ಜೇಟ್ಲಿ ಕಂಬಿಯ ಹಿಂದೆ ಹೋಗುವರೇ?
ವರುಣ್‌ಗಾಂಧಿಗೆ ಅನುಪ್ರಿಯಾ ಶಾಕ್!
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮತೀಯ ಧ್ರುವೀಕರಣ ಹಾಗೂ ಜಾತಿ ಸಮೀಕರಣದ ಹೊರತಾಗಿ, ಮುಖ್ಯಮಂತ್ರಿ ಗಾದಿಗೆ ಬಿಂಬಿಸಲು ಭಾರತೀಯ ಜನತಾ ಪಕ್ಷ ವಿಶ್ವಾಸಾರ್ಹ ಮುಖದ ಹುಡುಕಾಟದಲ್ಲಿದ್ದು, ಪಕ್ಷದ ಅಧ್ಯಕ್ಷ ಅಮಿತ್ ಶಾ ಇಂಥ ಒಂದು ಮುಖ ಪರಿಚಯಿಸುತ್ತಿದ್ದಾರೆ ಎನ್ನಲಾಗಿದೆ. ಮಿರ್ಝಾಪುರದ ಸಂಸದೆ, ಯುವ ಹಾಗೂ ಕ್ರಿಯಾಶೀಲ ಮುಖಂಡರಾದ ಅನುಪ್ರಿಯಾ ಪಟೇಲ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಅನುಪ್ರಿಯಾ ಪಟೇಲ್, ಬಿಜೆಪಿಯ ಮೈತ್ರಿಪಕ್ಷವಾದ ಅಪ್ನಾದಳ ಸದಸ್ಯೆ. ಮುಖ್ಯಮಂತ್ರಿ ಗಾದಿಗೆ ಸಂಭಾವ್ಯ ಅಭ್ಯರ್ಥಿಗಳಾಗಿ ಬಿಜೆಪಿ ಗುರುತಿಸಿದ ಮುಖಗಳಲ್ಲಿ ಅನುಪ್ರಿಯಾ ಕೂಡಾ ಒಬ್ಬರು. ಇದಕ್ಕೆ ಪ್ರತಿಯಾಗಿ ಅಪ್ನಾದಳ ಬಿಜೆಪಿಯಲ್ಲಿ ತಾಂತ್ರಿಕವಾಗಿ ವಿಲೀನವಾಗಲಿದೆ. ದಿಲ್ಲಿಯ ಪ್ರತಿಷ್ಠಿತ ಲೇಡಿ ಶ್ರೀರಾಮ ಕಾಲೇಜಿನಿಂದ ಪದವಿ ಪಡೆದಿರುವ ಅನುಪ್ರಿಯಾ ಅವರನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲಿದೆ. ಪಟೇಲ್ ಬಿಜೆಪಿ ವರ್ತುಲದಲ್ಲಿ ಜನಪ್ರಿಯರಾಗಿರುವುದಷ್ಟೇ ಅಲ್ಲದೇ, ಅವರನ್ನು ಶ್ಲಾಘಿಸುವ ಬಳಗದ ಜಾಲ ಎನ್‌ಸಿಪಿಯ ಸುಪ್ರಿಯಾ ಸುಳೆ ಹಾಗೂ ಪ್ರಫುಲ್ ಪಟೇಲ್‌ವರೆಗೂ ಹರಡಿದೆ. ಪಟೇಲ್ ಬಗೆಗಿನ ಈ ಎಲ್ಲ ಮಾತುಕತೆಗಳು ವರುಣ್‌ಗಾಂಧಿಯವರನ್ನು ಕಂಗೆಡಿಸಿವೆ. ಇದುವರೆಗೂ ವರುಣ್ ಗಾಂಧಿಯವರೇ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದೀಗ ವರುಣ್ ಅವರಷ್ಟೇ ಮುಖ್ಯಮಂತ್ರಿ ಗಾದಿಯ ರೇಸ್‌ನಲ್ಲಿರುವ ಕುದುರೆ ಅಲ್ಲ ಎನ್ನುವುದು ಸ್ಪಷ್ಟವಾಗಿದೆ.
ಸುರೇಶ್ ಪ್ರಭು ಟ್ವಿಟ್ಟರ್ ಪರಿಹಾರ
ರೈಲ್ವೆ ಪ್ರಯಾಣಿಕರು ಸಲ್ಲಿಸುವ ದೂರನ್ನು ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ವರ್ಗಾಯಿಸುವ ರೂಢಿಯನ್ನು ಕೇಂದ್ರ ರೈಲ್ವೆ ಖಾತೆ ಸಚಿವ ಸುರೇಶ್‌ಪ್ರಭು ಮಾಡಿಕೊಂಡಿದ್ದಾರೆ. ಇದು ರೈಲ್ವೆ ಅಧಿಕಾರಿಗಳ ನಿದ್ದೆಗೆಡಿಸಿದೆ. ರೈಲ್ವೆ ಇಲಾಖೆಯ ಸೇವೆಗಳು ಸಮರ್ಪಕವಾಗಿ ಜನತೆಗೆ ದೊರಕುವಂತೆ ಮಾಡಲು ರೈಲ್ವೆ ಮಂಡಳಿ ಸದಸ್ಯರು ಕೂಡಾ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ರೈಲ್ವೆ ಸಚಿವರ ಪಾರದರ್ಶಕ ಮತ್ತು ಪ್ರಾಮಾಣಿಕತೆ ಹಿನ್ನೆಲೆಯಲ್ಲಿ ರೈಲು ಪ್ರಯಾಣಿಕರು ತೀರಾ ಸಣ್ಣ ಸಮಸ್ಯೆಗಳ ಬಗ್ಗೆ ಕೂಡಾ ಸಚಿವರ ಟ್ವಿಟ್ಟರ್ ಅಕೌಂಟ್‌ಗೆ ಟ್ಯಾಗ್ ಮಾಡುತ್ತಾರೆ ಇಲ್ಲವೇ ನೇರವಾಗಿ ಸಚಿವರಿಗೆ ಟ್ವೀಟ್ ಮಾಡುತ್ತಾರೆ. ಫ್ಲಾಟ್‌ಫಾರಂಗಳಲ್ಲಿ ಟಿಕೆಟ್ ಖರೀದಿಗೆ ದೊಡ್ಡ ಸರದಿ ಸಾಲುಗಳಿವೆ ಎಂಬಲ್ಲಿಂದ ಹಿಡಿದು, ಶಿಶುಗಳಿಗೆ ರೈಲು ನಿಲ್ದಾಣಗಳಲ್ಲಿ ಹಾಲು ಪಡೆಯಲು ಎದುರಾಗುತ್ತಿರುವ ಸಮಸ್ಯೆ, ಪ್ರಯಾಣಿಕರಿಗೆ ರೈಲ್ವೆ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳದಂಥ ವಿಷಯಗಳ ಬಗ್ಗೆ ಕೂಡಾ ಟ್ವೀಟ್ ಮಾಡಲಾಗುತ್ತದೆ. ಇಂಥ ಅಹವಾಲುಗಳಿಗೆ ಸಚಿವರ ಆದೇಶಗಳು ಕೂಡಾ ಸಾಮಾನ್ಯ ಕೆಲಸದ ಅವಧಿಯನ್ನು ಮೀರಿಯೂ ಬರುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು, ಪ್ರಯಾಣಿಕರ ವ್ಯಾಜ್ಯಗಳಿಗೆ ಸಮಾಧಾನಕರ ಪರಿಹಾರ ದೊರಕಿಸಿಕೊಡುವವರೆಗೂ ಕಚೇರಿಯಲ್ಲಿ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಇಲ್ಲಿ ಸಚಿವರು ತಮ್ಮ ಅಧಿಕಾರಿಗಳಿಗೆ ತಕ್ಕ ಕೆಲಸವನ್ನೇ ಕೊಡುತ್ತಿದ್ದಾರೆ.
ಟಿವಿಯಲ್ಲಿ ಕಾಂಗ್ರೆಸ್ ವೌಲ್ಯಮಾಪನ
ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಹಾಜರಾದರು ನಿಜ; ಇದೇ ವೇಳೆಗೆ ದೇಶದ ಮೂಲೆಮೂಲೆಗಳಿಂದ ನೂರಾರು ಮಂದಿ ಬೆಂಬಲಿಗರನ್ನು ಕರೆಸಿಕೊಂಡು ಸ್ವಲ್ಪಮಟ್ಟಿಗೆ ಶಕ್ತಿಪ್ರದರ್ಶನವನ್ನೂ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಪಕ್ಷದ ಅಧಿಕಾರಿಗಳ ಜತೆಗಿನ ಸಭೆಯನ್ನು ಸರಿಸಿ ಟಿವಿ ವೀಕ್ಷಣೆಗೆ ತೊಡಗಿದರು. ಜತೆಗೆ ಈ ಬಗ್ಗೆ ಬಿಜೆಪಿ ಪದಾಧಿಕಾರಿಗಳ ಅಭಿಪ್ರಾಯವನ್ನು ಸಂಗ್ರಹಿಸಲು ದೂರವಾಣಿ ಕರೆಗಳನ್ನು ಮಾಡುವುದರಲ್ಲಿ ತಲ್ಲೀನರಾಗಿದ್ದರು ಎನ್ನಲಾಗಿದೆ. ಜೊತೆಗೆ ಈ ಕಾಂಗ್ರೆಸ್ ಪ್ರದರ್ಶನದ ಬಗ್ಗೆ ತಳಮಟ್ಟದಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲು ಕೂಡಾ ಮುಂದಾಗಿದ್ದರು ಎನ್ನಲಾಗಿದೆ. ನ್ಯಾಯಾಲಯ ಕಲಾಪ ಮುಗಿದ ಬಳಿಕ ಸೋನಿಯಾ ಹಾಗೂ ರಾಹುಲ್, ಕೇಂದ್ರ ಸರಕಾರ ಹಾಗೂ ಮೋದಿ ಮೇಲೆ ಪ್ರತಿದಾಳಿ ಆರಂಭಿಸಿದ್ದರಿಂದ ಬಿಜೆಪಿಗೆ ಆರಂಭದಲ್ಲಿ ದಿಗಿಲು ಉಂಟಾಯಿತು ಎಂದು ಮೂಲಗಳು ಹೇಳಿವೆ. ಆದರೆ ಬಿಜೆಪಿ ಕಾದುನೋಡುವ ತಂತ್ರ ಅನುಸರಿಸುವ ನಿರ್ಧಾರ ಕೈಗೊಂಡಿತು ಮತ್ತು ಕಾಂಗ್ರೆಸ್‌ನ ಎಲ್ಲ ಕಾರ್ಯತಂತ್ರವನ್ನು ವೀಕ್ಷಿಸಲು ಮುಂದಾಯಿತು. ನ್ಯಾಷನಲ್ ಹೆರಾಲ್ಡ್ ಪ್ರಕರಣದ ಲಂಚದ ಅಂಶಗಳ ಬಗ್ಗೆ ಬೆಳಕು ಚೆಲ್ಲುವಂತೆ ಶಾ ಪಕ್ಷದ ಸದಸ್ಯರಿಗೆ ಕರೆ ನೀಡಿದ್ದಾರೆ ಎನ್ನಲಾಗಿದ್ದು, ಬಿಜೆಪಿ ಮೇಲೆ ಕಾಂಗ್ರೆಸ್ ನಡೆಸಿದ ವಾಗ್ದಾಳಿಯನ್ನು ಗಂಭೀರವಾಗಿ ಪರಿಗಣಿಸದಂತೆ ಸೂಚನೆ ನೀಡಿದ್ದಾರೆ.
ಜೇಟ್ಲಿ ಕಂಬಿಯ ಹಿಂದೆ ಹೋಗುವರೇ?
ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರಣೆಗೆ ಸೋನಿಯಾ ಹಾಗೂ ರಾಹುಲ್ ಆಗಮಿಸುವ ಹಿನ್ನೆಲೆಯಲ್ಲಿ ಪಾಟಿಯಾಲಾ ಹೌಸ್ ನ್ಯಾಯಾಲಯ ಸಂಕೀರ್ಣ ಅಕ್ಷರಶಃ ವಾಸ್ತವ ಕೋಟೆಯಾಗಿತ್ತು. ಇದಾದ ಎರಡೇ ದಿನಗಳಲ್ಲಿ, ಮತ್ತೆ ಅದೇ ತದ್ರೂಪಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ತಮ್ಮ ಕಟ್ಟಾ ಅನುಯಾಯಿ ಪಡೆಯೊಂದಿಗೆ ಆಗಮಿಸಿದರು. ನ್ಯಾಯಾಲಯದ ಬಾಗಿಲು ಬಲವಂತವಾಗಿ ಮುಚ್ಚುವವರೆಗೂ ನ್ಯಾಯಾಲಯ ಪಡಸಾಲೆಗೂ ಬೆಂಬಲಿಗರು ಲಗ್ಗೆ ಇಟ್ಟಿದ್ದರು. ಬೆಂಬಲಿಗರು ಹಾಗೂ ವಾಹನಗಳ ಮೆರವಣಿಗೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮತಿ ಇರಾನಿ ಜೇಟ್ಲಿಯವರಂತೆ ಮೊದಲ ವಾಹನದಲ್ಲಿ ಬಂದಿಳಿದರು. ನಂತರ ಸಚಿವರಾದ ನಿರ್ಮಲಾ ಸೀತಾರಾಮನ್, ವೆಂಕಯ್ಯ ನಾಯ್ಡು, ರಾಜ್ಯವರ್ಧನ್ ರಾಥೋಡ್, ಸಂಸದೆ ಮೀನಾಕ್ಷಿ ಲೇಖಿ ಒಬ್ಬೊಬ್ಬರಾಗಿ ಆಗಮಿಸಿದರು. ಇತರ ಮುಖಂಡರಾದ ವೀರೇಂದ್ರ ಗುಪ್ತಾ, ವಿಜಯ ಗೋಯಲ್, ನಳಿನ್ ಕೊಹ್ಲಿ ತಕ್ಷಣ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಇತರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಆಗಮಿಸಿದರು. ದಿಲ್ಲಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್‌ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಜೇಟ್ಲೆ ವಿರುದ್ಧ ಆರೋಪ ಮಾಡಿದ್ದಕ್ಕಾಗಿ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದೆ. ಇಡೀ ಕಲಾಪದುದ್ದಕ್ಕೂ ಜೇಟ್ಲೆ ನಿಂತೇ ಇದ್ದರು ಹಾಗೂ ಒಂದು ಮಾತನ್ನೂ ಆಡಲಿಲ್ಲ. ಆಗೊಮ್ಮೆ ಈಗೊಮ್ಮೆ ತಮ್ಮ ವಕೀಲ ಸಿದ್ಧಾರ್ಥ ಲೂಥ್ರಾ ಜತೆ ಸಂವಾದ ನಡೆಸುತ್ತಿದ್ದರು. ಅರವಿಂದ್ ಕೇಜ್ರಿವಾಲ್, ಕುಮಾರ್ ವಿಶ್ವಾಸ್, ಅಶುತೋಷ್, ಸಂಜಯ ಸಿಂಗ್, ರಾಜೀವ್‌ಚಂದ್ರ ಹಾಗೂ ದೀಪಕ್ ಬಾಜಪೇಯಿ ವಿರುದ್ಧ, ಮಾನಹಾನಿಕರವಾಗಿ ಮಾತನಾಡಿದ ಬಗ್ಗೆ ಜೇಟ್ಲಿ ಮಾನಹಾನಿ ಮೊಕದ್ದಮೆ ದಾಖಲಿಸಿದ್ದಾರೆ. ಈ ಪ್ರಕರಣಕ್ಕಿಂತ ಹೆಚ್ಚಾಗಿ ಬಿಜೆಪಿಯ ಈ ಅಬ್ಬರದ ಪ್ರದರ್ಶನ ನಗರದಲ್ಲಿ ಚರ್ಚೆಯ ವಸ್ತುವಾಗಿತ್ತು.
ಪರಿಸರಸ್ನೇಹಿ ಸಂಸದ
ಹಿರಿಯ ವಕೀಲ ಹಾಗೂ ರಾಜ್ಯಸಭಾ ಸದಸ್ಯ ಕೆ.ಟಿ.ಎಸ್.ತುಳಸಿ ಇತ್ತೀಚೆಗೆ ಸಂಸತ್ತಿಗೆ ಸೈಕಲ್ ಸವಾರಿ ಮಾಡಿಕೊಂಡು ಆಗಮಿಸಿದ್ದು, ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಒಂದಷ್ಟು ಗಂಭೀರ ಚಿಂತನೆ ಹೊಂದಿದಂತೆ ಕಾಣುತ್ತದೆ. ಈ ಹಿರಿಯ ಕಾನೂನು ತಜ್ಞ ಇತ್ತೀಚೆಗೆ ಭಾರತದ ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರ ಬರೆದು, ಸುಪ್ರೀಂಕೋರ್ಟ್ ಆವರಣದಲ್ಲಿ ಬೈಸಿಕಲ್ ನಿಲುಗಡೆಗೆ ಸ್ಥಳ ನಿಗದಿ ಮಾಡುವಂತೆ ಕೋರ್ಟ್ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಕೋರಿದ್ದರು. ಪರಿಸರ ಸಂಬಂಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಠಾಕೂರ್ ಅವರು ತುಳಸಿಯವರ ಪತ್ರದ ಬಗ್ಗೆ ಉಲ್ಲೇಖಿಸಿದ್ದಾರೆ. ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಈಗಾಗಲೇ ಈ ವಿಷಯವನ್ನು ಗಮನಕ್ಕೆ ತಂದಿದ್ದು, ಈ ಕೋರಿಕೆಯನ್ನು ಸಕಾರಾತ್ಮಕವಾಗಿ ಪರಿಗಣಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾಗಿ ಮುಖ್ಯನ್ಯಾಯಮೂರ್ತಿ ಹೇಳಿದ್ದಾರೆ. ತುಳಸಿಯವರಿಗೆ ಧನ್ಯವಾದ. ಈ ಕ್ರಮ ಖಂಡಿತವಾಗಿಯೂ ಹೆಚ್ಚು ಸಂಸದರು ಹಾಗೂ ಸುಪ್ರೀಂಕೋರ್ಟ್ ವಕೀಲರು ಕೋರ್ಟ್‌ಗೆ ಸೈಕಲ್ ಸವಾರಿಯಲ್ಲಿ ಬರಲು ಪ್ರೇರಣೆಯಾಗಬಹುದು!