varthabharthi


ಫೋಕಸ್

ಪಾಲಡ್ಕ: ಗುಜರಿ ಮಾರಾಟ ಮಾಡಿ ಶಾಲೆಗೆ ಸಿಸಿ ಕ್ಯಾಮರಾ ನೀಡಿದ ಐಸಿವೈಎಂ ಸದಸ್ಯರು

ವಾರ್ತಾ ಭಾರತಿ : 24 Dec, 2015

ಶಾಲಾ ವಾರ್ಷಿಕೋತ್ಸವ, ಕಟ್ಟಡ ನಿರ್ಮಾಣ, ಆವರಣ ಗೋಡೆ ನಿರ್ಮಾಣ, ನೀರಿನ ಟ್ಯಾಂಕ್ ನಿರ್ಮಾಣಕ್ಕಾಗಿ ಊರಿನ ಜನರು ತಮ್ಮ ಕೈಲಾದಷ್ಟು ಶಾಲೆಗಳಿಗೆ ಧನ ಸಹಾಯ ಮಾಡುವುದು ಸಹಜ. ಆದರೆ ಊರಿನಲ್ಲಿರುವ ಗುಜರಿ ವಸ್ತುಗಳನ್ನು ರಾಶಿ ಹಾಕಿ ಮಾರಾಟ ಮಾಡಿ ಬಂದ ಹಣದಿಂದ ಶಾಲೆಗಾಗಿ ಸಿಸಿ ಕ್ಯಾಮರಾವನ್ನು ಖರೀದಿಸುವ ಮೂಲಕ ಪಾಲಡ್ಕದ ಐಸಿವೈಎಂ ಸದಸ್ಯರು ಗಮನ ಸೆಳೆದಿದ್ದಾರೆ.

ಮೂಡುಬಿದಿರೆ ವಲಯದ ಪಾಲಡ್ಕದ ಸಂತ ಇಗ್ನೇಷಿಯಸ್ ಅನುದಾನಿತ ಹಿ.ಪ್ರಾ. ಶಾಲೆಯು ಈ ವರ್ಷ ಶತಮಾನೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭವನ್ನು ನೆನಪಿನಲ್ಲಿಟ್ಟುಕೊಳ್ಳುವ ಉದ್ದೇಶದಿಂದ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಅದರಲ್ಲಿ ದಾನಿಗಳಿಂದ ಸಂಗ್ರಹಿಸಿದ 1.30 ಕೋಟಿ ರೂ. ವೆಚ್ಚದಲ್ಲಿ ಮೂರು ಅಂತಸ್ತಿನ ಕಟ್ಟಡವು ಸಿದ್ಧಗೊಂಡಿದೆ.

ಇದೀಗ ಈ ಶಾಲೆಯ ಶತಮಾನೋತ್ಸವದ ಸಂದರ್ಭದಲ್ಲಿ ತಾವೇನಾದರೂ ಸಹಾಯವನ್ನು ಮಾಡಬೇಕು ಎನುವ ಉದ್ದೇಶದಿಂದ ಶಾಲಾ ಆವರಣಕ್ಕೆ ಪಾಲಡ್ಕ ಐಸಿವೈಎಂ ಘಟಕದ 40 ಜನ ಸದಸ್ಯರು ಸೇರಿ ತಮ್ಮ ವ್ಯಾಪ್ತಿಯಲ್ಲಿರುವ ಮನೆ ಮನೆಗಳಿಗೆ ಭೇಟಿ ನೀಡಿ ಅಲ್ಲಿರುವ ಗುಜರಿ ವಸ್ತುಗಳನ್ನು ಸಂಗ್ರಹಿಸಿ ಚರ್ಚ್‌ನ ಬಳಿ ರಾಶಿ ಹಾಕಿ ನಂತರ ಅದನ್ನು ಹರಾಜು ಹಾಕಿ ಅದರಲ್ಲಿ ಬಂದ 1.60 ಲಕ್ಷ ರೂ.ನಲ್ಲಿ ಸಿಸಿ ಕ್ಯಾಮರಾವನ್ನು ಖರೀದಿಸಿ, ಶಾಲಾ ಆವರಣಕ್ಕೆ ಜೋಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪಾಲಡ್ಕ ಐಸಿವೈಎಂ ಘಟಕದಲ್ಲಿರುವ 40ರಷ್ಟು ಸದಸ್ಯರಲ್ಲಿ ಹೆಚ್ಚಿನ ಸದಸ್ಯರು ಸಂತ ಇಗ್ನೇಷಿಯಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು. ಆದ್ದರಿಂದ ತಾವೇನಾದರೂ ಶಾಲೆಗೆ ನೀಡಬೇಕೆನ್ನುವ ನಿಟ್ಟಿನಲ್ಲಿ ಹೊಸದೊಂದು ಪರಿ ಕಲ್ಪನೆಯೊಂದಿಗೆ ಮನೆ ಮನೆಯಿಂದ ಗುಜರಿಯನ್ನು ಸಂಗ್ರಹ ಮಾಡುವ ಕೆಲಸಕ್ಕೆ ಮುಂದಾದೆವು. ಗುಜರಿಯಿಂದ ಸಂಗ್ರಹವಾದ ಹಣದಿಂದ ಸಿಸಿ ಕ್ಯಾಮರಾವನ್ನು ಖರೀದಿಸಿ ಶಾಲೆಗೆ ನೀಡಿದ್ದೇವೆ ಎಂದು ಪಾಲಡ್ಕ ಐಸಿವೈಎಂ ಘಟಕದ ಅಧ್ಯಕ್ಷ ಸ್ಟೀವನ್ ಪಿಂಟೋ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು