varthabharthi


ಒರೆಗಲ್ಲು

ನನ್ನ ಸಂಶೋಧನಾನುಭವ

ವಾರ್ತಾ ಭಾರತಿ : 1 Jan, 2016

1976ರಲ್ಲಿ ನಾನು ‘ತುಳುನಾಡಿನ ಸ್ಥಳನಾಮಾಧ್ಯಯನ’ ಎಂಬ ವಿಷಯದ ಕುರಿತು ಪಿಎಚ್.ಡಿ.ಗಾಗಿ ಹೆಸರು ನೋಂದಾಯಿಸಿದಾಗ ಗೆಳೆಯ ಪ್ರೊ. ಕೆ.ಎಸ್. ಕೆದ್ಲಾಯರು ಒಂದು ಸಲಹೆ ನೀಡಿದರು. ‘‘ಬಸ್ಸಿನಲ್ಲಿ ಹೋಗುವಾಗ ಒಂದು ಬದಿ, ವಾಪಸ್ಸಾಗುವಾಗ ಇನ್ನೊಂದು ಬದಿಯ ಊರಿನ ಹೆಸರುಗಳನ್ನು ಪಟ್ಟಿಮಾಡುತ್ತ ಹೋಗಿ; ಅವುಗಳ ಕುರಿತಾದ ಐತಿಹ್ಯಗಳನ್ನು ಕಲೆಹಾಕಿ; ಸುಲಭದಲ್ಲಿ ಪಿಎಚ್.ಡಿ.ಯಾಗುತ್ತದೆ’’-ಎಂದು. ಹೌದು, ಅವರು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು. ಅವರ ಕಾಲೇಜಿನ ಪ್ರಾಂಶುಪಾಲ ಡಾ. ಪಿ. ಗುರುರಾಜ ಭಟ್ಟರು ನನ್ನ ಮೊದಲ ಮಾರ್ಗದರ್ಶಿ. ತುಸು ತಮಾಷೆಮಾಡುವ ಸ್ವಭಾವದ ಕೆದ್ಲಾಯರು ನನ್ನ ಕೆಲಸ ಬಸ್ ನಿರ್ವಾಹಕನ ಕೆಲಸವೆಂದು ಬಗೆದಿದ್ದಾರೆಂದು ತಿಳಿದಿರಲಿಲ್ಲ. ಆದರೆ, ನನ್ನ ನಂತರ ಪಿಎಚ್.ಡಿ. ಪಡೆದ ಮಹನೀಯರು ಯಾವೆಲ್ಲ ವಿಷಯದ ಮೇಲೆ, ಯಾವ್ಯಾವ ವಿಧಾನದಲ್ಲಿ ನಿರ್ವಹಿಸುತ್ತಾರೆಂದು ನನಗೆ ತಿಳಿದಿದೆ. ಕೆಲವರು ಸ್ಥಳನಾಮಗಳ ವಿಷಯದಲ್ಲೇ ಐತಿಹ್ಯಗಳನ್ನು, ಪೌರಾಣಿಕತೆಯನ್ನು ಅಥವಾ ವಿದೇಶೀ ಯಾತ್ರಿಕರ ಬರೆಹಗಳನ್ನೋ ಆಕರವಾಗಿರಿಸಿಕೊಂಡು ಸಂಪ್ರಬಂಧ ಬರೆದು ಪಿಎಚ್.ಡಿ. ಗಳಿಸಿದ್ದಾರೆ. ಇನ್ನು ಕೆಲವರು ವಿವರಣಾತ್ಮಕ ಇಲ್ಲವೇ ಎರಡು ಗ್ರಂಥಗಳ ತೌಲನಿಕ ಅಧ್ಯಯನವನ್ನೋ ಕೈಗೊಂಡಿರುವುದು ನನ್ನ ಗಮನಕ್ಕೆ ಬಂದಿದೆ.

 ಕಾಲೇಜಿಗೆ ಬೇಸಿಗೆ ರಜೆಯಿದ್ದಾಗ ಡಾ. ಪಿ. ಗುರುರಾಜ ಭಟ್ಟರನ್ನು ಭೇಟಿಯಾಗಿ ಸ್ಥಳನಾಮಗಳ ಕುರಿತು ಪಿಎಚ್.ಡಿ. ಅಧ್ಯಯನಕ್ಕೆ ಮಾರ್ಗದರ್ಶಿಯಾಗಬೇಕೆಂದು ವಿನಂತಿಸಿದಾಗ ಸಂತೋಷದಿಂದ ಒಪ್ಪಿದರು. ಅವರ ಬಿಡಾರದಿಂದ ಮಿಲಾಗ್ರಿಸ್ ಕಾಲೇಜಿಗೆ ನಡೆದುಕೊಂಡು ಹೋಗುವಾಗ ದಾರಿಯುದ್ದಕ್ಕೂ ಸ್ಥಳನಾಮಗಳ ಮಹತ್ವ, ಅಧ್ಯಯನದ ಸ್ವರೂಪ, ವಿಧಾನಗಳ ಬಗ್ಗೆ ನಿರೂಪಿಸುತ್ತ ಹೋದರು. ಅವರ ಮುಖ್ಯ ಕಾರ್ಯಕ್ಷೇತ್ರ ಪ್ರತಿಮಾವಿಜ್ಞಾನ ಮತ್ತು ಆಗಿನ ದ.ಕ. ಜಿಲ್ಲೆಯ ಚರಿತ್ರೆಯೇ ಆಗಿದ್ದರೂ, ಕೆಲವಾದರೂ ವೌಲಿಕವಾದ ಲೇಖನಗಳನ್ನು ಸ್ಥಳನಾಮಗಳ ಕುರಿತು ಅವರು ಆಗಲೇ ಬರೆದಿದ್ದರು. ಶಂಬಾ ಜೋಶಿ ಅವರ ‘ಎಡೆಗಳು ಹೇಳುವ ಕಂನಾಡ ಕತೆ’ಯ ಮಾದರಿಯಲ್ಲಿ ‘ಎಡೆಗಳು ಹೇಳುವ ತುಳುವರ ಕತೆ’ ಎಂಬ ಗ್ರಂಥ ಬರೆದಿದ್ದರು. ಆದರೆ, ಪಂಜೆ ಅವರ ‘ಸ್ಥಳನಾಮ’ ಲೇಖನ, ಶಂಬಾ ಅವರ ‘ಎಡೆಗಳು....’ ಗ್ರಂಥದ ಶೈಲಿಯನ್ನೇ ಅವರು ಅನುಕರಿಸಿ ಬರೆದರು. ಮಾಸ್ತಿ ಅವರು ಊರಿನ ಹೆಸರುಗಳ ಕುರಿತು ಕಥನಗೀತೆಗಳನ್ನು ಬರೆದಿದ್ದರು. ಇವೆಲ್ಲ ಕ್ಷೇತ್ರಕಾರ್ಯಾಧಾರಿತ ಗ್ರಂಥಗಳಲ್ಲ. ವೈನೋದಿಕ ಮತ್ತು ಐತಿಹ್ಯಾಧಾರಿತ ಬರೆಹಗಳು. ಇವರೇ ಯಾಕೆ, ಪ್ರೊ. ಕೆ.ಎಂ. ಜಾರ್ಜ್ ಎಂಬವರು ‘ದ. ಭಾರತದ ಸ್ಥಳನಾಮಗಳು’ ಎಂಬ ಗ್ರಂಥವನ್ನು ಬರೆದಿದ್ದಾರೆ. ಸ್ಥಳನಾಮಗಳ ನಿಷ್ಪತ್ತಿಯಲ್ಲಿ ಕ್ಷೇತ್ರಕಾರ್ಯ ಮತ್ತು ಬಹುಮುಖೀ ಸೂಕ್ಷ್ಮ ಅಧ್ಯಯನವಿಲ್ಲವಾದರೆ ಏನೆಲ್ಲಾ ಪ್ರಮಾದಗಳಾಗುತ್ತವೆ ಎಂಬುದಕ್ಕೆ ಬಹಳ ಹಿಂದೆಯೇ ನಾನು ಬರೆದಿದ್ದ ಈ ಗ್ರಂಥದ ವಿಮರ್ಶೆ ಸಾಕ್ಷಿ.

ಸುಮಾರು ಒಂದೂವರೆ ವರ್ಷ ಕಾಲ ನನ್ನ ಮಾರ್ಗದರ್ಶಿಯಾಗಿದ್ದ ಡಾ. ಭಟ್ಟರು ಇನ್ನಿಲ್ಲವಾದಾಗ, ನಾನು ಅಧ್ಯಯನ ನಿಲ್ಲಿಸಲಿಲ್ಲ. ಕಾಲೇಜಿಗೆ ರಜೆಯಿದ್ದ ಕಾಲದಲ್ಲಿ ಊರೂರು ಸಂಚರಿಸುತ್ತಾ ಸ್ಥಳಸಮೀಕ್ಷೆ ಮಾಡುತ್ತಿದ್ದೆ; ಮೂಲಾಕರಗಳಿಗಾಗಿ ತಡಕಾಡುತ್ತಿದ್ದೆ. ಪಿಎಚ್.ಡಿ. ಅಧ್ಯಯನದ ವೇಳೆ ವಿದ್ವತ್ ಪತ್ರಿಕೆಗಳಿಗೆ, ಅಧಿವೇಶನಗಳಲ್ಲಿ ಪ್ರಬಂಧ ಸಾದರಪಡಿಸುತ್ತಿದ್ದೆ; ಕೆಲವೆಡೆ ಸ್ಥಳನಾಮಗಳ ಮಹತ್ವದ ಕುರಿತು ಉಪನ್ಯಾಸ ಕೂಡಾ ನೀಡುತ್ತಿದ್ದೆ. ಆಗ ಪ್ರೊ. ಕು.ಶಿ. ಹರಿದಾಸಭಟ್ಟರು ನಾನು ಪಿಎಚ್.ಡಿ. ಮಾಡುತ್ತಿದ್ದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕರಾಗಿದ್ದರು. ಅವರ ಪ್ರಕಾರ ಪಿಎಚ್.ಡಿ. ಪದವಿ ಪಡೆಯುವ ಮೊದಲು ಆ ಕುರಿತು ಲೇಖನ ಬರೆಯುವುದಾಗಲಿ, ಭಾಷಣ ಮಾಡುವುದಾಗಲಿ ಸರಿಯಾದ ಕ್ರಮವಲ್ಲ ಎಂಬುದನ್ನು ಸೌಮ್ಯವಾಗಿ ತಿಳಿಹೇಳಿದರು. ಆದರೆ, ನನ್ನ ಅಭಿಪ್ರಾಯ ಬೇರೆಯೇ ಆಗಿತ್ತು. ನಾವು ಪಿಎಚ್.ಡಿ. ಅಧ್ಯಯನ ಮಾಡುತ್ತಿರುವಾಗಲೇ ಭಾಷಣ-ಲೇಖನಗಳ ಮೂಲಕ ಜನರೊಂದಿಗೆ ಸಂವಾದಿಸುತ್ತಾ ಇರಬೇಕು; ಆಗ ಮಾತ್ರ ಜನರ ಪ್ರತಿಕ್ರಿಯೆಗಳ ಮೂಲಕ ನಮ್ಮ ಅಭಿಪ್ರಾಯಗಳನ್ನು ಮರುದೃಢೀಕರಿಸುವುದು ಅಥವಾ ಪರಿಷ್ಕರಿಸುವುದು ಸಾಧ್ಯವಾದೀತು -ಎಂಬುದು ನನ್ನ ನಿಲುವು. ಈ ನಿಲುವು ಹೆಚ್ಚು ಆರೋಗ್ಯಪೂರ್ಣವೂ ಪ್ರಜಾಸತ್ತಾತ್ಮಕವೂ ಆದುದೆಂಬುದು ಇಂದಿಗೂ ನನ್ನ ನಂಬುಗೆ. ಪ್ರತಿಕ್ರಿಯೆ ಬರಲಿ, ಬರದಿರಲಿ; ನಾವು ಮಾಡುವ ಸಂಶೋಧನೆಯ ಫಲಿತಾಂಶ ಅಂತಿಮವಾಗಿ ಜನತೆಗೇ ಮುಟ್ಟಬೇಕು ಅಲ್ಲವೇ?

ಕ್ಷೇತ್ರಕಾರ್ಯದ ವೇಳೆ ಮೊದಮೊದಲು ಗ್ರಾಮೀಣ ಪ್ರದೇಶದಲ್ಲಿ ಅಭಿಜ್ಞರೆನಿಸಿಕೊಂಡ ನಿವೃತ್ತ ಶಿಕ್ಷಕರು, ಸರಕಾರಿ ಅಧಿಕಾರಿಗಳು, ಲೇಖಕರು, ದೇವಳಗಳ ಧರ್ಮದರ್ಶಿಗಳು, ಪುರೋಹಿತರು, ಯಕ್ಷಗಾನ ಕಲಾವಿದರು. ಇಂಥವರನ್ನು ಭೇಟಿಯಾಗಿ ಸ್ಥಳನಾಮಗಳ ಹಿನ್ನೆಲೆ ಕುರಿತು ಚರ್ಚಿಸುತ್ತಿದ್ದೆ. ಎಲ್ಲಿಯೂ ನನಗೆ ಕೆಟ್ಟ ಅನುಭವವಾಗಿತ್ತೆಂದು ಹೇಳುವಂತಿಲ್ಲ. ಆದರೆ, ನಾನು ಸಂಶೋಧನಾವಧಿಯಲ್ಲಿ ಅವಿವಾಹಿತ; ಹಿರಿಯರಲ್ಲಿ ಮಾತಾಡುವಾಗ ಎಷ್ಟೋ ಕಡೆ ಸಜಾತಿಯವರ ಪ್ರಬುದ್ಧ ಯುವತಿಯರು ಮಾತಾಡುತ್ತಿದ್ದುದುಂಟು. ಊಟೋಪಚಾರ ಸ್ವೀಕರಿಸಬೇಕೆಂದು ಅಥವಾ ಧಾರ್ಮಿಕ ವಿಧಿಗಳಿದ್ದಲ್ಲಿ ಅವು ಪೂರ್ತಿಯಾಗುವವರೆಗೆ ಇರಬೇಕೆಂದು ಒತ್ತಾಯಿಸುತ್ತಿದ್ದುದುಂಟು. ಕೆಲವು ಹಿರಿಯರು ತಮ್ಮ ವಿಚಾರವೇ ಅಂತಿಮವೆಂದು ಹೇರುತ್ತಿದ್ದುದೂ ಉಂಟು. ಆನಂತರದ ದಿನಗಳಲ್ಲಿ ನಾನು ಅನುಸರಿಸಿದ ಮಾರ್ಗ ಸರಿಯಾದುದು ಎಂದು ಈಗ ನನಗನಿಸುತ್ತದೆ. ಅದೇನೆಂದರೆ, ವಿವಿಧ ಗ್ರಾಮಪಂಚಾಯತ್‌ಗಳಿಗೆ ಭೇಟಿಯಾಗುವುದು; ಅಲ್ಲಿ ಗ್ರಾಮಲೆಕ್ಕಿಗರನ್ನೋ, ಹಳ್ಳಿಗರನ್ನೋ ಸಂಪರ್ಕಿಸಿ ಚರ್ಚಿಸುವುದು. ಈ ಗ್ರಾಮಲೆಕ್ಕಿಗರು ಹಲವಾರು ಗ್ರಾಮಪಂಚಾಯತುಗಳಲ್ಲಿ ಕಾರ್ಯವೆಸಗಿ ವರ್ಗವಾಗಿ ಬಂದಿರುತ್ತಾರೆ. ಅಂಥ ಊರುಗಳ ಕ್ಷೇತ್ರಗಳ ಹೆಸರನ್ನು ಪಟ್ಟಿ ಮಾಡುವುದು; ಮತ್ತು ಆ ಕ್ಷೇತ್ರಗಳ ಭೂವೈಶಿಷ್ಟವನ್ನು ಅವರಲ್ಲಿ ವಿಚಾರಿಸಿ ಊರಿನ ಹೆಸರಿನ ನಿಷ್ಪತ್ತಿ ಕುರಿತು ಒಂದು ತೀರ್ಮಾನಕ್ಕೆ ಬರುವುದು; ಈ ತೀರ್ಮಾನಕ್ಕೆ ಮೊದಲು ಭಾಷಾವಿಜ್ಞಾನ-ಭೂ ವಿವರ-ಶಾಸನ ವಿಜ್ಞಾನ-ಸಾಮಾಜಿಕ ಕುಲಶಾಸ್ತ್ರೀಯ ಮತ್ತು ಜಾನಪದೀಯ ಅಂಶಗಳನ್ನು ಹಿನ್ನೆಲೆಯಾಗಿರಿಸಿಕೊಳ್ಳುವುದು; ಎಲ್ಲಕ್ಕಿಂತ ಮುಖ್ಯವಾಗಿ ಸ್ಥಳನಾಮಕರಣದ ಆಶಯವನ್ನು ಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿ ಲಕ್ಷದಲ್ಲಿರಿಸಿಕೊಳ್ಳುವುದು -ಇದು ಸಂಶೋಧನಾಧ್ಯಯನದ ವೇಳೆ ನಾನು ಅನುಸರಿಸಿದ ವಿಧಾನ. ಹೀಗಾಗಿ, ನನ್ನ ಪರಿಶೀಲನೆಗಳು ಮತ್ತು ನಿಷ್ಪತ್ತಿವಿಧಾನ ಇಂದಿಗೂ ಕರಾರುವಕ್ಕಾಗಿ ಉಳಿದುಬರಲು ಸಾಧ್ಯವಾಯಿತು.

ಕೆಲವೊಮ್ಮೆ ಸಂತೆ, ಜಾತ್ರೆ, ಹಳ್ಳಿ ಹೋಟೆಲುಗಳಿಂದಲೂ ನನಗೆ ಅಮೂಲ್ಯ ಸಹಾಯವಾಗಿದೆ. ನನಗೆ ನೆನಪಾಗುವ ಪ್ರಕಾರ ವಿಟ್ಲದ ಬಳಿ ಹೊಟೇಲಿಗೆ ಹೊಕ್ಕು ಚಹಾ ಹೀರುತ್ತಿದ್ದೆ. ತುಳುವಿನಲ್ಲಿ ಮುಕ್ತವಾಗಿ ಮಾತಾಡಿದರಾಯಿತು; ಹಳ್ಳಿಗರು ತಮ್ಮರಿವಿನ ಸಂಗತಿಗಳನ್ನು ಯಾವ ಮುಲಾಜಿಲ್ಲದೆ ಬಿಚ್ಚಿಡುತ್ತಿದ್ದರು. ‘ಇಡ್ಕಿದು’ ಎಂಬ ಸ್ಥಳದಲ್ಲಿ ದಾರಿಯಲ್ಲಿ ಕೆರೆ(ಕೆದು) ಇದೆಯೆ? ಈ ನೀರನ್ನು ಊರಿನ ಜನರೆಲ್ಲಾ ಉಪಯೋಗಿಸಬಹುದೇ ಎಂದು ತುಳುಭಾಷೆಯಲ್ಲಿ ಕೇಳಿದೆ. ಉತ್ತರ ದೊರೆಯಿತು. ಸ್ಥಳನಾಮದ ನಿಷ್ಪತ್ತಿಯೂ ಹೊರಹೊಮ್ಮಿತು.

ಕೆಲವೊಮ್ಮೆ ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಗೆ ಭೇಟಿಯಾಗಿ ಅಂಕಿ ಅಂಶಗಳ ಅಧಿಕಾರಿ ಅಥವಾ ಕಂದಾಯ ಅಧಿಕಾರಿಯನ್ನು ಸಂಪರ್ಕಿಸುತ್ತಿದ್ದೆ. ಕೆಲವರು ‘ನೀವು ಇದೆಲ್ಲ ಅಧ್ಯಯನ ಮಾಡುವ ಬದಲು ನಿರ್ದಿಷ್ಟ ಜಾತಿಯ ಜನರ ಅಂಕಿ ಅಂಶವನ್ನು ಕಲೆಹಾಕಬಹುದಲ್ಲ’ ಎಂದು ಪ್ರಶ್ನಿಸುತ್ತಿದ್ದರು. ‘ನೀವಿರುವುದು ಯಾಕೆ? ನಾನೇನೂ ಸರಕಾರದಿಂದ ಅನುದಾನ ಪಡೆದು ಈ ಕೆಲಸ ಮಾಡುತ್ತಿಲ್ಲ. ಸುಮ್ಮನೆ ಹವ್ಯಾಸವಾಗಿ ಬಂದಿದ್ದೇನೆ’ ಇದು ನನ್ನ ಉತ್ತರ. ಇನ್ನು ಕೆಲವರು ಪ್ರತಿಷ್ಠೆಗಾಗಿ ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದರು. ನಾನು ಕನ್ನಡ ಇಲ್ಲವೇ ತುಳುವಿನಲ್ಲಿ ಉತ್ತರಿಸುತ್ತಿದ್ದೆ; ಸರಿಯಾದ ಉತ್ತರವನ್ನೇ ನೀಡಿದರೂ ಇಂಗ್ಲಿಷಿನಲ್ಲೆ ಮಾತು ಮುಂದುವರಿಸುವ ವಿಕ್ಟೋರಿಯ ರಾಣಿಯ ಈ ‘ತುಂಡು’ ಗಳಿಗೆ ಪಾಠಕಲಿಸುವ ರೀತಿಯನ್ನೂ ಅನುಸರಿಸಬೇಕಾಯಿತು. ಇಂಗ್ಲಿಷ್‌ನಲ್ಲಿ ತಪ್ಪುತಪ್ಪಾಗಿ (ವ್ಯಾಕರಣದೋಷದೊಂದಿಗೆ) ಏನಾದರೂ ಒದರಿದರೆ, ನಾನೇ ಇಂಗ್ಲಿಷಿನಲ್ಲಿ ಮಾತಾಡಲು ಶುರುಮಾಡುತ್ತಿದ್ದೆ. ಇದರ ಪರಿಣಾಮ ಏನಾಯಿತೆಂದರೆ, ಆ ಅಧಿಕಾರಿಗಳು ತಕ್ಷಣ ಕನ್ನಡ ಇಲ್ಲವೇ ತುಳುವಿನಲ್ಲಿ ಮಾತಾಡಲು ಶುರುಮಾಡುತ್ತಿದ್ದರು. ಭಾಷೆ ಒಂದು ಸಂವಹನ ಮಾಧ್ಯಮ; ಅದರಲ್ಲಿ ಪ್ರತಿಷ್ಠೆ ಇಣುಕಬಾರದು ಎನ್ನುವುದು ನನ್ನ ಇರಾದೆ.

ಡಾ. ಪಿ. ಗುರುರಾಜ ಭಟ್ಟರು ತೀರಿದ ಮೇಲೆ ಅಂತಿಮ ಹಂತದಲ್ಲಿದ್ದ ನನ್ನ ಪಿಎಚ್.ಡಿ. ಅಧ್ಯಯನಕ್ಕೆ ಪ್ರೊ. ಎಂ. ಮರಿಯಪ್ಪ ಭಟ್ಟರು ಮಾರ್ಗದರ್ಶಿಯಾಗಲು ಸಂತೋಷದಿಂದ ಒಪ್ಪಿದರು. ನನ್ನ ಸಂಪ್ರಬಂಧದ ಕೆಲವು ಅಧ್ಯಾಯಗಳನ್ನು ಓದಿ, ಓದಿಸಿಕೊಂಡು, ‘‘ಆರ್ಕೆ ಅವರೆ, ನೀವು ಸರಿಯಾದ ದಾರಿಯಲ್ಲಿದ್ದೀರಿ. ಬೇಗನೆ ಸಂಪ್ರಬಂಧ ಪೂರ್ತಿಮಾಡಿ; ದಸ್ಕತ್ತಿಗೆ ಕಳಿಸಿದರೆ ಸಾಕು’’ ಎಂದ ಪ್ರೊ. ಭಟ್ಟರು ಕೆಲವೇ ದಿನಗಳಲ್ಲಿ ಇನ್ನಿಲ್ಲವಾದರು. ನನಗೆ ಮಾರ್ಗದರ್ಶಿಯಾದವರು ಅರ್ಧದಲ್ಲೇ ಹೋಗುತ್ತಾರೆ ಎಂಬ ಅಂಬೋಣ ಹುಟ್ಟಿಕೊಂಡಿತು. ಅಂತಿಮವಾಗಿ, ನನಗೆ ಮಾರ್ಗದರ್ಶಿಯಾಗಲು ಒಪ್ಪಿದವರು ಪ್ರೊ. ಹಾ.ಮಾ. ನಾಯಕರು. ಒಂದರ್ಥದಲ್ಲಿ ನನ್ನದು ಸ್ವಾಧ್ಯಾಯ; ನನಗೆ ನಾನೇ ಮಾರ್ಗದರ್ಶಿ. ಆದರೆ, ಅತ್ಯಂತ ಪ್ರಬುದ್ಧ್ಧರೂ ಗೌರವಾರ್ಹ ವಿದ್ವಾಂಸರೂ ಆದ ಈ ಮೂವರು ಮಾರ್ಗದರ್ಶಿಗಳು ನನ್ನ ಸಂಶೋಧನ ವ್ಯಾಸಂಗದ ಅವಧಿಯಲ್ಲಿ ಸಹಕರಿಸಿದ್ದಾರೆ; ಸ್ಫೂರ್ತಿ ನೀಡಿದ್ದಾರೆ. ವಿದ್ವಾಂಸನಿಗೆ ವಿನಯವೇ ಭೂಷಣ ಎಂಬ ಆದರ್ಶವನ್ನು ನನಗೆ ಕಲಿಸಿಕೊಟ್ಟಿದ್ದಾರೆ. ನನ್ನ ಪಿಎಚ್‌ಡಿ ಸಂಪ್ರಬಂಧ ಪದವಿಗಾಗಿ ಸಾದರಪಡಿಸಿ 35 ವರ್ಷಗಳ ನಂತರ ಪ್ರಕಟವಾಗುತ್ತಿದೆ. ಇದನ್ನು ಈ ಮೂವರೊಂದಿಗೆ, ಅರ್ಥಪೂರ್ಣ ಜೀವನ ವೌಲ್ಯಗಳನ್ನೂ, ಪ್ರಕೃತಿ ನಿಷ್ಠತೆಯನ್ನೂ ಸ್ಥಳನಾಮಗಳಲ್ಲಿ ಎತ್ತಿಹಿಡಿಯುತ್ತ ಬಂದ ಜನತೆಗೆ ಸಮರ್ಪಿಸಲು ನಿರ್ಧರಿಸಿದ್ದೇನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)