ಮೋದಿ ಸರಕಾರಕ್ಕೆ 10 ವರ್ಷ: ಕನಸಾಗಿಯೇ ಉಳಿದ ರೈತರ ದ್ವಿಗುಣ ಆದಾಯದ ಭರವಸೆ
ರೈತರ ಆದಾಯವನ್ನು ದ್ವಿಗುಣಗೊಳಿಸುವ ಮೋದಿ ಸರಕಾರದ ಭರವಸೆ ಏನಾಯಿತು? 2016ರ ಫೆಬ್ರವರಿಯಲ್ಲಿ ವಾರ್ಷಿಕ ಬಜೆಟ್ಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅಂಥದೊಂದು ಭರವಸೆ ನೀಡಿದ್ದರು. ತಮ್ಮ ಸರಕಾರ 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲಿದೆ ಎಂದು ವೀಡಿಯೊ ಸಂದೇಶದಲ್ಲಿ ಘೋಷಿಸಿದ್ದರು.
ಬಿಜೆಪಿಯ 2019ರ ಚುನಾವಣಾ ಪ್ರಣಾಳಿಕೆ ಮತ್ತೊಮ್ಮೆ ಅದೇ ಭರವಸೆಯನ್ನು ಕೊಟ್ಟಿತ್ತು. 2022ರ ವೇಳೆಗೆ ಈ ಗುರಿಯನ್ನು ಸಾಧಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಪ್ರಣಾಳಿಕೆಯಲ್ಲಿ ಪುನರುಚ್ಚರಿಸಿತ್ತು. ನಗದು ವರ್ಗಾವಣೆ ಯೋಜನೆಗಳಿಂದ ಸಾಂಸ್ಥಿಕ ಸುಧಾರಣೆಗಳವರೆಗೆ ಹಲವಾರು ಕ್ರಮಗಳನ್ನು ಆ ಪ್ರಣಾಳಿಕೆಯಲ್ಲಿ ಅದು ಘೋಷಿಸಿತ್ತು.
ಅದಾಗಿ ಐದು ವರ್ಷಗಳ ನಂತರದ ಅಂಕಿಅಂಶಗಳನ್ನು ಗಮನಿಸಿದರೆ, ಆ ಭರವಸೆ ಈಡೇರಿಲ್ಲ ಎಂಬುದು ಗೊತ್ತಾಗುತ್ತದೆ. ವಿಪರ್ಯಾಸವೆಂದರೆ, ಮೋದಿ ಸರಕಾರದ ಅಡಿಯಲ್ಲಿ ರೈತರ ಆದಾಯ ಇನ್ನಷ್ಟು ಕುಸಿದಿದೆ.
ಗುರಿಯನ್ನು ಸಾಧಿಸಲು ಮಾರ್ಗಸೂಚಿಯನ್ನು ರೂಪಿಸುವುದಕ್ಕಾಗಿ 2016ರಲ್ಲಿ ರಚಿಸಲಾದ ಸರಕಾರಿ ಸಮಿತಿಯು 2012-13ರ ರಾಷ್ಟ್ರೀಯ ಮಾದರಿ ಸಮೀಕ್ಷೆಯ ಅಂಕಿಅಂಶಗಳನ್ನು ಬಳಸಿಕೊಂಡಿತ್ತು. ಆ ಅಂಕಿಅಂಶಗಳ ಪ್ರಕಾರ, ದೇಶದ ರೈತರ ರಾಷ್ಟ್ರೀಯ ಸರಾಸರಿ ವಾರ್ಷಿಕ ಆದಾಯ 2015-16ರಲ್ಲಿ 96,703 ರೂ. ಆಗಿತ್ತು.
ಅದರ ಆಧಾರದ ಮೇಲೆ ಸಮಿತಿಯು ನಿಗದಿಪಡಿಸಿದ ಗುರಿಯಂತೆ, ದ್ವಿಗುಣ ಆದಾಯವು 2015-16ಕ್ಕೆ ಅಂದಿನ ಸ್ಥಿರ ಬೆಲೆಯಂತೆ 1,92,694 ರೂ. ಹಾಗೂ 2022-23ರಲ್ಲಿ ಈಗಿನ ಬೆಲೆಯಂತೆ 2,71,378 ರೂ. ಆಗಬೇಕು. ಆ ಮಟ್ಟದ ಆದಾಯವನ್ನು ಪಡೆಯಲು ಮುಂದಿನ ಏಳು ವರ್ಷಗಳಲ್ಲಿ ಕೃಷಿ ಆದಾಯವು ವಾರ್ಷಿಕವಾಗಿ ಶೇ.10.4ರಷ್ಟು ಹೆಚ್ಚಬೇಕಿದೆ ಎಂದು ಸಮಿತಿಯು ಲೆಕ್ಕಾಚಾರ ಹಾಕಿದೆ.
2022-23ರ ಅಂಕಿಅಂಶಗಳು ಲಭ್ಯವಿಲ್ಲದಿದ್ದರೂ, 2021ರಲ್ಲಿ ಬಿಡುಗಡೆಯಾದ ಕೊನೆಯ ಸಾಂದರ್ಭಿಕ ಸಮೀಕ್ಷೆಯ ಮಾಹಿತಿಯ ಪ್ರಕಾರ, ಕೃಷಿ ಕುಟುಂಬಗಳ ಸರಾಸರಿ ವಾರ್ಷಿಕ ಆದಾಯವು 2015-16ರಲ್ಲಿ 96,703 ರೂ. ಇದ್ದದ್ದು 2018-19ರಲ್ಲಿ 1,22,616 ರೂ.ಗೆ ಏರಿದೆ.
ಅಂದರೆ, ರೈತರ ಆದಾಯದಲ್ಲಿ ವಾರ್ಷಿಕ ಬೆಳವಣಿಗೆಯು ಕೇವಲ ಶೇ.2.8ರಷ್ಟು ಎಂಬುದನ್ನು ಅದು ಹೇಳುತ್ತದೆ. 2002-2003 ಮತ್ತು 2012-13ರ ಅವಧಿಯಲ್ಲಿ ಶೇ.3ಕ್ಕಿಂತ ಕಡಿಮೆ ಏರಿಕೆಯಾಗಿದೆ. ಇದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿನ ದರಕ್ಕೆ ಸರಿಸುಮಾರು ಹೋಲಿಕೆಯಾಗುತ್ತದೆ.
ಗಮನಿಸಬೇಕಿರುವ ಸಂಗತಿಯೆಂದರೆ, 2015-16ರ ಅವಧಿಯಿಂದ ಬೆಳೆಯಿಂದ ಬರುವ ಆದಾಯವು ವಾರ್ಷಿಕವಾಗಿ ಶೇ.1.5ರಷ್ಟು ಕುಸಿದಿರುವುದರಿಂದ ರೈತರ ವಾರ್ಷಿಕ ಆದಾಯದಲ್ಲಿನ ಏರಿಕೆ ಕೂಡ ಕೃಷಿಯೇತರ ಆದಾಯದಿಂದ ಬಂದಿರುವುದಾಗಿದೆ.
ರೈತರ ಆದಾಯದಲ್ಲಿನ ಮಂದಗತಿಯ ಹೊರತಾಗಿಯೂ, ಕಳೆದ ದಶಕದಲ್ಲಿ ಭಾರತದ ಕೃಷಿ ವಲಯವು ಶೇ.3.8ರಷ್ಟು ಬೆಳೆದಿದೆ. ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗ ಹಿಂದಿನ ದಶಕದಲ್ಲಿ ಕಂಡುಬಂದ ಶೇ.3.5ರ ಬೆಳವಣಿಗೆಗಿಂತ ಸ್ವಲ್ಪ ಹೆಚ್ಚಿದೆ, ಅಷ್ಟೆ.
ರೈತರ ಆದಾಯವನ್ನು ದ್ವಿಗುಣಗೊಳಿಸುವ ವಿಚಾರದಲ್ಲಿನ ಪ್ರಗತಿಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅದನ್ನು ರಾಜ್ಯ ಸರಕಾರಗಳ ತಲೆಗೆ ಹೊರಿಸಿದ್ದರು. 2023ರ ಡಿಸೆಂಬರ್ನಲ್ಲಿ ಆ ಬಗ್ಗೆ ಪ್ರತಿಕ್ರಿಯಿಸಿದ್ದ ತೋಮರ್, ಕೃಷಿ ರಾಜ್ಯದ ವಿಷಯವಾಗಿರುವುದರಿಂದ ರಾಜ್ಯ ಸರಕಾರಗಳು ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣಕ್ಕಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎಂದಿದ್ದರು.
ರಾಜ್ಯ ಸರಕಾರಗಳ ಪ್ರಯತ್ನಗಳಿಗೆ ಕೇಂದ್ರ ಸರಕಾರ ಸೂಕ್ತವಾದ ನೀತಿ ಮತ್ತು ಬಜೆಟ್ ಬೆಂಬಲ, ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಪೂರಕವಾಗಿರಲಿದೆ ಎಂದು ತೋಮರ್ ಹೇಳಿದ್ದರು.
ಇನ್ನು ಕನಿಷ್ಠ ಬೆಂಬಲ ಬೆಲೆ ವಿಚಾರ. 2018-19ರ ಬಜೆಟ್ನಲ್ಲಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯು ತೂಕದ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ ಶೇ.50ರಷ್ಟು ಹೆಚ್ಚಿರಬೇಕು ಎಂಬ ರೈತರ ರಾಷ್ಟ್ರೀಯ ಆಯೋಗದ ಶಿಫಾರಸನ್ನು ಮೋದಿ ಸರಕಾರ ಅಳವಡಿಸಿಕೊಂಡಿದೆ.
ಇದನ್ನು ಅನುಸರಿಸಲಾಗಿದೆ ಎಂದೂ ಕೃಷಿ ಸಚಿವರು ಕಳೆದ ಡಿಸೆಂಬರ್ನಲ್ಲಿ ಸಂಸತ್ತಿಗೆ ತಿಳಿಸಿದ್ದರು. ಆದರೂ, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಗೆ ಹೋಲಿಸಿದರೆ ಕಳೆದ ದಶಕದಲ್ಲಿ ಕನಿಷ್ಠ ಬೆಂಬಲ ಬೆಲೆಗಳ ಏರಿಕೆ ಅತ್ಯಂತ ನಿಧಾನ ಗತಿಯಲ್ಲಿದೆ ಎಂಬುದನ್ನು ಸರಕಾರದ ಅಂಕಿಅಂಶಗಳು ತೋರಿಸುತ್ತವೆ.
ಕೃಷಿ ಯೋಜನೆಗಳಲ್ಲಿ ಮೋದಿ ಸರಕಾರದ ಪ್ರಮುಖ ಯೋಜನೆಯೆಂದರೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ. 2019ರಲ್ಲಿ ಪ್ರಾರಂಭವಾದ ಈ ನಗದು ವರ್ಗಾವಣೆ ಯೋಜನೆಯು ಪ್ರಸ್ತುತ ಈ ವಲಯಕ್ಕೆ ಕೇಂದ್ರ ಬಜೆಟ್ನ ಸುಮಾರು ಅರ್ಧದಷ್ಟು ಭಾಗವನ್ನು ಹೊಂದಿದೆ.
ಕಳೆದ ಡಿಸೆಂಬರ್ನಲ್ಲಿ ಸಂಸತ್ತಿನಲ್ಲಿ ಸರಕಾರ ಒದಗಿಸಿದ ಮಾಹಿತಿಯ ಪ್ರಕಾರ, ಯೋಜನೆ ಪ್ರಾರಂಭವಾದಾಗಿನಿಂದ 11 ಕೋಟಿ ರೈತರಿಗೆ ಇದರ ಪ್ರಯೋಜನ ಸಿಕ್ಕಿದೆ. ಹಾಗಿದ್ದೂ, ಭಾರತದ ಕೃಷಿ ಕಾರ್ಮಿಕರಲ್ಲಿ ಕನಿಷ್ಠ ಶೇ.55ರಷ್ಟಿರುವ ಭೂರಹಿತ ರೈತರು ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ.
ಮೋದಿ ಸರಕಾರ ತರಲು ಹೊರಟಿದ್ದ ಕೃಷಿ ಕಾನೂನುಗಳಂತೂ ರೈತವಿರೋಧಿಯಾಗಿದ್ದವು. 2020ರಲ್ಲಿ ಮೋದಿ ಸರಕಾರ ರೈತರು ತಮ್ಮ ಉತ್ಪನ್ನಗಳನ್ನು ಯಾವುದೇ ನಿರ್ಬಂಧಗಳಿಲ್ಲದೆ ಖಾಸಗಿ ಕಂಪೆನಿಗಳಿಗೆ ಮಾರಾಟ ಮಾಡಲು ಅನುವು ಮಾಡಿಕೊಡುವ ಮೂಲಕ ಭಾರತದ ಕೃಷಿ ವ್ಯಾಪಾರವನ್ನು ವಿಸ್ತರಿಸುವುದಾಗಿ ಹೇಳಿಕೊಳ್ಳುವ ಮೂರು ಕಾನೂನುಗಳನ್ನು ಅಂಗೀಕರಿಸಿತ್ತು. ಉತ್ತರ ಭಾರತದ ರೈತರು, ಕೃಷಿ ವಲಯವನ್ನು ಕಾರ್ಪೊರೇಟೀಕರಣ ಮಾಡುವ ಒಂದು ಕ್ರಮವೆಂದು ಆ ಕಾಯ್ದೆಗಳ ವಿರುದ್ಧ ನಿಂತರು. ವರ್ಷಗಟ್ಟಲೆ ಪ್ರತಿಭಟನೆ ನಡೆಸಿದರು. ಅಂತಿಮವಾಗಿ ಸರಕಾರ 2021ರಲ್ಲಿ ಆ ಕಾನೂನುಗಳನ್ನು ಹಿಂದೆಗೆದುಕೊಳ್ಳಬೇಕಾಗಿ ಬಂದಿತ್ತು.
(ಕೃಪೆ: scroll.in)