ಯಾರ ಕತ್ತಿ ಇರಿದರೂ ನೋವು
ಗಾಝಾದಲ್ಲಿ ಇಸ್ರೇಲ್ನ ಹತ್ಯಾಕಾಂಡ ಮುಂದುವರಿದಿದೆ. 22 ದಶಲಕ್ಷ ಫೆಲೆಸ್ತೀನಿಯರ ನೆಲೆಯ ಮೇಲಿನ ದಾಳಿಯಿಂದ ಆಹಾರ-ನೀರು ಹಾಗೂ ವೈದ್ಯಕೀಯ ಸೇವೆಗಳಿಲ್ಲದೆ ಮಕ್ಕಳು-ವಯಸ್ಕರು ನರಳುತ್ತಿದ್ದಾರೆ. ಗಾಝಾದ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಕ್ಕಳಿದ್ದು, ಮೃತಪಟ್ಟವರಲ್ಲಿ ಮಕ್ಕಳ ಪಾಲು ಅಧಿಕ. ಅಲ್ ಜಝೀರಾ ಸುದ್ದಿ ಸಂಸ್ಥೆ ಪ್ರಕಾರ, ದಾಳಿಯ ಮೊದಲ ಆರು ದಿನದಲ್ಲಿ 4,000 ಟನ್ ತೂಕದ 6,000 ಬಾಂಬ್ಗಳನ್ನು ಹಾಕಲಾಗಿದೆ. ಗಾಝಾದ ಎರಡು ದೊಡ್ಡ ಆಸ್ಪತ್ರೆಗಳಾದ ಅಲ್ ಶಿಫಾ ಮತ್ತು ಅಲ್ ಕುದ್ಸ್ ಮುಚ್ಚಿವೆ. ಭಾರತ ಅಳೆದುಸುರಿದು ವಿಶ್ವಸಂಸ್ಥೆಯ ಖಂಡನಾ ನಿರ್ಣಯವನ್ನು ಬೆಂಬಲಿಸಿದೆ. ಅಮೆರಿಕ, ಕೆನಡಾ, ಇಸ್ರೇಲ್ ಸೇರಿದಂತೆ 18 ದೇಶಗಳು ನಿರ್ಣಯದ ವಿರೋಧ ಮತ್ತು 145 ದೇಶಗಳು ಪರ ಮತ ಚಲಾಯಿಸಿವೆ. ಅಮೆರಿಕವು ಇಸ್ರೇಲನ್ನು ಬೆಂಬಲಿಸಲು ಮಿಲಿಟರಿ ಉದ್ಯಮವೇ ಕಾರಣ. ಅಮೆರಿಕ ಅದೇ ಹೊತ್ತಿನಲ್ಲಿ ಸ್ವಹಿತಾಸಕ್ತಿ ರಕ್ಷಣೆಗೆ ಇಸ್ರೇಲ್ನ ಔಷಧ ಕಂಪೆನಿಗೆ ಭಾರೀ ದಂಡ ವಿಧಿಸಿದೆ.
ನ್ಯೂಯಾರ್ಕ್ ಸ್ಟೇಟ್ನ ಅಟಾರ್ನಿ ಜನರಲ್ ಲೆಟಿಷಿಯಾ ಜೇಮ್ಸ್ ಅವರ 2 ನವೆಂಬರ್ 2022ರ ಹೇಳಿಕೆ ಮಾಧ್ಯಮದಲ್ಲಿ ಭಾರೀ ಸುದ್ದಿ ಮಾಡಿತು; ‘‘ತಮ್ಮ ಮಕ್ಕಳನ್ನು ಎದೆಗೊತ್ತಿಕೊಳ್ಳಲಾಗದ ಪೋಷಕರನ್ನು, ಸಂಕಷ್ಟಕ್ಕೆ ಸಿಲುಕಿದ ಸಮುದಾಯಗಳನ್ನು, ಕುಟುಂಬದ ಸದಸ್ಯರನ್ನು ಕಳೆದುಕೊಂಡು ಮುಂದೆ ಎಂದೆಂದೂ ಸಂಪೂರ್ಣಗೊಳ್ಳದ ಕುಟುಂಬಗಳ ಬಗ್ಗೆ ಚಿಂತಿತಳಾಗಿದ್ದೇನೆ’ ಎಂದವರು ಒಪಿಯ್ಡ್ಗಳ ಬಳಕೆಯಿಂದ ಸಂತ್ರಸ್ತರಾದ ಕುಟುಂಬಗಳ ಕುರಿತು ಹೇಳಿದ್ದರು.
ಏನಿದು ಒಪಿಯ್ಡ್?
ಅಮೆರಿಕದಲ್ಲಿ ಒಪಿಯ್ಡ್ಗಳಾದ ಮಾರ್ಫಿನ್, ಹೆರಾಯಿನ್, ಕೋಡೈನ್, ಆಕ್ಸಿಕೋಡೋನ್, ಹೈಡ್ರೋಕೋಡೋನ್, ಫೆಂಟಾನಿಲ್ ಹಾಗೂ ಆಕ್ಸೋಮಾರ್ಫೋನ್ಗಳ ವಿನಾಕಾರಣ ಬಳಕೆ, ಅತಿ ಬಳಕೆ ಮತ್ತು ದುರ್ಬಳಕೆಯಿಂದ ಸಾವು ಒಂದು ಗಂಭೀರ ಸಮಸ್ಯೆ. ಇದು ಬೇರೆ ದೇಶಗಳನ್ನೂ ಕಾಡುತ್ತಿದೆ. ಕ್ಯಾನ್ಸರ್ ರೋಗಿಗಳು ಮತ್ತು ತೀವ್ರ ನೋವಿನಿಂದ ಬಳಲುವವರು ಬಳಸುವ ಈ ಪ್ರಬಲ ನೋವುನಿವಾರಕಗಳನ್ನು ವೈದ್ಯರ ಚೀಟಿ ಇಲ್ಲದೆ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿ, ಬಳಸುವಿಕೆ ವ್ಯಾಪಕವಾಗಿದೆ. ಇವನ್ನು ಅಫೀಮು ಸಸ್ಯದಿಂದ ನೇರವಾಗಿ ಮತ್ತು ಕೆಲವನ್ನು ಪ್ರಯೋಗಾಲಯದಲ್ಲಿ ತಯಾರಿಸಲಾಗುತ್ತದೆ. ಆರಾಮದಾಯಕ ಹಾಗೂ ಉಲ್ಲಾಸಕರ ಮನಸ್ಥಿತಿಯನ್ನು ಮೂಡಿಸುವುದಲ್ಲದೆ, ಮಂಪರು, ಗೊಂದಲ, ನಾಸಿಯಾ, ಮಲಬದ್ಧತೆ ಮತ್ತು ಉಸಿರಾಟದ ನಿಧಾನಗೊಳ್ಳುವಿಕೆಗೆ ಕಾರಣವಾಗುವುದಿದೆ. ಮಿದುಳಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾಗಿ, ಕೋಮಾ, ಮಿದುಳಿಗೆ ಶಾಶ್ವತ ಹಾನಿ ಅಥವಾ ಸಾವಿಗೆ ಕಾರಣವಾಗಲೂಬಹುದು.
ಅಮೆರಿಕದಲ್ಲಿ ಒಪಿಯ್ಡ್ಗಳ ಬಳಕೆಯಿಂದ 21 ಲಕ್ಷ ಮಂದಿ ಅನಾರೋಗ್ಯಕ್ಕೀಡಾಗಿದ್ದು, 2019ರವರೆಗೆ 5 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ರೋಗ ನಿಯಂತ್ರಣ ಮತ್ತು ತಡೆ ಕೇಂದ್ರಗಳು ಹೇಳುತ್ತವೆ. 2022ರಲ್ಲಿ ಫೆಂಟಾನಿಲ್ ದುರ್ಬಳಕೆಯಿಂದ 1.09 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಔಷಧ ಕಂಪೆನಿಗಳು ಇವುಗಳ ಗೀಳು ಹಿಡಿಸುವ ಪ್ರವೃತ್ತಿ ಬಗ್ಗೆ ಸುಳ್ಳು ಮಾಹಿತಿ ನೀಡಿವೆ ಎಂದು 3,300ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದವು. ಇದನ್ನೆಲ್ಲ ಒಟ್ಟುಗೂಡಿಸಿ ಲೆಟಿಷಿಯಾ ಜೇಮ್ಸ್, ‘‘ಉತ್ಪಾದಕರು ಒಪಿಯ್ಡ್ ಗಳ ಸುರಕ್ಷತೆ, ಕ್ಷಮತೆ ಮತ್ತು ಅಪಾಯಗಳ ಬಗ್ಗೆ ನೀಡಿರುವ ಮಾಹಿತಿ ದಾರಿ ತಪ್ಪಿಸುವಂತಿದೆ. ಜೀವನದ ಗುಣಮಟ್ಟವನ್ನು, ಸಂಜ್ಞಾನಾತ್ಮಕ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸುತ್ತವೆ: ಈ ಔಷಧಗಳು ಚಟವಾಗಿ ಪರಿಣಮಿಸುವುದಿಲ್ಲ ಎಂದು ಕಂಪೆನಿಗಳು ಸುಳ್ಳು ಹೇಳಿವೆ ಮತ್ತು ಚಟ ಪ್ರವೃತ್ತಿಯ ಸೂಚನೆಗಳು ‘ನಿಜವಾದವಲ್ಲ’ ಎಂದು ಮುಚ್ಚಿಹಾಕಿವೆ. ಚಟಪೀಡಿತರನ್ನು ಗುಣಪಡಿಸಲು ಇನ್ನಷ್ಟು ಒಪಿಯ್ಡ್ಗಳ ಬಳಕೆಯನ್ನು ಪ್ರೋತ್ಸಾಹಿಸಿವೆ ಹಾಗೂ ಇನ್ನಿತರ ನೋವುನಿವಾರಕಗಳು ಒಪಿಯ್ಡ್ಗಳಿಗಿಂತ ಅಪಾಯಕರ ಎಂದು ಸುಳ್ಳುಹೇಳಿವೆ. ನ್ಯೂಯಾರ್ಕ್ನಲ್ಲಿ ಒಪಿಯ್ಡ್ ಮತ್ತು ಇಂಥ ನಿಯಂತ್ರಿತ ಉತ್ಪನ್ನಗಳ ಮಾರಾಟಕ್ಕೆ ಉತ್ಪಾದಕರು/ವಿತರಕರು ನಿಗದಿತ ನಿಯಂತ್ರಣಗಳನ್ನು ಅನುಸರಿಸುತ್ತಿರುವುದಾಗಿ ತಪ್ಪು ಮಾಹಿತಿ ನೀಡಿವೆ’’ ಎಂದು ಪ್ರಕರಣ ದಾಖಲಿಸಿದ್ದರು. ‘ವಂಚಿಸಿ ಮಾರಾಟ’ ಎನ್ನುವುದು ಪ್ರಮುಖ ಆರೋಪ. ಪರ್ಡ್ಯು ಫಾರ್ಮಾ, ಜಾನ್ಸನ್ ಆ್ಯಂಡ್ ಜಾನ್ಸನ್, ಅಲರ್ಗನ್ ಸೇರಿದಂತೆ ಆರು ಕಂಪೆನಿಗಳು ಹಾಗೂ ಅಸಂಖ್ಯಾತ ವಿತರಕರು 50 ಶತಕೋಟಿ ಡಾಲರ್ ಪರಿಹಾರ ಕೊಡಲು ಒಪ್ಪಿಕೊಂಡವು. ಆದರೆ, ಟೆಲ್ಅವೀವ್ ಮೂಲದ ತೇವಾ ಫಾರ್ಮಾಸ್ಯೂಟಿಕಲ್ಸ್ ಇಂಡಸ್ಟ್ರೀಸ್ನ ಅಂಗಸಂಸ್ಥೆಯಾದ ತೇವಾ ಫಾರ್ಮಾಸ್ಯೂಟಿಕಲ್ಸ್ ಯುಎಸ್ಎ, ಪರಿಹಾರ ನೀಡಲು ಸಮ್ಮತಿಸಲಿಲ್ಲ. ಅಮೆರಿಕದಲ್ಲಿ ಒಪಿಯ್ಡ್ನ ಉತ್ಪಾದನೆ/ವಿತರಣೆಯಲ್ಲಿ ಮಾತೃಸಂಸ್ಥೆಯ ಪಾಲು ಏನೂ ಇಲ್ಲ ಎಂದು ತಪ್ಪಿಸಿಕೊಳ್ಳಲು ಪ್ರಯತ್ನಿಸಿತು. ಸರಕಾರ ಈ ಔಷಧಗಳಿಗೆ ಆರೋಗ್ಯ ಕಾರ್ಯಕ್ರಮಗಳಡಿ ಅಪಾರ ಮೊತ್ತ ನೀಡಿತ್ತು.
ಲೆಟಿಷಿಯಾ ಜೇಮ್ಸ್ ಅವರ ಪ್ರಯತ್ನದಿಂದ ಜನವರಿ 2023ರಲ್ಲಿ ತೇವಾ 4.25 ಶತಕೋಟಿ ಡಾಲರ್ ಪರಿಹಾರ ನೀಡಲು ಸಮ್ಮತಿಸಿತು. ಜೊತೆಗೆ, ತಮ್ಮ ಕಾರ್ಯಾಚರಣೆ ವೆಚ್ಚ ಹೆಚ್ಚಲು ತೇವಾ ಕಾರಣ ಎಂದು ಪ್ರಕರಣ ದಾಖಲಿಸಿದ 500 ಆಸ್ಪತ್ರೆಗಳಿಗೆ ಸೆಪ್ಟಂಬರ್ 2023ರಲ್ಲಿ 126 ದಶಲಕ್ಷ ಡಾಲರ್ ಪರಿಹಾರ ನೀಡಿತು. ‘ಅಮೆರಿಕನ್ನರ ಸಾವು ಹಾಗೂ ನಾಶಕ್ಕೆ ಒಪಿಯ್ಡ್ ಉತ್ಪಾದಕ ಕಾರಣರಾಗಿದ್ದಾರೆ’ ಎಂದು ನ್ಯಾಯಮೂರ್ತಿ ಹೇಳಿದರು. ಆದರೆ, ಇಸ್ರೇಲ್ನ್ನು ಬೆಂಬಲಿಸುತ್ತಿರುವ ಅಮೆರಿಕ, ಫೆಲೆಸ್ತೀನಿಯರ ಸಾವು-ವಿನಾಶದ ನೈತಿಕ ಹೊಣೆ ಹೊರುವುದೇ? ಅಕ್ಟೋಬರ್ 6ರಿಂದ ಗಾಝಾದಲ್ಲಿ 1,030 ಮಕ್ಕಳು ಮೃತಪಟ್ಟಿದ್ದಾರೆ ಎಂದು ಡಿಫೆನ್ಸ್ ಫಾರ್ ಚಿಲ್ಡ್ರನ್ ಸಂಸ್ಥೆ ಅಕ್ಟೋಬರ್ 16ರಂದು ಹೇಳಿತ್ತು; ಅಂದರೆ, 15 ನಿಮಿಷಕ್ಕೆ ಒಂದು ಮಗು. ಜಗತ್ತಿನ ದೊಡ್ಡಣ್ಣನಂತೆ ವರ್ತಿಸುವ ಅಮೆರಿಕ ಈ ಹತ್ಯಾಕಾಂಡಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ? ಇಸ್ರೇಲ್ ಪರವಾಗಿ ಮತ ಚಲಾವಣೆ ಮಾಡುವ ಮೂಲಕ! ಅದೇ ಹೊತ್ತಿನಲ್ಲಿ ತನ್ನ ದೇಶೀಯರ ಆರೋಗ್ಯ ರಕ್ಷಣೆಗೆ ಇಸ್ರೇಲಿನ ಕಂಪೆನಿಗೆ ಭಾರೀ ದಂಡ ವಿಧಿಸುತ್ತದೆ. ಇಂಥ ದ್ವಂದ್ವಕ್ಕೆ ಏನು ಹೇಳುವುದು?
ಔಷಧಗಳ ಬೆಲೆ ನಿಯಂತ್ರಣ
ಅಮೆರಿಕದ ಸರಕಾರ ‘ಅಮೆರಿಕನ್ ವೇ ಆಫ್ ಲೈಫ್’ನ್ನು ಉಳಿಸಿಕೊಳ್ಳಲು ಅಗತ್ಯವಿರುವುದನ್ನೆಲ್ಲ ಮಾಡುತ್ತದೆ. ತೈಲ-ಮೋಟಾರ್-ಔಷಧ ತಯಾರಿಕೆ ಮತ್ತಿತರ ಉದ್ಯಮಗಳು ಅಧ್ಯಕ್ಷರ ಚುನಾವಣೆಯಲ್ಲಿ ಪ್ರಚಾರಕ್ಕೆ ಆರ್ಥಿಕ ನೆರವು ನೀಡುವುದು ಸರ್ವೇಸಾಮಾನ್ಯ. ಔಷಧ ಉತ್ಪಾದಕರ ಲಾಬಿ ಬಹಳ ಪ್ರಬಲವಾಗಿದ್ದು, ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಗಳಿಗೆ ಹಣಕಾಸು ನೆರವು ನೀಡುತ್ತವೆ. ಹಿಲರಿ ಕ್ಲಿಂಟನ್ ಸ್ಪರ್ಧಿಸಿದ್ದಾಗ, ಅವರಿಗೆ ಉದ್ಯಮ ನೆರವು ನೀಡಿತ್ತು.
ಪೇಟೆಂಟ್ಗಳ ಮೂಲಕ ಜಗತ್ತಿನ ಔಷಧ ಉದ್ಯಮದ ಮೇಲೆ ಅಮೆರಿಕ ಯಜಮಾನಿಕೆ ಸ್ಥಾಪಿಸಿದೆ. ಆದರೆ, ಅಮೆರಿಕದಲ್ಲಿ ವೈದ್ಯಕೀಯ ಮತ್ತು ಔಷಧ ವೆಚ್ಚ ಜಗತ್ತಿನಲ್ಲೇ ಅತಿ ಹೆಚ್ಚು. 2022ರಲ್ಲಿ ಸರಕಾರ ಹಣದುಬ್ಬರ ಕಡಿಮೆಗೊಳಿಸುವ ಕಾಯ್ದೆ(ಐಆರ್ಎ)ಯಡಿ ಪ್ರಿಸ್ಕ್ರಿಪ್ಷನ್ ಔಷಧಗಳನ್ನು ಬೆಲೆ ನಿಯಂತ್ರಣದಡಿ ತಂದಿತು. ಕ್ಯಾನ್ಸರ್, ಮಧುಮೇಹ, ಹೃದಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಕ್ರಾಹ್ನ್ಸ್ ಕಾಯಿಲೆ ಇತ್ಯಾದಿಗೆ ನೀಡುವ 10 ಔಷಧಗಳನ್ನು ಪಟ್ಟಿಗೆ ಸೇರ್ಪಡೆಗೊಳಿಸಿತು. ಕಾಯ್ದೆಯನ್ನು 2022ರಲ್ಲಿ ಕಾಂಗ್ರೆಸ್ ಅಂಗೀಕರಿಸಿತು. ಮೆಡಿಕೇರ್ ಕಾರ್ಯಕ್ರಮದಡಿ ನೀಡುವ ದುಬಾರಿ ಔಷಧಗಳಿಗೆ ಈ ನಿಯಂತ್ರಣ ಅನ್ವಯವಾಗುತ್ತದೆ; ಖಾಸಗಿ ವಿಮೆ ಇಲ್ಲವೇ ನಗದು ನೀಡಿ ಔಷಧ ಖರೀದಿಸುವವರಿಗೆ ಅನ್ವಯಿಸುವುದಿಲ್ಲ. ಔಷಧಗಳ ಬೆಲೆಯನ್ನು ಹಣ ದುಬ್ಬರದ ಪ್ರಮಾಣಕ್ಕಿಂತ ಕಡಿಮೆಗೊಳಿಸುವುದು ಐಆರ್ಎ ಗುರಿ. ಎರಡನೆಯದು, ದರ ಸಂಧಾನದ ಮೂಲಕ ಮೆಡಿಕೇರ್ನ ಔಷಧ ಬೆಲೆ ಕಾರ್ಯನೀತಿಯ ಸುಧಾರಣೆ. ಕಾಂಗ್ರೆಸ್ನ ಆಯವ್ಯಯ ಕಚೇರಿ ಲೆಕ್ಕಾಚಾರದ ಪ್ರಕಾರ, ಇದರಿಂದ 10 ವರ್ಷಗಳಲ್ಲಿ 287 ಶತಕೋಟಿ ಡಾಲರ್ ಉಳಿತಾಯ ಆಗಲಿದೆ. ಐಆರ್ಎಯನ್ನು ಡೆಮಾಕ್ರಟ್ ಸದಸ್ಯರು ಬೆಂಬಲಿಸಿದರೆ, ಒಬ್ಬನೇ ಒಬ್ಬ ರಿಪಬ್ಲಿಕನ್ ಸದಸ್ಯನೂ ಬೆಂಬಲಿಸಲಿಲ್ಲ. ಆಗಸ್ಟ್ 2022ರಲ್ಲಿ ಅಧ್ಯಕ್ಷ ಜೋ ಬೈಡನ್ ಕಾನೂನಿಗೆ ಸಹಿ ಹಾಕಿದ್ದು, ‘ನಮ್ಮ ಆರ್ಥಿಕ ನೀತಿಯ ಮೈಲುಗಲ್ಲು’ ಎಂದು ಬಣ್ಣಿಸಿದರು. 10 ಔಷಧಗಳ ಬೆಲೆ ಸಂಧಾನ ಪಟ್ಟಿಯನ್ನು ಬಿಡುಗಡೆಗೊಳಿಸಿದ ಶ್ವೇತ ಭವನ, ಇದೊಂದು ಚಾರಿತ್ರಿಕ ಘಟನೆ ಎಂದು ಹೇಳಿಕೊಂಡಿತು.
1963ರಲ್ಲಿ ಅಧ್ಯಕ್ಷ ಜಾನ್ ಎಫ್.ಕೆನಡಿ, ಸರಕಾರದಿಂದ ನೆರವು ಪಡೆದ ಅನ್ವೇಷಣೆಗಳಿಗೆ ಪೇಟೆಂಟ್ ಪಡೆಯುವುದನ್ನು ನಿರ್ಬಂಧಿಸಿದ್ದರು. ಇದೊಂದು ದಾರ್ಶನಿಕ ನಡೆಯಾಗಿತ್ತು. ‘‘ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಸರಕಾರದ ನೆರವಿನ ಸಂಶೋಧನೆ ಮತ್ತು ಅನ್ವೇಷಣೆಗಳನ್ನು ಹಂಚಿಕೊಳ್ಳಬೇಕು. ದೇಶದ ಅಂತರ್ರಾಷ್ಟ್ರೀಯ ಕಾರ್ಯಕ್ರಮಗಳು ಹಾಗೂ ವಿದೇಶಾಂಗ ಕಾರ್ಯನೀತಿಗೆ ಅನುಗುಣವಾಗಿ ವಿದೇಶಗಳೊಂದಿಗೆ ಜ್ಞಾನದ ಹಂಚಿಕೆಯಲ್ಲಿ ದೇಶದ ಹಿತ ಅಡಗಿದೆ’’ ಎಂದವರು ಹೇಳಿದ್ದರು. ಆನಂತರ ಬಂದವರು ಪೇಟೆಂಟ್ ಮತ್ತು ಬೌದ್ಧಿಕ ಆಸ್ತಿ ಹಕ್ಕು(ಐಪಿಆರ್)ಗಳನ್ನು ಅಭಿವೃದ್ಧಿಶೀಲ ದೇಶಗಳನ್ನು ಹಣಿಯಲು ಹತಾರವನ್ನಾಗಿಸಿಕೊಂಡರು ಎನ್ನುವುದು ಇತಿಹಾಸದ ವ್ಯಂಗ್ಯ.
ಜಾನ್ಸನ್ ಆ್ಯಂಡ್ ಜಾನ್ಸನ್, ನೊವಾರ್ಟಿಸ್, ಮರ್ಕ್, ಬ್ರಿಸ್ಟಲ್ ಮೈರ್ ಸ್ಕ್ವಿಬ್ ಮತ್ತು ಎಲಿಲಿಲಿ ಮತ್ತಿತರ ಕಂಪೆನಿಗಳು ಪೇಟೆಂಟ್ಗಳಿಂದಾಗಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸುತ್ತವೆ. ಒಂದೇ ಉತ್ಪನ್ನದ ಮೇಲೆ ಹಲವು ಪೇಟೆಂಟ್ ಪಡೆದುಕೊಳ್ಳುತ್ತವೆ. ಸರಣಿಯೋಪಾದಿಯಲ್ಲಿ ದಾವೆ ದಾಖಲಿಸುವ ಮೂಲಕ ಪ್ರತಿಸ್ಪರ್ಧಿಗಳನ್ನು ಹೈರಾಣು ಮಾಡುತ್ತವೆ. ಉದಾಹರಣೆಗೆ, ಎಬಿಬಿವಿಐಇ ಕಂಪೆನಿ ಉರಿಯೂತ ಮತ್ತು ಸಂಧಿವಾತ ಔಷಧ ಹುಮಿರಾಕ್ಕೆ 312 ಪೇಟೆಂಟ್ಗೆ ಅರ್ಜಿ ಸಲ್ಲಿಸಿ, 166 ಪೇಟೆಂಟ್ ಪಡೆದುಕೊಂಡಿದೆ. 2002ರಲ್ಲಿ ಪೇಟೆಂಟ್ ಪಡೆದ ಬಳಿಕ 208 ಶತಕೋಟಿ ಡಾಲರ್ ಆದಾಯ ಗಳಿಸಿದೆ. ಸಮಸ್ಯೆ ಏನೆಂದರೆ, ಈ ಆದಾಯದ 2/3 ಭಾಗ ಔಷಧದ ಪ್ರಾಥಮಿಕ ಪೇಟೆಂಟ್ 2016ರಲ್ಲಿ ಅಂತ್ಯಗೊಂಡ ಬಳಿಕ ಬಂದಿದೆ. ಪ್ರತಿಸ್ಪರ್ಧಿಗಳ ಮೇಲೆ ಸರಣಿಯೋಪಾದಿಯಲ್ಲಿ ದಾವೆ ಹೂಡಿ, 2023ರವರೆಗೆ ಔಷಧಕ್ಕೆ ಪರ್ಯಾಯವೇ ಇಲ್ಲದಂತೆ ನೋಡಿಕೊಂಡಿತ್ತು. ಆನಂತರ ಫೆಬ್ರವರಿ 2023ರಲ್ಲಿ ಹುಮಿರಾದ ಮೊದಲ ಪ್ರತಿಸ್ಪರ್ಧಿ ಮಾರುಕಟ್ಟೆಗೆ ಬಂದಿತು.
ಔಷಧ ಕಂಪೆನಿಗಳು ಯಾರ ಅಂಕೆಯೂ ಇಲ್ಲದೆ, ಅಮೆರಿಕದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹಾಗೂ ರೋಗಿಗಳಿಂದ ಹಣ ಸುಲಿಯುತ್ತಿವೆ. ಉದಾಹರಣೆಗೆ, ಎಬಿಬಿವಿಐಇ ಮತ್ತು ಜಾನ್ಸನ್-ಜಾನ್ಸನ್ ಜಂಟಿಯಾಗಿ ಮಾರುಕಟ್ಟೆ ಮಾಡುತ್ತಿರುವ ರಕ್ತದ ಕ್ಯಾನ್ಸರ್ ಔಷಧಿ ಇಂಬ್ರೂವಿಕ್ ಒಂದು ಮಾತ್ರೆ ಬೆಲೆ 484 ಡಾಲರ್(ಅಂದಾಜು 38,000 ರೂ.). ಇದನ್ನು ಪ್ರತಿದಿನ ತೆಗೆದು ಕೊಳ್ಳಬೇಕಾಗುತ್ತದೆ. ಅದೇ ರೀತಿ ಕ್ರಾಹ್ನ್ಸ್ ಕಾಯಿಲೆಗೆ ಬಳಸುವ ಜಾನ್ಸನ್-ಜಾನ್ಸನ್ ಔಷಧ ಸ್ಟೆಲಾರಾ, 0.5 ಮಿ.ಲೀ. ಇಂಜೆಕ್ಷನ್ಗೆ 13,971 ಡಾಲರ್ ಇದೆ(ಅಂದಾಜು 11 ಲಕ್ಷ ರೂ)! ಈ ಔಷಧಗಳಿಗೆ ಪರ್ಯಾಯವಿಲ್ಲದ್ದರಿಂದ, ಉತ್ಪಾದಕರಿಗೆ ಅಪಾರ ಲಾಭ ತಂದುಕೊಡುತ್ತವೆ. ಔಷಧಗಳ ಬೆಲೆಯನ್ನು ಯಾವುದೇ ತರ್ಕವಿಲ್ಲದೆ ಮನಬಂದಂತೆ ನಿರ್ಧರಿಸಲಾಗುತ್ತದೆ.
ಅಮೆರಿಕ ಸರಕಾರದ ಮೆಡಿಕೇರ್ ವೆಚ್ಚದಲ್ಲಿ ಜೂನ್ 2022ರಿಂದ ಮೇ 2023ರವರೆಗೆ 45 ಶತಕೋಟಿ ಡಾಲರ್ಗಳನ್ನು ಔಷಧಗಳಿಗೆ ವ್ಯಯಿಸಲಾಗಿದೆ. 2022ರಲ್ಲಿ ವಿಮೆ ಇಲ್ಲದ ಹಿರಿಯ ನಾಗರಿಕರು ತಮ್ಮ ಕಿಸೆಯಿಂದ ತೆತ್ತ ಮೊತ್ತ 3.4 ಶತಕೋಟಿ ಡಾಲರ್. ಲಾಭದ ಉದ್ದೇಶವಿಲ್ಲದ ಸಂಸ್ಥೆ ‘ಐ ಮ್ಯಾಕ್’ನ 2022ರ ವರದಿ ‘ಓವರ್ ಪೇಟೆಂಟೆಡ್, ಓವರ್ಟೈಸ್ಡ್’, ಅತಿ ಹೆಚ್ಚು ಮಾರಾಟವಾಗುವ ಹತ್ತು ಔಷಧಗಳ ಪೇಟೆಂಟನ್ನು ವಿಸ್ತರಿಸಲು ಕಂಪೆನಿಗಳು ಏನೆಲ್ಲ ಆಟ ಆಡಲಾಗುತ್ತದೆ ಎನ್ನುವುದನ್ನು ವಿವರಿಸಿದೆ. ಈ ಹತ್ತು ಔಷಧಗಳ 744 ಪೇಟೆಂಟ್ಗಳಿವೆ! ಇವನ್ನು ಪ್ರತಿಸ್ಪರ್ಧಿಗಳನ್ನು ಮಟ್ಟ ಹಾಕಲು ಬಳಸಿಕೊಳ್ಳಲಾಗುತ್ತಿದೆ. ಅಂದುಕೊಂಡಂತೆ, ಔಷಧ ಕಂಪೆನಿಗಳು ಐಆರ್ಎ ವಿರುದ್ಧ 8 ಪ್ರಕರಣ ದಾಖಲಿಸಿವೆ ಮತ್ತು 2022ರಲ್ಲಿ ಕಾನೂನಿನ ಪ್ರಗತಿಯನ್ನು ತಡೆಯಲು 400 ದಶಲಕ್ಷ ಡಾಲರ್ ವೆಚ್ಚ ಮಾಡಿವೆ. ವೈಯಕ್ತಿಕ ಸ್ವಾತಂತ್ರ್ಯವನ್ನು ಖಾತ್ರಿಪಡಿಸುವ ಪ್ರಥಮ, ಐದನೆಯ ಮತ್ತು 8ನೇ ತಿದ್ದುಪಡಿಯ ಉಲ್ಲಂಘನೆ ಆಗುತ್ತಿದೆ ಎಂದು ದೂರಿವೆ. ಅಮೆರಿಕ ವಾಣಿಜ್ಯ ಚೇಂಬರ್ ಕೂಡ ‘‘ದರ ನಿಯಂತ್ರಣದಿಂದ ಸಂವಿಧಾನ ಕೊಡಮಾಡಿದ ಮುಕ್ತ ವ್ಯಾಪಾರದ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತದೆ’’ ಎಂದು ಊಳಿಡುತ್ತಿದೆ. ಅಮೆರಿಕ ಮತ್ತು ಜಗತ್ತಿನೆಲ್ಲೆಡೆಯ ಕೋಟ್ಯಂತರ ಜನರು ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದಾರೆ. ಬೈಡನ್ ಜನಪ್ರಿಯತೆ ಕುಸಿದಿದ್ದು, ಮರುಆಯ್ಕೆ ಅನುಮಾನಾಸ್ಪದ. ದೇಶ ಆರ್ಥಿಕ ಸಂಕಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಐಆರ್ಎಗೆ ಅಧ್ಯಕ್ಷರು ಸಹಿ ಹಾಕಿರಬಹುದು. ಆದರೆ, ಔಷಧ ಕಂಪೆನಿಗಳು ಮತ್ತು ಲಾಬಿದಾರರ ಜಾಲದಿಂದ ಕಾಯ್ದೆ ಬಿಡಿಸಿಕೊಳ್ಳುವುದೇ?
ಭಾರತದಲ್ಲೂ ಒಪಿಯ್ಡ್
ದಿಲ್ಲಿಯ ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆಯ ರಾಷ್ಟ್ರೀಯ ಔಷಧ ಅವಲಂಬನೆ ಉಪಚಾರ ಕೇಂದ್ರ(ಎನ್ಡಿಡಿಟಿಸಿ)ದ ಪ್ರಕಾರ, ಶೇ. 11-15ರಷ್ಟು ರೋಗಿಗಳು ಒಪಿಯ್ಡ್ ಗೀಳಿಗೆ ಬಿದ್ದಿದ್ದಾರೆ. ಪರಿಸ್ಥಿತಿ ಅಮೆರಿಕದಷ್ಟು ಗಂಭೀರವಾಗಿಲ್ಲ. 2019ರ ರಾಷ್ಟ್ರೀಯ ಸಮೀಕ್ಷೆ ಪ್ರಕಾರ, ಮದ್ಯ ಮತ್ತು ಬಂಗಿ ನಂತರದ ಸ್ಥಾನ ಒಪಿಯ್ಡ್ಗಳದ್ದು; ಹೆರಾಯ್ನ್ ಬಳಕೆದಾರರು ಹೆಚ್ಚು. ಪಂಜಾಬ್ ಮತ್ತು ಈಶಾನ್ಯ ರಾಜ್ಯಗಳಲ್ಲಿ ಒಪಿಯ್ಡ್ಗಳ ಬಳಕೆ ಹೆಚ್ಚುತ್ತಿದೆ. ಅನುಬಂಧ ಎಚ್, ಎಚ್ 1 ಹಾಗೂ ಎಕ್ಸ್ನಲ್ಲಿರುವ ಔಷಧಗಳನ್ನು ವೈದ್ಯರ ಚೀಟಿ ಇಲ್ಲದೆ ಮಾರುವಂತಿಲ್ಲ. ಆದರೆ, ಎಚ್1 ಗುಂಪಿನ ಬುಪ್ರಿನಾರ್ಫಿನ್ ಹಾಗೂ ಪೆಂಟಾರೆಕೈನ್ಗಳು ಔಷಧ ಅಂಗಡಿಗಳಲ್ಲಿ ಸುಲಭವಾಗಿ ಸಿಗುತ್ತವೆ. ಭಾರತ ನೋವು ನಿವಾರಕ ಟ್ರಾಮಡೋಲ್ನ ಪ್ರಮುಖ ಪೂರೈಕೆದಾರನಾಗಿದ್ದು, ಅದರ ಬಳಕೆ ಹೆಚ್ಚುತ್ತಿದೆ. ಒಪಿಯ್ಡ್ಗಳನ್ನು ಮನರಂಜನೆಗಾಗಿ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸುವವರ ಸಂಖ್ಯೆ ಹೆಚ್ಚುತ್ತಿದೆ. ಹೆಚ್ಚು ಹಾನಿಕರವಾದ ಹೆರಾಯ್ನ್ ಬಳಕೆ ಹೆಚ್ಚಿದ್ದು, ಬಳಕೆದಾರರಲ್ಲಿ ಹೆಚ್ಚಿನವರು ಗೀಳಿಗೆ ಬೀಳುತ್ತಿದ್ದಾರೆ.
ಮೂಲಪ್ರಶ್ನೆಗೆ ಬರೋಣ: ಗಾಝಾದಲ್ಲಿ ಮಕ್ಕಳ ಸಾವಿಗೆ ನೆತನ್ಯಾಹು ಹಾಗೂ ಇಸ್ರೇಲಿಯನ್ನರೊಟ್ಟಿಗೆ ಜಾಗತಿಕ ಮಾರುಕಟ್ಟೆ, ನವ ಆರ್ಥಿಕ ನೀತಿಗಳು, ಬೌದ್ಧಿಕ ಆಸ್ತಿ ಹಕ್ಕು ಎಂಬ ಚಿಂತನೆ, ಔಷಧ-ಮಿಲಿಟರಿ-ರಾಜಕಾರಣದ ಸಂಯೋಗವೂ ಕಾರಣ. ಇದರಲ್ಲಿ ಬಲಿಪಶುಗಳು ಬದಲಾಗುತ್ತಿರುತ್ತಾರೆ; ಗಾಝಾದ ಮಕ್ಕಳಂತೆ. ಆದರೆ, ಸೂತ್ರಧಾರಿಗಳು ಬದಲಾಗುವುದಿಲ್ಲ.