ಪರಿಪೂರ್ಣ ಸಾವಯವ ಎಂಬುದೊಂದು ಇದೆಯೇ?

ನಾವು ಮನೆಯಲ್ಲಿ ಉಣ್ಣಲು ಬೇಯಿಸುವ ಅನ್ನದ ಪಾತ್ರೆಯಿಂದ ಹಿಡಿದು ಕುಡಿಯುವ ಚಹಾದಲ್ಲಿರುವ ರಾಸಾಯನಿಕದವರೆಗೆ ನಮ್ಮ ಮನೆಯಲ್ಲಿ ಬಹುರೂಪಿ ವಿಷಗಳು ದೇಹದೊಳಗೆ ಪ್ರವೇಶಿಸುವ ಕಾಲಘಟ್ಟದಲ್ಲಿ ವಿಷರಹಿತ ಶುದ್ಧ ಆಹಾರ ಎಂಬುದೊಂದು ಉಳಿದಿದೆಯೇ ಎನ್ನುವುದು ಪ್ರಶ್ನೆ. ಹರಿಯುವ ನೀರು, ಚಲಿಸುವ ಗಾಳಿಯಲ್ಲೂ ಎಲ್ಲೆಂದರಲ್ಲಿ ವಿಷ ಚಲಿಸುವಾಗ ಮನುಷ್ಯ ಕೇಂದ್ರಿತ ಈ ಭೂಮಿ ಮೇಲೆ ಪ್ರತ್ಯೇಕ ದ್ವೀಪ ಒಂದನ್ನು ಸೃಷ್ಟಿಸಿಕೊಂಡು ಸಾವಯವ ಬದುಕನ್ನು ಸಾಧಿಸುವುದು ತುಂಬಾ ಕಷ್ಟ.
ಪರಿಪೂರ್ಣ ಸಾವಯವ ಎಂಬ ಫಲಕ ಹೊತ್ತಿರುವ, ತಾವು ಮಾರುವುದೆಲ್ಲ ವಿಷರಹಿತ, ಪರಿಶುದ್ಧ ಆಹಾರ ಎಂದು ನಂಬಿಸುತ್ತಿದ್ದ ವ್ಯಾಪಾರಿ ಮಳಿಗೆಯೊಂದಕ್ಕೆ ಇತ್ತೀಚೆಗೆ ಭೇಟಿ ಕೊಟ್ಟಿದ್ದೆ. ಅಲ್ಲಿ ಬೇರೆ ಬೇರೆ ಪ್ರಮಾಣದ ಜೇನುಬಾಟಲಿಯ ಮೇಲೆ ಹಂಡ್ರೆಡ್ ಪರ್ಸೆಂಟ್ ಸಾವಯವ ಎಂದು ಚೀಟಿ ಅಂಟಿಸಿದ್ದರು. 200ಗ್ರಾಂ ಜೇನಿನ ಮೇಲೆ ಅಷ್ಟೇ ಬೆಲೆ ನಮೂದಿಸಿ ಆಕರ್ಷಕ ಹೆಸರು ಕೊಟ್ಟಿದ್ದರು. ಅಜ್ಞಾತ ನಿಬಿಡ ಕಾಡೊಳಗಡೆ ನುಸುಳಿ ಸಿಹಿ ಹೀರಿ ಜೇನು ನೊಣಗಳು ಸಂಗ್ರಹಿಸಿದ ತುಪ್ಪಕ್ಕೆ ಪೂರ್ಣ ಸಾವಯವ ಎಂದು ಹೆಸರು ಕೊಟ್ಟದ್ದು ಮಾತ್ರ ಮನುಷ್ಯ! ಆ ಅಂಗಡಿಯ ಮಾಲಕ.
ತಾವು ಎಲ್ಲಿಂದ, ಹೇಗೆ, ಏನನ್ನು ಮುಟ್ಟಿ, ತಡವಿ, ಹೀರಿ ಸಂಗ್ರಹಿಸಿದ್ದೇವೆ, ಅದರಲ್ಲಿ ತಾಜಾ ಎಷ್ಟು? ವಿಷ, ಕಲ್ಮಶ, ಕೊಳೆ ಎಷ್ಟು ಅನ್ನುವ ಲೆಕ್ಕವನ್ನು ಯಾವ ಜೇನು ಕೂಡ ಬರೆದಿಟ್ಟುಕೊಂಡಿಲ್ಲ. ನಮ್ಮದಿದು ಬರೀ ಸಾವಯವ, ಕಲಬೆರಕೆಯಲ್ಲದ ಪರಿಶುದ್ಧ ತುಪ್ಪ ಎಂದು ಯಾವ ಜೇನು ಹುಳವೂ ಬೋರ್ಡ್ ಹಾಕಿಕೊಂಡಿಲ್ಲ. ಮನುಷ್ಯನ ಲೆಕ್ಕಾಚಾರದ ಪ್ರಕಾರ ಜೇನುಹುಳಗಳು ಸಂಗ್ರಹಿಸುವ ತುಪ್ಪವೆಲ್ಲ ವಿಷರಹಿತವೇ. ಇರಬಹುದು, ಯಾವ ಜೇನು ಇವತ್ತು ಮಳಿಗೆಗಳಲ್ಲಿ ಆಕರ್ಷಕ ಹೆಸರಿನಿಂದ ಮಾರಾಟವಾಗುತ್ತದೋ ಭಾಗಶಃ ಅವು ಯಾವುವು ಕೂಡ ಮನುಷ್ಯ ಓಡಾಡದ ಸಹಜ ದುರ್ಗಮ ಕಾಡು ಒಳಗಡೆ ಹುಟ್ಟಿದ್ದಲ್ಲ. ಅಂತಹ ದುರ್ಗಮ ಅಡವಿಯೊಳಗಡೆಯಿಂದ ಕಾಡುವಾಸಿ ಬುಡಕಟ್ಟು ಜನಾಂಗದವರು ಸಂಗ್ರಹಿಸಿ ತಂದುಕೊಟ್ಟರೆ ಅಂತಹ ಜೇನು ಕೆಟ್ಟದೆಂಬ ಭಾವ ಅದೇ ಅಂಗಡಿ ಮಾಲಕನದ್ದು. ಅವುಗಳನ್ನು ಬರಿಗೈಯಲ್ಲಿ ಹಿಂಡಿ ತರುತ್ತಾರೆ ಎಂಬ ಆರೋಪ ಬೇರೆ. ಅದೊಂದೇ ಕಾರಣಕ್ಕಾಗಿ ಯಾವ ಕಲ್ಮಶವೂ ಇಲ್ಲದ ಶುದ್ಧ ಜೇನು ಹಾಳು ಎನ್ನುವ ಭ್ರಮೆ ನಮ್ಮಲ್ಲಿದೆ.
ಈಗ ಎಲ್ಲವೂ ಹಾಗೆಯೇ. ನಮ್ಮ ಎದುರುಗಡೆ ಎಷ್ಟು ಸೊಗಸಾಗಿ ಅದನ್ನು ಪೇರಿಸಿಟ್ಟಿದ್ದಾರೆ, ಅವುಗಳ ಬಣ್ಣ, ರೂಪ, ಹೆಸರು, ಲಾಂಛನ, ಹೊದಿಕೆಯ ರಟ್ಟು ಇವೆಲ್ಲವೂ ಕೂಡ ವಸ್ತುಗಳ ಗುಣಮಟ್ಟವನ್ನು ನಿರ್ಧರಿಸುವ ಕಾಲದಲ್ಲಿ ಈಗ ನಾವಿದ್ದೇವೆ. ಕೇಸರಿಬಾತು ಕೇಸರಿಯಾಗಿರಬೇಕು, ಮುಸುಂಬಿ ಹಳದಿ, ಸೇಬು ಕೆಂಪು, ಬೆಲ್ಲ ಬಿಳಿ ಆಗಿರಬೇಕು, ಜಿಲೇಬಿ ಗರಿಗರಿಯಾಗಿರಬೇಕು, ತುಪ್ಪ ಹರಳುಗಟ್ಟಿರಬೇಕು ಇವೆಲ್ಲವೂ ಇವತ್ತು ನಾವು ತಿನ್ನುವ ವಸ್ತುಗಳ ಗುಣಾಂಶಗಳೆಂದೇ ಪರಿಗಣಿಸಲ್ಪಟ್ಟಿವೆ. ಈ ಕಾರಣಕ್ಕಾಗಿ ಸಾವಯವದ ಅಂಗಡಿಗಳು ಕೂಡ ದಿನದಿಂದ ದಿನಕ್ಕೆ ಆಕರ್ಷಕ ರೂಪವನ್ನು ಪಡೆಯುತ್ತಿವೆ. ತರಕಾರಿ ತುಂಬಲು ಕಾಡುಬೂರಿನ, ಬಿದಿರಿನ ಬುಟ್ಟಿ ಹೋಗಿ ಪ್ಲಾಸ್ಟಿಕ್ ಕವಚಗಳು ಬಂದಿವೆ. ಶೀತಲಗುಂಡಿಗಳು ಹುಟ್ಟಿಕೊಂಡಿವೆ. ಆಕರ್ಷಿಕ ಜಾರುಗಳು ಬಣ್ಣದ ಕವಚಗಳು ಸೃಷ್ಟಿಯಾಗಿವೆ.
ಜೇನನ್ನು ಬಿಟ್ಟುಬಿಡಿ ಆ ಅಂಗಡಿಯಲ್ಲಿರುವ ಇನ್ನುಳಿದಿರುವ ಸೊಪ್ಪು ತರಕಾರಿ, ಗೆಡ್ಡೆ ಗೆಣಸು ಇವೆಲ್ಲ ಮನುಷ್ಯ ಬೆಳೆಸಿದ್ದೇ. ಶುದ್ಧ ದನದ ತುಪ್ಪ, ಮೊಸರು, ಮಜ್ಜಿಗೆ ಕೂಡ ಆ ಮಳಿಗೆಯಲ್ಲಿ ಸಿಗುತ್ತವೆ. ಗಂಜಲವನ್ನೂ ಸಾವಯವದ ದಾರಿಯಲ್ಲಿ ಮಾರಲಾಗುತ್ತದೆ. ಹಾಗಂತ ಆ ಹಸುವಿಗೆ ಹಾಕುವ ಹಿಂಡಿ, ಆರೋಗ್ಯ ಕೆಟ್ಟಾಗ ಕೊಡುವ ಔಷಧಿ ಇವೆಲ್ಲವೂ ಕೂಡ ಹೊರಸುರಿಗಳೇ. ತಾಯಿಯ ಎದೆ ಹಾಲಲ್ಲೂ ವಿಷ ಇರುವ ಈ ಕಾಲದಲ್ಲಿ ಹಟ್ಟಿಯ ಹಸುವಿನ ಉತ್ಪನ್ನಗಳಲ್ಲಿ ಶುದ್ಧ ಸಾವಯವವನ್ನು ಹುಡುಕುವುದಾದರೂ ಹೇಗೆ ಎನ್ನುವುದು ಗಂಭೀರ ಪ್ರಶ್ನೆ.
ಸಾವಯವ ಉತ್ಪನ್ನವೆಂದು ಮಾರುವ ಅಂಗಡಿ ಮಾಲಕರು ಅದನ್ನು ಉತ್ಪಾದಿಸುವ ಮನುಷ್ಯನ ನೆಲೆಯಲ್ಲಿ ಮಾತ್ರ ನೋಡುತ್ತಾರೆಯೇ ಹೊರತು ಅದರ ಆಚೆ ನೋಡುವುದಿಲ್ಲ. ನಮ್ಮ ದೇಶದಲ್ಲಿ ಸಾವಯವ ಉತ್ಪನ್ನಗಳನ್ನು ಉತ್ಪಾದಿಸುವವರು ಬೇರೆ, ಭಾಗಶಃ ಅದನ್ನು ಮಾರುವವರು ಬೇರೆ. ಮಾರುವಾತನಿಗೆ ಈ ಜಗತ್ತಿನಲ್ಲಿ ಅಂಗೈಯಗಲ ಸ್ವಂತ ಜಾಗವಿರುವುದಿಲ್ಲ. ಜೀವಮಾನದಲ್ಲಿ ಆತ ಒಂದೇ ಒಂದು ಬೀಜ ಬಿತ್ತಿದವನಲ್ಲ, ಗಿಡ ನೆಟ್ಟವನಲ್ಲ, ಗೊಬ್ಬರ ನೀರು ಕೊಟ್ಟು ಪೋಷಿಸಿದವನೂ ಅಲ್ಲ. ನಗರ, ಮಹಾನಗರದ ನಡುವೆ ಅಂಗೈ ಅಗಲದ ಅಂಗಡಿಯಲ್ಲಿ ಕೂತು ಯಾರೋ ತಂದು ಕೊಡುವ ನೆಲದ ಉತ್ಪನ್ನಗಳಿಗೆ ಸಾವಯವದ ಲೇಬಲ್ ಹಚ್ಚಿ ಮಾರುವವರೇ ಹೆಚ್ಚು.
ಬಹುತೇಕ ಸಾವಯವ ಅಂಗಡಿಯಲ್ಲಿ ಬೆಲೆ ನಿರ್ಣಾಯಕ, ಗುಣ ಮೌಲ್ಯಮಾಪಕ, ಮಾರಾಟಗಾರ ಎಲ್ಲವೂ ಅದೇ ಮಧ್ಯವರ್ತಿ ಮಾರಾಟಗಾರ ಆಗಿರುತ್ತಾನೆ. ಉತ್ಪಾದಕ ತಂದು ಕೊಡುವ ವಸ್ತುಗಳಿಗೆ ಬೆಲೆ ನಿರ್ಧರಿಸುವ, ಬಣ್ಣ ಕಟ್ಟಿ ವರ್ಣಿಸುವವ ಎಲ್ಲವೂ ಅವನೇ. ಖರೀದಿಸುವ ಬಳಕೆದಾರ ಕೂಡ ಅವನ ಮಾತುಗಳನ್ನು ನಂಬುತ್ತಾನೆ. ಹೇಳಿದ ಬೆಲೆ ಕೊಟ್ಟು ಖರೀದಿಸುತ್ತಾನೆ. ಇಲ್ಲಿ ನಂಬಿಕೆಯೇ ಮೌಲ್ಯ. ನಗರ ಕೇಂದ್ರಿತ ಇಂತಹ ಸಾವಯವದ ಅಂಗಡಿಯ ಮುಂದೆ ಸಾಲು ನಿಲ್ಲುವವರನ್ನೊಮ್ಮೆ ಗಮನಿಸಿ. ವೈದ್ಯರು, ಶಿಕ್ಷಕರು, ಸರಕಾರಿ ಉದ್ಯೋಗಿಗಳು, ವಿಜ್ಞಾನಿಗಳು, ಬ್ಯಾಂಕ್ ನೌಕರರು ಹೀಗೆ ಹಸಿರಸಿರಾಗಿರುವ ಸುಂದರವಾಗಿ ಜೋಡಿಸಿಟ್ಟ, ಅವುಗಳ ಮೇಲೆ ಬರೆದಿಟ್ಟದ್ದನ್ನಷ್ಟೇ ನೋಡಿ ನಂಬಿ ಖರೀದಿಸುವವರು. ಇವರಿಗೂ ಮಾರಾಟಗಾರನ ಹಾಗೆ ಅವುಗಳ ಯಾವುದೇ ಬೇರು ಮೂಲ ಗೊತ್ತಿರುವುದಿಲ್ಲ.
ನಮ್ಮ ದೇಶದಲ್ಲಿ ಇದು ಪರಿಶುದ್ಧ, ವಿಷರಹಿತ ಎಂದು ಪತ್ತೆ ಮಾಡುವ ತಾಂತ್ರಿಕ ಆವಿಷ್ಕಾರಗಳು, ಸುಲಭ ಕೈಯಂತ್ರಗಳು ಇನ್ನೂ ಬಂದಿಲ್ಲ. ನಾನು ಮೊದಲೇ ಹೇಳಿದ ಹಾಗೆ ಬರೀ ಬಾಯಿ ಮಾತುಗಳೇ ಮಾರಾಟದ ದಾರಿಯಾಗಿರುತ್ತದೆ. ನಗರ ಕೇಂದ್ರಿತ ಅಪಾರ್ಟ್‌ಮೆಂಟ್ ಒಂದಕ್ಕೆ ಪ್ರತೀ ವಾರ ಸಾವಯವ ತರಕಾರಿಗಳನ್ನೇ ಪೂರೈಸುವ ಸಾವಯವ ವ್ಯಾಪಾರಿ ಒಬ್ಬರಿದ್ದಾರೆ ಎಂದು ಇಟ್ಟುಕೊಳ್ಳಿ. ಅವ ಎಲ್ಲಿಂದ ಅವುಗಳನ್ನು ಬೇಕಾದಂತೆ ತಂದು ಕೊಡುತ್ತಾನೆ ಎಂಬುದನ್ನು ಪತ್ತೆ ಹಚ್ಚಲು, ಮೂಲ ಹುಡುಕಲು ಅವುಗಳನ್ನು ಬಳಸುವವರು ಹೋಗುವುದಿಲ್ಲ.
ಸಾವಯವ ನೆಲ ಉತ್ಪನ್ನಗಳನ್ನು ಗುರುತಿಸುವುದಕ್ಕೆ ಇರುವ ಸುಲಭ ದಾರಿ ಎಂದರೆ ಅವುಗಳಿಗೆ ಬೇರೆಯವುಗಳಂತೆ ಆಕರ್ಷಕ ರೂಪ, ಆಕಾರ, ಬಣ್ಣ ಇಲ್ಲದಿರುವುದು. ಯಾವತ್ತೂ ಅವು ಒಂದೇ ಗಾತ್ರ ರೂಪದಲ್ಲಿ ಇರಲಾರವು. ಒಂದೇ ಬಳ್ಳಿಯ ಗಿಡದ ಉತ್ಪನ್ನಗಳಾದರೂ ಬೇರೆ ಬೇರೆ ಗಾತ್ರದಲ್ಲಿ ಇರುತ್ತವೆ. ಉದಾಹರಣೆಗೆ ಸೊಪ್ಪು ತರಕಾರಿಯನ್ನೇ ಇಟ್ಟುಕೊಳ್ಳಿ.ಮಾರುಕಟ್ಟೆಯಲ್ಲಿ ರಾಸಾಯನಿಕ ಕ್ರಿಮಿನಾಶಕ ಸುರಿದ, ಸಿಂಪಡಿಸಿದ ತರಕಾರಿಗಳ ರೂಪ ಆಕರ್ಷಕವಾಗಿರುತ್ತದೆ. ನೋಡಿದಾಗ ಅದನ್ನೇ ಖರೀದಿಸಬೇಕೆನಿಸುತ್ತದೆ. ಸೊಪ್ಪು ತರಕಾರಿಯೇ ಆಗಿದ್ದರೆ ಅವುಗಳ ಮೇಲೆ ಯಾವ ತೂತುಗಳು ಇರುವುದಿಲ್ಲ. ಹಸಿರಸಿರಾಗಿ ದೊಡ್ಡ ಗಾತ್ರದಲ್ಲಿ ಬೆಳೆದಿರುತ್ತವೆ. ರುಚಿ, ಸ್ವಾದ ಮಾತ್ರ ಬೇರೆ. ಆದರೆ ಅವೆಲ್ಲವನ್ನು ಪತ್ತೆ ಮಾಡುವಷ್ಟು ನಮ್ಮ ನಾಲಿಗೆ ಈಗ ರುಚಿಕೆಡಿಸಿಕೊಂಡಿದೆ.
ಹಳ್ಳಿಗಳಿಂದ ನಗರ ಕೇಂದ್ರಿತ ಸಾವಯವ ಮಾರುಕಟ್ಟೆಗೆ ಇಂಥ ಉತ್ಪನ್ನಗಳನ್ನು ನಿಯತವಾಗಿ ಸರಬರಾಜು ಮಾಡುವ ಕೆಲವು ಏಜೆಂಟರಿದ್ದಾರೆ. ಗುಟ್ಟಾಗಿ ಅವರ ಬೆನ್ನಿಗೆ ಬಿದ್ದರೆ ಸಾವಯವದ ಬಣ್ಣ ಬಿಚ್ಚುತ್ತದೆ. ರಾಸಾಯನಿಕವನ್ನೇ ಹಾಕಿ ಬೆಳೆಸಿದ ಎಷ್ಟೋ ಉತ್ಪನ್ನಗಳನ್ನು ನಗರಕ್ಕೆ ಒಯ್ದು ಸಾವಯವದ ಹೆಸರಿನಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುವ ಮಧ್ಯವರ್ತಿಗಳು ನನಗೆ ಗೊತ್ತು. ರೈತ ಪಾಲುಗಾರಿಕೆಯ ಒಂದಷ್ಟು ಸಂಘಟನೆಗಳು ವಾರಕ್ಕೆ ಒಂದು ಅಥವಾ ಎರಡು ಬಾರಿ ಇಂಥ ಅಂಗಡಿ ತೆರೆದು ನೈಜ ಉತ್ಪನ್ನಗಳಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನೂ ನಾನು ಕಂಡಿದ್ದೇನೆ. ಅಂತಹ ಸಂಸ್ಥೆಗಳು ಬಳಕೆದಾರರನ್ನು ಒಟ್ಟುಗೂಡಿಸಿ ತಾವು ಬಳಸುವ ಉತ್ಪನ್ನಗಳು ಬೆಳೆಯುವ ತಾಟುಗಳನ್ನು ಪೋಷಣೆಯ ಕ್ರಮಗಳನ್ನು ಪರಿವೀಕ್ಷಿಸುವುದೂ ಇದೆ. ಇದು ಒಳ್ಳೆಯ ಕ್ರಮ. ತಮಗೆ ಭೂಮಿ ಇಲ್ಲದಿದ್ದರೂ ಇನ್ನೆಲ್ಲಿಯೋ ಇನ್ಯಾರೋ ಬೆಳೆಸುವ, ಆದರೆ ತಾನು ಬಳಸುವ ಆಹಾರ ಉತ್ಪನ್ನಗಳ ಉತ್ಪಾದನಾ ಪರಿಯನ್ನು ಗಮನಿಸುವ ಕ್ರಮ ಒಳ್ಳೆಯ ಆಹಾರವನ್ನು ಒದಗಿಸುವ ಸಾಧ್ಯತೆ ಇದೆ.
ಎಷ್ಟೋ ಬಾರಿ ಇಂತಹ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾದಾಗ, ತ್ವರಿತವಾಗಿ ಪೂರೈಸಬೇಕಾದಾಗ ಪೂರೈಕೆದಾರ ಅಡ್ಡದಾರಿ ಹಿಡಿಯುವ ಸಾಧ್ಯತೆ ತುಂಬಾ ಹೆಚ್ಚು. ರೈತ ಎಷ್ಟೇ ಪ್ರಾಮಾಣಿಕವಾಗಿ ಯಾವುದೇ ಕೀಟನಾಶಕ ರಾಸಾಯನಿಕ ಒಳಸುರಿ ನೀಡದೆ ಉತ್ಪಾದಿಸಿದರೂ ಮಾರಾಟಗಾರ ಅವುಗಳನ್ನು ಹೆಚ್ಚು ಕಾಲ ಬಾಳುವ ಹಾಗೆ ಉಳಿಸುವ ವಿಧಾನಗಳಲ್ಲೂ ಅವು ಕುಲಕೆಡುವ ವಿಷ ಸಿಂಚನಕ್ಕೆ ಒಳಗಾಗುವ ಸಾಧ್ಯತೆಗಳು ಇವೆ. ಯಾವ ಧಾನ್ಯ, ತರಕಾರಿ, ಆಹಾರ ವಸ್ತುಗಳನ್ನು ಯಾವ ಹುಳ ಹುಪ್ಪಟೆಯೂ ಇಲ್ಲದಿರುವಂತೆ ಮುಕ್ತವಾಗಿ ತೆರೆದಿಟ್ಟು ಸುಲಭ ಗೋಚರಗೊಳಿಸಲಾಗುತ್ತದೋ ಆ ವಸ್ತುಗಳ ದೀರ್ಘಾಯುಷ್ಯವನ್ನು ಪ್ರಶ್ನಿಸಲೇಬೇಕು.
ನಾವು ಮನೆಯಲ್ಲಿ ಉಣ್ಣಲು ಬೇಯಿಸುವ ಅನ್ನದ ಪಾತ್ರೆಯಿಂದ ಹಿಡಿದು ಕುಡಿಯುವ ಚಹಾದಲ್ಲಿರುವ ರಾಸಾಯನಿಕದವರೆಗೆ ನಮ್ಮ ಮನೆಯಲ್ಲಿ ಬಹುರೂಪಿ ವಿಷಗಳು ದೇಹದೊಳಗೆ ಪ್ರವೇಶಿಸುವ ಕಾಲಘಟ್ಟದಲ್ಲಿ ವಿಷರಹಿತ ಶುದ್ಧ ಆಹಾರ ಎಂಬುದೊಂದು ಉಳಿದಿದೆಯೇ ಎನ್ನುವುದು ಪ್ರಶ್ನೆ. ಹರಿಯುವ ನೀರು, ಚಲಿಸುವ ಗಾಳಿಯಲ್ಲೂ ಎಲ್ಲೆಂದರಲ್ಲಿ ವಿಷ ಚಲಿಸುವಾಗ ಮನುಷ್ಯ ಕೇಂದ್ರಿತ ಈ ಭೂಮಿ ಮೇಲೆ ಪ್ರತ್ಯೇಕ ದ್ವೀಪ ಒಂದನ್ನು ಸೃಷ್ಟಿಸಿಕೊಂಡು ಸಾವಯವ ಬದುಕನ್ನು ಸಾಧಿಸುವುದು ತುಂಬಾ ಕಷ್ಟ.