ಈ ಗೆಲುವು, ಸೋಲುಗಳ ನೈಜ ಕಾರಣಗಳು
ಅಯೋಧ್ಯೆಯ ಬಾಬರಿ ಮಸೀದಿಯನ್ನು ನೆಲಸಮಗೊಳಿಸಿದ ನಂತರ ಅದರ ರಾಜಕೀಯ ಲಾಭ ಪಡೆದ ಬಿಜೆಪಿ ನಂತರದ ಚುನಾವಣೆಗಳಲ್ಲೆಲ್ಲ ಅದೇ ಕೋಮು ವಿಭಜನೆಯ ಅಸ್ತ್ರವನ್ನು ಬಳಸಿ ಗೆಲ್ಲುತ್ತ ಬಂತು. ತೊಂಬತ್ತರ ದರಕ್ಕಿಂತ ಮುಂಚೆ ಲೋಕಸಭೆಯಲ್ಲಿ ಕೇವಲ ಎರಡು ಸ್ಥಾನ ಹೊಂದಿದ್ದ ಬಿಜೆಪಿ ನಂತರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತ ಈಗ ಕೇಂದ್ರದ ಅಧಿಕಾರ ಸೂತ್ರ ಹಿಡಿದಿದೆ. ಕೆಲವು ರಾಜ್ಯಗಳಲ್ಲಿ ಸರಕಾರಗಳನ್ನು ಹೊಂದಿದೆ. ಈಗ ಮತ್ತೆ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣ ಬಿಟ್ಟು ಉಳಿದೆಡೆ ಗೆಲುವಿನ ನಗೆ ಬೀರುತ್ತಿದೆ. ಈ ಹುರುಪಿನಿಂದ ಮುಂದಿನ ವರ್ಷದ ಲೋಕಸಭಾ ಚುನಾವಣೆಯನ್ನು ಗೆಲ್ಲಲು ತಯಾರಿ ನಡೆಸುತ್ತಿದೆ. ಆದರೆ ಈ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ನೀಡುವ ಸಂದೇಶ ಯಾವುದು? ಗೆಲುವಿಗೆ ನೈಜ ಕಾರಣ ಯಾವುದು?
ಯಾವುದೇ ಚುನಾವಣೆ ಗೆಲುವಿಗೆ ಒಂದೇ ಕಾರಣವಿರುವುದಿಲ್ಲ. ಬಿಜೆಪಿಯ ಕೋಮು ಧ್ರುವೀಕರಣದ ರಾಜಕಾರಣ ಜೊತೆಗೆ ಕರ್ನಾಟಕದ ಕಾಂಗ್ರೆಸ್ ಗೆಲುವಿಗೆ ಒಂದು ಕಾರಣವಾದ ಗ್ಯಾರಂಟಿ ಮಾದರಿಯ ಜನಕಲ್ಯಾಣ ಯೋಜನೆಗಳ ಅಸ್ತ್ರವನ್ನು ಬಿಜೆಪಿ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ಗಡಗಳಲ್ಲಿ ಪ್ರಯೋಗಿಸಿತು. ಇದಿಷ್ಟೆ ಅಲ್ಲ ರಾಜಸ್ಥಾನದಲ್ಲಿನ ಆಡಳಿತ ವಿರೋಧಿ ಅಲೆ ಬಿಜೆಪಿಗೆ ನೆರವಾದಂತೆ ತೆಲಂಗಾಣದಲ್ಲಿ ಟಿ.ಆರ್.ಎಸ್. ಆಡಳಿತ ವಿರೋಧಿ ಅಲೆ ಕಾಂಗ್ರೆಸ್ಗೆ ಅನುಕೂಲ ಮಾಡಿತು.
ಸೂಕ್ಷ್ಮವಾಗಿ ಗಮನಿಸಿದರೆ ಉತ್ತರ ಭಾರತದ ರಾಜ್ಯಗಳು ಬಹುತೇಕ ಬಿಜೆಪಿ ಪರವಾಗಿ ವಾಲುತ್ತಿದ್ದರೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿ ಸ್ವಂತ ಬಲದಿಂದ ನೆಲೆಯೂರುವುದು ಸುಲಭವಲ್ಲ.
ಈ ವರೆಗೆ ಸುಳ್ಳು ಸುದ್ದಿಗಳು ಮತ್ತು ವಾಟ್ಸ್ಆ್ಯಪ್ ಯುನಿವರ್ಸಿಟಿಗಳ ಮೂಲಕ ಜನಸಾಮಾನ್ಯರ ಅದೂ ಮೂವತ್ತರೊಳಗಿನ ಹುಡುಗರ ತಲೆಯಲ್ಲಿ ಜನಾಂಗ ದ್ವೇಷದ ವಿಷ ತುಂಬಿ ಬಿಜೆಪಿ ಸಾಕಷ್ಟು ರಾಜಕೀಯ ಲಾಭ ಮಾಡಿಕೊಂಡಿತು. ನಾಗಪುರದ ನಿಯಂತ್ರಣಕ್ಕೊಳಪಡದ ಎಲ್.ಕೆ.ಅಡ್ವಾಣಿ ಅವರನ್ನು ಮೂಲೆಗುಂಪು ಮಾಡಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿಯನ್ನು ದಿಲ್ಲಿಗೆ ತಂದು ಕೂರಿಸುವಲ್ಲಿ ನಾಗಪುರದ ಗುರುಗಳು ಯಶಸ್ವಿಯಾದರು. ಇದಕ್ಕೆ ಕಾರ್ಪೊರೇಟ್ ಲೋಕವೂ ಬೆಂಬಲವಾಗಿ ನಿಂತಿತು. ನೈಜ ಆರ್ಥಿಕ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರು ಯೋಚಿಸದಂತೆ ಮಾಡಲು ಅವರನ್ನು ದಿಕ್ಕು ತಪ್ಪಿಸಿ ಕೋಮು ಉನ್ಮಾದದ ಅಲೆಯಲ್ಲಿ ತೇಲಿಸಲಾಯಿತು. ಇದೆಲ್ಲದರ ಪರಿಣಾಮವಾಗಿ ಕಳೆದ ಒಂಭತ್ತು ವರ್ಷಗಳಲ್ಲಿ ಭಾರತ ಎಲ್ಲಿಗೆ ಬಂದು ತಲುಪಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಬರೀ ಭಾವನಾತ್ಮಕ ವಿಷಯಗಳನ್ನು ಮುಂದೆ ಮಾಡಿ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ಕಲಿತಿರುವುದು ಅದರ ಚುನಾವಣಾ ತಂತ್ರದ ಇತ್ತೀಚಿನ ಬದಲಾವಣೆಯಿಂದ ಸ್ಪಷ್ಟವಾಗುತ್ತದೆ.
ಯುವಕರನ್ನು ಮತ್ತು ಜನಸಾಮಾನ್ಯರನ್ನು ಕೋಮು ಆಧಾರದಲ್ಲಿ ವಿಭಜಿಸಿ ರಾಜಕೀಯ ಲಾಭ ಮಾಡಿಕೊಳ್ಳುತ್ತ ಬಂದವರ ಮುಂದಿನ ಗುರಿ ಸಂವಿಧಾನ ಬದಲಾವಣೆ ಮತ್ತು ಮನುವಾದಿ ಹಿಂದೂರಾಷ್ಟ್ರ ನಿರ್ಮಾಣವಾಗಿತ್ತು. ಆದರೆ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಈ ಲೆಕ್ಕಾಚಾರ ಉಲ್ಟಾ ಆಯಿತು. ಕರ್ನಾಟಕ ಬಹುತ್ವದ ಭೂಮಿ, ರಾಷ್ಟ್ರ ಕವಿ ಕುವೆಂಪು ಅವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಕೋಮು ವಿಭಜನೆಯ ರಾಜಕಾರಣ ನಡೆಯುವುದಿಲ್ಲ ಎಂಬುದನ್ನು ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಸಾರಿ ಹೇಳಿತು. ಇಲ್ಲಿ ಕೋಮು ರಾಜಕಾರಣಕ್ಕೆ ಅಡ್ಡಿಯಾಗಬಾರದೆಂದು ಯಡಿಯೂರಪ್ಪ ಮತ್ತು ಜಗದೀಶ್ಶೆಟ್ಟರ್ ಅವರಂಥ ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡಿ ಜನಾಂಗ ದ್ವೇಷದ ಉರಿ ಕಾರುವ ಪಡ್ಡೆಗಳಿಗೆ ಪ್ರೋತ್ಸಾಹ ನೀಡಿದ್ದು ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನೇರವಾಗಿ ತಾವೇ ಚುನಾವಣಾ ಪ್ರಚಾರಕ್ಕೆ ಇಳಿದರು.ಒಂದು ತಿಂಗಳು ಈ ರಾಜ್ಯವನ್ನು ಬಿಟ್ಟು ಹೋಗಲಿಲ್ಲ. ಆದರೆ ಕಾಂಗ್ರೆಸಿನ ಗ್ಯಾರಂಟಿ ಯೋಜನೆಗಳ ಮುಂದೆ ಜನಾಂಗ ದ್ವೇಷದ ಕೋಮು ರಾಜಕಾರಣ ತಲೆ ಕೆಳಗಾಯಿತು.
ಕರ್ನಾಟಕದ ವಿಧಾನಸಭೆ ಚುನಾವಣೆಯನ್ನು ಗೆಲ್ಲಲು ಹಿಜಾಬ್, ಲವ್ ಜಿಹಾದ್, ಗೋ ಹತ್ಯೆ, ಮತಾಂತರ, ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಮ್ ವರ್ತಕರಿಗೆ ನಿರ್ಬಂಧ ಹೀಗೆ ನಾನಾ ಕಸರತ್ತುಗಳನ್ನು ಮಾಡಿ ಹಿಂದುತ್ವದ ಅಮಲೇರಿಸಲು ಮಸಲತ್ತು ಮಾಡಿದರೂ ಇಂಥ ಕೆಲಸಕ್ಕೆ ಬಾರದ ವಿಷಮ ವಿಷಯಗಳಿಂದ ಹೊಟ್ಟೆ ತುಂಬುವುದಿಲ್ಲ, ಬದುಕು ಹಸನಾಗುವುದಿಲ್ಲ ಎಂಬುದನ್ನು ಅರಿತುಕೊಂಡ ಕರ್ನಾಟಕದ ಮತದಾರರು ಬಿಜೆಪಿ ಮತ್ತು ಅದರ ವರಿಷ್ಠ ನಾಯಕರು ಮುಟ್ಟಿ ನೋಡಿಕೊಳ್ಳುವಂತೆ ಸೋಲಿಸಿದರು.
ಕರ್ನಾಟಕದ ಸೋಲಿನಿಂದ ಪಾಠ ಕಲಿತ ಬಿಜೆಪಿ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕೋಮು ವಿಭಜನೆಯ ರಾಜಕಾರಣದ ಜೊತೆಗೆ ಮಹಿಳೆಯರಿಗೆ ತಿಂಗಳಿಗೆ ೧,೨೫೦ ಪಿಂಚಣಿ, ಅಡುಗೆ ಅನಿಲ ಸಿಲಿಂಡರ್ಗೆ ೫೦೦ ರೂ., ವಿದ್ಯಾರ್ಥಿನಿಯರಿಗೆ ನೂರು ಸ್ಕೂಟರ್, ೨೦೦ ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಭರವಸೆಯನ್ನು ನೀಡಿ ಪ್ರಚಾರ ಮಾಡಿತು.
ಇದು ಮೋದಿ ಸರಕಾರದ ಅಭಿವೃದ್ಧಿ ಕಾರ್ಯಕ್ರಮದ ಭಾಗ ಎಂದು ಬಿಜೆಪಿ ನಾಯಕರು ಹೇಳಿಕೊಂಡರೂ ಇದು ಬದಲಾಗಿರುವ ಬಿಜೆಪಿಯ ಅನುಕೂಲ ಸಿಂಧು ಕಾರ್ಯಕ್ರಮ ಎಂದು ಪ್ರತಿಪಕ್ಷ ನಾಯಕರು ಮಾಡುತ್ತಿರುವ ಟೀಕೆಯಲ್ಲಿ ಹುರುಳಿಲ್ಲದಿಲ್ಲ.ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ೧,೨೫೦ ರೂ. ನೀಡುವುದಾಗಿ ಬಿಜೆಪಿ ಮುಖ್ಯ ಮಂತ್ರಿ ಶಿವರಾಜ್ಸಿಂಗ್ ಚೌಹಾಣ್ ಭರವಸೆ ನೀಡಿದ್ದಾರೆ.ಆದರೆ ಪ್ರಧಾನಿ ಮೋದಿಯವರು ಇಂಥ ಜನಕಲ್ಯಾಣ ಕಾರ್ಯಕ್ರಮಗಳನ್ನು ಕಟುವಾಗಿ ಟೀಕಿಸುತ್ತಿದ್ದರು ಎಂಬುದನ್ನು ಮರೆಯಲು ಆಗುವುದಿಲ್ಲ. ಇದಕ್ಕಾಗಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೆಜ್ರಿವಾಲರನ್ನು ಕಟುವಾಗಿ ಟೀಕಿಸಿದ್ದ ಮೋದಿಯವರು ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ರಾಗ ಬದಲಿಸಿದರು.
ಕೋಮು ದ್ವೇಷದ ಹಿಂದುತ್ವವನ್ನು ಸೋಲಿಸಿದ ಕರ್ನಾಟಕದ ಗ್ಯಾರಂಟಿ ಎಂಬ ಜನಕಲ್ಯಾಣದ ಕಾರ್ಯಕ್ರಮಗಳನ್ನು ನೋಡಿ ತನ್ನ ಚುನಾವಣಾ ತಂತ್ರಗಳನ್ನು ಬದಲಿಸಿಕೊಂಡ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಈಗ ಮಹಿಳೆಯರಿಗೆ ಮಾಸಾಶನ, ಉಚಿತ ಆಹಾರ ಧಾನ್ಯ, ಉಚಿತ ವಿದ್ಯುತ್ ನೀಡಲು ಹೊರಟಿದೆ. ನಾಗಪುರ ಶಾಲೆಯ ಪಾಠ ಎಲ್ಲ ಸಂದರ್ಭಗಳಲ್ಲೂ ಉಪಯೋಗಕ್ಕೆ ಬರುವುದಿಲ್ಲ ಎಂದು ಅರಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಕರ್ನಾಟಕ ಕಾಂಗ್ರೆಸ್ನ ಗೆಲುವಿನ ತಂತ್ರಗಳನ್ನು ಮಾದರಿಯಾಗಿಟ್ಟುಕೊಂಡು ಹೊಸ ರಾಜಕಾರಣ ಮಾಡಲು ಹೊರಟಿದ್ದಾರೆ.
ಇದೆಲ್ಲದರ ಜೊತೆಗೆ ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಕಾಂಗ್ರೆಸ್ ಒಳಜಗಳ ಅದರ ಸೋಲಿಗೆ ಕಾರಣವಾಯಿತು. ರಾಜಸ್ಥಾನದಲ್ಲಿ ಜನಪ್ರಿಯ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ವಿರುದ್ಧ ಕುರ್ಚಿಗಾಗಿ ಸಚಿನ್ ಪೈಲಟ್ ನಿರಂತರವಾಗಿ ನಡೆಸುತ್ತ ಬಂದ ಗುಂಪುಗಾರಿಕೆ ರಾಜಕಾರಣ ಕಾಂಗ್ರೆಸ್ನ ಮುಳುವಾಯಿತು.ಮಧ್ಯಪ್ರದೇಶದಲ್ಲಿ ಈ ಹಿಂದೆ ದೊರೆತ ಅಧಿಕಾರವನ್ನು ಉಳಿಸಿಕೊಳ್ಳಲಾಗದ ಕಾಂಗ್ರೆಸ್ನ ಒಳಜಗಳ ಈ ಸಲದ ಚುನಾವಣೆಯ ಮೇಲೂ ಪರಿಣಾಮ ಬೀರಿತು.
ಈ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆಯೇ ಎನ್ನುವ ಬಗ್ಗೆ ಈಗಲೇ ಹೇಳಲು ಆಗುವುದಿಲ್ಲವಾದರೂ ಬಹುದೊಡ್ಡ ವಿರೋಧ ಪಕ್ಷವಾದ ಕಾಂಗ್ರೆಸ್ ಪಕ್ಷ ಉಳಿದ ಪ್ರತಿಪಕ್ಷಗಳನ್ನು ಮತ್ತು ಪ್ರಾದೇಶಿಕ ಪಕ್ಷಗಳನ್ನು ಒಂದು ಗೂಡಿಸಿಕೊಂಡು ಚುನಾವಣಾ ಕಣಕ್ಕೆ ಇಳಿದರೆ ಗೆಲುವಿನ ಅವಕಾಶಗಳಿವೆ. ತಾನು ಏಕಾಂಗಿಯಾಗಿ ಗೆದ್ದು ಅಧಿಕಾರಕ್ಕೆ ಬರಬೇಕೆಂಬ ಭ್ರಮೆಯಿಂದ ಕಾಂಗ್ರೆಸ್ ಹೊರಗೆ ಬರಬೇಕು. ಬಹುತ್ವ ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗಾಗಿ ಕಾಂಗ್ರೆಸ್ ಪಕ್ಷ ವಿಶಾಲವಾದ ಕೋಮುವಾದಿ ವಿರೋಧಿ ರಂಗ ಕಟ್ಟಲು ಮುಂದಾಗಬೇಕು. ಎಲ್ಲ ಸಂದರ್ಭಗಳಲ್ಲೂ ಗ್ಯಾರಂಟಿ ಯೋಜನೆಗಳು ಕೈ ಹಿಡಿಯುವುದಿಲ್ಲ. ಲೋಕಸಭಾ ಚುನಾವಣೆಗೆ ಹೊಸ ತಂತ್ರ ರೂಪಿಸಲು ಪ್ರತಿಪಕ್ಷಗಳು
ಮುಂದಾಗಬೇಕಾಗಿದೆ.