ರಾಜನ ಜಾತಿಯ ಮೇಲೆ ರಾಜಕಾರಣ
ಹರ್ಯಾಣದಲ್ಲಿ ಗುರ್ಜರರು, ರಜಪೂತರ ನಡುವೆ ಬಿಜೆಪಿಗೆ ಇಕ್ಕಟ್ಟು
ಹರ್ಯಾಣದ ಕೈತಾಲ್ ಜಿಲ್ಲೆಯಲ್ಲಿ ಆಡಳಿತಾರೂಢ ಬಿಜೆಪಿಯ ೪೦ಕ್ಕೂ ಹೆಚ್ಚು ರಜಪೂತ ಪದಾಧಿಕಾರಿಗಳು ಕಳೆದ ವಾರ ರಾಜೀನಾಮೆ ಸಲ್ಲಿಸಿದ್ದು ವರದಿಯಾಗಿತ್ತು, ಇತ್ತೀಚೆಗೆ ಅನಾವರಣಗೊಂಡಿದ್ದ ರಾಜ ಮಿಹಿರ್ ಭೋಜ್ ಪ್ರತಿಮೆಯ ಫಲಕದಲ್ಲಿ ‘ಗುರ್ಜರ’ ಎಂದು ಕೆತ್ತಲಾಗಿದೆ. ಇದು, ಭೋಜ ತಮ್ಮವನೆಂದು ಪ್ರತಿಪಾದಿಸುವ ಗರ್ಜರರು ಮತ್ತು ರಜಪೂತರ ನಡುವಿನ ದೀರ್ಘಕಾಲದ ಪೈಪೋಟಿಯನ್ನು ಮತ್ತೆ ಮುನ್ನೆಲೆಗೆ ತಂದಿದೆ.
೯ನೇ ಶತಮಾನದ ಭೋಜರಾಜನ ಆಳ್ವಿಕೆ ಸುಮಾರು ೫೦ ವರ್ಷಗಳ ಕಾಲ ಇಂದಿನ ಮಧ್ಯಪ್ರದೇಶದ ಮಾಲ್ವಾ ಪ್ರದೇಶದಲ್ಲಿ ಇತ್ತು. ಆತ ಗುರ್ಜರ-ಪ್ರತಿಹಾರ ರಾಜವಂಶಕ್ಕೆ ಸೇರಿದವನಾದ್ದರಿಂದ ಗುರ್ಜರ ಜಾತಿಗೆ ಸೇರಿದವನು ಎಂಬುದು ಗುರ್ಜರ ಸಮುದಾಯದ ವಾದ. ಆದರೆ ಆತ ಒಬ್ಬ ರಜಪೂತ ದೊರೆ ಎಂದು ರಜಪೂತರು ವಾದಿಸುತ್ತಾರೆ. ಅವರ ವಾದದ ಪ್ರಕಾರ, ಆತನ ಹೆಸರಿನ ಹಿಂದಿರುವ ‘ಗುರ್ಜರ’ ಎಂಬ ವಿಶೇಷಣ ಅವನ ಸಾಮ್ರಾಜ್ಯದ ಭಾಗವಾಗಿದ್ದ ಈಗಿನ ಗುಜರಾತ್ ಪ್ರದೇಶವನ್ನು ಉಲ್ಲೇಖಿಸುತ್ತದೆಯೇ ಹೊರತು ಗುರ್ಜರ ಜಾತಿಯನ್ನಲ್ಲ.
ಗುರ್ಜರರು ಮತ್ತು ರಜಪೂತರ ನಡುವಿನ ಈ ಹಕ್ಕು ಸಾಧಿಸುವಿಕೆಯ ತಿಕ್ಕಾಟ ಇತ್ತೀಚಿನ ವರ್ಷಗಳಲ್ಲಿ ಪದೇ ಪದೇ ಕಾಣಿಸುತ್ತಿದೆ. ಏಕೆಂದರೆ, ಭೋಜನ ಜಾತಿಯನ್ನು ಕಂಡುಹಿಡಿಯಲಾಗದಿದ್ದರೂ, ಪ್ರಬಲ ಗುಂಪುಗಳು ತಮ್ಮದು ವೀರ ಪರಂಪರೆ ಎಂದು ತೋರಿಸಿಕೊಳ್ಳಲು ಬಯಸುವುದು ಸಹಜ ಎಂದು ಇತಿಹಾಸಕಾರರು ಹೇಳುತ್ತಾರೆ. ಆದರೂ, ಈ ಪೈಪೋಟಿಯನ್ನು ನಿಭಾಯಿಸುವುದು ಚುನಾವಣಾ ರಾಜಕಾರಣದಲ್ಲಿ ನಿರ್ಣಾಯಕವಾಗುವ ಹಿಂದಿ ಹೃದಯಭಾಗದ ರಾಜ್ಯಗಳಲ್ಲಿ ಆಡಳಿತಾರೂಢ ಬಿಜೆಪಿಗೆ ಬಲು ಇಕ್ಕಟ್ಟಿನದ್ದಾಗಿದೆ.
ಕಳೆದ ತಿಂಗಳು ರಜಪೂತರು ಭೋಜನ ಪ್ರತಿಮೆ ಅನಾವರಣವನ್ನು ವಿರೋಧಿಸಿದ ನಂತರ ಕೈತಾಲ್ ಆಡಳಿತ ಮಧ್ಯಪ್ರವೇಶಿಸಿ, ಭೋಜ ಗುರ್ಜರ-ಪ್ರತಿಹಾರ ಸಾಮ್ರಾಟ ಎಂದು ಹೇಳಿತು. ಆದರೆ ಆ ಪ್ರತಿಪಾದನೆಯಿಂದ ಏನೂ ಪ್ರಯೋಜನವಾಗಲಿಲ್ಲ. ಜುಲೈ ೧೯ರಂದು ಅದರ ವಿರುದ್ಧ ಪ್ರತಿಭಟಿಸಲು ಜಿಲ್ಲೆಯಲ್ಲಿ ಜಮಾಯಿಸಿದ ರಜಪೂತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದರು. ಅದಾದ ಒಂದು ದಿನದ ನಂತರ ರಜಪೂತರ ಪ್ರತಿಭಟನೆಯ ಹೊರತಾಗಿಯೂ, ಗುರ್ಜರ ಸಮುದಾಯದ ಮುಖಂಡರು ಪ್ರತಿಮೆ ಅನಾವರಣಗೊಳಿಸಿದರು.
ಪರಿಣಾಮವಾಗಿ ಆಕ್ರೋಶಿತ ರಜಪೂತರು ಪ್ರತಿಭಟನೆ ಮುಂದುವರಿಸಿದರು. ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಮ್ಮ ನಿಯೋಗವನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳ ಬಗ್ಗೆ ಕ್ರಮಕೈಗೊಳ್ಳುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ರಜಪೂತರು ಘೋಷಿಸಿದರು. ಪ್ರತಿಮೆಯ ಫಲಕದಿಂದ ಗುರ್ಜರ ಪದ ತೆಗೆದುಹಾಕಬೇಕು, ಬಿಜೆಪಿಯ ಕೈತಾಲ್ ಘಟಕದ ಮುಖ್ಯಸ್ಥ ಅಶೋಕ್ ಗುರ್ಜರ್ ಅವರನ್ನು ವಜಾಗೊಳಿಸಬೇಕು ಮತ್ತು ಸ್ಥಳೀಯ ಬಿಜೆಪಿ ಶಾಸಕಿ ಲೀಲಾ ರಾಮ್ ಗುಜ್ಜರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಬೇಡಿಕೆಗಳಲ್ಲಿ ಪ್ರಮುಖವಾಗಿವೆ. ಇದರ ಜೊತೆಗೆ, ರಾಜ್ಯದ ಹಲವಾರು ರಜಪೂತ ಪ್ರಾಬಲ್ಯದ ಹಳ್ಳಿಗಳು ಬಿಜೆಪಿ ನಾಯಕರ ಪ್ರವೇಶವನ್ನು ಬಹಿಷ್ಕರಿಸಿವೆ.
ಇದು ಎರಡು ಗುಂಪುಗಳು ಮತ್ತು ಈ ಸಮುದಾಯಗಳ ಸ್ಥಳೀಯ ಬಿಜೆಪಿ ನಾಯಕರು ಈ ವಿವಾದದ ವಿರುದ್ಧವಾಗಿ ನಿಲ್ಲುವಂತೆ ಮಾಡಿದೆ. ‘‘ನಾವು ಭೋಜನನ್ನು ಹಿಂದೂ ಸಾಮ್ರಾಟ ಎಂದು ಗುರುತಿಸಲು ಬಯಸಿದ್ದೇವೆಯೇ ಹೊರತು ರಜಪೂತ ಸಾಮ್ರಾಟ ಎಂದಲ್ಲ’’ ಎಂಬುದು ರಜಪೂತ ಸಮುದಾಯದ ಬಿಜೆಪಿ ನಾಯಕ ಮಹಿಪಾಲ್ ರಾಣಾ ವಾದ. ಈ ಮೂಲಕ ಅವರು ಹಿಂದುತ್ವದ ದಾಳ ಬಳಸಿದ್ದಾರೆ. ಗುರ್ಜರ ಪದವನ್ನು ತೆಗೆದುಹಾಕುವವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ ಎಂದಿದ್ದಾರೆ.
ಮತ್ತೊಂದೆಡೆ, ಬಿಜೆಪಿ ಶಾಸಕಿ ಲೀಲಾ ರಾಮ್ ಗುಜ್ಜರ್ ಅವರು ರಜಪೂತ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದು, ಭೋಜ ಗುರ್ಜರ ರಾಜನಾಗಿದ್ದನೆಂಬುದಕ್ಕೆ ಘನ ಪುರಾವೆ ಇದೆ ಎಂದಿದ್ದಾರೆ. ‘‘ಭೋಜ ಇರಾಕ್, ಇರಾನ್, ಅಫ್ಘಾನಿಸ್ತಾನ ಮತ್ತು ಬರ್ಮಾಗಳು ಈ ದೇಶದ ಭಾಗವಾಗಿದ್ದಾಗ ಭಾರತವನ್ನು ಆಳಿದ್ದ ಎಂದು ಅವರು ಹೇಳಿದ್ದನ್ನು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ರಜಪೂತ ಸಮುದಾಯದ ಸದಸ್ಯರು ತಮ್ಮ ಅಭಿಪ್ರಾಯ ಸಾಬೀತುಪಡಿಸುವುದಕ್ಕಾಗಿ ಇತಿಹಾಸವನ್ನು ತಿರುಚಲು ಸಾಧ್ಯವಿಲ್ಲ. ರಜಪೂತರು ನಮ್ಮ ಸಹೋದರರೇ ಆಗಿದ್ದಾರೆ. ಆದರೆ ಅವರು ಈ ವಿಚಾರವಾಗಿ ಮಾತನಾಡುವಾಗ ಸಂಯಮ ತೋರಬೇಕು’’ ಎಂಬುದು ಅವರ ಅಭಿಪ್ರಾಯ.
ಇತ್ತೀಚಿನ ವರ್ಷಗಳಲ್ಲಿ ಭೋಜನ ಜಾತಿಗೆ ಸಂಬಂಧಿಸಿದಂತೆ ಗುರ್ಜರರು ಮತ್ತು ರಜಪೂತರ ನಡುವೆ ವಿವಾದಗಳು ಉಂಟಾಗುತ್ತಿರುವುದು ಇದೇ ಮೊದಲಲ್ಲ.
ಇದೇ ರೀತಿಯ ರಾಜಕೀಯ ಪೈಪೋಟಿ ಸೆಪ್ಟಂಬರ್ ೨೦೨೧ರಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮೊದಲು ನಡೆದಿತ್ತು. ಬಿಜೆಪಿ ನಾಯಕ ಮತ್ತು ಮುಖ್ಯಮಂತ್ರಿ ಆದಿತ್ಯನಾಥ್, ಗೌತಮ ಬುದ್ಧ ನಗರದ ಕಾಲೇಜಿನಲ್ಲಿ ಭೋಜನ ಪ್ರತಿಮೆ ಅನಾವರಣಗೊಳಿಸಿದರು. ಫಲಕದಲ್ಲಿ ಮೊದಲು ಭೋಜನನ್ನು ಗುರ್ಜರ ರಾಜ ಎಂದೇ ಉಲ್ಲೇಖಿಸಲಾಗಿತ್ತು. ಇದು ರಜಪೂತರನ್ನು ಕೆರಳಿಸಿತ್ತು. ಆದರೆ, ಸಮಾರಂಭದ ಮೊದಲು, ಗುರ್ಜರ ಪದವನ್ನು ಕಪ್ಪು ಶಾಯಿಯಿಂದ ಮರೆಮಾಚಲಾಗಿತ್ತು ಎಂದು ವರದಿಗಳು ಹೇಳುತ್ತವೆ.
ಇದು ಬಿಜೆಪಿ ಸರಕಾರದ ವಿರುದ್ಧ ಗುರ್ಜರ ಸಮುದಾಯದ ಆಕ್ರೋಶಕ್ಕೆ ಕಾರಣವಾಯಿತು. ಫಲಕದಲ್ಲಿ ಗುರ್ಜರ ಪದವನ್ನು ಪುನಃ ಹಾಕುವಂತೆ ಅದು ಒತ್ತಾಯಿಸಿತು. ಕಡೆಗೆ, ಗುರ್ಜರ ನಾಯಕ ಮತ್ತು ಬಿಜೆಪಿ ರಾಜ್ಯಸಭಾ ಸದಸ್ಯ ಸುರೇಂದ್ರ ಸಿಂಗ್ ನಗರ್ ಅವರು ಆ ದಿಸೆಯಲ್ಲಿ ಕ್ರಮ ಕೈಗೊಂಡಿದ್ದರು.
ಬೇರೆ ಬೇರೆ ಸಂದರ್ಭಗಳಲ್ಲಿಯೂ ಈ ಬಗ್ಗೆ ವಿವಾದ ತಲೆದೋರಿದೆ. ನವೆಂಬರ್ನಲ್ಲಿ, ಸಂಶೋಧನೆ ಮತ್ತು ವಕಾಲತ್ತು ಗುಂಪು ಎಂದು ತನ್ನನ್ನು ತಾನು ವಿವರಿಸಿಕೊಳ್ಳುವ ಕ್ಷತ್ರಿಯ ಪರಿಷತ್ತು, ಬಿಹಾರದಲ್ಲಿ ಭೋಜನನ್ನು ರಜಪೂತ ಪಂಗಡವನು ಎಂದು ಹಕ್ಕು ಸಾಧಿಸಲು ಅಭಿಯಾನ ಪ್ರಾರಂಭಿಸಿತು. ಮೇ ತಿಂಗಳಲ್ಲಿ ನಿಷೇಧಾಜ್ಞೆಗಳ ಹೊರತಾಗಿಯೂ, ಗುರ್ಜರ ಸಮುದಾಯ ಭೋಜನ ಗೌರವಾರ್ಥವಾಗಿ ‘ಗೌರವ್ ಯಾತ್ರೆ’ಯನ್ನು ಆಯೋಜಿಸಿತು. ಈ ಮೆರವಣಿಗೆಗೆ ರಜಪೂತ ಸಮುದಾಯದಿಂದ ವಿರೋಧ ವ್ಯಕ್ತವಾಗಿತ್ತು.
ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಮಧ್ಯಕಾಲೀನ ಭಾರತೀಯ ಇತಿಹಾಸದ ಸಹ ಪ್ರಾಧ್ಯಾಪಕರಾದ ಮನೀಶಾ ಚೌಧರಿಯಂಥ ಇತಿಹಾಸಕಾರರು, ‘‘ಆರಂಭಿಕ ಮಧ್ಯಕಾಲೀನ ಇತಿಹಾಸದಿಂದ ವ್ಯಕ್ತಿಗಳ ಜಾತಿಯನ್ನು ಕಂಡುಹಿಡಿಯುವುದು ಕಷ್ಟ’’ ಎನ್ನುತ್ತಾರೆ. ‘‘ಐತಿಹಾಸಿಕವಾಗಿ, ಮಿಹಿರ ಭೋಜ ಒಬ್ಬ ಗುರ್ಜರ ಅಥವಾ ರಜಪೂತ ಎಂಬುದರ ಬಗ್ಗೆ ನಮಗೆ ಯಾವುದೇ ಸ್ಪಷ್ಟತೆ ಇಲ್ಲ’’ ಎನ್ನುವ ಅವರು, ‘‘ಇದಕ್ಕೆ ಕಾರಣವೆಂದರೆ ಆ ಕಾಲದಲ್ಲಿ ಬೆಳೆದವರು ಮೂಲತಃ ತಮ್ಮದೇ ಆದ ವ್ಯಕ್ತಿತ್ವ ಉಳ್ಳವರಾಗಿದ್ದರು ಮತ್ತು ಆಡಳಿತಗಾರ ಅಥವಾ ಯೋಧನಾಗಲು ಸಮರ್ಥರಾಗಿರುತ್ತಿದ್ದರು’’ ಎನ್ನುತ್ತಾರೆ.
‘‘ಮಿಹಿರ ಭೋಜ ಗುರ್ಜರ-ಪ್ರತಿಹಾರಗಳಿಗೆ ಸೇರಿದವನು. ಆದರೆ ಆತನ ಆರಂಭಿಕ ಜೀವನದ ಬಗ್ಗೆ ಏನೂ ಮಾಹಿತಿಗಳು ಲಭ್ಯವಿಲ್ಲ. ಆದ್ದರಿಂದ ನಮಗೆ ಆತನ ಹಿನ್ನೆಲೆಯ ಅರಿವಿಲ್ಲ. ಯಾವುದೇ ದೃಢೀಕರಣ ಸಾಧ್ಯವಿಲ್ಲ. ಏಕೆಂದರೆ, ಇಡೀ ಉತ್ತರ ಭಾರತ ಗುರ್ಜರ-ಪ್ರತಿಹಾರರ ನೆಲೆಯಾಗಿತ್ತು. ಆತ ಇಂಥದೇ ಸಮುದಾಯದಿಂದ ಬಂದವನು ಎಂದು ಹೇಳುವುದು ತುಂಬಾ ಕಷ್ಟ’’ ಎಂಬುದು ಚೌಧರಿ ಅವರ ಅಭಿಪ್ರಾಯ.
ಇದೇ ಧಾಟಿಯಲ್ಲಿ, ಕುರುಕ್ಷೇತ್ರ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಕೆ. ಚಾಹಲ್ ಹೇಳುತ್ತಾರೆ. ‘‘ಇತಿಹಾಸದಲ್ಲಿ ಜಾತಿಯ ಗುರುತುಗಳು ಮಸುಕಾಗುತ್ತವೆ. ನಾವು ಇಂದು ಅರ್ಥಮಾಡಿಕೊಂಡಂತೆ ಸ್ಪಷ್ಟವಾದ ಜಾತಿ ರೇಖೆಗಳು ಬಹಳ ತಡವಾಗಿ ಗುರುತಿಸಿದವುಗಳಾಗಿವೆ’’ ಎನ್ನುತ್ತಾರೆ ಅವರು. ‘‘ಪ್ರಾಚೀನ ರಾಜರ ಜಾತಿಗಳ ಹೆಸರಿನಲ್ಲಿ ಇತ್ತೀಚೆಗೆ ಹುಟ್ಟಿಕೊಳ್ಳುತ್ತಿರುವ ವಿವಾದಗಳು ಈಗಿನ ರಾಜಕೀಯದ ಪರಿಣಾಮಗಳೇ ಹೊರತು ಇತಿಹಾಸಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ’’ ಎಂದು ಚಾಹಲ್ ಹೇಳುತ್ತಾರೆ.
ಇಂದಿನ ರಾಜಕೀಯದ ಕಾರಣಕ್ಕಾಗಿ ಜಾತಿಯನ್ನು ಸಾಬೀತುಪಡಿಸುವ ಅಗತ್ಯ ಉಂಟಾಗಿದೆಯೇ ಹೊರತು ಪ್ರಾಚೀನ ಕಾಲದಲ್ಲಿ ಅದು ಮುಖ್ಯವಾಗಿರಲಿಲ್ಲ ಎನ್ನುತ್ತಾರೆ ಚೌಧರಿ. ನೈಸರ್ಗಿಕವಾಗಿ ಒಂದು ಪ್ರದೇಶದಲ್ಲಿ ವಾಸಿಸುವ ಯಾವುದೇ ಎರಡು ಪ್ರಬಲ ವರ್ಗಗಳಿಗೆ, ಹಿಂದಿನಿಂದಲೂ ತಾವು ವೀರರನ್ನು ಹೊಂದಿದ್ದೆವು ಎಂದು ತೋರಿಸಿಕೊಳ್ಳುವ ತಹತಹ ಇರುತ್ತದೆ. ಅದಕ್ಕಾಗಿ ಅವರು ಹಿಂದಿನ ರಾಜರ ವಂಶಾವಳಿಯನ್ನು ಬಳಸಿಕೊಳ್ಳುತ್ತಾರೆ ಎಂಬುದು ಇಂಥ ಸಂಘರ್ಷಗಳ ಕಾರಣವನ್ನು ವಿಶ್ಲೇಷಿಸುವವರ ವಾದ.
ಈಗ ತೊಡಕಾಗಿರುವುದು ಬಿಜೆಪಿಗೆ. ಎರಡು ಸಮುದಾಯಗಳ ನಡುವಿನ ಈ ಪೈಪೋಟಿಯ ಕಾರಣದಿಂದಾಗಿ ಆಡಳಿತಾರೂಢ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದೆ. ಗುರ್ಜರರು ಮತ್ತು ರಜಪೂತರು ಈ ಎರಡೂ ಸಮುದಾಯಗಳು ಚುನಾವಣಾ ದೃಷ್ಟಿಯಿಂದ ಮಹತ್ವ ಪಡೆದಿವೆ. ಅದರಲ್ಲಿಯೂ ಹಿಂದಿ ಹೃದಯ ಭಾಗವಾದ ರಾಜ್ಯಗಳಲ್ಲಿ ಬಿಜೆಪಿ ಪಾಲಿಗೆ ಇವು ನಿರ್ಣಾಯಕ.
ಉದಾಹರಣೆಗೆ, ಹರ್ಯಾಣದಲ್ಲಿ, ಕೆಲವು ಅಂದಾಜಿನ ಪ್ರಕಾರ ರಾಜ್ಯದ ರಜಪೂತ ಜನಸಂಖ್ಯೆ ಶೇ.೫ ಮತ್ತು ಗುರ್ಜರರ ಜನಸಂಖ್ಯೆ ಶೇ.೩.೩ ಇದೆ. ಹರ್ಯಾಣದ ೯೦ ವಿಧಾನಸಭಾ ಸ್ಥಾನಗಳಲ್ಲಿ ೧೫ರಲ್ಲಿ ರಜಪೂತರು ಗಣನೀಯ ಪ್ರಭಾವ ಹೊಂದಿದ್ದಾರೆ. ಲೋಕಸಭಾ ಚುನಾವಣೆಯ ನಂತರ ೨೦೨೪ರಲ್ಲಿ ಹರ್ಯಾಣದ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಉತ್ತರ ಪ್ರದೇಶದಲ್ಲೂ ಗುರ್ಜರರನ್ನು ಚುನಾವಣೆಯ ಪ್ರಭಾವಿ ಸಮುದಾಯವಾಗಿಯೇ ನೋಡಲಾಗುತ್ತದೆ, ಅದರಲ್ಲಿಯೂ ರಾಜ್ಯದ ಪಶ್ಚಿಮ ಭಾಗಗಳಲ್ಲಿ ಅವರ ಪ್ರಾಬಲ್ಯವಿದೆ.
ಇದರ ಪರಿಣಾಮವಾಗಿ, ಬಿಜೆಪಿ ನಾಯಕತ್ವ ಈಗ ಈ ಎರಡೂ ಸಮುದಾಯಗಳ ನಡುವಿನ ಸಂಘರ್ಷವನ್ನು ಬಹಳ ನಾಜೂಕಿನಿಂದ ನಿಭಾಯಿಸಲು ನೋಡುತ್ತಿದೆ. ಸೆಪ್ಟಂಬರ್ ೨೦೨೧ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಗೌತಮ್ ಬುದ್ಧ ನಗರದಲ್ಲಿ ಭೋಜನ ಪ್ರತಿಮೆ ಅನಾವರಣಗೊಳಿಸುವಾಗ, ಮಹಾಪುರುಷರು ಜಾತಿ ಮತ್ತು ಪ್ರದೇಶಗಳನ್ನು ಮೀರಿದವರು ಎಂದು ಹೇಳುವ ಮೂಲಕ ರಜಪೂತರು ಮತ್ತು ಗುರ್ಜರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೆಂಬುದನ್ನು ಗಮನಿಸಬೇಕು. ಭೋಜನನ್ನು ಹಿಂದುತ್ವದ ನಾಯಕ ಎಂದು ಪ್ರತಿಪಾದಿಸಲು ಅವರು ಪ್ರಯತ್ನಿಸಿದರು, ಭೋಜನ ಆಳ್ವಿಕೆಯಲ್ಲಿ ಯಾವುದೇ ಮುಸ್ಲಿಮ್ ಆಕ್ರಮಣಕಾರರು ಭಾರತಕ್ಕೆ ಪ್ರವೇಶಿಸಲು ಸಾಧ್ಯವಿರಲಿಲ್ಲ ಎಂದರು.
ಹರ್ಯಾಣದ ರಜಪೂತ ಪದಾಧಿಕಾರಿಗಳ ಒತ್ತಡದ ನಡುವೆಯೇ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಓಂ ಪ್ರಕಾಶ್ ಧನ್ಕರ್, ಜಾತಿ ಮತ್ತು ಪ್ರದೇಶಗಳನ್ನು ಮೀರಿದ ಮಹಾನ್ ವ್ಯಕ್ತಿ ಭೋಜ ಎಂಬ ವಾದವನ್ನೇ ಪುನರುಚ್ಚರಿಸಿದ್ದಾರೆ. ಹುತಾತ್ಮರಾದ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಅಥವಾ ಚಂದ್ರಶೇಖರ್ ಆಝಾದ್ ಅವರ ಜಾತಿಯನ್ನು ನಾವು ಕೇಳುವುದಿಲ್ಲ. ಅವರೆಲ್ಲ ಇಡೀ ರಾಷ್ಟ್ರಕ್ಕೆ ಸೇರಿದವರು. ಅಂತೆಯೇ, ಮಿಹಿರ ಭೋಜ ಇಡೀ ರಾಷ್ಟ್ರಕ್ಕೆ ಸೇರಿದವನು. ಈ ರಾಷ್ಟ್ರೀಯ ವೀರರನ್ನು ವಿವಾದದ ವಿಷಯಗಳಾಗಿ ಪರಿವರ್ತಿಸಬಾರದು ಎಂದು ಹೇಳುವ ಮೂಲಕ, ಎರಡು ಸಮುದಾಯಗಳನ್ನು ಒಲಿಸಿಕೊಂಡು ಮುಂದುವರಿಯುವ ಪ್ರಯತ್ನ ಮಾಡಿದ್ದಾರೆ.
(ಕೃಪೆ: scroll.in)