ವಯನಾಡಿನಂತಹ ಕರಾಳ ಘಟನೆ ಮರುಕಳಿಸದಿರಲಿ
ಸಾಂದರ್ಭಿಕ ಚಿತ್ರ | PTI
ಮಾನ್ಯರೇ,
ವಯನಾಡಿನಲ್ಲಿ ಭಾರೀ ಭೂಕುಸಿತದಿಂದ ಸಾಕಷ್ಟು ಸಾವು ನೋವುಗಳು ಸಂಭವಿಸಿದೆ. ಅದು ಎಂದೆಂದಿಗೂ ಮಾಸಿ ಹೋಗದಂತಹ ಕಹಿ ಘಟನೆಯಾಗಿ ಮನಸ್ಸಿನಲ್ಲಿ ಉಳಿದು ಬಿಟ್ಟಿದೆ. ಮಾನವರು ದುರಾಸೆಯಿಂದ ಪ್ರಕೃತಿಯ ಒಡಲನ್ನು ಎಗ್ಗಿಲ್ಲದೆ ಬಗೆದುದರ ದುಷ್ಪರಿಣಾಮದಿಂದಾಗಿ ಇಂದು ಪ್ರಕೃತಿ ಮುನಿದು ಕೇರಳವನ್ನು ನರಕದ ನಾಡನ್ನಾಗಿ ಪರಿವರ್ತಿಸಿ ಬಿಟ್ಟಿರುವುದು ನಿಜಕ್ಕೂ ಅತ್ಯಂತ ದುಃಖದ ಸಂಗತಿ.
ಪ್ರಕೃತಿ ಪದೇ ಪದೇ ನಮ್ಮನ್ನು ಎಚ್ಚರಿಸುತ್ತಲೇ ಬಂದಿದೆ. ಆದರೆ ನಾವು ಅದರಿಂದ ಪಾಠ ಕಲಿಯುತ್ತಿಲ್ಲ. ಕಳೆದ ಕೆಲ ವರ್ಷಗಳ ಹಿಂದೆ ಇದೇ ಮಾದರಿಯಲ್ಲಿ ನಮ್ಮ ರಾಜ್ಯದ ಕೊಡಗು ಜಿಲ್ಲೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹೀಗೆ ಭೂ ಕುಸಿತ ಉಂಟಾಗಿ ಸಾಕಷ್ಟು ಸಾವು ನೋವುಗಳು ಸಂಭವಿಸಿದ್ದವು. ಇಷ್ಟಾದರೂ ನಾವು ಪ್ರಕೃತಿಯ ಇಂತಹ ವಿಕೋಪಗಳಿಂದ ಬುದ್ಧಿ ಕಲಿಯುತ್ತಿಲ್ಲ. ಭವಿಷ್ಯದಲ್ಲಾದರೂ ವಯನಾಡಿನ ದುರಂತದಿಂದ ಪಾಠ ಕಲಿಯಲೇಬೇಕಿದೆ.
ಅಂದು ವಯನಾಡಿನ ಜನರು ಸಿಹಿ ನಿದ್ರೆಯಲ್ಲಿ ಜಾರಿರುವಾಗ ಸಂಭವಿಸಿದಂತಹ ಆ ಕರಾಳ ಘಟನೆಯಲ್ಲಿ ಅಮ್ಮಂದಿರ ತೆಕ್ಕೆಯಲ್ಲಿ ಚಿರ ನಿದ್ರೆಗೆ ಜಾರಿದ ಮುಗ್ಧ ಕಂದಮ್ಮಗಳು, ಹಾಗೆಯೇ ಆ ಹರಿಯುವ ನೀರೊಳಗೆ ಸಿಲುಕಿ ತಮ್ಮ ಜೀವ ಉಳಿಸಿಕೊಳ್ಳಲು ಸಾಕಷ್ಟು ಸಂಕಟ ಪಡುತ್ತಿದ್ದ ಆನೆಗಳು ಮತ್ತು ಅವುಗಳ ಮರಿಗಳು ಇವೆಲ್ಲ ನಮ್ಮ ಸ್ಮತಿ ಪಟಲದಲ್ಲಿ ಎಂದಿಗೂ ಮಾಸದು ಮತ್ತು ಮಾಸಬಾರದು. ಏಕೆಂದರೆ ಇಂತಹ ಕರಾಳ ಕಹಿ ಘಟನೆಗಳು ಮುಂದಿನ ದಿನಗಳಲ್ಲಿ ಮತ್ತೆ ಮತ್ತೆ ಮರುಕಳಿಸದಂತೆ ನಾವೆಲ್ಲ ಎಚ್ಚರಗೊಳ್ಳಲಿಕ್ಕಾದರೂ ನಮ್ಮ ನೆನಪಿನಲ್ಲಿ ಉಳಿಯಲೇಬೇಕಿದೆ.
-ಅಪುರಾ , ಅಗತಗೌಡನಹಳ್ಳಿ, ಗುಂಡ್ಲುಪೇಟೆ