ರಾಜಾ ರಾಮ v/s ರಾಜಕೀಯ ರಾಮ
ಚರಿತ್ರೆ ಏಕೆ ಆಳುವವರನ್ನೇ ವೈಭವಿಸಿ ಅಥವಾ ವಸ್ತುವಾಗಿಸಿ ರಚಿಸಲ್ಪಟ್ಟಿದೆಯೆಂಬ ಪ್ರಶ್ನೆ ಸಹಜವಾಗಿಯೇ ಚಿಂತಕರನ್ನು ಕಾಡುತ್ತದೆ. ಬದುಕು ಹೇಗಿರಬೇಕು ಎಂಬ ಆದರ್ಶ ಮತ್ತು ಬದುಕು ಹೇಗಿದೆಯೆಂಬ ವಾಸ್ತವಗಳ ನಡುವಲ್ಲಿ ಚರಿತ್ರೆ ನಿರ್ಮಿಸಲ್ಪಟ್ಟಿದೆ. ಯಾರೊಬ್ಬನ ಹೊಟ್ಟೆ, ಸಂಪತ್ತು ತುಂಬಿಸಲು, ಆತನ ವಾಂಛೆಗಳಿಗೆ ಇಂಬಾಗುವ, ಬಲಿಯಾದ ಅನೇಕರನ್ನು ಅಲಕ್ಷಿಸಿ ಚರಿತ್ರೆಯನ್ನು ರಚಿಸಲಾಗಿದೆಯೆಂಬ ಆರೋಪ ಬಹಳ ಸಮಯದಿಂದ ಇದೆ. ಈಚೆಗೆ ಅಧೀನರ ಅಥವಾ ದಮನಿತರ ಚರಿತ್ರೆಯನ್ನು ಗಮನಿಸಿ ಚರಿತ್ರೆಯನ್ನು ನಿರ್ಮಿಸುವ ಹೊಸಹಾದಿ ಮೂಡಿದೆ. ಬೇಟೆಗಾರನು ಚರಿತ್ರೆ ಬರೆಯುವ ವರೆಗೆ ಹುಲಿಸಿಂಹಗಳೂ ಖಳನಾಯಕರಾಗಿ ಅಥವಾ ಪ್ರತಿನಾಯಕರಾಗಿಯೇ ಇರುತ್ತವೆ. ಅವು ಚರಿತ್ರೆಯನ್ನು ಬರೆಯುವ ಸೋಪಾನಗಳನ್ನು ಹತ್ತಿದಾಗ, ವಿಕಾಸಗೊಂಡಾಗ, ಬೇಟೆಗಾರನು ಖಳನಾಯಕನಾಗದಿದ್ದರೂ ಪ್ರತಿನಾಯಕನಾಗುತ್ತಾನೆ ಎಂಬ ಉಕ್ತಿಯಿದೆ. ಇದು ಈಗಲೂ ಮುನ್ನಡೆಯುತ್ತಿದೆ ಮತ್ತು ಮುಂದುವರಿಯುತ್ತಿದೆ. ಈಗಲೂ ಆಳುವವರು ಅವಕಾಶಗಳು ದಕ್ಕಿದಾಗಲೆಲ್ಲ ತಮ್ಮನ್ನು ಸ್ವಯಂಪ್ರಭೆಗೊಳಿಸುತ್ತಾರೆ ಮತ್ತು ವಂದಿಮಾಗಧರಿಂದ ತಮ್ಮ ಕುರಿತ ಹೊಗಳಿಕೆಯ ಹಾಡೇ ಎಲ್ಲೆಡೆ ಕೇಳುವಂತೆ ಮಾಡುತ್ತಾರೆ. ಪೌರಾಣಿಕ ವ್ಯಕ್ತಿಗಳೂ ದೇವರಾದದ್ದು ಇಂತಹ ಸ್ವಮೋಹದಿಂದಲೇ ಇರಬಹುದು. ತಥಾಗತಿಥ ಚರಿತ್ರೆಯಲ್ಲಿ ನಾವು ಕಾಣುವ ಅನೇಕರು ‘ಐತಿಹಾಸಿಕ’ರೆಂಬ ಕೀರ್ತಿಗೆ ಭಾಜನ/ಪ್ರದಾನರಾದದ್ದು, ಜಾನಪದ ಲಾವಣಿಯ ನಾಯಕರಾದದ್ದು, ಹೀಗೇ ಇರಬಹುದು. ಕಾಲಕಾಲಕ್ಕೆ ನಾಯಕರಾಗಬಯಸುವ ಅಕಾಂಕ್ಷಿಗಳು ತಮಗಿಂತ ಮೊದಲು ಬಂದು ಹೋದ ನಾಯಕರನ್ನು ಜನಮನದಿಂದ ಮರೆಸಲು ಸದಾ ಪ್ರಯತ್ನಿಸುತ್ತಾರೆ. ತನ್ನ ಕಾಲದಲ್ಲಿ ನಾಯಕರೆನಿಸುವವರು ತನ್ನ ಬಳಿಕವೂ ಈ ಜಗತ್ತು ಇರುತ್ತದೆಯೆಂದು ಅರಿತುಕೊಂಡರೆ ಈ ಮಿಥ್ಯಾಮೋಹ ಕಡಿಮೆಯಾಗಬಹುದು.
ಕೆಲವು ಬಾರಿ ತೀರಾ ಹಳೆಯ ಪ್ರತಿಮೆಗಳನ್ನು ಹೊಸ ಹೊಳಪುಗಳೊಂದಿಗೆ ಮೆರೆಸಿ ತಮ್ಮ ಕಾರ್ಯಸಾಧನೆಯನ್ನು ಪೂರೈಸುವ ತಂಡವೂ ಇದೆ. ತಾವು ಯಾರನ್ನು ಬಳಸಿಕೊಳ್ಳುತ್ತಿದ್ದೇವೋ ಅವರು ತಮಗೆ ಯಾವ ರೀತಿಯಲ್ಲಿಯೂ ಪ್ರತಿಸ್ಪರ್ಧಿಯಾಗಿಲ್ಲ ಎಂಬ ಖಚಿತತೆಯೇ ಈ ತಂತ್ರದ ಮೂಲ. ಇತಿಹಾಸ, ಪುರಾಣ ಮತ್ತು ಅದರೊಳಗಿರುವ ಅನೇಕರನ್ನು ಈ ರೀತಿಯಲ್ಲಿ ಬಳಸಲಾಗಿದೆ ಮತ್ತು ಬಹಳಷ್ಟು ಗತಕಾಲೀನರು ದುರ್ಬಳಕೆಯಾದದ್ದೇ ಹೆಚ್ಚು.
ಭಾರತೀಯ ಪುರಾಣ, ಇತಿಹಾಸ ಮತ್ತು ವರ್ತಮಾನವನ್ನು ಗಮನಿಸಿದರೆ ನಮ್ಮ ನಿಕಟಪೂರ್ವರನ್ನು ದೂರವಿಡುವುದನ್ನು ಕಾಣಬಹುದು. ಪ್ರಾಯಃ ಕಳೆದ ಏಳೂವರೆ ದಶಕಗಳ ಸ್ವತಂತ್ರ ಭಾರತದಲ್ಲಿ ಎಷ್ಟೇ ದೂಷಿಸಿದರೂ, ಪ್ರಯತ್ನಿಸಿದರೂ, ಮರೆಸಲಾಗದ ವ್ಯಕ್ತಿತ್ವವೆಂದರೆ ಗಾಂಧಿ ಮಾತ್ರ ಇರಬಹುದು. ಈಗ ಗಾಂಧಿಯನ್ನು ಮರೆಸುವ ಪ್ರಯತ್ನ ಅಭೂತವಾಗಿ ನಡೆಯುತ್ತಿದೆ. ಇದಕ್ಕೆ ಯಾವ ಧರ್ಮ, ದೇವರನ್ನು ಬಳಸಿದರೂ ಎಲ್ಲೋ ಮರೆಯಲ್ಲಿ ‘ನಾನೂ ಇದ್ದೇನೆ’ ಎಂದು ಕಾಣುವ ಛಲ ಗಾಂಧಿಯದ್ದು.
ಪುರಾಣಪ್ರಸಿದ್ಧ ರಾಮನನ್ನು ಈ ದೇಶದ ಜನರು ಜಾತ್ಯತೀತನಾಗಿ, ಧರ್ಮಾತೀತನಾಗಿ, ಮತಾತೀತನಾಗಿ ನೋಡಿದ್ದಾರೆ. ಆತನ ವ್ಯಕ್ತಿತ್ವ ಈ ಮಣ್ಣಿನೊಂದಿಗೆ ಮಿಳಿತವಾದದ್ದು. ಆತನ ಪಾತ್ರವನ್ನು ಯಾರೇ ನಿರ್ವಹಿಸಲಿ, ಜನರು ಆತನನ್ನು ಕಾಣುತ್ತಾರೆ. ಕೆಲವರು ಭಕ್ತಿಭಾವದಿಂದ ಕಂಡರೆ ಇನ್ನು ಕೆಲವರು ವಿಚಾರಪರರಾಗಿ ಆತನನ್ನು ವಿವೇಚಿಸುತ್ತಾರೆ; ವಿಮರ್ಶಿಸುತ್ತಾರೆ; ವಿಶ್ಲೇಷಿಸುತ್ತಾರೆ. ಪಿತೃವಾಕ್ಯ ಪರಿಪಾಲನೆಯಿಂದ ಆತ ಶ್ರೇಷ್ಠನಾಗಿದ್ದರೆ ಹೆತ್ತವರನ್ನು ಆತನಿಗಿಂತಲೂ ಹೆಚ್ಚು ಸಾಂದ್ರವಾಗಿ ಸೇವೆ ಮಾಡಿದ ಪೌರಾಣಿಕ ಪಾತ್ರಗಳಿವೆ. ಶೌರ್ಯದಿಂದ ಆತ ಪ್ರಸಿದ್ಧನಾಗಿದ್ದರೆ ಮಹಾಭಾರತದಲ್ಲೂ ಆತನ ಸಮದಂಡಿಯಾಗಿರುವ ಪಾತ್ರಗಳಿವೆ. ದುಷ್ಟಸಂಹಾರದ ಕೀರ್ತಿಯನ್ನು ಆತನಿಗೆ ಆರೋಪಿಸಿದರೆ ಅದು ತನ್ನ ಪತ್ನಿಯನ್ನು ಕಳೆದುಕೊಂಡು ಮರಳಿ ಪಡೆಯಬೇಕೆಂಬ ಹಠದಿಂದ ಎನ್ನಬಹುದು. ಇಂತಹ ವಿವಿಧ ಕ್ಷೇತ್ರಾವಾರು ವ್ಯಕ್ತಿತ್ವದ ಜೊತೆಯಲ್ಲೇ ವಾಲಿ, ಶಂಭೂಕರನ್ನು ವಧಿಸಿದ್ದು, ಸೀತೆಯ ಪಾತಿವ್ರತ್ಯ ಪರೀಕ್ಷೆಗಾಗಿ ಆಕೆಯನ್ನು ಅಗ್ನಿಪ್ರವೇಶ ಮಾಡಿಸಿದ್ದು, ಗರ್ಭಿಣಿ ಸೀತೆಯನ್ನು ಕಾಡಿಗೆ ಅಟ್ಟಿದ್ದು, ಇವಕ್ಕೆಲ್ಲ ಸರಿಯಾದ ಸಮಜಾಯಿಶಿಕೆ ದೊರಕದು. ಇವನ್ನು ಲೋಕಹಿತಕ್ಕಾಗಿ, ಲೋಕಾಪವಾದವನ್ನು ದೂರಮಾಡುವುದಕ್ಕಾಗಿ ನಡೆಸಿದನೆಂಬ ವಾದ-ವಿವಾದಗಳಿವೆ. ಕೆಲವನ್ನು ಮುಖ್ಯವಾಗಿ ಉತ್ತರಕಾಂಡದ ಪ್ರಸಂಗಗಳನ್ನು ನಮ್ಮ ವಿದ್ವಾಂಸರು ‘ಪ್ರಕ್ಷಿಪ್ತ’ವೆಂದು ಹೇಳಿ ಜಾರಿಕೊಳ್ಳುವುದೂ ಉಂಟು. ಹೀಗೆ ಹೇಳುವಾಗ ಅವರು ಉತ್ತರಿಸದಿರುವುದು ಎಲ್ಲ ಪುರಾಣಗಳೂ ಪೌರಾಣಿಕ ವ್ಯಕ್ತಿಗಳೂ ಪ್ರಕ್ಷಿಪ್ತಗಳೇ. ಅವನ್ನು ನಾವು ಧರ್ಮ, ದೇವರುಗಳ ಹೆಸರಿನಲ್ಲಿ ಬಿಂಬಿಸಿ ನಂಬಿಸುತ್ತೇವೆ, ಅಷ್ಟೇ.
ಈಗ ನಡೆಯುತ್ತಿರುವ ಅಯೋಧ್ಯಾ ಕಾಂಡವನ್ನು ಗಮಿಸಿದರೆ ಸ್ವತಂತ್ರ ಭಾರತದ ರಾಜಕೀಯದಲ್ಲಿ ಧರ್ಮ-ದೇವರುಗಳನ್ನು ಈ ಪರಿಯಲ್ಲಿ ದುಡಿಸಿಕೊಂಡದ್ದು ಇದೇ ಮೊದಲು; - ಎಂದರೆ ಕಳೆದ ಒಂದು ದಶಕಗಳಿಂದ. ರಾಜಕಾರಣದಲ್ಲಿ ಬಡತನ, ಆರ್ಥಿಕತೆ, ನಿರುದ್ಯೋಗ, ಅಭಿವೃದ್ಧಿ ಮುಂತಾದ ಮೂರ್ತ ಸ್ವರೂಪಗಳು ಆಯ್ಕೆಯ ಸಾಧನಗಳಾಗಿದ್ದವು. ಆದರೆ ಇವೆಲ್ಲವುಗಳನ್ನು ಅನಗತ್ಯವೆಂದು ಅನ್ನಿಸುವಂತೆ ಧರ್ಮ-ದೇವರುಗಳ ಅಮಲನ್ನು ಜನಮಾನಸದಲ್ಲಿ ಇಳಿಸಿದ ಕ್ರಮವನ್ನು ಗಮನಿಸಿದರೆ ಇವು ಪಾನನಿಷೇಧಕ್ಕಿಂತಲೂ ಮೊದಲು ನಿಷೇಧಕ್ಕೊಳಪಡಬೇಕಾದ ವಿಚಾರಗಳೆಂದು ಅನ್ನಿಸುತ್ತದೆ. ಅವು ಮೂರ್ತಸ್ವರೂಪದಿಂದ ಧೂರ್ತಸ್ವರೂಪವನ್ನು ಪಡೆದಿವೆಯೆಂದು ಹೇಳದೆ ವಿಧಿಯಿಲ್ಲ.
ಒಂದು ತಲೆಮಾರಿನ ಹಿಂದಕ್ಕೆ ಕಾಲದಲ್ಲಿ ಸರಿದರೆ ‘ದೇವರ ಭಯವೇ ಜ್ಞಾನದ ಆರಂಭ’ ಎಂಬುದು ಸೂಕ್ತಿಯಾಗಿತ್ತು. ಆದರ್ಶಗಳೇ ವಾಸ್ತವವೆಂದು ನಂಬಿದ ಕಾಲ ಅದು. ಮಕ್ಕಳಿಗೆ ಇನ್ಯಾವುದರ ಅರಿವು ಬಾರದಿದ್ದರೂ ದೇವರ ಭಯವೊಂದು ಬಾಲ್ಯದಲ್ಲೇ ಒದ್ದೆ ಗೋಡೆಗೆ ಕಲ್ಲೆಸೆದ ಹಾಗೆ ಒಳಮೆದುಳಿಗೆ ಅಂಟಿಕೊಳ್ಳುತ್ತಿತ್ತು. ಶಾಲೆಗಳಲ್ಲಿ, ಮನೆಗಳಲ್ಲಿ, ಆಸ್ಪತ್ರೆಗಳಲ್ಲಿ, ಬೀದಿಗಳಲ್ಲಿ, ಎಲ್ಲೆಂದರಲ್ಲಿ ದೇವರಂತಹ ಒಂದು ಮೂರ್ತಿಯೋ ಸಂಕೇತವೋ ಕೊನೆಗೆ ದಿಕ್ಕಾದರೂ ಸರಿ, ತಲೆ ಅಯಾಚಿತವಾಗಿ, ಅಯೋಚಿತವಾಗಿ ಬಾಗುತ್ತಿತ್ತು. ಈ ನಂಬಿಕೆಗೆ ಸಿದ್ಧಾಂತಗಳು, ಕಾರಣಗಳು, ನೆಪಗಳು, ಸಮರ್ಥನೆಗಳು, ಎಲ್ಲವೂ ಸೃಷ್ಟಿಯಾಗಿದ್ದವು. ಗ್ರಾಮೀಣ ಭಾರತದಲ್ಲಿ ಶೋಷಣೆಗೆ ಇದು ಒಳ್ಳೆಯ ತಳಹದಿಯನ್ನು ಹಾಕುತ್ತಿತ್ತು. ಧಾರ್ಮಿಕ ಶ್ರದ್ಧಾಕೇಂದ್ರಗಳು ಊರಿನ, ಊರಿನ ಜನರ ಭವಿಷ್ಯವನ್ನು ನಿರ್ಧರಿಸುವ ಅಥವಾ ಪಲ್ಲಟಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದವು.
೨೦೨೪ರ ಮಹಾ ಚುನಾವಣೆಗೂ ಮೊದಲೇ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಬೇಕೆಂದು ರಾಮ ಸಂಕಲ್ಪಿಸಿದ್ದಾನೆಂಬುದಕ್ಕೆ ಪುರಾವೆಗಳಿಲ್ಲದಿದ್ದರೂ ಮೋದಿ ನಾಯಕತ್ವದ ಆಳ್ವಿಕೆ ಮತ್ತು ಅದರ ಬೆನ್ನೆಲುಬಾದ ಸಂಘಪರಿವಾರ ಸಂಕಲ್ಪಿಸಿದೆ. ಅಯೋಧ್ಯೆಯ ಮೂಲಕ ದಿಲ್ಲಿಗೆ ಒಳದಾರಿಯಿದೆಯೆಂಬುದನ್ನು ಈ ಗುಂಪು ಕಳೆದ ಸುಮಾರು ೩-೪ ದಶಕಗಳಿಂದ ಕಂಡುಕೊಂಡಿದೆ. ನ್ಯಾಯಾಲಯದೊಳಗಿದ್ದ ಒಂದು ಊರಿನ ಮಂದಿರದ ಕಥೆಯು ಬೀದಿಗೆ ಬಂದರೆ ಅದರಿಂದ ರಾಜಕೀಯ ಲಾಭವಿದೆಯೆಂಬುದನ್ನು ಈ ಆಳ್ವಿಕೆಯ ಹರಿಕಾರರು ಕಂಡುಕೊಂಡಿದ್ದಾರೆ. ಯಾವುದು ನಂಬಿಕೆಯ ಪ್ರಶ್ನೆಯಾಗಿ ಉಳಿಯಬೇಕಾಗಿತ್ತೋ ಅದನ್ನು ನೈಜವೆಂದು ಮತ್ತು ಕಾನೂನಿನ ಮೂಲಕ ಸಮರ್ಥಿಸಬಹುದೆಂದು ತೋರಿಸಿಕೊಟ್ಟಿದೆ. ಇದಕ್ಕೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನ್ಯಾಯಾಂಗವೂ ‘ಸಾಥ್’ ನೀಡಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಮನ್ನಿಸಲೇ ಬೇಕಾದ ಅನಿವಾರ್ಯತೆ ಈ ದೇಶದ ಜನರಿಗಿದೆ. ಇದನ್ನು ಮೀರಬಲ್ಲವರು ‘ಸಂಸತ್’ ಎಂಬ ಭವನದೊಳಗಿರುವ ಬಹುಮತೀಯರು ಮಾತ್ರ. ಅವರ ಇಚ್ಛೆಗೆ ಕಾನೂನೂ ಇರುವುದಿಲ್ಲ; ನ್ಯಾಯವೂ ಇರುವುದಿಲ್ಲ. ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ನಿರಸನಗೊಳಿಸಬಲ್ಲ ಅನೇಕ ತೀರ್ಮಾನ ಗಳನ್ನು ಸಂಸತ್ ಕೈಗೊಂಡಿದೆ. ಈಚೆಗೆ ಅಂಗೀಕರಿಸಲಾದ ಮುಖ್ಯ ಚುನಾವಣಾಧಿಕಾರಿಗಳ ಆಯ್ಕೆಯ ಪ್ರಕ್ರಿಯೆಯಿಂದ ಭಾರತದ ಸರ್ವೋಚ್ಚ ನ್ಯಾಯಾಧೀಶರನ್ನು ಹೊರಗಿಟ್ಟು ಅಲ್ಲಿಗೆ ಒಬ್ಬ ಸಂಪುಟ ದರ್ಜೆಯ ಸಚಿವರನ್ನು ನಿಗದಿಪಡಿಸಿದ್ದು ಒಂದು ಜ್ವಲಂತ ನಿದರ್ಶನ. ಯಾವೊಬ್ಬ ನ್ಯಾಯಾಧೀಶರೂ ತಾವು ಕೆಲಸಮಾಡುತ್ತಿದ್ದಾಗ ಸ್ವಯಿಚ್ಛೆಯಿಂದ ಮತ್ತು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಭಾರತದ ಸಂವಿಧಾನದ ರಕ್ಷಣೆಗೆ ಮುಂದೆ ಬಂದ ಉದಾಹರಣೆಗಳಿಲ್ಲ. ಇದನ್ನು ಟೀಕಿಸಬೇಕಾದರೆ ಸರ್ವೋಚ್ಚ ನ್ಯಾಯಾಧೀಶರೂ ನಿವೃತ್ತರಾಗಬೇಕು. ಏಕೆಂದರೆ ಅವರೂ ಮನುಷ್ಯರೇ!
ಜನವರಿ ೨೨ರಂದು ಅಯೋಧ್ಯೆಯಲ್ಲಿ ರಾಮಮಂದಿರವು ಉದ್ಘಾಟನೆಗೊಳ್ಳಲಿದೆ. ಎಲ್ಲಕಡೆಯೂ ಇರುವ, ಇರಬೇಕಾದ ರಾಮನಿಗೆ ಇನ್ನು ಮುಂದೆ ಅಯೋಧ್ಯೆಯಲ್ಲಿ ಗೃಹಬಂಧನ ಕಾದಿದೆ. ಅದಕ್ಕೆ ಬೇಕಾದ ತಯಾರಿ ದೇಶದ ಇತರ ಎಲ್ಲ ಸಮಸ್ಯೆಗಳನ್ನೂ ನಿರ್ಲಕ್ಷಿಸಿ ನಡೆಯುತ್ತಿದೆ. ನಮ್ಮ ಪ್ರಧಾನಿ ಈಗ ಉತ್ತರಪ್ರದೇಶದ ಮುಖ್ಯಮಂತ್ರಿಯಂತೆ ಕಾಣಿಸಿಕೊಂಡದ್ದಕ್ಕೆ ಅಚ್ಚರಿಪಡಬೇಕಾದ್ದಿಲ್ಲ. ಅವರಿಗೆ ‘ಮರ್ಯಾದಾ ಪುರುಷೋತ್ತಮ’ ಮೌಲ್ಯಕ್ಕಿಂತ ದಿಲ್ಲಿಯ ಸಿಂಹಾಸನವೇ ಮುಖ್ಯವಾದ್ದರಿಂದ ಧ್ರುವನ ‘ಕಾಡಮೂಲಕವೆ ಪಥ ಆಗಸಕ್ಕೆ’ ಎಂಬುದನ್ನು ಮರೆತು ‘ಅಯೋಧ್ಯೆಯ ಮೂಲಕವೆ ಪಥ ದಿಲ್ಲಿಗೆ’ ಎಂಬುದನ್ನು ಕಂಡುಕೊಂಡಿದ್ದಾರೆ. ಮೊಗಲ್ ಅರಸರು ದಿಲ್ಲಿಯಲ್ಲಿ ಕೋಟೆ ಕಟ್ಟಿದರೂ ಅಯೋಧ್ಯೆಯಲ್ಲಿ ಮಸೀದಿ ಕಟ್ಟಿದರು ಎಂಬ ಚರಿತ್ರೆಯ ಅನುಕರಣೆಯಂತೆ ದಿಲ್ಲಿಯ ಭದ್ರಕೋಟೆಗಾಗಿ ಈಗ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲಾಗುತ್ತಿದೆ. ಜನರ ಧೋರಣೆ ಅರ್ಥವಾಗದ್ದು. ಅದು ವಿದ್ಯೆಯನ್ನಾಗಲೀ, ಆರ್ಥಿಕ ಸ್ಥಿತಿಗತಿಯನ್ನಾಗಲೀ ಅವಲಂಬಿಸಿದಂತಿಲ್ಲ. ಮೂರನೆಯ ಬಾರಿ ಕೋಳಿಕೂಗುವ ಸಮಯದಲ್ಲಿ ಮತ್ತೆ ಇದೇ ಆಡಳಿತವು ಅಧಿಕಾರಕ್ಕೇರುವುದರ ಬಗ್ಗೆ ಸಂಶಯಿಗಳಿಗಿಂತ ಹೆಚ್ಚು ಸಂಖ್ಯೆಯ ನಿಸ್ಸಂಶಯಿಗಳೂ ಇದ್ದಾರೆ.
ಇದಕ್ಕೆ ಮುನ್ನುಡಿಯಂತೆ ಅಯೋಧ್ಯೆಯಲ್ಲಿ ರೈಲ್ವೇ ಮತ್ತು ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ಪ್ರಾಯಃ ರಾಮನು ಬರಬೇಕಾದ ಪುಷ್ಪಕ ವಿಮಾನವನ್ನೂ ಆಡಳಿತವು ಯೋಜಿಸಿದರೆ ಅದು ಗಣರಾಜ್ಯೋತ್ಸವಕ್ಕೆ ನಿರ್ಮಿಸಲಾದ ಟಾಬ್ಲೋ ಅಲ್ಲ, ಅಯೋಧ್ಯೆಯ ರಾಮಮಂದಿರಕ್ಕಾಗಿ ಅವತರಿಸಿದ ಸೇವಾಧಾರಿಯೆಂದೂ ಇದು ಭಕ್ತ-ಭಗವಂತರ ನಡುವಣ ಯೋಗಾಯೋಗವೆಂದು ಈ ದೇಶದ ಬಹಳಷ್ಟು ಜನರು ನಂಬಬಹುದು. ಇಂತಹ ಒಂದು ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಹೊತ್ತಿನಲ್ಲಿ ದೇಶದ ಎಲ್ಲ ರೈಲ್ವೇ ನಿಲ್ದಾಣಗಳಲ್ಲಿ ರಾಮನ ಕಟ್ಔಟ್ಗಳನ್ನು ಹಾಕಿದರೆ ಅದಕ್ಕಾದರೂ ಒಂದು ಅರ್ಥವಿತ್ತು. ಆದರೆ ಆ ಜಾಗದಲ್ಲಿ ಪ್ರಧಾನಿಯ ಮೂರ್ತಿಯೋ, ಕಟ್ಔಟೋ ಏನೋ ಒಂದನ್ನು ಹಾಕಿಸಿ ಜನರು ಸೆಲ್ಫಿ ತೆಗೆದುಕೊಳ್ಳುವ ಅವಕಾಶವನ್ನು ನೀಡಿದೆ. ಹಿಂದೆ ಸಿನೆಮಾದ ಚಾಕಲೇಟು ಹೀರೋಗಳ ಕಟ್ಔಟ್ ಅದ್ದೂರಿಯ ಪ್ರಚಾರವೆಂಬಂತಿತ್ತು. ಈಗ ಆ ಜಾಗವನ್ನು ಪ್ರಧಾನಿ ಅಲಂಕರಿಸಿದ್ದಾರೆ. ಭಕ್ತರು ರಾಮನನ್ನು ಮರೆತರೂ ಪ್ರಧಾನಿಯನ್ನು ಮರೆಯಬಾರದು!
ವ್ಯಂಗ್ಯವೆಂದರೆ ಅಯೋಧ್ಯೆಯ ವಿಮಾನನಿಲ್ದಾಣಕ್ಕೆ ‘ಮಹರ್ಷಿ ವಾಲ್ಮೀಕಿ’ಯ ಹೆಸರಿಡಲಾಗಿದೆ. ಈಗ ವಾಲ್ಮೀಕಿಯೂ ರಾಮನಂತೆ ಎಲ್ಲರ ಪ್ರತಿನಿಧಿಯಾಗಬಾರದೆಂದು ಮತ್ತು ಆತ ಒಂದು ಜನಾಂಗದ, ಜಾತಿಯ ಪ್ರತಿನಿಧಿಯಾಗಿರಬೇಕೆಂದು ರಾಜಕಾರಣವು ನಿರ್ಧರಿಸಿದೆ. ರಾಮಾಯಣವನ್ನು ವಾಲ್ಮೀಕಿ ಬರೆದನೆಂದು ನಂಬಿ ಆತನನ್ನು ಆದಿಕವಿಯೆಂದು ನಮೂದಿಸಿದರೂ ಆನಂತರ ಅನೇಕ ರಾಮಾಯಣಗಳು ಹುಟ್ಟಿಕೊಂಡಿವೆ. (ರಾಮಾಯಣಕ್ಕಿಂತ ಮೊದಲು ಮಹಾಭಾರತವನ್ನು ಬರೆಯಲಾಯಿತೆಂದು ವಿದ್ವಾಂಸರು ನಿರ್ಧರಿಸಿದ್ದಾರೆ. ಯಾರು ಆದಿಕವಿ? ವಾಲ್ಮೀಕಿಯೋ? ವ್ಯಾಸರೋ?) ಉತ್ತರಭಾರತದಲ್ಲಂತೂ ಜನರ ನಡುವಿರುವುದು ವಾಲ್ಮೀಕಿರಾಮಾಯಣವಲ್ಲ, ತುಳಸೀದಾಸರ ರಾಮಚರಿತಮಾನಸ. ಆದರೆ ಆಡಳಿತದವರು ವಾಲ್ಮೀಕಿಗೇ ಪ್ರಶಸ್ತಿಯನ್ನು ಘೋಷಿಸಿದರು. ಇರಲಿ, ಗತಿಸಿಹೋದ ಕವಿ ಗತಿಸಿಹೋದ ಇನ್ನೊಬ್ಬ ಕವಿಗೆ ಮುನಿಯಲಾರ.
ಮಾಧ್ಯಮ ವರದಿಯಂತೆ ಅಯೋಧ್ಯೆಯ ಮಂದಿರವು ಇನ್ನೂ ಪೂರ್ಣವಾಗಿಲ್ಲ. ಈಗ ರಾಮನಿಗೆ ಆಶ್ರಯವಾಗಿರುವುದು ಅರೆಬೆಂದ ಅಡಿಗೆ. ರಾಮನೂ ಈ ಅಗ್ನಿದಿವ್ಯದಲ್ಲಿ ಅರೆಬೆಂದಿದ್ದಾನೆ. ಈತ ರಾಜಾರಾಮನಲ್ಲ; ರಾಜಕೀಯ ರಾಮ. ಅದಕ್ಕೇ ಜನರಿಗೆ ಮುಖತೋರಿಸಲು ನಾಚುತ್ತಿದ್ದಾನೆ. ತನ್ನ ಹೆಸರಿನಲ್ಲಿ ನಡೆಯುತ್ತಿರುವ ಈ ಅಧ್ವಾನವನ್ನು ಮೌನವಾಗಿ ಅಥವಾ ಮೂಕನಾಗಿ ನೋಡುತ್ತಿದ್ದಾನೆ. ಇದೇ ಕಾರಣವಿರಬಹುದು; ಪ್ರಧಾನಿಯೇ ಜನರನ್ನು ಬಾರದಿರಲು ಮನವಿ ಮಾಡಿದ್ದಾರೆ. (ಅಡ್ವಾಣಿ, ಜೋಷಿ ಮುಂತಾದ ಮಾರ್ಗದರ್ಶಕರಿಗೆ ಬದಲಿ ರಸ್ತೆಯನ್ನು ತೋರಿಸಿ ‘ಇಲ್ಲಿಗೆ’ ಮತ್ತು ‘ಈ ಹಾದಿಯಲ್ಲಿ’ ‘ಬರಬೇಡಿ’ ಎಂಬ ಕರೆಯನ್ನು ಆತಿಥೇಯರು ನೀಡಿದ್ದಾರೆ.) ಅದಕ್ಕೆ ಅವರು ಕಾರಣವನ್ನು ಏನಾದರೂ ಹೇಳಲಿ, ಈ ಸಮಾರಂಭದ ಆಹ್ವಾನಿತರ ಪಟ್ಟಿಯನ್ನು ಗಮನಿಸಿದರೆ ಇದೊಂದು ಪ್ರತಿಷ್ಠಿತರ ಚುನಾವಣಾ ಹಬ್ಬವೇ ಹೊರತು ‘ರಾಮಕಲ್ಯಾಣ’ವೂ ಅಲ್ಲ, ಲೋಕಕಲ್ಯಾಣವೂ ಅಲ್ಲ. ರಾಮನು ಇವಿಎಂ ಮತಪೆಟ್ಟಿಗೆಯಂತೆ ಸಗಟು ಸಹಾಯಮಾಡಬಲ್ಲನೆಂಬ ಆಸೆಯೇ ಈ ಕಾರ್ಯಕ್ರಮದ ಒಳಗುಟ್ಟೆಂದು ನಿರ್ಧರಿಸಲು ವಿಶೇಷ ಪರಿಣತಿ ಬೇಕಾಗಿಲ್ಲ. ಸರಕಾರ ಆದ್ಯತೆಯ ಮೇಲೆ ರಾಮಮಂದಿರಕ್ಕಾಗಿ ಸಾರ್ವಜನಿಕ ಬೊಕ್ಕಸದಿಂದ ಹಣ ವೆಚ್ಚ ಮಾಡುವುದನ್ನು ಗಮನಿಸಿದರೆ ಅಯೋಧ್ಯೆಯ ಈ ಮಂದಿರಕ್ಕಾಗಿ ವಿಶ್ವಹಿಂದೂಪರಿಷತ್ತು ಸಂಗ್ರಹಿಸಿದ ಹಣ, ಇಟ್ಟಿಗೆಗಳು ಇವ್ಯಾವುವೂ ಈಗ ಮಂದಿರಕ್ಕೆ ಬಳಕೆಯಾಗಿಲ್ಲವೆಂದು ಮೇಲ್ನೋಟಕ್ಕೇ ಕಾಣುತ್ತದೆ. ಆ ಹಣವು ಹಿಂದಿನ ಚುನಾವಣೆಗಳಿಗೆ ಖರ್ಚಾಗಿದೆಯೇನೋ ಎಂದು ರಾಮನೇ ಹೇಳಬೇಕು. ರಾಮನು ಬಂದು ಹೇಳಲಾರ ಎಂಬುದು ಆಳುವವರಿಗೆ ಚೆನ್ನಾಗಿ ಗೊತ್ತಿದೆ. ಎಲ್ಲವೂ ಈಗ ಪಿಎಂಕೇರ್ನಂತೆ ಅಥವಾ ಚುನಾವಣಾ ಬಾಂಡುಗಳಂತೆ ಮೋದಿರಹಸ್ಯ!
ಈಗ ಮೋದಿ ಸರಕಾರಕ್ಕೆ ಚುನಾವಣೆಗೆ ಯಾವ ಪ್ರಚಾರಾಂಶವೂ ಇಲ್ಲ. ಆದ್ದರಿಂದ ಅಯೋಧ್ಯೆಯ ಈ ಮಂದಿರ ಅವರಿಗೆ- ಕೊನೇ ಪಕ್ಷ ಮೋದಿಗೆ- ಕೊನೆಯ ಗುಟುಕು. ಏಕೆಂದರೆ ಈ ಚುನಾವಣೆಯನ್ನು ಗೆದ್ದರೂ ೨೦೨೮ರ ಹೊತ್ತಿಗೆ ಪ್ರಾಯಃ ಮೋದಿ ನಿವೃತ್ತರಾಗುವುದು ಅನಿವಾರ್ಯ. ಇದರಿಂದಾಗಿ ರಾಮನುಮಂದಿರದೊಳಗೇ ಕುಳಿತು ಕಾದು ನೋಡುವುದೂ ಅಷ್ಟೇ ಅನಿವಾರ್ಯ.
ಉಕ್ಕಿನ ಮುಖವಾಡದ ಮನುಷ್ಯ (‘ಛಿ ಚ್ಞ ಡಿಜಿಠಿ ಠಿಛಿ ಐ್ಟಟ್ಞ ’) ಎಂಬ ಲಿಯೋನಾರ್ಡೋ ಡಿ ಕಾಪ್ರಿಯೋ ನಾಯಕ-ಖಳನಾಯಕ ಹೀಗೆ ದ್ವಿಪಾತ್ರಗಳಲ್ಲಿರುವ, ನೆಪೋಲಿಯನ್ ಕಾಲದ ಫ್ರೆಂಚ್ ಇತಿಹಾಸವನ್ನು ಹೋಲುವ ಹಾಲಿವುಡ್ ಸಿನೆಮಾವೊಂದರಲ್ಲಿ ನಾಯಕಪಾತ್ರವು ಕರಿನೀರಿನ ಏಕಾಂತಬಂಧನದಲ್ಲಿಯೂ ಆತನ ಪ್ರತಿಸ್ಪರ್ಧಿ ಅರಮನೆಯಲ್ಲಿ ರಾಜನಾಗಿಯೂ ಬದುಕುವುದನ್ನು ಕಾಣಬಹುದು. ಅಯೋಧ್ಯೆಯ ಅರಸ ರಾಮನನ್ನು ಅಯೋಧ್ಯೆಯ ಮಂದಿರದಲ್ಲಿ ಬಂಧಿಸಿದಾಗ ಇದು ನೆನಪಾಗಲೂಬಹುದು!