ಇತಿಹಾಸದ ಹುಣ್ಣುಗಳು, ‘ಭಾರತ’ದ ಕುರುಡುಗಳು ಮತ್ತು ಹಿಂದುತ್ವದ ಹುನ್ನಾರಗಳು
ಮಣಿಪುರದ ದುರಂತ ಕಥನ
ಭಾಗ - 1
ಮಣಿಪುರದ ಕುಕಿ ಜನಾಂಗಕ್ಕೆ ಸೇರಿದ ಮೂವರು ಮಹಿಳೆಯರನ್ನು ಮೈತೈ ಜನಾಂಗಕ್ಕೆ ಸೇರಿದ ನೂರಾರು ಪುರುಷರು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿ, ಒಬ್ಬ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ಅದನ್ನು ತಡೆಯಲು ಬಂದ ಆಕೆಯ ಅಣ್ಣ ಮತ್ತು ತಂದೆಯನ್ನು ಭೀಕರವಾಗಿ ಕೊಂದುಹಾಕಿದ ವೀಡಿಯೊ, ಮಣಿಪುರದ ವಿಷಯದಲ್ಲಿ ಸತ್ತು ಮಲಗಿದ್ದ ಭಾರತದ ಅಂತರಾತ್ಮವನ್ನು ಸ್ವಲ್ಪಮಟ್ಟಿಗಾದರೂ ಬಡಿದು ಎಚ್ಚರಿಸಿದಂತಿದೆ.
ದೇಶದ ಹಲವಾರು ಕಡೆ ಇದರ ಬಗ್ಗೆ ತೀವ್ರವಾದ ಪ್ರತಿಭಟನೆಗಳು ಹುಟ್ಟಿಕೊಂಡಿವೆ. ಇದರಿಂದಾಗಿ ಇತ್ತೀಚೆಗೆ ತಾನೇ ಅಮೆರಿಕ ಪ್ರವಾಸದಲ್ಲಿ ‘‘ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ. ದೇಶದ ಜನರ ನರನಾಡಿಗಳಲ್ಲಿ ಪ್ರಜಾತಂತ್ರ ಪ್ರವಹಿಸುತ್ತಿದೆ’’ ಎಂದು ಕೊಚ್ಚಿಕೊಂಡು ಬಂದಿದ್ದ ಪ್ರಧಾನಿ ಮೋದಿ ಮಣಿಪುರದ ಬಗ್ಗೆ ವಹಿಸಿದ್ದ ಮೌನವನ್ನು ಮುರಿದು ಸೋಗಲಾಡಿ ಮಾತುಗಳಲ್ಲಿ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಬೇಕಾಯಿತು.
ಆದರೆ ಅದು ಹಿಂಸಾಚಾರಗಳ ಖಂಡನಾ ಹೇಳಿಕೆಯಾಗಿರಲೇ ಇಲ್ಲ. ಏಕೆಂದರೆ ಪ್ರಧಾನಿಗಳ ಆಕ್ರೋಶವಿದ್ದದ್ದು ಮಣಿಪುರದಲ್ಲಿ ತನ್ನದೇ ಸರಕಾರದ ಬೆಂಬಲದೊಂದಿಗೆ ಮೈತೈ ದುರಭಿಮಾನಿ ಸಂಘಟನೆಗಳು ನಡೆಸುತ್ತಿರುವ ನರಮೇಧದಂತಹ ದೌರ್ಜನ್ಯಗಳ ಬಗ್ಗೆ ಅಲ್ಲ. ಬದಲಿಗೆ ಆ ಹಿಂಸಾಚಾರ ಬಹಿರಂಗಗೊಂಡು ತನಗೂ ಮತ್ತು ತನ್ನ ಸರಕಾರಕ್ಕೂ ಹುಟ್ಟಿಸಿರುವ ಮುಜುಗರದ ಬಗ್ಗೆ !. ಆ ಹೇಳಿಕೆಯಲ್ಲಿ ದಯೆ, ಕರುಣೆ, ವ್ಯಥೆಗಳಿಗಿಂತ ಈ ಬೆಳವಣಿಗೆ ಬಿಜೆಪಿಯ ವಿರುದ್ಧದ ಅಸ್ತ್ರವಾಗಿ ಬಳಕೆಯಾಗುವುದನ್ನು ತಡೆಯುವ ಅವಸರವಿತ್ತು. ಹೀಗಾಗಿ ಮಣಿಪುರದ ಹಿಂಸಾಚಾರಗಳ ಬಗ್ಗೆ ಅವರು ಈವರೆಗೆ ವಹಿಸಿಕೊಂಡು ಬಂದಿದ್ದ ಮೌನದ ಕ್ರೌರ್ಯಕ್ಕಿಂತ ಮೌನಮುರಿದು ಆಡಿದ ಮಾತುಗಳ ಕ್ರೌರ್ಯವೇ ಹೆಚ್ಚು ಭೀಕರವಾಗಿತ್ತು. ಮೋದಿಯವರು ಮುತ್ಸದ್ದಿ, ವಿಶ್ವಗುರು ಎಂದೆಲ್ಲಾ ಅವರ ಭಟ್ಟಂಗಿಗಳು ಎಷ್ಟೇ ಕೊಚ್ಚಿಕೊಂಡರೂ, ಭಾರತದ ಈ ಪ್ರಧಾನಿ ಎಷ್ಟು ಕುಬ್ಜ ಹಾಗೂ ಅಮಾನುಷ ಧೋರಣೆಯುಳ್ಳ ರಾಜಕಾರಣಿ ಯಷ್ಟೆ ಎಂಬುದನ್ನು ಅವರ ಹೇಳಿಕೆಗಳು ಮತ್ತೊಮೆ ಸಾಬೀತು ಪಡಿಸಿದವು.
ಇದೇ ಧೋರಣೆ ಸಂಸತ್ತಿನಲ್ಲೂ ಮುಂದುವರಿದಿದೆ. ಸಂಸತ್ತಿನಲ್ಲಿ ಮಣಿಪುರದ ಬಗ್ಗೆ ವಿಸ್ತೃತ ಚರ್ಚೆ ಮಾಡಬೇಕೆಂದು ವಿರೋಧ ಪಕ್ಷಗಳು ಮಾಡುತ್ತಿರುವ ಹಕ್ಕೊತ್ತಾಯವನ್ನು ಬಿಜೆಪಿ ಸರಕಾರ ನಿರಾಕರಿಸುತ್ತಾ ಸಂಸತ್ ನಡೆಯದಂತೆ ಮಾಡಿದೆ.
ವಾಸ್ತವದಲ್ಲಿ ಕುಕಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದದ್ದು ಎರಡು ತಿಂಗಳ ಹಿಂದೆ. ಮೇ 4ರಂದು. ಅದರ ಬಗ್ಗೆ ಮೇ 18ರಂದೇ ಒಂದು ದೂರನ್ನು ಆ ಕುಟುಂಬದವರು ದಾಖಲಿಸಿದ್ದರು. ಆದರೂ ಆ ವೀಡಿಯೊಗಳು ವೈರಲ್ ಆಗಿ ಜಗತ್ತಿನ ಗಮನಕ್ಕೆ ಬರುವವರೆಗೆ ಮೈತೈ ದುರಭಿಮಾನಿ ಬಿಜೆಪಿ ಮುಖ್ಯಮಂತ್ರಿ ಬಿರೇನ್ ಸಿಂಗ್ ಸರಕಾರ ಅದರ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿರಲಿಲ್ಲ. ಈ ವೀಡಿಯೊ ಬಯಲಾದ ನಂತರ ಕೊಟ್ಟ ಸಂದರ್ಶನವೊಂದರಲ್ಲಿ ‘‘ಕಳೆದ ಎರಡು ತಿಂಗಳಲ್ಲಿ ಇಂತಹ ನೂರಾರು ಪ್ರಕರಣಗಳು ನಡೆದಿವೆ’’ ಎಂದು ಒಪ್ಪಿಕೊಳ್ಳುತ್ತಾ ಇದೇನೂ ಅಂತಹ ಮಹತ್ವದ್ದಲ್ಲ ಎಂಬಂತೆ ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗವೂ ಕೂಡ ಈ ವಿಷಯ ತನ್ನ ಗಮನಕ್ಕೆ ಬಂದ ಮೇಲೆ ಹಲವಾರು ಪತ್ರಗಳನ್ನು ಬರೆದಿದ್ದರೂ ಬಿರೇನ್ ಸರಕಾರ ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಕುಕಿಗಳ ವಿರುದ್ಧ ಮೈತೈಗಳು ಸರಕಾರದ ಬೆಂಬಲದೊಂದಿಗೆ ನಡೆಸುತ್ತಿರುವ ಏಕಪಕ್ಷೀಯ ಹಿಂಸಾಚಾರಕ್ಕೆ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ನೇರ ಸಹಕಾರ ಮತ್ತು ರಕ್ಷಣೆ ಇದೆಯೆಂದು ಬಿಜೆಪಿಗೇ ಸೇರಿದ ಹಲವಾರು ಕುಕಿ ಶಾಸಕರು ಆಪಾದಿಸಿದ್ದಾರೆ. ಇಷ್ಟೆಲ್ಲಾ ಆದರೂ ಪ್ರಧಾನಿ ಮೋದಿ ತನ್ನ ಹೇಳಿಕೆಯಲ್ಲಿ ಮಣಿಪುರದ ಮುಖ್ಯಮಂತ್ರಿಯ ಬಗ್ಗೆ ಒಂದು ಆಕ್ಷೇಪಣೆಯನ್ನ್ನೂ ಮಾಡದೆ ಕಾಂಗ್ರೆಸ್ ರಾಜ್ಯಗಳಲ್ಲೂ ಇಂಥದ್ದು ನಡೆಯುತ್ತಿಲ್ಲವೇ ಎಂದು ಕೇಳುತ್ತಾ ತನ್ನ ಪಕ್ಷದ ಸರಕಾರವನ್ನು ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಏಕೆಂದರೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2002ರಲ್ಲಿ ಮೋದಿ ಏನು ಮಾಡಿದ್ದರೋ ಅದನ್ನೇ ಈಗ ಮಣಿಪುರದಲ್ಲಿ ಬಿರೇನ್ ಸಿಂಗ್ ಮಾಡುತ್ತಿದ್ದಾರೆ!
ಈಗ ಪ್ರಧಾನಿ ಹೇಳಿಕೆ ಕೊಟ್ಟ ಸುಳಿವನ್ನೇ ಆಧಾರವಾಗಿಸಿಕೊಂಡು ಬಿಜೆಪಿ ಮತ್ತು ಸಂಘಪರಿವಾರದ ನಾಯಕಗಣ ಮತ್ತು ಪ್ರಚಾರ ಯಂತ್ರಗಳು ಮಣಿಪುರದಲ್ಲಿ ನಡೆಯುತ್ತಿರುವ ದಾರುಣ ಹಿಂಸಾಚಾರಗಳನ್ನು ಸಮರ್ಥಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಅದರಲ್ಲಿ ಬಿಜೆಪಿಯೇತರ ರಾಜ್ಯಗಳಾದ ಪ. ಬಂಗಾಳ, ರಾಜಸ್ಥಾನ ಇತ್ಯಾದಿ ರಾಜ್ಯಗಳಲ್ಲಿ ಇಂತಹ ಹಿಂಸಾಚಾರಗಳು ನಡೆದಿಲ್ಲವೇ ‘‘ನೀವೇನು ಸಾಚಾನಾ’’ ಎಂಬ ವಾದಗಳು ಒಂದು ಬಗೆಯದ್ದಾಗಿದ್ದರೆ, ಮಣಿಪುರದ ಇತಿಹಾಸ ಮತ್ತು ವರ್ತಮಾನವನ್ನು ತಿರುಚುವ, ಸಂತ್ರಸ್ತ ಕುಕಿ ಸಮುದಾಯವನ್ನು ದುರುಳೀಕರಿಸುವ ಮತ್ತು ಹಿಂಸಾಚಾರಗಳಲ್ಲಿ ತೊಡಗಿರುವ ಮೈತೈಗಳನ್ನೇ ಬಲಿಪಶುಗಳಾಗಿ ಚಿತ್ರಿಸುವ ಹಲವಾರು ಸುಳ್ಳುಗಳನ್ನು, ಅರ್ಧ ಸತ್ಯಗಳನ್ನು ಪ್ರಚಾರ ಮಾಡುತ್ತಾ ಮಣಿಪುರದಲ್ಲಿ ನಡೆಯುತ್ತಿರುವ ಕುಕಿಗಳ ನರಮೇಧವನ್ನು ಸಮರ್ಥಿಸಿಕೊಳ್ಳುವುದು ಮತ್ತೊಂದು ಬಗೆ. ಈ ಎರಡೂ ಬಗೆಯ ಫೇಕ್ ಕಥನಗಳ ಮೂಲಕ ಬೆತ್ತಲೆ ಮೆರವಣಿಗೆ ಬಯಲಾದ ನಂತರ ಬಿಜೆಪಿ ಸರಕಾರದ ವಿರುದ್ಧ ಸೃಷ್ಟಿಯಾಗಿರುವ ಆಕ್ರೊಶ ಹಾಗೂ ಅಸಮಾಧಾನಗಳನ್ನು ರಾಷ್ಟ್ರೀಯ ಭದ್ರತೆ, ಅಖಂಡ ಭಾರತ ಮತ್ತು ಹಿಂದೂ ರಾಷ್ಟ್ರದ ರಾಜಕಾರಣಿಗಳ ಮೂಲಕ ಸಮರ್ಥಿಸಿಕೊಳ್ಳಲು ಬಿಜೆಪಿ ಹಾಗೂ ಸಂಘ ಪರಿವಾರದವರು ಹೊರಟಿದ್ದಾರೆ.
ಬಿಜೆಪಿ ಸರಕಾರ ತನ್ನ ಕುಮ್ಮಕ್ಕಿನೊಂದಿಗೆ ಮೈತೈ ದುರಭಿಮಾನಿ ಸಂಘಟನೆಗಳು ನಡೆಸುತ್ತಿರುವ ಕುಕಿಗಳ ನರಮೇಧವನ್ನು ಸಮರ್ಥಿಸಲು ಈ ವಾದಗಳನ್ನು ಮುಂದಿಡುತ್ತಿದ್ದಾರೆ:
-ಮಣಿಪುರದಲ್ಲಿ ಕುಕಿಗಳು ಬಹುಸಂಖ್ಯಾತರು ಮತ್ತು ಪ್ರಭಾವಿಗಳು. ಮೈತೈಗಳು ಅಲ್ಪಸಂಖ್ಯಾತರು ಮತ್ತು ದುರ್ಬಲರು.
- ಆದ್ದರಿಂದಲೇ ಮೈತೈಗಳು ತಮಗೂ ಎಸ್ಟಿ ಮೀಸಲಾತಿ ಕೇಳುತ್ತಿದ್ದಾರೆ. ಅದನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿದೆ. ಕೋರ್ಟನ್ನೂ ಧಿಕ್ಕರಿಸಿ ಕುಕಿಗಳು ಬೀದಿಗಿಳಿದಿದ್ದಾರೆ.
- ಕುಕಿಗಳು ಮೈತೈಗಳ ಮೇಲೆ ದಾಳಿ ಮಾಡಲು ಪೊಲೀಸ್ ಠಾಣೆಗಳಿಂದ ಲೂಟಿ ಮಾಡಿದ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ.
-ಬಿಜೆಪಿಯ ಬಿರೇನ್ ಸರಕಾರ ಮಣಿಪುರದಲ್ಲಿ ನಡೆಯುವ ಗಾಂಜಾ ಕೃಷಿಯನ್ನು ನಿಲ್ಲಿಸಲು ಕ್ರಮ ತೆಗೆದುಕೊಂಡಿದೆ. ಬಹುಪಾಲು ಕುಕಿಗಳು ಅಫೀಮು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಆದ್ದರಿಂದಲೇ ಅವರು ಬಿರೇನ್ ಸರಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.
-ಪಕ್ಕದ ಮ್ಯಾನ್ಮಾರ್ ದೇಶದಲ್ಲಿ ಅಂತರ್ಯುದ್ಧ ಪ್ರಾರಂಭವಾದ ಮೇಲೆ ಸಾವಿರಾರು ಕುಕಿಗಳು ಮಣಿಪುರಕ್ಕೆ ಬರುತ್ತಿದ್ದಾರೆ. ಅದರಿಂದ ಕುಕಿಗಳ ಜನಸಂಖ್ಯೆ ಹೆಚ್ಚಿ ಮೈತೈ ಜನಸಂಖ್ಯೆ ಕಡಿಮೆಯಾಗುತ್ತಿದೆ.
- ಕುಕಿಗಳು ಕ್ರಿಶ್ಚಿಯನ್ನರು. ಮೈತೈಗಳು ಹಿಂದೂಗಳು. ಹಿಂದೂಗಳ ಮೇಲೆ ದಾಳಿ ಮಾಡಲು ಕುಕಿಗಳಿಗೆ ಚರ್ಚು ಸಹಾಯ ಮಾಡುತ್ತಿದೆ.
ಇವೇ ಇನ್ನಿತ್ಯಾದಿ.
ಇವುಗಳಲ್ಲಿ ಮೇಲ್ನೋಟಕ್ಕೆ ಹಲವು ಸುಳ್ಳುಗಳು ಎದ್ದು ಕಾಣುತ್ತವೆ. ಉದಾಹರಣೆಗೆ :
1. ಮಣಿಪುರದಲ್ಲಿ ಹಿಂದೂ ಮೈತೈಗಳ ಜನಸಂಖ್ಯೆ ಶೇ. 53. ಕುಕಿಗಳು ಶೇ. 17 ಮತ್ತು ನಾಗಾಗಳು ಶೇ. 26. ಹೀಗಾಗಿ ಮಣಿಪುರದಲ್ಲಿ ಬಹುಸಂಖ್ಯಾತರು ಮೈತೈಗಳೇ ಹೊರತು ಕುಕಿಗಳಲ್ಲ. ಮೈತೈಗಳಲ್ಲಿ ಶೇ. 90ರಷ್ಟು ಹಿಂದೂಗಳು ಮತ್ತು ತಮ್ಮನ್ನು ಅವರು ಕುಕಿ ಅಥವಾ ನಾಗಾಗಳ ರೀತಿ ಬುಡಕಟ್ಟು ಜನರೆಂದು ಕರೆದುಕೊಳ್ಳುವುದು ಈವರೆಗೆ ಅವಮಾನವೆಂದು ಭಾವಿಸಿದ್ದರು. ತಾವು ನಾಗಾ ಮತ್ತು ಕುಕಿಗಳಿಗಿಂತ ಶ್ರೇಷ್ಠರು ಎಂಬುದೇ ಅವರ ನಿಲುವು.
(https://www.idsa.in/issuebrief/The-Unfolding-Kuki-Meitei-Conflict-pdas-260523)
2. ಕುಕಿಗಳಲ್ಲಿ ಶೇ. 95ರಷ್ಟು ಜನ ಕ್ರಿಶ್ಚಿಯನ್ನರು. ಆದರೆ ಅದು ಅವರ ಧಾರ್ಮಿಕ ಗುರುತು ಮಾತ್ರ. ಉಳಿದಂತೆ ಕುಕಿ ಹಾಗೂ ನಾಗಾಗಳಿಗೂ ತಮ್ಮ ಬುಡಕಟ್ಟು ಗುರುತೇ ಪ್ರಧಾನವಾದದ್ದು.
3. ಮೈತೈಗಳಲ್ಲಿ ಶೇ. 90ರಷ್ಟು ಭಾಗ ಫಲವತ್ತಾದ ಇಂಫಾಲ ಕಣಿವೆಯಲ್ಲಿ ವಾಸಿಸುತ್ತಾರೆ. ಕುಕಿ ಮತ್ತು ನಾಗಾಗಳು ಗುಡ್ಡಗಾಡಿನಲ್ಲಿ ವಾಸಿಸುತ್ತಾರೆ. ಗುಡ್ಡಗಾಡು ಮಣಿಪುರದ ಶೇ. 90ರಷ್ಟು ಭೂಭಾಗವನ್ನು ಆವರಿಸಿದ್ದರೂ ಅಲ್ಲಿ ಹೆಚ್ಚೇನೂ ಬೆಳೆಯಲು ಅಥವಾ ಜೀವನೋಪಾಯ ನಡೆಸಲು ಸಾಧ್ಯವಿಲ್ಲ. ಇಂಫಾಲ ಕಣಿವೆ ಮಣಿಪುರದ ಶೇ. 10ರಷ್ಟು ಭೂಭಾಗದಷ್ಟು ಮಾತ್ರವಿದ್ದರೂ ಫಲವತ್ತಾದ ಹಾಗೂ ಅಭಿವೃದ್ಧಿ ಹೊಂದಿದ ಭೂ ಭಾಗವಾಗಿದೆ.
4. ಈ ಕಾರಣಗಳಿಂದ ಐತಿಹಾಸಿಕವಾಗಿ ಕಣಿವೆಯಲ್ಲಿನ ಮೈತೈಗಳು ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರಿದಿದ್ದಾರೆ. ಕುಕಿ ಬುಡಕಟ್ಟು ಜನ ಹೋಲಿಕೆಯಲ್ಲಿ ಹೆಚ್ಚಾಗಿ ಹಿಂದುಳಿದಿದ್ದಾರೆ.
5. 60 ಶಾಸಕರ ಮಣಿಪುರ ಶಾಸನ ಸಭೆಯಲ್ಲೂ 19 ಸ್ಥಾನಗಳು ಮಾತ್ರ ಬುಡಕಟ್ಟುಗಳಿಗೆ ಮೀಸಲು. ಉಳಿದದ್ದು ಮೈತೈಗಳೇ. ಈವರೆಗೆ ಮಣಿಪುರದಲ್ಲಿ ಒಬ್ಬನೇ ಒಬ್ಬ ಕುಕಿ ಮುಖ್ಯಮಂತ್ರಿಯಾಗಿಲ್ಲ. ಮೈತೈಗಳೇ ಅಲ್ಲಿ ಮುಖ್ಯಮಂತ್ರಿಗಳು. ಶೈಕ್ಷಣಿಕವಾಗಿಯೂ ಮೈತೈಗಳೇ ಮುಂದುವರಿದಿರುವುದರಿಂದ ಹಾಗೂ ಅವರಿಗೆ ಹಿಂದೂ ಸಮುದಾಯದೊಳಗೆ ಎಸ್ಟಿ, ಒಬಿಸಿ ಮತ್ತು ಈಗ ಇಡಬ್ಲ್ಯುಎಸ್ ಮಿಸಲಾತಿಯೂ ಸಿಗುವುದರಿಂದ ಶೇ. 80ಕ್ಕೂ ಹೆಚ್ಚು ಸರಕಾರಿ ಹುದ್ದೆ ಮತ್ತು ಅವಕಾಶಗಳು ಮೈತೈಗಳಿಗೇ ಸಿಕ್ಕಿದೆ.
6. ಭೌಗೋಳಿಕ ಕಾರಣಗಳಿಂದಾಗಿಯೂ ಕೇಂದ್ರೀಯ ಸಂಸ್ಥೆಗಳು, ಆಸ್ಪತ್ರೆ, ಕಾಲೇಜುಗಳು, ಇರುವ ಅಲ್ಪಸ್ವಲ್ಪಉದ್ದಿಮೆಗಳು ಸಹ ಮೈತೈಗಳು ಇರುವ ಕಣಿವೆ ಭಾಗದಲ್ಲಿ ಕೇಂದ್ರೀಕರಣಗೊಂಡಿವೆಯೇ ವಿನಾ ಕುಕಿ-ನಾಗಾಗಳಿರುವ ಗುಡ್ಡಗಾಡು ಪ್ರದೇಶಗಳಲ್ಲಲ್ಲ.
7. ಆದರೆ ಇಂಫಾಲ ಕಣಿವೆ ಪ್ರದೇಶ ಕೇವಲ ಶೇ.10ರಷ್ಟು ಭೂಭಾಗ ಮಾತ್ರವಿದ್ದು, ಇತರ ಯಾವುದೇ ಅಭಿವೃದ್ಧಿ ಅವಕಾಶಗಳೂ ಮಣಿಪುರದಲ್ಲಿ ಕಳೆದ 75 ವರ್ಷಗಳಲ್ಲಿ ಯಾವ ಸರಕಾರವೂ ಕಲ್ಪಿಸದಿರುವುದರಿಂದ ಮೈತೈಗಳು ಗುಡ್ಡಗಾಡು ಪ್ರದೇಶಗಳಲ್ಲೂ ಭೂಮಿ ಪಡೆದುಕೊಳ್ಳುವ ಸೌಲಭ್ಯವನ್ನು ಆಗ್ರಹಿಸುತ್ತಿದ್ದರು. ಆದರೆ ಮೈತೈಗಳು ತಮ್ಮನ್ನು ಟ್ರೈಬ್ ಎಂದು ಗುರುತಿಸಿಕೊಳ್ಳಲು ನಿರಾಕರಿಸಿ ಹಿಂದೂ ಧರ್ಮವನ್ನು ಅಪ್ಪಿಕೊಂಡು ಅದರೊಳಗೆ ಲಭ್ಯವಾಗುವ ಒಬಿಸಿ, ಎಸ್ಸಿ ಸೌಲಭ್ಯವನ್ನು ಪಡೆದುಕೊಳ್ಳುತ್ತಿರುವುದರಿಂದ ಮೈತೈಗಳಿಗೆ ಗುಡ್ಡಗಾಡು ಪ್ರದೇಶದಲ್ಲಿ ಭೂಮಿ ಪಡೆದುಕೊಳ್ಳುವ ಅಧಿಕಾರವಿಲ್ಲ. ಹೀಗಾಗಿ ಮೈತೈಗಳು ಕಳೆದ ಕೆಲವು ವರ್ಷಗಳಿಂದ ತಮ್ಮನ್ನು ಎಸ್ಟಿಯೆಂದು ವರ್ಗೀಕರಿಸಬೇಕೆಂದು ಹೋರಾಟ ಮಾಡುತ್ತಿದ್ದಾರೆ.
8. ಆದರೆ ಕುಕಿ-ನಾಗಾ ಬುಡಕಟ್ಟು ಜನಾಂಗಗಳಿಗೆ ಇರುವ ಏಕೈಕ ರಕ್ಷಣೆ ಎಸ್ಟಿ ಮೀಸಲಾತಿ ಮತ್ತು ಅದರಿಂದ ಸಿಗುವ ರಕ್ಷಣೆ. ಹೀಗಾಗಿ ಈಗಾಗಲೇ ತಮಗಿಂತ ಎಷ್ಟೋ ಪಾಲು ಅಭಿವೃದ್ಧಿ ಹೊಂದಿರುವ ಮೈತೈಗಳಿಗೆ ಎಸ್ಟಿ ಸ್ಥಾನಮಾನ ನೀಡಿದರೆ ತಮ್ಮ ಭೂಮಿಯನ್ನು ಒಳಗೊಂಡಂತೆ ಇತರ ಎಲ್ಲಾ ಅವಕಾಶಗಳನ್ನು ಮೈತೈಗಳು ಕಸಿಯುವ ಆತಂಕವನ್ನು ನಾಗಾ ಕುಕಿಗಳು ಎದುರಿಸುತ್ತಿದ್ದಾರೆ. ಹೀಗಾಗಿ ಮೈತೈಗಳನ್ನು ಎಸ್ಟಿ ಎಂದು ಪರಿಗಣಿಸಬಾರದೆಂದು ಅವರು ವಿರೋಧಿಸುತ್ತಿದ್ದಾರೆ.
9. ಇದರ ನಡುವೆ 2017ರಲ್ಲಿ ಅಧಿಕಾರಕ್ಕೆ ಬಂದ ಮೈತೈ ಜನಾಂಗಕ್ಕೆ ಸೇರಿದ ಬಿರೇನ್ ಸಿಂಗ್ ಹಿಂದೂ ಮೈತೈಗಳ ಪರವಾಗಿ ಕುಕಿಗಳ ವಿರುದ್ಧ ಹಲವು ಬಗೆಯ ಆಡಳಿತಾತ್ಮಕ ಸಮರವನ್ನೇ ಸಾರಿದರು. ಮೈತೈಗಳ ಬುಡಕಟ್ಟು ಅನನ್ಯತೆಗಿಂತ ಹೆಚ್ಚಾಗಿ ಹಿಂದೂ ಅನನ್ಯತೆಯನ್ನು ಪೋಷಿಸುವ ಮತ್ತು ಅದನ್ನು ಹಿಂದುತ್ವವಾದಿ ಮತ್ತು ಹಿಂದೂ ರಾಷ್ಟ್ರ ಅಜೆಂಡಾದೊಂದಿಗೆ ಸಮೀಕರಿಸುವ ಹಲವಾರು ವ್ಯವಸ್ಥಿತ ಯೋಜನೆಗಳನ್ನು ಪ್ರಾರಂಭಿಸಿದರು. ಅದರ ಭಾಗವಾಗಿ ಮೈತೈ ಪುನರುತ್ಥಾನವಾದಿ ಮತ್ತು ದುರಭಿಮಾನಿ ಆರಂಭೈ ತೆಂಗೋಲ್ ಮತ್ತು ಹಿಂದುತ್ವವಾದಿ ಮೈತೈ ಲೀಪುನ್ ಎಂಬ ಸಶಸ್ತ್ರ ಆಕ್ರಮಣಕಾರಿ ಸಂಘಟನೆಗಳಿಗೆ ಪ್ರೋತ್ಸಾಹ ನೀಡಿದರು.
(https://www.thehindu.com/news/national/probe-role-of-cm-rajya-sabha-mp-in-fuelling-violence-manipur-tribal-body/article66915888.ece)
10. ಅದರ ಭಾಗವಾಗಿಯೇ ಮೈತೈಗಳಿಗೆ ಎಸ್ಟಿ ಸ್ಥಾನಮಾನ ಕೊಡಬೇಕೆಂಬ ಅಹವಾಲಿನ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂಬ ೨೦೨೩ರ ಎಪ್ರಿಲ್ನ ಹೈಕೋರ್ಟ್ ಆದೇಶವನ್ನು ಜಾರಿ ಮಾಡ ಹೊರಟರು. ಆಗ ಸಹಜವಾಗಿಯೇ ಅದರ ವಿರುದ್ಧ ಎಲ್ಲಾ ಬುಡಕಟ್ಟು ಜನಾಂಗಗಳು ಮೇ ೩ರಂದು ಶಾಂತಿಯುತ ಹೋರಟ ಪ್ರಾರಂಭಿಸಿದರು. ಅದರ ವಿರುದ್ಧ ಮೈತೈ ಸಂಘಟನೆಗಳು ಜನರ ಉನ್ಮಾದವನ್ನು ಬಡಿದೆಬ್ಬಿಸಿ ಮೇ ೪ರ ಬೆತ್ತಲೆ ಮೆರವಣಿಗೆ, ಕೊಲೆ-ಸುಲಿಗೆ ಇತ್ಯಾದಿ ಹೇಯ ಆಕ್ರಮಣಗಳಿಗೆ ಇಳಿದರು. ಇದಕ್ಕೆ ಪ್ರತಿಯಾಗಿ ಕುಕಿಗಳು ಸಹ ಹಿಂಸಾತ್ಮಕ ರಕ್ಷಣೆಗಳಿಗೆ ಇಳಿದರು.
11. ಅದೇನೇ ಇರಲಿ. ಸುಪ್ರೀಂ ಕೋರ್ಟ್ ಮೈತೈ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡುವ ಬಗ್ಗೆ ಹೈಕೋರ್ಟ್ ನೀಡಿರುವ ಆದೇಶ ಅಕ್ರಮ ಎಂದು ಘೋಷಿಸಿ ತಡೆಯಾಜ್ಞೆ ನೀಡಿತು. ಹೀಗಾಗಿ ಕುಕಿಗಳು ಸುಪ್ರೀಂ ಕೋರ್ಟಿನ ವಿರುದ್ಧವಾಗಿ ಬೀದಿಗಿಳಿದದ್ದು ಎಂಬುದು ಬಿಜೆಪಿ ಪ್ರಚಾರ ಮಾಡುತ್ತಿರುವ ಹಸಿಸುಳ್ಳು.
(https://www.livelaw.in/top-stories/manipur-violence-supreme-court-meitei-scheduled-tribe-st-list-228251)
12. ಮಣಿಪುರ ಪೊಲೀಸರು ಮತ್ತು ಆ ನಂತರ ರಕ್ಷಣೆ ಉಸ್ತುವಾರಿ ಹೊತ್ತ ಭಾರತ ಸೇನೆಯು ಕೊಟ್ಟಿರುವ ಅಂಕಿಅಂಶಗಳ ಪ್ರಕಾರ ಈವರೆಗೆ 6.32 ಲಕ್ಷ ಬುಲೆಟ್ಟುಗಳನ್ನು, ಎಕೆ-೪೭ನಂಥ ಆಧುನಿಕ ಶಸ್ತ್ರಾಸ್ತ್ರಗಳನ್ನು ಒಳಗೊಂಡಂತೆ 4,568 ಶಸ್ತ್ರಸ್ತ್ರಗಳನ್ನು ಪೊಲೀಸ್ ಮತ್ತು ಸೇನಾ ಠಾಣೆಗಳಿಂದ ಲೂಟಿ ಮಾಡಲಾಗಿದೆ. ಇದರಲ್ಲಿ ಸೇನೆಯ ಪ್ರಕಾರವೇ ಶೇ. ೯೫ರಷ್ಟು ಲೂಟಿ ಮಾಡಿರುವುದು ಮೈತೈ ಆಕ್ರಮಣಕಾರಿ ಸಂಘಟನೆಗಳು.
(https://www.indiatodayne.in/manipur/story/manipur-violence-warring-groups-still-in-possession-of-over-6-lakh-bullets-3000-weapons-claims-officials-617461-2023-07-19)
13. ಅಷ್ಟು ಮಾತ್ರವಲ್ಲದೆ ಸೇನೆಯೇ ಬಿಡುಗಡೆ ಮಾಡಿರುವ ಒಂದು ವೀಡಿಯೊ ಪ್ರಕಾರ ಮೈತೈ ಮಹಿಳೆಯರು ಕುಕಿಗಳ ಮೇಲೆ ಹಿಂಸಾಚಾರ ನಡೆದಾಗ ಸಹಾಯಕ್ಕೆ ಹೋಗುವ ಸೇನಾ ವಾಹನಗಳನ್ನು ತಡೆದು ನಿಲ್ಲಿಸಿ ಕುಕಿಗಳ ವಿರುದ್ಧ ಹಿಂಸಾಚಾರ ನಿರಾತಂಕವಾಗಿ ಮುಂದುವರಿಯಲು ಅವಕಾಶ ಮಾಡಿಕೊಡುತ್ತಿದ್ದಾರೆ.
(https://twitter.com/i/status/1673378371013857280)
14. ಇನ್ನು ಅಫೀಮು ಬೆಳೆಯ ವಿಷಯಕ್ಕೆ ಬಂದರೆ ಮಣಿಪುರದಲ್ಲಿ ಅಫೀಮು ಸಾಗಣೆ ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಬೆಳೆಯು ಹೆಚ್ಚುತ್ತಿರುವುದು ನಿಜ. ಆದರೆ ಅದು ಕೇವಲ ಕುಕಿಗಳಿಗೆ ಸೀಮಿತವಾದ ವ್ಯವಹಾರವಲ್ಲ. ಮಣಿಪುರದ ಪೊಲೀಸ್ ಅಧಿಕಾರಿಗಳೇ ಕೊಟ್ಟಿರುವ ಅಂಕಿಅಂಶಗಳ ಪ್ರಕಾರ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ 2017-23ರ ನಡುವೆ ಅಫೀಮು ಬೆಳೆ ಮತ್ತು ಸಾಗಣೆಯ ಅಪರಾಧಕ್ಕಾಗಿ 2,518 ಜನರನ್ನು ಬಂಧಿಸಲಾಗಿದೆ. ಅದರಲ್ಲಿ 873 ಜನರು ಮಾತ್ರ ಕುಕಿಗಳು. ಉಳಿದವರು ಪ್ರಧಾನವಾಗಿ ಮೈತೈಗಳು. ಅವರನ್ನು ಬಿಟ್ಟರೆ ನಾಗಾಗಳು. ಆದರೆ ಇದಕ್ಕೆ ಪ್ರಧಾನ ಕಾರಣ ಗುಡ್ಡಗಾಡು ಪ್ರದೇಶಗಳಲ್ಲಿ ಇತರ ಜೀವನಾವಕಾಶವೇ ದುಸ್ತರವಾಗುತ್ತಿರುವುದು ಮತ್ತು ಈ ಅಫೀಮು ಉದ್ಯಮದಿಂದ ಹೊಟ್ಟೆಪಾಡು ಸುಲಭವಿರುವುದು. ಆದರೂ ಈ ಉದ್ಯಮದಲ್ಲಿ ಅತ್ಯಂತ ಹೆಚ್ಚು ಲಾಭ ಮಾಡಿಕೊಳ್ಳುತ್ತಿರುವುದು ಬಿರೇನ್ ಸರಕಾರದ ಕ್ಯಾಬಿನೆಟ್ ಸದಸ್ಯರೇ ಎಂದು ಬಿಜೆಪಿ ಶಾಸಕರೇ ಪ್ರಧಾನಿಗೆ ಪತ್ರ ಬರೆದಿದ್ದರು. ಹೀಗಾಗಿ ಬಿರೇನ್ ಸಿಂಗ್ ಅಫೀಮಿನ ವಿರುದ್ಧ ಯುದ್ಧ ಸಾರಿದ್ದರೆಂಬುದೂ ಸುಳ್ಳು ಅಥವಾ ಅದರಿಂದ ಬಾಧಿತರಾದ ಕುಕಿಗಳು ಮಾತ್ರ ಈ ಸಂಘರ್ಷದಲ್ಲಿ ತೊಡಗಿದ್ದಾರೆಂಬುದು ಕೂಡಾ ಸುಳ್ಳೇ.
(https://c.ndtvimg.com/2023-05/fhhf4vl_manipur-drugs-arrest_625x300_16_May_23.png)
15. ಅದೇ ರೀತಿ ಪಕ್ಕದ ಮ್ಯಾನ್ಮಾರ್ನಿಂದ ನಿರಂತರವಾಗಿ ಕುಕಿ ಜನಾಂಗಕ್ಕೆ ಸೇರಿದ ನಿರಾಶ್ರಿತರು ಹರಿದು ಬರುತ್ತಿರುವುದರಿಂದ ಕುಕಿಗಳ ಸಂಖ್ಯೆ ಹೆಚ್ಚಾಗುತ್ತಾ ಮೈತೈಗಳು ಅಲ್ಪಸಂಖ್ಯಾತರಾಗುತ್ತಿದ್ದಾರೆ ಎಂಬುದು ಕುಕಿಗಳ ಮೇಲಿನ ಮೈತೈ ದಾಳಿಗಳನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ಮಾಡುತ್ತಿರುವ ಮತ್ತೊಂದು ಅತ್ಯುತ್ಪ್ರೇಕ್ಷೆ. ಅವರು ಹೇಳುತ್ತಿರುವ ಸುಳ್ಳಿನ ಪ್ರಕಾರ 1901ರ ಜನಗಣತಿಯ ಪ್ರಕಾರ ಕುಕಿಗಳು ಕೇವಲ ಶೇ. 1ರಷ್ಟಿದ್ದರು ಮತ್ತು ಅವರ ಜನಸಂಖ್ಯೆ ಈಗ ಶೇ. 26 ಆಗಿಬಿಟ್ಟಿದೆ. ಮೈತೈಗಳ ಸಂಖ್ಯೆ ಶೇ. 67 ರಷ್ಟಿದ್ದದ್ದು ಈಗ ಶೇ.40ಕ್ಕಿಂತ ಕಡಿಮೆಯಾಗಿದೆ ಇತ್ಯಾದಿ. ಆದರೆ ವಾಸ್ತವದಲ್ಲಿ 1901ರಲ್ಲಿ ಮೈತೈಗಳ ಜನಸಂಖ್ಯೆ ಇದ್ದದ್ದು ಶೇ. 57. ಈಗ ಅದು ಶೇ. 53ರಷ್ಟಿದೆ. ಕುಕಿಗಳ ಜನಸಂಖ್ಯೆ 1901ರಲ್ಲಿ ಇದ್ದದ್ದು ಶೇ. 1 ಅಲ್ಲ. ಶೇ. 15.
(https://twitter.com/th_robert/status/1658539251414470656?lang=en)
ಅಷ್ಟು ಮಾತ್ರವಲ್ಲ. ಭಾರತದ ಅಧಿಕೃತ ಸೆನ್ಸಸ್ ಸಂಸ್ಥೆಯ ಪ್ರಕಾರ ಮಣಿಪುರ ರಾಜ್ಯದ ದಶಕದಿಂದ ದಶಕಕ್ಕೆ ಜನಸಂಖ್ಯಾ ಹೆಚ್ಚಳ ಸರಾಸರಿ ಶೇ. 25. ಮ್ಯಾನ್ಮಾರ್ ಗಡಿಗೆ ಹೊಂದಿಕೊಂಡಿರುವ ಕುಕಿ ಜನಸಂಖ್ಯೆ ಹೆಚ್ಚಿರುವ ಚುರಾಚಾಂದ್ಪುರ ಜಿಲ್ಲೆಯಲ್ಲೂ ಈ ದಶಕವಾರು ಜನಸಂಖ್ಯಾ ಹೆಚ್ಚಳದ ಸರಾಸರಿ ಶೇ. 24. ಮೈತೈಗಳು ಹೆಚ್ಚಿರುವ ಇಾಂಲ ಪೂರ್ವ ಜಿಲ್ಲೆಯ ಹೆಚ್ಚಳವು ಸರಿಸುಮಾರು ಅಷ್ಟೆ ಇದೆ. ಹೀಗಾಗಿ ಪಕ್ಕದ ದೇಶದಿಂದ ಕುಕಿಗಳು ಸಾವಿರಾರು ಸಂಖ್ಯೆಯಲ್ಲಿ ಹೆಚ್ಚಾಗಿ ಹರಿದು ಬರುತ್ತಿರುವುದರಿಂದ ಕುಕಿಗಳ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಬಿಜೆಪಿಯ ವಾದಕ್ಕೆ ಸಾಕ್ಷಿಗಳು ಇಲ್ಲ. ಪುರಾವೆಗಳು ಇಲ್ಲ.
(https://censusindia.gov.in/nada/index.php/catalog/43347)