ನಿರೀಕ್ಷೆಗಳನ್ನು ಹುಸಿ ಮಾಡುವ ‘ಕಿಲ್ಲಿಂಗ್ ವೀರಪ್ಪನ್’
ರಾಮ್‌ಗೋಪಾಲ್‌ವರ್ಮಾ ಅವರು ಕನ್ನಡದಲ್ಲಿ ‘ವೀರಪ್ಪನ್’ ಕಥಾವಸ್ತುವನ್ನು ಇಟ್ಟುಕೊಂಡು ಚಿತ್ರ ಮಾಡುತ್ತಾರೆ ಎಂದಾಗ, ಯಾರೂ ಅತಿ ಕುತೂಹಲ ತೋರಿಸಿರಲಿಲ್ಲ. ಯಾಕೆಂದರೆ ವೀರಪ್ಪನ್ ಅದಾಗಲೇ ಜಗಿದು ಜಗಿದೂ ಸವೆದು ಹೋಗಿರುವ ಬಬಲ್ ಗಮ್. ಬಾಲಿವುಡ್‌ನಲ್ಲಿ ಮಾತ್ರವಲ್ಲ, ತಮಿಳಿನಲ್ಲಿ, ತೆಲುಗಿನಲ್ಲಿ ಬೇರೆ ಬೇರೆ ರೂಪದ ವೀರಪ್ಪನ್ ತೆರೆಮೇಲೆ ಬಂದು ಹೋಗಿದ್ದಾನೆ. ಕನ್ನಡದಲ್ಲೂ ದೇವರಾಜ್ ಅವರು ವೀರಪ್ಪನ್ ಆಗಿ ಕಾಣಿಸಿಕೊಂಡು ಗಾಂಧಿನಗರದ ಕುತೂಹಲವನ್ನು ತಣಿಸಿದ್ದರು. ಇತ್ತೀಚೆಗೆ ಅಟ್ಟಹಾಸ ಎನ್ನುವ ಚಿತ್ರವೂ ಇದೇ ವೀರಪ್ಪನ್ ಬೇಟೆಯನ್ನು ಕೇಂದ್ರ ವಸ್ತುವಾಗಿಟ್ಟುಕೊಂಡಿತ್ತು. ಇಷ್ಟೇ ಯಾಕೆ, ಇದೇ ರಾಮ್‌ಗೋಪಾಲ್‌ವರ್ಮಾ ಅವರು ವೀರಪ್ಪನ್‌ನ್ನು ಇಟ್ಟುಕೊಂಡು ‘ಜಂಗಲ್’ ಎನ್ನುವ ಚಿತ್ರವನ್ನು ಮಾಡಿದ್ದರು. ಅದು ಸಾಕಷ್ಟು ಸುದ್ದಿಯಾಗಿತ್ತು ಕೂಡ. ಉಸಾಮಬಿನ್ ಲಾದೆನ್ ಕತೆಯೇ ಹಳಸಾಗಿರುವಾಗ, ಈಗಾಗಲೇ ಹತ್ತು ಹಲವು ಬಾರಿ ಹಲವು ನಿರ್ದೇಶಕರು ಹೇಳಿ ಮುಗಿಸಿರುವ ವೀರಪ್ಪನ್ ಕತೆಯನ್ನು ಮತ್ತೆ ವರ್ಮಾ ಹೇಳಲು ಹೊರಟಿದ್ದಾರೆ ಎನ್ನುವಾಗಲೇ ಜನರು ಆಕಳಿಸಿದ್ದರು.
ಎಲ್ಲಕ್ಕಿಂತ ಮುಖ್ಯವಾಗಿ ಜನರು ರಾಮ್‌ಗೋಪಾಲ್ ವರ್ಮಾ ಬಗ್ಗೇನೂ ಆಸಕ್ತಿ ಕಳೆದುಕೊಂಡಿದ್ದರು. ಶಿವಂ, ಕ್ಷಣಕ್ಷಣಂ, ರಂಗೀಲಾ, ಸತ್ಯಾದಂತಹ ಸಿನಿಮಾ ಮಾಡಿದ್ದ ರಾಮ್‌ಗೋಪಾಲ್ ವರ್ಮಾ ಎಂದೋ ಮುಗಿದು ಹೋಗಿದ್ದರು. ಸಾಲು ಸಾಲಾಗಿ ಚಿತ್ರಗಳನ್ನು ಮಾಡಿ ತೋಪೆದ್ದು, ಅವರು ಕನ್ನಡದಲ್ಲಿ ಬದುಕು ಅರಸಿಕೊಂಡು ಬಂದಿದ್ದರು. ವರ್ಮಾ ಅವರ ಬಂಡವಾಳ ಮುಗಿದೇ ಹೋಯಿತೇ ಎಂದು ಜನರು ಪ್ರಶ್ನಿಸುವ ಸಂದರ್ಭದಲ್ಲಿ ಅವರು ಕನ್ನಡದಲ್ಲಿ ಸಿನಿಮಾ ಮಾಡಲು ಇಳಿದಿರುವುದರಿಂದ, ಕನ್ನಡಿಗರೂ ವಿಶೇಷ ಆಸಕ್ತಿಯನ್ನೇನೂ ವಹಿಸಿರಲಿಲ್ಲ. ಇದೇ ಸಂದರ್ಭದಲ್ಲಿ ಅವರು ಕೈಗೆತ್ತಿಕೊಂಡಿರುವುದೂ ಹಳೆ ಸರಕು. ಅದನ್ನು ಹೊಸದಾಗಿ ಹೇಗೆ ಕಟ್ಟಿಕೊಡಬಲ್ಲರು ಎಂಬ ಸಣ್ಣದೊಂದು ಕುತೂಹಲವಷ್ಟೇ ಜನರಲ್ಲಿತ್ತು.
ವರ್ಮಾ ಅವರು ವೀರಪ್ಪನ್‌ನ್ನು ನಿರೂಪಿಸುವುದು ಪೊಲೀಸರ ಕಣ್ಣಲ್ಲಿ. ಚಿತ್ರದ ಆರಂಭದಲ್ಲಿ ಪೊಲೀಸರ ಬಾಯಿಯಿಂದಲೇ ಅದನ್ನು ಬಿಡಿಬಿಡಿಯಾಗಿ ಕಟ್ಟಿಕೊಡಲು ಪ್ರಯತ್ನಿಸುತ್ತಾರೆ. ಆದರೆ ಅದು ಸಮಗ್ರವಾಗಿ ಪ್ರೇಕ್ಷಕರ ಎದೆಗೆ ತಲುಪುವುದೇ ಇಲ್ಲ. ವೀರಪ್ಪನ್ ಪಾತ್ರ ನಿರ್ವಹಿಸಿದ ಸಂದೀಪ್ ಭಾರದ್ವಾಜ್ ತನ್ನ ಮ್ಯಾನರಿಸಂ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಾರಾದರೂ, ಅವರ ಪಾತ್ರಕ್ಕೆ ಬೇಕಾದ ಬಿರುಸು, ರೋಚಕತೆಯನ್ನು ತುಂಬುವಲ್ಲಿ ವರ್ಮಾ ಸೋತಿದ್ದಾರೆ. ಸಂಭಾಷಣೆಯಲ್ಲೂ ಪ್ರೇಕ್ಷಕರನ್ನು ಮುಟ್ಟುವ ತೀವ್ರತೆಯಿಲ್ಲ. ಪೂವಾರ್ಧದ ನಿರೂಪಣೆ ನಿಧಾನಗತಿಯಲ್ಲಿದೆ. ವರ್ಮಾ ಅವರು ಪಾತ್ರಗಳಿಗೆ ಜೀವ ತುಂಬುವಲ್ಲಿ ಸೋತಿದ್ದಾರೆ. ಕತೆಯನ್ನು ತುಸು ಭಿನ್ನವಾಗಿ ನಿರೂಪಿಸಲು ಯತ್ನಿಸಿರುವುದು ಅವರ ಹೆಗ್ಗಳಿಕೆ. ಆದರೆ ಆ ನಿರೂಪಣೆಗೆ ಚಿತ್ರಕತೆ ಸಹಕರಿಸಿಲ್ಲ. ಉತ್ತರಾರ್ಧದಲ್ಲಿ ಚಿತ್ರ ಒಂದಿಷ್ಟು ಬಿಗಿ ಪಡೆಯುತ್ತದೆ. ಆದರೆ ಕೆಲವೊಂದು ಪಾತ್ರಗಳು ವ್ಯಕ್ತಿತ್ವವನ್ನು ಆವಾಹಿಸಿಕೊಳ್ಳಲು ಸೋಲುವುದರಿಂದ, ಪ್ರೇಕ್ಷಕರನ್ನು ತಲುಪುವಲ್ಲಿ ಸೋಲುತ್ತದೆ.
ವೀರಪ್ಪನ್‌ನ ಪತ್ನಿ ಪಾತ್ರ, ಎಸ್‌ಟಿಎಫ್ ಅಧಿಕಾರಿ(ಶಿವರಾಜ್ ಕುಮಾರ್)ಗೆ ಸಹಕರಿಸುವ ಪೊಲೀಸ್ ಮಾಹಿತಿಧಾರೆಯಾಗಿರುವ ತೃಷಾಳ ಪಾತ್ರ ಇದಕ್ಕೆ ಉದಾಹರಣೆ. ಹಿನ್ನೆಲೆ ಸಂಗೀತ ಪರಿಣಾಮಕಾರಿಯಾಗಿದೆ. ಆದರೆ ಅವರದೇ ‘ಜಂಗಲ್’ ಚಿತ್ರದಲ್ಲಿ ಸಂಗೀತಕ್ಕೆ ಕಾಡಿನ ಒಳದನಿಯನ್ನು, ನಿಗೂಢತೆಯನ್ನು, ಕ್ರೌರ್ಯವನ್ನು ಹಿಡಿದಿಡುವ ಶಕ್ತಿಯಿತ್ತು. ಇಲ್ಲಿ ಸಂಗೀತ, ನಾಯಕನ ಕಾರ್ಯಾಚರಣೆಗೆ ಪೂರಕವಾಗಿದೆ. ಎಸ್‌ಟಿಎಫ್ ಅಧಿಕಾರಿಯಾಗಿ ಶಿವರಾಜ್ ಕುಮಾರ್ ಅಭಿನಯ ಪರವಾಗಿಲ್ಲ. ವರ್ಮಾ ಅವರು ಚಿತ್ರಕತೆಯನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಂಡಿದ್ದರೆ ಮತ್ತು ಪಾತ್ರಗಳಿಗೆ ಜೀವ ತುಂಬಲು ಪ್ರಯತ್ನಿಸಿದ್ದರೆ ಒಂದು ವಿಭಿನ್ನ, ಥ್ರಿಲ್ಲರ್ ಚಿತ್ರವನ್ನು ನೀಡುವಲ್ಲಿ ಯಶಸ್ವಿಯಾಗುತ್ತಿದ್ದರೇನೋ ಅನ್ನಿಸಿ ಬಿಡುತ್ತದೆ.