ಚುನಾವಣಾ ಬಾಂಡ್: ಬಿಜೆಪಿ ಪಡೆದ ದೇಣಿಗೆ ಇತರೆಲ್ಲರಿಗಿಂತ ಮೂರು ಪಟ್ಟು ಹೆಚ್ಚು!
ಶ್ರಾವಸ್ತಿ ದಾಸ್‌ಗುಪ್ತ
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಹೊಸ ವರದಿಯ ಪ್ರಕಾರ, ಬಿಜೆಪಿಯ ರಾಜಕೀಯ ದೇಣಿಗೆಗಳಲ್ಲಿ ಶೇ.52ಕ್ಕಿಂತ ಹೆಚ್ಚು ಅಂದರೆ 5,271.97 ಕೋಟಿ ರೂ. ಚುನಾವಣಾ ಬಾಂಡ್‌ಗಳಿಂದಲೇ ಬಂದಿದೆ. ಇತರ ಎಲ್ಲಾ ರಾಷ್ಟ್ರೀಯ ಪಕ್ಷಗಳು ಚುನಾವಣಾ ಬಾಂಡ್‌ನಿಂದ ಸಂಗ್ರಹಿಸಿರುವುದು 1,783.93 ಕೋಟಿ ರೂ.
ನೋಂದಾಯಿತ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ 2016-17ರಿಂದ 2021-22ರವರೆಗೆ ಬಂದ ದೇಣಿಗೆಗಳ ವಿಶ್ಲೇಷಣೆ ಎಂಬ ಹೆಸರಿನ ವರದಿಯಲ್ಲಿ, 31 ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ - ಏಳು ರಾಷ್ಟ್ರೀಯ ಪಕ್ಷಗಳು ಮತ್ತು 24 ಪ್ರಾದೇಶಿಕ ಪಕ್ಷಗಳು ಈ ಅವಧಿಯಲ್ಲಿ ಬಂದಿರುವ ದೇಣಿಗೆಗಳ ವಿವರಗಳನ್ನು ಚರ್ಚಿಸಲಾಗಿದೆ.
ಚುನಾವಣಾ ನಿಧಿಯ ಉದ್ದೇಶಕ್ಕಾಗಿ 2018ರಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಪರಿಚಯಿಸಿದ್ದ ರಿಂದ ಆರು ವರ್ಷಗಳ ಅವಧಿ ಮಹತ್ವದ್ದಾಗಿದೆ ಎಂದು ವರದಿ ಹೇಳಿದೆ. ಯಾಕೆಂದರೆ, ಕಂಪೆನಿಗಳು ಮೂರು ವರ್ಷಗಳ ಸರಾಸರಿ ನಿವ್ವಳ ಲಾಭದ ಶೇ.7.5ರಷ್ಟನ್ನು ಮಾತ್ರ ರಾಜಕೀಯ ದೇಣಿಗೆಗಾಗಿ ಬಳಸಬಹುದೆಂಬ ಮಿತಿಯನ್ನು ಹಣಕಾಸು ಕಾಯ್ದೆ 2017 ತೆಗೆದುಹಾಕಿತು. 2018ರ ಯೋಜನೆಯ ಅಡಿಯಲ್ಲಿ ದೇಣಿಗೆ ನೀಡಿದ ಕಂಪೆನಿಗಳು ಯಾವ ರಾಜಕೀಯ ಪಕ್ಷಗಳಿಗೆ ಕೊಡಲಾಗಿದೆ ಎಂಬುದನ್ನು ಬಹಿರಂಗಪಡಿಸುವುದರ ಅಗತ್ಯವಿಲ್ಲ.
2019ರ ಸಾರ್ವತ್ರಿಕ ಚುನಾವಣೆಗಳ ಅವಧಿಯಲ್ಲಿ ಏಳು ರಾಷ್ಟ್ರೀಯ ಪಕ್ಷಗಳು ಮತ್ತು 24 ಪ್ರಾದೇಶಿಕ ಪಕ್ಷಗಳು ಘೋಷಿಸಿದ ಒಟ್ಟು ದೇಣಿಗೆ ಕ್ರಮವಾಗಿ 13,190.68 ಕೋಟಿ ರೂ. (ಒಟ್ಟು ದೇಣಿಗೆಯ ಶೇ.80) ಮತ್ತು 3,246.95 ಕೋಟಿ ರೂ. ಎಂದು ವರದಿ ಹೇಳಿದೆ.
ರಾಷ್ಟ್ರೀಯ ಪಕ್ಷಗಳಲ್ಲಿ ಬಿಜೆಪಿ ಘೋಷಿಸಿದ ಒಟ್ಟು ದೇಣಿಗೆ ಇತರ ಎಲ್ಲಾ ರಾಷ್ಟ್ರೀಯ ಪಕ್ಷಗಳು ಘೋಷಿಸಿದ ಒಟ್ಟು ದೇಣಿಗೆಯ ಮೂರು ಪಟ್ಟು ಹೆಚ್ಚು. ಈ ಆರು ವರ್ಷಗಳ ಅವಧಿಯಲ್ಲಿ ಬಿಜೆಪಿಯ ಒಟ್ಟು ದೇಣಿಗೆಯಲ್ಲಿ ಶೇ.52ಕ್ಕಿಂತ ಹೆಚ್ಚು ಅಂದರೆ 5,271.97 ಕೋಟಿ ರೂ. ಚುನಾವಣಾ ಬಾಂಡ್‌ಗಳಿಂದ ಬಂದಿದೆ ಎಂದು ವರದಿ ಹೇಳಿದೆ.
ಕಾಂಗ್ರೆಸ್ ತನ್ನ ಒಟ್ಟು ದೇಣಿಗೆಯಲ್ಲಿ ಕೇವಲ ಶೇ.60ರಷ್ಟು ಪಾಲನ್ನು ಅಂದರೆ 952.29 ಕೋಟಿ ರೂ.ಗಳನ್ನು ಬಾಂಡ್‌ಗಳಿಂದ ಪಡೆದಿದ್ದು, ಎರಡನೇ ಅತಿ ಹೆಚ್ಚು ದೇಣಿಗೆ ಪಡೆದ ಪಕ್ಷವಾಗಿದೆ.
ನಂತರದ ಸ್ಥಾನದಲ್ಲಿರುವ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ), 767.88 ಕೋಟಿ ರೂ. ದೇಣಿಗೆ ಪಡೆದಿರುವುದಾಗಿ ಘೋಷಿಸಿಕೊಂಡಿತು, ಅದರ ಒಟ್ಟು ದೇಣಿಗೆಯಲ್ಲಿ ಬಾಂಡ್‌ಗಳಿಂದ ಬಂದಿರುವುದು ಸುಮಾರು ಶೇ.93ರಷ್ಟು.
ಪ್ರಾದೇಶಿಕ ಪಕ್ಷಗಳಲ್ಲಿ, ಬಿಜು ಜನತಾ ದಳ (ಬಿಜೆಡಿ) 622 ಕೋಟಿ ರೂ.ಗಳ ಒಟ್ಟು ದೇಣಿಗೆಯಲ್ಲಿ ಸುಮಾರು ಶೇ.90ರಷ್ಟನ್ನು ಚುನಾವಣಾ ಬಾಂಡ್‌ಗಳಿಂದ ಪಡೆದಿದೆ.
ಪ್ರಾದೇಶಿಕ ಪಕ್ಷಗಳಲ್ಲಿ ಬಾಂಡ್‌ಗಳ ಮೂಲಕ ಎರಡನೇ ಅತಿ ಹೆಚ್ಚು ದೇಣಿಗೆ ಪಡೆದ ಪಕ್ಷ ಡಿಎಂಕೆ. ಅದರ ಮೊತ್ತ 431.50 ಕೋಟಿ ರೂ. ಇದು ಒಟ್ಟು ದೇಣಿಗೆಯ ಶೇ.90.7ರಷ್ಟು.
ಇದರ ನಂತರದ ಸ್ಥಾನದಲ್ಲಿರುವ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ತನ್ನ ಒಟ್ಟು ದೇಣಿಗೆಯ ಶೇ.80.45ರಷ್ಟನ್ನು ಅಂದರೆ 383.65 ಕೋಟಿ ರೂ.ಗಳನ್ನು ಬಾಂಡ್ ಮೂಲಕ ಪಡೆದಿದೆ. ವೈಎಸ್‌ಆರ್‌ಸಿಪಿ ತನ್ನ ಒಟ್ಟು ದೇಣಿಗೆಯ ಶೇ.72.4ರಷ್ಟನ್ನು ಅಂದರೆ 330.44 ಕೋಟಿ ರೂ.ಗಳನ್ನು ಬಾಂಡ್‌ಗಳಿಂದ ಪಡೆದಿರುವುದಾಗಿ ಘೋಷಿಸಿತ್ತು.
ಬಿಜೆಪಿ ಘೋಷಿಸಿದ ಕಾರ್ಪೊರೇಟ್ ದೇಣಿಗೆಗಳು ಇತರ ಎಲ್ಲಾ ರಾಷ್ಟ್ರೀಯ ಪಕ್ಷಗಳ ಒಟ್ಟು ಕಾರ್ಪೊರೇಟ್ ದೇಣಿಗೆಗಳಿಗಿಂತ ಕನಿಷ್ಠ ಮೂರ್ನಾಲ್ಕು ಪಟ್ಟು ಹೆಚ್ಚು ಎಂದು ವರದಿ ತಿಳಿಸುತ್ತದೆ. ಅಂದರೆ ಇದು 2017-18ರಲ್ಲಿ ಇತರ ಎಲ್ಲಾ ರಾಷ್ಟ್ರೀಯ ಪಕ್ಷಗಳು ಪಡೆದಿದ್ದ ದೇಣಿಗೆಗಿಂತ 18 ಪಟ್ಟು ಹೆಚ್ಚು.
ಈ ಅವಧಿಯಲ್ಲಿ ಪ್ರಾದೇಶಿಕ ಪಕ್ಷಗಳು ಘೋಷಿಸಿದ ನೇರ ಕಾರ್ಪೊರೇಟ್ ದೇಣಿಗೆಗಳು ಶೇ.152ರಷ್ಟು ಹೆಚ್ಚಿವೆ.
ಕಾರ್ಪೊರೇಟ್ ದೇಣಿಗೆಗಳ ಬಗ್ಗೆ ಘೋಷಿಸದ ಏಕೈಕ ಪಕ್ಷ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ವಾದರೆ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 2018-19ರಿಂದ 2021-22ರವರೆಗೆ ಕಾರ್ಪೊರೇಟ್ ದೇಣಿಗೆ ಗಳನ್ನು ಸ್ವೀಕರಿಸಿಲ್ಲ ಎಂದು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
2019ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದಾಗ ಅತಿ ಹೆಚ್ಚು ದೇಣಿಗೆಗಳನ್ನು ರಾಜಕೀಯ ಪಕ್ಷಗಳು ಸ್ವೀಕರಿಸಿರುವುದಾಗಿ ವರದಿ ಹೇಳಿದೆ. 2019-20ರಲ್ಲಿ, 4,863.5 ಕೋಟಿ ರೂ. ಮೌಲ್ಯದ ದೇಣಿಗೆಗಳನ್ನು ಚುನಾವಣಾ ಬಾಂಡ್‌ಗಳ ರೂಪದಲ್ಲಿ ಪಡೆದರೆ, 2018-19ರಲ್ಲಿ 4,041.4 ಕೋಟಿ ಮತ್ತು 2021-22ರಲ್ಲಿ 3,826.56 ಕೋಟಿ ರೂ. ಪಡೆಯಲಾಗಿದೆ.
ಚುನಾವಣಾ ಬಾಂಡ್ ಯೋಜನೆ ಅದರ ಪಾರದರ್ಶಕತೆಯ ಕೊರತೆಯಿಂದಾಗಿ ಟೀಕೆಗೊಳಗಾಗಿದೆ. ಅದರ ಸಾಂವಿಧಾನಿಕತೆ ಪ್ರಶ್ನಿಸುವ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ಜನವರಿಯಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸುವ ಅರ್ಜಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಲು ಮೂರು ಸೆಟ್‌ಗಳಾಗಿ ವರ್ಗೀಕರಿಸಿತು.
ಸುಪ್ರೀಂ ಕೋರ್ಟ್‌ನಲ್ಲಿರುವ ಈ ಅರ್ಜಿಗಳು, ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆ, 2005ರ ವ್ಯಾಪ್ತಿಗೆ ತರಬೇಕೇ ಎಂಬ ಪ್ರಶ್ನೆಯನ್ನು ಎತ್ತಿವೆ. ಮಾತ್ರವಲ್ಲ, 2016 ಮತ್ತು 2018 ರ ಹಣಕಾಸು ಕಾಯ್ದೆ ಮೂಲಕ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ, 2010ರ ತಿದ್ದುಪಡಿಯನ್ನು ಕೂಡ ಪ್ರಶ್ನಿಸಿವೆ.
(ಕೃಪೆ: thewire.in)