್ರಬಂಧದ ಬಗ್ಗೆ ಮಾರ್ಗದರ್ಶಕರಾದ, ಡಾ.ಅಪ್ಪಗೆರೆ ಸೋಮಶೇಖರ್ ಅವರು ‘‘ಕರ್ನಾಟಕದ ದಲಿತ ಸಂಘರ್ಷ ಸಮಿತಿಯ ಹೋರಾಟಕ್ಕೆ 50 ವರ್ಷ ತುಂಬಿದ ಬಗೆಗೆ ಚರ್ಚೆ ನಡೆಯುತ್ತಿರುವಾಗ, ದಲಿತ ಹೋರಾಟಗಾರರ ಅನುಭವಗಳನ್ನೇ ದಾಖಲೆಗಳನ್ನಾಗಿಸಿ ಸಂಶೋಧನೆ ಮಾಡಿರುವುದು ಮಾದರಿಯಾಗಿದೆ. ಈ ನೆಲೆಯಲ್ಲಿ ಆಯಾ ಜಿಲ್ಲೆಗಳ ದಲಿತ ಹೋರಾಟದ ಚರಿತ್ರೆಯನ್ನು ಮರು ಕಟ್ಟಬಹುದಾಗಿದೆ’’ ಎನ್ನುತ್ತಾರೆ.
ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ವಿದ್ಯಾರ್ಥಿಗಳನ್ನು ಸ್ವತಂತ್ರವಾಗಿ ಆಲೋಚಿಸುವಂತೆ, ಬರೆಯುವಂತೆ ಮಾಡಬಲ್ಲ ಕನ್ನಡ ವಿಭಾಗಗಳಲ್ಲಿ ಕನ್ನಡ ವಿಶ್ವವಿದ್ಯಾಲಯದ ನಂತರ ಸಿಯುಕೆ ಕನ್ನಡ ವಿಭಾಗ ಮುಖ್ಯವಾಗಿದೆ. ವಿಭಾಗದ ಹಿರಿಯ ಪ್ರಾಧ್ಯಾಪಕಿಯಾದ ಸಿದ್ದಗಂಗಾ ರುಮ್ಮ, ವಿಕ್ರಮ ವಿಸಾಜಿ, ಬಸವರಾಜ ಕೋಡಗುಂಟಿ, ಅಪ್ಪಗೆರೆ ಸೋಮಶೇಖರ್, ರಾಜಣ್ಣ ತಗ್ಗಿ ಅವರುಗಳ ತಂಡ ವಿದ್ಯಾರ್ಥಿಗಳನ್ನು ವೈಚಾರಿಕವಾಗಿ ರೂಪಿಸುತ್ತಿದೆ. ಈ ವಿಭಾಗದಿಂದ ಅನೇಕ ಕವಿ, ಕಥೆಗಾರ, ಸಂಶೋಧಕರು ಹೊರ ಹೊಮ್ಮಿದ್ದಾರೆ. ಹೀಗೆ ರೂಪುಗೊಂಡವರಲ್ಲಿ ನಂದಕುಮಾರ್ ಕೂಡ ಒಬ್ಬರು. ಸಿಯುಕೆಯ ಕನ್ನಡ ವಿಭಾಗದಲ್ಲಿ ಸಾಂವಿಧಾನಿಕ ಆಲೋಚನೆಗಳ ಸ್ಪಷ್ಟತೆ ಪಡೆದ ನಂದಕುಮಾರ್ ಇದೇ ಸಿಯುಕೆಯ ಸಂವಿಧಾನ ವಿರೋಧಿ ನಡೆಗಳನ್ನು ಬಹಳ ದಿಟ್ಟವಾಗಿ ವಿದ್ಯಾರ್ಥಿ ಸಂಘಗಳ ಮೂಲಕ ಎದುರಿಸಿದ್ದಾರೆ.
ಕಕ್ಕೆರಾ ಊರಿನೊಂದಿಗೆ ಡೋಹರ ಕಕ್ಕಯ್ಯನ ನಂಟಿದೆ. ಮಾಳವ ದೇಶದಿಂದ ಕಲ್ಯಾಣಕ್ಕೆ ಬಂದು ಶರಣನಾದ ಚರ್ಮ ಹದ ಮಾಡುವ ಕಾಯಕದ ಶೂದ್ರ ಸಮುದಾಯದ ಡೋಹಾರ ಕಕ್ಕಯ್ಯ ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಉಳವಿಯ ಕಡೆ ಹೊರಟ ಶರಣರ ರಕ್ಷಣೆಗಾಗಿ ಹೋರಾಟ ನಡೆಸಿದಾತ. ಕಾತರವಳ್ಳ ಕಾಳಗದ ನಂತರ ವೈರಿಗಳನ್ನು ಬೇರೆಡೆ ಸೆಳೆದು ಕಕ್ಕೇರಿಯ ಬಳಿ ಆತ ಹೋರಾಡುತ್ತ ಹುತಾತ್ಮನಾದನಂತೆ.
ವಚನ ಪರಂಪರೆಯಿಂದಲೂ ಹೋರಾಟದ ಕುರುಹು ಇರುವ ಕಕ್ಕೆರಾದ ಒಬ್ಬ ದಲಿತ ಹುಡುಗ ಸಂವಿಧಾನ ವಿರೋಧಿ ಧಾರ್ಮಿಕ ಮೂಲಭೂತವಾದದ ನಡೆಗಳ ವಿರುದ್ಧ ರಾಜಿಯಿಲ್ಲದೆ ಎದೆಸೆಟೆಸಿ ನಿಂತದ್ದು ಡೋಹರ ಕಕ್ಕಯ್ಯನ ಹೋರಾಟದ ದಾರಿಯಲ್ಲಿ ನಡೆದಂತಾಗಿದೆ. ಯಾವುದೇ ಪ್ರತಿಭಟನೆಯ ದನಿ ಇಲ್ಲದೆ ಕಳೆದು ಹೋಗುತ್ತಿರುವ ಯುನಿವರ್ಸಿಟಿಗಳ ಕ್ಯಾಂಪಸ್‌ನ ವಿದ್ಯಾರ್ಥಿ ಯುವ ಸಮುದಾಯಕ್ಕೆ ಡಾ.ನಂದಕುಮಾರ್ ಒಳಗಿನ ಪ್ರತಿರೋಧದ ಬೆಂಕಿ ಬೆಳಕಾಗಬೇಕಿದೆ.