ಪ್ರತೀ ಚುನಾವಣೆಯ ಸಂತೆಗೆ ಇವಿಎಂ ವಿವಾದದ ಮೂರು ಮೊಳ ಹಾಜರ್ !
ಪಿಟ್ಕಾಯಣ
ಪ್ರತೀ ಬಾರಿ ಚುನಾವಣೆಗೆ ಮುನ್ನ ಏಳುವ ಇವಿಎಂ-ವಿವಿಪಾಟ್ ಕುರಿತ ಗದ್ದಲಗಳ ಟೈಮಿಂಗ್, ಸನ್ನಿವೇಶ ಮತ್ತು ಸ್ವರೂಪಗಳೆಲ್ಲ ಈಗೀಗ, ಅವುಗಳ ಒಟ್ಟು ಪ್ಯಾಟರ್ನ್ನ ಕಾರಣಕ್ಕಾಗಿಯೇ ಇವಿಎಂ ಕುರಿತು ಇರುವ ಪ್ರಾಮಾಣಿಕ ಸಂಶಯಗಳನ್ನು ನಿವಾರಿಸಿಕೊಳ್ಳುವಲ್ಲಿ ಉಪಕಾರಕ್ಕಿಂತ ಉಪದ್ರವೇ ಹೆಚ್ಚು ಅನ್ನಿಸತೊಡಗಿರುವುದು ದುರದೃಷ್ಟ. 2004ರ ಲೋಕಸಭಾ ಚುನಾವಣೆಗಳ ವೇಳೆ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಬಳಕೆಯಾದ ಇವಿಎಂಗಳ ಬಗ್ಗೆ, ಅಲ್ಲಿಂದೀಚೆಗೆ ಪ್ರತೀ ಚುನಾವಣೆಯ ಆಸುಪಾಸಿನಲ್ಲಿ ಕಾಣಿಸಿಕೊಳ್ಳುವ ಈ ಚರ್ಚೆ, ಪ್ರತೀ ಬಾರಿ, ಆ ವಿಚಾರದ ತೂಕವನ್ನು ತಗ್ಗಿಸುತ್ತಾ ಬಂದಿದೆ.
ಈಗ 2024ರ ಲೋಕಸಭಾ ಚುನಾವಣೆಗಳು ಇನ್ನೇನು ಕಣ್ಣೆದುರಿವೆ ಎನ್ನುವಾಗ, ಮತ್ತೆ ಇವಿಎಂ-ವಿವಿಪಾಟ್ ಯಂತ್ರಗಳ ಬಗ್ಗೆ ಅಪನಂಬಿಕೆಯ ಚರ್ಚೆ ಆರಂಭಗೊಂಡಿದೆ. ಕಾಂಗ್ರೆಸ್ನ ತಂತ್ರಜ್ಞಾನ ಥಿಂಕ್ಟ್ಯಾಂಕ್ ಅನ್ನಿಸಿಕೊಂಡಿರುವ ಸ್ಯಾಮ್ ಪಿತ್ರೋಡಾ, ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಈ ಬಾರಿ ಇವಿಎಂ-ವಿವಿಪಾಟ್ ಯಂತ್ರಗಳ ಸಾಚಾತನದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ತಮ್ಮ ಪಕ್ಷ ಕಳೆದ ವರ್ಷ ಆಗಸ್ಟ್ ತಿಂಗಳಿನಿಂದಲೇ ಈ ಬಗ್ಗೆ ಸಭೆ ಕರೆದು ಚರ್ಚಿಸಲು ಒತ್ತಾಯಿಸುತ್ತಾ ಬಂದಿದ್ದರೂ ಭಾರತ ಚುನಾವಣಾ ಆಯೋಗವು ತಮ್ಮ ದೂರುಗಳಿಗೆ ಕಿವಿ ಕೊಡುತ್ತಿಲ್ಲ. ಹಾಗಾಗಿ ಸುಪ್ರೀಂಕೋರ್ಟಾದರೂ ಈ ನಿಟ್ಟಿನಲ್ಲಿ ಹಸ್ತಕ್ಷೇಪ ನಡೆಸಿ ನ್ಯಾಯ ಒದಗಿಸಬೇಕೆಂಬುದು ಅವರ ಅಹವಾಲು.
2019ರ ಎಪ್ರಿಲ್ 8ರಂದು ಸುಪ್ರೀಂ ಕೋರ್ಟು, ಪ್ರತೀ ಮತಕ್ಷೇತ್ರದ ಐದು ಬೂತ್ಗಳನ್ನು ಲಾಟರಿಯಂತೆ ಆಯ್ಕೆ ಮಾಡಿ, ಅಲ್ಲಿನ ಇವಿಎಂನಲ್ಲಿ ದಾಖಲಾಗಿರುವ ಮತಗಳು ಮತ್ತು ಅದಕ್ಕೆ ಸಂಪರ್ಕಿತವಾಗಿರುವ ವಿವಿಪಾಟ್ನಲ್ಲಿ ದಾಖಲಾಗಿರುವ ಮತಗಳು ತಾಳೆಯಾಗುತ್ತವೆಯೇ ಎಂದು ನೋಡಬೇಕೆಂದು ಆದೇಶ ನೀಡಿತ್ತು. ಈ ಆದೇಶ ಬರುವ ಮೊದಲು ಚುನಾವಣಾ ಆಯೋಗವು ಪ್ರತೀ ಮತಕ್ಷೇತ್ರದ ಕೇವಲ ಒಂದು ಬೂತ್ನಲ್ಲಿ ಈ ತಾಳೆನೋಡುವ ತಪಾಸಣೆ ನಡೆಸುತ್ತಿತ್ತು.
ಪ್ರತೀ ಮತಕ್ಷೇತ್ರದ ಐದು ಬೂತ್ಗಳಲ್ಲಿ ತಾಳೆಯಾದರೆ ಸಾಕಾಗುವುದಿಲ್ಲ, ಏಕೆಂದರೆ ಆಗ ಕೇವಲ ಶೇ. 2 ಮತಗಳನ್ನು ಮಾತ್ರ ತಾಳೆ ನೋಡಿದಂತಾಗುತ್ತಿದೆ ಎಂದು ಇತ್ತೀಚೆಗೆ ಅಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ಎಂಬ ಸ್ವಯಂಸೇವಾ ಸಂಸ್ಥೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ, ಪ್ರತಿಯೊಂದು ಇವಿಎಂಗಳಲ್ಲಿ ದಾಖಲಾದ ಮತ ಮತ್ತು ಅದಕ್ಕೆ ಸಂಪರ್ಕಿತ ವಿವಿಪಾಟ್ನ ಮತಗಳನ್ನು ತಾಳೆನೋಡಬೇಕೆಂದು ಕೋರಿತ್ತು. ಅದನ್ನು ವಿಚಾರಣೆಯ ವೇಳೆ ತಳ್ಳಿಹಾಕಿರುವ ನ್ಯಾಯಪೀಠವು ‘‘ನಾವು ಅತಿಯಾಗಿ ಸಂಶಯಗ್ರಸ್ಥರಾಗುವುದು ಬೇಡ’’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತಲ್ಲದೇ, ಇದೆಲ್ಲ ಚುನಾವಣಾ ಆಯೋಗದ ಕೆಲಸದ ಹೊರೆಯನ್ನು ಹೆಚ್ಚಿಸುತ್ತದೆಯೇ ಹೊರತು, ಇದರಿಂದ ಬೇರೆ ಪ್ರಯೋಜನವಿಲ್ಲ ಎಂಬ ನಿಲುವು ತಳೆದಿತ್ತು.
ಈ ದಾವೆಯ ವಿಚಾರಣೆಯ ವೇಳೆ ನ್ಯಾಯಪೀಠವು ತನ್ನ ಅಭಿಪ್ರಾಯವನ್ನು ಕೇಳಿದಾಗ, ಭಾರತ ಚುನಾವಣಾ ಆಯೋಗವು 469 ಪುಟಗಳ ಅಫಿಡವಿಟ್ ಸಲ್ಲಿಸಿತ್ತು. ಅದರಲ್ಲಿ, ತಮ್ಮ ಮತ ‘‘ಚಲಾಯಿಸಿದಂತೆ ದಾಖಲಾಗಿದೆಯೇ?’’ ಮತ್ತು ‘‘ದಾಖಲಾದಂತೆ ಲೆಕ್ಕಮಾಡಲಾಗಿದೆಯೇ?’’ ಎಂದು ತಿಳಿಯುವುದು ಮತದಾರರ ‘‘ಮೂಲಭೂತ ಹಕ್ಕುಗಳ ವ್ಯಾಪ್ತಿಗೆ ಬರುವುದಿಲ್ಲ’’ ಎಂಬ ನಿಲುವನ್ನು ಚುನಾವಣಾ ಆಯೋಗ ತಳೆದಿತ್ತು. ಚುನಾವಣೆಗಳು ಹತ್ತಿರಾದಾಗ ಇಂತಹ ಪ್ರಶ್ನೆಗಳು ನ್ಯಾಯಾಲಯದ ಎದುರು ಬರುತ್ತಲೇ ಇರುತ್ತವೆ. ಇವು ತಪ್ಪು ಗ್ರಹಿಕೆಯ ಕಾರಣದಿಂದ ಮೂಡಿದ್ದು, ಇದಕ್ಕೆ ಅವಕಾಶ ಕೊಟ್ಟರೆ ಇವಿಎಂನ ಸ್ಫೂರ್ತಿಗೆ ಧಕ್ಕೆಯಾಗುತ್ತದೆ, ಅಂತಹ ತೀರ್ಪು ಪ್ರತಿಗಾಮಿ ನಿರ್ಧಾರವಾಗಲಿದೆ ಎಂದು ಚುನಾವಣಾ ಆಯೋಗ ತನ್ನ ಅಫಿಡವಿಟ್ನಲ್ಲಿ ಹೇಳಿತ್ತು.
ಇದಲ್ಲದೆ, ಇಂತಹದೇ ಇನ್ನೊಂದು ಪ್ರಕರಣದಲ್ಲಿ, ಎರಡು ತಿಂಗಳ ಹಿಂದೆ (ಸೆಪ್ಟಂಬರ್ನಲ್ಲಿ) ಸುಪ್ರೀಂ ಕೋರ್ಟ್, ಇವಿಎಂನ ಹಾರ್ಡ್ ವೇರ್ನಲ್ಲಿ ಬಳಕೆಯಾಗಿರುವ ‘‘ಸೋರ್ಸ್ ಕೋಡ್’’ನ್ನು ಅಂತರ್ರಾಷ್ಟ್ರೀಯ ಇಲೆಕ್ಟ್ರಿಕಲ್ಸ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್ ಸ್ಟ್ಯಾಂಡರ್ಡ್ (ಐಇಇಇ 1028) ಅನ್ವಯ ಸ್ವತಂತ್ರ ಆಡಿಟ್ಗೆ ಒಳಪಡಿಸಬೇಕೆಂಬ ಅರ್ಜಿಯನ್ನೂ ತಳ್ಳಿಹಾಕಿತ್ತು.
ಹೀಗೆ, ಇವಿಎಂ-ವಿವಿಪಾಟ್ ಸಂಗತಿ ಈಗ, ‘‘ನೀ ಕೊಡೆ-ನಾ ಬಿಡೆ’’ ಹಂತ ತಲುಪಿದಂತಿದೆ.
ಇದೆಲ್ಲ ಹೀಗಿರುವಾಗಲೇ, ತಾಂತ್ರಿಕವಾಗಿ ನೋಡಿದರೆ, ಇವಿಎಂ-ವಿವಿಪಾಟ್ಗಳೆರಡೂ ಯಂತ್ರಗಳಾಗಿರುವುದರಿಂದ, ಅವು ಎರಡರಲ್ಲೂ ದಾಖಲಾಗಿರುವ ಮತಗಳು ಶೇ. 100 ತಾಳೆ ಆಗಲೇ ಬೇಕು. ಆದರೆ ಹೀಗೆ ತಾಳೆಯಾಗದಿರುವ ಬಗ್ಗೆ ಹಲವು ಉದಾಹರಣೆಗಳು ಕಳೆದ 20 ವರ್ಷಗಳಿಂದಲೂ ಸತತವಾಗಿ ಪತ್ರಿಕೆಗಳಲ್ಲಿ ವರದಿಯಾಗುತ್ತಿವೆ ಮತ್ತು ಚುನಾವಣಾ ಆಯೋಗ ಇದೆಲ್ಲ ‘‘ಮಾನವ ಲೋಪಗಳು’’ ಎಂದು ತಳ್ಳಿಹಾಕುತ್ತಲೇ ಬಂದಿದೆ. ಈ ಬಹಿರಂಗಪಡಿಸುವಿಕೆ ಕೂಡ ಕ್ಷಿಪ್ರವಾಗಿ ನಡೆಯುವುದಿಲ್ಲ.
ಉದಾಹರಣೆಗೆ ಕರ್ನಾಟಕದ ವಿಧಾನಸಭಾ ಚುನಾವಣೆಗಳು ನಡೆದು ಈಗ ಆರು ತಿಂಗಳು ಪೂರೈಸಿದ್ದರೂ, ಇವಿಎಂ- ವಿವಿಪಾಟ್ ಮತಗಳು ಎಲ್ಲ ಮತಕ್ಷೇತ್ರಗಳಲ್ಲಿ ಶೇ. 100 ತಾಳೆಯಾಗಿವೆಯೇ ಎಂಬ ವಿವರ ಇನ್ನೂ ಸಾರ್ವಜನಿಕ ವಾಗಿ ಲಭ್ಯವಾದಂತಿಲ್ಲ. ಈ ರೀತಿಯ ವಿಳಂಬಗಳು ಈ ಪ್ರಕ್ರಿಯೆಯಲ್ಲಿನ ಪಾರದರ್ಶಕತೆಯನ್ನು ಇನ್ನಷ್ಟು ಮಸುಕುಗಳಿಸುತ್ತವೆ.
ಹಾಗಾದರೆ ಏನು ಮಾಡಬಹುದು?
ಪ್ರಜಾತಾಂತ್ರಿಕ ವ್ಯವಸ್ಥೆಯೊಂದರ ಬಗ್ಗೆ ಅದರ ಪ್ರಮುಖ ಸ್ಟೇಕ್ ಹೋಲ್ಡರ್ಗಳಿಂದಲೇ ಸಂಶಯ ವ್ಯಕ್ತಗೊಳ್ಳತೊಡಗಿದಾಗ, ಅಲ್ಲಿ ನ್ಯಾಯ ನೀಡಬೇಕಾದ ಹೊಣೆ ಹೊತ್ತಿರುವ ಸಾಂವಿಧಾನಿಕ ಸಂಸ್ಥೆಗಳು, ಆ ಸಂಶಯವನ್ನು ಕಿಂಚಿತ್ತೂ ಇಲ್ಲದಂತೆ ಪಾರದರ್ಶಕವಾಗಿ ನಿವಾರಿಸುವ ‘‘ಪಂಚಾಯ್ತಿ ದಾರರ’’ ಜವಾಬ್ದಾರಿ ಹೊಂದಿರಬೇಕೇ ಹೊರತು, ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವ ‘ಪಕ್ಷ’ದ ಮಟ್ಟಕ್ಕೆ ಇಳಿಯಬಾರದು. ಭಾರತ ಚುನಾವಣಾ ಆಯೋಗವು ಸಂವಿಧಾನದ ಆಶಯವನ್ನು ಕಾಪಾಡುವ ಹೊಣೆ ಹೊತ್ತಿರುವ ಸಂಸ್ಥೆ.
ಚುನಾವಣೆಗಳು ವೇಗವಾಗಿ ನಡೆದು, ಫಲಿತಾಂಶ ಹೊರಬರುವಲ್ಲಿ ಇವಿಎಂ ಕೊಡುಗೆ ದೊಡ್ಡದಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ, ಚುನಾವಣೆಗಳು ಮುಗಿದ ಬಳಿಕ ಕನಿಷ್ಠ ಒಂದು ಚುನಾವಣೆಯ ಮಟ್ಟಿಗಾದರೂ, ಚುನಾವಣೆ ಮುಗಿದು ಆರು ತಿಂಗಳ ಒಳಗೆ, ಬಳಕೆಯಾಗಿರುವ ಎಲ್ಲ ಇವಿಎಂಗಳು ಮತ್ತು ವಿವಿಪಾಟ್ಗಳನ್ನೂ ತಾಳೆ ಮಾಡಿ, ಎಲ್ಲೂ ಯಾವುದೇ ಏರುಪೇರುಗಳಿಲ್ಲ ಎಂಬುದನ್ನು ಪಾರದರ್ಶಕವಾಗಿ ಬಹಿರಂಗಪಡಿಸುವ ಮೂಲಕ, ಮುಂದೆಂದೂ ಈ ರೀತಿಯ ಪ್ರಶ್ನೆಗಳು ಏಳದಂತೆ ಶಾಶ್ವತವಾಗಿ ಈ ವಿವಾದವನ್ನು ಪರಿಹಾರ ಮಾಡುವ ಅವಕಾಶವಿದೆ. ಅದನ್ನು ಈ ಲೋಕಸಭಾ ಚುನಾವಣೆಗಳಲ್ಲೇ ಮಾಡುವುದಾಗಿ ಚುನಾವಣಾ ಆಯೋಗ ಪ್ರಕಟಿಸಲಿ. ಇದಕ್ಕೆ ನ್ಯಾಯಾಂಗದ ಹಸ್ತಕ್ಷೇಪವೂ ಅಗತ್ಯವಿಲ್ಲ. ಚನಾವಣೆಗಳನ್ನು ನ್ಯಾಯಬದ್ಧವಾಗಿ, ಸಂಶಯಕ್ಕೆಡೆ ಇಲ್ಲದಂತೆ ನಡೆಸುವ ಸಾಂವಿಧಾನಿಕ ಜವಾಬ್ದಾರಿ ಹೊತ್ತಿರುವ ಚುನಾವಣಾ ಆಯೋಗವೇ ಈ ಬಗ್ಗೆ ತೀರ್ಮಾನ ತೆಗೆದುಕೊಂಡು ಚುನಾವಣೆಗೆ ಮುನ್ನವೇ ಪ್ರಕಟಿಸಬಹುದು.