ಭಾರತದ ನಾವೀನ್ಯತೆ ಕ್ರಾಂತಿಗೆ ನಾಂದಿ ಹಾಡುತ್ತಿರುವ ನವೋದ್ಯಮಗಳು

PC | GROK
ಪ್ರಯಾಗರಾಜ್ ಸಂಗಮದಲ್ಲಿ ನಡೆದ ಮಹಾಕುಂಭದ ಅದ್ಭುತ ಯಶಸ್ಸಿನ ಬಳಿಕ ‘ನಾವೀನ್ಯತೆ‘, ‘ಉದ್ಯೋಗ ಸೃಷ್ಟಿ’ ಮತ್ತು ‘ಉದ್ಯಮಶೀಲತೆ’ ಎಂಬ ಮೂರು ಅಭಿವೃದ್ಧಿಯ ಧಾರೆಗಳ ಸಂಗಮವನ್ನು ಆಚರಿಸುವ ಸಮಯ ಬಂದಿದೆ. ಆ ಮೂಲಕ ರೋಮಾಂಚಕ ಭಾರತಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ‘ವಿಕಾಸ್’(ಅಭಿವೃದ್ಧಿ) ಮತ್ತು ‘ವಿರಾಸತ್’(ಪರಂಪರೆ) ದೃಷ್ಟಿಕೋನವನ್ನು ಮುಂದಕ್ಕೆ ಕೊಂಡೊಯ್ಯಲಾಗುತ್ತಿದೆ.
ಎ.3ರಂದು ‘ನವೋದ್ಯಮ ಮಹಾಕುಂಭ’ದಲ್ಲಿ ಈ ಮೂರು ಧಾರೆಗಳು ಸಂಗಮವಾಗಲಿವೆ. ಪ್ರಯಾಗರಾಜ್ನಲ್ಲಿ ನಡೆದ ಅದ್ಭುತ ಆಧ್ಯಾತ್ಮಿಕ ಸಂಗಮದಂತೆಯೇ,‘ನವೋದ್ಯಮ ಮಹಾಕುಂಭ’ವನ್ನು ಭವ್ಯ ಮತ್ತು ಜಾಗತಿಕ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ.
ಈ ಕಾರ್ಯಕ್ರಮವು 3,000ಕ್ಕೂ ಹೆಚ್ಚು ನವೋದ್ಯಮಗಳು, 1,000ಕ್ಕೂ ಹೆಚ್ಚು ಹೂಡಿಕೆದಾರರು, 500ಕ್ಕೂ ಹೆಚ್ಚು ಭಾಷಣಕಾರರು ಮತ್ತು ವಿಶ್ವಾದ್ಯಂತ 15,000ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ ವ್ಯಾಪಾರ ಸಂದರ್ಶಕರನ್ನು ಒಟ್ಟುಗೂಡಿಸುತ್ತದೆ. ಸಹಯೋಗ, ಮಾರ್ಗದರ್ಶನ, ಧನಸಹಾಯ ಮತ್ತು ಹೊಸ ಮಾರುಕಟ್ಟೆಗಳಿಗೆ ಪ್ರವೇಶವನ್ನು ಅನ್ವೇಷಿಸಲು ನವೋದ್ಯಮಗಳಿಗೆ ಇದು ಪ್ರಬಲ ವೇದಿಕೆಯಾಗಲಿದೆ. ವಿಶೇಷ ‘ಮಾಸ್ಟರ್ ಕ್ಲಾಸ್’ಗಳು, ಜ್ಞಾನ ಅಧಿವೇಶನಗಳು ಮತ್ತು ನೆಟ್ವರ್ಕಿಂಗ್ (ಸಂಪರ್ಕಜಾಲ) ವೇದಿಕೆಗಳೊಂದಿಗೆ ಈ ಕಾರ್ಯಕ್ರಮವು ನಾವೀನ್ಯತೆಯನ್ನು ಉತ್ತೇಜಿಸುವುದಲ್ಲದೆ, ಮುಂದಿನ ಪೀಳಿಗೆಯ ಉದ್ಯಮಿಗಳಿಗೆ ತಮ್ಮದೇ ಆದ ಉದ್ಯಮಗಳನ್ನು ಪ್ರಾರಂಭಿಸಲು ಪ್ರೇರಣೆ ನೀಡುತ್ತದೆ.
ಅಲ್ಲದೆ, ಈ ವರ್ಷದ ‘ಮಹಾಕುಂಭ’ದಲ್ಲಿ, ಭಾರತದ ಅತಿದೊಡ್ಡ ಖಾಸಗಿ ವಲಯದ ಅನುದಾನಿತ ‘ಗ್ರ್ಯಾಂಡ್ ಇನ್ನೋವೇಶನ್ ಚಾಲೆಂಜ್’ನಲ್ಲಿ 150 ಅಂತಿಮ ಸ್ಪರ್ಧಿಗಳನ್ನು ಮೂರು ಹಂತಗಳ ಹೂಡಿಕೆದಾರರ ನೇತೃತ್ವದ ತೀರ್ಪುಗಾರರ ಸಮಿತಿಯು ಆಯ್ಕೆ ಮಾಡಲಿದೆ. ಈ ಸ್ಪರ್ಧೆಯು ವಿಜೇತರಿಗೆ ಒಟ್ಟು 50 ಕೋಟಿ ರೂ. ಬಹುಮಾನವನ್ನು ಒಳಗೊಂಡಿದೆ.
ನಾವೀನ್ಯತೆ :
ಅದು ಚೆಸ್ ಆಟವಾಗಿರಲಿ ಅಥವಾ ಪ್ರಾಚೀನ ಭಾರತದ ‘ಶೂನ್ಯ’ ಪರಿಕಲ್ಪನೆಯಾಗಿರಲಿ ಅಥವಾ ಇಂದಿನ ‘ಯುಪಿಐ’, ‘ಚಂದ್ರಯಾನ’ ಮತ್ತು ‘ಮಂಗಳಯಾನ’ವಾಗಿರಲಿ, ನಾವೀನ್ಯತೆ ಸದಾ ಭಾರತೀಯ ವಂಶವಾಹಿಯ ಒಂದು ಭಾಗವಾಗಿದೆ. ಆರೋಗ್ಯಕರ ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ಮೂಡಿದ ಹೊಸ ಆಲೋಚನೆಗಳು, ನವೀನ ಸರಕುಗಳು ಮತ್ತು ಸೇವೆಗಳು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗುವ ಹಾದಿಯಲ್ಲಿ ಮುನ್ನಡೆಸುತ್ತವೆ. ಇದಕ್ಕೆ ಅನುಗುಣವಾಗಿ ಈ ಕಾರ್ಯಕ್ರಮದ ಥೀಮ್ ಸಹ ‘ಸ್ಟಾರ್ಟ್ಅಪ್ ಇಂಡಿಯಾ 2047’ ಆಗಿರುವುದು ಗಮನಾರ್ಹ.
2015ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಪ್ರಧಾನಿ ಮೋದಿ ಭಾರತವನ್ನು ಜಾಗತಿಕ ನವೋದ್ಯಮಗಳ ಕೇಂದ್ರವಾಗಿ ಮಾಡುವ ಮತ್ತು ದೇಶವನ್ನು ಉದ್ಯೋಗ ಸೃಷ್ಟಿಕರ್ತರ ರಾಷ್ಟ್ರವಾಗಿ ಪರಿವರ್ತಿಸುವ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದರು. ಸ್ವಲ್ಪ ಸಮಯದ ನಂತರ, ಕ್ರಾಂತಿಕಾರಿ ‘ಸ್ಟಾರ್ಟ್ಅಪ್ ಇಂಡಿಯಾ’ ಅಭಿಯಾನವನ್ನು ಪ್ರಾರಂಭಿಸಲಾಯಿತು.
ಪ್ರಧಾನಿ ಮೋದಿಯವರ ಈ ಅಭಿಯಾನವು ಯುವಜನತೆಯ ಸಾಮರ್ಥ್ಯವನ್ನು ಅನಾವರಣಗೊಳಿಸಿದೆ, ಇದು ಭಾರತದ ಉದ್ಯಮಶೀಲತೆಯ ವಲಯವನ್ನು ಪರಿವರ್ತಿಸುತ್ತಿದೆ. ನೋಂದಾಯಿತ ನವೋದ್ಯಮಗಳ ಸಂಖ್ಯೆ 2016ರಲ್ಲಿ ಕೇವಲ 500 ಇದ್ದದ್ದು ಈಗ ಸುಮಾರು 1.7 ಲಕ್ಷಕ್ಕೆ ಏರಿದೆ. ಈ ಉದ್ಯಮಗಳು ಫಿನ್-ಟೆಕ್, ಡೀಪ್-ಟೆಕ್, ಎಡ್-ಟೆಕ್, ನ್ಯಾನೊ-ಟೆಕ್, ಬಯೋ-ಟೆಕ್, ಸ್ಪೇಸ್-ಟೆಕ್, ಅಗ್ರಿ- ಟೆಕ್ ಮತ್ತು ಹೆಲ್ತ್-ಟೆಕ್ ಸೇರಿದಂತೆ 55ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ವ್ಯಾಪಿಸಿವೆ. ಇದು ಭಾರತವು ಪ್ರಮುಖ ತಂತ್ರಜ್ಞಾನ ಚಾಲಿತ ಉದ್ಯಮಶೀಲತೆಯ ತೊಟ್ಟಿಲಾಗಿ ಹೊರಹೊಮ್ಮಲು ಸಹಾಯ ಮಾಡುತ್ತದೆ.
ನವೋದ್ಯಮಗಳಿಗೆ ಧನಸಹಾಯವನ್ನು ಬೆಂಬಲಿಸಲು ಸರಕಾರವು ಸಕ್ರಿಯವಾಗಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಕಳೆದ ವರ್ಷದ ಬಜೆಟ್ನಲ್ಲಿ, ನಮ್ಮ ಸರಕಾರವು ‘ಏಂಜೆಲ್’ ತೆರಿಗೆಯನ್ನು ರದ್ದುಗೊಳಿಸಿತು, ಈ ಕ್ರಮವನ್ನು ಹೊಸ ಉದ್ಯಮಿಗಳು ಶ್ಲಾಘಿಸಿದರು. ಈ ವರ್ಷದ ಬಜೆಟ್ನಲ್ಲಿ 10,000 ಕೋಟಿ ರೂ.ಗಳ ಹೊಸ ನಿಧಿಯನ್ನು ಪ್ರಾರಂಭಿಸಲಾಗಿದೆ.
ಉದ್ಯೋಗ ಮತ್ತು ಪರಿಹಾರಗಳು :
ಸರಕಾರಿ ನೋಂದಾಯಿತ ನವೋದ್ಯಮಗಳು ಜನವರಿ 31, 2025ರ ವೇಳೆಗೆ 17.69 ಲಕ್ಷ ನೇರ ಉದ್ಯೋಗಗಳನ್ನು ಸೃಷ್ಟಿಸಿವೆ. ಇದಲ್ಲದೆ, ಅವು ನೈಜ-ಪ್ರಪಂಚದ ಸವಾಲುಗಳಿಗೆ ಅತ್ಯಾಧುನಿಕ ಪರಿಹಾರಗಳನ್ನು ಒದಗಿಸುತ್ತಿವೆ. ಛೇದನ ಅಥವಾ ಕೊಯ್ಯುವಿಕೆ ಇಲ್ಲದೆ ಕ್ರಾಂತಿಕಾರಕ ಎಐ-ಚಾಲಿತ ಥರ್ಮಲ್ ಇಮೇಜಿಂಗ್ ತಂತ್ರಜ್ಞಾನದೊಂದಿಗೆ ಸ್ತನ ಕ್ಯಾನ್ಸರ್ ಪತ್ತೆಹಚ್ಚುವುದು; ರೈತರನ್ನು ನೇರವಾಗಿ ಖರೀದಿದಾರರೊಂದಿಗೆ ಸಂಪರ್ಕಿಸುವ ಮೂಲಕ ಗ್ರಾಮೀಣ ವ್ಯಾಪಾರವನ್ನು ಸರಳಗೊಳಿಸುವುದು; ಕೈಗೆಟುಕುವ ಮತ್ತು ಪರಿಣಾಮಕಾರಿ ಪಾವತಿ ಮಾರ್ಗ (ಪೇಮೆಂಟ್ ಗೇಟ್ವೇ) ಪರಿಹಾರಗಳನ್ನು ಒದಗಿಸುವುದು; ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವ ಪ್ರಭಾವಶಾಲಿ ಪರಿಸರ ಸ್ನೇಹಿ ಉತ್ಪನ್ನಗಳ ಸೃಷ್ಟಿ; ನಮ್ಮ ಸೈಬರ್ ಸ್ಪೇಸ್ ಅನ್ನು ಭದ್ರಪಡಿಸುವುದು - ಇವು ಭಾರತ ಮತ್ತು ಜಗತ್ತಿನ ಅನೇಕ ಸವಾಲುಗಳಿಗೆ ನಮ್ಮ ನವೋದ್ಯಮಗಳು ನೀಡುತ್ತಿರುವ ಪರಿಹಾರಗಳಿಗೆ ಕೆಲವೊಂದು ಉದಾಹರಣೆಗಳು.
ನಮ್ಮ ನವೋದ್ಯಮಗಳು ಸಹ ಬಹಳ ಚುರುಕಾಗಿವೆ ಮತ್ತು ತ್ವರಿತವಾಗಿ ಹೆಜ್ಜೆ ಇಡುತ್ತಿವೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ಸದೃಢ ವಿಶ್ಲೇಷಣಾತ್ಮಕ ಪರಿಹಾರಗಳು, ಡ್ರೋನ್ಗಳು, ದೂರಸಂಪರ್ಕ ವೇದಿಕೆಗಳು ಇತ್ಯಾದಿಗಳನ್ನು ನವೋದ್ಯಮಗಳು ಅಭಿವೃದ್ಧಿಪಡಿಸಿದವು. ಆ ಮೂಲಕ ಸೋಂಕಿತರ ಸಂಪರ್ಕ ಪತ್ತೆಹಚ್ಚುವಿಕೆ, ಕ್ವಾರಂಟೈನ್ ಮೇಲ್ವಿಚಾರಣೆ ಮತ್ತು ‘ವಾರ್ರೂಂ’ಗಳಿಗೆ ಡ್ಯಾಶ್ಬೋರ್ಡ್ ಳನ್ನು ಅಭಿವೃದ್ಧಿಪಡಿಸಲು ಈ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಗಮನ ಹರಿಸಿದವು. ‘ಪಿಪಿಇ ಕಿಟ್’ಗಳು, ‘ವೆಂಟಿಲೇಟರ್’ಗಳು ಹಾಗೂ ಮಾದರಿ ಸಂಗ್ರಹ ಉತ್ಪನ್ನಗಳಂತಹ ನಿರ್ಣಾಯಕ ಉಪಕರಣಗಳನ್ನು ತಯಾರಿಸುವಲ್ಲಿ ಅವು ಪ್ರಮುಖ ಪಾತ್ರ ವಹಿಸಿದವು.
ಉದ್ಯಮಶೀಲತೆ ಸಂಸ್ಕೃತಿ :
‘ಸ್ಟಾರ್ಟ್ಅಪ್ ಇಂಡಿಯಾ’ ಅಭಿಯಾನವು ದೇಶಾದ್ಯಂತ ಉದ್ಯಮಶೀಲತೆ ಮನಸ್ಥಿತಿಯನ್ನು ಗಮನಾರ್ಹವಾಗಿ ಪರಿವರ್ತಿಸಿದೆ. ಒಂದು ಕಾಲದಲ್ಲಿ ಕುಟುಂಬಗಳು ಸುಭದ್ರ ಉದ್ಯೋಗಕ್ಕಾಗಿ ಹುಡುಕುತ್ತಿದ್ದವು. ಆದರೆ, ಇಂದು ಅದೇ ಕುಟುಂಬದವರು ತಮ್ಮ ಮನೆಯ ಯುವಜನತೆಯ ಉದ್ಯಮಶೀಲತೆ ಸಾಹಸಗಳನ್ನು ಪ್ರೋತ್ಸಾಹಿಸುತ್ತಾರೆ ಮತ್ತು ಅವರ ಬಗ್ಗೆ ಹೆಮ್ಮೆ ಪಡುತ್ತಾರೆ. ಇದು ನಮ್ಮ ಸಶಕ್ತ ಯುವಕರನ್ನು ಉದ್ಯೋಗಾಕಾಂಕ್ಷಿಗಳಾಗುವ ಬದಲು ಉದ್ಯೋಗ ಸೃಷ್ಟಿಕರ್ತರಾಗಲು ಪ್ರೇರೇಪಿಸುತ್ತಿದೆ.
ಅಂತಹ ಶಕ್ತಿಯಿಂದ ಹುಟ್ಟಿದ ಉದ್ಯಮಗಳು ಹೊಸ ಎತ್ತರಕ್ಕೆ ಏರುತ್ತಿವೆ. ಉದ್ಯಮ ವಲಯದ ಅಂದಾಜಿನ ಪ್ರಕಾರ, ಒಂದು ಶತಕೋಟಿ ಡಾಲರ್ಗಿಂತ ಅಧಿಕ ಮೌಲ್ಯವನ್ನು ಹೊಂದಿರುವ ಭಾರತೀಯ ‘ಯುನಿಕಾರ್ನ್’ಗಳ ಸಂಖ್ಯೆ 2016ಕ್ಕಿಂತ ಮೊದಲು 10ಕ್ಕಿಂತ ಕಡಿಮೆ ಇತ್ತು. ಇಂದು ಅವುಗಳ ಸಂಖ್ಯೆ 110 ಕ್ಕಿಂತ ಹೆಚ್ಚಾಗಿದೆ.
ಸಾರ್ವಜನಿಕ ಖರೀದಿ ವೇದಿಕೆ ಬೆಂಬಲ :
ನಮ್ಮ ಸರಕಾರವು ಅರ್ಹ ನವೋದ್ಯಮಗಳಿಗೆ ‘ಸರಕಾರಿ ಇ ಮಾರುಕಟ್ಟೆ ವೇದಿಕೆ’ಯಲ್ಲಿ(ಜಿಇಎಂ) ಆದ್ಯತೆ ಮೇರೆಗೆ ವಿಶೇಷ ಅವಕಾಶವನ್ನು ಕಲ್ಪಿಸಿದೆ. ಈ ವೇದಿಕೆಯು ಸರಕಾರಿ ಇಲಾಖೆಗಳಿಗೆ ಉತ್ಪನ್ನಗಳನ್ನು ಮಾರಾಟ ಮಾಡಲು ವರ್ತಕರಿಗೆ ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತ ಪ್ರವೇಶವನ್ನು ಒದಗಿಸುತ್ತದೆ. ಆ ಮೂಲಕ ಇದು ಉದ್ಯಮಿಗಳಿಗೆ ಸಂಕೀರ್ಣ ಕಾರ್ಯವಿಧಾನಗಳು ಮತ್ತು ಈ ಮೊದಲು ಇದ್ದಂತಹ ಪಟ್ಟಭದ್ರ ಹಿತಾಸಕ್ತಿಗಳಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ.
ಸಾರ್ವತ್ರಿಕ ಮಾರುಕಟ್ಟೆ ಪ್ರವೇಶ, ಸುಲಭ ಉತ್ಪನ್ನ ನೋಂದಣಿ ಮತ್ತು ಸಾರ್ವಜನಿಕ ಖರೀದಿಗೆ ಸಂಬಂಧಿಸಿದಂತೆ ಕನಿಷ್ಠ ವಹಿವಾಟು ಮಿತಿ ಹಾಗೂ ಅನುಭವದ ಅವಧಿಯಲ್ಲಿ ಸಡಿಲಿಕೆಯಿಂದಾಗಿ ಈವರೆಗೆ 29,780 ಸರಕಾರಿ ಮತ್ತು ನೋಂದಾಯಿತ ನವೋದ್ಯಮಗಳಿಗೆ 37,460 ಕೋಟಿ ರೂ.ಗಳ ಮೌಲ್ಯದ 4,09,155 ಆರ್ಡರ್ಗಳನ್ನು ಪೂರೈಸಲು ‘ಜಿಇಎಂ’ ಅನುವು ಮಾಡಿಕೊಟ್ಟಿದೆ.
ನವ ಭಾರತದ ದಾರಿದೀಪಗಳು :
ಇಂದು, ನವೋದ್ಯಮಗಳು ‘ನವ ಭಾರತ’ದ ಭರವಸೆಯ ದೀಪಗಳಾಗಿವೆ. ಅಭಿವೃದ್ಧಿ ಹೊಂದುತ್ತಿರುವ ನವೋದ್ಯಮ ಪರಿಸರ ವ್ಯವಸ್ಥೆಯು ನಮ್ಮ ನಾಗರಿಕರ ‘ಜೀವನ ಸುಗಮತೆ’ಯನ್ನು ಸುಧಾರಿಸಲು ಭಾರತೀಯ ಆರ್ಥಿಕತೆಯನ್ನು ಪರಿವರ್ತಿಸುತ್ತಿದೆ.
ಪ್ರಯಾಗರಾಜ್ನಲ್ಲಿ ನಡೆದ ‘ಮಹಾಕುಂಭ’ವು ಭಾರತದ ಆಧ್ಯಾತ್ಮಿಕ ವೈಭವವನ್ನು ಜಗತ್ತಿಗೆ ಪ್ರದರ್ಶಿಸಿತು ಮತ್ತು ನಮ್ಮ ಯುವಕರು ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ನಂಬಿಕೆಗಳನ್ನು ಹೆಮ್ಮೆಯಿಂದ ಸ್ವೀಕರಿಸುವಂತೆ ಮಾಡಿತು. ಪ್ರಧಾನಿ ಮೋದಿ ಅವರು ನಿರ್ಮಿಸಿದ ಮತ್ತು ಪೋಷಿಸಿದ ನವೋದ್ಯಮ ಪರಿಸರ ವ್ಯವಸ್ಥೆಯು ಉದ್ಯಮಶೀಲತೆ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಯುವಕರಿಗೆ ಸಹಾಯ ಮಾಡುತ್ತಿದೆ, ಇದು ಭಾರತವನ್ನು ನಾವೀನ್ಯತೆ, ಹೊಸ ತಂತ್ರಜ್ಞಾನ ಮತ್ತು ಹೊಸ ಆಲೋಚನೆಗಳ ಜಾಗತಿಕ ಶಕ್ತಿಕೇಂದ್ರವನ್ನಾಗಿ ಮಾಡುತ್ತದೆ.
-ಪಿಯೂಷ್ ಗೋಯಲ್, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು