ರಂಗ ಪರಂಪರೆ ಬೆಳೆಸಿದ ‘ಸಮತೆಂತೋ’
ರಂಗಪ್ರಸಂಗ
- ಗಣೇಶ ಅಮೀನಗಡ
ಈಚೆಗೆ ಮೈಸೂರಿನ ‘ಸಮತೆಂತೋ’ ತಂಡ ಯು.ಆರ್. ಅನಂತಮೂರ್ತಿ ಅವರ ‘ಅವಸ್ಥೆ’ ಕಾದಂಬರಿಯನ್ನು ಆಧರಿಸಿದ ನಾಟಕವನ್ನು ಪ್ರಯೋಗಿಸಿತು. ಐವತ್ತಾರು ವರ್ಷಗಳ ಇತಿಹಾಸವಿರುವ ಈ ತಂಡವು ಈಗಲೂ ಸಕ್ರಿಯವಾಗಿದೆ. ಇದು ಬೆಳೆಸಿದ ರಂಗ ಪರಂಪರೆ ಬೆರಗಿನದು. ಈ ತಂಡವು ನಡೆದು ಬಂದ ಹಾದಿಯನ್ನು ಗಮನಿಸಿದರೆ ಅದು ಮೈಸೂರಿನ ಹವ್ಯಾಸಿ ರಂಗಭೂಮಿಯ ಚರಿತ್ರೆಯೂ ಆಗುತ್ತದೆ. ಜೊತೆಗೆ ಕನ್ನಡ ನಾಟಕ ಪರಂಪರೆಯ ಅವಲೋಕನವೂ ಆಗುತ್ತದೆ. ಪದಾಧಿಕಾರಿಗಳಿಲ್ಲದ, ಸರಕಾರದ ನೆರವು ಪಡೆಯದ, ತಂಡದವರೇ ದುಡ್ಡು ಹಾಕಿ ನಾಟಕವಾಡುವುದು ಈ ತಂಡದ ವಿಶೇಷ. ಮುಖ್ಯವಾಗಿ ತಂಡದೊಳಗೆ ಹಾಗೂ ತಂಡದ ಹೊರಗೆ ವೈಮನಸ್ಸು ಇಲ್ಲದ ಸಾಮರಸ್ಯವೇ ಅದರ ಜೀವಾಳ.
‘ಸಮತೆಂತೋ’ ಎಂದರೆ ‘ಸರಸ್ವತಿಪುರಂನ ಮಧ್ಯದಲ್ಲಿರುವ ತೆಂಗಿನ ತೋಪಿನ ಹವ್ಯಾಸಿಗಳು’. ಆರಂಭದಲ್ಲಿ ‘ಸಮತೆಂತೋ ಹವ್ಯಾಸಿಗಳು’ ಎಂದಿತ್ತು. ನಂತರ ಅದು ಸಮತೆಂತೋ ಎಂದಷ್ಟೇ ಉಳಿಸಿಕೊಳ್ಳಲಾಯಿತು. ಸಮತೆಂತೋ ಎಂದು ಹೆಸರಿಡುವ ಮೊದಲೇ ಪೂರ್ಣಚಂದ್ರ ತೇಜಸ್ವಿ ಅವರ ‘ಯಮಳ ಪ್ರಶ್ನೆ’ ನಾಟಕವನ್ನಾಡಲಾಗಿತ್ತು.
೧೯೬೭ರಲ್ಲಿ ತಂಡವು ಆರಂಭಗೊಂಡಿತು. ಇದರ ಸ್ಥಾಪಕರು; ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದ ನಂತರ ನಿರ್ದೇಶಕರಾದ ನ.ರತ್ನ, ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದ ವಿಶ್ವನಾಥ್ ಮಿರ್ಲೆ, ಮೈಸೂರಿನ ಲಲಿತಕಲಾ ಕಾಲೇಜಿನ ನಾಟಕ ವಿಭಾಗದ ಮುಖ್ಯಸ್ಥರಾಗಿದ್ದ ನಂತರ ಪ್ರಾಂಶುಪಾಲರಾಗಿದ್ದ ಸಿಂಧುವಳ್ಳಿ ಅನಂತಮೂರ್ತಿ, ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದ ಎಚ್.ಎಂ. ಚೆನ್ನಯ್ಯ ಹಾಗೂ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಬಾಲಗೋಪಾಲ್ ವರ್ಮಾ ಹಾಗೂ ಎಲ್. ದ್ವಾರಕಾನಾಥ್. ಇವರೆಲ್ಲ ಮೈಸೂರಿನ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು. ಅಲ್ಲಿ ಮಿತ್ರಮೇಳವಿತ್ತು. ಕಾಲೇಜಿನಿಂದ ಹೊರ ಬಂದ ನಂತರ ಮಿತ್ರಮೇಳದ ಹೆಸರಲ್ಲೇ ತೇಜಸ್ವಿ ಅವರ ‘ಯಮಳ ಪ್ರಶ್ನೆ’ ನಾಟಕವನ್ನಾಡಿದರು. ಆನಂತರ ಇವರೆಲ್ಲ ನಾಟಕಕ್ಕೆ ಸಂಬಂಧಿಸಿ ಸೇರುತ್ತಿದ್ದ ಜಾಗ ಸರಸ್ವತಿಪುರಂನ ತೆಂಗಿನ ತೋಪು. ಹೀಗಾಗಿ ಅದೇ ಹೆಸರಿಡಲಾಯಿತು. ತಂಡದ ಹೆಸರು ಘೋಷಿಸಿದ್ದು ಕೂಡಾ ನಾಟಕದ ದಿನವೇ. ೧೯೬೮ರ ಜನವರಿಯಲ್ಲಿ ಕುವೆಂಪು ಅವರ ‘ರಕ್ತಾಕ್ಷಿ’ ನಾಟಕ ಪ್ರದರ್ಶನಗೊಂಡಿದ್ದು ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ. ಇಲ್ಲಿಯೇ ಸಮತೆಂತೋ ಎನ್ನುವ ಹೆಸರನ್ನು ಘೋಷಿಸಲಾಯಿತು. ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ನಾಟಕಗಳನ್ನು ಪ್ರದರ್ಶಿಸುವ ಮೂಲಕ ರಂಗಚಟುವಟಿಕೆಗಳಿಗೆ ವಿಸ್ತರಿಸಿದ ಹೆಮ್ಮೆ ತಂಡದ್ದು. ಹೀಗೆಯೇ ‘ಮೃಚ್ಛಕಟಿಕ’ ನಾಟಕವನ್ನು ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲೂ ಪ್ರದರ್ಶಿಸಲಾಯಿತು. ಅಲ್ಲಿನ ಬಾಲ್ಕನಿಗಳನ್ನು ಬಳಸಿಕೊಳ್ಳಲಾಗಿತ್ತು. ಇದನ್ನು ಸಿಂಧುವಳ್ಳಿ ಅನಂತಮೂರ್ತಿ ನಿರ್ದೇಶಿಸಿದ್ದರು. ಇದರೊಂದಿಗೆ ಮೈಸೂರಿನ ಸರಸ್ವತಿಪುರಂನ ಈಜುಕೊಳದ ಬಳಿ ಚಂದ್ರಶೇಖರ ಕಂಬಾರ ಅವರ ‘ಜೋಕುಮಾರಸ್ವಾಮಿ’ ನಾಟಕವನ್ನು ಆಡಲಾಯಿತು.
ಆನಂತರ ನ.ರತ್ನ ಅವರ ‘ಎಲ್ಲಿಗೆ?’, ‘ಗೋಡೆ ಬೇಕೆ ಗೋಡೆ’ ಹಾಗೂ ‘ಬೊಂತೆ’ ಎಂಬ ಅಸಂಗತ ನಾಟಕಗಳನ್ನು ಪ್ರದರ್ಶಿಸಲಾಯಿತು. ಇದರಿಂದ ನ.ರತ್ನ ಅವರು ಅಸಂಗತ ನಾಟಕಗಳ ಗಟ್ಟಿ ರಚನೆಕಾರರಾದರು. ಜೊತೆಗೆ ಅಸಂಗತ ನಾಟಕಗಳನ್ನು ಪ್ರಯೋಗಿಸಿದ ಪ್ರಮುಖ ತಂಡವೂ ಅವರದು. ಬಳಿಕ ಚಂಪಾ ಅವರ ‘ಟಿಂಗರ ಬುಡ್ಡಣ್ಣ’ ಅಲ್ಲದೆ ‘ಇಲಿಬೋನು’ ಎಂಬ ಅಸಂಗತ ನಾಟಕಗಳು ಪ್ರಯೋಗಗೊಂಡವು.
ಹೀಗೆಯೇ ಯು.ಆರ್. ಅನಂತಮೂರ್ತಿ ಅವರ ‘ಆವಾಹನೆ’ ಎಂಬ ಹಸ್ತಪ್ರತಿಯಲ್ಲಿದ್ದ ನಾಟಕವನ್ನು ಪ್ರಯೋಗಿಸಲಾಯಿತು. ಅದಾಗಲೇ ಮೈಸೂರಿಗೆ ಬಂದಿದ್ದ ರಾಮೇಶ್ವರಿ ವರ್ಮಾ ಅವರು ಈ ನಾಟಕದಲ್ಲಿ ಪಾತ್ರವೊಂದನ್ನು ನಿರ್ವಹಿಸಿದರು. ಆಗಿನಿಂದಲೂ ಸಮತೆಂತೋ ಜೊತೆಗೇ ಇದ್ದಾರೆ.
ಕೆಲವು ವರ್ಷಗಳ ಹಿಂದೆ ಅವರು ‘ರುಡಾಲಿ’ ನಾಟಕ ನಿರ್ದೇಶಿಸಿದ್ದರು. ಆಮೇಲೆ ಎಚ್.ಎಂ.ಚೆನ್ನಯ್ಯ ಅವರು ಬ್ರೆಕ್ಟ್ನ ಪ್ರಭಾವದಿಂದ ರಚಿಸಿದ ‘ಎಲ್ಲರಂತಲ್ಲ ನನಗಂಡ’ ನಾಟಕದ ಮೂಲಕ ನಾಟಕಕಾರರಾದರು. ಬಳಿಕ ಪರ್ವತವಾಣಿ ಅವರ ‘ಬಹದ್ದೂರ್ ಗಂಡ’, ‘ಇಷ್ಟಾರ್ಥ’ ಹಾಗೂ ‘ಭೂತಗಳು’ ನಾಟಕಗಳನ್ನು ತಂಡವು ಪ್ರದರ್ಶಿಸಿತು. ಹೀಗೆ ಎಲ್ಲ ಬಗೆಯ ನಾಟಕಗಳನ್ನು ಆಡಿದ, ಆಡಿಸಿದ ಹೆಗ್ಗಳಿಕೆ ಈ ತಂಡದ್ದು. ಇದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಹುದು. ನಂಜನಗೂಡು ಸುಬ್ಬಾಶಾಸ್ತ್ರಿಗಳ ‘ಮೃಚ್ಛಕಟಿಕ’, ಸಂಸರ ‘ವಿಗಡವಿಕ್ರಮರಾಯ’ ನಾಟಕಗಳೊಂದಿಗೆ ಬಿ.ವಿ.ಕಾರಂತರು ನಿರ್ದೇಶಿಸಿದ ‘ಏವಂ ಇಂದ್ರಜಿತ್’ ನಾಟಕ ಆಡಿಸಿದುದು ಪ್ರಮುಖವಾದುದು. ನಂತರ ಬಾದಲ್ ಸರ್ಕಾರ್ ಅವರ ‘ಹುಚ್ಚು ಕುದುರೆ’ ನಾಟಕವನ್ನು ಈ ತಂಡಕ್ಕೆ ಬಿ. ವಿ. ಕಾರಂತರು ನಿರ್ದೇಶಿಸಿದ್ದರು.
ಸಿನೆಮಾ ನಟರಾಗಿದ್ದ ರೇಣುಕಾ ಪ್ರಸಾದ್ ಅವರು ಇದ್ದಕ್ಕಿದ್ದ ಹಾಗೆ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದಾಗ ಅವರ ಅಭಿನಯದಲ್ಲೇ ಕೆ.ವಿ.ಅಕ್ಷರ ಅವರ ‘ಚೂರಿ ಕಟ್ಟೆ ಅರ್ಥಾತ್ ಕಲ್ಯಾಣನಗರಿ’ ಎಂಬ ನಾಟಕವನ್ನು ಪ್ರದರ್ಶಿಸಲಾಯಿತು. ಇದನ್ನು ನ.ರತ್ನ ನಿರ್ದೇಶಿಸಿದ್ದರು. ಹೀಗೆ ನ.ರತ್ನ ಹಾಗೂ ಸಿಂಧುವಳ್ಳಿ ಅನಂತಮೂರ್ತಿ ಅವರು ನಿರ್ದೇಶಿಸಿದ ನಾಟಕಗಳೇ ಹೆಚ್ಚು. ಉಳಿದಂತೆ ಬಾಲಗೋಪಾಲ ವರ್ಮಾ, ವಿಶ್ವನಾಥ ಮಿರ್ಲೆ, ಬಿ.ಎ.ಸತ್ಯನಾರಾಯಣರಾವ್, ವಿ.ಬಸವರಾಜ್, ಎಚ್.ಎಂ. ಚೆನ್ನಯ್ಯ, ಬಿ.ಆರ್.ರವೀಶ್, ಎನ್.ದ್ವಾರಕಾನಾಥ್, ಎಚ್.ಎಸ್.ಉಮೇಶ್ ಅವರು ಕೂಡಾ ನಿರ್ದೇಶಿಸಿದ್ದಾರೆ.
ರಂಗಕರ್ಮಿಗಳಿಗೆ ಸನ್ಮಾನ:
ಈ ತಂಡದ ವಿಶೇಷವೆಂದರೆ ರಂಗಕರ್ಮಿಗಳನ್ನು ನಿರಂತರವಾಗಿ ಸನ್ಮಾನಿಸುವುದು. ಅದು ನಾಟಕಗಳ ನಿರ್ದೇಶಕ, ಸಿನೆಮಾ ನಟ ಸಂಪತ್ ಅವರನ್ನು ಸನ್ಮಾನಿಸುವ ಮೂಲಕ ಶುರುವಾದ ಪರಂಪರೆ ಈಗಲೂ ಮುಂದುವರಿದಿದೆ. ಜಿ.ಬಿ. ಜೋಶಿ, ಪರ್ವತವಾಣಿ ಮೊದಲಾದವರನ್ನು ಗೌರವಿಸಲಾಗಿದೆ. ೧೯೯೨-೧೯೯೩ರ ವರೆಗೆ ತಂಡದ ಬೆಳ್ಳಿಹಬ್ಬವನ್ನು ಆಚರಿಸಲಾಯಿತು. ಆಗಲೂ ಅನೇಕ ರಂಗಕರ್ಮಿಗಳನ್ನು ಸನ್ಮಾನಿಸಲಾಯಿತು. ನಂತರ ೨೦೧೭ರಿಂದ ೨೦೧೮ರ ವರೆಗೆ ತಂಡದ ಸುವರ್ಣ ಮಹೋತ್ಸವ ಅಂಗವಾಗಿ ನೇಪಥ್ಯದವರನ್ನೂ ಗೌರವಿಸಲಾಯಿತು.
ಇದರೊಂದಿಗೆ ರಂಗಭೂಮಿಯ ವಿವಿಧ ಮಜಲುಗಳನ್ನು ಪರಿಚಯಿಸಲಾಯಿತು. ವಸ್ತ್ರಾಲಂಕಾರದ ಪ್ರದರ್ಶನವನ್ನು ಮೈಸೂರಿನ ಅರಸು ಬೋರ್ಡಿಂಗ್ ಆವರಣದಲ್ಲಿ ಏರ್ಪಡಿಸಲಾಗಿತ್ತು. ಇದರಲ್ಲಿ ಸುಬ್ಬಯ್ಯ ನಾಯ್ಡು ಅವರು ಬಳಸುತ್ತಿದ್ದ ವೇಷಭೂಷಣಗಳನ್ನು ಪ್ರದರ್ಶಿಸಿದ್ದು ವಿಶೇಷ. ನಾಟಕಗಳ ಜೊತೆಗೆ ನಾಟಕ ರಚನಾ ಕಾರ್ಯಾಗಾರ, ಪ್ರಸನ್ನ ನಿರ್ದೇಶನದಲ್ಲಿ ನಾಟಕ ತರಬೇತಿ ಶಿಬಿರ, ಮನಿಷ್ ಮಿತ್ರಾ ಅವರ ನಿರ್ದೇಶನದ ಆಂಗಿಕ ಅಭಿನಯ ಶಿಬಿರ ನಡೆದವು.
ಗಮನಾರ್ಹ ಸಂಗತಿ ಎಂದರೆ, ಈ ತಂಡವು ನಾಟಕಕ್ಕೆ ಟಿಕೆಟ್ ಇಲ್ಲದೆ ಪ್ರದರ್ಶಿಸಿಲ್ಲ. ಅಂದರೆ ಉಚಿತವಾಗಿ ನಾಟಕ ತೋರಿಸಿದ ಉದಾಹರಣೆಗಳಿಲ್ಲ. ‘ಕದಡಿದ ನೀರು’ ನಾಟಕವಾಡಿದಾಗ ಅದರ ರಚನೆಕಾರ ಜಿ.ಬಿ.ಜೋಶಿ ಅವರು ಬಂದಿದ್ದರು. ನಾಟಕ ನೋಡಿ ಕೃತಾರ್ಥನಾದೆ ಎಂದರು. ಆಗ ಟಿಕೆಟ್ ದರ ಮೂರು ರೂಪಾಯಿ ಇತ್ತು. ‘‘ನಾನ್ಯಾವತ್ತೂ ಐದು ರೂಪಾಯಿಗಿಂತ ಕಡಿಮೆ ನಾಟಕ ನೋಡಿಲ್ಲ. ಐದು ರೂಪಾಯಿ ತಗೊಳ್ಳಿ’’ ಎಂದು ಕೊಟ್ಟರು.
ಇನ್ನು ಈ ತಂಡದ ಸ್ಥಾಪಕರಲ್ಲಿ ಉಳಿದಿರುವವರಲ್ಲಿ ಒಬ್ಬರಾದ, ೮೮ ವರ್ಷ ವಯಸ್ಸಿನ ನ.ರತ್ನ ಅವರು ‘‘ತಂಡ ವಿಭಿನ್ನವಾದ ನಾಟಕಗಳನ್ನು, ವಿಭಿನ್ನವಾಗಿ ಪ್ರದರ್ಶಿಸಿದೆ. ಈಜುಕೊಳ, ಮೈಸೂರಿನ ಕ್ರಾಫರ್ಡ್ ಹಾಲ್ನಲ್ಲಿ ಪ್ರಯೋಗಿಸಿದೆ. ಹೊಸ ನಾಟಕ, ಹೊಸ ನಟ/ನಟಿಯರನ್ನು, ಹೊಸ ನಿರ್ದೇಶಕರನ್ನು ಬೆಳಕಿಗೆ ತಂದಿದ್ದೇವೆ. ಮರೆಯಲಾರದು ಎಂದರೆ, ಮೈಸೂರಿನಲ್ಲಿ ‘ಫಲಾಮೃತ’ ಎಂಬ ಸೋಡಾ ಅಂಗಡಿಯಿತ್ತು. ಅದರ ಮಾಲಕರು ಗುಂಡಪ್ಪ. ಅವರ ಬಳಿ ನಾಟಕಕ್ಕೆ ದೇಣಿಗೆ ಕೇಳಲು ಹೋದಾಗ ವಿದ್ಯಾವಂತರೆಲ್ಲ ಸೇರಿ ನಾಟಕ ಆಡುತ್ತೀರಿ. ನಾಟಕ ನಷ್ಟವಾದರೆ ನನ್ನದೂ ಪಾಲಿರಲಿ. ನಷ್ಟ ತುಂಬಿಸಿಕೊಡುವೆ ಎಂದು ಭರವಸೆ ಕೊಟ್ಟಿದ್ದರು.
ಇನ್ನೊಂದು ಸಂಗತಿ ಎಂದರೆ; ಎಪ್ಪತ್ತರ ದಶಕದಲ್ಲಿ ಕಂಬಾರರ ಜೋಕುಮಾರಸ್ವಾಮಿ ನಾಟಕದ ಪ್ರದರ್ಶನ ಮೈಸೂರಿನ ಈಜುಕೊಳ ಸುತ್ತ ಮಾಡಿದೆವು. ಅಂದು ನಾಟಕ ನೋಡಲು ಬಂದವರು ಫಲಾಮೃತ ಸೋಡಾ ಅಂಗಡಿಯ ಮಾಲಕ ಗುಂಡಪ್ಪಅವರು ನಾಟಕ ನಡೆಯುವಾಗ ಮುಂದುಗಡೆ ಸೋಫಾದಲ್ಲಿ ಕೂಡಿಸಿ ಎಂದರು. ನಾವು ಒಪ್ಪದೆ ಈಜುಕೊಳದಲ್ಲಿ ಸೋಫಾ ಹಾಕಲಾಗುವುದಿಲ್ಲವೆಂದು ಸಾಮಾನ್ಯವಾದ ಕುರ್ಚಿಯಲ್ಲಿ ಕೂಡಿಸಿದ್ದೆವು. ನಂತರ ಅವರು ಸೋಫಾದಲ್ಲಿ ಕೂಡುವುದನ್ನು ಬಿಟ್ಟು ಕುರ್ಚಿಯಲ್ಲಿ ಕೂಡುವುದನ್ನು ಅಭ್ಯಾಸ ಮಾಡಿಕೊಂಡರು.
ವಿಶೇಷ ಎಂದರೆ ಇದೇ ಜುಲೈ ೨೩ರಂದು ಮೈಸೂರಿನ ರೋಟರಿಯಲ್ಲಿ ನನ್ನ ಹೊಸ ನಾಟಕ ‘ಆಯಾನ್ ಶಾಂತಿ ಕುಟೀರ’ ಬಿಡುಗಡೆಯಾಗಲಿದೆ’’ ಎಂದು ಖುಷಿಯಿಂದ ಹೇಳುತ್ತಾರೆ.