ಯಶ್ ಅಭಿಮಾನಿಗಳಿಗಷ್ಟೇ ‘ಮಾಸ್ಟರ್ ಪೀಸ್’!
ಇತ್ತೀಚೆಗೆ ಕನ್ನಡ ಚಿತ್ರೋದ್ಯಮದಲ್ಲಿ ಯಶ್ ಕೂಡ ತಮ್ಮದೇ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಟಿವಿ ನಟನಾಗಿದ್ದ ಯಶ್ ತಮ್ಮ ಪ್ರತಿಭೆಯ ಬಲದಿಂದಲೇ ಮೇಲೆ ಬಂದವರು. ಹಲವು ವಿಭಿನ್ನ ಚಿತ್ರಗಳಲ್ಲಿ ಕಾಣಿಸಿಕೊಂಡು, ಎಲ್ಲ ವರ್ಗದವರನ್ನು ಅವರು ಸೆಳೆದಿದ್ದಾರೆ. ಯಶ್ ಅವರಿಗೆ ಅವರದೇ ಆದ ಒಂದು ಮ್ಯಾನರಿಸಂ ಇದೆ. ಅವರು ನಟಿಸಿದ್ದಾರೆ ಎನ್ನುವ ಕಾರಣಕ್ಕಾಗಿಯೇ ಅವರ ಚಿತ್ರಗಳನ್ನು ಇಷ್ಟಪಡುವವರು ಇದ್ದಾರೆ.
ಈ ಹಿನ್ನೆಲೆಯಲ್ಲಿ ಅವರ ‘ಮಾಸ್ಟರ್ ಪೀಸ್’ ಕುರಿತಂತೆ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ಅವರ ಅಭಿಮಾನಿಗಳನ್ನಷ್ಟೇ ಗುರಿಯಾಗಿರಿಸಿಕೊಂಡು ಈ ಚಿತ್ರವನ್ನು ತೆಗೆದಿದ್ದಾರೆ ಎನ್ನುವುದು ಚಿತ್ರ ಮಂದಿರ ಪ್ರವೇಶಿಸಿದ ಮೇಲೆ ಗಮನಕ್ಕೆ ಬರುತ್ತದೆ. ಚಿತ್ರದಲ್ಲೆಲ್ಲಾ ನಾಯಕನ ಅಬ್ಬರಕ್ಕೆ ಆದ್ಯತೆ. ಚಿತ್ರ ರವಿಚಂದ್ರನ್ ಅವರ ಹಳೆಯ ‘ಪೀಸ್ ಪೀಸ್’ ಡೈಲಾಗನ್ನು ನೆನಪಿಸುವಂತಿದೆ. ಅಂದರೆ, ನಾಯಕನ ಕೈಗೆ ಸಿಕ್ಕಿದ್ದೆಲ್ಲವೂ ಪೀಸ್ ಪೀಸ್. ತೆಳುವಾಗಿ ಭಗತ್‌ಸಿಂಗ್‌ನನ್ನು ಅನವಶ್ಯವಾಗಿ ಎಳೆದು ತರುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಮಗ ಭಗತ್ ಸಿಂಗ್‌ನಂತೆ ಆಗಬೇಕು ಎನ್ನುವುದು ತಾಯಿಯ ಆಸೆ. ಅಂತೆಯೇ ಮಗನನ್ನು ಬೆಳೆಸಲು ಇಷ್ಟ ಪಡುತ್ತಾಳೆ. ಎತ್ತು ಏರಿಗೆ ಎಳೆದರೆ, ಕೋಣ ಇನ್ನೆಲ್ಲಿಗೋ ಎಳೆಯಿತಂತೆ. ನಾಯಕ ಬೇರೆಯೇ ದಾರಿಯನ್ನು ಆರಿಸುತ್ತಾನೆ. ಶ್ರಮಕ್ಕೆ ಇಲ್ಲಿ ಬೆಲೆಯಿಲ್ಲ ಎನ್ನುವುದನ್ನು, ಬದುಕುವುದಕ್ಕೆ ತನ್ನದೇ ಅಡ್ಡ ದಾರಿಯನ್ನು ಆರಿಸಿಕೊಳ್ಳುತ್ತಾನೆ. ಕಾಲೇಜಿನಲ್ಲಿ ರೌಡಿ ಎನಿಸಿಕೊಂಡು ಮೆರೆಯುತ್ತಾನೆ. ರಾಜಕೀಯದಲ್ಲೂ ಕಾಲಿಡುತ್ತಾನೆ. ಒಟ್ಟಿನಲ್ಲಿ ನಾಯಕನ ವೈಭವೀಕರಣವೇ ಇಲ್ಲಿ ಮುಖ್ಯ. ಉತ್ತರಾರ್ಧದಲ್ಲಿ ಕಥೆ ಸಣ್ಣ ತಿರುವು ಪಡೆದುಕೊಳ್ಳುತ್ತದೆಯಾದರೂ, ಅದು ಸಿನೆಮಾಕ್ಕೆ ವಿಶೇಷ ಗಟ್ಟಿತನವನ್ನು ಕೊಡುವುದಿಲ್ಲ. ಹೋಮ್‌ವರ್ಕ್‌ನ ಕೊರತೆ ಎದ್ದು ಕಾಣುತ್ತಿದೆ. ಅಲ್ಲಲ್ಲಿ ಅತಿರೇಕದ ಸಂಭಾಷಣೆಗಳು ಕಿರಿ ಕಿರಿಯೆನಿಸುತ್ತದೆ. ಯಶ್‌ನ ಹೀರೋಯಿಸಂಗೆ ಬೇಕಾದ ಡಾನ್ಸ್, ಹೊಡೆದಾಟ ಇಲ್ಲಿದೆ. ಅದು ಅವರ ಅಭಿಮಾನಿಗೆ ಓಕೆ. ಚಿಕ್ಕಣ್ಣನ ಹಾಸ್ಯ ಪರವಾಗಿಲ್ಲ. ದತ್ತಣ್ಣನಿಗೆ ಹೆಚ್ಚಿನ ಅವಕಾಶವೇ ಇಲ್ಲ. ಸಂಗೀತದಲ್ಲಿ ವಿಶೇಷ ಅನ್ನಿಸುವುದು ಏನೂ ಇಲ್ಲ. ಛಾಯಾಗ್ರಹಣ ಪರವಾಗಿಲ್ಲ.
ಒಟ್ಟಿನಲ್ಲಿ ಯಶ್ ಅಭಿಮಾನಿಗಳಷ್ಟೇ ಸಹನೆಯಿಂದ ಕೂತು ನೋಡಬಹುದಾದ ಸಿನೆಮಾ. ಉಳಿದವರಿಗೆ ಇಲ್ಲಿ ಕೆಲಸವಿಲ್ಲ.