varthabharthi


ಫೋಕಸ್

ಪ್ರಸ್ತುತಕ್ಕೆ ಹತ್ತರ ಹರುಷ

ವಾರ್ತಾ ಭಾರತಿ : 4 Jan, 2016
- ಅಬ್ದುಲ್ ರಝಾಕ್ ಕೆಮ್ಮಾರ

2007 ಇಸವಿಯ ಜನವರಿ ತಿಂಗಳನ್ನು ಕನ್ನಡಿಗರು ನೆನಪಿಸಿಕೊಳ್ಳುವ ದಿನ. ಏಕೆಂದರೆ ಪ್ರಸ್ತುತ ಕನ್ನಡ ಪಾಕ್ಷಿಕವು ಈ ತಿಂಗಳಲ್ಲಿ ಜನ್ಮ ತಾಳಿ ಮಾಧ್ಯಮ ರಂಗ ಪ್ರವೇಶಿಸಿತು. ಕನ್ನಡದ ಮೊತ್ತ ಮೊದಲ ಪತ್ರಿಕೆ 'ಮಂಗಳೂರ ಸಮಾಚಾರ' ಹುಟ್ಟಿದ ಮಂಗಳೂರೇ ಪ್ರಸ್ತುತದ ಹುಟ್ಟೂರು. ಸಾಮಾಜಿಕ ಹೋರಾಟರಂಗದಲ್ಲಿದ್ದ ಕೆಲವು ಯುವಕರ ಮನದಲ್ಲಿ ಮೊಳಕೆಯೊಡೆದ ಚಿಂತನೆಯೇ ಈ ಪ್ರಸ್ತುತದ ಹುಟ್ಟಿಗೆ ಕಾರಣ. 2007ರ ಜನವರಿಯಲ್ಲಿ ತನ್ನ ಮೊದಲ ಸಂಚಿಕೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಎಂ. ಇದ್ದಿನಬ್ಬರವರು ಈ ನಾಡಿಗೆ ಸಮರ್ಪಿಸಿದ ವೇಳೆ ಕನಿಷ್ಠ ಮೂಲ ಸೌಕರ್ಯಗಳನ್ನೊಳಗೊಂಡ ಆಫೀಸಿನಲ್ಲಿದ್ದುದು ಒಂದು ಕಂಪ್ಯೂಟರ್, ಪ್ರಧಾನ ಸಂಪಾದಕ, ಸಂಪಾದಕ ಮತ್ತು ಓರ್ವ ಡಿಸೈನರ್ ಮಾತ್ರ. ಆದರೆ ಹೋರಾಟದ ಹಾದಿಯನ್ನು ಪ್ರವೇಶಿಸಿದ ಪತ್ರಿಕೆ ಕೇವಲ ಒಂದು ವರ್ಷದಲ್ಲಿ ಜನಸಾಮಾನ್ಯರ ಮೆಚ್ಚುಗೆಯನ್ನು ಪಡೆದು ಪಾಕ್ಷಿಕವಾಗಿ ಮಾರ್ಪಟ್ಟಿತು.

 ಸಮಕಾಲೀನ ಮಾಧ್ಯಮ ರಂಗವು ರಾಜಕೀಯ ಪಕ್ಷಗಳ ಮುಖವಾಣಿಯಾಗಿ, ಬಂಡವಾಳ ಶಾಹಿಗಳ ಗುರಾಣಿಯಾಗಿ, ಕೋಮುವಾದಿ ಫ್ಯಾಶಿಸ್ಟರ ಆಯುಧವಾಗಿ, ಸ್ಥಾಪಿತ ಹಿತಾಸಕ್ತಿಗಳ ಅಡಗುದಾಣವಾಗಿ, ವೌಢ್ಯ ಕಂದಾಚಾರಗಳ ವಿಹಾರಧಾಮವಾಗಿ ಮಾರ್ಪಟ್ಟ ವೇಳೆ ಈ ಎಲ್ಲಾ ಕೆಡುಕುಗಳ ವಿರುದ್ಧ ಸೆಟೆದು ನಿಂತು ಲೇಖನಿಯೆಂಬ ಆಯುಧವನ್ನು ವೈಚಾರಿಕತೆಯೆಂಬ ಸಾಣೆಯಲ್ಲಿ ಹರಿತಗೊಳಿಸಿ ಓದುಗರೆಂಬ ಹೋರಾಟಗಾರರನ್ನು ಪ್ರಸ್ತುತ ಸಜ್ಜು ಗೊಳಿಸಿತು. ಹೌದು, ಕಳೆದ 9 ವರ್ಷಗಳಲ್ಲಿ ಆಕ್ರಮಣಶೀಲತೆಯಿಂದ ಪ್ರಸ್ತುತ ಮುಂದುವರಿದಿದ್ದರೆ ಅದರ ಕಾಲಾಳು ಸೈನಿಕರು ಜನಸಾಮಾನ್ಯರಾದ ಓದುಗರಾಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಆ ಓದುಗರು ತಮ್ಮ ನರನಾಡಿಗಳಲ್ಲಿ ತುಂಬಿಕೊಂಡ ಹೋರಾಟದ ಸತ್ವ ಇಂದು ಕೂಡ ಪ್ರಸ್ತುತಕ್ಕೆ ಮೂಲ ಇಂಧನವೆಂಬಂತಿದೆ.


    ಆದರೆ ಮಂಗಳೂರು ಸಹಿತ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹತ್ತಾರು ದಿನಪತ್ರಿಕೆಗಳು, ನಿಯತಕಾಲಿಕಗಳು ಹುಟ್ಟಿಕೊಂಡ ಒಂದೆರೆಡು ವರ್ಷಗಳಲ್ಲಿ ಅಸಹಜ ಸಾವನ್ನಪ್ಪಿದ್ದನ್ನೂ ನಾವು ಕಂಡಿದ್ದೇವೆ. ಪ್ರಸ್ತುತವನ್ನು ಶುರುಮಾಡಿದ ವೇಳೆಯಲ್ಲಿ ಈ ಒಂದು ಆತಂಕ ನಮಗೆ ಇದ್ದೇ ಇತ್ತು. ಆದರೆ ಸತ್ಯಕ್ಕೆ ಸಾವಿಲ್ಲ ಎಂಬಂತೆ ಸತ್ಯ ಸುದ್ದಿಯ ಮಾಸಿಕವು ಒಂದೇ ವರ್ಷದಲ್ಲಿ ವರ್ಣರಂಜಿತ ರೂಪದಲ್ಲಿ, ಪಾಕ್ಷಿಕರೂಪದಲ್ಲಿ ಕನ್ನಡಿಗರ ಮಡಿಲು ಸೇರಿತು.
 

  ಬಂಡವಾಳಶಾಹಿ, ಕೋಮುವಾದಿ ಶ್ರೀಮಂತ ಕುಳದ ರಂಗು ರಂಗಿನ ಪತ್ರಿಕೆಗಳ ಮುಂದೆ ಪ್ರಸ್ತುತದಂತಹ ಬಡಪತ್ರಿಕೆಯನ್ನು ಜಾಹೀರಾತುಗಳಿಲ್ಲದೆ ಉಳಿಸಿಕೊಳ್ಳುವುದು ಅಷ್ಟೊಂದು ಸುಲಭಸಂಗತಿಯಾಗಿರಲಿಲ್ಲ. ಆದ್ದರಿಂದ ಪ್ರಸ್ತುತ ಗಟ್ಟಿಯಾಗಿ ನಂಬುವ ಆಶಯಾದರ್ಶದ ಕಾರಣದಿಂದ ಸಾವಿರಾರು ರೂಪಾಯಿಗಳ ಜಾಹೀರಾತುಗಳನ್ನು ಕೈಬಿಡಬೇಕಾಗಿ ಬಂತು. ಲಾಭವಿಲ್ಲದಿದ್ದರೂ ಚಿಂತಿಲ್ಲ, ಪತ್ರಿಕೆ ಉಳಿಯಬೇಕು ಅನ್ನುವ ಪ್ರಸ್ತುತ ಬಳಗದ ಒಂದೇ ಒಂದು ನಿಯತ್ತಿನಿಂದ ಪ್ರಸ್ತುತ ಬಳಗವು ಇಂದಿಗೂ ಆತ್ಮವಿಶ್ವಾಸದಿಂದ, ನಿರೀಕ್ಷೆಯಿಂದ ಮುಂದುವರಿಯುತ್ತಿದೆ. ಪ್ರಭುತ್ವ, ಕೋಮುವಾದಿ ಫ್ಯಾಶಿಸ್ಟ್ ಬಂಡವಾಳಶಾಹಿ, ಸಾಮ್ರಾಜ್ಯಶಾಹಿಗಳ ಅಟ್ಟಹಾಸದಿಂದ ಭಯ ಮತ್ತು ತಲ್ಲಣದಿಂದ ಬದುಕಿನ ನೆಮ್ಮದಿಯನ್ನು ಕಳೆದುಕೊಂಡ ಶೋಷಿತ, ದಮನಿತ, ಬಡ ರೈತ, ಕಾರ್ಮಿಕ ಮತ್ತು ಮಹಿಳೆಯರ ಪಕ್ಷಪಾತಿಯಾಗಿರುವ ಪ್ರಸ್ತುತ ಇಂದಿಗೂ ಶ್ರೀಮಂತ ವರ್ಗದ ಪ್ರಭುತ್ವದ ಭಯೋತ್ಪಾದನೆ ಮತ್ತು ಕೋಮುವಾದಿಗಳ ಮುಂದೆ ಸೆಟೆದು ನಿಂತಿರುವ ಒಂದು ದೊಡ್ಡ ಸವಾಲಾಗಿದೆ.


ಪುಟ್ಟ ಪ್ರಸ್ತುತದ ದಿಟ್ಟತನ ಮತ್ತು ನಿರ್ಭೀತಿಯನ್ನು ಮನಗಂಡ ಈ ನಾಡಿನ ಪ್ರಗತಿಪರ, ಚಿಂತಕರ, ಹೋರಾಟಗಾರರ ಗುಂಪು ತಮ್ಮ ಅಕ್ಷರ ಕ್ರಾಂತಿಯನ್ನು ಮುಂದುವರಿಸಲು ಪ್ರಸ್ತುತವನ್ನು ಆಯಕಟ್ಟಿನ ವೇದಿಕೆಯನ್ನಾಗಿ ಬಳಸಿಕೊಂಡು ಕನ್ನಡಿಗರ ಹೋರಾಟಗಾರರ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಿದರು. ಶಿವ ಸುಂದರ್, ಜಿ. ರಾಜಶೇಖರ್, ಪಟ್ಟಾಭಿರಾಮ ಸೋಮಯಾಜಿ, ಜ.ಹೊ. ನಾರಾಯಣ ಸ್ವಾಮಿ, ಲಕ್ಷ್ಮಣ್, ಗೌರಿ ಲಂಕೇಶ್, ಶಾಹಿದಾ ತಸ್ನೀಮ್, ಆತ್ರಾಡಿ, ಜ್ಯೋತಿ ಗುರುಪ್ರಸಾದ್, ಸಿ..ಎಸ್. ದ್ವಾರಕನಾಥ್, ಸುರೇಶ್ ಭಟ್‌ಬಾಕ್ರಬೈಲು, ಶಾಂತರಾಮ ಸೋಮಯಾಜಿ, ವಡ್ಡಗೆರೆ ನಾಗರಾಜಯ್ಯ ಮೊದಲಾದ ಈ ನಾಡು ಕಂಡ ಬುದ್ಧಿಜೀವಿಗಳ ಗುಂಪು ಪ್ರಸ್ತುತ ನಂಬಿದ ಆಶಯಾದರ್ಶಗಳಿಗೆ ಹೆಗಲು ಕೊಟ್ಟು ಮುಂಚೂಣಿಯಲ್ಲಿ ನಿಂತಾಗ ಪ್ರಸ್ತುತದ ಅಕ್ಷರ ಹೋರಾಟಕ್ಕೆ ಆನೆ ಬಲ ಲಭಿಸಿದಂತಾಯಿತು.


ಒಂದು ದೇಶದ ಪ್ರಗತಿ ಮತ್ತು ದುರ್ಗತಿಯಲ್ಲಿ ಆ ದೇಶವನ್ನಾಳುವ ಪ್ರಭುತ್ವದ ಪಾತ್ರ ಅತ್ಯಂತ ಹಿರಿದಾದದ್ದು. ದೇಶದ ಆಡಳಿತ ವ್ಯವಸ್ಥೆಯು ಜನಸಾಮಾನ್ಯರ ವಿರುದ್ಧ ನಿಂತಾಗ ಮತ್ತು ಜನವಿರೋಧಿ ನೀತಿಯನ್ನು ಜಾರಿಗೆ ತರಲು ಪ್ರಯತ್ನಿಸಿದಾಗ ಫ್ಯಾಶಿಸ್ಟ್ ಕೋಮುವಾದಿ ಗುಂಪುಗಳು ನೈತಿಕ ಪೊಲೀಸ್ ಗಿರಿ ಮತ್ತು ಗಲಭೆಗಳನ್ನು ಹುಟ್ಟುಹಾಕುವ ವೇಳೆ ನಿರ್ಭೀತಿಯಿಂದ ಜನಸಾಮಾನ್ಯರಿಗೆ ಧೈರ್ಯ ಮತ್ತು ನಿರೀಕ್ಷೆಯನ್ನು ನೀಡುವುದರಲ್ಲಿ ಪ್ರಸ್ತುತ ತನ್ನ ಹೊಣೆಗಾರಿಕೆಯನ್ನು ಪ್ರದರ್ಶಿಸಿದೆ.


ಯಾವುದೇ ಪಟ್ಟಭದ್ರ ಶ್ರೀಮಂತ ಶಕ್ತಿಯ ಅಂಕಿತದಲ್ಲಿರದೆ ಕೇವಲ ಜನಸಾಮಾನ್ಯರ ಪತ್ರಿಕೆಯಾದ ಕಾರಣದಿಂದ ಸತ್ಯವನ್ನು ಯಾವುದೇ ಕಲಬೆರಕೆಯಿಲ್ಲದೆ ಪ್ರಕಟ ಪಡಿಸಲು ಪ್ರಸ್ತುತಕ್ಕೆ ಸಾಧ್ಯವಾಗಿದೆ. ಪ್ರಸ್ತುತ ಪಾಕ್ಷಿಕ ಬೆಳೆಯುವುದರೊಂದಿಗೆ ಹತ್ತಾರು ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ತನ್ನ ಸುಪರ್ದಿಯಲ್ಲಿ ಮಾಧ್ಯಮ ಕಾರ್ಯಗಾರವನ್ನು ನಡೆಸಿ ಅವರನ್ನು ಭವಿಷ್ಯದ ಪತ್ರಕರ್ತರನ್ನಾಗಿಸಲು ಪ್ರೋತ್ಸಾಹವನ್ನು ನೀಡಿದೆ. ಕನ್ನಡನಾಡಿನ ಹಲವು ಸಂಪಾದಕರು, ಪ್ರಖ್ಯಾತ ಬರಹಗಾರರು, ಸಾಹಿತಿಗಳು ಶಿಬಿರಗಳಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳನ್ನು ತಿದ್ದಿ ತೀಡಿ ತರಬೇತುಗೊಳಿಸಿ ಮಾರ್ಗದರ್ಶನವನ್ನು ನೀಡಿದ್ದಾರೆ. ಕಳೆದ 9 ವರ್ಷಗಳಲ್ಲಿ ಮಾಧ್ಯಮ ಕಮ್ಯೂನಿಕೇಷನ್ ಪ್ರಸ್ತುತ ಪತ್ರಿಕೆಯನ್ನು ಅಚ್ಚುಕಟ್ಟಾಗಿ ಮುದ್ರಿಸಿಕೊಡುತ್ತಿದೆ. ಅಂತೆಯೇ ವಾರ್ತಾಭಾರತಿ ಬಳಗವು ಶಿಬಿರವನ್ನು ನಡೆಸಲು ತಮ್ಮಿಂದಾದ ಸಹಕಾರಗಳನ್ನು ನೀಡುತ್ತಾ ಬಂದಿರುವುದನ್ನು ಈ ವೇಳೆ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಿದ್ದೇವೆ. ಅಂತಹ ಶಿಬಿರಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಕಲಿಕಾ ಶುಲ್ಕ ಮತ್ತು ಸ್ಕಾಲರ್‌ಶಿಪ್‌ನ್ನು ಪ್ರಸ್ತುತ ಬಳಗವು ನೀಡಿ ಪ್ರೋತ್ಸಾಹಿಸುತ್ತಿದೆ. ಇಂದು ಆ ವಿದ್ಯಾರ್ಥಿಗಳಲ್ಲಿ ಹಲವರು ಕರ್ನಾಟಕದ ವಿವಿಧ ಮುದ್ರಣ ಮತ್ತು ವಿದ್ಯುನ್ಮಾನ ಮಾದ್ಯಮಗಳಲ್ಲಿ ದುಡಿಯುತ್ತಿರುವುದು ಪ್ರಸ್ತುತದ ಮುಕುಟಕ್ಕಿರುವ ಮತ್ತೊಂದು ಗರಿಯಾಗಿದೆ.
  

ಪ್ರಸ್ತುತವು ಸ್ತುತಿ ಪಬ್ಲಿಕೇಶನ್ಸ್ ಆ್ಯಂಡ್ ಇನ್ಫರ್ಮೇಶನ್ ಟ್ರಸ್ಟ್‌ನ್ನು ಸ್ಥಾಪಿಸಿ ಈಗಾಗಲೇ 28 ಪುಸ್ತಕಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದೆ. ಮಹಾರಾಷ್ಟ್ರದ ಮಾಜಿ ಐಎ ಖ. ಮುಶ್ರಿಫ್‌ರವರ 'ಕರ್ಕರೆಯನ್ನು ಕೊಂದವರು ಯಾರು'? ನಾಡಿನ ಪ್ರಖ್ಯಾತ ನ್ಯಾಯವಾದಿ ಎ.ಕೆ ಸುಬ್ಬಯ್ಯರವರ 'ಆರೆಸ್ಸೆಸ್‌ನ್ನು ಅರಿಯಿರಿ' ಇಫ್ತಿಕಾರ್ ಗೀಲಾನಿಯವರ 'ಪತ್ರಕರ್ತನ ಜೈಲಿನ ದಿನಗಳು' ಪ್ರೊ. ಹಯವದನರವರ 'ಶಾಶ್ವತ ಶಂಕಿತರು' ಕೆ. ಶಬೀರ್ ರವರ 'ಗೋಗಿಯ ಗೋಳು' ಮೊದಲಾದ ಸಾಮಾಜಿಕ, ರಾಜಕೀಯ ಉಪಯುಕ್ತ ಗ್ರಂಥಗಳನ್ನು ಪ್ರಕಟಿಸಿದೆ. ಒಂದು ಸಾಮಾನ್ಯ ಪತ್ರಿಕೆ ಎಂಬ ನೆಲೆಯಲ್ಲಿ ಕರ್ನಾಟಕದಾದ್ಯಂತ ಪಸರಿಸಿ ಸಾಗರವನ್ನು ದಾಟಿ ಅನಿವಾಸಿ ಭಾರತೀಯರನ್ನೂ ಪ್ರಸ್ತುತ ಸ್ಪರ್ಶಿಸಿತು.

ಇದೀಗ ಸೌದಿ ಅರೇಬಿಯಾ, ಒಮಾನ್, ಯು.ಎ.ಇ, ಕುವೈತ್, ಕತರ್, ಬಹರೈನ್, ಮುಂತಾದ ಅರಬ್ ರಾಷ್ಟ್ರಗಳಲ್ಲಿ ಪ್ರಸ್ತುತವು ಅನಿವಾಸಿ ಕನ್ನಡಿಗರ ಕೈ ಸೇರಿ, ಪ್ರತಿ 15 ದಿವಸಗಳಿಗೊಮ್ಮೆ ಅವರು ಪ್ರಸ್ತುತವನ್ನು ಓದುತ್ತಲೇ ದೇಶವನ್ನು ಸುತ್ತಾಡುತ್ತಾರೆ! ಯಾವತ್ತೂ ಓದುಗರ ಕಡೆಯಿಂದ ಬರುವ ಸಲಹೆಗಳೇನೆಂದರೆ ಪ್ರಸ್ತುತ ಪಾಕ್ಷಿಕವನ್ನು ವಾರ ಪತ್ರಿಕೆಯನ್ನಾಗಿಸಬೇಕೆಂದು. ಈಗಾಗಲೇ ತಿಳಿಸಿದಂತೆ ಸೀಮಿತ ಸಂಪನ್ಮೂಲವನ್ನು ಬಳಸಿಕೊಂಡು ವಾರಪತ್ರಿಕೆಯನ್ನು ಶುರು ಮಾಡುವುದು ಸುಲಭದ ಕೆಲಸವಲ್ಲ. ಆದರೂ ಓದುಗರಂತೆ ಪ್ರಸ್ತುತ ಬಳಗದಲ್ಲೂ ವಾರ ಪತ್ರಿಕೆಯನ್ನಾಗಿ ರೂಪಿಸಬೇಕೆಂಬ ವಿಚಾರದ ಬಗ್ಗೆ ಈ ಹಿಂದಿನಿಂದಲೇ ಚರ್ಚೆ ನಡೆಯುತ್ತಾ ಬಂದಿದೆ. ಬೇಗನೇ ಆ ಗುರಿಯನ್ನು ತಲುಪಬಹುದೆಂಬ ಆಶಾವಾದ ನಮ್ಮ ನಿಮ್ಮೆಲ್ಲರದ್ದು.
 ಒಂದು ಪತ್ರಿಕೆ ಎಂಬ ನೆಲೆಯಲ್ಲಿ ಅದರ ಸರ್ವತೋಮುಖ ಅಭಿವೃದ್ಧಿಯಲ್ಲಿ ಓದುಗರ, ಹಿತೈಷಿಗಳ, ಪಾಲು ಅತ್ಯಂತ ದೊಡ್ಡದು. ಪತ್ರಿಕೆಯ ಆರಂಭದಿಂದಲೂ ಕೆ.ಎಂ ಶರೀಫ್‌ರವರು ಪ್ರಧಾನ ಸಂಪಾದಕರಾಗಿರುವ ಈ ನೆಲೆಯಲ್ಲಿ ಪ್ರಸ್ತುತದ ಕನಸಿಗೆ ಓದುಗರು ಸಾವಿರ ಸಾವಿರ ಗರಿಗಳನ್ನು ಮೂಡಿಸುವರೆಂಬ ನಂಬಿಕೆಯೊಂದಿಗೆ ಕಳೆದ ಹತ್ತು ವರ್ಷಗಳಲ್ಲಿ ಉಳಿಸಿ ಕಾಯ್ದುಕೊಂಡು ಬಂದ ಆಶಯ ಆದರ್ಶಗಳನ್ನು, ಹೋರಾಟ ಮನೋಭಾವವನ್ನು, ಮುಂದಿನ ದಿನಗಳಲ್ಲೂ ಉಳಿಸಿಕೊಂಡು ಮುಂದುವರಿಯಲಿ ಎಂದು ನಾವೆಲ್ಲರೂ ಹಾರೈಸೋಣ.  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)