ಕೂಲಿಕಾರ
ಸಾಹುಕಾರನೊಬ್ಬ ಕೂಲಿಕಾರನನ್ನು ಬರ್ಬರವಾಗಿ ಥಳಿಸುತ್ತಿದ್ದ.
ಆ ದಾರಿಯಲ್ಲಿ ಹೋಗುತ್ತಿದ್ದ ಸಂತ ಅವನನ್ನು ತಡೆದು ಕೂಲಿಕಾರನನ್ನು ಬಿಡಿಸಿಕೊಂಡ.
ಸಂತ ಬಳಿಕ ಕೂಲಿಕಾರನನ್ನು ಸಂತೈಸಿ ಕೇಳಿದ ‘‘ನಿನ್ನ ಈ ಸಾಹುಕಾರ ಮೊದಲಿನಿಂದಲೂ ಹೀಗೆಯೇ ವರ್ತಿಸುತ್ತಿದ್ದಾರೆಯೆ?’’
ಕೂಲಿಕಾರ ಕೈ ಮುಗಿದು ಹೇಳಿದ ‘‘ಹಾಗೇನೂ ಇಲ್ಲ. ಮೊದಲು ತುಂಬಾ ಕ್ರೂರಿಯಾಗಿದ್ದರು. ಈ ಸ್ವಲ್ಪ ಒಳ್ಳೆಯವರಾಗಿದ್ದಾರೆ’’
‘‘ಅದು ಹೇಗೆ?’’ ಸಂತ ಅಚ್ಚರಿಯಿಂದ ಕೇಳಿದ
‘‘ಮೊದಲು ಜೋರಾಗಿ ಥಳಿಸುತ್ತಿದ್ದರು. ನೋವು ತಡೆಯಲಿಕ್ಕೆ ಆಗುತ್ತಿರಲಿಲ್ಲ. ಈಗ ಸ್ವಲ್ಪ ಮೆಲ್ಲಗೆ ಹೊಡೆಯುತ್ತಿದ್ದಾರೆ’’ ಕೂಲಿಕಾರ ಉತ್ತರಿಸಿದ.
ಸಂತ ನಕ್ಕ. ಹಾಗೂ ಬೆನ್ನು ತಟ್ಟಿ ಹೇಳಿದ ‘‘ನೋಡು, ಸಾಹುಕಾರ ಮೊದಲಿನಷ್ಟೇ ಜೋರಾಗಿ ಹೊಡೆಯುತ್ತಿದ್ದಾನೆ. ಅದರಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಆದರೆ ಆ ಪೆಟ್ಟಿಗೆ ನಿನ್ನ ದೇಹ ಜಡ್ಡು ಕಟ್ಟಿದೆ. ದೇಹ ಒಗ್ಗಿ ಹೋಗಿದೆ. ಆದುದರಿಂದ ನಿನಗೆ ಮೊದಲಿನಷ್ಟು ನೋವಾಗುತ್ತಿಲ್ಲ’’
Next Story