ಪಿ.ಎಂ. ನಾರಾಯಣಮೂರ್ತಿ-ನೂರರ ನೆನಪು
ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಮಿಕ ಮತ್ತು ರೈತ ಸಂಘಟನೆಗಳ ಪ್ರಮುಖ ನಾಯಕರಾದ ಕಾಮ್ರೇಡ್ ಪಿ.ಎಂ. ನಾರಾಯಣ ಮೂರ್ತಿಯವರು ಕೊಡಗು ಜಿಲ್ಲೆಯ ವೀರಾಜಪೇಟೆಯ ಸಮೀಪದ ಪಾಲಂಗಲ ಗ್ರಾಮದಲ್ಲಿ ದಿನಾಂಕ 18-7-1923ರಲ್ಲಿ ಜನಿಸಿದವರು. ಅವರ ತಂದೆ ಪಿ.ಎನ್. ಮಂಜಯ್ಯ, ತಾಯಿ ದೇವಮ್ಮ. ಮಂಜಯ್ಯನವರು ಅಧ್ಯಾಪಕರಾಗಿದ್ದರು. ಮೂರ್ತಿಯವರು ಚಿಕ್ಕವರಾಗಿದ್ದಾಲೇ ತಂದೆಯನ್ನು ಕಳೆದುಕೊಂಡಿದ್ದರು. ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ವೀರಾಜಪೇಟೆಯಲ್ಲಿ ಪಡೆದರು. ಆ ಬಳಿಕ ಅವರ ತಾಯಿಯವರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಸಲುವಾಗಿ ಮಂಗಳೂರಿಗೆ ಬಂದು ಬಾಡಿಗೆ ಮನೆಯಲ್ಲಿ ವಸತಿ ಹೂಡಿದರು. 1941ರಲ್ಲಿ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಪದವಿಪೂರ್ವ ಆರಂಭದ ತರಗತಿಗೆ ಸೇರಿ ಮುಂದೆ ಬಿ.ಎ. ಪದವಿ ಪಾಸಾದರು.
ಸೋವಿಯತ್ ಒಕ್ಕೂಟದಲ್ಲಿ ನಡೆದ ಕ್ರಾಂತಿ ಮತ್ತು ಅದರ ಪರಿಣಾಮವಾಗಿ ಸಮಾಜದಲ್ಲಿ ಆಗುತ್ತಿದ್ದ ಬದಲಾವಣೆಗಳಿಂದ ಅಲ್ಲಿಯ ಜನಸಾಮಾನ್ಯರ ಜೀವನ ಮಟ್ಟ ಬಹುತೇಕ ಸುಧಾರಿಸಿವೆ ಎಂಬ ವಿಷಯವನ್ನು ತಮ್ಮ ಪ್ರಾಧ್ಯಾಪಕರಿಂದ ತಿಳಿದುಕೊಂಡ ಮೂರ್ತಿಯವರು ಕಿರು ವಯಸ್ಸಿನಲ್ಲೇ ಸಮಾಜವಾದಿ ಚಿಂತನೆ ಮತ್ತು ಕ್ರಾಂತಿಯೆಡೆಗೆ ಆಕರ್ಷಿತರಾದರು. ನಮ್ಮ ದೇಶದಲ್ಲಿನ ಬಡತನವನ್ನು ನಿವಾರಿಸಲು ಸಾಮಾಜಿಕ ಹೋರಾಟದಲ್ಲಿ ಸಕ್ರಿಯರಾದರು.
ಕಾಲೇಜಿನಲ್ಲಿ ಮೂರ್ತಿಯವರು ಅಂದಿನ ಕ್ರಾಂತಿಕಾರಿ ಸಂಘಟನೆಯಾದ ಎಐಎಸ್‌ಎಫ್‌ನ ಸಂಪರ್ಕಕ್ಕೆ ಬಂದರು. ಆಗ ನಾಯಕರಾಗಿದ್ದ ಎಸ್.ವಿ. ಘಾಟೆ, ಎಸ್.ಎನ್. ಗಣೇಶ್ ಶಾನುಭಾಗ್, ಬಿ.ವಿ. ಕಕ್ಕಿಲ್ಲಾಯ, ಸಿಂಪ್ಸನ್ ಸೋನ್ಸ್, ಶಿವಶಂಕರ ರಾವ್, ಎಸ್.ಆರ್. ಭಟ್, ಶಾಂತಾರಾಮ ಪೈ ಮೊದಲಾದವರ ನೇರ ಸಂಪರ್ಕಕ್ಕೆ ಬಂದಿದ್ದರಿಂದ ಅವರ ಪರಿಚಯವನ್ನು ಗಳಿಸಿದರು. ಈ ಯುವಕನ ಶಿಸ್ತಿನ ಜನಪರ ಚಟುವಟಿಕೆಗಳನ್ನು ಕಂಡು ಮೆಚ್ಚಿ ಅವರ ಜತೆಗೂಡಲು ಪ್ರೋತ್ಸಾಹಿಸಿದವರು ಮೂರ್ತಿಯವರ ತಾಯಿಯವರು. ಆಗ ಭೂಗತರಾಗಿ ಚಳವಳಿಯನ್ನು ನಿರ್ವಹಿಸುತ್ತಿದ್ದ ಬಿ.ವಿ. ಕಕ್ಕಿಲ್ಲಾಯ ಅವರಿಗೆ ಮೂರ್ತಿಯವರ ಮನೆಯಲ್ಲಿ ಆಶ್ರಯ ನೀಡಿ ಸ್ವಂತ ಮಗನಂತೆ ನೋಡಿದರು. ಮುಂದೆ ಮೂರ್ತಿಯವರು ಜೀವನದುದ್ದಕ್ಕೂ ಆದರ್ಶ ಕಮ್ಯುನಿಸ್ಟರಾಗಿ ಬೆಳೆದರು.
1945ರಲ್ಲಿ ಬಿ.ಎ. ಪದವಿಯನ್ನು ಪಡೆದ ಮೂರ್ತಿಯವರು ಮಂಗಳೂರಿನಲ್ಲಿ ಇದ್ದು ಭಾರತ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿ ಪಕ್ಷವನ್ನು ಮತ್ತು ಕಾರ್ಮಿಕ ಸಂಘಟನೆಗಳನ್ನು ಬಲಪಡಿಸಲು ಶ್ರಮವಹಿಸಿದರು. ಅಂದು ಬೀಡಿ ಉದ್ದಿಮೆಯ ಮಾಲಕರು ತಮ್ಮ ಉದ್ಯಮ ಘಟಕಗಳನ್ನು ಮುಚ್ಚಿ ಕೆಲಸಗಾರರನ್ನು ಬೀದಿಪಾಲು ಮಾಡಿ ಉದ್ಯಮವನ್ನು ಮನೆ ಮನೆಗಳಿಗೂ, ಹಳ್ಳಿ ಹಳ್ಳಿಗಳ ಕಾರ್ಮಿಕರ ಗುಡಿಸಲುಗಳಿಗೂ ಏಜೆಂಟರುಗಳ ಮೂಲಕ ಲಗ್ಗೆ ಇಡುತ್ತಿದ್ದ ಕಾಲದಲ್ಲಿ ಉದ್ಯೋಗ ಭದ್ರತೆಗೂ, ಪರಿಹಾರಕ್ಕೂ ಅನೇಕ ಬೇಡಿಕೆಗಳನ್ನು ಮುಂದಿಟ್ಟು ಕಾರ್ಮಿಕರು ನಡೆಸಿದ ಹೋರಾಟಕ್ಕೆ ಮೂರ್ತಿಯವರು ನಾಯಕತ್ವ ನೀಡಿದರು.
1946ರಲ್ಲಿ ‘ನವಭಾರತ’ ದಿನ ಪತ್ರಿಕೆಯ ಉಪಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವಾಗಲೇ ಅವರಿಗೆ ಶಾಂತಾರಾಮ ಪೈಯವರ ಪರಿಚಯದಿಂದ ನೇಯ್ಗೆ ಕೆಲಸಗಾರರ ಮುಷ್ಕರದ ಸಂದರ್ಭದಲ್ಲಿ ‘ನವಭಾರತ’ದ ಮಾಲಕರೊಂದಿಗೆ ಭಿನ್ನಾಭಿಪ್ರಾಯವಿದ್ದುದರಿಂದ ಮೂರ್ತಿಯವರು ಉಪಸಂಪಾದಕರ ಸ್ಥಾನವನ್ನು ತ್ಯಜಿಸಿ ರಾಜೀನಾಮೆ ನೀಡಿದರು. 1948ರಲ್ಲಿ ಹುಬ್ಬಳ್ಳಿಯಿಂದ ಪ್ರಕಟಗೊಳ್ಳುತ್ತಿದ್ದ ‘ಜನಶಕ್ತಿ’ ಪತ್ರಿಕೆಯನ್ನು ಸರಕಾರ ಮುಟ್ಟುಗೋಲು ಹಾಕಿದ ಸಂದರ್ಭದಲ್ಲಿ ಹೊಸತೊಂದು ಪತ್ರಿಕೆಯನ್ನು ಪ್ರಾರಂಭ ಮಾಡಲು ಪಕ್ಷ ಮೂರ್ತಿಯವರನ್ನು ಹುಬ್ಬಳ್ಳಿಗೆ ಕಳುಹಿಸಿತು. ಆದರೆ ಸರಕಾರದ ಆಜ್ಞೆಯಿಂದ ಆ ಪತ್ರಿಕೆಯು ಪ್ರಾರಂಭವಾಗಲಿಲ್ಲ.
ಮೂರ್ತಿಯವರು ಮುಷ್ಕರನಿರತ ನೇಕಾರ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೊಳಗಾದಾಗ ಅವರಿಗೆ ಆರ್ಥಿಕ ನೆರವು ನೀಡಲು ಮತ್ತು ಗಂಜಿ ಕೇಂದ್ರಗಳನ್ನು ತೆರೆಯಲು ತಮ್ಮ ಸಹ ಸಂಗಾತಿಗಳ ಜೊತೆ ಸೇರಿ ಹಣ ಮತ್ತು ಆಹಾರ ಸಂಗ್ರಹ ಮಾಡಿ ಅಂದಿನ ಕಾರ್ಮಿಕ ಚಳವಳಿಗಳು ಯಶಸ್ವಿಗೊಳ್ಳುವಂತೆ ಮಾಡಿದರು. ಹಸಿವಿನಿಂದ ಕಾರ್ಮಿಕರು ಯಾವುದೇ ಕಾರಣಕ್ಕೂ ಹೋರಾಟದಿಂದ ವಿಮುಖರಾಗಬಾರದೆಂದು ಹೋರಾಟ ನಿರತ ಕಾರ್ಮಿಕರೆಲ್ಲರಿಗೂ ಗಂಜಿ ಒದಗಿಸುವ ಕಾರ್ಯಕ್ರಮವನ್ನು ಮೂರ್ತಿಯವರು ಮಾಡುತ್ತಿದ್ದರು.
ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಮೂರ್ತಿಯವರು ಆನಂತರ ಕಾನೂನು ಪದವಿ ಪಡೆದು ನ್ಯಾಯವಾದಿಗಳಾದರು. ಭೂಗತರಾಗಿದ್ದ ಕಾಮ್ರೇಡ್‌ಗಳಾದ ಸಿಂಪನ್ಸ್ ಸೋನ್ಸ್, ಬಿ.ವಿ. ಕಕ್ಕಿಲ್ಲಾಯ, ಎ. ಕೃಷ್ಣ ಶೆಟ್ಟಿ, ಬಿ. ಲಿಂಗಪ್ಪ ಸುವರ್ಣ, ಎ. ಶಾಂತಾರಾಮ ಪೈ, ಕೆ. ಮೋನಪ್ಪ ಶೆಟ್ಟಿ ಮೊದಲಾದವರ ಪರವಾಗಿ ವಕೀಲರಾದ ಭಾಸ್ಕರ ರೈಯವರೊಡಗೂಡಿ ನ್ಯಾಯಾಲಯದಲ್ಲಿ ಮೂರ್ತಿಯವರು ವಕಾಲತ್ತು ವಹಿಸಿದ್ದರು. ಎಐಟಿಯುಸಿಗೆ ಸೇರಿದ ಹಲವಾರು ಕಾರ್ಮಿಕ ಸಂಘಗಳ ಹೋರಾಟಗಳಿಗೆ ನೇತೃತ್ವ ನೀಡಿ ಹಲವು ಸಂಘಟನೆಗಳ ಪದಾಧಿಕಾರಿಯಾಗಿ ದುಡಿದರು. ಕಾನೂನು ಸಲಹೆಗಾರರಾಗಿಯೂ ಸೇವೆಸಲ್ಲಿಸಿದರು. ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಜನತೆಯಲ್ಲಿ ಜನಜಾಗೃತಿ ಮೂಡಿಸಿ, ಸೌಹಾರ್ದಕ್ಕೆ ದುಡಿದರು. ಈ ಬಗ್ಗೆ ಲೇಖನಗಳನ್ನು ಬರೆದರು. 1969ರಿಂದ 1980ರ ವರೆಗೆ ಸುರತ್ಕಲ್ ಗೋವಿಂದದಾಸ್ ಕಾಲೇಜಿನಲ್ಲಿ ಕಾನೂನು ಉಪನ್ಯಾಸಕರಾಗಿದ್ದರು.
ಸರಿಸುಮಾರು 1978ರಿಂದ 2008ರ ತನಕ ದ.ಕ. ಹಂಚಿನ ಕೆಲಸಗಾರರ ಸಂಘದ ಅಧ್ಯಕ್ಷರಾಗಿಯೂ, 1974ರಲ್ಲಿ ನವಮಂಗಳೂರು ಬಂದರು ಕಾರ್ಮಿಕರ ಸಂಘಟನೆಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿಯೂ, ಮುದ್ರಣ ಕೆಲಸಗಾರರ ಸಂಘದ, ಮುನಿಸಿಪಲ್ ಕೆಲಸಗಾರರ ಸಂಘದ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿಯೂ ದುಡಿದರು. ಬಿ. ಶೀನ, ಬಿ.ಸಿ. ಶೇಖರ್, ಶಿವಾನಂದ ಕಾಮತ್, ಎಚ್. ಉಮನಾಥ ನಾಯಕ್, ಡಿ. ನಾರಾಯಣ, ಯು. ಭೋಜ ಕೋಟ್ಯಾನ್, ಸಂಜೀವ ಕಾವ, ಕೆ. ವೀರಪ್ಪ ಮೂಲ್ಯ, ಕೆ. ಈಶ್ವರ, ಬಿ. ಭಾಸ್ಕರ್, ಪಿ. ವಿಠಲ ಬಂಗೇರ, ಬಿ. ವಿಶ್ವನಾಥ ನಾಯ್ಕ್, ಯು. ರಾಮ ಬಂಗೇರ, ಪಿ. ಸಂಜೀವ, ಎಂ. ಶಿವಪ್ಪ ಕೋಟ್ಯಾನ್, ಎಸ್. ಚಂಪ್ಪ ಅಂಚನ್, ಜೆ. ಬಾಲಕೃಷ್ಣ ಶೆಟ್ಟಿ, ಬಾಬು ಭಂಡಾರಿ, ಬಿ.ಕೆ. ಕೃಷ್ಣಪ್ಪ, ಬಿ. ತನಿಯಪ್ಪ ಬಂಗೇರ ಮುಂತಾದ ಇನ್ನೂ ಅನೇಕ ಸಂಗಾತಿಗಳನ್ನು ಮೂರ್ತಿಯವರು ಒಡನಾಡಿಗಳಾಗಿಸಿ ವಿವಿಧ ಕಾರ್ಮಿಕ ಸಂಘಟನೆ ಹಾಗೂ ಪಕ್ಷದ ಚಳವಳಿಗಳಿಗೆ ಪ್ರೇರೇಪಿಸಿ ಅವರೂ ಜನ ನಾಯಕರಾಗಲು ಕಾರಣಕರ್ತರಾದರು.
ಎಐಟಿಯುಸಿಗೆ ಸೇರಿದ ಕಾರ್ಮಿಕ ಸಂಘಗಳ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಾಗೂ ತ್ರಿಪಕ್ಷೀಯ ಸಂಧಾನ ಸಮಿತಿಗಳ ಮುಂದೆ ಸಮರ್ಥವಾಗಿ ಕಾರ್ಮಿಕರ ಬೇಡಿಕೆಗಳ, ಹಕ್ಕುಗಳ ಸಲುವಾಗಿ ಖಟ್ಲೆ ನಡೆಸಿದರು. ಇದರಿಂದ ಕಾರ್ಮಿಕರು ಸವಲತ್ತುಗಳನ್ನು ಪಡೆದರು.
ಜಿಲ್ಲೆಯ ರೈತ ಸಂಘದ ಅಧ್ಯಕ್ಷರಾಗಿದ್ದ ಅವರು ರೈತರ ಚಳವಳಿಯಲ್ಲಿ ‘ಉಳುವವನೇ ಹೊಲದೊಡೆಯ’ ಎಂಬ ಘೋಷಣೆಯಡಿ ಭೂ ಹೋರಾಟದಡಿ ಸಕ್ರಿಯವಾಗಿ ಭಾಗವಹಿಸಿ ಗೇಣಿದಾರರಿಗೆ ಭೂಮಿಯನ್ನು ತೆಗೆಸಿಕೊಟ್ಟವರು. ರೈತ ಚಳವಳಿ ಉತ್ತುಂಗದಲ್ಲಿದ್ದಾಗ ಚಳವಳಿ ನಿರತರ ಬಳಿ ಬಂದ ಅಂದಿನ ಕಂದಾಯ ಸಚಿವರಾಗಿದ್ದ ಹುಚ್ಚೆ ಮಾಸ್ತಿಗೌಡರ ಮೂಲಕ ವಿಧಾನಸೌಧದಲ್ಲಿ ಭೂಮಸೂದೆಯನ್ನು ಜಾರಿಗೊಳಿಸುವಲ್ಲಿ ಪಿ.ಎಂ.
ನಾರಾಯಣಮೂರ್ತಿಯವರು ಪ್ರಧಾನ ಪಾತ್ರ ವಹಿಸಿದವರಲ್ಲಿ ಒಬ್ಬರು. 2000ದಲ್ಲಿ ಮಂಗಳೂರಿನಲ್ಲಿ ಜರುಗಿದ ಬೀಡಿ ಸಿಗಾರ್ ಮತ್ತು ತಂಬಾಕು ಕಾರ್ಮಿಕರ ಒಕ್ಕೂಟ (ಎಐಟಿಯುಸಿ)ದ 8ನೇ ರಾಷ್ಟ್ರೀಯ ಸಮ್ಮೇಳನದ ಸ್ವಾಗತ ಸಮಿತಿಯ ಉಪಾಧ್ಯಕ್ಷರಾಗಿ, ಸ್ಮರಣ ಸಂಚಿಕೆಯ ಸಂಚಾಲಕರಾಗಿಯೂ ಶ್ರಮಿಸಿ, ಸಮ್ಮೇಳನದ ಯಶಸ್ಸಿಗೆ ದುಡಿದರು. ಕೆಎಸ್‌ಆರ್‌ಟಿಸಿ ನೌಕರರ, ಮನೆ ಬಾಡಿಗೆದಾರರರ ಹಕ್ಕು ಬಾಧ್ಯತೆಗಳಿಗೆ ಹೋರಾಟ ನಡೆಸಿದ ಮೂರ್ತಿಯವರು ನ್ಯಾಯಾಲಯಗಳಲ್ಲಿ ಸ್ವತಃ ತಾವೇ ಭಾಗವಹಿಸಿ ನ್ಯಾಯ ದೊರಕಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
2017 ಡಿಸೆಂಬರ್ 24-27ರವರೆಗೆ ಮಂಗಳೂರಿನಲ್ಲಿ ನಡೆದ ಭಾರತ ಕಮ್ಯುನಿಸ್ಟ್ ಪಕ್ಷದ ದ.ಕ. ಮತ್ತು ಉಡುಪಿ ಜಿಲ್ಲಾ 23ನೇ ಸಮ್ಮೇಳನ ಅಂಗವಾಗಿ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಬಹಿರಂಗ ಸಭೆಯ ವೇದಿಕೆಗೆ ಮೂರ್ತಿಯವರ ಹೆಸರು ಇಡುವ ಮೂಲಕ ಅವರನ್ನು ಪಕ್ಷ ಗೌರವಿಸಿದೆ. ಅಲ್ಲದೆ ಬಂಟ್ವಾಳದಲ್ಲಿ ನಡೆಯುವ ಪಕ್ಷದ ಜಿಲ್ಲಾ 24ನೇ ಸಮ್ಮೇಳನದ ಲಾಂಛನದಲ್ಲೂ ಅವರ ಭಾವಚಿತ್ರವನ್ನು ಅಳವಡಿಸಿ ಅವರ ನೂರರ ನೆನಪನ್ನು ಅಚ್ಚಳಿಯದಂತೆ ಮುದ್ರಿಸಿದೆ.
ಮಂಗಳೂರು ನಗರ ಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಎಐಟಿಯುಸಿ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿಯೂ, ಪಕ್ಷದ ರಾಜ್ಯ ಮಂಡಳಿಯ ಸದಸ್ಯರಾಗಿಯೂ, ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ, ಉತ್ತಮ ಲೇಖಕರಾಗಿಯೂ, ಪ್ರಗತಿಪರ ಚಿಂತನೆಯುಳ್ಳವರಾಗಿದ್ದ ಮೂರ್ತಿಯವರು ದಿನಾಂಕ 11.7.2008ರಂದು ನಿಧನರಾದರು. ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿ 84 ವರ್ಷ ವಯಸ್ಸಾಗಿದ್ದ ಪತ್ನಿ ಸರಸ್ವತಮ್ಮ ಮತ್ತು ಪುತ್ರ, ಮೂವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಬಿಟ್ಟು ಅಗಲಿದರು.
ಮರಣ ಹೊಂದುವುದಕ್ಕಿಂತ ಸ್ವಲ್ಪ ಸಮಯದ ಹಿಂದೆ ಅವರು ತಮ್ಮ ಮೃತ ದೇಹವನ್ನು ಯಾವುದೇ ಧಾರ್ಮಿಕ ವಿಧಿಗಳಿಗೂ ಒಳಪಡಿಸದೆ ಕಸ್ತೂರ್ಬಾ ವೈದ್ಯಕೀಯ ಕಾಲೇಜಿಗೆ ದಾನ ಮಾಡಬೇಕೆಂದು ಕುಟುಂಬ ಸದಸ್ಯರ ಒಪ್ಪಿಗೆಯಿಂದ ಮರಣ ಶಾಸನವನ್ನು ಬರೆದಿಟ್ಟಿದ್ದರು. ಅದರಂತೆ ಅವರ ಪಾರ್ಥಿವ ಶರೀರವನ್ನು ಕಸ್ತೂರ್ಬಾ ವೈದ್ಯಕೀಯ ಕಾಲೇಜಿಗೆ ಒಪ್ಪಿಸಿದರು. ಮೂರ್ತಿಯವರ ಹೆಜ್ಜೆಯ ಜೊತೆ ಹೆಜ್ಜೆಯನಿಡುತ್ತ ಜೊತೆಯಾಗಿ ಒಡನಾಡಿದ ಮೂರ್ತಿಯವರ ಪತ್ನಿ ಸರಸ್ವತಮ್ಮನವರು ತಮ್ಮ 91ರ ಪ್ರಾಯದಲ್ಲಿ 2019ರಲ್ಲಿ ನಿಧನರಾದರು. ಅವರು ಕೂಡ ತನ್ನ ಪತಿಯ ಆದರ್ಶದಂತೆಯೇ ತನ್ನ ಮೃತದೇಹವನ್ನು ಕಸ್ತೂರ್ಬಾ ವೈದ್ಯಕೀಯ ಕಾಲೇಜಿಗೆ ದಾನ ಮಾಡಿದರು.